ಕೊರೊನಾ ಸಾಂಕ್ರಮಿಕದಿಂದ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಪರಿಹಾರವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ನೀಡಿದೆ. 6 ವಾರಗಳಲ್ಲಿ ಮಾರ್ಗಸೂಚಿಯನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಇಂದು ಭಾರತದ ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಜಸ್ಟಿಸ್ ಅಶೋಕ್ ಭೂಷಣ್ ಮತ್ತು ಜಸ್ಟಿಸ್ ಎಂ.ಆರ್ ಶಾ ಅವರಿದ್ದ ಪೀಠವು ನ್ಯಾಷನಲ್ ಡಿಸಾಸ್ಟರ್ ಮ್ಯಾನೆಜ್ ಮೆಂಟ್ ಅಥಾರಿಟಿ (NDMA) ಗೆ ಆದೇಶವನ್ನು ನೀಡಿದ್ದು ಪರಿಹಾರದ ಮೊತ್ತವನ್ನು ಸರ್ಕಾರವೇ ನಿರ್ಧರಿಸಲಿ ಎಂದು ಹೇಳಿದೆ.
ಇದನ್ನೂ ಓದಿ: ಕೇರಳದ ಗ್ರಾಮಗಳ ಹೆಸರು ಬದಲಾವಣೆ ಇಲ್ಲವೆಂದು ಶಾಸಕ ಎ.ಕೆ.ಎಂ. ಅಶ್ರಫ್ ಸ್ಪಷ್ಟನೆ
ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಕಾಯ್ದೆಯ 12 ನೇ ಸೆಕ್ಷನ್ ಪ್ರಕಾರ ಸಾಂಕ್ರಾಮಿಕದಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವುದು ಸರ್ಕಾರದ ವಿವೇಚನಗೆ ಬಿಟ್ಟ ತೀರ್ಮಾನವಲ್ಲ. NDMA ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲೇಬೇಕು. ಪರಿಹಾರದ ಮೊತ್ತವು ನ್ಯಾಯಯುತವಾಗಿರಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಮರಣ ಪ್ರಮಾಣ ಪತ್ರದಲ್ಲಿ ಮರಣದ ದಿನಾಂಕ ಮತ್ತು ಕಾರಣಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಮೃತಪಟ್ಟವರ ಕುಟುಂಬಗಳಿಗೆ ಮರಣದ ಕಾರಣದ ಬಗ್ಗೆ ತೃಪ್ತಿಯಿಲ್ಲದಿದ್ದರೆ ಬದಲಾವಣೆಗೆ ಅವಕಾಶ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ 4 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ಆದೇಶವನ್ನು ನೀಡಿರುವ ಸುಪ್ರೀಂ ಕೋರ್ಟ್ ಪೀಠ ತೀರ್ಪನ್ನು ಕಾಯ್ದಿರಿಸಿದ್ದು ಇಂದಿನ ಆದೇಶಕ್ಕೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಗಮನಿಸಿ ತೀರ್ಪು ನೀಡುವುದಾಗಿ ಹೇಳಿದೆ.
ಇದನ್ನೂ ಓದಿ: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರವೇಶ ಬೇಕೆಂದರೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ: ನೈರುತ್ಯ ರೈಲ್ವೆ