Homeಕರ್ನಾಟಕಸದನದಲ್ಲಿ ಹಗರಣಗಳ ಸದ್ದು; ’ಹಿಟ್ ಅಂಡ್ ರನ್' ಇತಿಹಾಸ ಮರುಕಳಿಸುವುದೇ?

ಸದನದಲ್ಲಿ ಹಗರಣಗಳ ಸದ್ದು; ’ಹಿಟ್ ಅಂಡ್ ರನ್’ ಇತಿಹಾಸ ಮರುಕಳಿಸುವುದೇ?

- Advertisement -
- Advertisement -

ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯ ನಡುವೆ ಸದ್ದುಗದ್ದಲದ ಸದನವೂ ಆರಂಭವಾಗಿದೆ. ಹತ್ತು ದಿನಗಳ (ಸೆ.12 ರಿಂದ.23) ಈ ಕಲಾಪದಲ್ಲಿ ಹಲವು ಗಂಭೀರ ಚರ್ಚೆಗಳೂ ಆಗುತ್ತಿವೆ. ಎಂದಿನಂತೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಮತರಾಜಕಾರಣದ ಲೆಕ್ಕಾಚಾರಗಳ ಜೊತೆಗೆ ವಿರೋಧ ಪಕ್ಷಗಳು ಹಾಗೂ ಆಡಳಿತ ಪಕ್ಷಗಳು ಚರ್ಚೆ ಮಾಡುವುದು ಸಹಜ. ಆ ದಿಸೆಯಲ್ಲಿ ಎಲ್ಲ ಪಕ್ಷಗಳು ಸಾಗುತ್ತಿವೆ.

’ಕೋಮು ಧ್ರುವೀಕರಣ ಹಾಗೂ ಭ್ರಷ್ಟಾಚಾರ’ ಚುನಾವಣೆಯ ಅಸ್ತ್ರಗಳಾಗುವ ಸೂಚನೆಗಳು ದೊರಕುತ್ತಿವೆ. ಹಿಂದುತ್ವ ಅಜೆಂಡಾದಲ್ಲಿ ಸಾಗುತ್ತಿರುವ ಬಿಜೆಪಿ, ’ಕೋಮು ಧ್ರುವೀಕರಣ’ಕ್ಕೆ ಆದ್ಯತೆ ನೀಡುತ್ತಿದ್ದರೆ, ಕಾಂಗ್ರೆಸ್ ಇದರಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿದೆ. ಕೋಮು ರಾಜಕಾರಣದ ಬದಲಿಗೆ, ’ಭ್ರಷ್ಟಾಚಾರ’ವನ್ನು ಮುನ್ನೆಲೆಗೆ ತರುವುದಕ್ಕೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದು ಈ ಬಾರಿಯ ಸದನದಲ್ಲೂ ಪ್ರತಿಧ್ವನಿಸಿದಂತೆ ಕಾಣುತ್ತಿದೆ.

ಬದುಕಿನ ವಿಷಯಗಳಿಗಿಂತ ಭಾವನಾತ್ಮಕ ವಿಷಯಗಳಿಗೆ ಆಡಳಿತ ಪಕ್ಷ ಆದ್ಯತೆ ನೀಡುತ್ತಿದೆ ಎಂಬುದು ಈ ಅಧಿವೇಶನದಲ್ಲೂ ಸಾಬೀತಾಯಿತು. ವಿಧಾನಸಭೆಯಲ್ಲಿ ಮಂಡನೆಯಾಗಿ, ವಿಧಾನ ಪರಿಷತ್‌ನಲ್ಲಿ ಅಂಗೀಕಾರವಾಗದೆ, ಸುಗ್ರೀವಾಜ್ಞೆ ಮೂಲಕ ಜಾರಿಗೆ ಬಂದಿದ್ದ ’ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ’ (ಮತಾಂತರ ತಡೆ ಮಸೂದೆ) ಈಗ ಕಾಯ್ದೆಯಾಗಿ ಹೊಮ್ಮಿದೆ. ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕಾರ ಮಾಡಲಾಗಿದೆ. ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಡುವೆ ವಿಧಾನಪರಿಷತ್‌ನಲ್ಲಿ ಭಾರೀ ವಾಗ್ವಾದಕ್ಕೂ ಈ ಮಸೂದೆ ಅವಕಾಶ ನೀಡಿತ್ತು.

ಭಾರೀ ಮಳೆಯಿಂದಾಗಿ ಬೆಂಗಳೂರು ಪೂರ್ವ ಭಾಗ ತತ್ತರಿಸಿತು. ರಾಜಕಾಲುವೆಗಳು ಉಕ್ಕಿ ಹರಿದವು. ಬಡಾವಣೆಗಳು ಜಲಾವೃತವಾದವು. ರಾಜ್ಯದ ಎಲ್ಲೆಡೆಯೂ ಇದೇ ರೀತಿಯಲ್ಲಿ ಭಾರೀ ಮಳೆ ಸುರಿದಿದ್ದರಿಂದ ರೈತರ ಪರಿಸ್ಥಿತಿ ಗಂಭೀರವಾಗಿದೆ. ಮನೆಗಳು ಮುರಿದುಬಿದ್ದಿವೆ. ಬೆಳೆ ನಾಶವಾಗಿದೆ. ಈ ಎಲ್ಲ ಚರ್ಚೆಗಳು ಸದನದಲ್ಲಿ ಪ್ರಸ್ತಾಪವಾಗುತ್ತಿವೆ.

40% ಸರ್ಕಾರ ಎಂಬ ಹಣೆಪಟ್ಟಿಯನ್ನು ಹೊತ್ತಿರುವ ಬೊಮ್ಮಾಯಿ ನೇತೃತ್ವದ ಆಡಳಿತವನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಇಕ್ಕಟ್ಟಿಗೆ ಸಿಲುಕಿಸಿದಂತೆ ಭಾಸವಾಗುತ್ತಿದೆ. ಸದನದ ಏಳನೇ ದಿನ ನಡೆದ ಚರ್ಚೆ ಇದನ್ನು ಮತ್ತಷ್ಟು ಸಾಬೀತುಪಡಿಸಿದಂತಿತ್ತು.

ಪಿಎಸ್‌ಐ ಹಗರಣದಿಂದಾಗಿ ನಿಜವಾದ ಪ್ರತಿಭೆಗಳಿಗೆ ಅನ್ಯಾಯವಾಗಿರುವುದನ್ನು ಪ್ರತಿಪಕ್ಷಗಳ ನಾಯಕರಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಟ್ಟದಲ್ಲಿ ಮಾತ್ರ ತನಿಖೆಯಾಗುತ್ತಿರುವುದನ್ನು ಪ್ರಸ್ತಾಪಿಸಿದ ಪ್ರತಿಪಕ್ಷಗಳ ನಾಯಕರು, “ಇದರಲ್ಲಿ ಭಾಗಿಯಾಗಿರುವ ಜನಪ್ರತಿನಿಧಿಗಳ ಮೇಲೂ ತನಿಖೆಯಾಗಬೇಕು” ಎಂದು ಆಗ್ರಹಿಸಿದರು. ಸದನಕ್ಕೆ ಬರುವುದಕ್ಕೂ ಮುನ್ನ ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ತೆರಳಿದ ಕಾಂಗ್ರೆಸ್ ನಾಯಕರು, ಪ್ರತಿಭಟನಾನಿರತ ಪಿಎಸ್‌ಐ ಹುದ್ದೆ ಆಕಾಂಕ್ಷಿಗಳನ್ನು ಭೇಟಿ ಮಾಡಿ ಭರವಸೆ ನೀಡಿದರು. ಅದರ ಮುಂದುವರಿದ ಭಾಗವಾಗಿ ಶಕ್ತಿಪ್ರದರ್ಶನವೂ ಆಯಿತು. ಆರಂಭದಲ್ಲಿ ಪಿಎಸ್‌ಐ ಹಗರಣದ ಚರ್ಚೆಗೆ ಸರ್ಕಾರ ಸಿದ್ಧವಿರಲಿಲ್ಲ. ಆದರೆ ವಿರೋಧ ಪಕ್ಷ ಪಟ್ಟು ಬದಲಿಸದ ಕಾರಣ, ಚರ್ಚೆ ಅನಿವಾರ್ಯವಾಯಿತು.

ಹೊಸ ಮಸೂದೆಗಳ ಪರಿಚಯ, ಕ್ಷುಲ್ಲಕ ವಿಷಯಗಳ ಕುರಿತು ಚರ್ಚೆ ಇತ್ಯಾದಿಗಳ ನಡುವೆ ಸದನದಲ್ಲಿ ಹಗರಣಗಳದ್ದೇ ದೊಡ್ಡ ಸದ್ದು. ಶೇ.40 ಕಮಿಷನ್‌ನಿಂದ ಹಿಡಿದು, ನೆರೆಹಾವಳಿಯವರೆಗೂ ಭ್ರಷ್ಟಾಚಾರದ್ದೇ ಮಾತು. ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, “ಪ್ರವಾಹ ಸಂತ್ರಸ್ತರಿಗೆ ನೀಡುವ ಪರಿಹಾರದಲ್ಲೂ ಶೇ.40ರಷ್ಟು ಲಂಚ ಹೊಡೆಯಬೇಡಿ” ಎಂದುಬಿಟ್ಟರು. ತಿರುಗಿಬಿದ್ದ ಬಿಜೆಪಿಗರು, “ನಲವತ್ತು ಪರ್ಸೆಂಟ್ ಭ್ರಷ್ಟಾಚಾರಕ್ಕೆ ಸಾಕ್ಷಿ ತೋರಿಸಿ” ಎಂದರು. ಅದಕ್ಕೆ ಬಿ.ಕೆ.ಹರಿಪ್ರಸಾದ್, ಗುತ್ತಿಗೆದಾರರ ಸಂಘದತ್ತ ಬೆರಳು ಮಾಡಿದರು.

ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು, “ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ನಡೆದಿದೆ. ತನಿಖೆ ನಡೆಸಬೇಕು” ಎಂದು ಆಗ್ರಹಿಸಿ, ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸಿದರು. “ಗಂಗಾ ಕಲ್ಯಾಣ ಯೋಜನೆಯಲ್ಲಿ 430 ಕೋಟಿ ರೂ.ಗಳಷ್ಟು ಅಕ್ರಮ ನಡೆದಿದೆ. ಸರ್ಕಾರ ಸಮರ್ಪಕ ಉತ್ತರ ಕೊಡುತ್ತಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಗುಡುಗಿದರು. ಇದಕ್ಕೆ ಶಾಸಕ ಯತೀಂದ್ರ ಅವರೂ ದನಿಗೂಡಿಸಿದರು. “2018ರಲ್ಲಿ ಅನುಮೋದನೆ ನೀಡಿದ ಕೊಳವೆ ಬಾವಿಗಳನ್ನೂ ತೋಡಿಸುವುದರ ಜೊತೆಗೆ ಹೊಸ ಬಾವಿಗಳನ್ನೂ ತೋಡಿಸಲಾಗುತ್ತಿದೆ. ಎಲ್ಲವೂ ಪಾರದರ್ಶಕವಾಗಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡರು.

ಪಶು ಸಂಗೋಪನಾ ಇಲಾಖೆಯ ನಕಲಿ ನೇಮಕಾತಿ ಆದೇಶ ಪ್ರಕರಣ ಪರಿಷತ್‌ನಲ್ಲಿ ಮುನ್ನಲೆಗೆ ಬಂದಿತು. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

“ಬೆಳೆ ವಿಮೆ ಎಂಬುದು ವಿಮಾ ಕಂಪನಿಗಳನ್ನು ಉದ್ಧಾರ ಮಾಡಿ, ರೈತರನ್ನು ವಂಚಿಸುತ್ತಿದೆ. ಈ ಬಾರಿಯಾದರೂ ಸರಿಯಾಗಿ ಪರಿಹಾರ ಕೊಡಿಸಲು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು” ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ವಿಧಾನಸಭೆಯಲ್ಲಿ ಒತ್ತಾಯಿಸಿದರು.

“ಜಗತ್ತಿನ ಮೂರನೇ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವ್ಯಕ್ತಿ ವಿಮೆ ವ್ಯವಹಾರಗಳ ಮೂಲಕವೇ 60,000 ಕೋಟಿ ರೂ. ಸಂಪಾದಿಸಿದ್ದಾರೆ. 2019-20ನೇ ಸಾಲಿನಲ್ಲಿ ಅತಿ ಹೆಚ್ಚು ಬೆಳೆ ನಷ್ಟ ಸಂಭವಿಸಿತು. ಆ ಸಾಲಿನಲ್ಲಿ ರಾಜ್ಯ ಸರ್ಕಾರ ಮತ್ತು ರೈತರು ಒಟ್ಟು 2,278 ಕೋಟಿ ರೂ. ವಿಮೆ ಕಂತು ಪಾವತಿಸಿದ್ದರು. ಒಟ್ಟು 1357 ಕೋಟಿ ರೂ. ಕ್ಲೇಮ್ ಮಾಡಿದ್ದರು. ಅಂತಿಮವಾಗಿ 1215 ಕೋಟಿ ರೂ. ಮಾತ್ರ ವಿಮೆ ಪಾವತಿಯಾಯಿತು. ರೈತರು ಸಂಕಷ್ಟದಲ್ಲಿದ್ದ ವೇಳೆಯಲ್ಲಿ ವಿಮಾ ಕಂಪನಿಗಳಿಗೆ 1,041 ಕೋಟಿ ಲಾಭವಾಗಿದೆ” ಎಂದು ವಿಷಾದಿಸಿರುವ ಅವರು ರಾಜ್ಯದಲ್ಲಿ ಮಳೆಹಾನಿ ಆಗಿರುವ ನಷ್ಟವನ್ನು ಪ್ರಸ್ತಾಪಿಸಿದರು.

ಸದ್ದು ಮಾಡಿದ ರಾಜಕಾಲುವೆ, ಕರೆ ಒತ್ತುವರಿ

ಬೆಂಗಳೂರಿನ ಪ್ರವಾಹ ಉಂಟಾಗಲು ಕಾರಣವಾಗಿರುವ ರಾಜಕಾಲುವೆ ಹಾಗೂ ಕೆರೆ ಒತ್ತುವರಿ ವಿಚಾರ ಸದನದಲ್ಲಿ ಪ್ರತಿಧ್ವನಿಸಿದೆ. ನ್ಯಾಯಾಂಗ ತನಿಖೆಗೂ ಬೊಮ್ಮಾಯಿ ಆದೇಶಿಸಿದ್ದಾರೆ.

“ಬೆಂಗಳೂರಿನಲ್ಲಿ ಬಿಡಿಎ 22, ಬಿಡಿಎ ಅನುಮೋದಿತ 1, ಬಿಬಿಎಂಪಿ 5, ಇತರೆ 7 ಸೇರಿದಂತೆ ಒಟ್ಟು 42 ಕೆರೆಗಳನ್ನು ಮುಚ್ಚಲಾಗಿದೆ. ಒಟ್ಟು 388 ಎಕರೆ ಪ್ರದೇಶದಲ್ಲಿ 23 ಬಡಾವಣೆಗಳು ನಿರ್ಮಾಣವಾಗಿವೆ. ಅದರ ಒಟ್ಟು ಮೌಲ್ಯ 11,640 ಕೋಟಿ ರೂ. ಎಂದು ಅಂದಾಜಿಸಲಾಗಿದೆ” ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

“ಮೂಲಸ್ವರೂಪ ಕಳೆದುಕೊಂಡ ಕೆರೆಗಳನ್ನು ದಾಖಲೆಗಳಿಂದಲೇ ಕೈಬಿಟ್ಟು ಕೆರೆ ನುಂಗುವ ಹುನ್ನಾರ ನಡೆದಿತ್ತು” ಎಂದು ಬೊಮ್ಮಾಯಿ ಆರೋಪಿಸಿದರು. “ತನಿಖೆ ಕೈಗೊಂಡು, ಈಗ ಕೆರೆ ಜಾಗದಲ್ಲಿ ನಿರ್ಮಾಣವಾಗಿರುವ ಬಡಾವಣೆಗಳನ್ನು ತೆರವು ಮಾಡಿ ಕೆರೆ ನಿರ್ಮಾಣಮಾಡಿ” ಎಂದಿರುವ ಸಿದ್ದರಾಮಯ್ಯ, “ಅರಸು, ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಇತರೆ ಮುಖ್ಯಮಂತ್ರಿಗಳ ಕಾಲಾವಧಿಯಲ್ಲಿ ಆಗಿರುವ ನಿರ್ಧಾರಗಳ ಬಗ್ಗೆ ತನಿಖೆ ನಡೆಸಿ. ಬಸ್ ನಿಲ್ದಾಣ, ಡಾಲರ್ಸ್ ಕಾಲೋನಿ, ಇತರೆ ಕಟ್ಟಡ, ಬಡಾವಣೆಯಿರುವ ಜಾಗದಲ್ಲಿ ಮತ್ತೆ ಕೆರೆ ನಿರ್ಮಾಣ ಮಾಡಿ” ಎಂದು ಒತ್ತಾಯಿಸಿದ್ದಾರೆ.

“ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ರೈತರಿಗೆ 2 ಲಕ್ಷ ಕೋಟಿ ರೂ. ನಷ್ಟವಾಗಿದೆ. ಆದರೆ ಸರ್ಕಾರ ನೀಡಿರುವ ಪರಿಹಾರ ಮಾತ್ರ 2,134 ಕೋಟಿ” ಎಂದು ಸಿದ್ದರಾಮಯ್ಯ ವಿಷಾದಿಸಿದ್ದಾರೆ. “2019ರಿಂದ ಈವರೆಗೆ 3,40,543 ಮನೆಗಳು ಹಾನಿಯಾಗಿವೆ. 16,649 ಕೋಟಿ ರೂ. ನಷ್ಟವಾಗಿದೆ. ಈ ವರ್ಷ 24,408 ಮನೆಗಳು ಹಾನಿಯಾಗಿವೆ. 2019ರಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡಿರುವ ಮನವಿಯಲ್ಲಿ 2,47,628 ಮನೆಗಳಿಗೆ ಪ್ರವಾಹದಿಂದ ಹಾನಿಯಾಗಿದೆ ಎಂದಿದೆ. ಈ ನಷ್ಟಕ್ಕೆ 9,622 ಕೋಟಿ ರೂ. ಪರಿಹಾರ ನೀಡಬೇಕಾಗಿತ್ತು. ಆದರೆ ವಸತಿ ಇಲಾಖೆ 2,029 ಕೋಟಿಯನ್ನು ಮಾತ್ರ ನೀಡಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗೆ ವಸತಿ ಹಾಗೂ ಬೆಳೆನಾಶ ಪರಿಹಾರದಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ಸದನದಲ್ಲಿ ಚರ್ಚೆಗೆ ತಂದಿದ್ದಾರೆ.

ಇದೆಲ್ಲದರ ನಡುವೆ ಹೊಸ ಮಸೂದೆಗಳನ್ನು ಪ್ರಸ್ತಾಪಿಸಲಾಗಿದೆ. ಅನಧಿಕೃತವಾಗಿ ಸಾಗುವಳಿ ಮಾಡಲಾಗುತ್ತಿರುವ ಸರಕಾರಿ ಭೂಮಿಯ ಸಕ್ರಮಕ್ಕೆ ನಮೂನೆ 57ರ ಅಡಿಯಲ್ಲಿ ಅರ್ಜಿಗೆ ಕಾಲಾವಕಾಶವನ್ನು ಒಂದು ವರ್ಷ ವಿಸ್ತರಿಸುವ ಸಂಬಂಧ ’ಕರ್ನಾಟಕ ಭೂಕಂದಾಯ (ತಿದ್ದುಪಡಿ) ಮಸೂದೆ’ ವಿಧಾನಸಭೆಯಲ್ಲಿ ಅನುಮೋದನೆಗೊಂಡಿದೆ. ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಗೋಮಾಳದ ಸಕ್ರಮಕ್ಕೂ ಅವಕಾಶ ನೀಡಬೇಕೆಂಬ ಚರ್ಚೆ ನಡೆದಿದ್ದರೂ ಸದ್ಯಕ್ಕೆ ಅರ್ಜಿ ಸಲ್ಲಿಕೆಗಷ್ಟೇ ಈ ಪ್ರಸ್ತಾವಿತ ಮಸೂದೆಯನ್ನು ಸೀಮಿತ ಮಾಡಲಾಗಿದೆ. “ಈ ಸಕ್ರಮದ ಪ್ರಯೋಜನ ಬಡವರಿಗಿಂತ ಶ್ರೀಮಂತರಿಗೇ ಹಚ್ಚು. ದೊಡ್ಡ ಪ್ರಮಾಣದಲ್ಲಿ ಅಕ್ರಮ ಮಾಡಿಕೊಂಡ ಶ್ರೀಮಂತರಿಗೆ ಹೆಚ್ಚಿನ ಅನುಕೂಲವಾಗುತ್ತದೆ” ಎಂಬ ಅಭಿಪ್ರಾಯವನ್ನು ಯು.ಟಿ.ಖಾದರ್ ತಾಳಿರುವುದರಲ್ಲಿ ನಿಜವೂ ಇದೆ.

ಠೇವಣಿದಾರರಿಗೆ ಆಗುತ್ತಿರುವ ಮೋಸಗಳ ತಡೆಗೆ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ಮಸೂದೆ, ಗ್ರಾಮಾಂತರ ಪ್ರದೇಶಗಳಲ್ಲಿ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಪಡೆಯುವುದರಿಂದ ವಿನಾಯಿತಿ ನೀಡುವ ಸಂಬಂಧ ಕರ್ನಾಟಕ ಮುನಿಸಿಪಾಲಿಟಿಗಳ ತಿದ್ದುಪಡಿ ಮಸೂದೆ ಮಂಡನೆಯಾಗಿದೆ. ಈ ಲೇಖನ ಬರೆಯುವ ಹೊತ್ತಿಗೆ ಸದನದಲ್ಲಿ ಭ್ರಷ್ಟಾಚಾರದ ಸದ್ದುಗದ್ದಲ ಉಂಟಾಗಿತ್ತು.

ಪ್ರಶ್ನೆಗಳಿಗೆ ಉತ್ತರ ದೊರಕುತ್ತಿಲ್ಲ: ಹರಿಪ್ರಸಾದ್

ಸದನ ಸಾಗುತ್ತಿರುವ ದಿಕ್ಕಿನ ಕುರಿತು ’ನ್ಯಾಯಪಥ’ಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್, “ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಸರಿಯಾಗಿ ಚರ್ಚೆಯಾಗಬೇಕಿತ್ತು. ಆದರೆ ಸರ್ಕಾರ ನಾವು ಎತ್ತಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಿಲ್ಲ. ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಾಗಿದೆಯೇ ಎಂದು ಕೇಳಿದರೆ ಅವರ ಬಳಿ ಉತ್ತರವಿಲ್ಲ. ಹಾರಿಕೆಯ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಸದನವನ್ನು ಸಂಪೂರ್ಣವಾಗಿ ದಿಕ್ಕು ತಪ್ಪಿಸುತ್ತಿದ್ದಾರೆ” ಎಂದು ಆರೋಪಿಸಿದರು.

“ಪಿಎಸ್‌ಐ ಹಗರಣ ಚರ್ಚೆಗೆ ಬರಬೇಕೆಂದಾಗ ಪ್ರಕರಣ ಕೋರ್ಟ್‌ನಲ್ಲಿದೆ ಎಂದು ಹೇಳಿದರು. ಪ್ರಕರಣ ಕೋರ್ಟ್‌ನಲ್ಲಿ ಇಲ್ಲ. ಕಾನೂನು ಸುವ್ಯವಸ್ಥೆ ಕೆಟ್ಟುಬಿದ್ದಿದೆ. ಮಳೆಹಾನಿಗೆ ಯಾವುದೇ ಪರಿಹಾರ ಕಾಣುತ್ತಿಲ್ಲ. ಎಲ್ಲರಿಗೂ ಪೂರ್ಣಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ. ಅನುದಾನ ಇದೆ ಎಂದು ಇವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಫಂಡ್ ಖಾಲಿಯಾಗಿದೆ. ಜಿಎಸ್‌ಟಿ ಹಣ ಬರಬೇಕಿದೆ. ಇಡೀ ದೇಶದಲ್ಲಿ ಅತಿಹೆಚ್ಚು ಜಿಎಸ್‌ಟಿ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ನಮ್ಮಲ್ಲಿ ಅನುದಾನ ಕೊರತೆಯಾಗುತ್ತಿರುವುದು ಬೇಸರದ ಸಂಗತಿ. ಈ ಸರ್ಕಾರ ಬಡವರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ರಾಜಕಾಲುವೆ ಒತ್ತುವರಿ ತೆರವು ಮಾಡುತ್ತೇವೆ ಎಂದು ಬಡವರ ಮನೆ, ಕಾಂಪೌಂಡ್ ಒಡೆಯುತ್ತಿದ್ದಾರೆಯೇ ಹೊರತು ಸಾಹುಕಾರರನ್ನು ಮುಟ್ಟುತ್ತಿಲ್ಲ ಎಂದು ತಿಳಿಸಿದರು.

ಬಿ.ಕೆ.ಹರಿಪ್ರಸಾದ್

“ಸದನದಲ್ಲಿ ಚರ್ಚೆ ಮಾಡಲು ಬಿಡುವುದಿಲ್ಲ. ಮಾತನಾಡಲು ನಿಂತರೆ ಅಡ್ಡಪಡಿಸುತ್ತಿದ್ದಾರೆ. ಉತ್ತರ ಕೊಡುವ ಅಥವಾ ಕೇಳಿಸಿಕೊಳ್ಳುವ ಕೆಲಸ ಆಗುತ್ತಿಲ್ಲ ಎಂದು ದೂರಿದರು.

ಉಭಯ ಪಕ್ಷಗಳ ಆರೋಪ ಪ್ರತ್ಯಾರೋಪಗಳ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, “ಅಕ್ರಮ ಒತ್ತುವರಿ ಕುರಿತು 2007ರಲ್ಲಿ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿ ವರದಿ ನೀಡಿತು. 2008ರಿಂದ 2013ರವರೆಗೂ ಬಿಜೆಪಿ ಇತ್ತು. ಕ್ರಮವನ್ನೇಕೆ ಜರುಗಿಸಲಿಲ್ಲ? ಅಕ್ರಮವನ್ನೆಲ್ಲ ಸಕ್ರಮ ಮಾಡಿಕೊಂಡು ಹೋಗುತ್ತಿದ್ದಾರೆ. ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ” ಎಂದು ಆಗ್ರಹಿಸಿದರು.

ಈ ಬಾರಿಯ ಸದನದಲ್ಲಿ ಪ್ರತಿಪಕ್ಷಗಳು ’ಭ್ರಷ್ಟಾಚಾರ’ವನ್ನು ಮುನ್ನೆಲೆಗೆ ತಂದಿರುವುದು ಆಶಾದಾಯಕ ಬೆಳವಣಿಗೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ವಿರುದ್ಧ 10% ಕಮಿಷನ್ ಆರೋಪ ಮಾಡಿತ್ತು. ಈಗ ಕಾಂಗ್ರೆಸ್ 40% ಕಮಿಷನ್ ಆರೋಪವನ್ನು ಮಾಡುತ್ತಿದೆ. ರಾಜಕೀಯ ಕೆಸರೆರೆಚಾಟದಾಚೆಗೆ ನೋಡಿದರೆ, ಸಂತ್ರಸ್ತರಿಗೆ ನಿಜವಾದ ನ್ಯಾಯ ಸಿಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

ಸದನದಲ್ಲಿ ಹಗರಣಗಳ ಚರ್ಚೆ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ’ತಾರ್ಕಿಕ ಅಂತ್ಯದ ಪ್ರಶ್ನೆ ನಮ್ಮ ಮುಂದಿದೆ. ತನಿಖಾ ವರದಿಗಳ ಜಾಲತಾಣವಾದ ’ದಿ ಫೈಲ್’ನ ಸಂಪಾದಕರಾದ ಜಿ.ಮಹಾಂತೇಶ್ ಅವರು ’ನ್ಯಾಯಪಥ’ಕ್ಕೆ ಪ್ರತಿಕ್ರಿಯಿಸಿ, “ಈವರೆಗೆ ಕಾಂಗ್ರೆಸ್ ಯಾವುದೇ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮ ಸುದೀರ್ಘ ಅನುಭವದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, “ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಆಯಾ ಇಲಾಖೆಗಳ ನೇಮಕಾತಿ ಪ್ರಾಧಿಕಾರಗಳು ನಡೆಸಿರುವ ಹಗರಣಗಳು ಗಂಭೀರವಾಗಿದೆ. 1998ರಿಂದ ಇಲ್ಲಿಯವರೆಗೆ ನಡೆದಂತಹ ಎಲ್ಲಾ ನೇಮಕಾತಿ ಪರೀಕ್ಷೆಗಳು ಅಕ್ರಮವಾಗಿವೆ” ಎಂದು ವಿವರಿಸಿದರು.

“1998, 99 ಮತ್ತು 2004ರ ಸಾಲಿನ ಗ್ರೂಪ್ ಎ, ಗ್ರೂಪ್ ಬಿ ಹುದ್ದೆಗಳಿಗೆ ಸಂಬಂಧಿಸಿದಂತೆ ಡಾ.ಎಚ್.ಎನ್.ಕೃಷ್ಣ ಅವಧಿಯಲ್ಲಿ ನಡೆದ ಅಕ್ರಮಗಳ ವಿಚಾರವೂ ತಾರ್ಕಿಕ ಅಂತ್ಯವೂ ಕಂಡಿಲ್ಲ. ಅಕ್ರಮದಲ್ಲಿ ಭಾಗಿಯಾದ ನಾಲ್ಕು ನೂರಕ್ಕೂ ಹೆಚ್ಚು ಜನರ ಪೈಕಿ ಸುಮಾರು ನೂರು ಜನರು ಈಗ ಐಎಎಸ್ ಶ್ರೇಣಿಯ ಹುದ್ದೆಯಲ್ಲಿದ್ದಾರೆ. 1998, 99, 2004ರ ಹಗರಣಕ್ಕೆ ಹೋಲಿಸಿದರೆ ಇಂದಿನ ಪಿಎಸ್‌ಐ ಹಗರಣ ದೊಡ್ಡದೇನಲ್ಲ. ಆ ಹಗರಣದಲ್ಲಿ ಮೀಸಲಾತಿಯನ್ನು ಒಡೆದುಹಾಕಿದ್ದರು, ಅಂಕಗಳನ್ನು ತಿದ್ದಿದ್ದರು, ಅಂಕಗಳನ್ನು ಕೂಡುವಾಗ ತಿರುಚಿದ್ದರು- ಎಲ್ಲ ದಾಖಲಾತಿಗಳನ್ನು ಖಲೀಲ್ ಅಹ್ಮದ್ ಎಂಬವರು ಕಲೆಹಾಕಿದರು. ಮುಂದೆ ಸಿಒಡಿ ತನಿಖೆಯೂ ಆಯಿತು. ಸಿಒಡಿ ವರದಿ ಕೊಟ್ಟಾಗ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಯಾವುದೇ ಕ್ರಮ ಜರುಗಿಸಲಿಲ್ಲ. ಮೇಲ್ಮನವಿ ಸಲ್ಲಿಕೆಯಾಯಿತು. ಹೈಕೋರ್ಟ್ ಸತ್ಯಶೋಧನಾ ಸಮಿತಿ ರಚಿಸಿತು. ಆ ಸಮಿತಿ ಕೊಟ್ಟ ವರದಿ ಆಧರಿಸಿ ಕೋರ್ಟ್ ತೀರ್ಪು ನೀಡಿತು. ಇದೊಂದು ಸಂವಿಧಾನಬಾಹಿರವಾದ ಕೃತ್ಯ, ವೈಟ್ ಕಾಲರ್ ಅಪರಾಧ ಎಂದು ನ್ಯಾಯಮೂರ್ತಿಗಳು ಲಿಖಿತವಾಗಿ ದಾಖಲಿಸಿದರು. ಇಷ್ಟೆಲ್ಲ ಹೇಳಿದಾಗಲೂ ನೇಮಕಾತಿ ಪಟ್ಟಿ ವಜಾ ಆಗಲೇ ಇಲ್ಲ ಎನ್ನುತ್ತಾರೆ ಮಹಾಂತೇಶ್.

ಜಿ.ಮಹಾಂತೇಶ್

“ಪಂಜಾಬ್ ಲೋಕಸೇವಾ ಆಯೋಗದ ಪ್ರಕರಣವೊಂದರಲ್ಲಿ ಶೇ.20ಕ್ಕಿಂತ ಹೆಚ್ಚಿನ ಅಕ್ರಮವಾಗಿದ್ದಾಗ ಇಡೀ ಅಧಿಸೂಚನೆಯನ್ನೇ ರದ್ದುಗೊಳಿಸಿದ ಕೆಲಸವಾಗಿತ್ತು. ಆದರೆ ಇಲ್ಲಿ ಅದಕ್ಕಿಂತ ಹತ್ತುಪಟ್ಟು ಹೆಚ್ಚಿನ ಅಕ್ರಮವಾಗಿದ್ದರೂ ಕ್ರಮ ಜರುಗಿಸಲಿಲ್ಲ. ಯಡಿಯೂರಪ್ಪನವರಾಗಲೀ, ಆ ನಂತರ ಬಂದ ಸಿದ್ದರಾಮಯ್ಯ, ಕುಮಾರಸ್ವಾಮಿಯಾದಿಯಾಗಿ ಯಾರೂ ಕ್ರಮ ಜರುಗಿಸಲಿಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಕಾನೂನುಬಾಹಿರ ಫಲಾನುಭವಿ ಅಧಿಕಾರಿಗಳ ಪರವಾಗಿ ಮಸೂದೆಯನ್ನು ಮಂಡಿಸಿದರು. ಸುಪ್ರೀಂ ಕೋರ್ಟ್ ಆದೇಶಗಳಿಗೆ ವಿರುದ್ಧವಾಗಿ ಮಸೂದೆಯನ್ನು ಪಾಸ್ ಮಾಡಿದ್ದು, ಅಕ್ರಮಗಳನ್ನು ಹೇಗೆ ಮುಚ್ಚಿಹಾಕುತ್ತಾರೆಂಬುದಕ್ಕೆ ನಿದರ್ಶನ” ಎಂದು ತಿಳಿಸಿದರು.

“ಪ್ರಭಾವಿ ಸಮುದಾಯಗಳಿಗೆ ಸರ್ಕಾರಗಳು ಸ್ಪಂದಿಸುತ್ತವೆ. ಯಾವುದೇ ದನಿ ಇಲ್ಲದ ಸಮುದಾಯಗಳಿಂದ ಬಂದವರು ಎಲ್ಲಿಗೆ ಹೋಗಬೇಕು? 1998, 2004ರ ಪ್ರಕರಣದಲ್ಲಿ ಅನ್ಯಾಯಕ್ಕೊಳಗಾದವರು ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಆಯ್ಕೆಯಾದ ಬಹುತೇಕರು ಒಕ್ಕಲಿಗರಾಗಿದ್ದರು. ಹೀಗಾಗಿ ಕುಮಾರಸ್ವಾಮಿಯವರು ಮಸೂದೆ ತಂದಿದ್ದರು. ಸಿದ್ದರಾಮಯ್ಯನವರ ಅವಧಿಯಲ್ಲಿ ಇದೇ ಅಕ್ರಮ ಫಲಾನುಭವಿಗಳನ್ನು ಉನ್ನತ ಹುದ್ದೆಗೇರಿಸಲಾಯಿತು” ಎಂದು ವಿಷಾದಿಸಿದರು.

“ಪಿಎಸ್‌ಐ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸುತ್ತಿಲ್ಲ, ಮಂಪರು ಪರೀಕ್ಷೆಗೆ ಒಳಪಡಿಸುತ್ತಿಲ್ಲ. ಸದನದಲ್ಲಿ ಪಿಎಸ್‌ಐ ಹಗರಣದ ಬಗ್ಗೆ ಈಗ ಭಾರೀ ಚರ್ಚೆ ನಡೆದಿದೆ. ಆದರೆ ಬಿಟ್‌ಕಾಯಿನ್ ಹಗರಣದಿಂದ ಹಿಡಿದು ಇಲ್ಲಿಯವರೆಗೆ ಯಾವುದೇ ಪ್ರಕರಣವನ್ನು ಕಾಂಗ್ರೆಸ್ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ. ಪ್ರತಿಪಕ್ಷದ ಸ್ಥಾನದಲ್ಲಿ ಯಾವುದೇ ಪಕ್ಷಗಳಿದ್ದರೂ ಹೀಗೆಯೇ ಮಾಡುತ್ತವೆ. ಮಾಧ್ಯಮಗಳಲ್ಲಿ ಬಂದ ವರದಿಯನ್ನು ಇಟ್ಟುಕೊಂಡು ಈಗ ಚರ್ಚೆ ಮಾಡುತ್ತಿದ್ದಾರೆ ಬಿಟ್ಟರೆ, ಇವರದ್ದೇ ಆದ ಸ್ವಂತ ಶ್ರಮ, ತನಿಖೆ ಕಾಣುತ್ತಿಲ್ಲ ಎಂದು ಹೇಳಿದರು.

“ವೈದ್ಯಕೀಯ, ಇಂಜಿನಿಯರಿಂಗ್, ಕೆಪಿಟಿಸಿಎಲ್, ಪಿಡಬ್ಲ್ಯೂಡಿ- ಹೀಗೆ ಎಲ್ಲ ಸರ್ಕಾರಿ ನೇಮಕಾತಿಗಳಲ್ಲೂ ಅಕ್ರಮಗಳನ್ನು ನಡೆಸುತ್ತಿದ್ದರೆ ಮುಂದಿನ ದಿನಗಳಲ್ಲಿ ಪಾರದರ್ಶಕವಾದ ಸರ್ಕಾರ ನಡೆಸುವುದು ಹೇಗೆ? ಜನೋಪಯೋಗಿ ಅಧಿಕಾರ ನಡೆಸುವುದು ಹೇಗೆ? ಅಕ್ರಮಗಳಿಂದ ನೇಮಕವಾದ ಅಧಿಕಾರಿ ಅಕ್ರಮಗಳನ್ನೇ ಮಾಡುತ್ತಾನೆ” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಮಹಂತೇಶ್.

ಚರ್ಚೆಯಾಗದ ಮಸೂದೆಗಳು

“ಸಂಸದೀಯ ಚೌಕಟ್ಟು ಜನರ ಸಮಸ್ಯೆಗಳನ್ನು ಕೇಳುತ್ತಿದೆಯೇ ಎಂಬುದೇ ಮೂಲಭೂತ ಪ್ರಶ್ನೆ” ಎನ್ನುತ್ತಾರೆ ಚಿಂತಕ ಶಿವಸುಂದರ್.

’ನ್ಯಾಯಪಥ’ಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಜನರ ಹಿತಾಸಕ್ತಿಗೆ ಅನುಗುಣವಾಗಿ ಕಾನೂನುಗಳು ರಚನೆಯಾಗಬೇಕು, ಚರ್ಚೆಗಳು ನಡೆಯಬೇಕು, ವಿಷಯ ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಬೇಕು. ಆದರೆ ಈಗ ಯಾವುದೇ ಮಸೂದೆಗಳು ಕೂಡ ಸರಿಯಾಗಿ ಚರ್ಚೆಗಳಾಗುತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತಜ್ಞರ ಸಮಿತಿಗೆ ಮಸೂದೆಗಳನ್ನು ಕಳುಹಿಸುವ ಆಶಯವೇ ಕಾಣೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಶೇ.60ರಷ್ಟು ಸಬ್ಜಕ್ಟ್‌ಗೆ ಹೋಗುತ್ತಿದ್ದ ಮಸೂದೆಗಳ ಪ್ರಮಾಣ ಈಗ ಶೇ.20ಕ್ಕೆ ಇಳಿದಿದೆ” ಎಂದು ತಿಳಿಸಿದರು.

ಶಿವಸುಂದರ್

“ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಜನರ ನೈಜ ಸಮಸ್ಯೆಗಳಿಗಿಂತ ಭಾವನಾತ್ಮಕ ವಿಷಯಗಳಿಗೆ ಆಳುವ ಪಕ್ಷ ಹಾಗೂ ವಿರೋಧ ಪಕ್ಷಗಳು ಆದ್ಯತೆ ನೀಡುತ್ತವೆ. ಅದರ ಸುತ್ತಲೇ ದಿನಗಳು ಕಳೆದುಹೋಗುತ್ತವೆ. ಭಾವನಾತ್ಮಕವಾಗಿ ಜನರನ್ನು ಧ್ರುವೀಕರಣ ಮಾಡಲೆಂದೇ ಅಸೆಂಬ್ಲಿಗಳು ಬಳಕೆಯಾಗುತ್ತಿವೆ. ಯಾವುದೇ ಚರ್ಚೆಗಳಾದರೂ ಬಹುಮತದ ಸರ್ಕಾರದಲ್ಲಿ ಜನಪರವಾದ ತಾರ್ಕಿಕ ಅಂತ್ಯಗಳು ಸಿಗುತ್ತಿಲ್ಲ ಎಂದರು.

“ಎಸ್‌ಸಿ ಎಸ್‌ಟಿ ಅನುದಾನ ಕಡಿತವಾಗಿರುವುದು ಏತಕ್ಕೆ ಎಂಬುದು ಗಂಭೀರ ಚರ್ಚೆಗೆ ಒಳಪಡುತ್ತಿಲ್ಲ. ಸಾಲು ಸಾಲು ಮಸೂದೆಗಳು ಮಂಡನೆಯಾಗುತ್ತವೆ. ಅವುಗಳನ್ನು ಜನಪ್ರತಿನಿಧಿಗಳು ಓದಿಕೊಂಡೂ ಬರುವುದಿಲ್ಲ. ಇದು ವ್ಯಕ್ತಿಗತ ವೈಫಲ್ಯವಲ್ಲ, ಇಡೀ ವ್ಯವಸ್ಥೆಯ ವೈಫಲ್ಯ ಎಂದು ಅಭಿಪ್ರಾಯಪಟ್ಟರು.


ಇದನ್ನೂ ಓದಿ: ‘ಪೇಸಿಎಂ’ ಪೋಸ್ಟರ್‌ಗಳು ವೈರಲ್‌; ಸ್ಕ್ಯಾನ್‌ ಮಾಡಿದರೆ ‘40% ವೆಬ್‌ಸೈಟ್‌’ ಓಪನ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...