ಅನಿಲ್ ದೇಶ್‌ಮುಖ್ ವಿರುದ್ಧ ಸಿಬಿಐ ತನಿಖೆ ಕೋರಿಕೆ: ಅಗ್ಗದ ಪ್ರಚಾರಕ್ಕಾಗಿ ಅರ್ಜಿ ಎಂದ ಬಾಂಬೆ ಹೈಕೋರ್ಟ್
PC:Flickr

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಮತ್ತು ಮುಂಬೈ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಅಗ್ಗದ ಪ್ರಚಾರಕ್ಕಾಗಿ ಅರ್ಜಿ ಸಲ್ಲಿಕೆ ಎಂದು ಬಾಂಬೆ ಹೈಕೋರ್ಟ್ ಹೇಳಿದ್ದು, ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ.

ಅನಿಲ್ ದೇಶ್‌ಮುಖ್ ವಿರುದ್ಧದ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳ (CBI) ಅಥವಾ ಇನ್ನಾವುದೇ ಸ್ವತಂತ್ರ ಸಂಸ್ಥೆಗೆ ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ಒತ್ತಾಯಿಸಿ, ವಕೀಲೆ ಜೈಶ್ರೀ ಪಾಟೀಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಮನೀಶ್ ಪಿಟಾಲೆ ಅವರ ನ್ಯಾಯಪೀಠ ವಿಚಾರಣೆ ನಡೆಸಿದೆ.

ಕಳೆದ ವಾರ ವಕೀಲೆ ಜೈಶ್ರೀ ಪಾಟೀಲ್ ಸಲ್ಲಿಸಿದ್ದ ಅರ್ಜಿಯಲ್ಲಿ, ಅನಿಲ್ ದೇಶ್‌ಮುಖ್ ಮತ್ತು ಪರಮ್ ಬೀರ್ ಸಿಂಗ್ ಇಬ್ಬರು ತಮ್ಮ ವೃತ್ತಿಪರ ಕರ್ತವ್ಯಗಳನ್ನು ಉಲ್ಲಂಘಿಸಿ ವರ್ತಿಸಿದ್ದಾರೆ. ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಪತ್ತೆಯಾಗಿದ್ದ ಸ್ಫೋಟಕಗಳಿಂದ ತುಂಬಿದ ಕಾರಿನ ತನಿಖೆ, ವಾಹನದ ಮಾಲೀಕ ಮನ್ಸುಖ್ ಹಿರಾನ್ ಸಾವು, ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಬಂಧನ ಮತ್ತು ಸಂಬಂಧಿತ ಘಟನೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿಯ ದಕ್ಷಿಣ ಭಾರತ ಭೇಟಿ: ‘ಗೋ ಬ್ಯಾಕ್ ಫ್ಯಾಸಿಸ್ಟ್‌ ಮೋದಿ’ ಟ್ವಿಟರ್‌ ಟ್ರೆಂಡ್!

ಗೃಹ ಸಚಿವ ಅನಿಲ್ ದೇಶ್‌ಮುಖ್ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದಾರೆ. ವಕೀಲೆ ಜೈಶ್ರೀ ಪಾಟೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಮಂಗಳವಾರ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಪೀಠವು “ನಮ್ಮ ಅನುಭವದಂತೆ ನೋಡುವುದಾದರೇ ಅಗ್ಗದ ಜನಪ್ರಿಯತೆಗಾಗಿ ಇಂತಹ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಇದು ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ.

ಐಪಿಎಸ್ ಅಧಿಕಾರಿ ಪರಮ್ ಬೀರ್‌ ಸಿಂಗ್ ಕೂಡ ಹೈಕೋರ್ಟ್‌ನನ್ನು ಸಂಪರ್ಕಿಸಿದ್ದು, ಅವರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನ್ಯಾಯಾಲಯದ ಮುಂದೆ ಬುಧವಾರ ವಿಚಾರಣೆಗೆ ಇಡಲಾಗಿದೆ ಎಂದು ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ನ್ಯಾಯಪೀಠಕ್ಕೆ ತಿಳಿಸಿದರು.

ಜೈಶ್ರೀ ಪಾಟೀಲ್ ಅರ್ಜಿಯನ್ನು ಬಹಳ ಕೆಟ್ಟದಾಗಿ ರಚಿಸಿದ್ದಾರೆ ಎಂದು ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಆರೋಪಿಸಿದ್ದಾರೆ. ಅಸಮಂಜಸ ಆದೇಶಗಳ ಸಾಧ್ಯತೆಯನ್ನು ತಪ್ಪಿಸಲು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ಸೇರಿಸುವಂತೆ ಹೈಕೋರ್ಟ್ ಕುಂಭಕೋಣಿಯವರಿಗೆ ತಿಳಿಸಿದೆ.

ಜೈಶ್ರೀ ಪಾಟೀಲ್‌ರವರ ಇತರ ಸಂಬಂಧಿತ ಮನವಿಗಳನ್ನು ಹೈಕೋರ್ಟ್ ಏಪ್ರಿಲ್ 1 ರಂದು ವಿಚಾರಣೆ ನಡೆಸಲಿದೆ.


ಇದನ್ನೂ ಓದಿ: ತಿಂಗಳಿಗೆ 100 ಕೋಟಿ ಲಂಚ ಸಂಗ್ರಹಕ್ಕೆ ಗೃಹ ಸಚಿವರ ಸೂಚನೆ- ಪರಮ್ ಬೀರ್ ಸಿಂಗ್ ಆರೋಪ

LEAVE A REPLY

Please enter your comment!
Please enter your name here