ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಮಾರಕವಾಗಿ ಪರಿಣಮಿಸುತ್ತಿದೆ. ದೋಷಮುಕ್ತ ಪಟ್ಟಿ ಸಿದ್ಧಪಡಿಸುವ ನೆಪದಲ್ಲಿ ಚುನಾವಣಾ ಆಯೋಗವು ಬರೋಬ್ಬರಿ 1.08 ಕೋಟಿ ಮತದಾರರನ್ನು ಎಎಸ್‌ಡಿಡಿಒ (ASDDO) ಪಟ್ಟಿಗೆ ಸೇರಿಸಿ, ನೈಜ ನಾಗರಿಕರನ್ನು ಮತದಾನದ ಹಕ್ಕಿನಿಂದ ವಂಚಿಸಲು ಹೊರಟಿದೆ. ಸ್ವಂತ ಮನೆಯಲ್ಲೇ ವಾಸಿಸುತ್ತಿರುವವರನ್ನು ‘ಸ್ಥಳಾಂತರಗೊಂಡಿದ್ದಾರೆ’ ಎಂದು ನಮೂದಿಸಿ ಮತಹಕ್ಕಿಗೆ ಕುತ್ತು ತಂದಿರುವುದು ಒಂದೆಡೆಯಾದರೆ, ವಾಸ್ತವದಲ್ಲಿ ಜೀವಂತವಾಗಿರುವವರನ್ನೇ ದಾಖಲೆಗಳಲ್ಲಿ ‘ಮೃತ’ ಎಂದು ಘೋಷಿಸಿ ಅವರ ಅಸ್ತಿತ್ವವನ್ನೇ ಅಳಿಸಿಹಾಕುವಂತಹ ಎಡವಟ್ಟನ್ನು ಆಯೋಗ ಮಾಡುತ್ತಿದೆ.

ಇದಕ್ಕೊಂದು ಜೀವಂತ ಉದಾಹರಣೆಯಾಗಿ, ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ರಾಮಸಾಗರ ಗ್ರಾಮದ 1ನೇ ವಾರ್ಡ್‌ನಲ್ಲಿ ಸ್ವಂತ ಮನೆಯಲ್ಲೇ ವಾಸಿಸುತ್ತಿರುವ 62 ವರ್ಷದ ಆನೆ ಪ್ರಕಾಶ (ತಂದೆ: ಆನೆ ಈರಪ್ಪ) ಎಂಬವರನ್ನು ಚುನಾವಣಾ ಆಯೋಗವು ತನ್ನ ಎಎಸ್‌ಡಿಡಿಒ ಪಟ್ಟಿಯಲ್ಲಿ ‘ಮೃತಪಟ್ಟಿದ್ದಾರೆ’ (Death) ಎಂದು ನಮೂದಿಸಿ, ಮತದಾರರ ಪಟ್ಟಿಯಿಂದ ಅವರ ಹೆಸರನ್ನೇ ತೆಗೆದುಹಾಕಲು ಮುಂದಾಗಿರುವುದು SIR ನಿಂದ ಆಗುತ್ತಿರುವ ಅವಾಂತರಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

62 ವರ್ಷ ವಯಸ್ಸಾಗಿದೆ ಎಂಬ ಒಂದೇ ಕಾರಣಕ್ಕೆ, ಯಾವುದೇ ಪ್ರತ್ಯಕ್ಷ ಪರಿಶೀಲನೆ ನಡೆಸದೇ ಬಿಎಲ್‌ಒ ಹಾಗೂ ಅಧಿಕಾರಿಗಳು ಅವರನ್ನು ದಾಖಲೆಯಲ್ಲಿ ಮೃತ ಎಂದು ದಾಖಲಿಸಿದ್ದಾರೆ. ಆದರೆ, ತಮ್ಮ ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ಮಾಧ್ಯಮಗಳ ಮುಂದೆ ನಿಂತಿರುವ ಆನೆ ಪ್ರಕಾಶ, “ನಾನು ಸತ್ತಿಲ್ಲ, ಬದುಕಿದ್ದೇನೆ. ನನ್ನ ಸ್ವಂತ ಮನೆಯಲ್ಲೇ ಜೀವನ ನಡೆಸುತ್ತಿದ್ದೇನೆ. ನನ್ನ ಮತದಾನದ ಹಕ್ಕನ್ನು ಕಸಿಯಬೇಡಿ” ಎಂದು ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸುತ್ತಿದ್ದಾರೆ.

ಇದು ಕೇವಲ ತಾಂತ್ರಿಕ ಪ್ರಮಾದವಲ್ಲ, ಬದಲಿಗೆ ಪ್ರಜೆಗಳ ಸಾಂವಿಧಾನಿಕ ಹಕ್ಕಿನ ಮೇಲೆಯೇ ನಡೆದಿರುವ ಗಂಭೀರ ಸವಾರಿಯಾಗಿದೆ. ಅಧಿಕಾರಿಗಳು ಶ್ರಮವಹಿಸಿ ಮನೆ ಮನೆಗೆ ತೆರಳಿ ಪರಿಶೀಲಿಸದೇ, ಕಚೇರಿಯಲ್ಲಿ ಕುಳಿತು ಮನಸೋ ಇಚ್ಛೆ ಪಟ್ಟಿ ತಯಾರಿಸುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.
ಈ ಅಸಂಬದ್ಧ ಮತ್ತು ಅಸಂವಿಧಾನಿಕ ನಡೆಯ ವಿರುದ್ಧ ಕರ್ನಾಟಕ ಜನಶಕ್ತಿ ಸಂಘಟನೆಯ ವಸಂತರಾಜ್ ಕಹಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸ್ವಂತ ಮನೆಯಲ್ಲೇ ವಾಸಿಸುತ್ತಿರುವ ನಾಗರಿಕನನ್ನು ಸತ್ತಿದ್ದಾನೆ ಎಂದು ನಮೂದಿಸಲು ಆಯೋಗಕ್ಕೆ ಧೈರ್ಯ ಬಂದಿದ್ದಾದರೂ ಎಲ್ಲಿಂದ? ಸಂವಿಧಾನ ನೀಡಿದ ಮೂಲಭೂತ ಮತಾಧಿಕಾರವನ್ನು ಕಸಿದುಕೊಳ್ಳುವ ಅಧಿಕಾರವನ್ನು ಆಯೋಗಕ್ಕೆ ಕೊಟ್ಟವರು ಯಾರು? ಈ ಅಕ್ಷಮ್ಯ ಲೋಪಕ್ಕೆ ಚುನಾವಣಾ ಆಯೋಗ, ಸ್ಥಳೀಯ ಜನಪ್ರತಿನಿಧಿಗಳು ಅಥವಾ ಬಿಎಲ್‌ಒಗಳಲ್ಲಿ ಯಾರು ಹೊಣೆ ಹೊರುತ್ತಾರೆ? ಆಯೋಗವು ತಕ್ಷಣವೇ ಈ ಎಡವಟ್ಟಿಗೆ ಸಾರ್ವಜನಿಕ ಸ್ಪಷ್ಟನೆ ನೀಡಬೇಕು ಮತ್ತು ಆನೆ ಪ್ರಕಾಶ ಅವರಿಗೆ ತಕ್ಷಣವೇ ಮತಹಕ್ಕನ್ನು ಮರುಸ್ಥಾಪಿಸಿ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.


