Homeಮುಖಪುಟಬೆಟ್ಟ ಅಗೆದು ಇಲಿ ಹಿಡಿದ ಅನಾಣ್ಯೀಕರಣ; ಡಿಮಾನೆಟೈಸೇಷನ್ ಮಹಾಪ್ರಮಾದಕ್ಕೆ ಆರು ವರ್ಷ: ಭಾಗ-2

ಬೆಟ್ಟ ಅಗೆದು ಇಲಿ ಹಿಡಿದ ಅನಾಣ್ಯೀಕರಣ; ಡಿಮಾನೆಟೈಸೇಷನ್ ಮಹಾಪ್ರಮಾದಕ್ಕೆ ಆರು ವರ್ಷ: ಭಾಗ-2

- Advertisement -
- Advertisement -

ದೇಶದಲ್ಲಿ ಹಲವಾರು ಅನಾಹುತಗಳನ್ನು ಮಾಡಿದ್ದ ಅನಾಣ್ಯೀಕರಣದ ಪ್ರಕರಣಗಳನ್ನು ಆರು ವರ್ಷಗಳ ಕೋಮಾದ ನಂತರ ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿದೆ. ಮೊದಲನೆಯ ಅಂಶ, ಜನರು ತಮ್ಮ ಸಂಕಷ್ಟಗಳು ಮತ್ತು ನಷ್ಟಗಳಿಗೆ ಪ್ರತಿಕ್ರಿಯಿಸಿ ನ್ಯಾಯಾಲಯಗಳ ಮೆಟ್ಟಲೇರಿದ್ದಾರೆಯೆ? ಹೌದು 154 ದೂರುಗಳನ್ನು ಸಲ್ಲಿಸಲಾಗಿದೆ. ವಿವಿಧ ಹೈಕೋರ್ಟುಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನೆಲ್ಲಾ ಸುಪ್ರೀಂಕೋರ್ಟ್ ಒಟ್ಟು ಸೇರಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರಕಾರ ಬಯಸಿದ್ದವು. ಬ್ಯಾಂಕುಗಳ ಕೌಂಟರ್‌ಗಳಲ್ಲಿ ಸಾಲು ನಿಂತ ಹನ್ನೊಂದು ಕೋಟಿ ಜನರನ್ನು, ಎರಡು ಕೋಟಿ ಉದ್ಯೋಗ ನಷ್ಟವನ್ನು, ನೋಟುಗಳನ್ನು ಬದಲಿಸಲು ಸಾಧ್ಯವಾಗದೇ ಬೀಜ-ಗೊಬ್ಬರ ಕೊಳ್ಳಲು, ಕೃಷಿ ಕಾರ್ಮಿಕರಿಗೆ ಕೂಲಿ ನೀಡಲು ಸೋತು ರೈತರು ಮತ್ತು ಇದೇ ರೀತಿ ಸಣ್ಣ ಉದ್ದಿಮೆದಾರರು ಅನುಭವಿಸಿದ ಕೋಟ್ಯಂತರ ರೂ.ಗಳ ನಷ್ಟವನ್ನು, ಸರತಿ ಸಾಲಿನಲ್ಲಿ ನಿಂತಾಗ ಸತ್ತ 145 ಜನರನ್ನು ಹೊರಗಿಟ್ಟು ಸುಪ್ರೀಂಕೋರ್ಟಿನ ಐವರು ಸದಸ್ಯರ ಪೀಠವು ಏಕಕಾಲಕ್ಕೆ ಕೇವಲ ಒಂದು ವಿಷಯದ ಬಗ್ಗೆ ಮಾತ್ರವೇ ವಿಚಾರಣೆ ನಡೆಸಬೇಕೆಂದು ಅವರು ಬಯಸಿದ್ದರು.

“ಆರ್‌ಬಿಐ ಹೊರಡಿಸಿದ ಕಾರ್ಯಕಾರಿ ಆದೇಶಗಳು/ಅಧಿಸೂಚನೆಗಳನ್ನು ಪ್ರಶ್ನಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆಯೇ, ಇಲ್ಲವೇ ಎಂದು ನ್ಯಾಯಾಲಯ ಆದೇಶ ನೀಡಬೇಕು. ಇಲ್ಲವೆಂದಾದಲ್ಲಿ ನ್ಯಾಯಾಲಯದ ಮುಂದಿರುವ ಇಡೀ ಪ್ರಕರಣ ಕೇವಲ ಶೈಕ್ಷಣಿಕವಾಗುತ್ತದೆ ಮತ್ತು ತನ್ನ ಆಮೂಲ್ಯ ಸಮಯವನ್ನು ವ್ಯರ್ಥ ಮಾಡಿದಂತಾಗುತ್ತದೆ” ಎಂದು ಭಾರತದ ಅಟಾರ್ನಿ ಜನರಲ್ ಹೇಳುತ್ತಾರೆ. ಆದೇಶವು ಒಂದು ವೇಳೆ ಕಾನೂನುಬಾಹಿರವೇ ಆಗಿದ್ದರೂ, ಅದಕ್ಕೀಗ ಅಸ್ತಿತ್ವವಾಗಲೀ, ಉದ್ದೇಶವಾಗಲೀ ಇಲ್ಲದಿರುವುದರಿಂದ ಅದನ್ನು ಈಗ ತಿರುವುಮುರುವು ಮಾಡಲು ಆಗುವುದಿಲ್ಲ. ಪಿ. ಚಿದಂಬರಂ ಹೇಳಿದ್ದೆಂದರೆ, ಸಂಕಷ್ಟ ಅನುಭವಿಸಿದವರಿಗೆ ಪರಿಹಾರ ನೀಡಬೇಕು ಎಂದು. ನ್ಯಾಯಾಲಯವು ನೀಡುವ ಯಾವುದೇ ಆದೇಶವು ಇಂಥ ಭವಿಷ್ಯದ ನಿರ್ಧಾರಗಳಿಗೆ ಮಾತ್ರ ಅನ್ವಯಿಸಬೇಕು ಎಂದು ಸರಕಾರ ವಾದಿಸಿತು. ಅರ್ಜಿದಾರರನ್ನು ಪ್ರತಿನಿಧಿಸುವ ಪಿ. ಚಿದಂಬರಂ ಅವರ ನೇತೃತ್ವದ ವಕೀಲರ ಗಡಣ ಸರಕಾರದ ಅಧಿಸೂಚನೆಗಳು ಕಾನೂನುಬಾಹಿರ ಎಂದು ವಾದಿಸಿದವು.

ಯಾಕೆಂದರೆ, ಹಿಂದೆ, 1947ರಲ್ಲಿ ಮತ್ತು 1976ರಲ್ಲಿ ಕರೆನ್ಸಿ ನೋಟು ಸರಣಿಗಳ ಅನಾಣ್ಯೀಕರಣವನ್ನು ವಿವೇಚನೆಯ ಬಳಿಕ ಘೋಷಣೆ ಮಾಡಲಾಗಿತ್ತು ಮತ್ತು ಪ್ರತೀ ಸಲವೂ ಆರ್‌ಬಿಐ ಕಾಯಿದೆಯ 26(1) (2)ನೇ ವಿಧಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಕಾನೂನುಗಳನ್ನು ಆಂಗೀಕರಿಸಲಾಗಿತ್ತು. ಈಗಿನ ಅಧಿಸೂಚನೆಗಳು ಮೇಲೆ ಹೇಳಿದ ಆರ್‌ಬಿಐಯ ಈ ವಿಧಿಗಳನ್ನು ನಿಷ್ಕ್ರಿಯಗೊಳಿಸಿದ್ದವು. ಈಗಿನ ಆಕ್ಷೇಪ ಎಂದರೆ, ಆರ್‌ಬಿಐಯ ಅಧಿಸೂಚನೆಯಿಲ್ಲದೆಯೇ ಒಂದು ಕಾರ್ಯಕಾರಿ ಆದೇಶವು ಚಲಾವಣೆಯಲ್ಲಿ ಇದ್ದ 86 ಶೇಕಡಾ ಕರೆನ್ಸಿಗಳನ್ನು ಅಮಾನ್ಯಗೊಳಿಸಲು ಹೇಗೆ ಸಾಧ್ಯ ಎಂಬುದು. ಯಾವುದೇ ಯೋಚನೆಯಾಗಲೀ, ವಿವೇಚನೆಯಾಗಲೀ, ಕ್ರಮಬದ್ಧ ಅಧಿಕಾರ ಬಳಕೆಯಾಗಲೀ ಈ ನಿರ್ಧಾರದ ಹಿಂದೆ ಇರಲಿಲ್ಲ ಎಂಬುದು ಪ್ರತಿಪಕ್ಷಗಳ ವಾದವಾಗಿದೆ. ಎರಡನೇ ದಿನ ವಿಚಾರಣೆ ಮುಗಿಯುವ ತನಕವೂ ಸರಕಾರವು ಮೂರು ಮಹತ್ವದ ದಾಖಲೆಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲು ನಿರಾಕರಿಸಿತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ ಮಂಡಳಿಯ ಸಭೆಯ ಕ್ಷಣಕ್ಷಣದ ದಾಖಲೆ, ಮಂಡಳಿಯು ಚರ್ಚಿಸಬೇಕಾಗಿದ್ದ ವಿಷಯ ಸೂಚಿಗಳು (ಅಜೆಂಡಾ ಪೇಪರ್ಸ್) ಮತ್ತು ಅನಾಣ್ಯೀಕರಣಕ್ಕೆ ಮಂಡಳಿಯು ಮಾಡಿದ ಶಿಫಾರಸು- ಈ ಮೂರನ್ನೂ ಕ್ಯಾಬಿನೆಟ್ ಸಚಿವರ ಗುಂಪಿನ ಮುಂದೆ ಇಡಬೇಕಾಗಿತ್ತು. ಮಂಡಳಿಯ ಶಿಫಾರಸು ಏನಾಗಿತ್ತು? ಈ ಕುರಿತ ಅಧ್ಯಯನ-ಚರ್ಚೆ ನಡೆದು, ಆರ್‌ಬಿಐ ಮತ್ತು ಕ್ಯಾಬಿನೆಟ್ ಸಚಿವರ ಗುಂಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನವೆಂಬರ್ 8, 2016ರ ಮಧ್ಯರಾತ್ರಿಯ ನಂತರ ಎಲ್ಲಾ 1000 ಮತ್ತು 500 ರೂ.ಗಳ ನೋಟುಗಳು ಕಾನೂನುಬಾಹಿರವಾಗುತ್ತವೆ; ಅವುಗಳನ್ನು ಮಾರುಕಟ್ಟೆಗಳಲ್ಲಿ ವಿನಿಮಯ ಮಾಡಿಕೊಳ್ಳುವಂತಿಲ್ಲ; ಅವರು ಬ್ಯಾಂಕುಗಳಿಗೆ ಹೋಗಬೇಕು, ನೋಟಿಗೆ ನೋಟಿನಂತೆ- ಅದೂ ಕೂಡಾ ಒಮ್ಮೆಗೆ ಕೇವಲ 4,000 ರೂ. ಅಂದರೆ, 2,000 ರೂ.ಗಳ ಎರಡು ನೋಟುಗಳನ್ನು ಪಡೆದುಕೊಳ್ಳಬೇಕು ಎಂದು ಪ್ರಧಾನಿಯು ಘೋಷಣೆ ಮಾಡುವ ಮೊದಲು ಇವೆಲ್ಲವನ್ನೂ ಮಾಡಬೇಕಿತ್ತು.

ಈ ದುಷ್ಪರಿಣಾಮ ಮತ್ತು ದುರಂತಕಾರಿ ವೈಫಲ್ಯಗಳನ್ನು ವಿವರಿಸಬಹುದು. ಆದರೆ, ಇದರ ಮೂಲ ಉದ್ದೇಶಗಳಾದ ಕಪ್ಪುಹಣದ ನಿರ್ಮೂಲನೆ, ಭಯೋತ್ಪಾದಕರ ಹಣಕಾಸಿನ ನಿರ್ಮೂಲನೆ, ನಕಲಿ ನೋಟುಗಳ ನಿವಾರಣೆ- ಇವೆಲ್ಲವೂ ಈಡೇರಿವೆಯೆ? ಉತ್ತರ ಸರಳ, ಇಲ್ಲ. ಈ ಕುರಿತು ನ್ಯಾಯಾಲಯದ ನಿಲುವು ಏನು? ಹಲವಾರು ಕೋಟಿ ಜನರು ಸಂಕಷ್ಟ ನಷ್ಟ ಅನುಭವಿಸಿ, ಕರಾಳ ಜೀವನ ಪರಿಸ್ಥಿತಿ ಎದುರಿಸಿದರು. ಇದಕ್ಕೆ ನ್ಯಾಯಾಲಯ ಯಾವ ಉತ್ತರ ನೀಡಲಿದೆ? ಇದು ಆರು ವರ್ಷಗಳ ಕರಾಳತೆಯ ನಂತರ ಮತ್ತೊಂದು ಕ್ಲೈಮ್ಯಾಕ್ಸ್.

ಇದನ್ನೂ ಓದಿ: ನೋಟ್ ಬ್ಯಾನ್‌ನಿಂದ ದೇಶದ ಆರ್ಥಿಕತೆಯೇ ಬುಡಮೇಲಾಗಿದೆ: ರಾಹುಲ್ ಗಾಂಧಿ

ಜಿಡಿಪಿಯ ಆರು ಶೇಕಡಾ ಬೇರೆಬೇರೆ ಮುಖಬೆಲೆಗಳ 16.6 ಲಕ್ಷ ಕೋಟಿ ರೂ.ಗಳ ನೋಟುಗಳಿಗೆ ಸಮನಾಗುತ್ತದೆ. ಮುದ್ರಣಗೊಂಡು ಚಲಾವಣೆಯಲ್ಲಿ ಇದ್ದ 84.4 ಶೇಕಡಾ ನೋಟುಗಳು 1000 ಮತ್ತು 500 ರೂ. ಮುಖಬೆಲೆಯವುಗಳಾಗಿದ್ದವು. ಈ ಎರಡು ಮುಖಬೆಲೆಯ ನೋಟುಗಳನ್ನು ಅವುಗಳನ್ನು ಹೊಂದಿರುವವರಿಗೆ ಯಾವುದೇ ರಾಚನಿಕ ವ್ಯವಸ್ಥೆ ಮಾಡದೆ ಏಕಾಏಕಿ ಹಿಂತೆಗೆದುಕೊಂಡದ್ದರಿಂದ ಅದು ನೂರಾರು ಕೋಟಿ ಜನರ ದೈನಂದಿನ ಅನ್ನವನ್ನು ಕಸಿದು ದುರಂತಕಾರಿ ಪರಿಣಾಮ ಬೀರಿತು. ಸರಕಾರ ನೀಡಿದ ಕಾರಣಗಳಲ್ಲಿ ಒಂದೂ ಕೂಡ ಅದರ ಉದ್ದೇಶಗಳಿಗೆ ಅನುಗುಣವಾಗಿ ಇರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಈ ಅಧಿಸೂಚನೆಯು ಕೋಟ್ಯಂತರ ಜನರ ಜೀವನ ಮತ್ತು ಜೀವನಾಧಾರದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ.

ಇದಕ್ಕಿಂತ ಮೊದಲೇ ಆರ್‌ಬಿಐಯು ಹದಿನೈದು ಲಕ್ಷ ಕೋಟಿ ರೂ. ನಗದಿನಲ್ಲಿ ನಾಲ್ಕು ಲಕ್ಷ ಕೋಟಿ ರೂ. ಬ್ಯಾಂಕುಗಳಿಗೆ ಮರಳಿ ಬರುವುದಿಲ್ಲ ಎಂದು ಹೇಳಿಕೆಯೊಂದನ್ನು ದಾಖಲಿಸಿತ್ತು. ಕಾರಣ: ಅದು ಚಲಾವಣೆಯಲ್ಲಿ ಇರುವ ಕಪ್ಪು ಹಣ ಎಂದು. ಅಲ್ಲದೆ, ಭಯೋತ್ಪಾದಕ ಸಂಘಟನೆಗಳ ಬಳಿ ಇರುವ ಹಣವನ್ನು ಅನಾಣ್ಯೀಕರಣ ನಿಷ್ಕ್ರಿಯಗೊಳಿಸುತ್ತದೆ ಎಂದು ಸರಕಾರ ಹೇಳಿತ್ತು. ಇದು ಸುಮಾರು 400 ಕೋಟಿ ರೂ.ಗಳಿಗೂ ಹೆಚ್ಚು ಇದೆ ಎಂದು ಸರಕಾರ ನಂಬಿತ್ತು. ಇದು ಕೇವಲ ಊಹೆಯೇ ಹೊರತು, ಇದಕ್ಕೆ ಒಂದು ಸಾಕ್ಷ್ಯವೂ ಅದರ ಬಳಿ ಇರಲಿಲ್ಲ. ಚಲಾವಣೆಯಲ್ಲಿ ನಕಲಿ ನೋಟುಗಳನ್ನು ನಿರ್ಮೂಲನೆ ಮಾಡುವ ಉದ್ದೇಶವನ್ನೂ ಅದು ಹೊಂದಿತ್ತು.

ಎಲ್ಲವೂ ತಪ್ಪಾಗಿದ್ದರೂ, ಪ್ರತೀ ತಪ್ಪನ್ನೂ ಚೆನ್ನಾಗಿಯೇ ಮಾಡಲಾಗಿದೆ!

ವಾಸ್ತವದಲ್ಲಿ 2014ರಲ್ಲಿ ಒಮ್ಮೆ, 2005ಕ್ಕಿಂತ ಮೊದಲು ಮುದ್ರಿತವಾದ ಎಲ್ಲಾ 1000 ರೂ.ಗಳಂಥ ದೊಡ್ಡ ಮೌಲ್ಯದ ನೋಟುಗಳನ್ನು ಬ್ಯಾಂಕುಗಳಲ್ಲಿ ಹಿಂತೆಗೆದುಕೊಂಡು, ಬದಲಿ ನೋಟುಗಳನ್ನು ಕೊಡಲಾಗಿತ್ತು. ಹಳೆಯ ನೋಟುಗಳು ಮತ್ತು ನಕಲಿ ನೋಟುಗಳನ್ನು ಚಲಾವಣೆಯಿಂದ ಹೊರಗೆ ಹಾಕಲಾಗಿತ್ತು. ಆರ್ಥಿಕತೆಯಲ್ಲಿ ಯಾವುದೇ ರೀತಿಯ ದೊಡ್ಡ ಏರುಪೇರು ಉಂಟಾಗದಂತೆ ಮತ್ತು ಜೀವನೋಪಾಯಕ್ಕಾಗಿ ದಿನದಿನ ಅನ್ನ ಗಳಿಸುವ ದೊಡ್ಡ ಜನವಿಭಾಗಕ್ಕೆ ಯಾವುದೇ ಹಾನಿಯಾಗದಂತೆ ಅದನ್ನು ಮಾಡಲಾಗಿತ್ತು.

ಇಷ್ಟೆಲ್ಲಾ ಆದರೂ, ಪ್ರಧಾನಿ ನಕಲಿ ನೋಟುಗಳನ್ನು ನಿಲ್ಲಿಸಿದ್ದಾರೆಯೇ? ಹೊಸ 2000 ರೂ. ನೋಟುಗಳು ಕಪ್ಪುಹಣದ ಕುಳಗಳ ಗೋದಾಮುಗಳನ್ನು ತಲಪಿದೆ. ಇನ್ನೊಂದು ವಿಷಯ ಎಂದರೆ, ಆರ್‌ಬಿಐಯ ವಾರ್ಷಿಕ ವರದಿಯ ಪ್ರಕಾರ 500 ರೂ.ಗಳ ಹೊಸ ನೋಟುಗಳ ನಕಲಿ 101 ಶೇಕಡಾದಷ್ಟು ಹೆಚ್ಚಿದ್ದರೆ, 2000 ರೂ. ನೋಟುಗಳ ನಕಲಿ 54.6 ಶೇಕಡಾ ಹೆಚ್ಚಿದೆ. ಪ್ರಧಾನಿ ಇದಕ್ಕಾಗಿ ಮತ್ತೊಮ್ಮೆ ಅನಾಣ್ಯೀಕರಣ ಮಾಡುತ್ತಾರೆಯೆ?

ಸಂಸತ್ತು ಮುಗಿಯದ ಚರ್ಚೆಯ ಕೇಂದ್ರವಾಯಿತು; ಮಾಮೂಲಿನಂತೆ ಖಾಲಿ ಕುರ್ಚಿಗಳು ರಾರಾಜಿಸಿದವು ಮತ್ತು ಅನಾಣ್ಯೀಕರಣದ ಬಗ್ಗೆ ಕಡಿಮೆ ಚರ್ಚೆಯಾಯಿತು. ಪಿ. ಚಿದಂಬರಂ, ಡಾ. ಮನಮೋಹನ್ ಸಿಂಗ್, ಸೀತಾರಾಂ ಯೆಚೂರಿ, ಕೆಲವು ತೃಣಮೂಲ ಕಾಂಗ್ರೆಸ್ ನಾಯಕರೂ ಸೇರಿದಂತೆ ಕೆಲವು ಪ್ರಸಿದ್ಧ ಸಂಸದರು ಸರಕಾರಕ್ಕೆ ಸವಾಲು ಹಾಕಿದರು; ಆದರೆ, ಅಧಿಸೂಚನೆಗಳ ವಿಷಯದಲ್ಲಿ ಅಲ್ಲ. ಯಾಕೆಂದರೆ, ಅಧಿಸೂಚನೆಗಳು ಭಾರೀ ಕಪ್ಪುಹಣದ ಕುಳಗಳ ಮೇಲೆ ಮುಗಿಬೀಳುವ ಉದ್ದೇಶ ಹೊಂದಿದ್ದವಲ್ಲವೆ?

ಪರಿಣಾಮವಾಗಿ, ಮಾರುಕಟ್ಟೆ ಗೊಂದಲದ ಗೂಡಾಯಿತು, ಕೆಳಹಂತದ ಉದ್ಯೋಗಗಳಲ್ಲಿ ಸಂಬಳಗಳು ಸ್ಥಗಿತಗೊಂಡವು, ದಿನದಿನದ ಖರೀದಿಗಳು, ಮಾರಾಟಗಳು ಮತ್ತು ಪ್ರಯಾಣ ಇಳಿಮುಖವಾಯಿತು, ಅಸಂಘಟಿತ ವಲಯದ ಕೋಟ್ಯಂತರ ಕಾರ್ಮಿಕರು ತಮ್ಮ ದೈನಂದಿನ ಉದ್ಯೋಗವನ್ನು ಕಳೆದುಕೊಂಡರು, ಚಿಲ್ಲರೆ ವ್ಯಾಪಾರ ಇಳಿಮುಖವಾಯಿತು. ಬ್ಯಾಂಕುಗಳು ಜನರಿಂದ ಕಿಕ್ಕಿರಿದವು ಮತ್ತು ನೋಟು ಬದಲಾವಣೆಯಲ್ಲಿ ತಿಂಗಳುಗಳ ತನಕ ಮುಳುಗಿದವು. ಎರಡು ಲಕ್ಷ ಎಟಿಎಂಗಳನ್ನು ಮುಚ್ಚಬೇಕಾಯಿತು. ಇತ್ತೀಚಿನವರೆಗೆ ಬ್ರಿಟನ್ನಿನ ಹಣಕಾಸು ಮಂತ್ರಿಯಾಗಿದ್ದು, ನಂತರ ಪ್ರಧಾನಿಯಾದ ವ್ಯಕ್ತಿ ಕೂಡಾ, ತನ್ನ ಧೋರಣೆಗಳ ಕಾರಣದಿಂದ ಅಕ್ಟೋಬರ್ 2022ರಲ್ಲಿ ಕರೆನ್ಸಿ ಮೌಲ್ಯ ಕುಸಿದಾಗ ರಾಜೀನಾಮೆ ನೀಡಬೇಕಾಯಿತು. ಆದರೆ, ಆರ್ಥಿಕತೆಯ ತಳಮಟ್ಟವನ್ನೂ ಕಲಕಿದ, ಕೋಟಿಗಟ್ಟಲೆ ಜನರ ಜೀವನವನ್ನು ಬುಡಮೇಲು ಮಾಡಿದ ಈ ದುರಂತಕಾರಿ ನಿರ್ಧಾರ ಮಾಡಿದವರು ಈ ದೇಶದಲ್ಲಿ ಇನ್ನೂ ಹಾಗೆಯೇ ಇದ್ದಾರೆ.

ಆದರೆ, ದೇಶವನ್ನೇ ನಡುಗಿಸಿದ ಈ ನಿರ್ಧಾರವನ್ನು ಪ್ರಧಾನಿಯವರ ಭಟ್ಟಂಗಿಗಳು ಹೊಗಳಿದರು. ಆದರೆ, ಅಕ್ಟೋಬರ್ 1, 2016ರಿಂದ ನವೆಂಬರ್ 31, 2016ರ ನಡುವೆ ಎಲ್ಲಾ ಬ್ಯಾಂಕುಗಳಲ್ಲಿ ಒಂದೇ ಬಾರಿಗೆ ನಡೆದ ಹತ್ತು ಲಕ್ಷ ರೂ. ಮೀರಿದ ನೋಟು ಬದಲಾವಣೆಗಳ ಬಗ್ಗೆ ಯಾರೂ ಮಾತನಾಡಲಿಲ್ಲ. ಈ ಮಾಹಿತಿ ನಮಗೆ ಆರ್‌ಬಿಐ ಮತ್ತು ಐಟಿ ಇಲಾಖೆಯಲ್ಲಿ ಸಿದ್ಧರೂಪದಲ್ಲಿ ಸಿಗುತ್ತದೆ. ಹಲವಾರು ಸಾವಿರ ಕೋಟಿ ರೂ.ಗಳು ಹೀಗೆ ಬ್ಯಾಂಕುಗಳಿಗೆ ಹಸ್ತಾಂತರಗೊಂಡು ಕೈಬದಲಿಸಿದವು ಎಂಬುದು ತಿಳಿಯುತ್ತದೆ. ದೊಡ್ಡ ಕಾರ್ಪೋರೆಟ್‌ಗಳಿಂದ ಹರಿದ ಹಣದ ಪ್ರವಾಹವನ್ನು ನಿತ್ಯವ್ಯವಹಾರ ಎಂಬಂತೆ ತೋರಿಸಲಾಯಿತು. ಈ ಹಣವು ರಾಜಕೀಯ ಹಣ, ಕಪ್ಪುಹಣ ಮತ್ತು ಲೆಕ್ಕವಿಲ್ಲದ ಹಣವಾಗಿತ್ತು.

ಈ ಹಣಕಾಸು ತುರ್ತುಪರಿಸ್ಥಿತಿ ಯಾಕೆ? ಅಧಿಸೂಚನೆ ಏನು ಹೇಳುತ್ತದೆ?

ನಕಲಿ ಕರೆನ್ಸಿಗಳು ಚಲಾವಣೆಯಲ್ಲಿ ಇದ್ದು, ಅಸಲಿ ನಕಲಿಗಳನ್ನು ಗುರುತಿಸಲೂ ಸಾಧ್ಯವಿಲ್ಲದಾಗಿದೆ. ಎರಡನೆಯದಾಗಿ, ಕಪ್ಪು ಹಣವನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲು ದೊಡ್ಡ ಮುಖಬೆಲೆಯ ನೋಟುಗಳನ್ನು ಬಳಸಲಾಗುತ್ತಿದೆ. ಅನುಷ್ಠಾನ ಸಂಸ್ಥೆಗಳು ಹಲವು ದಾಳಿಗಳಲ್ಲಿ ವಶಪಡಿಸಿಕೊಂಡ ದೊಡ್ಡ ಪ್ರಮಾಣದ ನಗದಿನಿಂದ ಇದು ಗೊತ್ತಾಗುತ್ತದೆ. ಮಾದಕದ್ರವ್ಯ ಸಾಗಾಟ ಮತ್ತು ಭಯೋತ್ಪಾದನೆಯಂತಹ ಬುಡಮೇಲು ಕೃತ್ಯಗಳಿಗೆ ನಕಲಿ ನೋಟುಗಳನ್ನು ಬಳಸಲಾಗುತ್ತಿದೆ. ಕೆಲವು ಪತ್ರಿಕೆಗಳು ಭಯೋತ್ಪಾದರ ಬಳಿ 400 ಕೋಟಿ ರೂ.ಗಳಷ್ಟು ಇಂಥ ಹಣವಿದೆ. (ಇದು ನವೆಂಬರ್ 8, 2016ರ ಗೆಜೆಟ್ ಪ್ರಕಟಣೆಯ ಉಲ್ಲೇಖ). ಈ ಕಾರಣಗಳನ್ನು ನೀಡಲಾಗಿತ್ತು; ಆದರೆ ಇಂತಹ ತೀವ್ರ ಕ್ರಮ ಕೈಗೊಳ್ಳುವುದಕ್ಕೆ, ಇವು ಹುಚ್ಚುತನದ ಅಥವಾ ಹುಟ್ಟುಹಾಕಿದ ಕಾರಣಗಳು ಆಗಿರಬಹುದು. ಆದರೆ, ನಾವು ದೇಶಪ್ರೇಮದ ಹೆಸರಿನಲ್ಲಿ ಗೋಣು ಆಡಿಸಿದೆವು.

ಚುನಾವಣೆಗಳ ಸಮಯದಲ್ಲಿ ನಗದು ಚಲಾವಣೆಯ ಉಬ್ಬರ

ಆರ್‌ಬಿಐ ಹಿಂದೆ ಕಂಡುಕೊಂಡಿದ್ದಂತೆ, ಹಣದ ಚಲಾವಣೆಯು ಒಮ್ಮೆಗೇ ಏರುವ ಸಂದರ್ಭಗಳಿವೆ. ಲೋಕಸಭಾ ಚುನಾವಣೆ ಮತ್ತು ದಕ್ಷಿಣ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳ ವೇಳೆ ಹಣ ಚಲಾವಣೆ ಹೆಚ್ಚುತ್ತದೆ. ಮತಗಳ ಖರೀದಿ ಇದಕ್ಕೆ ಕಾರಣ. ಹಿಂದಿನ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಕೂಡಾ ಚುನಾವಣೆಗಳ ಸಮಯದಲ್ಲಿ ಹಣ ಚಲಾವಣೆಯಲ್ಲಿ ಭಾರೀ ಉಬ್ಬರ ಕಂಡುಬರುವುದರ ಕುರಿತು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ‘ನೋಟ್‌ ಬ್ಯಾನ್ ವಿಫಲ ಯೋಜನೆ’: ಸುಪ್ರೀಂಕೋರ್ಟ್‌ನಲ್ಲಿ ಒಪ್ಪಿಕೊಂಡ ಒಕ್ಕೂಟ ಸರ್ಕಾರ?

ನವೆಂಬರ್ 2016ರಲ್ಲಿ ನಾಲ್ಕು ಚುನಾವಣೆಗಳು ನಡೆಯಲಿದ್ದವು. ಅನಾಣ್ಯೀಕರಣದಿಂದ ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿಯಂಥ ಪಕ್ಷಗಳ ಬಲವನ್ನು ಸಂಪೂರ್ಣ ಕುಂದಿಸಬಹುದೆಂದು ಆಳುವ ಬಿಜೆಪಿ ನಂಬಿತ್ತು. ಆರೋಪವೆಂದರೆ, ಪ್ರತಿಪಕ್ಷಗಳು ಬೆಲೆಯಿಲ್ಲದ ತಮ್ಮ ಬಣ್ಣಬಣ್ಣದ ಕಾಗದದ ನೋಟುಗಳ ರಾಶಿಯಲ್ಲಿ ಕುಳಿತಿರುವಾಗ, ತಾವು ಮಾತ್ರ ವಸ್ತುಗಳು ಮತ್ತು ಸೇವೆಗಳನ್ನು ಮೊದಲೇ ಖರೀದಿಸಿಟ್ಟುಕೊಂಡು ನಂತರ ಹಂಚಬೇಕು ಎಂದು ಬಿಜೆಪಿ ಬೂತ್ ಮಟ್ಟದ ಸಮಿತಿಗಳಿಗೆ ಸೂಚಿಸಿತ್ತು. ಉತ್ತರ ಪ್ರದೇಶದ ಪ್ರತಿಪಕ್ಷಗಳಿಗೆ ಆಘಾತ ನೀಡುವಂತೆ ಮೋದಿ ಅನಾಣ್ಯೀಕರಣದ ಸಮಯ ನಿಗದಿ ಮಾಡಿದ್ದರು ಮತ್ತು ಇದರಿಂದ ದೊಡ್ಡ ಹೊಡೆತ ಆನುಭವಿಸಿದ್ದು ಬಿಎಸ್‌ಪಿ ಎಂಬುದು ವಾಸ್ತವ. ಈ ವಾಸ್ತವದ ಬಗ್ಗೆ ಗಂಭೀರ ತನಿಖೆಯ ಅಗತ್ಯವಿದೆ.

ರಾಜಕಾರಣಿಗಳು ಮತ್ತು ಕಪ್ಪುಹಣದ ಕುಳಗಳ ಕೆಲವು ಸಾವಿರ ಕೋಟಿ ರೂ.ಗಳಷ್ಟು ಹಣ ಸರಕಾರ ನಿರೀಕ್ಷಿಸಿದ್ದಂತೆ ಬರಲಿಲ್ಲ. ಎಲ್ಲಾ ಹಣ ಬರುವುದೆಂದು ತಿಳಿಸಿ ಸರಕಾರ ಮಣಿಪುರ-ಮೇಘಾಲಯ ಲಾಟರಿ ಟಿಕೇಟುಗಳಂತೆ ಹೆಚ್ಚುವರಿ ನೋಟುಗಳನ್ನು ಮುದ್ರಿಸಿತ್ತು. ಕಾರಣವೆಂದರೆ ಹಿಂದೆ 2014ರಲ್ಲಿ 2005ಕ್ಕಿಂತ ಮೊದಲು ಮುದ್ರಿತವಾದ 1000 ಮತ್ತು 500 ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡಾಗಲೇ ಹೆಚ್ಚು ಕಪ್ಪುಹಣ ದಾಸ್ತಾನುದಾರರು ಕಮೀಷನ್ ನೀಡಿ ನೋಟು ಬದಲಿಸಿದ್ದರು. ಅದೊಂದು ದೊಡ್ಡ ಭೂಗತ ವ್ಯಾಪಾರವಾಗಿತ್ತು.

ಭಯೋತ್ಪಾದನಾ ನಿಧಿ ಎಂಬುದು ಸಂಶಯಾಸ್ಪದ. ಅಂತಾರಾಷ್ಟ್ರೀಯ ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರದ ಒಳಗುಟ್ಟುಗಳ ಪ್ರಕಾರ ನಡೆಯುತ್ತದೆ. ಈ ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರಿಗಳು ಹೆಚ್ಚಾಗಿ ವಿನಿಮಯದ ಆಧಾರದಲ್ಲಿ ವ್ಯವಹರಿಸುತ್ತಾರೆ. ಸುಲಭದಲ್ಲಿ ವ್ಯವಹರಿಸಿ ಕೈಬದಲಿಸಬಹುದಾದ ವಜ್ರ ಮುಂತಾದ ಬೆಲೆಬಾಳುವ ವಸ್ತುಗಳನ್ನು ಪಡೆದು ಶಸ್ತ್ರಾಸ್ತ್ರ ಪೂರೈಸುತ್ತಾರೆ. ನಗದಾದರೆ, ಡಾಲರ್ ಅಥವಾ ಯೂರೋ ಹೊರತು ಬೇರಾವುದೇ ಕರೆನ್ಸಿಯು ತಮ್ಮ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ಅವರು ತಿಳಿದುಕೊಂಡಿದ್ದಾರೆ. ಹೆಚ್ಚಿನ ಪಾವತಿಗಳು ಬೇರೆ ದೇಶಗಳಲ್ಲಿ ನಡೆಯುತ್ತವೆ. ಭಾರತದ ಕರೆನ್ಸಿಗೆ ಇಂತಾ ವ್ಯವಹಾರಗಳಲ್ಲಿ ಯಾವುದೇ ಬೆಲೆಯಿಲ್ಲ.

ಕಾಗದದ ನೋಟುಗಳ ಅಮಾನ್ಯತೆಯನ್ನು ಆರ್ಥಿಕ ಭಾಷೆಯಲ್ಲಿ ಧನಾತ್ಮಕ ಹೆಜ್ಜೆ ಎನ್ನಲಾಗುತ್ತದೆ. ತೀರಾ ಹೆಚ್ಚಿನ ಪ್ರಮಾಣದ ಹಣವು ತೀರಾ ಕಡಿಮೆ ಪ್ರಮಾಣದ ಸರುಕುಗಳನ್ನು ಬೆಂಬತ್ತಿದಾಗ, ಅಂದರೆ, ಆರ್ಥಿಕತೆಯು ಅತಿಯಾದ ಹಣದುಬ್ಬರ ಎದುರಿಸುತ್ತಿದೆ ಎನ್ನುವಾಗ ತೆಗೆದುಕೊಳ್ಳುವ ಕ್ರಮ. ಆದರೆ, ಮಾರುಕಟ್ಟೆ ಆರ್ಥಿಕತೆಯಲ್ಲಿ ಈ ಸಿದ್ಧಾಂತಕ್ಕೆ ಯಾವುದೇ ಬೆಲೆಯಿಲ್ಲ. ಬೆಲೆ ನಿಗದಿಯು ಸರಕುಗಳ ಸ್ಥಳೀಯ ಬೇಡಿಕೆ ಮತ್ತು ದೇಶದ ಹಣ ಪೂರೈಕೆಯಿಂದ ಆಗುವುದಿಲ್ಲ. ಆದುದರಿಂದ ಹಣಕಾಸು ಚಲಾವಣೆಯನ್ನು ಕಡಿಮೆ ಮಾಡುವುದು ಸರಕುಗಳ ಬೆಲೆ ಇಳಿಕೆಗೆ ಕಾರಣವಾಗುವುದಿಲ್ಲ. ಹಾಗೆ ಮಾಡಿದಾದಲ್ಲಿ, ಸರಕುಗಳು ಸ್ಪರ್ಧಾತ್ಮಕವಾಗಿ ಹೆಚ್ಚಿನ ಬೆಲೆ ಇರುವ ಜಾಗತಿಕ ಮಾರುಕಟ್ಟೆಯ ಕಡೆಗೆ ಸಾಗುತ್ತವೆ.

ಸರಕಾರದ ಪ್ರತಿಪಾದನೆಗಳು ಸರಿಯಾಗಿವೆಯೆ?

ನಾವು ಅಂದಾಜು 6.5 ಲಕ್ಷ ಕೋಟಿ ರೂ. ಕಪ್ಪು ಹಣದ ಆರ್ಥಿಕತೆ ಹೊಂದಿದ್ದೇವೆ. ಅದು ಈಗಾಗಲೇ ಸ್ಥಗಿತಗೊಂಡಿದೆ. ವಿಶೇಷವಾಗಿ, ಹಣಕಾಸು ಸಚಿವರು ಸ್ವಯಂ ಘೋಷಣೆಯ ಯೋಜನೆಯನ್ನು ತಂದ ಬಳಿಕ ಕಪ್ಪು ಹಣ ತೆರಿಗೆಯ ವ್ಯಾಪ್ತಿಗೆ ಬಂದಿದೆ. ಕಪ್ಪು ಹಣ ಕಾಯಿದೆ 2015 ವಿದೇಶದಲ್ಲಿರುವ ಖಾತೆಗಳ ಕಪ್ಪುಹಣಕ್ಕೆ ಕ್ಷಮಾದಾನ ನೀಡಿದೆ. ಇದು ಸರಕಾರದ ಹೇಳಿಕೆ.

ಆದರೆ, ಘೋಷಿಸಲಾದ ಕಪ್ಪು ಹಣ ಕೇವಲ 3,000 ಕೋಟಿ ರೂ. ಗಿಂತಲೂ ಕಡಿಮೆ. ಇದಕ್ಕಾಗಿ ಸರಕಾರವು ಎಂಟು ಲಕ್ಷ ಕೋಟಿ ರೂ.ಗಳ ಅಗತ್ಯ ವಸ್ತುಗಳ ನಗದು ವ್ಯವಹಾರ ಮತ್ತು ಸೇವಾ ವ್ಯವಹಾರಗಳಿಗೆ ಪಾರ್ಶ್ವುವಾಯು ಹೊಡೆಯುವಂತೆ ಮಾಡಿತು. ವಾಸ್ತವದಲ್ಲಿ ಈ ಎಂಟು ಲಕ್ಷ ಕೋಟಿ ನಗದು ಹಣವು 125 ಕೋಟಿ ಜನರ ದೈನಂದಿನ ಅನ್ನವಾಗಿತ್ತು.

ಬ್ಯಾಂಕುಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಹರಿದುಬರುತ್ತದೆ ಎಂದು ಕೆಲವರು ಕೊಚ್ಚಿಕೊಂಡಿರಬಹುದು. ನಿಜ ಪರಿಣಾಮ ಏನೆಂದು ನಿಮಗೆ ಗೊತ್ತೆ? ಇತ್ತೀಚಿನ ಸುದ್ದಿ ಎಂದರೆ ಆರು ಟ್ರಿಲಿಯನ್ ರೂ.ಗಳು ಠೇವಣಿಗಳು ಹಣಕಾಸು ಸಂಸ್ಥೆಗಳನ್ನು ಪ್ರವೇಶಿಸಿವೆ. ಇದರಲ್ಲಿ 4.5 ಟ್ರಿಲಿಯನ್ ರೂ.ಗಳು ಬ್ಯಾಂಕಿನ ಠೇವಣಿ ಖಾತೆಯಲ್ಲಿ ಆಲಂಕಾರಿಕವಾಗಿ ಉಳಿಯಲಿವೆ. ಬ್ಯಾಂಕುಗಳು ಸಾಲಗಾರರಿಂದ ಭಾರೀ ಪ್ರಮಾಣದಲ್ಲಿ ಮುಂಗಡ ಮರುಪಾವತಿಯನ್ನೂ ಪಡೆದಿವೆ. ಸೆಪ್ಟಂಬರ್ 2016ರ ಕೊನೆಗೆ 2016-17ರ ವಾರ್ಷಿಕ ಗುರಿಯನ್ನು ಆಗಲೇ ಮುಟ್ಟಿದ್ದವು. ಆದರೆ, ಸಾಲ ಕ್ಷೇತ್ರವು ತೀರಾ ಹದಗೆಟ್ಟಿದೆ.

ಆರ್‌ಬಿಐಯ ವರದಿ ಏನಾಗಿತ್ತು ಎಂದರೆ, 18.3.2016ರಂದು ಭೌತಿಕವಾಗಿ ಚಲಾವಣೆಯಲ್ಲಿ ಇದ್ದ ನಗದಿನ ಪ್ರಮಾಣ 15,993 ಬಿಲಿಯನ್ ರೂ. (ಒಂದು ಬಿಲಿಯನ್ ಎಂದರೆ 100 ಕೋಟಿ.) ಅದರಲ್ಲಿ 500 ಮತ್ತು 1000ದ ನೋಟುಗಳಲ್ಲಿ ಇರುವ ನಗದಿನ ಪ್ರಮಾಣ 13,70,754 ಕೋಟಿ ರೂ. ಅಂದರೆ, ಇಷ್ಟು ಮೊತ್ತದ ನೋಟುಗಳನ್ನು ಅನಾಣ್ಯೀಕರಣಗೊಳಿಸಬೇಕು. ಕೆಲವು ವರದಿಗಳು 14.2 ಲಕ್ಷ ಕೋಟಿ ರೂ.ಗಳೆಂದು ಹೇಳುತ್ತವೆ. ನಕಲಿ ನೋಟುಗಳ ಪ್ರಮಾಣ, ಇಕನಾಮಿಕ್ ಟೈಮ್ಸ್ ಪತ್ರಿಕೆಯ ಪ್ರಕಾರ ಸುಮಾರು 400 ಕೋಟಿ ರೂ.ಗಳು. ಇದು ಹಣಕಾಸು ಇಲಾಖೆಯ ಆಗಿನ ವರದಿಯಲ್ಲಿ ಇದ್ದದ್ದು.

ಆಯ್ದ ಕಡೆಗಳಲ್ಲಿ ಸೋರಿಕೆ ಆಗಿತ್ತೆ?

ಎಲ್ಲೆಲ್ಲೂ ರಾಜಕೀಯ ಪ್ರತಿಭಟನೆಗಳು ನಡೆದವು. ಆಳುವ ಬಿಜೆಪಿಯು ಆಯ್ದ ದೊಡ್ಡ ಕಾರ್ಪೋರೆಟ್‌ಗಳಿಗೆ ಡಿಮಾನೆಟೈಸೇಷನ್ ವಿಷಯವನ್ನು ಸೋರಿಕೆ ಮಾಡಿದೆ ಎಂಬುದು ವಿರೋಧ ಪಕ್ಷಗಳ ಆರೋಪ. ದೊಡ್ಡ ಗಂಟಲಿನ ನಿರಾಕರಣೆಯ ಬೊಬ್ಬೆಯು ಪ್ರತಿಭಟನೆಯ ಧ್ವನಿಯನ್ನು ಕ್ಷೀಣಗೊಳಿಸಿರಬಹುದು. ಕೆಲವು ವಾಸ್ತವಾಂಶಗಳು ಸೋರಿಕೆ ನಡೆದಿರುವುದಕ್ಕೆ ಸಾಕ್ಷ್ಯ ನುಡಿಯುತ್ತವೆ. ಭಾರೀ ಕಾರ್ಪೋರೆಟ್ ಗುಂಪುಗಳು ತಮ್ಮ ಕಂಪೆನಿಗಳ ಗುಂಪು ಆಸ್ತಿಯನ್ನು ಪರಿಷ್ಕರಿಸಿದವು. ಇದು ಖಾಸಗಿ ಹೂಡಿಕೆಯನ್ನು ಪಡೆಯುವುದಕ್ಕೆ ಮತ್ತು ತಮ್ಮ ಈಗಿನ ವಹಿವಾಟು ಹಾಗೂ ಆದಾಯವನ್ನು ಹೊಂದಿಸುವುದಕ್ಕೆ ಬಾಗಿಲನ್ನು ತೆರೆಯಿತು. ಆರು ತಿಂಗಳುಗಳ ನಂತರ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಮರುಪಾವತಿ ಮಾಡುವ ಭರವಸೆಯೊಂದಿಗೆ ಭಾರೀ ಪ್ರಮಾಣದಲ್ಲಿ ಕಪ್ಪುಹಣವನ್ನು ತಮ್ಮ ಆರ್ಥಿಕ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ಹೀರಿಕೊಳ್ಳಲಾಯಿತು. ಎರಡನೆಯದಾಗಿ, ಹಿಂದೆಂದೂ ಕಾಣದ ಪ್ರಮಾಣದಲ್ಲಿ ವಿದೇಶಿ ಮರುಪಾವತಿ, ವಿದೇಶಿ ಕರೆನ್ಸಿಗಳ ಖರೀದಿಗಳು ನಡೆದವು. ಮೂರನೆಯದಾಗಿ ಭಾರೀ ಪ್ರಮಾಣದ ಜಮೀನು ಖರೀದಿಗಳು ನಡೆದವು. ಸಾವಿರಾರು ನೋಂದಣಿಯಾಗದ ಮಾರಾಟ ಒಪ್ಪಂದಗಳು, ಪವರ್ ಆಫ್ ಅಟಾರ್ನಿ ಮೂಲಕ ವ್ಯವಹಾರಗಳು, ಆಸ್ತಿಗಳ ಅರೆಬರೆ ಹಸ್ತಾಂತರ ನಡೆದವು. ಒಂದು ಪಕ್ಷವಾಗಿ ಬಿಜೆಪಿಯು ವಿವಿಧ ಬ್ಯಾಂಕುಗಳಲ್ಲಿ ಭಾರೀ ಪ್ರಮಾಣದಲ್ಲಿ ಹಣ ಜಮೆ ಮಾಡಿದ್ದು ಆಯಿತು; ಕೆಲವು ಖಾತೆಗಳು ಕೊಲ್ಕತ್ತಾದಲ್ಲೇ ಇವೆ. ಬಿಹಾರದಲ್ಲಿ ಭಾರೀ ಪ್ರಮಾಣದ ಜಮೀನು ಖರೀದಿ ಬೆಳಕಿಗೆ ಬಂದಿದೆ. ರಾಜ್ಯಾವಾರು ತನಿಖೆಯಲ್ಲಿ ಇನ್ನಷ್ಟು ವ್ಯವಹಾರಗಳು ಬೆಳಕಿಗೆ ಬರಬಹುದು. ನಾಲ್ಕನೆಯದಾಗಿ, ಅಭೂತಪೂರ್ವ ಪ್ರಮಾಣದಲ್ಲಿ ಚಿನ್ನದ ಖರೀದಿಯು ನಡೆದಾಗಲೇ ಕರೆನ್ಸಿ ಬದಲಾವಣೆಯ ಪ್ರಕ್ರಿಯೆ ಆರಂಭವಾಗಿತ್ತು ಎಂಬುದನ್ನು ಸೂಚಿಸುತ್ತದೆ. 2013-14ರಿಂದ ಸ್ಥಿರವಾಗಿದ್ದ ಬೆಳವಣಿಗೆಯ ದರವು [10879 (14-15), 10893 (15-16)] 2016ರ ಜುಲೈ- ಸೆಪ್ಟೆಂಬರ್ ನಡುವಿನ ಕೇವಲ ಮೂರು ತಿಂಗಳುಗಳಲ್ಲಿ ಒಮ್ಮೆಲೇ 10,208 ಬಿಲಿಯನ್ ರೂ.ಗಳಷ್ಟು ಏರಿತು. ಅನಾಣ್ಯೀಕರಣದ ಘೋಷಣೆಯಾದ ನಂತರ ಮತ್ತೆ ಹಲವು ಬಿಲಿಯನ್ ರೂ.ಗಳಷ್ಟು ಏರಿಕೆಯಾಯಿತು. ಕಪ್ಪುಹಣ ಹೊಂದಿದ್ದವರು ಘೋಷಣೆಯಾಗುವ ಮೊದಲೇ ಭಾಗಶಃ ಅದನ್ನು ಪರಿವರ್ತಿಸಿದ್ದರು. ಧಾರ್ಮಿಕ ಟ್ರಸ್ಟ್‌ಗಳು ಮತ್ತು ರಾಜಕೀಯ ಪಕ್ಷಗಳು ಏನು ಮಾಡುಲಿವೆ ಎಂದು ಬಹಳಷ್ಟು ಕಣ್ಣು, ಕಿವಿಗಳು ತೆರೆದಿದ್ದವು. ಆದರೆ, ಅವುಗಳಲ್ಲಿ ಹೆಚ್ಚಿನವು ಭೂಗತ ಸಂಪರ್ಕಗಳ ಸಹಾಯದಿಂದ ವಿನಿಮಯ ಮಾಡಿಬಿಟ್ಟವು.

ಇಡಿ ಇಲಾಖೆ ಮತ್ತು ಆರ್‌ಬಿಐ ಮಾಡಬೇಕಿದ್ದುದೇನು? ಮಾಡಿದ್ದೇನು?

ಆರ್‌ಬಿಐ ಮೊದಲಿಗೆ, ಈ ಕರೆನ್ಸಿ ವಿನಿಮಯ ಹಗರಣದಿಂದ ದೂರ ಉಳಿಯಬೇಕು. ಅದು ತನ್ನೆಲ್ಲಾ ಅಧಿಕಾರಿಗಳನ್ನು ಇತರ ಬ್ಯಾಂಕುಗಳ ಖಜಾನೆಗಳಿಗೆ ಮತ್ತು ದೊಡ್ಡ ಶಾಖೆಗಳಿಗೆ, ನಿತ್ಯದ ನಗದಿನ ಕಣ್ಗಾವಲಿಗೆ ಕಳಿಸಬೇಕು. ಠೇವಣಿಗಳು, ಅಂತರ ಬ್ಯಾಂಕ್, ಅಂತರ ಶಾಖೆ, ಆರ್‌ಬಿಐಯಿಂದ ಬ್ಯಾಂಕ್ ಖಜಾನೆಗೆ ನಗದಿನ ಚಲನೆ, ಎಟಿಎಂ ಮತ್ತು ಆರ್‌ಟಿಜಿಎಸ್ ಕಾರ್ಯಾಚರಣೆಗೆ ನಗದು ಇವೆಲ್ಲವುಗಳ ಆಮೂಲಾಗ್ರ ತನಿಖೆ ನಡೆಸಬೇಕು.

ಆರ್‌ಬಿಐಯ 08.11.2016ರ ಅಧಿಸೂಚನೆಯ ಪ್ಯಾರಾ 4 ಹೀಗಿದೆ: “ಉಪಪ್ಯಾರಾ 1 ರಲ್ಲಿ ಉಲ್ಲೇಖಿಸಿದ ಪ್ರತಿಯೊಂದು ಬ್ಯಾಂಕಿಂಗ್ ಕಂಪೆನಿಯು, 10 ನವೆಂಬರ್ 2016ರಿಂದ ಆರಂಭಿಸಿ, ಪ್ರತಿ ನಿತ್ಯದ ವ್ಯವಹಾರ ಕೊನೆಗೊಂಡ ನಂತರ, ನಿಗದಿತ ನಮೂನೆಯಲ್ಲಿ ವಿನಿಯಯ ಮಾಡಿದ ಉಲ್ಲೇಖಿತ ನೋಟುಗಳ ವಿವರಗಳನ್ನು ತೋರಿಸುವ ವರದಿಯೊಂದನ್ನು ರಿಸರ್ವ್ ಬ್ಯಾಂಕಿಗೆ ಸಲ್ಲಿಸಬೇಕು.”

ಆಗಿನ ಸ್ಥಿತಿ ಹೇಗಿತ್ತೆಂದರೆ: ಪ್ರತಿದಿನವೂ ಸೈರನ್‌ಗಳು ಮೊಳಗುತ್ತಿವೆ; ಕೋಟಿಗಳಲ್ಲಿ ಹೊಸ ಕರೆನ್ಸಿಗಳ ಸೋರಿಕೆ ನಡೆಯುತ್ತಿದೆ. ಜನರು 2000ದ ನೋಟುಗಳ ಕಟ್ಟುಗಳನ್ನು ಹಿಡಿದುಕೊಂಡಿದ್ದಾರೆ. ವಿನಿಮಯ ದಂಧೆ ಭಾರಿ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಕೆಲವು ಮಧ್ಯವರ್ತಿಗಳು ಈಗ ಸಾಮಾನ್ಯ 30 ಶೇಕಡಾ ಆದಾಯ ತೆರಿಗೆಯನ್ನು ವಿನಿಮಯ ಶುಲ್ಕವೆಂದು ವಸೂಲಿ ಮಾಡುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಹೀಗೆ ಅನಾಣ್ಯೀಕರಣ ಎಂಬುದು ಒಂದು ರಾಷ್ಟ್ರೀಯ ಮೋಸ ಆಗಲಿದೆ ಎಂದು ಅಂದೇ ತಿಳಿದಿತ್ತು.

ಇದನ್ನೂ ಓದಿ: ನೋಟ್‌ ಬ್ಯಾನ್‌ಗೆ 6 ವರ್ಷ: ಮೋದಿ ನೇತೃತ್ವದ BJP ಸರ್ಕಾರ ಅಂದು ಹೇಳಿದ್ದೇನು? ಈಗ ಆಗಿದ್ದೇನು?

ನೆನೆಪಿಡಿ, ಅನುಷ್ಠಾನ ಇಲಾಖೆಯ ಹೊರತು ಬೇರಾರೂ ವ್ಯವಸ್ಥೆ ಈ ರೀತಿಯ ಕೊಳೆತಿರುವುದಕ್ಕೆ ಜವಾಬ್ದಾರರಲ್ಲ. ನಾವೀಗ ’ಸ್ವಚ್ಛ ಭಾರತ’ಕ್ಕೆ ಮತ್ತದೇ ಆದಾಯ ತೆರಿಗೆ ಇಲಾಖೆಯನ್ನು ಅವಲಂಬಿಸುತ್ತಿದ್ದೇವೆ. ದೆವ್ವಗಳನ್ನು ರಾತ್ರಿ ಬೆಳಗಾಗುವುದರ ಒಳಗೆ ದೇವತೆಗಳೆಂದು ಕರೆಯುವುದು ನೋವಿನ ವಿಷಯ.

ಈ ’ಆಪರೇಷನ್ ಬ್ಲಾಕ್ ಮನಿ’ಯಲ್ಲಿ ಈಗ ನಾವೆಲ್ಲಿದ್ದೇವೆ?

ಈಗ ಸ್ವಿಸ್ ಬ್ಯಾಂಕ್ ಹಣ, ಪನಾಮಾ ಪೇಪರ್‌ಗಳು, ಸಿಂಗಾಪುರ, ಮಾರಿಷಸ್ ಕಂಪೆನಿಗಳು, ದುಬೈ ಕಾರ್ಪೋರೇಟ್ ಸಂಸ್ಥೆಗಳು, ಮತ್ತು ಆಂತರಿಕವಾಗಿ ಪಾರ್ಟಿಸಿಪೇಟರಿ ನೋಟುಗಳು, ದೊಡ್ಡ ವ್ಯಾಪಾರಿ ಸಂಸ್ಥೆಗಳು, ಬೆಲೆಬಾಳುವ ಲೋಹಗಳು, ರಿಯಲ್ ಎಸ್ಟೇಟ್ ಇತ್ಯಾದಿಗಳಲ್ಲಿ ಹುದುಗಿರುವ ಕಪ್ಪು ಹಣದ ಬಗ್ಗೆ ಹೆಚ್ಚೇನೂ ಮಾತನಾಡಲು ನಮಗೆ ಸಾಧ್ಯವಿಲ್ಲ. ಒಬ್ಬರು ತಜ್ಞರ ಪ್ರಕಾರ ಹೂಡಿಕೆಯನ್ನು ಕೊಳ್ಳೆಹೊಡೆಯಲು ಎಂಭತ್ತನಾಲ್ಕು ವಿಧಾನಗಳಿವೆ.

ಆದರೂ ’ಡರ್ಟಿ ಮನಿ’ಯಂಥ ಕಿರುಚಿತ್ರಗಳ ಮೂಲಕ ಆಗಾಗ ಜನರಿಗೆ ಆನಂದಿಸುವ ಅವಕಾಶ ಸಿಗುತ್ತದೆ. ವಾಟ್ಸಾಪ್ ಅಷ್ಟೊಂದು ಪಟ್ಟಿಗಳನ್ನು ಕೊಡುತ್ತದೆ. ಈ ಹಣವು ಕಪ್ಪು ಆರ್ಥಿಕತೆಯ 94 ಶೇಕಡಾ ಆಗುತ್ತದೆ. ಇದನ್ನು ಹಿಡಿದರೆ, ಭಾಗಶಃ ಆದರೂ, ಒಂದೇ ಏಟಿನಲ್ಲಿ ಭಾರತವು ತನ್ನ ಮೂಲ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಬಹುದು. ಆರೋಗ್ಯ ಮತ್ತು ಶಿಕ್ಷಣ ಬಜೆಟನ್ನು ಸರಿದೂಗಿಸಬಹುದು. ಒಂದು ವೇಳೆ ಶ್ರೀಮಾನ್ ಮೋದಿ ಈ ವಿಷಯ ಎನಾದರೂ ಮಾತನಾಡಿದರೆ, ಕ್ಷಿಪ್ರ ಕ್ರಾಂತಿ ಆಗಬಹುದು.

ನಗದು ಆರ್ಥಿಕತೆಯ ಮೇಲಿನ ನಿಜವಾದ ಅವಲಂಬನೆ ಮುಂದುವರಿದರೆ ಯಾವ ಪರಿಣಾಮವಾಗಬಹುದು? ನಮ್ಮಲ್ಲಿಗೆ ದೊಡ್ಡ ಪ್ರಮಾಣದ ವಿದೇಶಿ ನಿಧಿಯನ್ನು ತರಬಹುದೆ? ಪ್ರತೀ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೆರಿಗೆ ಅಧಿಕಾರಿಗಳು ತಲೆ ಹಾಕುವರೆ? ಅನಧಿಕೃತ ಲೆಕ್ಕ ಇಲ್ಲಾ ವ್ಯವಹಾರಗಳನ್ನು ಇಡಿಯಾಗಿ ತಡೆಗಟ್ಟುವರೆ? ಭಾರಿ ಪ್ರಮಾಣದ ಹಣದ ಚಲನೆಯ ಮೇಲೆ ನಿರಂತರ ಕಣ್ಗಾವಲು ಇರುವುದೆ? ಮೋಸದ ವ್ಯವಹಾರ ಪತ್ತೆಯಾದಲ್ಲಿ ಸ್ವಯಂಚಾಲಿತ ಮುಟ್ಟುಗೋಲು ಹಾಗೂ ದಂಡ ಇರುವುದೆ? ಅಥವಾ ದೊಡ್ಡ ಪ್ರಮಾಣದ ತೆರಿಗೆ ಬಾಕಿಯನ್ನು ಮನ್ನಾ ಮಾಡಲು ತೆರಿಗೆ ಕಮಿಷನರುಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳ ನಡುವೆ ಚೌಕಾಸಿ ವ್ಯವಹಾರ ಇರುವುದೆ? ಎಲ್ಲಿ ಕ್ಯಾನ್ಸರ್ ಅಡಗಿದೆ ಎಂದು ನಾವು ಇನ್ನಷ್ಟು ಅನ್ವೇಷಣೆ ನಡೆಸಬೇಕಾಗಿದೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕೃಷ್ಣಮೂರ್ತಿ ವಿ

ಕೃಷ್ಣಮೂರ್ತಿ ವಿ
1968ರಿಂದಲೂ ಕಾರ್ಮಿಕ ಚಳವಳಿಗಳ ಜತೆಗಾರರಾದ ಕೃಷ್ಣಮೂರ್ತಿಯವರು ಕೆವಿಬಿಇಯುನ ಪ್ರಧಾನ ಕಾರ್ಯದರ್ಶಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...