Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕಬಳ್ಳಾಪುರ: ಲಂಗು ಲಗಾಮಿಲ್ಲದ ಡಾ.ಕೆ ಸುಧಾಕರ್ ರಿಪಬ್ಲಿಕ್

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕಬಳ್ಳಾಪುರ: ಲಂಗು ಲಗಾಮಿಲ್ಲದ ಡಾ.ಕೆ ಸುಧಾಕರ್ ರಿಪಬ್ಲಿಕ್

- Advertisement -
- Advertisement -

ಕರ್ನಾಟಕದ ಹೂವು ಮತ್ತು ಹಣ್ಣಿನ ರಾಜಧಾನಿ ಎಂದು ಕರೆಸಿಕೊಳ್ಳುವ ಚಿಕ್ಕಬಳ್ಳಾಪುರ 2007ರವರೆಗೆ ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿತ್ತು. ಸ್ವತಂತ್ರ ಜಿಲ್ಲೆಯ ಮಾನ್ಯತೆ ಪಡೆದ ಈ 15 ವರ್ಷಗಳಲ್ಲಿ ಜಿಲ್ಲೆಯ ಬೆಳವಣಿಗೆಗೆ ಅತಿ ಹೆಚ್ಚು ನೆರವಾದವರು ಅಂದರೆ ಅಲ್ಲಿನ ರೈತ ಸಮುದಾಯ. ಹೂವು, ಹಣ್ಣು, ತರಕಾರಿ, ರೇಷ್ಮೆ ಬೆಳೆದು, ಹಾಲು ಕರೆದು ಇಲ್ಲಿನ ರೈತರು ಬೆಂಗಳೂರನ್ನು ಸಲಹುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಅಷ್ಟೆಲ್ಲ ಕಷ್ಟಪಟ್ಟರೂ ಸಹ ಅಲ್ಲಿನ ರೈತರ ಬದುಕು ಮಾತ್ರ ಬಂಗಾರವಾಗಿಲ್ಲ. ಶಾಶ್ವತ ನೀರಾವರಿಗಾಗಿ, ನ್ಯಾಯಯುತ ಬೆಲೆಗಾಗಿ ದಲಿತರ ಸ್ವಾಭಿಮಾನಕ್ಕಾಗಿ ಹಲವಾರು ಹೋರಾಟಗಳನ್ನು ಕಂಡ ಚಿಕ್ಕಬಳ್ಳಾಪುರದಲ್ಲೀಗ ಹಣದವರ ಕಾರುಬಾರು ಜೋರಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ವಿಧುರಾಶ್ವತ್ಥದ ಸ್ವಾತಂತ್ರ್ಯ ಹೋರಾಟ ಸಮಯದ ಧ್ವಜ ಸತ್ಯಾಗ್ರಹ ದಕ್ಷಿಣದ ಜಲಿಯನ್ ವಾಲಾಬಾಗ್ ಎಂದು ಚರಿತ್ರೆಯಲ್ಲಿ ದಾಖಲಾಗಿದೆ. ವೈಜ್ಞಾನಿಕತೆ-ವೈಚಾರಿಕತೆ ಪ್ರತಿಪಾದಿಸಿ ಪ್ರಶ್ನಿಸುವುದನ್ನು ಕಲಿಸಿದ ಶಿಕ್ಷಣ ತಜ್ಞ ಡಾ.ಎಚ್. ನರಸಿಂಹಯ್ಯ, ದಿವಾನರಾಗಿ ಗಮನ ಸೆಳೆದ ಸರ್.ಎಂ ವಿಶ್ವೇಶ್ವರಯ್ಯ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಜಸ್ಟೀಸ್ ಗೋಪಾಲಗೌಡರು, ವಿಜ್ಞಾನಿಗಳಾದ ಸಿ.ಎನ್ ಆರ್ ರಾವ್, ಹೋರಾಟಗಾರರಾದ ಪ್ರೊ.ಬಿ ಗಂಗಾಧರ ಮೂರ್ತಿ, ದಲಿತ ಮುಖಂಡರಾದ ಎನ್.ವೆಂಕಟೇಶ್ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ಭೌಗೋಳಿಕ-ಸಾಮಾಜಿಕ ಸ್ಥಿತಿ ಗತಿ

ದಕ್ಷಿಣಕ್ಕೆ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಯನ್ನು, ಪಶ್ಚಿಮಕ್ಕೆ ತುಮಕೂರು ಜಿಲ್ಲೆಯನ್ನು, ಉತ್ತರಕ್ಕೆ ಮತ್ತು ಪೂರ್ವಕ್ಕೆ ಆಂಧ್ರದ ಅನಂತಪುರ ಹಾಗೂ ಅನ್ನಮಯ್ಯ ಜಿಲ್ಲೆಗಳನ್ನು ಗಡಿಗಳಾಗಿ ಹೊಂದಿರುವ ಚಿಕ್ಕಬಳ್ಳಾಪುರ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 55 ಕಿ.ಮೀ ದೂರದಲ್ಲಿದೆ ಮತ್ತು ಚಿಕ್ಕಬಳ್ಳಾಪುರ ನಗರವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 35 ಕಿ.ಮೀ ದೂರದಲ್ಲಿದೆ.

ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಪಾಲಾರ್, ಪಾಪಾಗ್ನಿ ಮತ್ತು ಕುಶಾವತಿ ಜಿಲ್ಲೆಯ ಪ್ರಮುಖ ನದಿಗಳಾಗಿದ್ದು ಮಳೆಗಾಲದಲ್ಲಿ ಮಾತ್ರ ಹರಿಯುತ್ತವೆ. ಹಾಗಾಗಿ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಬೇಕೆಂದು ದಶಕಗಳ ಕಾಲ ಹೋರಾಟ ನಡೆದಿದೆ. ಕೊನೆಗೆ ಸರ್ಕಾರ ಎತ್ತಿನಹೊಳೆ ಯೋಜನೆಯ ಮೂಲಕ ನೀರು ತರುವುದಾಗಿ ಭರವಸೆ ನೀಡಿದ್ದು, ಸದ್ಯ ಎಚ್.ಎನ್ ವ್ಯಾಲಿ ಮೂಲಕ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಚಿಕ್ಕಬಳ್ಳಾಪುರಕ್ಕೆ ಹರಿಸಲಾಗುತ್ತಿದೆ.

ಡಿ.ಎಂ ನಂಜುಂಡಪ್ಪನವರ ವರದಿಯನ್ವಯ ಜಿಲ್ಲೆಯ ಗೌರಿಬಿದನೂರು ಮತ್ತು ಚಿಂತಾಮಣಿ ಹಿಂದುಳಿದ ತಾಲ್ಲೂಕುಗಳಾದರೆ, ಬಾಗೇಪಲ್ಲಿ ಮತ್ತು ಗುಡಿಬಂಡೆ ಅತಿ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿ ಬರುತ್ತವೆ.

ನಂದಿ ಬೆಟ್ಟದಲ್ಲಿರುವ ಭೋಗನಂದೀಶ್ವರ ದೇವಾಲಯ, ಗುಡಿಬಂಡೆ ಕೋಟೆ, ಸ್ಕಂದಗಿರಿ ಬೆಟ್ಟ, ಕೈವಾರ, ವಿದುರಾಶ್ವತ್ಥ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಕೃಷಿ ಆರ್ಥಿಕತೆ

ಒಕ್ಕಲಿಗರು (ರೆಡ್ಡಿಗಳು ಒಳಗೊಂಡಂತೆ) ಮತ್ತು ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಪ್ರಧಾನ ಕಸುಬು ಕೃಷಿಯಾಗಿದೆ. ಹೂವಿನ ಜೊತೆಗೆ ಮಾವು ಮತ್ತು ದ್ರಾಕ್ಷಿ ಬೆಳೆಗೆ ಜಿಲ್ಲೆ ಖ್ಯಾತಿ ಪಡೆದಿದೆ. ಆದರೆ ಮಾವು ಸಂಸ್ಕರಣ ಮತ್ತು ಉಪ ಉತ್ಪನ್ನ ಘಟಕ ರಚನೆಯಾಗಿಲ್ಲ ಎನ್ನುವುದು ರೈತರ ಕೂಗು. ದ್ರಾಕ್ಷಿ ಬೆಳೆ ಆಧರಿಸಿ ವೈನ್ ಉತ್ಪಾದನಾ ಘಟಕ ಸ್ಥಾಪನೆಗೆ ರೈತರು ಬೇಡಿಕೆಯಿಟ್ಟಿದ್ದಾರೆ. ಉಳಿದಂತೆ ಟೊಮ್ಯಾಟೋ ಮತ್ತಿತ ತರಕಾರಿಗಳನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಟೊಮ್ಯಾಟೋ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ ನಿರ್ಮಿಸಬೇಕೆಂಬ ರೈತರ ಬೇಡಿಕೆ ಇನ್ನೂ ಬೇಡಿಕೆಯಾಗಿಯೇ ಉಳಿದಿದೆ.

ದಲಿತ-ರೈತ-ಎಡ ಚಳವಳಿಯ ನಾಡು

ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಭೀಕರವಾಗಿ ದಲಿತರನ್ನು ಹತ್ಯೆ ಮಾಡಿದ್ದ ಜಾತಿ ದೌರ್ಜನ್ಯದ ಕುಖ್ಯಾತ ಘಟನೆ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿಯಲ್ಲಿ ಘಟಿಸಿತ್ತು. ಸ್ವಾಭಿಮಾನಿ ಬದುಕು ಬಯಸಿದ 7 ಜನ ದಲಿತರನ್ನು ಸವರ್ಣೀಯರು ಸಜೀವವಾಗಿ ಸುಟ್ಟು ಹಾಕಿದ್ದರು. ಘಟನೆ ನಡೆದು 22 ವರ್ಷ ಕಳೆದರೂ ದಲಿತರಿಗೆ ನ್ಯಾಯ ಸಿಗಲಿಲ್ಲ. ಬದಲಿಗೆ ಸಾಕ್ಷಿ ಕೊರತೆ ಆಧಾರದಲ್ಲಿ ಆರೋಪಿಗಳು ಬಿಡುಗಡೆಯಾಗಿದ್ದಾರೆ.

ಇಂತಹ ಫ್ಯೂಡಲ್ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿ ಪ್ರಬಲ ಹೋರಾಟ ರೂಪಿಸಿತ್ತು. ಇಲ್ಲಿನ ಒಕ್ಕಲಿಗ, ರೆಡ್ಡಿ ಸಮುದಾಯದ ಜಾತಿ ದೌರ್ಜನ್ಯವನ್ನು ತಡೆಯಲು ಈ ಚಳವಳಿ ಅವಿರತ ಹೋರಾಡಿದೆ. ಅಲ್ಲದೆ ರೈತ ಚಳವಳಿ ಸಹ ಜಿಲ್ಲೆಯಲ್ಲಿ ಹೋರಾಟ ನಡೆಸಿದೆ. ಇನ್ನು ಕಾರ್ಮಿಕರ ಪರವಾಗಿ ನಡೆದ ಎಡ ಚಳವಳಿಗಳು ಕೂಡ ಗಮನಾರ್ಹವಾಗಿದ್ದನ್ನು ಕಾಣಬಹುದು. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂ ಪಕ್ಷದ ಜಿ.ವಿ ಶ್ರೀರಾಮರೆಡ್ಡಿಯವರು ಎರಡು ಬಾರಿ ಜಯಗಳಿಸುವಷ್ಟು ಪ್ರಬಲವಾಗಿದ್ದನ್ನು ಗುರುತಿಸಬಹುದು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಇತಿಹಾಸ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವು 1978ರವರೆಗೆ ಸಾಮಾನ್ಯ ಕ್ಷೇತ್ರವಾಗಿತ್ತು. 1978ರಿಂದ 2008ರವರೆಗೆ 30 ವರ್ಷಗಳ ಕಾಲ ಅದನ್ನು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವನ್ನಾಗಿ ಮಾಡಲಾಗಿತ್ತು. ಆನಂತರ ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ 2008ರಿಂದೀಚೆಗೆ ಅದು ಮತ್ತೆ ಸಾಮಾನ್ಯ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಲಾಗಿದೆ.

ಒಂದು ಉಪ ಚುನಾವಣೆ ಸೇರಿ 15 ವಿಧಾನಸಭಾ ಚುನಾವಣೆಗಳನ್ನು ಕಂಡಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 9 ಬಾರಿ ಜಯಗಳಿಸಿರುವ ಕಾರಣ ಅದನ್ನು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂತಲೇ ಹೇಳಬಹುದು. ನಾಲ್ಕು ಬಾರಿ ಸ್ವತಂತ್ರ ಅಭ್ಯರ್ಥಿಗಳು ಇಲ್ಲಿ ಜಯ ಕಂಡರೆ ಒಮ್ಮೆ ಜೆಡಿಎಸ್ ಜಯ ಕಂಡಿದೆ. ಪಕ್ಷಾಂತರದ ಕಾರಣಕ್ಕೆ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹಾಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆಜಿಎಫ್: ಪರ್ಯಾಯ ಪಕ್ಷಗಳ ನೆಲೆಯಲ್ಲೀಗ ಕಾಂಗ್ರೆಸ್ ಮುಂಚೂಣಿ

1957ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್ ಮುನಿಸ್ವಾಮಿಯವರು ಸ್ವತಂತ್ರ ಅಭ್ಯರ್ಥಿ ಸಿ.ವಿ ವೆಂಕಟರಾಯಪ್ಪನವರ ಎದುರು ಗೆಲುವು ಸಾಧಿಸಿದರು. ಆದರೆ ಪಟ್ಟು ಬಿಡದ ವೆಂಕಟರಾಯಪ್ಪನವರು 1962ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜಯ ಕಂಡರು. 1967ರ ಚುನಾವಣೆಯಲ್ಲಿ ಕಾಂಗ್ರೆಸ್ ಕೆ.ಎಂ ಪುಟ್ಟಸ್ವಾಮಿಯವರಿಗೆ ಟಿಕೆಟ್ ನೀಡಿತು. ಅವರು ಸ್ವತಂತ್ರ ಅಭ್ಯರ್ಥಿ ಕೆ.ವೆಂಕಟಕೃಷ್ಣಪ್ಪನವರ ಎದುರು ಗೆದ್ದರು. ಅದುವರೆಗೂ ಸ್ವತಂತ್ರ ಅಭ್ಯರ್ಥಿಯಾಗಿದ್ದ ಸಿ.ವಿ ವೆಂಕಟರಾಯಪ್ಪನವರು 1972ರಲ್ಲಿ ಕಾಂಗ್ರೆಸ್ ಟಿಕೆಟ್‌ನಡಿ ಸ್ಪರ್ಧಿಸಿ ಸ್ವತಂತ್ರ ಅಭ್ಯರ್ಥಿ ಆರ್.ಬಿ ಮಲ್ಲಪ್ಪನವರ ಎದುರು ಗೆದ್ದರು.

ಮೀಸಲು ಕ್ಷೇತ್ರ

1978ರಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವನ್ನು ಪ.ಜಾ ಮೀಸಲು ಕ್ಷೇತ್ರವನ್ನಾಗಿ ಮಾರ್ಪಡಿಸಲಾಯಿತು. ಆ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ ರೇಣುಕಾ ರಾಜೇಂದ್ರನ್‌ರವರು ಜನತಾ ಪಕ್ಷದ ಎ.ಮುನಿಯಪ್ಪನವರನ್ನು 10,370 ಮತಗಳಿಂದ ಮಣಿಸಿ ಶಾಸಕರಾದರು; ಆರ್ ಗುಂಡೂರಾವ್‌ರವರ ಸರ್ಕಾರದಲ್ಲಿ ರೇಷ್ಮೆ, ಯುವಜನ ಮತ್ತು ಕ್ರೀಡೆ ಹಾಗೂ ಸಣ್ಣ ಕೈಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಮುಂದಿನ 1983ರ ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿದ ಎ.ಮುನಿಯಪ್ಪನವರು ರೇಣುಕಾ ರಾಜೇಂದ್ರನ್‌ರವರನ್ನು 18,928 ಮತಗಳ ಅಂತರದಲ್ಲಿ ಸೋಲಿಸಿದರು.

1985ರ ಚುನಾವಣೆಯಲ್ಲಿ ಕೆ.ಎಂ ಮುನಿಯಪ್ಪನವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ನಾಗಪ್ಪನವರ ವಿರುದ್ದ 12,125 ಮತಗಳ ಅಂತರದಿಂದ ಜಯ ಸಾಧಿಸಿದರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ರೇಣುಕಾ ರಾಜೇಂದ್ರನ್‌ರವರಿಗೆ ಮಣೆ ಹಾಕಿ ಟಿಕೆಟ್ ನೀಡಿತು. ಆ ಚುನಾವಣೆಯಲ್ಲಿ ಅವರು, ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಎಂ ಮುನಿಯಪ್ಪನವರನ್ನು 14,312 ಮತಗಳಿಂದ ಮಣಿಸಿ ಎರಡನೇ ಬಾರಿಗೆ ಶಾಸಕರಾದರು.

ರೇಣುಕಾ ರಾಜೇಂದ್ರನ್‌

1994ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಎಂ ಶಿವಾನಂದ ಮತ್ತು ಜನತಾದಳದ ಅಭ್ಯರ್ಥಿ ಕೆ.ಎಂ ಮುನಿಯಪ್ಪನ ನಡುವಿನ ಪೈಪೋಟಿಯಲ್ಲಿ ಶಿವಾನಂದರವರು 18,976 ಮತಗಳ ಅಂತರದಿಂದ ಜಯಗಳಿಸಿದರು. 1999ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ. ಕಾಂಗ್ರೆಸ್‌ನ ಕೆ.ವಿ ಅನಸೂಯಮ್ಮ ನಟರಾಜನ್‌ರವರು ಜೆಡಿಯು ಅಭ್ಯರ್ಥಿಯಾಗಿದ್ದ ಎಂ ಶಿವಾನಂದರವರನ್ನ ಸೋಲಿಸಿದರು. 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಎಸ್.ಎಂ ಮುನಿಯಪ್ಪನವರು ಜೆಡಿಎಸ್ ಸೇರಿದ್ದ ಶಿವಾನಂದರವರನ್ನು ಸೋಲಿಸಿ ಶಾಸಕರಾದರು.

2008ರಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವನ್ನು ಮತ್ತೆ ಸಾಮಾನ್ಯ ಕ್ಷೇತ್ರವನ್ನಾಗಿ ಮಾಡಲಾಯಿತು. ಆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೆ.ಪಿ ಬಚ್ಚೇಗೌಡರು 49,774 ಮತಗಳನ್ನು ಪಡೆದರೆ ಕಾಂಗ್ರೆಸ್‌ನ ಎಸ್.ವಿ ಅಶ್ವತ್ಥನಾರಾಯಣ ರೆಡ್ಡಿಯವರು 26,473 ಮತಗಳನ್ನು ಪಡೆದರು. ಬಚ್ಚೇಗೌಡರು 23,301 ಮತಗಳ ಅಂತರದಿಂದ ಗೆದ್ದು ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಹೊರತಾದ ಪಕ್ಷವೊಂದರ ಶಾಸಕರೆನಿಸಿಕೊಂಡರು.

ಡಾ.ಕೆ ಸುಧಾಕರ್ ಆಗಮನ

2013ರ ಚುನಾವಣೆ ವೇಳೆಗೆ ಡಾ.ಕೆ ಸುಧಾಕರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದರು. ತಮ್ಮ ಮೊದಲ ಯತ್ನದಲ್ಲಿಯೇ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದಿಂದ ಶಾಸಕರಾಗಿದ್ದ ಕೆ.ಪಿ ಬಚ್ಚೇಗೌಡರನ್ನು ಮಣಿಸಿ ಶಾಸಕರಾದರು. ಸುಧಾಕರ್ 74,914 ಮತಗಳನ್ನು ಪಡೆದರೆ ಬಚ್ಚೇಗೌಡರು 59,866 ಮತಗಳನ್ನು ಪಡೆದು 15,048 ಮತಗಳಿಂದ ಸೋಲೊಪ್ಪಿಕೊಂಡರು. 2018ರಲ್ಲಿಯೂ ಇದೇ ಫಲಿತಾಂಶ ಪುನಾರಾವರ್ತನೆಯಾಯಿತು. ಕಾಂಗ್ರೆಸ್ ಪಕ್ಷದಿಂದ ಎರಡನೇ ಬಾರಿ ಕಣಕ್ಕಿಳಿದ ಸುಧಾಕರ್ 82,006 ಮತಗಳನ್ನು ಪಡೆದು ಕೆ.ಪಿ ಬಚ್ಚೇಗೌಡರ ಎದುರು 30,431 ಮತಗಳ ಅಂತರದಿಂದ ಗೆದ್ದರು. ಕಳೆದ ಚುನಾವಣೆಯಿಂದ ಇಲ್ಲಿಗೆ ತಮ್ಮ ಗೆಲುವಿನ ಅಂತರವನ್ನು ಡಬಲ್ ಮಾಡಿಕೊಂಡಿದ್ದರು. ಅಲ್ಲದೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಎರಡನೇ ಬಾರಿಗೆ ಆಯ್ಕೆಯಾದ ಮೊದಲ ಶಾಸಕ ಎಂಬ ದಾಖಲೆಗೂ ಪಾತ್ರರಾದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶ್ರೀನಿವಾಸಪುರ: ರಮೇಶ್ ಕುಮಾರ್‌ರವರಿಗೆ ಒಲಿಯುವುದೇ ಹ್ಯಾಟ್ರಿಕ್ ಗೆಲುವು?

ಆಪರೇಷನ್ ಕಮಲ

ಎರಡನೇ ಬಾರಿಗೆ ಶಾಸಕರಾಗಿದ್ದ ಡಾ.ಕೆ ಸುಧಾಕರ್ ಅಧಿಕಾರದ ಆಸೆಗೆ ಬಿದ್ದು ಬಿಜೆಪಿಯ ಆಪರೇಷನ್‌ಗೆ ಒಳಗಾದರು. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬೀಳಿಸಲು ಕಾರಣವಾದ 18 ಜನ ಶಾಸಕರಲ್ಲಿ ಅವರೂ ಒಬ್ಬರಾಗಿದ್ದರು. ಹಾಗಾಗಿ ಸುಧಾಕರ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಕಾರಣ 2019ರಲ್ಲಿ ಉಪಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಬಿಜೆಪಿಯ ಸುಧಾಕರ್ 84,389 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಎಂ.ಆಂಜನಪ್ಪ 49,588 ಮತಗಳನ್ನು ಪಡೆದರು. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಎನ್ ರಾಧಕೃಷ್ಣ 35,869 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ನೂಕಲ್ಪಟ್ಟರು. 34,801 ಮತಗಳಿಂದ ಗೆದ್ದ ಸುಧಾಕರ್ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾದರು. ಆನಂತರ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿಯೂ ಆರೋಗ್ಯ ಸಚಿವರಾಗಿ ಮುಂದುವರೆದಿದ್ದಾರೆ.

ಅಂದಾಜು ಜಾತಿವಾರು ಮತಗಳು

ಸುಮಾರು 2.06 ಲಕ್ಷ ಮತಗಳಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 45,000 ಒಕ್ಕಲಿಗ ಮತ್ತು ರೆಡ್ಡಿ ಸಮುದಾಯದ ಮತಗಳಿದ್ದರೆ 40,000ದಷ್ಟು ಪ.ಜಾ ಮತಗಳು ಇವೆ ಎನ್ನಲಾಗುತ್ತಿದೆ. ಬಲಿಜಿಗರು 30,000 ಮತಗಳಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಕುರುಬರು 20,000, ಮುಸ್ಲಿಮರು 16,000, ಪ.ಪಂ 15,000 ಮತ್ತು ಇತರ ಹಿಂದುಳಿದ ವರ್ಗದ 40,000 ಮತಗಳು ಇವೆ ಎನ್ನಲಾಗುತ್ತಿದೆ.

ಸದ್ಯದ ಸ್ಥಿತಿಗತಿ

ಚಿಕ್ಕಬಳ್ಳಾಪುರವನ್ನು ಸಿಂಗಾಪೂರ್ ಮಾಡುತ್ತೇನೆ ಎಂಬ ಭರವಸೆ ಮೂಲಕ ಮೂರು ಚುನಾವಣೆಗಳಲ್ಲಿ ಗೆದ್ದು ಶಾಸಕರಾಗಿ, ಸಚಿವರಾಗಿರುವ ಡಾ.ಕೆ ಸುಧಾಕರ್ 10 ವರ್ಷ ಅಧಿಕಾರ ನಡೆಸಿದ್ದರೂ ಚಿಕ್ಕಬಳ್ಳಾಪುರದ ಅಭಿವೃದ್ದಿ ಕಡೆಗಣಿಸಿ ತಾವು ಮಾತ್ರ ಅಭಿವೃದ್ದಿಯಾಗುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ’ಜಿಲ್ಲೆಯಲ್ಲಿನ ಯಾವುದೇ ಕೃಷಿ ಭೂಮಿಯನ್ನು ಇತರ ಭೂಬಳಕೆಗೆ ಪರಿವರ್ತನೆ (ಕನ್ವರ್ಶನ್) ಮಾಡಬೇಕಾದರೆ, ಯಾವುದೇ ಲೇಔಟ್‌ಗಳು ತಲೆಎತ್ತಬೇಕಾದರೆ ಅದು ಸುಧಾಕರ್ ಅವರ ಮರ್ಜಿಯಲ್ಲಿ ನಡೆಯಬೇಕು; ಹಾಗಾಗಿ ಜಿಲ್ಲೆಯಲ್ಲಿ ಯಾವುದೇ ಲೇಔಟ್‌ಗಳು ತಲೆಎತ್ತುತ್ತಿಲ್ಲ. ಟೌನ್ ಅಭಿವೃದ್ದಿಯಾಗುತ್ತಿಲ್ಲ’ ಎಂಬುದು ಜನರ ಆರೋಪ.

ಕೆ.ಪಿ ಬಚ್ಚೇಗೌಡ

ಇನ್ನು ಜಿಲ್ಲೆಯಲ್ಲಿರುವ ಜಲ್ಲಿ ಕ್ರಷರ್‌ಗಳ ಮಾಲೀಕರು ತಿಂಗಳಿಗೆ ಇಂತಿಷ್ಟು ಎಂಬ ವಂತಿಕೆ ನೀಡಲೇಬೇಕಾಗಿದೆ. ಚಿಕ್ಕಬಳ್ಳಾಪುರಕ್ಕೆ ಬಂದ ಮೆಡಿಕಲ್ ಕಾಲೇಜನ್ನು ಸಹ ಸುಧಾಕರ್‌ರವರ ಪೆರೆಸಂದ್ರ ಊರಿನ ಹತ್ತಿರಕ್ಕೆ ತೆಗೆದುಕೊಂಡು ಹೋಗಿದ್ದಾರೆ; ಕೋವಿಡ್ ಸಮಯದಲ್ಲಿ ಬೇನಾಮಿ ಹೆಸರಿನ ಆಕಾಶ್ ಆಸ್ಪತ್ರೆಗೆ ಕೋಟ್ಯಂತರ ಹಣ ಹರಿಸಲಾಗಿದೆ; ಯಾವುದೇ ವರ್ಗಾವಣೆ, ಅಭಿವೃದ್ಧಿ ಕೆಲಸ ನಡೆಯಬೇಕೆಂದರೂ ಅದು ಸುಧಾಕರ್‌ರವರ ಮೂಗಿನ ನೇರಕ್ಕೆ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ವಿರೋಧ ಪಕ್ಷಗಳ ಆರೋಪವಾಗಿದೆ.

ಇನ್ನೊಂದೆಡೆ ಸುಧಾಕರ್‌ರವರು ಹಣವನ್ನು ಎರಚುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಣ ಕೊಟ್ಟು ನೂರಾರು ಮುಖಂಡರನ್ನು, ಕಾರ್ಯಕರ್ತರನ್ನು ಕೊಂಡುಕೊಳ್ಳುತ್ತಿದ್ದಾರೆ. ಅದಕ್ಕೆ ಬಗ್ಗದವರ ಮೇಲೆ ಪೊಲೀಸ್ ಕೇಸುಗಳನ್ನು ಹಾಕಿಸುವುದು, ಬೆದರಿಸುವ ಮೂಲಕ ತಣ್ಣಗಾಗಿಸುತ್ತಿದ್ದಾರೆ. ಬಲಿಜ ಮುಖಂಡರೊಬ್ಬರು ಇವರ ತಾಳಕ್ಕೆ ಕುಣಿಯದಿದ್ದಾಗ ಅವರ ಒಡೆತನದ ಶಾಲೆಯೊಂದು ನಗರಸಭೆ ಜಾಗದಲ್ಲಿದೆ ಎಂದು ಬೆದರಿಸಿ ಅವರನ್ನು ಒಳಗೆ ಹಾಕಿಕೊಂಡಿದ್ದಾರೆ ಎಂಬಿತ್ಯಾದಿ ಆರೋಪಗಳ ಜೊತೆಗೆ ಆಡಳಿತ ಯಂತ್ರಾಂಗವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಜಿಲ್ಲೆಯ ಆಳ-ಅಗಲ ಬಲ್ಲವರ ಅಭಿಪ್ರಾಯವಾಗಿದೆ.

ಸುಧಾಕರ್‌ರವರ ಅಕ್ರಮಗಳ ವಿರುದ್ಧ ದನಿಯೆತ್ತಿದ್ದ ದಸಂಸ ಮುಖಂಡರ ಮೇಲೆ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಗೂ ಪತ್ರಕರ್ತರ ಮೇಲೂ ದೂರು ದಾಖಲಾಗಿ ಕಿರುಕುಳ ನೀಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ತಮಗೆ ಬಗ್ಗದ ಹೋರಾಟಗಾರರ ಕುರಿತು ಆಧಾರರಹಿತವಾಗಿ ಹೀಯಾಳಿಸಿದ ಕಾರಣ ಸುಧಾಕರ್ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲು ಇತ್ತೀಚಿಗೆ ಆದೇಶಿಸಿತ್ತು.

ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ: ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣ ಹೀಗಿದೆ

ಒಂದಷ್ಟ ರಸ್ತೆಗಳು, ಮೆಡಿಕಲ್ ಕಾಲೇಜು ತಂದಿದ್ದು ಡಾ.ಸುಧಾಕರ್‌ರವರ ಸಾಧನೆ ಎಂದು ಜನ ಹೇಳುತ್ತಾರೆ. ಆದರೆ 10 ವರ್ಷಗಳಾದರೂ ಜಿಲ್ಲಾ ರಂಗಮಂದಿರ ಪೂರ್ಣಗೊಂಡಿಲ್ಲ. ಮಹಿಳಾ ಕಾಲೇಜು ಪೂರ್ಣಗೊಂಡಿಲ್ಲ. ಯಾವುದೇ ಕೈಗಾರಿಕಾ ವಲಯ ಸ್ಥಾಪನೆಯಾಗಿಲ್ಲ, ಮಳೆ ಬಂದಾಗ ರಸ್ತೆಗಳೆಲ್ಲ ನೀರು ತುಂಬುಕೊಳ್ಳುತ್ತಿವೆ. ರಾಜಕಾಲುವೆಗಳ ಒತ್ತುವರಿ ತೆರವು ಮಾಡಿಲ್ಲ. ಆದರೆ ಉಪಯೋಗಕ್ಕೆ ಬಾರದ 3 ಕೋಟಿ ರೂ ವೆಚ್ಚದ ಗ್ಲಾಸ್ ಹೌಸ್‌ಅನ್ನು ಕೆರೆಯೊಳಗೆ ಕಟ್ಟಿಸಿದರು. ಅದೀಗ ಸಂಪೂರ್ಣವಾಗಿ ಮುಳುಗಿಹೋಗಿದೆ. ಸದಾ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಸುತ್ತವರಿದಿರುವ ಸುಧಾಕರ್‌ರವರು ಸಾಮಾನ್ಯ ಜನರ ಕೈಗೆ ಸಿಗುವುದಿಲ್ಲ ಎನ್ನುವುದು ಜನರ ಆರೋಪವಾಗಿದೆ.

ಕ್ಷೇತ್ರದ ಸಮಸ್ಯೆಗಳು

ಎಚ್.ಎನ್ ವ್ಯಾಲಿ ಯೋಜನೆಯಿಂದ ಬರುವ ನೀರನ್ನು ಕನಿಷ್ಠ ಮೂರು ಬಾರಿ ಶುದ್ಧೀಕರಣ ಮಾಡಿಕೊಡಿ ಎಂಬುದು ಜನರ, ರೈತರ ಒತ್ತಾಯ. ಆದರೆ ಕೇವಲ 2 ಬಾರಿ ಮಾತ್ರ ಶುದ್ಧೀಕರಣ ಮಾಡುತ್ತಿರುವುದರಿಂದ ಇಲ್ಲಿನ ಅಂತರ್ಜಲ, ಕೆರೆ-ಕಟ್ಟೆಗಳ ನೀರು ಕಲುಷಿತವಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಬಜೆಟ್‌ನಲ್ಲಿ ಘೋಷಣೆಯಾದ ಉತ್ಪಾದನಾ ನಿರ್ದಿಷ್ಟ ಕೈಗಾರಿಕ ಕ್ಲಸ್ಟರ್ ಜಾರಿಯಾಗಿಲ್ಲ, ಬೊಂಬೆ, ಸೀರೆ ಕ್ಲಸ್ಟರ್ ಜಾರಿಯಾಗಿಲ್ಲ, ನಿರುದ್ಯೋಗದಿಂದಾಗಿ ಯುವಜನರ ವಲಸೆ ನಿಂತಿಲ್ಲ, ಎತ್ತಿನಹೊಳೆಯಿಂದ ನೀರು ಬಂದಿಲ್ಲ, ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಯಾಗಿಲ್ಲ, ನಿವೇಶನ ರಹಿತರಿಗೆ ಸೈಟ್‌ಗಳು ಸಿಕ್ಕಿಲ್ಲ ಎಂಬ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಇದೆ.

ಎಂ.ಆಂಜನಪ್ಪ

ಸುಧಾಕರ್‌ರವರು ಬೊಮ್ಮಾಯಿಯವರನ್ನು ಆರು ಬಾರಿ ಚಿಕ್ಕಬಳ್ಳಾಪುರಕ್ಕೆ ಕರೆಸಿದ್ದಾರೆ. ಆದರೆ ಆಶ್ವಾಸನೆಗಳು ಬಿಟ್ಟರೆ ಯಾವುದೇ ಅನುದಾನ ಬಂದಿಲ್ಲ, ಕೆಲಸವಾಗಿಲ್ಲ. ಜಿಲ್ಲೆಯ 22 ಸಾವಿರ ಕುಟುಂಬಗಳಿಗೆ ನಿವೇಶನ ಕೊಡುತ್ತೇವೆ ಎಂದು ಪ್ರತಿ ಚುನಾವಣೆಯಲ್ಲಿಯೂ ಹೇಳುತ್ತಾರೆ. ಆದರೆ ಇದುವರೆಗೂ ಒಬ್ಬರಿಗೂ ಕೊಟ್ಟ ಉದಾಹರಣೆಗಳಿಲ್ಲ. ಹೆಚ್ಚು ಮತದಾರರಿರುವ ಜಾತಿ ಮುಖಂಡರ ಜಯಂತಿಗಳನ್ನು ಭರ್ಜರಿಯಾಗಿ ಆಚರಿಸುವ ಮೂಲಕ ಭವನ ನಿರ್ಮಾಣಕ್ಕೆ ಜಾಗ ನೀಡುತ್ತೇವೆ, ಹಣ ನೀಡುತ್ತೇವೆ ಎನ್ನುತ್ತಾರೆ, ಆದರೆ ಒಂದೂ ಕಾರ್ಯಗತವಾಗಿಲ್ಲ ಎಂಬುದು ವಿಪಕ್ಷಗಳ ಆರೋಪವಾಗಿದೆ.

2023ರ ಚುನಾವಣೆ

ಸದ್ಯಕ್ಕೀಗ ಆಳೂರಲ್ಲಿ ಉಳಿದವನೆ ಗೌಡ ಎಂಬ ಗಾದೆ ಮಾತಿನಂತೆ ಸಚಿವ ಸುಧಾಕರ್‌ರವರದ್ದೆ ಹವಾ ಜೋರಾಗಿದೆ. ಅವರು ತಮ್ಮ ಹಣಬಲ ಮತ್ತು ಚಾಣಾಕ್ಷತನದಿಂದ ಇಡೀ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಬಿಜೆಪಿಯ ಟಿಕೆಟ್ ಅವರಿಗೆ ಪಕ್ಕಾ ಆಗಿದ್ದು ಅವರ ವಿರುದ್ಧ ಪ್ರಬಲ ಎದುರಾಳಿಯೇ ಇಲ್ಲದಂತಾಗಿದೆ.

ಇನ್ನು ಇಲ್ಲಿ ಸುಧಾಕರ್ ಬಿಜೆಪಿ ಅಭ್ಯರ್ಥಿ ಎಂಬುದಕ್ಕಿಂತ ವೈಯಕ್ತಿಕ ವರ್ಚಸ್ಸು ಮತ್ತು ಹಣ ಹೆಚ್ಚು ಕೆಲಸ ಮಾಡುತ್ತಿದೆ. ಏಕೆಂದರೆ ಚಿಕ್ಕಬಳ್ಳಾಪುರ ಬಿಟ್ಟರೆ ಜಿಲ್ಲೆಯ ಬೇರೆ ಯಾವುದೇ ಕ್ಷೇತ್ರದಲ್ಲಿ ಬಿಜೆಪಿ 10,000ದಷ್ಟು ಮತ ಪಡೆಯಲಾರದಷ್ಟು ದುರ್ಬಲವಾಗಿದೆ. ಇನ್ನು ಚುನಾವಣೆ ಹತ್ತಿರ ಬಂದ ಹಾಗೆ ಸುಧಾಕರ್‌ರವರೆ ಬಿಜೆಪಿ ತೊರೆಯಬಹುದು ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ದಂಡು

ಕಾಂಗ್ರೆಸ್ ಇಂದಿಗೂ ತನ್ನ ಒಂದಷ್ಟು ಮತಬೇಸ್‌ಅನ್ನು ಕ್ಷೇತ್ರದಲ್ಲಿ ಉಳಿಸಿಕೊಂಡಿದೆ. ಆದರೆ ಪ್ರಬಲ ಅಭ್ಯರ್ಥಿ ಇಲ್ಲದಿರುವುದು ಅದರ ಕೊರತೆಯಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ಆರಂಭವಾಗಿದೆ. ಈಗಾಗಲೇ ಕೆಪಿಸಿಸಿ ಸದಸ್ಯರಾದ ವಿನಯ್ ಶ್ಯಾಮ್, ಯಲುವಹಳ್ಳಿ ಎನ್ ರಮೇಶ್, ಕೆ ಎನ್ ರಘು, ಮಾಜಿ ಜಿ.ಪಂ ಸದಸ್ಯ ಗಂಗರೇಕಾಲುವೆ ನಾರಾಯಣಸ್ವಾಮಿ ಮತ್ತು ಲಾಯರ್ ನಾರಾಯಣಸ್ವಾಮಿ ಟಿಕೆಟ್‌ಗಾಗಿ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಂಗಾರಪೇಟೆ: ಕಾಂಗ್ರೆಸ್ ಒಳಜಗಳದ ಲಾಭ ಪಡೆಯಲು ಜೆಡಿಎಸ್-ಬಿಜೆಪಿ ಪೈಪೋಟಿ

ಇನ್ನುಳಿದಂತೆ ಕಳೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂ.ಆಂಜನಪ್ಪ, ಕಾಂಗ್ರೆಸ್ ಯುವ ಮುಖಂಡ ರಕ್ಷಾ ರಾಮಯ್ಯ ಕೂಡ ಟಿಕೆಟ್ ರೇಸ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿವಾದದಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಮುಳಬಾಗಿಲು ಕ್ಷೇತ್ರದ ಕೊತ್ತನೂರು ಮಂಜುನಾಥ್ ತಮ್ಮ ವಿವಾದ ಬಗೆಹರಿಯದೆ ಇದ್ದರೆ ಅವರೂ ಚಿಕ್ಕಬಳ್ಳಾಪುರಕ್ಕೆ ಬರಬಹುದು ಎನ್ನಲಾಗುತ್ತಿದೆ.

ಜೆಡಿಎಸ್

ಜೆಡಿಎಸ್ ಪಕ್ಷವು ಮಾಜಿ ಶಾಸಕ ಕೆ.ಪಿ ಬಚ್ಚೇಗೌಡರಿಗೆ ಟಿಕೆಟ್ ಘೋಷಿಸಿದೆ. 2008ರಲ್ಲಿ ಗೆದ್ದಿದ್ದ ಅವರು 2013 ಮತ್ತು 2018ರಲ್ಲಿ ಸೋತಿದ್ದಾರೆ. ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಈಗ ಕೊನೆಯ ಅವಕಾಶವೆಂಬಂತೆ ಮತ್ತೆ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಒಂದಷ್ಟು ಜೆಡಿಎಸ್ ಮುಖಂಡರು ಬಿಜೆಪಿ ಸೇರಿದ್ದಾರೆ ಎನ್ನಲಾಗುತ್ತಿದೆ. ಜೆಡಿಎಸ್ ತನ್ನ ಮತಗಳು ಹರಿದುಹೋಗದಂತೆ ತಡೆಯಲು ಹರಸಾಹಸ ಪಡುತ್ತಿದೆ.

ಯಾರ ಕೈ ಹಿಡಿಯಲಿದ್ದಾರೆ ಮತದಾರರು?

ಮೇಲ್ನೋಟಕ್ಕೆ ನೋಡಿದರೆ ಚಿಕ್ಕಬಳ್ಳಾಪುರದಲ್ಲಿ ಡಾ.ಕೆ ಸುಧಾಕರ್‌ರವರ ಆರ್ಭಟ ಜೋರಾಗಿರುವುದು ಎದ್ದು ಕಾಣುತ್ತದೆ. ಅವರ ಹಣ ಪ್ರಭಾವ ಮತ್ತು ವಿರೋಧ ಪಕ್ಷಗಳ ಬಳಿ ಪ್ರಬಲ ಅಭ್ಯರ್ಥಿಗಳಿಲ್ಲದಿರುವುದು ನೋಡಿದರೆ ಅವರೆ ಮತ್ತೊಂದು ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ ಎನ್ನಬಹುದು. ಆದರೆ ಸದ್ಯದ ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ ಹಾಗೂ ಅಲ್ಲಿ ಸತತ ಹತ್ತು ವರ್ಷಗಳಿಂದ ಶಾಸಕರಾಗಿರವ ಕಾರಣಕ್ಕಾಗಿ ಹುಟ್ಟಿರುವ ಅವರ ವಿರುದ್ಧದ ಅಲೆಯೂ ಕಾಣುತ್ತದೆ. ಬೆದರಿಕೆಗೋ, ಒತ್ತಡಕ್ಕೋ ಮಣಿದು ಅವರೊಡನಿರುವ ಹಲವು ಮುಖಂಡರು ಮತ್ತು ಕಾರ್ಯಕರ್ತರು ಚುನಾವಣೆ ಸಮಯದಲ್ಲಿ ಉಲ್ಟಾ ಹೊಡೆಯಲೂಬಹುದು ಎಂಬ ಭಯ ಕೂಡ ಅವರನ್ನು ಕಾಡುತ್ತಿದೆ. ಮತದಾರರು ಹಣಬಲವನ್ನು ತಿರಸ್ಕರಿಸುವರೇ ಎಂಬುದು ಕೊನೆಗೆ ಉಳಿಯುವ ಪ್ರಶ್ನೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

6 COMMENTS

  1. ಸತತವಾಗಿ ಒಬ್ಬರನ್ನೇ ಅಥವಾ ಒಂದೇ ಪಕ್ಷವನ್ನು ಯಾವತ್ತು ಆರಿಸಬಾರದು
    ಅದರಲ್ಲೂ ಈ ಬಿಜೆಪಿಯವರ ಕೋಮುಗಲಭೆ ಹಗರಣ ಇತ್ಯಾದಿಗಳಿಂದ ಜನರು ಬೇಸತ್ತು ಹೋಗಿದ್ದಾರೆ.
    ಅಭಿವೃದ್ಧಿ ಕಾರ್ಯಗಳು ಇಲ್ಲದೆ ಜನರಿಗೆ ಉದ್ಯೋಗ ಇಲ್ಲದೆ ಅತಿಹೆಚ್ಚಿನ ತೆರಿಗೆಯ ಹೊರೆ ಬಿದ್ದು ಜನಸಾಮಾನ್ಯರು ತೀರ ಕೆಳಗೆ ತಳ್ಳಲ್ಪಟ್ಟಿದ್ದಾರೆ ಅನೇಕ ಸರಕಾರದ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ… ಹೀಗಾಗಿ ಮುಂದಿನ ಬಾರಿ ಬದಲಾವಣೆ ಅತಿ ಅಗತ್ಯವಾಗಿದೆ.

  2. ಜೈ ಭಾರತ ಪ್ರತಿ ಒಂದು ಪಕ್ಷದ ಅಭ್ಯರ್ಥಿಗಳು ತಮ್ಮ ಹಣದ ಬಲದಿಂದ ಸಾಮಾನ್ಯ ಜನರ. ಮತವನ್ನು ಪಡೆಯಲು ಪ್ರಯತ್ನ ಮಾಡುತೀರುವು ಸಹಜವಾಗಿ ಇಂದಿನ ರಾಜಕೀಯ ಒಂದು ಆಟವಾಗಿದೆ.

    ಜಿ ವಿ ಯನ್

  3. ಸ್ವಾತಂತ್ರ್ಯದ ನಂತರ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬಡತನ ಎಂಬ ಪಿಡುಗು ಕಾಡುವ ಸಮಸ್ಯೆ ಎದುರಾಗಿ ನಿಂತು ಎದರು ನೋಡುತ್ತಾ ಇದ್ದಾಗ ದೇಶವನ್ನು ಯಾವ ರೀತಿಯಲ್ಲಿ ನಡುಸುಬೇಕು ಆಹಾರ ,ಬಟ್ಟೆ ,ಮನೆ ,ಕೆಲಸ ,ನಿರುದ್ಯೋಗ ,ಸಮಸ್ಯೆ ಅಕ್ಷರಾಭ್ಯಾಸ . ಭೊ ವಿಂಗಡಣೆ ರಾಜ್ಯ ವಿಭಜನೆ ನೂರಾರು ಸಂಖ್ಯೆಯಲ್ಲಿ ಅವುಗಳು ಸಮಸ್ಯೆ ಸರ್ವೇ ಮಾಡಿ. ಐಟಿ ಉದ್ಯಮ ಪ್ರೆಸ್ ರೈಲು ನಿಲ್ದಾಣ ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ತಂತ್ರಜ್ಞಾನ ಮಾಹಿತಿಗಾಗಿ ಈ ರೀತಿ ಮತ್ತು ಇತರ ಕ್ರಿಯೆಗಳೂ ಮೊದಲನೆಯವುಗಳೂ ಮಾಡಿ ಕೊಂಡು ದೇಶವನ್ನು ಒಂದು ಸಂಪೂರ್ಣ ದೇಶವನ್ನು ಮಾಡಿ ಬಿಜೆಪಿ ಕೈಯಲ್ಲಿ ಕೊಟ್ಟರೆ ಈಗ ವಿಮಾನ ನಿಲ್ದಾಣ ರೈಲು ನಿಲ್ದಾಣಗಳು ಟೋಲ್ ಗೇಟ್ ಪಾಸ್ ಎಲ್ಲಾವು ಅದಾನಿ ಮತ್ತು ಆಂಬಾನಿ ಕೈಯಲ್ಲಿ ಕೊಟ್ಟರೆ ಇದು ಯಾವ ಕಾನೂನಿನಲ್ಲಿ ಬರೆದಿದೆ ಹೇಳಿ

  4. ದೇಶದ ಗಡಿಯಲ್ಲಿ ರಾತ್ರಿ ಹಗಲು ತಂದೆ ತಾಯಿ ಹೆಂಡತಿ ಮಕ್ಕಳನ್ನು ಮತ್ತು ಒಡಹುಟ್ಟಿದವರನು ಬಿಟ್ಟು ದೇಶಸೇವೆ ಮಾಡುವ ಒಬ್ಬ ಬಡ ರೈತರ ಕುಟುಂಬದಲ್ಲಿ ಜನಿಸಿದ ವೀರ ಜವಾನ್. ಇಂದಿನ ರಾಜಕಾರಣಿಗಳ ತರಹ ಕೆಲಸ ಮಾಡಿದರೆ ದೇಶ ಏನು ಆಗಬಹುದು……………..❓ ನೀವೇ ಒಂದು ಸಲ ಯೋಚನೆ ಮಾಡಿ……….. ?
    ಜೈ ಹಿಂದ್ ( ಜಿ ವಿ ಎನ್)

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

0
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ...