Homeಕರ್ನಾಟಕಹಲಾಲ್ ವರ್ಸಸ್ ಸ್ಟನ್ನಿಂಗ್‌ನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿನ್ನೆಲೆ

ಹಲಾಲ್ ವರ್ಸಸ್ ಸ್ಟನ್ನಿಂಗ್‌ನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿನ್ನೆಲೆ

- Advertisement -
- Advertisement -

2+2=4 ಎನ್ನುವುದು ಸರಿಯಾದ ಉತ್ತರ. ಸರಿ ಉತ್ತರ ಇರುವುದು ಒಂದೇ ಆದರೆ ತಪ್ಪಾಗಿ ಅನಂತ ರೀತಿಯಲ್ಲಿ ಬರಿಯಬಹುದು. ತಪ್ಪುದಾರಿಗೆ ಎಲ್ಲಿಲ್ಲದ ಕವಲುಗಳಿವೆ. ಕೆಡುಕು ಮಾಡುವ ದಾರಿಗಳು ಹಾಗೆಯೇ. ಇತ್ತೀಚೆಗೆ ಕರ್ನಾಟಕದಲ್ಲಿ ಹಲಾಲ್ ಹೆಸರಿನಲ್ಲಿ ಹತ್ತು ಹಲವು ಪ್ರಶ್ನೆಗಳನ್ನು ಎತ್ತಿ ಜನಸಾಮಾನ್ಯರಲ್ಲಿ ವಿಷ ಬೀಜಗಳನ್ನು ಬಿತ್ತುವ ಪ್ರಕ್ರಿಯೆಯೂ ಹಾಗೆಯೇ ಎನಿಸುತ್ತದೆ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ. ಮೊದಲನೆಯದಾಗಿ ಹಲಾಲ್ ಬಗ್ಗೆ ಪ್ರಚಾರ ಮಾಡುತ್ತಿರುವ ತಪ್ಪು ಮಾಹಿತಿಗಳನ್ನು ಗಮನಿಸೋಣ. ’ಹಲಾಲ್’ ಎಂಬುದು ಆರ್ಥಿಕ ಜಿಹಾದ್. ಲಕ್ಷಾಂತರ ಕೋಟಿ ಹಲಾಲ್ ಪ್ರಮಾಣಪತ್ರದಿಂದ ಸಂಗ್ರಹವಾಗುತ್ತಿದೆ. ಈ ಹಣ ಭಯೋತ್ಪಾದನೆಗೆ ಬಳಕೆಯಾಗುತ್ತಿದೆ. ಹಲಾಲ್ ಪ್ರಮಾಣಪತ್ರ ಪಡೆಯಲು ಮುಸ್ಲಿಮರನ್ನೇ ಕೆಲಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಹಲಾಲ್ ಆಹಾರಕ್ಕೆ ಮುಲ್ಲಾಗಳೂ ಉಗಿಯುತ್ತಾರೆ. ಹಲಾಲ್ ಮಾಡಿದ ಆಹಾರ ಆರೋಗ್ಯಕ್ಕೆ ಮಾರಕ. ಹಲಾಲ್ ಮಾಡುವಾಗ ಪ್ರಾಣಿಗಳಿಗೆ ಅತ್ಯಂತ ಹೆಚ್ಚು ಹಿಂಸೆಯಾಗುತ್ತದೆ’. ಹೀಗೆ ಹತ್ತು ಹಲವು ಪ್ರಚಾರಗಳು ನಡೆಯುತ್ತದೆ.

ಇದಕ್ಕೆ ತದ್ವಿರುದ್ಧವಾಗಿ ಕೆಲವು ವಾಸ್ತವಿಕ ಸಂಗತಿಗಳನ್ನು ಗಮನಿಸೋಣ: ಹಲಾಲ್ ಪದಾರ್ಥಗಳ ಒಟ್ಟು ಮೌಲ್ಯ ಸುಮಾರು ಇನ್ನೂರು ಲಕ್ಷ ಕೋಟಿ. ಇದರ ಅರ್ಥ ಇನ್ನೂರು ಲಕ್ಷ ಕೋಟಿಯ ವ್ಯಾಪಾರದಲ್ಲಿ ನಮ್ಮ ಹಕ್ಕು ಸ್ಥಾಪಿಸಬೇಕು ಎಂದಿದ್ದರೆ ಅದನ್ನು ಪಾಲಿಸುವುದು ಯಾವುದೇ ದೇಶದ ಅಥವಾ ವ್ಯಾಪಾರಸ್ಥರ ಕರ್ತವ್ಯವಾಗುತ್ತದೆ. ಇಲ್ಲವಾದಲ್ಲಿ ದೇಶಕ್ಕೆ ಮತ್ತು ವ್ಯಾಪಾರಸ್ಥರಿಗೆ ನಷ್ಟವಾಗುತ್ತದೆ. ಹಲಾಲ್
ಪದಾರ್ಥ ಬಳಸುವುದೇ ಕಮ್ಮಿ, ಮುಸ್ಲಿಂ ಸಮುದಾಯಕ್ಕೆ ಪದಾರ್ಥಗಳು ಹೇಗೆಬೇಕೋ ಹಾಗೆ ಕೊಡಲು ಮುಂಚೂಣಿಯಲ್ಲಿ ಇರುವವರು ಜರ್ಮನಿ, ಇಂಗ್ಲೆಂಡ್ ಮತ್ತು ಅಮೆರಿಕ ರಾಷ್ಟ್ರಗಳಾಗಿವೆ. ಏಕೆಂದರೆ ದುಬೈ ಸೌದಿ ಅರೇಬಿಯಾದ ಶ್ರೀಮಂತ ಮುಸ್ಲಿಂ ಸಮುದಾಯದವರೊಂದಿಗೆ ವ್ಯಾಪಾರ ಮಾಡಿ ಆರ್ಥಿಕವಾಗಿ ಮುಂದುವರಿಯಲು ಯಾರು ತಾನೇ ಹಿಂಜರಿಯುತ್ತಾರೆ? ಹಲಾಲ್ ಪ್ರಮಾಣಿತ ವಸ್ತುಗಳನ್ನು ಮುಸಲ್ಮಾನರಿಗೆ ಹೆಚ್ಚಾಗಿ ಮಾರಾಟ ಮಾಡುತ್ತಿರುವವರು ಮುಸಲ್ಮಾನರಲ್ಲ. ನೀವು ದುಬೈ, ದೋಹಾ ಅಥವಾ ಕುವೈತ್‌ಗೆ ಹೋದರೆ ಅಲ್ಲಿನ ಆಹಾರ ಪದಾರ್ಥಗಳೆಲ್ಲವೂ ಹೆಚ್ಚಾಗಿ ಸರಬರಾಜು ಆಗುತ್ತಿರುವುದು ಸ್ವಿಟ್ಜರ್‌ಲ್ಯಾಂಡ್‌ನ ನೆಸ್ಲೆ, ಅಮೆರಿಕದ ಪರ್‌ಡ್ಯು, ನ್ಯೂಜಿಲ್ಯಾಂಡ್‌ನ ಫಾಂಟೇರಾ ಹೀಗೆ ದೈತ್ಯ ಕಂಪನಿಗಳಿಂದ. ಅವು ಕೊಲ್ಲಿ ರಾಷ್ಟ್ರಗಳಲ್ಲಿ ವ್ಯಾಪಾರ ವಹಿವಾಟು ಮಾಡಿ ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಹಲಾಲ್‌ನ ಪ್ರತ್ಯೇಕ ಮಾರುಕಟ್ಟೆಗೆ, ವ್ಯಾಪಾರಕ್ಕಾಗಿ ಹೆಚ್ಚು ಒತ್ತುಕೊಟ್ಟವರು ಬಹು ರಾಷ್ಟ್ರೀಯ ಕಂಪೆನಿಗಳು. ಜಗತ್ತಿನಲ್ಲಿ ಅತೀ ಹೆಚ್ಚು ಹಲಾಲ್ ಪದಾರ್ಥ ಮಾರುವ ಕಂಪೆನಿ ಸ್ವಿಟ್ಜರ್ಲ್ಯಾಂಡ್‌ನ ನೆಸ್ಲೆಯಾಗಿರುತ್ತದೆ. ಅನೇಕ ಬಹುರಾಷ್ಟ್ರೀಯ ಕಂಪೆನಿಗಳಿಗೆ ಹಲಾಲ್ ಒಂದು ಅತ್ಯಂತ ದೊಡ್ಡ ವ್ಯಾಪಾರದ ಅವಕಾಶ. ನಿಮಗೆ ಬೇಕಾಗಿದ್ದನ್ನು ಸಂಸ್ಕೃತಿಗೆ ತಕ್ಕಂತೆ ಒದಗಿಸುತ್ತೇವೆ ಎಂದು ಮುಗಿಬೀಳುತ್ತಾರೆ.

ಅದೇ ರೀತಿ ಅಮೆರಿಕದಲ್ಲಿ ಶೇ.2.5ರಷ್ಟಿರುವ ಯಹೂದಿಗಳ ಧರ್ಮ ಸೂಕ್ಷ್ಮತೆಯಂತೆ ಶೇ.90ರಷ್ಟು ಪದಾರ್ಥಗಳು ಆ ಧರ್ಮದವರು ಬಯಸುವಂತೆ ಕೋಷರ್ ಪ್ರಮಾಣಪತ್ರ ಪಡೆದಿರುತ್ತವೆ. ಯಾವುದೇ ಕ್ರಿಶ್ಚಿಯನ್ನರು ಕೋಷರ್ ಬೇಡವೆನ್ನುವುದಿಲ್ಲ. ಹಾಗೆಯೇ ಕ್ರಿಶ್ಚಿಯನ್ ಧರ್ಮದ ಜಗತ್ತಿನ ಸುಮಾರು 2.3 ಬಿಲಿಯನ್ ಕ್ರಿಶ್ಚಿಯನ್‌ರಿಗೆ ಈ ರೀತಿಯ ಯಾವುದೇ ಧರ್ಮಾಧಾರಿತ ಪ್ರಮಾಣಪತ್ರಗಳಿಲ್ಲ. ಆದರೇ ಸುಮಾರು 2 ಬಿಲಿಯನ್ ಜನಸಂಖ್ಯೆಯುಳ್ಳ ಮುಸಲ್ಮಾನರಿಗೆ ಮತ್ತು ಸುಮಾರು 2 ಕೋಟಿ ಯಹೂದಿಗಳಿಗೆ ಮಾತ್ರ ಈ ಧರ್ಮಾಧಾರಿತ ಪ್ರಮಾಣಪತ್ರಗಳಿರುವುದು. ಇದನ್ನು ಯಹೂದಿಗಳು ಕಟ್ಟುನಿಟ್ಟಾಗಿ ಪಾಲಿಸುವುದುಂಟು. ಆದರೆ ಎಲ್ಲಾ ಮುಸ್ಲಿಂ ರಾಷ್ಟ್ರಗಳಲ್ಲಿ ಮಾಂಸ ಪದಾರ್ಥಗಳನ್ನು ಬಿಟ್ಟು ಇತರೇ ಪದಾರ್ಥಗಳಿಗೆ ಅಷ್ಟು ಕಟ್ಟುನಿಟ್ಟು ಇಲ್ಲ. ಯಹೂದಿಗಳು ಮತ್ತು ಮುಸಲ್ಮಾನರಿಗೆ ಹಂದಿ ಮಾಂಸ ನಿಷಿದ್ಧ. ಯಹೂದಿಗಳಿಗೆ ಪ್ರಾಣಿಯ ಗೊರಸು ಇಬ್ಭಾಗವಾಗಿರತಕ್ಕದ್ದು. ಎರಡು ಧರ್ಮದವರು ಪ್ರಾಣಿವಧೆ ಮಾಡುವಾಗ ಕತ್ತಿನ ಮೆದುಳಿಗೆ ರಕ್ತ ಸರಬರಾಜು ಮಾಡುವ ಅಭಿಧಮನಿ ರಕ್ತನಾಳಗಳನ್ನು ಕತ್ತರಿಸಿ, ರಕ್ತವನ್ನು ಸಂಪೂರ್ಣವಾಗಿ ಸೋರಿಸಿ ನಂತರ ಆ ಪ್ರಾಣಿಯ ದೇಹವನ್ನು ಮಾಂಸಕ್ಕಾಗಿ ಬಳಸುವುದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಿಂದೂಗಳಿಗೆ ಈ ರೀತಿಯ ಕಟ್ಟುನಿಟ್ಟಾದ ಪ್ರಾಣಿಯ ವಧೆ ನಿಯಮಗಳು ಶಾಸ್ತ್ರೋಕ್ತವಾಗಿ ಇಲ್ಲ. ನಮ್ಮಲ್ಲಿ ಸುಮಾರು 60 ಸಾವಿರ ಜಾತಿಗಳಿವೆ. ಆಹಾರದ ಸಂಸ್ಕೃತಿಯೂ ಕೂಡ ಅಷ್ಟೇ ವೈವಿಧ್ಯಮಯವಾಗಿದೆ. ಹಾಗಾಗಿ ಭಾರತಕ್ಕೆ ಏನನ್ನಾದರೂ ಹೀಗೆ ಎಂದು ಹೇಳಿದರೆ ಅದಕ್ಕೆ ತದ್ವಿರುದ್ಧವಾದದ್ದು ಸಹ ಸರಿಯಾಗೇ ಇರುತ್ತದೆ. ಮನುಸ್ಮೃತಿಯ ಪ್ರಕಾರ ವೈದ್ಯರು ಸಹ ಕ್ಷುದ್ರರಾಗಿರುವ ಕಾರಣ ಅವರೂ ರಕ್ತವನ್ನು ಮುಟ್ಟುತ್ತಾರೆ. ಹಾಗೆಯೇ ನಮ್ಮ ಧರ್ಮಶಾಸ್ತ್ರಗಳ ನಿಯಮಗಳನ್ನು ಪಾಲಿಸಿದರೆ ಮಾನವ ಹಕ್ಕು ಉಲ್ಲಂಘನೆಯಾಗುವುದು ಕಂಡಿತ. ಅದು ಅಸ್ಪೃಶ್ಯತೆ ಆಗಿರಲಿ ಅಥವಾ ಹತ್ತಿರ ಸೇರಿಸಿಕೊಳ್ಳದೇ ಇಷ್ಟು ಅಡಿ ದೂರ ಇರಬೇಕು ಎನ್ನುವುದಿರಬಹುದು. ಇಂದು ಇಂತಹ ನಿಯಮಗಳನ್ನು ಧಿಕ್ಕರಿಸುವುದೇ ಧರ್ಮವಾಗಿದೆ.

ಕರ್ನಾಟಕದ ಮಲೆನಾಡು ಭಾಗದಲ್ಲಿ ಕೋಳಿ ಕತ್ತರಿಸುವುದಿಲ್ಲ. ಕೋಳಿ ಮುರಿಯಿರಿ ಎನ್ನುತ್ತಾರೆ. ಅಂದರೆ ರೆಕ್ಕೆ ಹಿಡಿದು ಕುತ್ತಿಗೆಯನ್ನು ತಿರುಗಿಸುವ ವ್ಯವಸ್ಥೆ. ಇಲ್ಲಿ ಜಟ್ಕಾ ಎಂದರೆ ತಿಳಿದೇ ಇಲ್ಲ, ಕೇಳಿಯೂ ಇಲ್ಲ. ಇಂದಿಗೂ ಬುಡಕಟ್ಟು ಜನಾಂಗದವರು ಶಿಕಾರಿ ಮಾಡುವಾಗ ಪ್ರಾಣಿಯನ್ನು ಹೀಗೆಯೇ ವಧೆ ಮಾಡಬೇಕೆಂಬ ಯಾವ ನಿಯಮಗಳು ಇಲ್ಲ.

ಭಾರತ ದೇಶ ಸುಮಾರು ಒಂದು ಲಕ್ಷ ಅರವತ್ತು ಸಾವಿರ ಕೋಟಿ ರುಪಾಯಿಗಳಷ್ಟು ಆಹಾರವನ್ನು ರಫ್ತು ಮಾಡುತ್ತೆ. ಅದರಲ್ಲಿ ಸುಮಾರು ಇಪ್ಪತ್ತೈದು ಸಾವಿರ ಕೋಟಿ ರೂಗಳಷ್ಟು ಎಮ್ಮೆ ಮತ್ತು ದನದ ಮಾಂಸವನ್ನು ರಫ್ತು ಮಾಡುತ್ತೇವೆ. ಇದರಲ್ಲಿ ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳಿಗೆ ಮತ್ತು ಇಜಿಪ್ಟ್‌ನಂತ ಮುಸ್ಲಿಂ ರಾಷ್ಟ್ರಗಳಿಗೆ ಅದನ್ನು ಒದಗಿಸುತ್ತೇವೆ. ಹೀಗಿದ್ದಾಗ ನಮ್ಮ ವ್ಯಾಪಾರ ನಡೆಯಬೇಕೆಂದಿದ್ದರೆ, ಅದರಿಂದ ಲಾಭ ಪಡೆಯಬೇಕಿದ್ದರೆ, ಗ್ರಾಹಕರಿಗೆ ಬೇಕಾದಂತೆ ಮಾಂಸವನ್ನು ಒದಗಿಸುವುದು ನಮ್ಮ ವ್ಯವಹಾರಿಕ ಜ್ಞಾನವಾಗಿರುತ್ತದೆ.

ಇಂದು ಆಹಾರ ಪದಾರ್ಥಗಳಲ್ಲಿ ವಿವಿಧ ರೀತಿಯ ಗ್ರಾಹಕ ಗುಂಪುಗಳಿವೆ. ಇವುಗಳಲ್ಲಿ ವೀಗನ್ ಕೂಡ ಬೆಳೆಯುತ್ತಿರುವ ಒಂದು ಸೂಕ್ಷ ಆಹಾರ ಬಳಕೆಯ ಗುಂಪು. ಅವರಿಗೆ ಹಾಲು ಕೂಡ ದ್ರವ ರೂಪದ ಮಾಂಸ. ಅವರು ಯಾವುದೇ ಪ್ರಾಣಿಜನ್ಯ ಪದಾರ್ಥವನ್ನು ಬಳಸುವುದಿಲ್ಲ. ಅವರೊಂದಿಗೆ ವ್ಯವಹಾರ ಮಾಡಬೇಕೆಂದಿದ್ದರೆ ಅವರಿಗೆ ತಕ್ಕಂತೆ ಆಹಾರ ಪದಾರ್ಥಗಳನ್ನು ತಯಾರಿಸಿ ಪ್ರಮಾಣಪತ್ರದೊಂದಿಗೆ ಒದಗಿಸಬೇಕಾಗುತ್ತದೆ. ಹಾಗೆಯೇ ಆಹಾರದಲ್ಲಿ ಸುಮಾರು ಎಂಟು ರೀತಿಯ ಅಲರ್ಜಿಗಳಿವೆ. ಇದನ್ನೂ ಕೂಡ ಆಹಾರದ ಪ್ಯಾಕಿನ ಮೇಲೆ ನಮೂದಿಸತಕ್ಕದ್ದು. ವ್ಯಾಪಾರ ಬೇಕೆಂದಿದ್ದರೆ ಗ್ರಾಹಕರನ್ನು ತೃಪ್ತಿಪಡಿಸುವುದು ಅತ್ಯಂತ ಅವಶ್ಯಕ.

ನಮ್ಮಲ್ಲಿ ಕುರಿ ಮತ್ತು ಮೇಕೆಗಳನ್ನು ಸಾಕುವ ಸಮುದಾಯಗಳು ಮುಸಲ್ಮಾನ್ ಧರ್ಮದ ಕುರೇಶಿ ಸಮುದಾಯದೊಂದಿಗೆ ಅನ್ಯೋನ್ಯವಾದ ಸಂಬಂಧ ಬೆಳೆಸಿಕೊಂಡು ನೂರಾರು ವರ್ಷಗಳಿಂದ ಯಾವುದೇ ಸಮಸ್ಯೆಯಿಲ್ಲದೆ ವ್ಯವಹಾರ ಮಾಡಿಕೊಂಡುಬರುತ್ತಿದ್ದಾರೆ. ಸಾಮಾನ್ಯವಾಗಿ ಗ್ರಾಹಕರಿಂದ ಶೇ.65ರಷ್ಟು ಲಾಭ ರೈತರಿಗೆ ಈ ವ್ಯವಹಾರದಲ್ಲಿ ಸಲ್ಲುತ್ತಿದೆ. ಇದು ಬೇರೆ ಕೃಷಿ ಪದಾರ್ಥಗಳಿಗೆ ಅಪವಾದಾತ್ಮಕವಾಗಿದೆ. ಈ ಹಲಾಲ್ ವಿಷಯವನ್ನು ಈ ವ್ಯವಹಾರದಲ್ಲಿ ನೇರವಾಗಿ ತೊಡಗಿರುವವರು ಎಂದೂ ಕೇಳಿಯೂ ಇಲ್ಲ ಹೇಳಿಯೂ ಇಲ್ಲ.

ನಮ್ಮ ಭಾರತದಲ್ಲೀಗ ಪ್ರಾಣಿ ವಧೆ ಮಾಡಿ ಮಾಂಸ ಮಾರುವ ಸುಮಾರು ಮೂವತ್ತು ಸಾವಿರ ಅಂಗಡಿಗಳಿವೆ. ಇವುಗಳಲ್ಲಿ ಸುಮಾರು ನೂರಿಪ್ಪತ್ತು ಕೇಂದ್ರದ ಮತ್ತು ಸುಮಾರು ನಾಲ್ಕು ನೂರು ಅಂಗಡಿಗಳು ರಾಜ್ಯದ ಪರವಾನಗಿ ಪಡೆದಿವೆ. ಕೇವಲ ಮೂವತ್ತರಷ್ಟು ಮಾತ್ರ ಆಮದು ರಫ್ತಿಗೆ ಸಂಬಂಧಪಟ್ಟ ಅಪಿಡಾ ಸಂಸ್ಥೆಯಿಂದ ಪರವಾನಗಿ ಪಡೆದಿವೆ. ಈಗ ಕರ್ನಾಟಕ ರಾಜ್ಯ ಸರ್ಕಾರ ಪ್ರಾಣಿ ವಧೆ ಮಾಡುವ ಮೊದಲು ಸ್ಟನ್ನಿಂಗ್ ಮಾಡಿ ಪ್ರಾಣಿಗಳನ್ನು ಪ್ರಜ್ಞೆ ತಪ್ಪಿಸಬೇಕೆಂದು ಕಡ್ಡಾಯ ಮಾಡುತ್ತೇವೆ ಎನ್ನುತ್ತಿದೆ. ಹಲಾಲ್ ಮಾಡುವವರು ಮತ್ತು ಇತ್ತೀಚೆಗೆ ಶುರುವಾಗಿರುವ ಜಟ್ಕಾ ಅಂಗಡಿಯವರು ಸಹ ನಮಗೆ ಇದನ್ನು ಪಾಲನೆ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕಾರಣ ಐದು ಹತ್ತು ಪ್ರಾಣಿಗಳನ್ನು ವಧೆ ಮಾಡುವ ಸಾವಿರಾರು ಸಣ್ಣ ಘಟಕಗಳು ಈ ಪದ್ಧತಿಯನ್ನು ಅಳವಡಿಸಲು ಕಷ್ಟ ಸಾಧ್ಯ. ಮತ್ತು ಈ ನಿಯಮದಿಂದ ಇಡೀ ಮಾಂಸದ ಉದ್ಯಮ ನಾಲ್ಕು ಐದೋ ದೈತ್ಯ ಉದ್ಯಮಗಳ ಪಾಲಿಗೆ ಸೇರಿಕೊಳ್ಳಬಹುದು. ಕೆಲವರ್ಷಗಳ ಹಿಂದೆ ರಿಲಾಯನ್ಸ್ ಕಂಪೆನಿ ಅಂಬಾನಿ ಡಿಲೈಟ್ ಎಂಬ ಹೆಸರಿನಲ್ಲಿ ಮಾಂಸದ ಉದ್ಯಮಕ್ಕೆ ಇಳಿದಿತ್ತು. ಇಂದು ಅತ್ಯಂತ ಹೆಚ್ಚು ಕೋಳಿ ಮಾಂಸ ಮಾರಾಟ ಮಾಡುವವರು ಯಾವುದೋ ಶಿವಾಜಿನಗರದ ಮುಸ್ಲಿಂ ಅಂಗಡಿಯಲ್ಲ. ಪಾರ್ಸಿ ಕಮ್ಯೂನಿಟಿಗೆ ಸೇರಿದ ಗೋದ್ರೆಜ್ ಕಂಪೆನಿಯವರು.

ಯಾವುದೇ ದೈತ್ಯ ಕಂಪೆನಿ ಗ್ರಾಹಕರಿಗೆ ಬೇಕಾದಲ್ಲಿ ಒಂದೇ ಸೂರಿನಡಿ ಜಟ್ಕಾ, ಹಲಾಲ್, ಕೋಷರ್ ಯಾವುದು ಬೇಕಾದರು ಹಾಕಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ. ಮತ್ತೆ ಈ ಹಲಾಲ್ ಪ್ರಮಾಣಪತ್ರ ಹದಿನೈದು ಸಾವಿರದಿಂದ ಇಪ್ಪತ್ತು ಸಾವಿರಕ್ಕೂ ಸಿಗುತ್ತದೆ. ಸ್ಟನ್ನಿಂಗ್ ಮತ್ತು ಮುಸ್ಲಿಂ ಸಮುದಾಯವನ್ನು ಗುರಿಯಿಟ್ಟು ಮಾಡುವ ಕಾನೂನಿನಿಂದ ನಿಜವಾಗಿಯೂ ಮುಂದೆ ಲಾಭ ಪಡೆಯುವವರು ಯಾವುದೋ ದೈತ್ಯ ಕಂಪೆನಿ ಅಥವಾ ಒಂದು ಆಪ್ ಮೂಲಕ ಮಾಂಸ ಮಾರಾಟ ಮಾಡುವ ಸಂಸ್ಥೆಯಾಗಿರುತ್ತದೆ.

ಇನ್ನೊಂದೆಡೆ ಸರ್ಕಾರ ಮುಸ್ಲಿಂ ರಾಷ್ಟ್ರವಾದ ಯುಎಇಯಲ್ಲಿರುವ ಯಾವುದೇ ಸಂಸ್ಥೆ ಭಾರತದ ಸಂಸ್ಥೆಯಂತೆಯೆ ಭಾರತ ಸರ್ಕಾರದ ಜೊತೆ ವ್ಯವಹಾರ ಮಾಡಬಹುದೆಂದು ಒಪ್ಪಂದ ಮಾಡಿಕೊಂಡಿದೆ. ಅಂದರೆ ಯುಎಇ ಕಂಪೆನಿ ಭಾರತದ ಕಂಪೆನಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು. ಅಂದರೆ ಇನ್ನು ಮುಂದೆ ಭಾರತದ ಸುಮಾರು ಅರವತ್ತು ಲಕ್ಷ ಕೋಟಿ ಟೆಂಡರ್ ಇತರ ಸರ್ಕಾರಿ ಕೆಲಸಗಳನ್ನು ಭಾರತದ ದೇಶದವರಂತೆಯೇ ಯಾವುದೇ ವ್ಯತ್ಯಾಸವಿಲ್ಲದೇ ದುಬೈನಲ್ಲಿರುವ ಕಂಪೆನಿ ಗುತ್ತಿಗೆ ಪಡೆದುಕೊಳ್ಳಬಹುದು. ಮುಸ್ಲಿಂ ರಾಷ್ಟ್ರದಲ್ಲಿರುವ ಕಂಪೆನಿಗಳಿಗೆ ಸರ್ಕಾರ ಈ ರೀತಿ ವಿಶೇಷ ರಿಯಾಯಿತಿ ಕೊಡುತ್ತದೆ. ಆದರೆ ಇಲ್ಲಿಯೇ ಬದುಕಿರುವ ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಂ ಸಮುದಾಯದ ಮೇಲೆ ಮತಗಳ ಧ್ರುವೀಕರಣದ ಕಾರಣಕ್ಕಾಗಿ ಪ್ರಹಾರ ಮಾಡಲಾಗುತ್ತದೆ.

ಆರ್ಥಿಕ ತಜ್ಞ ಅರವಿಂದ್ ಸುಬ್ರಹ್ಮಣ್ಯಂ ಅವರು ಇತ್ತೀಚೆಗೆ ಬರೆದ ಲೇಖನದಲ್ಲಿ ಶ್ರೀಲಂಕಾದ ಇಂದಿನ ಅಧೋಗತಿಗೆ ಆರ್ಥಿಕ ಕಾರಣಗಳಲ್ಲ, ಅವು ಸಾಮಾಜಿಕ ಕಾರಣಗಳು ಎನ್ನುತ್ತಾರೆ. ಸರ್ಕಾರ ಒಂದೇ ಧರ್ಮದವರನ್ನು ತುಷ್ಟೀಕರಿಸುತ್ತಾ ಇತರರನ್ನು ಶಿಕ್ಷಿಸುತ್ತಾ ಮತ್ತು ಒಂದೇ ಭಾಷೆಯನ್ನು ಇಡೀ ದೇಶಕ್ಕೆ ಹೇರುತ್ತಾ ಬಂದ ಪರಿಣಾಮವದು ಎನ್ನುತ್ತಾರೆ. ಇಂದು ಭಾರತ ಇದೇ ಹಾದಿಗೆ ಇಳಿದಿರುವುದಂತು ಸ್ಪಷ್ಟವಾಗುತ್ತಿದೆ. ನಾಗರಿಕ ಸಮಾಜ ಮೌನವಾಗಿ ಉಳಿದರೆ ನಮಗೂ ಕೂಡ ಅದೇ ಗತಿ ಬರಬಹುದೇನೋ?

ಕೆ.ಸಿ. ರಘು

ಕೆ.ಸಿ. ರಘು
ಕೆ.ಸಿ. ರಘು ಅವರು ನಾಡಿನ ಹೆಸರಾಂತ ಆಹಾರ ತಜ್ಞರು, ಅನೇಕ ವರ್ಷಗಳ ಕಾಲ ‘ಫುಡ್ ಅಂಡ್ ನ್ಯೂಟ್ರೀಷನ್ ವರ್ಲ್ಡ್’ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಆಹಾರ ಸಂಸ್ಕೃತಿಗಳ ಹಿಂದಿರುವ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಆಯಾಮಗಳನ್ನು ಕುರಿತು ಅಂಕಣಗಳನ್ನು ಬರೆಯುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: Explainer: ಹಲಾಲ್ ಹಾಗೆಂದರೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...