Homeಮುಖಪುಟಓದುಗರ ಪತ್ರ: ಅಯೋಧ್ಯೆಯಲ್ಲಿ ಶ್ರೀರಾಮನಿದ್ದ ಎಂಬುದಕ್ಕೆ ಕೆಲವು ಪ್ರಶ್ನೆಗಳು

ಓದುಗರ ಪತ್ರ: ಅಯೋಧ್ಯೆಯಲ್ಲಿ ಶ್ರೀರಾಮನಿದ್ದ ಎಂಬುದಕ್ಕೆ ಕೆಲವು ಪ್ರಶ್ನೆಗಳು

ಅಹಿಲ್ಯಾಬಾಯಿ ಒಟ್ಟು 102 ಹಿಂದೂ ಮಂದಿರಗಳನ್ನು ಕಟ್ಟಿಸಿದ್ದಾಳೆ ಅಥವಾ ಜೀರ್ಣೋದ್ಧಾರ ಮಾಡಿಸಿದ್ದಾಳೆ. ಆದರೆ ರಾಮ ದೇವಾಲಯ ಏಕೆ ಕಟ್ಟಿಸಲಿಲ್ಲ?

- Advertisement -
- Advertisement -

ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸವಾಗಿದೆ. ಬಾಬ್ರಿ-ರಾಮಮಂದಿರ ವಿವಾದಕ್ಕೆ ಸುಪ್ರೀಂ ಕೋರ್ಟ್ ಒಮ್ಮುಖ ತೀರ್ಪುಕೊಟ್ಟು ಪೂರ್ಣ ವಿರಾಮ ಹಾಕಿದ್ದರೂ,  ಅದೇ ಸುಪ್ರೀಂಕೋರ್ಟ್ ಅಯೋಧ್ಯೆಯಲ್ಲಿ ಬಾಬ್ರಿ ಸ್ಥಳದಲ್ಲಿ ಮೊದಲು ರಾಮಮಂದಿರ ಇತ್ತು ಅನ್ನುವುದಕ್ಕೆ ಯಾವುದೇ ಪುರಾವೆ ದೊರೆತಿಲ್ಲ, ಆದರೆ ಕೇವಲ ಬಹುಸಂಖ್ಯಾತ ಧರ್ಮದವರ ಭಾವನೆಯನ್ನು ಗೌರವಿಸಿ ಹಿಂದೂ ಸಂಘಟನೆಯ ಪರವಾಗಿ ತೀರ್ಪು ಕೊಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ.

ಈ ಸಂಧರ್ಭದಲ್ಲಿ ಕೆಲವು ಐತಿಹಾಸಿಕ  ಸಂಗತಿಗಳನ್ನು ವಿಮರ್ಶಿಸಿದರೆ ಅಯೋಧ್ಯೆಯಲ್ಲಿ ಬಾಬ್ರಿ ಕಟ್ಟುವುದಕ್ಕೆ ಮೊದಲು ಅಲ್ಲಿ ಯಾವುದೇ ರಾಮಮಂದಿರ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ರಾಮ ಎಲ್ಲಾ ಭಾರತಿಯರಿಗೆ ಅಷ್ಟು ಪೂಜನೀಯ ಆಗಿದ್ದರೆ ಯಾವುದೇ ಮೇಲ್ಜಾತಿಗೆ ಶ್ರೀರಾಮ ಯಾಕೆ ಕುಲದೈವ ಆಗಿಲ್ಲ?  ಶ್ರೀರಾಮ ತಮ್ಮ ಕುಲದೈವ ಅನ್ನುವ ಒಂದೇ ಒಂದು ಜಾತಿ /ಕುಟುಂಬ ಭಾರತದಲ್ಲಿ ಇರಲಿಕ್ಕಿಲ್ಲ. ಅದಕ್ಕಿಂತ ಮುಖ್ಯವಾದ ವಿಷಯವೆಂದರೆ ಭಾರತದಲ್ಲಿ 2000 ವರ್ಷ ಹಳೆಯ ಶಿವ, ವಿಷ್ಣು, ದುರ್ಗೆ ಷಣ್ಮುಖ ಈ ದೇವರುಗಳ ದೇವಸ್ಥಾನಗಳಿವೆ (ಇವೆಲ್ಲಾ ಮೂಲತಃ ಬೌದ್ಧ ವಿಹಾರಗಳಾಗಿದ್ದವು ಎನ್ನುವುದು ಬೇರೆ ವಿಷಯ). ಆದರೆ 300 ವರ್ಷಕ್ಕಿಂತ ಹೆಚ್ಚು ಹಳೆಯ ಒಂದೇ ಒಂದು ರಾಮನ ದೇವಸ್ಥಾನ ಭಾರತದಲ್ಲಿ ಎಲ್ಲಿಯೂ ಇಲ್ಲ!  ರಾಮೇಶ್ವರದಲ್ಲಿಯೂ ಅಲ್ಲಿಯ ದೇವಸ್ಥಾನದ ಗೋಡೆಯ ಮೇಲೆ ಒಂದೆರಡು ರಾಮನ ಶಿಲ್ಪಾ ಇದೆಯೇ ಹೊರತು ಅಲ್ಲಿಯೂ ಮೂಲ ಗರ್ಭಗುಡಿಯಲ್ಲಿ ಪೂಜೆಗೊಳ್ಳುವುದು ರಾಮೇಶ್ವರಲಿಂಗ ಅರ್ಥಾತ್ ಶಿವಲಿಂಗ. ಹಾಗಾದರೆ ಸಾವಿರಾರು ವರ್ಷಗಳಿಂದ ರಾಮನ ಮಂದಿರ ಅಯೋಧ್ಯೆಯಲ್ಲಿ ಇತ್ತು ಅನ್ನುವುದು ಯಾವ ಆಧಾರದಲ್ಲಿ?

ಇತ್ತೀಚೆಗೆ ರಾಜಕೀಯ ಕಾರಣಕ್ಕಾಗಿ ಬ್ರಾಹ್ಮಣರು ರಾಮನ ಫೋಟೋ ತಮ್ಮ ಮನೆಯಲ್ಲಿ ಇಡುತ್ತಾರೆ. ಆದರೆ ಮೊದಲೆಲ್ಲಾ ಬ್ರಾಹ್ಮಣರು ರಾಮನ ಫೋಟೋ ತಮ್ಮ ಮನೆಯಲ್ಲಿ ಇಡುತ್ತಲೇ ಇರಲಿಲ್ಲ, ಯಾಕೆಂದರೆ ಬ್ರಾಹ್ಮಣನಾದ ರಾವಣನನ್ನು ಕೊಂದ ರಾಮನಿಗೆ ಬ್ರಹ್ಮಹತ್ಯೆ ದೋಷ ತಾಗಿರುವುದರಿಂದ ಅವನು ಪೂಜೆಗೆ ಯೋಗ್ಯನಲ್ಲವಂತೆ. ಜತೆಗೆ ರಾಮನ ಫೋಟೋ ಮನೆಯಲ್ಲಿ ಇಡುವುದರಿಂದ ಪುರುಷರಿಗೆ ಪತ್ನಿವಿಯೋಗವಾಗುತ್ತದೆ ಅಥವಾ ಮಹಿಳೆಯರಿಗೆ ಪತಿ ದೂರವಾಗುತ್ತಾನೆ ಎಂಬ ಮೂಢನಂಬಿಕೆ ಬ್ರಾಹ್ಮಣರಲ್ಲಿ ಆಳವಾಗಿ ಇತ್ತು.  ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರು ರಾಮನ ಫೋಟೋದ ಬದಲಿಗೆ ಪರಶುರಾಮನ ಫೋಟೋ ಹೆಚ್ಚಾಗಿ ಮನೆಯಲ್ಲಿ ಇಡುತ್ತಾರೆ, ಯಾಕೆಂದರೆ ಪರಶುರಾಮ ಬ್ರಾಹ್ಮಣ ಆದರೆ ರಾಮ ಶೂದ್ರ. ಉತ್ತರ ಪ್ರದೇಶದ ಬ್ರಾಹ್ಮಣರು ಈಗ ಕಟ್ಟಿರುವ ಸೇನೆಯ ಹೆಸರು ‘ಪರಶುರಾಮ ಸೇನೆ’ ಎಂದು!  ಮೊನ್ನೆ ಕಾನ್ಪುರದ ಕುಖ್ಯಾತ ಬ್ರಾಹ್ಮಣ ಡಾನ್ ವಿಕಾಸ್ ದುಭೆ ಪೊಲೀಸ್ ಎನ್‌ಕೌಂಟರ್ ನಲ್ಲಿ ಸತ್ತಾಗ ಇದೇ ಪರಶುರಾಮ ಸೇನೆಯು ಯೋಗಿ ಆದಿತ್ಯನಾಥ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ ಮಾಡಿತ್ತು. ಈಗಲಾದರೂ ಜನರಿಗೆ ಅರ್ಥವಾಗಿರಬೇಕು- ರಾಮ ಕೇವಲ ಒಂದು ರಾಜಕೀಯ ದಾಳ ಅಷ್ಟೇ, ರಾಮನಲ್ಲಿ ನಿಜವಾದ ಭಕ್ತಿ ಯಾರಿಗೂ ಇಲ್ಲ!

ವಾರಣಾಸಿಯಲ್ಲಿ ಔರಂಗಜೇಬ ಹಾಳುಗೆಡುವಿದ್ದ ಕಾಶಿ ವಿಶ್ವನಾಥ ಮಂದಿರವನ್ನು ಅಹಿಲ್ಯಾಬಾಯಿ ಹೊಲ್ಕರ್ ಎಂಬ ಮಾಳವಾ ರಾಜ್ಯದ ರಾಣಿ (1725 to 1795) ಮರುನಿರ್ಮಾಣ ಮಾಡಿದಳು. ಮಧುರೆಯಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನದ ಮರು ನಿರ್ಮಾಣವನ್ನೂ ಅವಳೇ ಮಾಡಿಸಿದಳು, ಅಯೋಧ್ಯೆಯಲ್ಲಿ ಒಂದು ದೊಡ್ಡ ಧರ್ಮಛತ್ರ ಸಹಾ ಕಟ್ಟಿಸಿದಳು. ಆದರೆ ಅದೇ ಅಯೋಧ್ಯೆಯಲ್ಲಿ ಅವಳು ರಾಮನಮಂದಿರ ಯಾಕೆ ಕಟ್ಟಿಸಲಿಲ್ಲ? ಅವಳು ವಾರಣಾಸಿಯಲ್ಲಿ ಮಸೀದಿಗೆ ತಾಗಿಯೇ ಕಾಶಿ ವಿಶ್ವನಾಥ ಮಂದಿರ ಕಟ್ಟಿಸಿದಳು. ಮಥುರೆಯಲ್ಲಿಯೂ ಮಸೀದಿಯ ಗೋಡೆಗೆ ತಾಗಿಯೇ ಶ್ರೀಕೃಷ್ಣ ಜನ್ಮಸ್ಥಾನ ಮಂದಿರ ಅಹಿಲ್ಯಾ ಬಾಯಿ ಕಟ್ಟಿಸಿದಳು (ಇವೆರಡೂ ಕ್ಷೇತ್ರಗಳನ್ನು ನಾನು ಉತ್ತರ ಪ್ರದೇಶದಲ್ಲಿ ಉದ್ಯೋಗದಲ್ಲಿದ್ದಾಗ ಸ್ವತಃ ನೋಡಿದ್ದೇನೆ). ಹಾಗಿರುವಾಗ ಅಯೋಧ್ಯೆಯಲ್ಲಿಯೂ ಅವಳು ಬಾಬ್ರಿ ಮಸೀದಿಯ ಗೋಡೆಗೆ ತಾಗಿ ರಾಮಮಂದಿರ ಯಾಕೆ ಕಟ್ಟಿಸಲಿಲ್ಲ ಗೊತ್ತೇ?  ಯಾಕೆಂದರೆ ಅಯೋಧ್ಯೆಯಲ್ಲಿ ಬಾಬ್ರಿ ಸ್ಥಳದಲ್ಲಿ ಯಾವುದೇ ಹಳೆಯ ಹಿಂದೂ ಮಂದಿರ ಇರಲಿಲ್ಲ ಎಂದು ಅಹಿಲ್ಯಾಬಾಯಿಗೆ ಅಲ್ಲಿಯ ಜನರು ಮೊದಲೇ ತಿಳಿಸಿದ್ದರು. ಆದರೆ ವಾರಣಾಸಿಯಲ್ಲಿ ಮತ್ತು ಮಥುರಾದಲ್ಲಿ ಮಸೀದಿಯ ಸ್ಥಳದಲ್ಲಿ ಹಳೆಯ ಹಿಂದೂ ದೇವಸ್ಥಾನಗಳು ಇದ್ದವೆಂದು ಅಲ್ಲಿಯ ಜನರು ಖಚಿತಪಡಿಸಿದ್ದರು. ಹಾಗಾಗಿ ಕಾಶಿ ಮತ್ತು ಮಥುರಾದಲ್ಲಿ ಅಹಿಲ್ಯಾ ಬಾಯಿ ಹೊಲ್ಕರ್ ಆ ಎರಡೂ ಮಸೀದಿಗಳಿಗೆ ತಾಗಿಯೇ ಹಿಂದೂ ಮಂದಿರಗಳನ್ನು ಕಟ್ಟಿಸಿದಳು. ಆದರೆ ಅಯೋಧ್ಯೆಯಲ್ಲಿ ಬಾಬ್ರಿ ಸ್ಥಳದಲ್ಲಿ ಯಾವುದೇ ಹಿಂದೂ ಮಂದಿರ ಇದ್ದ ಬಗ್ಗೆ ಅವಳಿಗೆ ಯಾವುದೇ ಸಾಕ್ಷ್ಯ ಸಿಗಲಿಲ್ಲ, ಅದಕ್ಕೆ ಅವಳು ಅಲ್ಲಿ ಯಾವುದೇ ರಾಮಮಂದಿರ ಕಟ್ಟಿಸಲಿಲ್ಲ. ಅಹಿಲ್ಯಾಬಾಯಿ ಒಟ್ಟು 102 ಹಿಂದೂ ಮಂದಿರಗಳನ್ನು ಕಟ್ಟಿಸಿದ್ದಾಳೆ ಅಥವಾ ಜೀರ್ಣೋದ್ಧಾರ ಮಾಡಿಸಿದ್ದಾಳೆ. ಹಾಗಾಗಿ ಅಯೋಧ್ಯೆಯಲ್ಲಿ ಒಂದು ಮಂದಿರ ಕಟ್ಟಿಸುವುದು ಅವಳಿಗೆ ದೊಡ್ಡ ವಿಷಯವಾಗಿರಲಿಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಅಹಿಲ್ಯಾಬಾಯಿ ಕಾಶಿಯಲ್ಲಿ ಮತ್ತು ಮಥುರೆಯಲ್ಲಿ ಮಸೀದಿಗೆ ತಾಗಿ ಹಿಂದೂ ದೇವಸ್ಥಾನ ಕಟ್ಟಿಸುವಾಗ ಆ ಪ್ರದೇಶದ ಆಡಳಿತ ಇದ್ದದ್ದು ಮುಸ್ಲಿಂ ನವಾಬರ ಕೈಯಲ್ಲಿ!

ಅಹಿಲ್ಯಾಬಾಯಿ ಹೊಲ್ಕರ್

ಹನುಮಾನ್ ಚಾಲೀಸಾ ಮತ್ತು ರಾಮಚರಿತ ಮಾನಸ ಕಾವ್ಯಗಳನ್ನು ಬರೆದಿದ್ದು ಗೋಸ್ವಾಮಿ ತುಳಸೀದಾಸ. ಅವನ ಜೀವಿತಾವಧಿ 112 ವರ್ಷ (1511-1623). ಮೀರ್ ಬಾಖಿಯು 1528 ಇಸ್ವಿಯಲ್ಲಿ ಬಾಬ್ರಿ ಮಸೀದಿ ಕಟ್ಟುವಾಗ ತುಳಸೀದಾಸ 18 ವರ್ಷದ ಯುವಕ. ಆಗ ಅವನು ವಾರಣಾಸಿಯಲ್ಲಿ ಜೀವಿಸುತ್ತಿದ್ದ. ವಾರಣಾಸಿ ಅಯೋಧ್ಯೆಯಿಂದ ಕೇವಲ 180 ಕಿಮಿ ದೂರ ಆಷ್ಟೇ. ಅಯೋಧ್ಯೆಯಲ್ಲಿ ಮೊದಲು ಹಳೆಯ ರಾಮಮಂದಿರ ಇದ್ದಿದ್ದು ನಿಜವೇ ಆಗಿದ್ದರೆ ಹಾಗೂ ಅದನ್ನು ಮೀರ್ ಬಾಖಿ ಕೆಡುವಿದ್ದು ನಿಜವೇ ಆಗಿದ್ದರೆ ರಾಮಭಕ್ತ ತುಳಸಿದಾಸ 1528 ರಲ್ಲಿ ವೈದಿಕರ ಪಡೆ ಕಟ್ಟಿಕೊಂಡು ಅಯೋಧ್ಯೆಗೆ ಹೋಗಿ ಯಾಕೆ ಪ್ರತಿಭಟಿಸಲಿಲ್ಲ?  ಅಥವಾ ಅವನ ಯಾವುದೇ ಕೃತಿಯಲ್ಲಿ ಈ ರಾಮಜನ್ಮಭೂಮಿಯ ಒಂದೇ ಒಂದು ಉಲ್ಲೇಖ ಯಾಕಿಲ್ಲ?  112 ವರ್ಷ ಜೀವಿಸಿದ್ದ ತುಳಸಿದಾಸ ಒಮ್ಮೆಯೂ ಅಯೋಧ್ಯೆಗೆ ಯಾಕೆ ಹೋಗಲಿಲ್ಲ?  ಬಾಬರನ ನಂತರ ಅವನ ಮಗ ಹುಮಾಯೂನ್ ತದನಂತರ ಅಕ್ಬರ ಮೊಘಲ ರಾಜ್ಯ ಆಳುವಾಗಲೂ ತುಳಸಿದಾಸ ವಾರಣಾಸಿಯಲ್ಲಿಯೇ ಇದ್ದ. ಆದರೆ ಅವನು ಯಾವುದೇ ಮೊಘಲ ರಾಜರಲ್ಲಿ ಹೋಗಿ ತನ್ನ ಆರಾಧ್ಯ ದೇವರಾದ ರಾಮನ ಜನ್ಮಸ್ಥಾನದ ಮಂದಿರ ಕೆಡುವಿ ಅನ್ಯಾಯವಾಗಿದೆ, ಅದನ್ನು ಸರಿಪಡಿಸಿಬೇಕು ಎಂದು ಫಿರ್ಯಾದಿ ಕೊಡಲಿಲ್ಲ! ಅಕ್ಬರ ಎಲ್ಲಾ ಧರ್ಮಗಳನ್ನು ಸಮಭಾವದಿಂದ ನೋಡುತ್ತಿದ್ದ. ಇದರ ಅರ್ಥ ಅಯೋಧ್ಯೆಯಲ್ಲಿ ಆಗ ರಾಮ ಮಂದಿರ ಇರಲೇ ಇಲ್ಲ. ತುಳಸಿದಾಸ ಬದುಕಿದ್ದಾಗ ಮೀರ್ ಬಾಕೀ ಯಾವುದೇ ಹಳೆಯ ರಾಮಮಂದಿರ ಕೆಡುವಲೇ ಇಲ್ಲ. ಹಿಂದೆ ಎಂದೋ ವೈದಿಕರು ಕೆಡುವಿ ಹೋಗಿದ್ದ “ಸಾಕೇತ್” ಬೌದ್ಧ ವಿಹಾರದ ಸ್ಥಳದಲ್ಲಿ ಅದೇ ಹಳೆಯ ವಿಹಾರದ ಅವಶೇಷ ಬಳಸಿ ಮೀರ್ ಬಾಕೀ ಮಸೀದಿ ಕಟ್ಟಿದ್ದು ನಿಜ ಅಷ್ಟೇ ಎನ್ನುತ್ತಾರೆ ನಿಷ್ಪಕ್ಷ ಸಂಶೋಧಕರು.

ತುಳಸಿದಾಸನಿಗಿಂತ ಸ್ವಲ್ಪ ಮೊದಲು ಸಂತ ಕಬೀರದಾಸ (1440-1518) ಅದೇ ವಾರಣಾಸಿಯಲ್ಲಿ ಜೀವಿಸಿದ್ದ. ಅವನೂ ಅಪ್ಪಟ ರಾಮಭಕ್ತ. ಆದರೆ ಅವನೂ ಎಂದೂ ಅಯೋಧ್ಯೆಗೆ ಭೇಟಿ ಕೊಟ್ಟ ಐತಿಹ್ಯ ಇಲ್ಲ. ಸಂತ ಕಬೀರನ ಗುರು ಸಂತ ರಾಮಾನಂದರು ಕಬೀರನಿಗೆ ರಾಮಭಕ್ತಿಯ ದೀಕ್ಷೆ ಕೊಟ್ಟಿದ್ದು. ಆದರೆ ಈ ಸಂತ ರಾಮಾನಂದರು ಸಹಾ ಹತ್ತಿರವೇ ಇದ್ದ ಅಯೋಧ್ಯೆಗೆ ಎಂದೂ ಭೇಟಿ ಕೊಡಲಿಲ್ಲ! ಹಾಗಾಗಿ ಅಯೋಧ್ಯೆಯಲ್ಲಿ ಮೊದಲು ರಾಮಮಂದಿರ ಇರಲೇ ಇಲ್ಲ ಎಂಬುದಕ್ಕೆ ಮೀರ್ ಬಾಖಿಗಿಂತ ಮುಂಚೆ ಜೀವಿಸಿದ್ದ ಈ ಎಲ್ಲಾ ರಾಮಭಕ್ತ ಸಂತರೇ ಸಾಕ್ಷಿ.

ಭಕ್ತಿಪಂಥ ಶುರುವಾಗಿದ್ದು 11 ನೇ ಶತಮಾನದಲ್ಲಿ. ನಮ್ಮ ದೇಶದ ಎಲ್ಲಾ ಭಕ್ತಿ ಪಂಥದ ಸಂತರು ಹುಟ್ಟಿದ್ದು ಹನ್ನೊಂದನೆ ಶತಮಾನದ ಆನಂತರ. ಮೊಘಲರು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕಟ್ಟಿಸಿದ್ದು 1528 ರಲ್ಲಿ. ಅದಕ್ಕೆ ಮುಂಚಿನ “ಭಕ್ತಿ ಪಂಥದ ಬೆಳವಣಿಗೆಯ 500 ವರ್ಷದ ಇತಿಹಾಸದಲ್ಲಿ” ಯಾವೊಬ್ಬ ವೈದಿಕ ಸಂತನೂ ಅಯೋಧ್ಯೆಗೆ ಭೇಟಿ ಕೊಟ್ಟ ಒಂದೂ ದಾಖಲೆ ಸಿಗುತ್ತಿಲ್ಲ! ಇದರ ಅರ್ಥ ಅಯೋಧ್ಯೆಯಲ್ಲಿ ಯಾವುದೇ ಹಳೆಯ ರಾಮಮಂದಿರ ಮೂಲದಲ್ಲಿ ಇರಲೇ ಇಲ್ಲ. ಕಾಲ್ಪನಿಕ ವ್ಯಕ್ತಿಗಳಿಗೆ “ನಿಜವಾದ ಜನ್ಮಸ್ಥಾನ” ಇರಲು ಎಂದಾದರೂ ಸಾಧ್ಯವೇ?  ಹಾಗಾಗಿ 10ನೇ ಶತಮಾನದಿಂದ 18ನೇ ಶತಮಾನದ ನಡುವೆ ಭಕ್ತಿ ಪಂಥದ ಯಾವುದೇ ಉತ್ತರ ಭಾರತೀಯ ಅಥವಾ ದಕ್ಷಿಣ ಭಾರತೀಯ ಸಂತ ಅಯೋಧ್ಯೆಗೆ ಭೇಟಿ ಕೊಡಲಿಲ್ಲ. ಸ್ವತಃ ಶಂಕಾರಾಚಾರ್ಯರು ಉತ್ತರ ಭಾರತದ ಎಲ್ಲಾ ಪವಿತ್ರ ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದರು. ಅವರು ಕಾಶಿಯಿಂದ ಕೇದಾರನಾಥಕ್ಕೆ ಹೋಗುವ ಹಾದಿಯಲ್ಲಿಯೇ ಅಯೋಧ್ಯೆ ಇದ್ದದ್ದು. ಆದರೂ ಅವರು ಅಯೋಧ್ಯೆಯ ಯಾವುದೇ ಮಂದಿರಕ್ಕೆ ಭೇಟಿ ಕೊಟ್ಟಿಲ್ಲ. ರಾಮನುಜಾಚಾರ್ಯರೂ ಉತ್ತರ ಭಾರತದ ಎಲ್ಲಾ ಪವಿತ್ರ ಕ್ಷೇತ್ರಕ್ಕೆ ಭೇಟಿ ಕೊಟ್ಟ ಉಲ್ಲೇಖ ಅವರ ಜೀವನ ಚರಿತ್ರೆಯಲ್ಲಿ ಇದೆ. ಅವರೂ ಕಾಶಿಗೆ ಭೇಟಿ ಕೊಟ್ಟು ನಂತರ ಹಿಮಾಚಲ ಪ್ರದೇಶ-ಉತ್ತರಾಖಂಡದ ಪವಿತ್ರ ಕ್ಷೇತ್ರಗಳಿಗೆ ಭೇಟಿ ಕೊಡುವಾಗ ದಾರಿಯಲ್ಲಿಯೇ ಇದ್ದ ಅಯೋಧ್ಯೆಗೆ ಭೇಟಿ ಕೊಡಲಿಲ್ಲ. ರಾಮನುಜರು ವೈಷ್ಣವರಾದರೂ ಅವರ ಆರಾಧ್ಯ ದೈವ ವಿಷ್ಣುವಿನ ಅವತಾರವಾದ ರಾಮನ ಜನ್ಮಸ್ಥಳಕ್ಕೆ ಅದೇ ದಾರಿಯಲ್ಲಿ ಹೋಗುವಾಗಲೂ ಅವರು ಅಯೋಧ್ಯೆಗೆ ಭೇಟಿಕೊಡದೇ ಇದ್ದಿದ್ದು ಯಾಕೆ? ಯಾಕೆಂದರೆ ಆಗೆಲ್ಲಾ ರಾಮ ಜನ್ಮಸ್ಥಾನದ ಐತಿಹ್ಯ ಪ್ರಚಲಿತ ಇರಲೇ ಇಲ್ಲ.  ಬ್ರಿಟಿಷರು ಬಂದ ನಂತರ ಈ ರಾಮ ಜನ್ಮಸ್ಥಳದ ಐತಿಹ್ಯ ಹುಟ್ಟಿದ್ದಿರಬೇಕು.

ರಾಮಾಯಣ ಮಹಾಭಾರತ ಸಹಿತ ಹಿಂದೂ ಪುರಾಣಗಳೆಲ್ಲಾ ಇರುವುದು ಸಂಸ್ಕೃತ ಭಾಷೆಯಲ್ಲಿ ಹಾಗೂ ನಾಗರಿ ಲಿಪಿಯಲ್ಲಿ.  ಆದರೆ ಅಶೋಕನ ಕಾಲಕ್ಕೆ ಮುಂಚೆ ಈ ಸಂಸ್ಕೃತ ಭಾಷೆಯು ಸರಿಯಾದ ವ್ಯಾಕರಣವಿಲ್ಲದ ಒಂದು ಅರೆಬೆಂದ ಮೌಖಿಕ ಭಾಷೆ ಮಾತ್ರವಾಗಿತ್ತು. ಅಶೋಕನ ನಂತರ ‘ಪಾಣಿನಿ’ ಎಂಬವನು ಸಂಸ್ಕೃತಕ್ಕೆ ವ್ಯಾಕರಣ ರಚಿಸಿದ್ದು ಹಾಗೂ ಆನಂತರ ಅದನ್ನು ಬರೆಯಲು ದೇವನಾಗರಿ ಲಿಪಿ ಅಳವಡಿಸಿದ್ದು.  ಅದಕ್ಕೆ ಮುಂಚೆ 500 ವರ್ಷಗಳ ಕಾಲ ಭಾರತದಲ್ಲಿ ಕೇವಲ ಬ್ರಾಹ್ಮಿ ಲಿಪಿ ಮಾತ್ರ ಪ್ರಚಲಿತವಾಗಿತ್ತು ಹಾಗೂ ವಿದ್ವಾಂಸರು ಮತ್ತು ಸಂತರು ಕೇವಲ ಪಾಲಿ ಭಾಷೆ ಅಥವಾ ಪ್ರಾಕೃತ ಗುಂಪಿನ ಭಾಷೆಗಳನ್ನು ಮಾತ್ರ ಬಳಸುತ್ತಿದ್ದರು, ಮತ್ತು ಅವನ್ನು ಬರೆಯಲು ಕೇವಲ ಬ್ರಾಹ್ಮಿ ಲಿಪಿಯಲ್ಲಿ ಮಾತ್ರ ಬಳಸುತ್ತಿದ್ದರು.  ವ್ಯಾಕರಣವಿಲ್ಲದ ಮೌಖಿಕ ಭಾಷೆಯಾದ ಸಂಸ್ಕೃತದಲ್ಲಿ ದೊಡ್ಡ ದೊಡ್ಡ ವೇದ ಪುರಾಣಗಳನ್ನು 4000 ವರ್ಷಗಳ ಹಿಂದೆಯೇ ರಚಿಸಲಾಗಿತ್ತು ಎಂಬುದು ಶುದ್ಧ ಕಾಲ್ಪನಿಕ. ವೈದಿಕ ಪುರಾಣಗಳೆಲ್ಲಾ ಸ್ವತಂತ್ರ ರಚನೆಗಳಾಗಿರದೆ ಅವು ಬೌದ್ಧ ಜಾತಕ ಕಥೆ ಮತ್ತು ಜೈನ ಪುರಾಣಗಳಿಂದ ಸ್ಪೂರ್ತಿಗೊಂಡವುಗಳು. ಬಹುಶ ಇವುಗಳನ್ನು 2200 ವರ್ಷಗಳ ಹಿಂದೆ ಮೌರ್ಯ ವಂಶದ ಕೊನೆಯ ಬೌದ್ಧ ಅರಸ ಬೃಹದ್ರಥನನ್ನು ಮೊಸದಿಂದ ಕೊಂದು ಅವನ ರಾಜ್ಯವನ್ನು ಕೈವಶ ಮಾಡಿಕೊಂಡ ವಂಚಕ ಬ್ರಾಹ್ಮಣ ಮಂತ್ರಿ ಪುಷ್ಯಮಿತ್ರ ಶುಂಗನ ಕಾಲದಲ್ಲಿ ಬರೆದವುಗಳಾಗಿರಬಹುದು.

ರಾಮಾಯಣವು ಕಾಲ್ಪನಿಕ ಕಥೆಯಲ್ಲ, ಅದು ನಿಜವಾಗಿ ನಡೆದಿದೆ ಎನ್ನುವುದಕ್ಕೆ ವೈದಿಕರು ಕೊಡುವ ಪುರಾವೆಯೆಂದರೆ ಶ್ರೀಲಂಕಾ ಮತ್ತು ಭಾರತವನ್ನು ಜೋಡಿಸಿರುವ ಸಮುದ್ರ ಸೇತು. ಆದರೆ ಅದನ್ನು ಪ್ರತ್ಯಕ್ಷ ನೋಡಿದವನಿಗೆ ಮಾತ್ರ ಗೊತ್ತಾಗುತ್ತದೆ – ಇಂತಹಾ ಭೀಕರ ಸಮುದ್ರದ ನಡುವೆ ಅಷ್ಟೊಂದು ಆಳದಲ್ಲಿ 35 ಮೈಲಿ ಸೇತುವೆ ಕಟ್ಟಲು ಮಾನವನಿಂದ ಅಥವಾ ಆದಿಮಾನವ ವಾನರಗಳಿಂದ ಸಾಧ್ಯವೇ ಇಲ್ಲ ಎಂದು. ವಿಜ್ಞಾನಿಗಳ ಪ್ರಕಾರ ಭಾರತ-ಶ್ರಿಲಂಕಾ ನಡುವೆ ಇರುವ ಈ ಸೇತು ಸುಮಾರು 5 ಕೋಟಿ ವರ್ಷಗಳ ಹಿಂದೆ ಪ್ರಾಕೃತಿಕವಾಗಿ ಖಂಡಾಂತರ ಚಲನೆ (ಕಾಂಟಿನೆಂಟಲ್ ಡ್ರಿಫ್ಟ್) ಕಾಲದಲ್ಲಿ ರಚನೆಯಾದವುಗಳು. ಹಾಗಾಗಿ ಐದು ಕೋಟಿ ವರ್ಷಗಳ ಹಿಂದೆ ಈ ಪ್ರಾಕೃತಿಕ ಸೇತುವೆಯ ಮೇಲೆ ಬಹುಶ ಡೈನೋಸಾರ್ ಗಳು ನಡೆದಾಡಿರಬಹುದು. ಅಯೋಧ್ಯೆಯಲ್ಲಿ ಗಾರ್ಗೀ (ಸರೆಯೂ) ಎಂಬ ಸಣ್ಣ ನದಿ ಹರಿಯುತ್ತದೆ. ಶ್ರೀರಾಮ ಮತ್ತು ವಾನರರು ಆ ನದಿಯ ಇಕ್ಕೆಲೆಗಳಲ್ಲಿ ವಾಸಿಸುವ ಜನರ ಸೌಲಭ್ಯಕ್ಕಾಗಿ ಒಂದು 35 ಅಡಿ ಉದ್ದದ ಸಣ್ಣ ಕಾಲುಸೇತುವೆ ಕಟ್ಟಲಾಗದವರು ಶ್ರೀಲಂಕಾದ ಭೀಕರ ಸಮುದ್ರದಲ್ಲಿ 35 ಮೈಲಿ ಉದ್ದದ ಸೇತುವೆ ಕಟ್ಟಿರಲು ಸಾಧ್ಯವೇ?  ಇಲ್ಲಿ ನಾನು ಕೆಲವು ತರ್ಕಬದ್ಧ ವಿಷಯಗಳನ್ನು ಬರೆದಿದ್ದರೂ ಅವು ಸಂಘ ಪರಿವಾರದವರು ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ. ಕಾರಣ ತರ್ಕಕ್ಕೂ ವೈದಿಕ ಧರ್ಮಕ್ಕೂ ಬದ್ಧ ವೈರ!

ತಮ್ಮ ವಿಶ್ವಾಸಿ,

ಪ್ರವೀಣ್ ಎಸ್ ಶೆಟ್ಟಿ. 


ಇದನ್ನೂ ಓದಿ: ಮಂದಿರ ಭವ್ಯವಾಗಬಹುದು; ಪವಿತ್ರವಾಗಿರುವುದಿಲ್ಲ: ಜಿ ರಾಜಶೇಖರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ವಿಚಾರಗಳು ತರ್ಕಬದ್ಧವಾಗಿವೆ ಮತ್ತು ಅನೇಕ ಅನುಮಾನಗಳಿಗೆ ಸಮಂಜಸ ಉತ್ತರವೆನ್ನಿಸುತ್ತವೆ. ಉದಾಹರಣೆಗೆ ಲಂಕೆಯ ರಾಮಸೇತು! ನಿಜಕ್ಕೂ ಅಯೋಧ್ಯೆಯಲ್ಲಿ ರಾಮಮಂದಿರವಿದ್ದುದೇ ಆದರೆ ಪರಮ ವೈಷ್ಣವಭಕ್ತರುಗಳು ಸಂತರುಗಳು ಭೇಟಿಕೊಡದೇ ಹೋದುದೇಕೆ? ಇದು ಆಲೋಚನಾರ್ಹ ಮತ್ತು ಅಲ್ಲಿ ಮಂದಿರ ಇತ್ತೇ? ಎಂಬ ಪ್ರಶ್ನೆಗೆ ಎಲ್ಲೆಲ್ಲೋ ನಡೆಸಿದ್ದ ಉತ್ತರದ ಹುಡುಕಾಟಕ್ಕೆ ಕಳೆದುಕೊಂಡ ಪರಿಸರದಲ್ಲೇ ಅದನ್ನು ಹುಡುಕಿ ಸಂಸ್ಥಾಪಿಸಿದ್ದೀರೆಂದು ನನಗೆ ಅನ್ನಿಸುತ್ತಿದೆ. ಅಭಿನಂದನೆಗಳು. ಇತಿಹಾಸಜ್ಞರು ಇದರ ಮೇಲೆ ಹೆಚ್ಚಿನ ಬೆಳಕು ಚೆಲ್ಲಲಿ. ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು...

0
ಲೋಕಸಭಾ ಚುನಾವಣೆಯ ಹಿನ್ನೆಲೆ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ  ಮತದಾನ...