Homeಮುಖಪುಟಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದೇ ಎನ್‌‌ಇ‌ಪಿಯ ’ಭಾರತೀಯ ಜ್ಞಾನ ಪರಂಪರೆ' ದಾಳಿಗೆ ಮದ್ದು

ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದೇ ಎನ್‌‌ಇ‌ಪಿಯ ’ಭಾರತೀಯ ಜ್ಞಾನ ಪರಂಪರೆ’ ದಾಳಿಗೆ ಮದ್ದು

- Advertisement -
- Advertisement -

ಕರ್ನಾಟಕದ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದ ನಂತರದಲ್ಲಿ ಮತ್ತೊಮ್ಮೆ ಶಿಕ್ಷಣವು ರಾಜಕೀಯ ವಸ್ತುವಾಗಿದೆ. ಅತ್ತ ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಅಭ್ಯರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ಆ ದುಃಖವನ್ನು ತಡೆಯಲಾಗದೆ ಮುಂದಿನ ದಿನವೇ ಅವರ ತಂದೆಯೂ ಸಾವನ್ನಪ್ಪಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲು ಕಾನೂನಾತ್ಮಕ ಕ್ರಮ ಸೇರಿದಂತೆ ಎಲ್ಲ ಮಾರ್ಗಗಳನ್ನು ತುಳಿಯುವುದಾಗಿ ಹೇಳಿಕೆ ನೀಡಿದ್ದಾರೆ. ಕೇರಳದ ಶಿಕ್ಷಣ ಸಚಿವರು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT) ತನ್ನ ಪಠ್ಯಪುಸ್ತಕಗಳಿಂದ ತೆಗೆದುಹಾಕಿರುವ ಗಾಂಧಿ ಹತ್ಯೆ ಹಾಗೂ ಗುಜರಾತ್ ಗಲಭೆಗಳಿಗೆ ಸಂಬಂಧಿಸಿದ ಪಾಠಗಳನ್ನು ತಮ್ಮ ರಾಜ್ಯದ ಪಠ್ಯಗಳಿಗೆ ಸೇರಿಸಲಾಗುವುದು ಎಂದು ಎರಡು ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದರು. ಈ ಲೇಖನ ಸಿದ್ಧವಾಗುವ ಕೆಲವು ಗಂಟೆಗಳ ಮುಂಚೆಯಷ್ಟೇ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಿನ ಶೈಕ್ಷಣಿಕ ವರ್ಷದಿಂದ, ಅಂದರೆ 2024-25ರಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020 (NEP)ಅನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಮೇಲುನೋಟಕ್ಕೆ ಇಂತಹ ಹೇಳಿಕೆಗಳು ಒಂದು ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಹಿಡಿದಾಗ ತನಗೆ ಬೇಕಾದ ರೀತಿಯಲ್ಲಿ ನೀತಿನಿಯಮಗಳನ್ನು ಬದಲಿಸುವ ಪಕ್ಷರಾಜಕಾರಣದ ಆಟವಾಗಿ ಅಥವಾ ’ರದ್ದತಿ ಪರ್ವ’ ಎಂದೆನಿಸಿದರೂ, ಈ ಸಮಸ್ಯೆಗಳನ್ನು ಕೇವಲ ಪಕ್ಷರಾಜಕಾರಣಕ್ಕೆ ಸೀಮಿತಗೊಳಿಸುವುದು ತರವಲ್ಲ. ಏಕೆಂದರೆ, ನೀಟ್ ಪರೀಕ್ಷೆಗೆ ವ್ಯಕ್ತವಾಗಿರುವ ವಿರೋಧವಾಗಲೀ, ಎನ್‌ಇಪಿ ರದ್ದುಗೊಳಿಸುವಂತೆ ದೇಶದಾದ್ಯಂತ ನಡೆಯುತ್ತಿರುವ ಹೋರಾಟಗಳಾಗಲೀ ಇಂದು ನಿನ್ನೆಯವೇನಲ್ಲ; ಅಥವಾ ಈ ಒತ್ತಾಯವನ್ನು ಮೊದಲು ಮುಂದುಮಾಡಿದ್ದು ರಾಜಕೀಯ ಪಕ್ಷಗಳೂ ಅಲ್ಲ. ಬದಲಿಗೆ, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಕರು ಹಾಗೂ ಪೋಷಕರ ಸಂಘಟನೆಗಳು; ಕಳೆದ ಕೆಲವು ವರ್ಷಗಳಿಂದ ಇವರುಗಳು ನಿರಂತರವಾಗಿ ನಡೆಸಿಕೊಂಡು ಬಂದ ಹೋರಾಟದ ಫಲವಾಗಿ ಈ ಒತ್ತಾಯಗಳನ್ನು ಬಿಜೆಪಿಯೇತರ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದವು. ತಮ್ಮ ಪ್ರಣಾಳಿಕೆಯನ್ನು ಜಾರಿಗೆ ತರುವಂತೆ ನಾಗರಿಕ ಸಮಾಜ ಹಾಗೂ ಜೀವಪರ ಹೋರಾಟಗಳು ಒತ್ತಡ ಹೇರುತ್ತಿರುವುದೇ ಈ ರೀತಿಯ ಹೇಳಿಕೆಗಳು ಕೇಳಿಬಂದಿರುವ ಹಿಂದಿನ ನಿಜವಾದ ಕಾರಣ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆಯನ್ನೂ ಗಮನಿಸಬೇಕು. ಆ ನಿಟ್ಟಿನಲ್ಲಿ ಎನ್‌ಇಪಿಯನ್ನು ರದ್ದುಗೊಳಿಸುವ ಸಿದ್ದರಾಮಯ್ಯನವರ ಹೇಳಿಕೆಯು ಒಂದಷ್ಟು ಭರವಸೆಗಳನ್ನು ಮೂಡಿಸುವಂತಿದೆ.

ಆದರೆ, ಈಗಾಗಲೇ ಶೈಕ್ಷಣಿಕ ವರ್ಷ ಪ್ರಾರಂಭವಾಗಿರುವ ಕಾರಣ ಹಾಗೂ ಈ ಬಗ್ಗೆ ಕೆಲಸಗಳಲ್ಲಿ ಒಂದಷ್ಟು ವಿಳಂಬಗಳು ಉಂಟಾದ ಕಾರಣ ಮಕ್ಕಳ ಓದಿಗೆ ತೊಂದರೆಯಾಗಬಾರದು ಎಂದು ಎನ್‌ಇಪಿಯನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ. ಅದರ ಬೆನ್ನಲ್ಲೇ, ಶಿಕ್ಷಣತಜ್ಞರಾದ ನಿರಂಜನಾರಾಧ್ಯ ಮಾಧ್ಯಮಗಳೊಂದಿಗೆ ಮಾತನಾಡಿ ಹೊಸ ಶಿಕ್ಷಣ ನೀತಿಯನ್ನು ರಚಿಸುವ ಕಾರ್ಯವು ಹೆಚ್ಚು ಸಮಯ ಬೇಡುವುದರಿಂದ ಈ ಕೂಡಲೇ ಹೊಸ ಸಮಿತಿಯೊಂದನ್ನು ರಚಿಸಬೇಕೆಂದು ಅಗ್ರಹಿಸಿದ್ದಾರೆ. ಅಂದರೆ ಎನ್‌ಇಪಿ ರದ್ದತಿ ಮಾಡುವುದು ಕೇವಲ ಒಂದು ಸರ್ಕಾರಿ ಆದೇಶ ಹೊರಡಿಸುವಷ್ಟು ಸುಲಭಸಾಧ್ಯವಲ್ಲ. ಹಾಗೆ ಮಾಡುವ ಮುನ್ನ ಎನ್‌ಇಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ಸಾಧ್ಯತೆಗಳಿವೆಯೇ ಹಾಗೂ ಇದಕ್ಕೆ ನಮ್ಮ ಮುಂದಿರುವ ಮಾರ್ಗವೇನು ಮತ್ತು ಪರ್ಯಾಯಗಳೇನು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಾಗುತ್ತದೆ.

ಎನ್‌ಇಪಿ ರದ್ದತಿ ಸಾಧ್ಯವೇ?

ಕರ್ನಾಟಕ ಬಿಜೆಪಿ ನಾಯಕರು ಆಗಸ್ಟ್ 2021ರಲ್ಲಿ ಎನ್‌ಇಪಿಯನ್ನು ಜಾರಿಗೆ ತರುವ ಮೊಟ್ಟಮೊದಲ ರಾಜ್ಯ ನಮ್ಮದೆಂದು ಘೋಷಿಸಿಬಿಟ್ಟರು. ಅಂದರೆ, ದೇಶದ ಪ್ರತಿ ಮನೆಯನ್ನು ಬಾಧಿಸುವ ಶಿಕ್ಷಣ ನೀತಿಯು ಸಂಸತ್ತಿನಲ್ಲಾಗಲೀ ಅಥವಾ ರಾಜ್ಯದ ವಿಧಾನಸಭೆ ವಿಧಾನಪರಿಷತ್ತಿನಲ್ಲಾಗಲೀ ಚರ್ಚೆಯೇ ಆಗದೆ, ಬಿಜೆಪಿ ಸರ್ಕಾರದ ಕೆಲವು ಸಂಪುಟ ಸಚಿವರ ಒಪ್ಪಿಗೆಯ ಮೇರೆಗೆ ಜಾರಿಗೆ ಬಂದಿದೆ. ಎನ್‌ಇಪಿಯು ಹತ್ತು-ಹಲವು ಬದಲಾವಣೆಗಳ ಬಗ್ಗೆ ಮಾತನಾಡಿದರೂ, ಅವುಗಳಲ್ಲಿ ಬಿಜೆಪಿ-ಆರ್‌ಎಸ್‌ಎಸ್‌ನ ಕಾರ್ಯಸೂಚಿಗೆ ಅತ್ಯಂತ ಪ್ರಮುಖವಾದುವೆಂದರೆ:

ಮೊದಲನೆಯದಾಗಿ, ಭಾರತದ್ದೇ ಆದ ’ಭಾರತೀಯ ಜ್ಞಾನವ್ಯವಸ್ಥೆ’ಯೊಂದು ಅಸ್ತಿತ್ವದಲ್ಲಿತ್ತು; ಅದು ಅತ್ಯಂತ ಪುರಾತನವೂ, ಶ್ರೇಷ್ಠವೂ ಆಗಿತ್ತು. ಭಾರತೀಯ ಜ್ಞಾನವ್ಯವಸ್ಥೆಯು ತನ್ನ ಅತ್ಯಂತ ಉತ್ಕೃಷ್ಟ ಹಂತವನ್ನು ಪ್ರಾಚೀನ ಯುಗದಲ್ಲಿಯೇ ತಲುಪಿತ್ತು. ಮಧ್ಯಯುಗದಲ್ಲಿ ಮುಖ್ಯವಾಗಿ ಇತರೆ ಧರ್ಮ-ಪಂಥಗಳ ಪ್ರಭಾವದಡಿ ಹಾಗೂ ಮುಸ್ಲಿಮ್ ದೊರೆಗಳ ದಾಳಿಗೆ ಸಿಲುಕಿ, ನಂತರದಲ್ಲಿ ಬ್ರಿಟಿಷ್ ’ದಾಳಿ’ಗೆ ತತ್ತರಿಸಿ ಘಾಸಿಗೊಂಡಿರುವ ಅದನ್ನು ಇಂದು ಪುನರುಜ್ಜೀವನಗೊಳಿಸುವ ಅಗತ್ಯವಿದೆ. ಅದಕ್ಕಾಗಿ, ಸಂಸ್ಕೃತಕ್ಕೆ ಅತ್ಯಂತ ಪುರಾತನ ಹಾಗೂ ಮಾತೃಭಾಷೆಯ ಸ್ಥಾನವನ್ನು ಕರುಣಿಸುವುದು ಮತ್ತು ’ಭಾರತೀಯ ಜ್ಞಾನ’ವನ್ನು ಸಂಸ್ಕೃತದ ಕಣ್ಣೋಟದೊಂದರಿಂದಲೇ ಅರ್ಥೈಸುವುದು. ಈ ಮೂಲಕ, ಕೇವಲ ಬ್ರಾಹ್ಮಣ್ಯದಿಂದ ಒದಗಿಬರುವ ವಿಚಾರಗಳಿಗೆ ಮಾತ್ರವೇ ಮನ್ನಣೆ ಒದಗಿಸಿ ಭಾರತದೆಲ್ಲೆಡೆ ಹರಡಿರುವ ವೈದಿಕೇತರ ವಿಚಾರಗಳನ್ನು ಹಾಗೂ ಅದರ ಆಧಾರದಲ್ಲಿ ವಿವಿಧ ಸಮುದಾಯಗಳು ಕಟ್ಟಿಕೊಂಡಿರುವ ಅರಿವು ಅಸ್ಮಿತೆಗಳನ್ನು ಸಾಧ್ಯವಾದ ರೀತಿಗಳಲ್ಲೆಲ್ಲಾ ಹತ್ತಿಕ್ಕಿ ತುಳಿಯುವುದು ಹಾಗೂ ಇಂತಹ ವ್ಯವಸ್ಥೆಯನ್ನು ಈ ಎಲ್ಲಾ ಸಮುದಾಯಗಳು ಒಪ್ಪುವಂತೆ ಮಾಡುವುದು. ಇದೇ ಆರ್‌ಎಸ್‌ಎಸ್‌ನ ಪ್ರಮುಖ ಉದ್ದೇಶ.

ಇದನ್ನೂ ಓದಿ: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ NEP ರದ್ದು: ಸಿಎಂ ಸಿದ್ದರಾಮಯ್ಯ

ಇದನ್ನು ಕೇವಲ ತನ್ನ ರಾಜಕೀಯ ನಿಲುವುಗಳಿಂದ ಸಾಧಿಸಲು ಸಾಧ್ಯವಿಲ್ಲ ಹಾಗೂ ಇದಕ್ಕೆ ಇಡೀ ರಾಷ್ಟ್ರದ ಚಿಂತನಾಕ್ರಮವನ್ನೇ ಪ್ರಭಾವಿಸುವ ಅಗತ್ಯವಿದೆ ಎಂಬುದನ್ನು ಆರ್‌ಎಸ್‌ಎಸ್ ಹಾಗೂ ಬಿಜೆಪಿಗೆ ಇತರರೆಲ್ಲರಿಗಿಂತಲೂ ಚೆನ್ನಾಗಿಯೇ ಮನಗಂಡಿದೆ. ಬಹಳಷ್ಟು ರಾಜ್ಯಗಳಲ್ಲಿ ಎನ್‌ಇಪಿ ಜಾರಿಗೆ ಬಂದಿದ್ದರೂ ಅದರೆ ಬೇರಾವುದೇ ವಿಷಯಕ್ಕೆ ಸಿಗದಷ್ಟು ಒತ್ತನ್ನು ಸಂಸ್ಕೃತ ಹಾಗೂ ’ಭಾರತೀಯ ಜ್ಞಾನ’ಕ್ಕೆ ನೀಡಲಾಗುತ್ತಿದೆ ಎಂಬುದು ಪ್ರಮುಖ ಕಳವಳಕಾರಿ ಸಂಗತಿ. www.iksindiaorg ಎಂಬ ಅಂತರ್ಜಾಲ ತಾಣದ ಮೂಲಕ ಕೇಂದ್ರ ಶಿಕ್ಷಣ ಸಚಿವಾಲಯವು ಭಾರತೀಯ ಜ್ಞಾನ ಪರಂಪರೆಯ ಬಗ್ಗೆ ಎಷ್ಟು ಕೆಲಸಗಳನ್ನು ಕೈಗೊಂಡಿದೆ ಎಂಬುದನ್ನು ಕಾಣಬಹುದಾಗಿದೆ. ಅಲ್ಲದೇ, ಇಡೀ ಭಾರತೀಯ ಉನ್ನತ ಅಧ್ಯಯನ ವಲಯದಲ್ಲಿ ಸಂಶೋಧನೆಗೆ ಅನುದಾನ ಕಡಿತವಾಗುತ್ತಿರುವ ಸಂದರ್ಭದಲ್ಲಿ ’ಭಾರತೀಯ ಜ್ಞಾನ ಪರಂಪರೆ’ಯ ಹೆಸರಿನಲ್ಲಿ ನಡೆಯುತ್ತಿರುವ ಸಂಶೋಧನೆಗಳೆಂಬ ಸೋಗಿಗೆ ಕೋಟಿಕೋಟಿ ಅನುದಾನಗಳನ್ನು ನೀಡಲಾಗುತ್ತಿರುವುದನ್ನು ಯಾರು ಬೇಕಾದರೂ ಪರಾಮರ್ಶಿಸಬಹುದು. ಇದು ’ಭಾರತೀಯ ಜ್ಞಾನ’ಕ್ಕೆ ನೀಡಲಾಗುತ್ತಿರುವ ಮಾನ್ಯತೆಯನ್ನು ನಿಚ್ಚಳವಾಗಿಸುತ್ತಿದೆ.

ಅಲ್ಲದೇ, ಲೂಯಿ ಆಲ್ತುಸರ್ ಗಮನಿಸಿರುವಂತೆ ಶಿಕ್ಷಣವು ಪ್ರಭುತ್ವದ ಸೈದ್ಧಾಂತಿಕ ಸಾಧನ (Ideological State Apparatus) ಎಂಬುದನ್ನು ಅರಿತಿರುವ ಸಂಘಪರಿವಾರ ’ಭಾರತೀಯ ಜ್ಞಾನ’ದ ಹೆಸರಿನಲ್ಲಿ ಅಜ್ಞಾನಭರಿತ ಸಿದ್ಧಾಂತವನ್ನು ಬಿತ್ತರಿಸಲು ಶಿಕ್ಷಣ ಕ್ಷೇತ್ರವನ್ನು ಬಳಸಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನ ಪ್ರಯತ್ನಗಳು 1975ರ ಹೊತ್ತಿಗೇ ಪ್ರಾರಂಭವಾಗಿದ್ದರೂ ಕೂಡ ಇಂದು ಇದು ನಡೆಯುತ್ತಿರುವ ಪ್ರಮಾಣ ಯಾರೂ ನಿರೀಕ್ಷಿಸಿರದ ದೊಡ್ಡ ಮಟ್ಟದ್ದಾಗಿದೆ. ಇಲ್ಲಿಯವರೆಗೆ ಬರೀ ಪಠ್ಯವನ್ನು ತೆಗೆಯುವುದು ಅಥವಾ ಬದಲಿಸುವ ಮೂಲಕ ತನ್ನ ಕಾರ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿದ್ದ ಸಂಘಪರಿವಾರ ಎನ್‌ಇಪಿಯಲ್ಲಿ ಹೊಸ ಶತಮಾನಕ್ಕೆ ಬೇಕಾದ ಹೊಸ ಪಠ್ಯಕ್ರಮವನ್ನು ರಚಿಸುವ ಸೋಗಿನಲ್ಲಿ ಇಡೀ ದೇಶದ ಶಿಕ್ಷಣ ವ್ಯವಸ್ಥೆಯ ಪಠ್ಯಕ್ರಮ ಚೌಕಟ್ಟನ್ನೇ ಭಾರತೀಯ ಜ್ಞಾನದ ಆಧಾರದಲ್ಲಿ ಬದಲಿಸಲು ಹೊರಟಿದೆ. ಎನ್‌ಇಪಿಯಲ್ಲಿ ಉಲ್ಲೇಖವಾಗಿರುವಂತೆ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (National Curriculum Framework for School Education), ಬಾಲ್ಯಾವಸ್ಥೆ ಆರೈಕೆ ಮತ್ತು ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಚೌಕಟ್ಟುಗಳ (National Curricular and Pedagogical Framework for Early Childhood Care and Education), ಶಿಕ್ಷಕರ ಶಿಕ್ಷಣಕ್ಕಾಗಿ ಹೊಸ ಮತ್ತು ಸಮಗ್ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (National Curriculum Framework for Teacher Education) ಹಾಗೂ ವಯಸ್ಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (National Curriculum Framework for Adult Education) ಸೇರಿದಂತೆ ನಾಲ್ಕು ಹೊಸ ಪಠ್ಯಕ್ರಮ ಚೌಕಟ್ಟನ್ನು ಯಾವುದೇ ಸದ್ದು-ಗದ್ದಲಗಳಿಲ್ಲದೇ ರಚಿಸಲಾಗುತ್ತಿದೆ. ಇದರಲ್ಲಿ ಮೊದಲೆರಡು ಪಠ್ಯಕ್ರಮ ಚೌಕಟ್ಟಿನ 628 ಹಾಗೂ 360 ಪುಟಗಳ ಕರಡು ಪ್ರತಿಗಳು ಈಗಾಗಲೇ ಸಿದ್ಧವಾಗಿವೆ. ಅಲ್ಲದೇ, ಈ ಚೌಕಟ್ಟಿನ ನೇರಕ್ಕೆ ಪಠ್ಯಪುಸ್ತಕಗಳನ್ನು, ವಿಷಯಸೂಚಿಗಳನ್ನು ಹಾಗೂ ಬೊಧನಾ ಸಾಮಗ್ರಿಗಳನ್ನು ರಚಿಸಲು NCERTಯು NOC ಹಾಗೂ NSTC ಹೆಸರಿನ ಎರಡು ಸಮಿತಿಗಳನ್ನು ಈಗಾಗಲೇ ನೇಮಿಸಿದೆ. ಇವುಗಳಲ್ಲಿಯೂ ಸಂಘಪರಿವಾರದ ಪ್ರೀತಿಪಾತ್ರರೇ ತುಂಬಿದ್ದಾರೆ. ಅಂದರೆ, ಒಂದಂತೂ ನಿಚ್ಚಳ. ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವ ಕಾರಣ ರಾಜ್ಯಗಳು NCERT ರಚಿಸುವ-ಸೂಚಿಸುವ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲೇಬೇಕೆಂದೇನೂ ಇಲ್ಲ. ಹಾಗಾಗಿ ಕೇರಳದಂತೆ, ತಮಿಳುನಾಡು ಹಾಗೂ ಕರ್ನಾಟಕ ಕೂಡ ತನ್ನದೇ ಆದ ಪಠ್ಯಗಳನ್ನು ರಚಿಸಿಕೊಳ್ಳಬಹುದು ಮತ್ತು ಈ ರೀತಿಯ ಕಾರ್ಯವನ್ನು ಕೈಗೊಳ್ಳುವಂತೆ ಆಯಾ ರಾಜ್ಯಗಳ ಪ್ರಜ್ಞಾವಂತರು ಒತ್ತಾಯಿಸಬೇಕಿದೆ ಕೂಡ. ಆದರೆ, ಶಿಕ್ಷಣ ವ್ಯವಸ್ಥೆ ಅದರಲ್ಲೂ ಮುಖ್ಯವಾಗಿ ಉನ್ನತ ಶಿಕ್ಷಣ ವ್ಯವಸ್ಥೆಯು ಕೇಂದ್ರೀಕೃತವಾಗುತ್ತಿರುವ ಹೊತ್ತಿನಲ್ಲಿ, ಅದು ನೀಟ್, ನೆಕ್ಸಟ್ (NExT), ಸಿಯುಸಿಇಟಿ Central Universities Common Entrance Test) ತರಹದ ಪ್ರವೇಶ ಪರೀಕ್ಷೆಗಳ ವಿಚಾರವಿರಲಿ, ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ ರಚಿಸಲಾಗಿರುವ HEFA (Higher Education Financing Agency)ಯಂತಹ ಸಂಸ್ಥೆಗಳ ಮೂಲಕ ಸಂಶೋಧನೆ ಹಾಗೂ ಕೋರ್ಸುಗಳ ಮೇಲೆ ಸಾಧಿಸಲಾಗುತ್ತಿರುವ ಹಿಡಿತದಿಂದಾಗಲೀ CBSE ಪಠ್ಯಕ್ರಮಕ್ಕೆ ದೊರೆಯುವ ಮಾನ್ಯತೆ ರಾಜ್ಯಗಳು ರಚಿಸಿಕೊಳ್ಳುವ ಪಠ್ಯಕ್ರಮಗಳಿಗಿರುವುದಿಲ್ಲ. ಈಗಲೂ ಕೂಡ ಯು.ಪಿ.ಎಸ್.ಸಿ ಸೇರಿದಂತೆ ಹತ್ತು ಹಲವು ಪರೀಕ್ಷೆಗಳಿಗೆ NCERTಯ ಪಠ್ಯಪುಸ್ತಕಗಳೇ ಆಧಾರಗಳು. ಅಲ್ಲದೇ, ದೇಶದೆಲ್ಲೆಡೆ ಹರಡಿರುವ ನವೋದಯ ವಿದ್ಯಾಲಯಗಳು ಹಾಗೂ ಕೇಂದ್ರೀಯ ವಿದ್ಯಾಲಯಗಳು ಕೂಡ CBSE ಪಠ್ಯಕ್ರಮವನ್ನೇ ಆಧರಿಸುತ್ತವೆ. ಆದಕಾರಣ, ನಮ್ಮ ರಾಜ್ಯಗಳು NEPಯನ್ನು ನಿರಾಕರಿಸಿದ ಮಾತ್ರಕ್ಕೆ ನಾವು ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದೇವೆ ಎಂದು ಭಾವಿಸಬೇಕಿಲ್ಲ.

NEPಯನ್ನು ಬೇರು ಸಮೇತ ಕಿತ್ತೊಗೆಯಲು ಸಾಧ್ಯವಿಲ್ಲವೇ?

ಖಂಡಿತಾ ಸಾಧ್ಯವಿದೆಯಾದರೂ ಇದಕ್ಕೆ ದೊಡ್ಡ ಹೋರಾಟದ ಅಗತ್ಯವಿದೆ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳು NEPಯನ್ನು ರದ್ದುಗೊಳಿಸುವುದು ಮಾತ್ರವಲ್ಲ ತಮ್ಮದೇ ಆದ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ರಚಿಸಿಕೊಳ್ಳಬೇಕು. ರಾಜ್ಯಗಳು ಹೊಸ ಪಠ್ಯಕ್ರಮವನ್ನು ರಚಿಸಿಕೊಳ್ಳುವಾಗ ತಮಿಳುನಾಡಿನಂತೆ NEPಯನ್ನೇ ಬೇರೊಂದು ಹೆಸರನಲ್ಲಿ ತರುವ ಬದಲಿಗೆ NEP ಮೌಲ್ಯಗಳನ್ನು ಬದಿಗೊತ್ತಿ ಎಲ್ಲರನ್ನು ಒಳಗೊಳ್ಳುವ ಹಾಗೂ ಸಮಾನತೆಯನ್ನು ಸಾರುವ ಶಿಕ್ಷಣ ನೀತಿಯನ್ನು ರೂಪಿಸಿಕೊಳ್ಳಬೇಕಿದೆ. ತದನಂತರದಲ್ಲಿ, ಇದನ್ನು ಕೇವಲ ಶಿಕ್ಷಣದ ಸಮಸ್ಯೆಯೆಂದು ಭಾವಿಸದೆ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರವೇ ಮೇಲುಗೈ ಸಾಧಿಸಿವ ರೀತಿಯೂ ಇದಾಗಿದೆ ಎಂಬುದನ್ನು ಮನಗಂಡು ಇದನ್ನು ಒಕ್ಕೂಟ ತತ್ವದ ಮೇಲಿನ ಪ್ರಹಾರವೆಂದು ಪರಿಗಣಿಸಿ ಅದನ್ನು ಎಲ್ಲಾ ಪ್ರ್ರಾದೇಶಿಕ ಪಕ್ಷಗಳಿಗೆ ಮನದಟ್ಟು ಮಾಡಿಕೊಡಬೇಕಿದೆ. ಎಲ್ಲಾ ರಾಜ್ಯ ಸರ್ಕಾರಗಳು, ಅದರಲ್ಲೂ ಮುಖ್ಯವಾಗಿ ಬಿಜೆಪಿಯು ಪ್ರಾದೇಶಿಕ ಪಕ್ಷಗಳೊಂದಿಗೆ ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೇ NEPಯನ್ನು ರದ್ದುಗೊಳಿಸುವಂತೆ ಜನಚಳವಳಿಯನ್ನು ಸಂಘಟಿಸಬೇಕಿದೆ. ಇದನ್ನು 2024ರ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ವಿಚಾರವಾಗಿ ಚರ್ಚೆಯಾಗಿಸಿ ಅದು ಮತಗಳಾಗಿ ಪರಿವರ್ತಿತವಾಗುವಂತೆ ನೋಡಿಕೊಳ್ಳಬೇಕಿದೆ. ಒಕ್ಕೂಟ ವ್ಯವಸ್ಥೆಯ ಸಮಸ್ಯೆಯಾಗಿ ಶಿಕ್ಷಣ ಹಾಗೂ ಪಠ್ಯಪರಿಷ್ಕರಣೆಗಳು ಚರ್ಚೆಯಾಗದಿದ್ದರೆ ಹೊಸ ಪಠ್ಯಕ್ರಮ ಚೌಕಟ್ಟುಗಳು ದೇಶದ, ದೇಶದ ಜನರ ಅಸ್ಮಿತೆಯನ್ನೇ ಅಲುಗಾಡಿಸಿ ಬಿಗಡಾಯಿಸುತ್ತವೆ.

ಶಶಾಂಕ್

ಶಶಾಂಕ್
ಎನ್‌ಐಎಎಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ. ಪ್ರಗತಿಪರ-ಜನಪರ ಚಳವಳಿಗಳ ಬಗ್ಗೆ ಆಸಕ್ತಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...