Homeಮುಖಪುಟಟೈಮ್ಸ್ ಮಾಜಿ ಸಂಪಾದಕ ಹೆರಲ್ಡ್ ಈವಾನ್ಸ್ ನಿಧನ - ‘ಒಳ್ಳೆಯ ಟೈಮ್ಸ್‌, ಕೆಟ್ಟ...

ಟೈಮ್ಸ್ ಮಾಜಿ ಸಂಪಾದಕ ಹೆರಲ್ಡ್ ಈವಾನ್ಸ್ ನಿಧನ – ‘ಒಳ್ಳೆಯ ಟೈಮ್ಸ್‌, ಕೆಟ್ಟ ಟೈಮ್ಸ್’ – ಲಂಕೇಶ್ ಅವರ ಟೀಕೆ ಟಿಪ್ಪಣಿ

- Advertisement -
- Advertisement -

ಖ್ಯಾತ ಬ್ರಿಟಿಶ್-ಅಮೆರಿಕನ್ ಪತ್ರಕರ್ತ ಟೈಮ್ಸ್ ನ ಮಾಜಿ ಪತ್ರಕರ್ತ – ಸಂಪಾದಕ  ಹೆರಲ್ಡ್ ಈವಾನ್ಸ್ ತಮ್ಮ 92ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ನಿರ್ಭೀತಿಯ ಪತ್ರಕರ್ತ ಎಂದೇ ಹೆಸರುವಾಸಿಯಾಗಿದ್ದ ಈವಾನ್ಸ್ ಅವರು ಅಪಾಯಕಾರಿ ಔಷಧ ಥಾಲಿಡೊಮೈಡ್ ಉಂಟು ಮಾಡುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿದ ಪತ್ರಕರ್ತರ ತಂಡವನ್ನು ಮುನ್ನಡೆಸಿದವರು.

ಸಂಡೇ ಟೈಮ್ಸ್, ಟೈಮ್ಸ್ ಪತ್ರಿಕೆಗಳ ಸಂಪಾದಕರಾಗಿದ್ದಲ್ಲದೆ ಖ್ಯಾತ ಪ್ರಕಾಶನ ಸಂಸ್ಥೆ ರ್ಯಾಂಡಮ್ ಹೌಸ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು.

ಈವಾನ್ಸ್ ಅವರ ಬಗ್ಗೆ 1985ರಲ್ಲಿ ಕನ್ನಡದ ಖ್ಯಾತ ಪತ್ರಕರ್ತ ಪಿ ಲಂಕೇಶ್ ತಮ್ಮ ಟೀಕೆ-ಟಿಪ್ಪಣಿಯಲ್ಲಿ ಬರೆದ ಲೇಖನ ಈವಾನ್ಸ್ ಅವರ ನಿರ್ಭೀತಿ ಪತ್ರಿಕೋದ್ಯಮದ ಪರಿಚಯ ಮಾಡಿಕೊಡುತ್ತದೆ.

_____________________________________________________________________

ಆತ ಅವತ್ತು ನಿಜಕ್ಕೂ ಒಬ್ಬಂಟಿಯಾಗಿದ್ದಾಗ. ಟೈಮ್ಸ್ ವೃತ್ತದಿಂದ ಕಾಲ್ನಡಿಗೆಯಲ್ಲಿ ಹೊರಟ ಆತನ ಒಬ್ಬಂಟಿತನ ಕೇವಲ ದೇಹದ ಏಕಾಂಗಿತನ ವಾಗಿರಲಿಲ್ಲ; ಬೇರು ವರಸೆ ಕಿತ್ತ ಗಿಡಕ್ಕಿರಬಹುದಾದ ನೋವು, ಚರ್ಮ ಸುಲಿದು ನಿಲ್ಲಿಸಿದ ಆಕಳಿಗಿರಬಹುದಾದ ಯಾತನೆ ಅವನ ತಬ್ಬಲಿತನದಲ್ಲಿತ್ತು. ಹದಿನೈದು ವರ್ಷದಿಂದ ಆತನ ಸೇವೆ ಪಡೆದ ಸಮಾಜ ಅವನ ಸುತ್ತ ಇತ್ತು; ನಿತ್ಯದಂತೆ ಪತ್ರಿಕೆ ಓದುವ, ಸಿನಿಮಾ ನೋಡುವ, ತಮ್ಮ ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿದ ಜನರು ಸುತ್ತು ಸಾಗುತ್ತಿದ್ದರು; ಆದರೆ ಅವರಲ್ಲಿ ಯಾರೂ ಆತನ ಆಳದ ನೋವನ್ನು, ತಬ್ಬಲಿತನವನ್ನು ತಿಳಿದುಕೊಳ್ಳುವುದು ಸಾಧ್ಯವಿರಲಿಲ್ಲ. ಎಲ್ಲ ಪ್ರಾಮಾಣಿಕತೆಯ ಕಠೋರ ನಿಷ್ಠುರತೆ ತರುವ ಏಕಾಂಗಿತನಕ್ಕೆ ಸಾಕ್ಷಿಯಂತಿದ್ದ ಆ ವ್ಯಕ್ತಿ ತನ್ನ ಆಳದ ಸ್ಮಶಾನ ಮೌನ ಮತ್ತು ತೀಕ್ಷ್ಣ ವೇದನೆಯನ್ನು ಹೊತ್ತು ನಡೆಯುತ್ತಲೇ ಇದೆ.

ಕೃಪೆ: ದಸನ್.ಕೊ.ಯುಕೆ

ಅವತ್ತಿನವರೆಗೆ ಲಂಡನ್ನಿನ ಪ್ರಖ್ಯಾತ ದಿನಪತ್ರಿಕೆ ‘ದಿ ಟೈಮ್ಸ್’ಗೆ ಸಂಪಾದಕನಾಗಿದ್ದವನು ಹೆರಲ್ಡ್ ಈವಾನ್ಸ್. ಅವತ್ತೆ ಅವನು ತನ್ನ ಸಂಪಾದಕತ್ವಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಿದ್ದಿದ್ದ. ಟೈಮ್ಸ್‌ನಲ್ಲಿ ಒಂದು ವರ್ಷ ಇದ್ದ ಈವಾನ್ಸ್ ಅದಕ್ಕೆ ಮುಂಚೆ ಅದೇ ಸಂಸ್ಥೆಯ ‘ಸಂಡೇ ಟೈಮ್ಸ್’ ಎಂಬ ವಾರ ಪತ್ರಿಕೆಗೆ ಹದಿನಾಲ್ಕು ವರ್ಷ ಸಂಪಾದಕನಾಗಿದ್ದ. ಸರ್ಕಾರದ ಅಧಿಕಾರದ ದುರುಪಯೋಗ, ಭ್ರಷ್ಟತೆಯನ್ನು ಅನೇಕ ಸಲ ಬಯಲಿಗೆಳೆದ ಈವಾನ್ಸ್ ತನ್ನ ದೇಶದ ಪ್ರಧಾನ ಮಂತ್ರಿಗೆ, ಆತನ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದ. ಸರ್ಕಾರ ಆಯಕಟ್ಟಿನ ಸ್ಥಳಗಳಲ್ಲಿ ಸೇರಿಕೊಂಡು ರಷ್ಯಾ ದೇಶದ ಪರವಾಗಿ ಗೂಢಚರ್ಯೆಯಲ್ಲಿ ತೊಡಗಿದ್ದ ಕಿಮ್ ಫಿಲ್ಬಿ ಎಂಬುವನ ರಹಸ್ಯವನ್ನು ಭೇದಿಸಿದ್ದ ಈವಾನ್ಸ್. ವಿಷಪೂರಿತ ನಿದ್ರಾಗುಳಿಗೆ ತಯಾರಿಸುತ್ತಿದ್ದು ಈ ಗುಳಿಗೆಗಳನ್ನು ತೆಗೆದುಕೊಂಡ ಗರ್ಭಿಣಿ ಹೆಂಗಸರು ಹಡೆದ ಮಕ್ಕಳಲ್ಲಿ ಅನೇಕರು ಕೈಕಾಲು ಕಳೆದುಕೊಂಡು, ಕಣ್ಣು, ಮೂಗುಗಳಿಲ್ಲದೆ ಹುಟ್ಟಲು ಕಾರಣವಾದ ಮಾತ್ರೆ ಕಂಪನಿಯೊಂದು ಈವಾನ್ಸ್‌ನ ಪತ್ರಿಕೆಯ ತನಿಖೆಯಿಂದ ನಾಶಗೊಂಡಿತ್ತು. ನಿದ್ರೆಯ ಗುಳಿಗೆಯಿಂದ ಅಂಗವಿಕಲರಾದ ಮಕ್ಕಳಿಗೆ ಲಕ್ಷಾಂತರ ಪೌಂಡ್ ಗಳ ಪರಿಹಾರ ಕೊಡಿಸುವುದಕ್ಕಾಗಿ ಅನೇಕ ವರ್ಷ ಹೋರಾಡಿದ ಈವಾನ್ಸ್. ನ್ಯಾಯಾಲಯದ ಆಜ್ಞೆಗಳನ್ನು ಕೂಡ ಉಲ್ಲಂಘಿಸಿ ಪ್ರಕಟಿಸಿದ ವಿಷಯಗಳಿಂದಾಗಿ ಇಂಗ್ಲೆಂಡಿನ ಕಾನೂನುಕಟ್ಟಲೆಗಳೇ ಬದಲಾಗಬೇಕಾಯಿತು. ತನ್ನ ಆಡಳಿತದಿಂದ ಇಂಗ್ಲೆಂಡಿನ ಸಂಪತ್ತು ಹೆಚ್ಚಾಗಿದೆ ಎಂದು ಪ್ರಧಾನಿ ಥ್ಯಾಚರ್ ಎಲ್ಲೆಲ್ಲೂ ಬೊಗಳೆ ಬಿಡುತ್ತಿದ್ದಾಗ ಈವಾನ್ಸ್ ಆಕೆಯ ಆರ್ಥಿಕ ಕಾರ್ಯಕ್ರಮಗಳ ವಿವರವಾದ ವಿಮರ್ಶೆ ನೀಡಿ ಆಕೆಯ ಆಡಳಿತದಿಂದ ಸಂಭವಿಸಬಹುದಾದ ಅಪಾಯಗಳನ್ನು ತೋರಿಸಿದ್ದ. ಅತ್ಯಂತ ಮಾನವೀಯ ಸಂಗತಿಗಳಿಂದ ಹಿಡಿದು ಅಪ್ಪಟ ತಾಂತ್ರಿಕ ಅಂಶಗಳವರೆಗೆ ಹಬ್ಬಿದ್ದ ಈವಾನ್ಸ್‌ನ ಕುತೂಹಲ ಮತ್ತು ನಿಷ್ಠುರ ತನಿಖೆಯಿಂದಾಗಿ ‘ಸಂಡೇ ಟೈಮ್ಸ್’ ಮತ್ತು ‘ಟೈಮ್ಸ್’ ಪತ್ರಿಕೆಗಳ ಮಹಾನ್ ಪರಂಪರೆಗೆ ಹೊಸ ಜೀವ ಬಂದಿತ್ತು. ಸರಿಯಾಗಿ ಮುನ್ನೂರು ವರ್ಷಗಳ ಹಿಂದೆ ಹುಟ್ಟಿದ ‘ಟೈಮ್ಸ್’ ಪತ್ರಿಕೆ ಫ್ರೆಂಚ್ ಕ್ರಾಂತಿ, ವಾಟರ್‌ ಲೂ ಕದನ, ಕೈಗಾರಿಕಾ ಕ್ರಾಂತಿ, ಸಿನಿಮಾ, ವಿಮಾನಗಳ ಹುಟ್ಟು, ಜಾಗತಿಕ ಯುದ್ಧ ಗಳನ್ನೆಲ್ಲ ಕಂಡು ಬೆಳೆದ ಪತ್ರಿಕೆ. ಜಗತ್ತಿನ ಎಲ್ಲೆಡೆ ವರದಿಗಾರರನ್ನು ಪಡೆದು ಅತ್ಯಂತ ಜವಾಬ್ದಾರಿಯಿಂದ, ಕರಾರುವಾಕ್ಕಾಗಿ, ಸ್ಪಷ್ಟವಾಗಿ, ಧೈರ್ಯವಾಗಿ ಬರೆಯುವ ‘ಟೈಮ್ಸ್’ ಪತ್ರಿಕೆ ಇಂಗ್ಲೆಂಡಿನ ಬದುಕಿನ ಒಂದು ಮುಖ್ಯ ಭಾಗ; ಇಂಗ್ಲಿಷರ ಪ್ರತಿದಿನದ ಸಂಗಾತಿ.

ಆದರೆ ಜಗತ್ತಿನ ಯಾವುದೂ ಅಮರವಲ್ಲ ಎಂಬುದನ್ನು ತೋರಿಸುವುದಕ್ಕೋ ಏನೋ, ‘ಟೈಮ್ಸ್’ನ ಪರಂಪರೆಗೆ ಕೊಡಲಿ ಏಟು ಬೀಳತೊಡಗಿತ್ತು. ಕಾಗದದ ದುಬಾರಿ, ಯಂತ್ರಗಳ ನವೀಕರಣದ ಖರ್ಚು, ಕಾರ್ಮಿಕರ ಮುಷ್ಕರದಿಂದಾಗಿ ‘ಟೈಮ್ಸ್’ ಅಲ್ಲಾಡತೊಡಗಿತು; ಕೆಲವೊಮ್ಮೆ ಹೊರಬರುವುದೇ ಕಷ್ಟವಾಗುತ್ತ ಬಂತು. ಈವಾನ್ಸ್ ನ ಸಂಪಾದಕತ್ವದಲ್ಲಿ ‘ಸಂಡೇ ಟೈಮ್ಸ್’ ಸಾಕಷ್ಟು ಹಣ ಗಳಿಸುತ್ತಿದ್ದಾರೆ ‘ಟೈಮ್ಸ್’ ನಷ್ಟದಲ್ಲಿ ನಡೆಯತೊಡಗಿತು.

ಇಲ್ಲಿ ಕೆಲವು ಕುತೂಹಲದ ವಿಷಯಗಳನ್ನು ಕಾಣಿಸಬೇಕು. ಯಾವ ಪಕ್ಷ ಅಥವಾ ವ್ಯಕ್ತಿ ಅಧಿಕಾರದಲ್ಲಿದ್ದರೂ ಅವರಿಗೆ ಭೂತ ಬಿಡಿಸುವುದು, ಅಂದರೆ ಅವರನ್ನು ವಿರೋಧಿಸಿ ಅವರ ತಪ್ಪುಗಳನ್ನು, ಅಪರಾಧಗಳನ್ನು ಹೊರಗೆಡಹುವುದು ‘ಟೈಮ್ಸ್’ ಪರಂಪರೆಯ ಒಂದು ಭಾಗ. ಯಾವುದೇ ಪತ್ರಿಕೆಯನ್ನು ತಮ್ಮತ್ತ ಒಲಿಸಿಕೊಳ್ಳಲು ಯತ್ನಿಸುವುದು, ಹೊಗಳಿ ಬರೆದರೆ ಹಿಗ್ಗಿ ಹೋಗುವುದು, ಟೀಕಿಸಿ ಬರೆದರೆ ಕೋಪಗೊಳ್ಳುವುದು ಕೂಡ ಎಲ್ಲ ಸರ್ಕಾರಗಳ ಪರಂಪರೆ. ನಿಷ್ಠುರ ಸಂಪಾದಕ ಸರ್ಕಾರಕ್ಕೆ ಹುಚ್ಚನಂತೆಯೂ ದುಷ್ಟನಂತೆಯೂ ಕಾಣುತ್ತಾನೆ. ಹೀಗಾಗಿ ಪ್ರಧಾನಿ ಥ್ಯಾಚರ್ ಗೆ ಹೆರಲ್ಡ್ ಈವಾನ್ಸ್ ‘ನಂಬಿಕಸ್ತನಲ್ಲದ’ ಮನುಷ್ಯನಂತೆ ಕಾಣತೊಡಗುತ್ತಾನೆ, ಆತನ ನಿಲುವು ಅಷ್ಟು ‘ಆರೋಗ್ಯಕರವಲ್ಲದ’ ಧೋರಣೆಯಂತ ಕಾಣತೊಡಗುತ್ತದೆ. ‘ಟೈಮ್ಸ್’ನಲ್ಲಿ ನೇರ ಮೂಗು ಹಾಕಲು ಧೈರ್ಯವಿಲ್ಲದೆ ತನ್ನ ಕುಟಿಲೋಪಾಯಗಳ ಮೂಲಕ ಈವಾನ್ಸ್‌ಗೆ ತೊಂದರೆ ಕೊಡಲು ಸರ್ಕಾರ ತೀರ್ಮಾನಿಸುತ್ತದೆ. ಟೈಮ್ಸ್ ಪತ್ರಿಕೆಯ ಕಾರ್ಮಿಕರ ಮುಷ್ಕರ, ನಷ್ಟಗಳಿಂದ ರೋಸಿಹೋದ ಮಾಲೀಕ ಥಾಮ್ಸನ್ ಆ ಪತ್ರಿಕೆಗಳ ಗುಂಪನ್ನೇ ಮಾರಿಬಿಡಲು ಯೋಚಿಸಹತ್ತಿದಾಗ ಥ್ಯಾಚರ್ ಗೆ ಸುವರ್ಣಾವಕಾಶ ದೊರೆತಂತಾಗುತ್ತದೆ. ಪತ್ರಿಕೆಗಳ ಸ್ವಾತಂತ್ರ್ಯ ಕಾಪಾಡುವುದಕ್ಕಾಗಿಯೇ ಇರುವ ‘ಮನಾಪಲೀಸ್ ಆಕ್ಟ್’ನ ರಕ್ಷಣೆಯನ್ನು ಟೈಮ್ಸ್ ಗೆ ಕೊಡದಿರಲು ಸರ್ಕಾರ ತೀರ್ಮಾನಿಸುತ್ತದೆ. ಆಸ್ಟ್ರೇಲಿಯಾದ ಗುಳ್ಳೆನರಿಯಂಥ ಮರ್ಡೋಕ್ ಎಂಬ ಶ್ರೀಮಂತ ಟೈಮ್ಸ್ ಪತ್ರಿಕೆಯ ಗುಂಪನ್ನೇ ಕೊಳ್ಳಲು ಮುಂದೆ ಬಂದಾಗ ‘ಟೈಮ್ಸ್’ ಪರಂಪರೆ ಕ್ರಮೇಣ ಅಲ್ಲಾಡಲು ಶುರುಮಾಡುತ್ತದೆ. ಹೆರಲ್ಡ್ ಈವಾನ್ಸ್ ಗಾಢ ಪ್ರಾಮಾಣಿಕತೆಗೆ ಮರ್ಡೋಕ್‌ನ ಸಮಯಸಾಧಕತನ, ಭಟ್ಟಂಗಿತನ ಸವಾಲಾಗಿ ಎದುರಾಗುತ್ತದೆ.

ಮರ್ಡೋಕ್‌ನ ಹಿಡಿತಕ್ಕೆ ‘ಟೈಮ್ಸ್’ ಸಿಕ್ಕದಿರುವಂತೆ ನೋಡಿಕೊಳ್ಳಲು ಈವಾನ್ಸ್ ಶತಪ್ರಯತ್ನ ಮಾಡತೊಡಗುತ್ತಾನೆ. ಪ್ರಖ್ಯಾತ ಸಂಪಾದಕರಾದ ಈವಾನ್ಸ್ ತನ್ನೆಲ್ಲ ಸ್ನೇಹ, ಸಂಘಟನಾ ಶಕ್ತಿ ಬಳಸಿಕೊಂಡು ‘ಟೈಮ್ಸ್’ ಪತ್ರಿಕೆ ಮಾನವಂತರಿಗೆ ಮಾರಾಟವಾಗಲೆಂದು ಪ್ರಯತ್ನ ನಡೆಸುತ್ತಾನೆ. ಅದು ಸಾಧ್ಯವಾಗದೆ ಹೋದಾಗ ತನ್ನ ಗೆಳೆಯರ ಗುಂಪೊಂದನ್ನು ಸೇರಿಸಿ ‘ಟೈಮ್ಸ್’ ಕೊಳ್ಳಲು ಯೋಜನೆ ಹಾಕುತ್ತಾನೆ, ಆದರೆ ಮಾಲಿಕ ಥಾಮ್ಸನ್ ಗುಟ್ಟಾಗಿ ಮರ್ಡೋಕ್‌ಗೆ ಮಾರಿಬಿಡುತ್ತಾನೆ. ಕೊಂಡುಕೊಂಡೊಡನೆ ಮರ್ಡೋಕ್ ಮಾಯಾಮೃಗದಂತೆ ವರ್ತಿಸುತ್ತಾ ಈವಾನ್ಸ್ ಮತ್ತು ಅವನ ಸಹೋದ್ಯೋಗಿಗಳ ಸ್ವಾತಂತ್ರ್ಯವನ್ನು ಕಾಪಾಡುವ ಭರವಸೆ ನೀಡುತ್ತಾನೆ. ಈವಾನ್ಸ್‌ನನ್ನು ದಿಕ್ಕುಗೆಡಿಸುವ ಮೊದಲ ಪ್ರಯತ್ನವಾಗಿ ಆತನನ್ನು ‘ಸಂಡೇ ಟೈಮ್ಸ್’ ನಿಂದ ‘ಟೈಮ್ಸ್’ನ ಸಂಪಾದಕನಾಗಿ ವರ್ಗ ಮಾಡುತ್ತಾನೆ.

ಅಲ್ಲಿಂದ ಸರ್ಕಾರದ, ಮಾಲೀಕ ಮರ್ಡೋಕ್‌ನ ಕುತಂತ್ರ ಶುರುವಾಗುತ್ತದೆ. ಕಾರ್ಮಿಕರು, ಸ್ನೇಹಿತರ ನಡುವೆ ಜಗಳ ಹುಟ್ಟುಹಾಕುವುದರಿಂದ ಹಿಡಿದು ತಾನೇ ಇತ್ತ ಭರವಸೆಗಳನ್ನೆಲ್ಲಾ ಗಾಳಿಗೆ ತೂರುವ ಮರ್ಡೋಕ್ ಈವಾನ್ಸ್ ರಾಜೀನಾಮೆ ಕೊಡಬೇಕೆಂದು ಕೇಳುತ್ತಾನೆ. ಈವಾನ್ಸ್ ರಾಜೀನಾಮೆ ಕೊಡಲು ನಿರಾಕರಿಸಿದಾಗ ಮರ್ಡೋಕ್ ಇನ್ನೊಬ್ಬನನ್ನು ಸಂಪಾದಕನನ್ನಾಗಿ ನೇಮಿಸಿ ಈವಾನ್ಸ್ ತೊಲಗಬೇಕೆಂದು ಒತ್ತಾಯ ಮಾಡುತ್ತಾರೆ. ಒಂದಾನೊಂದು ಕಾಲಕ್ಕೆ ಪ್ರೀತಿ, ವಿಶ್ವಾಸಗಳಿಂದ, ಸ್ನೇಹದ ನಗೆ ಮತ್ತು ಧೈರ್ಯ ಸಾಹಸಗಳ ರೋಮಾಂಚನದಿಂದ ತುಂಬಿದ್ದ ‘ಟೈಮ್ಸ್’ ಆಫೀಸ್ ಮನಸ್ತಾಪ, ಸಂಶಯ, ದ್ವೇಷಗಳಿಂದ ತುಂಬಿಕೊಳ್ಳುತ್ತದೆ. ಒಂದು ಕಾಲಕ್ಕೆ ಸಂಪಾದಕ ಈವಾನ್ಸ್ ಗಾಗಿ ಪ್ರಾಣವನ್ನು ಕೂಡ ತೆತ್ತು ಪತ್ರಿಕೆಯನ್ನು ಬೆಳೆಸಲು ತಯಾರಿದ್ದ ಸಹೋದ್ಯೋಗಿಗಳು ಈಗ ಸ್ವಾರ್ಥಿಗಳಾಗಿ ಈವಾನ್ಸ್‌ನ ನಿರ್ಗಮನವನ್ನು ಸ್ವಾಗತಿಸುವ ಹಂತಕ್ಕೆ ಹೋಗಿದ್ದಾರೆ. ಈವಾನ್ಸ್ ರಕ್ಷಣೆಗೆ ಬರಲು ನಿರಾಕರಿಸುವ ಸರ್ಕಾರ, ಒಗ್ಗಟ್ಟಾಗಿ ಹೋರಾಡಲು ಸಿದ್ಧರಿಲ್ಲದ ಸಹೋದ್ಯೋಗಿಗಳು, ಹಣದ ಆಶೆಯಲ್ಲಿ ಮುಳುಗಿರುವ ಮಾಲೀಕರು ಪಳಗಿದ ‘ಟೈಮ್ಸ್’ಗಾಗಿ ಕಾಯುತ್ತಿರುವ ಕ್ರೂರ ಸಮಾಜಘಾತುಕರು- ಇವೆಲ್ಲವೂ ಈವಾನ್ಸ್‌ನನ್ನು ದಿಗ್ಭ್ರಮಗೊಳಿಸಿವೆ.

ತನ್ನ ಕಚೇರಿಯನ್ನು ಕೊನೆಯ ಬಾರಿಗೆ ಬಿಟ್ಟು ಹೊರಟ ಹೆರಲ್ಡ್ ಈವಾನ್ಸ್‌ನಲ್ಲಿದ್ದ ಏಕಾಂಗಿತನ ಮತ್ತು ತಬ್ಬಲಿತನ ಎಲ್ಲ ಪತ್ರಕರ್ತರ ಆಳದ ಭಾವನೆಯಾಗಿದೆ. ಕೋಟ್ಯಂತರ ಪೌಂಡುಗಳನ್ನು ಹೂಡಿ ಕಟ್ಟಿದ ಪತ್ರಿಕೆಯೊಂದಕ್ಕೆ ರಾಜಕೀಯ, ಸಾಂಸ್ಕೃತಿಕ ಅಧಿಕಾರ ಇರುವಂತೆಯೇ ಆರ್ಥಿಕ, ಸಾಮಾಜಿಕ ಕಾಳಜಿ ಹೊಣೆಗಳಿರುತ್ತವೆ. ಅಲ್ಲಿರುವ ಸಾವಿರಾರು ಜನರಲ್ಲಿ ಅನೇಕರು ಅಶಿಸ್ತಿನ, ಮರ್ಜಿಗಳ, ಸರ್ಕಾರಿ ಸವಲತ್ತು, ಎಂಜಲಿಗಾಗಿ ಬಾಯಿ ಬಿಡುವವರು ಇದ್ದೇ ಇರುತ್ತಾರೆ. ಆದರೆ ಪತ್ರಿಕೆಯೊಂದಕ್ಕೆ ಜೀವ ಇರಬೇಕಾದರೆ ಆ ಪತ್ರಿಕೆಯ ನಾಯಕನಿಗೆ ತೀವ್ರ ನ್ಯಾಯವಂತಿಕೆ, ನಿಷ್ಠುರತೆ, ಬಂಡಾಯದ ಗುಣ ಬೇಕೇಬೇಕಾಗುತ್ತದೆ. ನೀಚತನ ಕಂಡಲ್ಲಿ ಭೂತ ಬಿಡಿಸುವ, ಧಿಕ್ಕರಿಸುವ ಗುಣವಿಲ್ಲದ ಪತ್ರಿಕೆ ನೀಚತನದ ಪಾಲುದಾರ ಆಗುತ್ತದೆ. ಆದ್ದರಿಂದಲೇ, ನಿಶ್ಚಯ, ಪ್ರಾಮಾಣಿಕತೆ ಮತ್ತು ಉಗ್ರ ನಿಷ್ಠುರತೆಯ ವ್ಯಕ್ತಿ ಏಕಾಂಗಿತನ ಮತ್ತು ತಬ್ಬಲಿತನವನ್ನು ಕಟ್ಟಿಕೊಂಡೇ ಬದುಕುತ್ತಾನೆ.

ಈವಾನ್ಸ್ ತನ್ನ ಅನುಭವಗಳನ್ನೆಲ್ಲ ‘ಗುಡ್ ಟೈಮ್ಸ್, ಬ್ಯಾಡ್ ಟೈಮ್ಸ್‘ ಎಂಬ ಪುಸ್ತಕದಲ್ಲಿ ಬರೆದಿದ್ದಾನೆ.

ಪಿ ಲಂಕೇಶ್

8 ಸೆಪ್ಟೆಂಬರ್, 1985

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಬರೆದಿದ್ದ ವಿದ್ಯಾರ್ಥಿಗಳಿಗೆ 50% ಅಂಕ: ಮರುಮೌಲ್ಯಮಾಪನ ಮಾಡಿದಾಗ ಶೂನ್ಯಕ್ಕಿಳಿದ ಅಂಕ

0
ಪರೀಕ್ಷೆಗಳಿಗೆ ಬರೆದಿರುವ ಉತ್ತರಗಳ ಗುಣಮಟ್ಟದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಆದರೆ ಉತ್ತರಪ್ರದೇಶದ  ಜೌನ್‌ಪುರದಲ್ಲಿರುವ ವೀರ್‌ ಬಹದ್ದೂರ್‌ ಸಿಂಗ್‌ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿನ ಪರೀಕ್ಷೆಯಲ್ಲಿನ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಮತ್ತು ಕ್ರಿಕೆಟ್‌ ಆಟಗಾರರ ಹೆಸರುಗಳನ್ನು...