ಸರ್ಜಿಕಲ್ ಸ್ಟ್ರೈಕ್: ರಾಜೀವ್ ಗಾಂಧಿ ಎದುರು ಈತನ್ಯಾವ ಸೀಮೆ ಗುಗ್ಗು?|

| ನಿಖಿಲ್ ಕೋಲ್ಪೆ |

ನಾನು ರಾಜೀವ್ ಗಾಂಧಿ ಯವರ ಬಗ್ಗೆ ಬರೆಯುತ್ತಿರಲಿಲ್ಲ. ಆದರೆ ಮಣಿಶಂಕರ ಅಯ್ಯರ್ ಅವರು ‘ನೀಚ’ ಎಂದು ಕರೆದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಯವರನ್ನು ನಿಂದಿಸಿ, ಆ ಮಾತನ್ನು ಸಾಬೀತುಪಡಿಸಿರುವುದರಿಂದ ಹೊಸ ಪೀಳಿಗೆಗೆ ಗೊತ್ತಾಗಲಿ ಎಂದು ಬರೆಯುತ್ತಿದ್ದೇನೆ.

ಕಾಂಗ್ರೆಸ್ ನೇತೃತ್ವದ ಸರಕಾರದ ಅವಧಿಯಲ್ಲಿ ಆರು ಸರ್ಜಿಕಲ್ ಸ್ಟ್ರೈಕ್ ನಡೆದಿದ್ದರೂ, ಗೌಪ್ಯತೆ ಕಾಯ್ದುಕೊಂಡು ಅದರ ಕ್ರೆಡಿಟ್ ಯಾರಿಗೆ ಸೇರಬೇಕೋ ಅವರಿಗೆ, ಅಂದರೆ ಭಾರತದ ಸೇನೆಗೆ ಬಿಟ್ಟುಕೊಟ್ಟು ಅದು ಸುಮ್ಮನಿತ್ತು. ಆದರೆ, ಇತ್ತೀಚೆಗೆ ಸೇನೆ ನಡೆಸಿದ ಎರಡು ಸರ್ಜಿಕಲ್ ಸ್ಟ್ರೈಕನ್ನು ಮೋದಿ ತಾನೇ ಅಲ್ಲಿಗೆ ಗನ್ ಹಿಡಿದುಕೊಂಡು ಹೋಗಿ ಮಾಡಿದ್ದೇನೆ ಎಂಬಂತೆ ಬಿಂಬಿಸಿ ಮತ ಕೇಳುತ್ತಿರುವುದು ಮತ್ತು ಕಾಂಗ್ರೆಸ್ ತನ್ನನ್ನು ಕೊಲ್ಲಲು ಬಯಸುತ್ತಿದೆ ಎಂದು ಪುಕ್ಕಲರಂತೆ ಅಲವತ್ತುಕೊಂಡಿರುವ ಹಿನ್ನೆಲೆಯಲ್ಲಿಯೂ ಈ ವಿಷಯ ನೆನಪಿಸಬೇಕಾಗಿದೆ.
ಸಾಮಾನ್ಯವಾಗಿ ಎಲ್ಲಾ ದೇಶಗಳ ಸೇನೆಗಳು ಸರ್ಜಿಕಲ್ ಸ್ಟ್ರೈಕ್‍ಗಳನ್ನು ನಡೆಸುತ್ತಲೇ ಇರುತ್ತವೆ. ಸರಕಾರ ಸೇನೆಗೆ ನಿರ್ದಿಷ್ಟ ಆದೇಶ ನೀಡುತ್ತದೆ ಮತ್ತು ಸೇನೆಯೇ ಆದನ್ನು ಯೋಜಿಸಿ ತನಗೆ ಹೇಳಿದಷ್ಟೇ ಕೆಲಸ (Task/mission) ಕಾರ್ಯಗತಗೊಳಿಸುತ್ತದೆ. ಯಾವುದೇ ಸರಕಾರ ಅದರ ಬಗ್ಗೆ ಬೊಂಬಡಾ ಬಜಾಯಿಸುವುದಿಲ್ಲ. ಕನಿಷ್ಟವಾದರೂ ಆರೋಗ್ಯಕರ ಪ್ರಜಾತಾಂತ್ರಿಕ ವ್ಯವಸ್ಥೆ ಇರುವ ಯಾವುದೇ ದೇಶದಲ್ಲಿ ಸೇನೆಯು ದೇಶಕ್ಕೆ ನಿಷ್ಠವಾಗಿರುತ್ತದೆ. ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ಸರಕಾರಕ್ಕೆ, ಆ ಮೂಲಕ ದೇಶಕ್ಕೆ ನಿಷ್ಟೆ ಹೊಂದಿರುತ್ತದೆಯೇ ಹೊರತು ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಅಲ್ಲ. (ನಮ್ಮಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥನಂತಹ ಶತ ಮೂರ್ಖರು ಭಾರತೀಯ ಸೇನೆಯನ್ನು ಮೋದಿಯ ಸೇನೆ ಎಂದು ಕರೆದು ಅವಮಾನಿಸುತ್ತಾರೆ!)

ಅದಲ್ಲದೆ, ಬೇಕಾದಷ್ಟೇ ಮಾಹಿತಿಯನ್ನು ಸಾರ್ವಜನಿಕರಿಗೆ ಕೊಡಲಾಗುತ್ತದೆ. ಅದು ಸೇನಾ ದಾಖಲೆಗಳಲ್ಲಿ ಇರುತ್ತದೆ. ಮೃತರಿಗೆ ಪರಿಹಾರವನ್ನೂ, ಶೌರ್ಯ ತೋರಿಸಿದವರಿಗೆ ಪ್ರಶಸ್ತಿಯನ್ನೂ ಸದ್ದಿಲ್ಲದೇ ಕೊಡಲಾಗುತ್ತದೆ. ಕೆಲವೊಮ್ಮೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರ ಹೆಸರುಗಳನ್ನು ಕೂಡಾ ಗುಪ್ತವಾಗಿ ಇಡಲಾಗುತ್ತದೆ.

ಇದಕ್ಕೆ ಕಾರಣಗಳೂ ಇವೆ. ಇದರಿಂದ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಏರುಪೇರಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅದು ವಿಭಿನ್ನ.ಸಂದೇಶಗಳನ್ನು ಬೇರೆಬೇರೆ ದೇಶಗಳಿಗೆ ರವಾನಿಸುತ್ತದೆ. ಎರಡನೆಯದಾಗಿ ಕಾರ್ಯಾಚರಣೆಯ ವಿಧಾನಗಳು ಶತ್ರುವಿಗೆ ತಿಳಿಯಬಾರದು. ಮೂರನೆಯದಾಗಿ, ಇಂತಹಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದವರ ಮತ್ತವರ ಕುಟುಂಬದವರ ಜೀವಕ್ಕೆ ವಿದೇಶಿ ಸರಕಾರ, ಸಂಘಟನೆಗಳಿಂದ ಅಥವಾ ಅವುಗಳ ದೇಶಿ ಏಜೆಂಟರಿಂದ ಜೀವಾಪಾಯ ಇರುತ್ತದೆ.

ಒಂದು ಉದಾಹರಣೆಯಾಗಿ ಅಮೃತಸರದ ಗುರುದ್ವಾರ ಚಿನ್ನದ ದೇವಾಲಯದಲ್ಲಿ ಖಾಲಿಸ್ಥಾನ್ ಉಗ್ರರ ಮೇಲೆ ಸೇನೆ ನಡೆಸಿದ ‘ಅಪರೇಷನ್ ಬ್ಲೂ ಸ್ಟಾರ್’ ವೇಳೆಗೆ ಭಾರತೀಯ ಭೂಸೇನೆಯ ದಂಡ ನಾಯಕರಾಗಿದ್ದ ಜನರಲ್ ಎ.ಎಸ್. ವೈದ್ಯ ಅವರನ್ನು ನಿವೃತ್ತಿ ಆದ ಬಳಿಕ ಪುಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಒಬ್ಬ ಜನರಲ್‍ಗೇ ಹೀಗಾದರೆ, ಸಾಮಾನ್ಯ ಸೈನಿರನ್ನು ರಕ್ಷಿಸುವುದು ಹೇಗೆ? ಆದರೆ ಈಗ ಸೈನಿಕರು ಕೇವಲ ಸಾಯಲು ಮತ್ತು ಆಳುವ ಪಕ್ಷಕ್ಕೆ ಮತ ತರಲು ಮಾತ್ರ ಇರುವವರಂತೆ ವರ್ತಿಸಲಾಗುತ್ತಿದೆ.

ಆದರೆ ಘೋಷಿತ ಯುದ್ಧದಲ್ಲಿ ಈ ಪರಿಸ್ಥಿತಿ ಇರುವುದಿಲ್ಲ. ಪ್ರಚಾರಕ್ಕೆ ಹೆಚ್ಚಿನ ಮಹತ್ವ ಇರುತ್ತದೆ. ಯಶಸ್ಸನ್ನು ಉತ್ಪ್ರೇಕ್ಷಿಸಿ, ವೈಫಲ್ಯಗಳನ್ನು ಮುಚ್ಚಿಡಲಾಗುತ್ತದೆ. ಸಾಮಾನ್ಯವಾಗಿ ಯುದ್ಧಗಳು ದೇಶದ ಜನರ ಭಾವನೆಗಳನ್ನು ಕೆರಳಿಸುವುದರಿಂದ ಆಳುವ ಪಕ್ಷಕ್ಕೆ ಲಾಭ ತಂದುಕೊಡುತ್ತವೆ. ಇದು ಯಾವತ್ತೂ ನಿಜವಾಗುವುದಿಲ್ಲ! ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಗೆದ್ದರೂ, ಅವರನ್ನು ಮಹಾ ತಂತ್ರಗಾರಿಕೆಯವರೆಂದು ಗುರುತಿಸಲಾಗುತ್ತದೆಯೇ ಹೊರತು ಮಹಾ ಪ್ರಧಾನಿಯಾಗಿ ಅಲ್ಲ! ಮುಂದಿನ ಚುನಾವಣೆಯಲ್ಲಿ ಅವರು ಸೋತು ಲೇಬರ್ ಪಕ್ಷ ಅಧಿಕಾರಕ್ಕೆ ಬಂತು ಮತ್ತು ಭಾರತಕ್ಕೆ ಸ್ವಾತಂತ್ರ್ಯ ಬಂತು ಎಂದು ನಾವು ನೆನಪಿಸಿಕೊಳ್ಳಬೇಕು.

ಬಾಂಗ್ಲಾ ವಿಮೋಚನೆಯ ಯಶಸ್ಸನ್ನು ಸೈನ್ಯಕ್ಕೆ ಅರ್ಪಿಸಿದ್ದ ಇಂದಿರಾಗಾಂಧಿ

1971ರ ಬಾಂಗ್ಲಾ ವಿಮೋಚನೆಯ ಯುದ್ಧದಲ್ಲಿ ಭಾರತೀಯ ಸೇನೆ ಅಭೂತಪೂರ್ವ ಜಯ ಸಾಧಿಸಿ ಪಾಕಿಸ್ತಾನ ನಿಶ್ಶರ್ಥವಾಗಿ ಶರಣಾಗತಿಯಗಿ, ಬಾಂಗ್ಲಾ ದೇಶವೆಂಬ ಹೊಸ ದೇಶವೇ ಉದಯವಾಗಿತ್ತು. ಪಾಕಿಸ್ತಾನದ ಇಬ್ಬದಿ ಅಪಾಯ ಕೊನೆಗೊಂಡಿತ್ತು. ಈ ನಿರ್ಧಾರ ಸುಲಭವಾಗಿರಲಿಲ್ಲ. ಯುಎಸ್‍ಎಯಂತಹ ಶಕ್ತ ರಾಷ್ಟ್ರವನ್ನು ಎದುರು ಹಾಕಿಕೊಳ್ಳಬೇಕಾಗಿತ್ತು. ಆದರೂ ಎದೆಗುಂದದೇ ಈ ನಿರ್ಧಾರ ತೆಗೆದುಕೊಂಡ ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಯಶಸ್ಸನ್ನು ಸೈನ್ಯಕ್ಕೆ ಅರ್ಪಿಸಿದರೇ ಹೊರತು ತಾನು ಮಾಡಿದ್ದೆಂದು ಎಲ್ಲೂ ಕೊಚ್ಚಿಕೊಳ್ಳಲಿಲ್ಲ. ಇದು ಅವರಿಗೂ ಮೋದಿಗೂ ಇರುವ ವ್ಯತ್ಯಾಸ!

ಆದರೆ, ವಿದೇಶಿ ನೆಲದಲ್ಲಿ ನೆಲದಲ್ಲಿ ನಡೆದ ಭಾರತದ ಮೊದಲ ಕ್ಷಿಪ್ರ ಕಾರ್ಯಚರಣೆಯನ್ನು ಮೋದಿ ಎಂದೂ ನೆನಪಿಸಿಕೊಂಡಿಲ್ಲ ಎಂಬ ಕಾರಣದಿಂದ ನಾವು ನೆನಪಿಸಿಕೊಳ್ಳಬೇಕಾಗುತ್ತದೆ. ಅದು 1988. ಆಗ ಪ್ರಧಾನಿಯಾಗಿದ್ದವರು ರಾಜೀವ್ ಗಾಂಧಿ. ಅದೇ ಹೊತ್ತಿಗೆ ಶೀಲಂಕಾದಲ್ಲಿ ಎಲ್ಟಿಟಿಈ, ಪಿಎಲ್‍ಓಟಿಇ, ಟಿಯುಎಲ್‍ಎಫ್ ಮುಂತಾದ ತಮಿಳು ಉಗ್ರಗಾಮಿ ಸಂಘಟನೆಗಳು ಈಳಂ ಸ್ಥಾಪನೆಗಾಗಿ ಸರಕಾರದೊಂದಿಗೆ ಕಾದಾಟ ನಡೆಸುತ್ತಿದ್ದುದು ಮಾತ್ರವಲ್ಲ, ಪ್ರಾಬಲ್ಯಕ್ಕಾಗಿ ತಮ್ಮೊಳಗೆಯೂ ಕಾದಾಟ ನಡೆಸುತ್ತಿದ್ದವು. ಆಗ ಪೀಪಲ್ಸ್ ಲಿಬರೇಷನ್ ಆರ್ಗನೈಸೇಷನ್ ಆಫ್ ತಮಿಳ್ ಈಳಂ (ಪ್ಲೋಟ್) ಎಂಬ ಸಂಘಟನೆ ಮಾಲ್ದೀವ್ಸ್ ಎಂಬ ಪುಟ್ಟ ದೇಶದಲ್ಲಿ ನೆಲೆ ಸ್ಥಾಪಿಸಿ ಪ್ರಬಲ ಎಲ್ಟಿಟಿಇಗೆ ಸಡ್ಡುಹೊಡೆಯಲು ಹುನ್ನಾರ ನಡೆಸಿತ್ತು.

ಆಗ ಮಾಲ್ಡೀವ್ಸ್ ಅಧ್ಯಕ್ಷರಾಗಿದ್ದವರು ಭಾರತೀಯ ಮೂಲದ ಮಹಮ್ಮದ್ ಅಬ್ದುಲ್ ಗಯ್ಯೂಮ್. ಹಿಂದಿನಿಂದಲೂ ಭಾರತದ ಮಿತ್ರರಾಷ್ಟವಾಗಿದ್ದು ಯಾವತ್ತೂ ವಿಶ್ವಸಂಸ್ಥೆಯಲ್ಲಿ ಭಾರತದ ಪರ ಮತ ಚಲಾಯಿಸುತ್ತಿತ್ತು. ಆಗ ಮಹಮ್ಮದ್ ಉತೂಫಿ ಎಂಬ ವ್ಯಕ್ತಿಯ ನಾಯಕತ್ವದಲ್ಲಿ ಪ್ಲೋಟ್ ಸಂಘಟನೆಯ 80-110ರಷ್ಟಿದ್ದ ಶಸ್ತ್ರಸಜ್ಜಿತ ಬಾಡಿಗೆ ಬಂಟರ ನೆರವಿನಿಂದ ಕ್ಷಿಪ್ರ ಕ್ರಾಂತಿಯೊಂದು ನಡೆಯಿತು. ಸರಕಾರದ 27 ಮಂದಿಯನ್ನು ಒತ್ತೆಸೆರೆ ಇರಿಸಿತು. ಮುಂದೆ ಆದುದನ್ನು ಈ ಬಂಡುಕೋರರು ಬಿಡಿ; ಇಡೀ ಪ್ರಪಂಚದಲ್ಲಿ ಯಾರೂ ಊಹಿಸಿರಲಿಲ್ಲ! ಯಾಕೆಂದರೆ ಭಾರತವು ಘೋಷಿತ ಯುದ್ಧಗಳನ್ನು ಬಿಟ್ಟರೆ ಯಾವತ್ತೂ ದೇಶದ ನೆಲದ ಹೊರಗೆ ಕಾರ್ಯಾಚರಣೆ ನಡೆಸಿರಲಿಲ್ಲ.

ಆಪರೇಷನ್ ಕ್ಯಾಕ್ಟಸ್

ಮಾಲ್ಡೀವ್ಸ್ ನಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ ಬಗ್ಗೆ ಭಾರತದ ಗುಪ್ತಚರ ಸಂಸ್ಥೆಗಳಿಗೆ ಅರಿವಿತ್ತು. ಅಧ್ಯಕ್ಷ ಗಯ್ಯೂಮ್ ರಕ್ಷಣೆ ಕೋರಿ ಸಂದೇಶ ಕಳಿಸಿದಾಗ ಪ್ರಧಾನಿ ರಾಜೀವ್ ಗಾಂಧಿ ಹಿಂದೆ ಮುಂದೆ ನೋಡಲಿಲ್ಲ! ವಿರೋಧಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡವರೇ, ಸೇನಾ ಕಾರ್ಯಾಚರಣೆಗೆ ಆದೇಶ ನೀಡಿಯೇ ಬಿಟ್ಟರು. ಅದುವೇ ‘ಅಪರೇಷನ್ ಕ್ಯಾಕ್ಟಸ್’!
1988ರ ನವಂಬರ್ 3ರಂದು ನಡೆದ ಈ ಕಾರ್ಯಾಚರಣೆಯ ಹೊಣೆಯನ್ನು 17 ಪ್ಯಾರಾಚ್ಯೂಟ್ ರೆಜಿಮೆಂಟಿನ ’50 ಇಂಡಿಪೆಂಡೆಂಟ್ ಪ್ಯಾರಾಚ್ಯೂಟ್ ಬ್ರಿಗೇಡ್’ಗೆ ವಹಿಸಲಾಗಿತ್ತು. ನೇತೃತ್ವ ವಹಿಸಿದವರು ಬ್ರಿಗೇಡಿಯರ್ ಫಾರೂಕ್ ಬುಲ್ಸಾರಾ. ಸಹಾಯಕರಾಗಿ ಇದ್ದವರು ಕರ್ನಲ್ ಸುಭಾಷ್ ಜೋಷಿ. 1600 ಪ್ಯಾರಾಟ್ರೂಪರ್‍ಗಳು ಇಲ್ಲ್ಯೂಸಿನ್ II-76 ಸೋವಿಯತ್ ನಿರ್ಮಿತ ಸಾರಿಗೆ ವಿಮಾನಗಳಲ್ಲಿ ಆಗ್ರಾ ವಾಯುನೆಲೆಯಿಂದ ಹೊರಟು ಸಂದೇಶ ಕೈಸೇರಿದ ಒಂಭತ್ತು ಗಂಟೆಗಳಲ್ಲಿ 2000 ಕಿ.ಮೀ. ದೂರದ ಮಾಲ್ಡೀವ್ಸ್ ರಾಜಧಾನಿ ಮಾಲೆಯ ವಿಮಾನ ನಿಲ್ದಾಣದಲ್ಲಿ ಇಳಿದು ಆಗಿತ್ತು.

ಇದನ್ನೂ ಓದಿ: ರಾಹುಲ್ ಗಾಂಧಿ ವರ್ಸಸ್ ನರೇಂದ್ರ ಮೋದಿ

ಮುಂದಿನ ಕೆಲವೇ ಗಂಟೆಗಳಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಗಯ್ಯೂಮ್ ಸರಕಾರವನ್ನು ಮರುಸ್ಥಾಪನೆ ಮಾಡಲಾಗಿತ್ತು. ಇಡೀ ಕಾರ್ಯಾಚರಣೆಯಲ್ಲಿ ಸತ್ತವರು 19 ಮಂದಿ ಮಾತ್ರ. ಅವರಲ್ಲಿ ನಾಲ್ವರು ಒತ್ತೆಯಾಳುಗಳನ್ನು ಬಂಡುಕೋರರು ಕೊಂದಿದ್ದರು. ಉಳಿದವರೆಲ್ಲಾ ಮಾಲ್ಡೀವ್ಸ್‍ನ ಸೈನಿಕರು. 36 ಮಂದಿ ಗಾಯಗೊಂಡಿದ್ದರು. ಭಾರತೀಯ ಸೇನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಅಷ್ಟು ಅಚ್ಚುಕಟ್ಟಾದ ಸೈನಿಕ ಕಾರ್ಯಾಚರಣೆ ಇದಾಗಿತ್ತು.

ಕೈಗೆಸಿಕ್ಕ ಬಂಡುಕೋರರನ್ನು ಮಾಲ್ಡೀವ್ಸ್ ಸರಕಾದ ವಶಕ್ಕೆ ಒಪ್ಪಿಸಲಾಗಿದ್ದರೆ, ಕೆಲವು ಬಾಡಿಗೆ ಸೈನಿಕರು ಹಡಗೊಂದನ್ನು ಅಪಹರಿಸಿ ಪರಾರಿಯಾಗಿದ್ದರು. ಅವರನ್ನು ಭಾರತೀಯ ನೌಕಾಪಡೆಯ ಐಎನ್‍ಎಸ್ ಗೋದಾವರಿ ಮತ್ತು ಐಎನ್‍ಎಸ್ ಬೆತ್ವಾ ಸಮರ ನೌಕೆಗಳು ಅಡ್ಡಹಾಕಿ ಬಂಧಿಸಿ, ನಂತರ ಅವರನ್ನು ಮಾಲ್ದೀವ್ಸ್‍ಗೆ ಒಪ್ಪಿಸಲಾಗಿತ್ತು.

ಭಾರತೀಯ ಸೇನೆಯ ಕ್ಷಮತೆಗೆ ಪ್ರಪಂಚದಾದ್ಯಂತ ಶ್ಲಾಘನೆ ವ್ಯಕ್ತವಾಗಿತ್ತು. ಯಾಕೆಂದರೆ ಇದು ಬಾಡಿಗೆ ಸೈನಿಕರು (Mercenaries) ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವನ್ನು ಉರುಳಿಸಲು ನಡೆಸಿದ ಸಶಸ್ತ್ರ ಪ್ರಯತ್ನವಾಗಿತ್ತು ಮತ್ತು ಇಂತಹಾ ಅಪಾಯ ಪ್ರಪಂಚದ ಎಲ್ಲಾ ಚಿಕ್ಕಪುಟ್ಟ ದೇಶಗಳಿಗೆ ಇತ್ತು. ಇಷ್ಟಾದರೂ ರಾಜೀವ್ ಗಾಂಧಿಯವರು ಸೇನೆಯನ್ನು ಶ್ಲಾಘಿಸಿದರೇ ಹೊರತು ಮೋದಿಯಂತೆ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳಲಿಲ್ಲ, ಕೆರೆದುಕೊಳ್ಳಲಿಲ್ಲ.

ಇದನ್ನೂ ಓದಿ: ಮೋದಿ ಹೇಳಿಕೆಯ ಕುರಿತು ಯೋಧನ ಪತ್ನಿ

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಇಂತಹಾ ಒಂದು ಮೊದಲ ಮತ್ತು ಮಹತ್ವದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು ಒಬ್ಬರು ಮುಸ್ಲಿಂ ಅಧಿಕಾರಿ ಎಂಬುದು ಭಾರತೀಯ ಸೇನೆ ಎಷ್ಟು ಜಾತ್ಯತೀತ ಎಂದು ತೋರಿಸುತ್ತಿದೆ. ಇಂತಹಾ ಸೇನೆಯನ್ನು ಮೋದಿ ಧರ್ಮ, ಮತ್ತು ರಾಜಕಾರಣದ ನೆಲೆಯಲ್ಲಿ ಪ್ರಚೋದಿಸುತ್ತಿರುವುದು, ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮುಂದೆ ದೇಶಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು. ಮುಂದೆ ಇದೇ ಲಂಕಾ ಉಗ್ರರು ಪ್ರತೀಕಾರಾರ್ಥವಾಗಿ ನಡೆಸಿದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ರಾಜೀವ್ ಗಾಂಧಿಯವರನ್ನು ನಿಂದಿಸಿ ಮೋದಿಯವರು ತನ್ನ ಸ್ಥಾನದ ಘನತೆಯನ್ನು ಪಾತಾಳಕ್ಕೆ ತಳ್ಳಿರುವುದೇ ಅಲ್ಲದೆ, ತಾನು ಎಂತಹಾ ಚಿಂತನೆಯ ವ್ಯಕ್ತಿ ಎಂದು ತೋರಿಸಿಕೊಟ್ಟಿದ್ದಾರೆ!

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here