Homeಮುಖಪುಟ‘ಬಯಲು ಶೌಚ ಮುಕ್ತ ದೇಶ’ : ಪೊಳ್ಳು ಘೋಷಣೆ ಅಡಿಯ ಕಟು ವಾಸ್ತವ...

‘ಬಯಲು ಶೌಚ ಮುಕ್ತ ದೇಶ’ : ಪೊಳ್ಳು ಘೋಷಣೆ ಅಡಿಯ ಕಟು ವಾಸ್ತವ…

‘ಕೋಟಿಗಟ್ಟಲೆ ಹೊಸ ಶೌಚಾಲಯಗಳ ನಿರ್ಮಾಣ ಎಂದರೆ ಸಾವಿರಗಟ್ಟಲೆ ಪೌರಕಾರ್ಮಿಕರನ್ನು ಮಲದ ಗುಂಡಿಗೆ ನೂಕಿದಂತೆ’ ಎಂದು ಬೆಜವಾಡ ವಿಲ್ಸನ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

- Advertisement -
- Advertisement -

ಐದು ವರ್ಷದ ಹಿಂದೆ ಪ್ರಧಾನಿಗಳು ಉದ್ದ ಪೊರಕೆ ಹಿಡಿದು ಭಾರತ ಸ್ವಚ್ಛಗೊಳಿಸಲು ಕರೆ ನೀಡಿದಾಗ ದೇಶ ಮಾತ್ರವಲ್ಲ, ದೇಶವಾಸಿಗಳ ಮನದ ಹತ್ತುಹಲವು ಕೊಳೆಯೂ ಕಳೆದು ಶುಚಿಯಾಗುವ ಕಾಲ ಬಂದಿತೆಂಬ ಮತ್ತೊಂದು ಹಗಲುಗನಸು ಮೂಡಿತು. ದೇಶವನ್ನು ಬಯಲು ಶೌಚ ಮುಕ್ತವಾಗಿಸಬೇಕೆನ್ನುವುದು ಹೊಸ ಯೋಜನೆಯೇನಲ್ಲ, ಕಳೆದೆರಡು ದಶಕಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದಿಕ್ಕಿನಲ್ಲಿ ಪ್ರಯತ್ನಿಸುತ್ತಿವೆ.

1999ರಲ್ಲಿ ಜಾರಿಗೊಂಡ ಸಂಪೂರ್ಣ ನೈರ್ಮಲ್ಯ ಆಂದೋಲನವನ್ನು 2012ರಲ್ಲಿ ಪುನರ್ರೂಪಿಸಿ, ನಿರ್ಮಲ ಭಾರತ ಅಭಿಯಾನದಡಿಯಲ್ಲಿ ಶೌಚಾಲಯ ಕಟ್ಟುವುದಕ್ಕೆ ಹತ್ತು ಸಾವಿರ ರೂ. ಪ್ರೋತ್ಸಾಹಧನ ನೀಡಲಾಯಿತು. 2014ರಲ್ಲಿ ಇದೇ ಯೋಜನೆಯನ್ನು ತುಸು ಬದಲಿಸಿದ ಮೋದಿ ಸರ್ಕಾರವು ‘ಗ್ರಾಮೀಣ ಸ್ವಚ್ಛ ಭಾರತ ಮಿಶನ್ (ಎಸ್.ಬಿ.ಎಂ.)’ ಅಡಿ ಮೊದಲಿದ್ದ ಪ್ರೋತ್ಸಾಹಧನವನ್ನು ಹನ್ನೆರಡು ಸಾವಿರಕ್ಕೆ ಹೆಚ್ಚಿಸಿ, ಇನ್ನಷ್ಟು ವ್ಯಾಪಕವಾಗಿ ಜಾರಿಗೊಳಿಸಿತು. ಜನರಲ್ಲಿಯೂ ಈ ಬಗ್ಗೆ ತುಸು ಜಾಗೃತಿ ಮೂಡಿದ್ದರ ಪರಿಣಾಮವಾಗಿ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣ ‘ಆಶಯ’ದಿಂದ ‘ಆದ್ಯತೆ’ಯ ವಿಚಾರವಾಗತೊಡಗಿತು. ಕತ್ತಲಾದ ಮೇಲೆ ಅಥವಾ ಬೆಳಕು ಮೂಡುವ ಮೊದಲೇ ದೇಹಬಾಧೆ ತೀರಿಸಿಕೊಳ್ಳುವ ಅನಿವಾರ್ಯ ಒತ್ತಡದಿಂದ ಹಿಂಸೆ, ಅವಮಾನ, ಕಿರಿಕಿರಿ ಅನುಭವಿಸುತ್ತಿದ್ದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಅನುಕೂಲವಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಹದಿಹರೆಯದ ಹುಡುಗಿಯರು, ಬಸುರಿಯರು, ಬಾಣಂತಿಯರಿಗೆ ಅತ್ಯಂತ ಖಾಸಗಿಯಾಗಿ, ಸುರಕ್ಷಿತವಾಗಿ ಶೌಚಕಾರ್ಯವನ್ನು ಮುಗಿಸಿಕೊಳ್ಳಲು ಆಸ್ಪದ ಕಲ್ಪಿಸಿತು. ಈ ಅಂಶವನ್ನು ಒಪ್ಪಿಕೊಳ್ಳುತ್ತಲೇ ಗಾಂಧಿಜಯಂತಿಯಂದು ಪ್ರಧಾನಿ ಮಾಡಿದ ‘ದೇಶವೀಗ ಸಂಪೂರ್ಣ ಬಯಲುಶೌಚ ಮುಕ್ತ’ ಎಂಬ ಪೊಳ್ಳು ಘೋಷಣೆಯಡಿಯ ಕಟುವಾಸ್ತವಕ್ಕೆ ಕಣ್ಣು ತೆರೆಯಬೇಕಿದೆ.

ಮೋದಿ ಸರ್ಕಾರ ಹಳೆಯ ಯೋಜನೆಗೆ ಆಕರ್ಷಕ ಹೊಸ ಹೆಸರಿಟ್ಟಂತೆಯೇ ಹಿಂದಿನ ಸಂಪೂರ್ಣ ನೈರ್ಮಲ್ಯ ಆಂದೋಲನದ (http:/tsc.gov.in) ಅಂತರ್ಜಾಲ ತಾಣವನ್ನೂ ಚಿತ್ತಾಕರ್ಷಕವಾಗಿ ಕಾಣುವಂತೆ ನವೀಕರಿಸಿತು. ಹಿಂದಿನ ಜಾಲತಾಣದಲ್ಲಿ ಜನಜಾಗೃತಿ ಮೂಡಿಸುವ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಕಾರ್ಯಕ್ರಮಕ್ಕೆ ಒಟ್ಟು ಎಸ್ಬಿಎಂ ಆಯವ್ಯಯದ ಎಷ್ಟು ಹಣ ಖರ್ಚಾಯಿತು, ಜಾಹೀರಾತಿಗೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನೆಲ್ಲ ಕಂಡುಕೊಳ್ಳಲು ಸಾಧ್ಯವಿತ್ತು. ಈಗ ನಿಮಿಷಕ್ಕೂ ಅಪ್‍ಡೇಟ್ ಆಗುವ ಡ್ಯಾಷ್‍ಬೋರ್ಡ್ ನಿಮಗೆ ಕಟ್ಟಿದ ಶೌಚಾಲಯಗಳ ಸಂಖ್ಯೆ, ಬಯಲುಶೌಚ ಮುಕ್ತ ಪಂಚಾಯಿತಿಗಳು, ಹಳ್ಳಿಗಳು ಇತ್ಯಾದಿ ಸಾಧನೆಯ ಅಂಕಿಸಂಖ್ಯೆಯನ್ನೆ ಢಾಳಾಗಿ ಕಾಣಿಸುತ್ತದೆಯೇ ವಿನಃ ವಿಶ್ಲೇಷಣೆಗೆ ಅಗತ್ಯವಾದ ಈ ಅಂಕಿಸಂಖ್ಯೆಯನ್ನಲ್ಲ!

ಜಾಹೀರಾತಿನ ಮಿಂಚು
ಸ್ವಚ್ಛಭಾರತ ಮಿಶನ್ ಆರಂಭಗೊಂಡ 2014, ಅಕ್ಟೋಬರ್ 2ರಿಂದ 2017 ಜನವರಿ 31ರ ನಡುವೆ ಎಷ್ಟು ಹಣವನ್ನು ಜಾಹೀರಾತಿಗೆ ಖರ್ಚುಮಾಡಲಾಗಿದೆ ಎಂದು ಲೋಕಸಭೆಯಲ್ಲಿ 2017ರಲ್ಲಿ ಕೇಳಿದ ಪ್ರಶ್ನೆಗೆ ಈ ಅವಧಿಯಲ್ಲಿ ಅಂದರೆ 2 ವರ್ಷ ನಾಲ್ಕು ತಿಂಗಳಿಗೆ 393.12 ಕೋಟಿ ಹಣವನ್ನು ಕೇಂದ್ರ ಹಂತದಲ್ಲಿ ಜಾಹೀರಾತಿಗೆ ವ್ಯಯಿಸಲಾಗಿದೆ ಎಂದು ಉತ್ತರಿಸಲಾಗಿದೆ. ತಿಂಗಳಿಗೆ ಸರಾಸರಿ 14 ಕೋಟಿ ರೂ. ಅಂದರೆ ಈ ಲೆಕ್ಕಾಚಾರದಲ್ಲಿ ಈವರೆಗಿನ 60 ತಿಂಗಳಲ್ಲಿ ಕನಿಷ್ಠ 842 ಕೋಟಿ ರೂ. ಹಣ ಬರಿಯ ಜಾಹೀರಾತಿಗೇ ವ್ಯಯವಾಗಿದೆ ಎಂದರೆ ಇದನ್ನು ಪೋಲು ಎನ್ನದೇ ವಿಧಿಯಿಲ್ಲ. ಇದೇ ವೇಳೆ ಐಇಸಿಗೆ ಎಸ್ಬಿಎಂ ಆಯವ್ಯಯದಲ್ಲಿ ಮೀಸಲಾದ ಶೇ. 8ರಷ್ಟು ಹಣವನ್ನು ಪೂರ್ಣವಾಗಿ ರಾಜ್ಯಗಳಿಗೆ ಬಿಡುಗಡೆ ಮಾಡಿಲ್ಲ ಮತ್ತು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸಲಾಗಿದೆ. ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗಿಂತ ಅಬ್ಬರದ ಪ್ರಚಾರ ಜಾಹೀರಾತುಗಳಿಗೆ ಅತ್ಯಧಿಕ ಹಣ ದುಂದು ಮಾಡಿರುವುದನ್ನು ನೋಡಿದರೆ ಸರ್ಕಾರ ಯಾವುದಕ್ಕೆ ಒತ್ತು ನೀಡುತ್ತದೆ ಎನ್ನುವುದು ನಿಚ್ಚಳ.

‘ಸಂಖ್ಯಾ’ ಸಾಧನೆ!
ಕಾಮಗಾರಿ ಗುಣಮಟ್ಟಕ್ಕಿಂತ ಕಟ್ಟಿಮುಗಿಸುವ ಶೌಚಾಲಯಗಳ ಸಂಖ್ಯೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರಿಂದ ಕಳಪೆ ಕಾಮಗಾರಿಯ ಜೊತೆಗೆ ಹೆಚ್ಚಿನ ಕಡೆಗಳಲ್ಲಿ ಎರಡು ಗುಂಡಿಯ ಬದಲಿಗೆ ಒಂದೇ ಗುಂಡಿಯ ಶೌಚಾಲಯ ಕಟ್ಟಲಾಗಿದೆ. ರಾಷ್ಟ್ರೀಯ ಗ್ರಾಮೀಣ ನೈರ್ಮಲ್ಯ ಸಮೀಕ್ಷೆ (2018-19) ವರದಿಯೇ ಹೇಳುವಂತೆ ಶೇ.29ರಷ್ಟು ಶೌಚಾಲಯಗಳಲ್ಲಿ ಎರಡು ಗುಂಡಿಗಳಿದ್ದರೆ ಶೇ.19ರಷ್ಟು ಶೌಚಾಲಯಗಳು ಒಂದೇ ಗುಂಡಿಯನ್ನು ಹೊಂದಿವೆ ಮತ್ತು ಶೇ.34ರಷ್ಟು ಶೌಚಾಲಯಗಳು ಸೆಪ್ಟಿಕ್ ಟ್ಯಾಂಕ್ ಹೊಂದಿವೆ. ಎರಡು ಗುಂಡಿ ಶೌಚಾಲಯಗಳಲ್ಲಿ ಒಂದು ಗುಂಡಿ ತುಂಬಿದ ನಂತರ ಇನ್ನೊಂದರಲ್ಲಿ ಮಲವು ಸಂಗ್ರಹಗೊಳ್ಳುತ್ತದೆ ಮತ್ತು ತುಂಬಿದ ಗುಂಡಿಯಲ್ಲಿ ಮಲವು ಗೊಬ್ಬರವಾಗುತ್ತದೆ, ಹೀಗಾಗಿ ವಿಲೇವಾರಿಯ ಸಮಸ್ಯೆ ಬಾರದು ಎಂದುಕೊಳ್ಳೋಣ. ಆದರೆ ಒಂದೇ ಗುಂಡಿ ಇರುವ ಮತ್ತು ಸೆಪ್ಟಿಕ್ ಟ್ಯಾಂಕ್ ಇರುವ ಶೌಚಾಲಯಗಳು (ಇವೆರಡೂ ಒಟ್ಟು ಸೇರಿ ಶೇ.53) ತುಂಬಿದ ನಂತರ ವಿಲೇವಾರಿ ಹೇಗೆ?

‘ಕೋಟಿಗಟ್ಟಲೆ ಹೊಸ ಶೌಚಾಲಯಗಳ ನಿರ್ಮಾಣ ಎಂದರೆ ಸಾವಿರಗಟ್ಟಲೆ ಪೌರಕಾರ್ಮಿಕರನ್ನು ಮಲದ ಗುಂಡಿಗೆ ನೂಕಿದಂತೆ’ ಎಂದು ಬೆಜವಾಡ ವಿಲ್ಸನ್ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದೀಗ ನಮ್ಮ ಮುಂದಿರುವ ಕಟುವಾಸ್ತವ. ಒಡಿಎಫ್ ಗ್ರಾಮ ಪಂಚಾಯಿತಿಗಳಲ್ಲಿ ಈ ಕುರಿತು ಕ್ರಿಯಾಯೋಜನೆ ಮಾಡಿದ್ದಾರೆಯೇ? ಒಡಿಎಫ್ ತಾಲ್ಲೂಕುಗಳಲ್ಲಿ ಸಕ್ಕಿಂಗ್ ಮಶಿನ್‍ಗಳಿವೆಯೇ? ಇನ್ನು ನಾಲ್ಕಾರು ವರ್ಷಗಳ ನಂತರ ಅವು ತುಂಬಿಕೊಂಡ ನಂತರ ಯಾರು, ಹೇಗೆ ಸ್ವಚ್ಛಪಡಿಸುತ್ತಾರೆ? ಅದಕ್ಕೆ ಆಯವ್ಯಯ ಕೇಂದ್ರದ್ದೇ ಅಥವಾ ಪೌರಾಡಳಿತ ಸಂಸ್ಥೆಗಳದೇ?

2011ರ ಗಣತಿಯಂತೆ ದೇಶದಲ್ಲಿ ಮಲಬಾಚಿ ಸಾಗಿಸಬೇಕಾದಂತಹ ಒಣಪಾಯಿಖಾನೆಗಳು ಒಟ್ಟು 7,27,454 ಇದ್ದವು. ‘ಸಫಾಯಿ ಕರ್ಮಚಾರಿ ಆಂದೋಲನ’ದ ಪ್ರಕಾರ 26 ಲಕ್ಷ ಒಣ ಪಾಯಿಖಾನೆಗಳಿದ್ದವು. ಈ ಪಾಯಿಖಾನೆಗಳು ಇನ್ನೂ ಇವೆಯೇ? ಇವುಗಳಲ್ಲಿ ಎಷ್ಟನ್ನು ನೀರು ಬಳಸುವ ಪಾಯಿಖಾನೆಗಳನ್ನಾಗಿ ಪರಿವರ್ತಿಸಲಾಗಿದೆ? ಇಂತಹ ಯಾವುದೇ ಪ್ರಶ್ನೆಗಳಿಗೆ ಸ್ವಚ್ಛ ಭಾರತ ಮಿಶನ್ ಜಾಲತಾಣವು ಪ್ರಚಾರಿಸುವ ಅಂಕಿಸಂಖ್ಯೆಗಳಲ್ಲಿ ಅಥವಾ ಪ್ರಧಾನಿ ಘೋಷಣೆಗಳಲ್ಲಿ ಅಥವಾ ಸಮೀಕ್ಷಾ ವರದಿಗಳಲ್ಲಿ ಉತ್ತರವಿಲ್ಲ.

ವಾಸ್ತವತೆಯ ಬೆಳಕಲ್ಲಿ ಘೋಷಣೆಯನಿಟ್ಟರೆ…
ರಾಷ್ಟ್ರೀಯ ಗ್ರಾಮೀಣ ನೈರ್ಮಲ್ಯ ಸಮೀಕ್ಷೆ (2018-19) ವರದಿ ಬೊಟ್ಟುಮಾಡಿ ತೋರಿದಂತೆ ಶೇ.93.3 ಗ್ರಾಮೀಣ ಕುಟುಂಬಗಳಿಗೆ ಮಾತ್ರ ಶೌಚಾಲಯ ಲಭ್ಯತೆ ಇದೆ. ಹೀಗೆ ಲಭ್ಯವಿದ್ದವರಲ್ಲೂ ಎಲ್ಲರೂ ಶೌಚಾಲಯ ಬಳಸುವುದಿಲ್ಲ, ಶೌಚಾಲಯವಿದ್ದೂ ಶೇ.3.3ರಷ್ಟು ಜನರು ಬಯಲಿಗೆ ಹೋಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸಮೀಕ್ಷೆ ಮಾಡಿದ ಬಯಲು ಶೌಚ ಮುಕ್ತ (ಒಡಿಎಫ್) ಎಂದು ಘೋಷಿಸಿದ 2891 ಹಳ್ಳಿಗಳಲ್ಲಿ ಮಾನದಂಡಗಳ ಪ್ರಕಾರ 2622 ಹಳ್ಳಿಗಳನ್ನು (ಶೇ.90.7) ಮಾತ್ರವೇ ‘ಒಡಿಎಫ್’ ಎಂದು ಖಾತ್ರಿಪಡಿಸಲಾಗಿದೆ. ಪ್ರಧಾನಿಯವರ ‘ಬಯಲು ಶೌಚ ಮುಕ್ತ ದೇಶ’ವೆಂಬ ಉದ್ಘೋಷಣೆಯನ್ನು ಈ ವಾಸ್ತವತೆಯ ಬೆಳಕಿನಲ್ಲಿಟ್ಟು ನೋಡಬೇಕಿದೆ.

ಸ್ವಚ್ಛ ಭಾರತ ಮಿಶನ್ ಅಂತರ್ಜಾಲ ತಾಣದಲ್ಲಿ ಗುಜರಾತಿನ ಯಾವುದೇ ಜಿಲ್ಲೆಯ ಯಾವುದೇ ಜಿಲ್ಲೆಯನ್ನು ಕ್ಲಿಕ್ ಮಾಡಿ; ತೀವ್ರ ನೀರಿನ ಸಮಸ್ಯೆ ಇರುವ ರಣಭೂಮಿ ಕಚ್ ಜಿಲ್ಲೆಯನ್ನೂ ಒಳಗೊಂಡಂತೆ ಎಲ್ಲ ಜಿಲ್ಲೆಗಳೂ 100% ಬಯಲು ಶೌಚ ಮುಕ್ತ ಎಂದು ತೋರಿಸುತ್ತದೆ! ಮಹತ್ವದ ಹರಪ್ಪಾ ತಾಣವಿರುವ ಧೋಲಾವಿರಾ ಹಳ್ಳಿಯಲ್ಲಿರುವ 313 ಮನೆಗಳಲ್ಲಿಯೂ ಶೌಚಾಲಯವಿದೆ, ಒಡಿಎಫ್ ಹಳ್ಳಿ ಎಂದು ಜಾಲತಾಣ ತೋರಿಸಿತು. ಅಲ್ಲಿಯ ಪುರಾತತ್ವ ಕೇಂದ್ರದಲ್ಲಿ ಕೆಲಸ ಮಾಡುವ, ನನಗೆ ಪರಿಚಯವಿರುವ ಬಹಾದುರನನ್ನೇ ವಿಚಾರಿಸುವ ಎಂದು ಕರೆ ಮಾಡಿದೆ. ‘ಹೆಚ್ಚುಕಡಿಮೆ ಎಲ್ಲರ ಮನೆಯಲ್ಲಿಯೂ ಶೌಚಾಲಯ ಕಟ್ಟಿರೋದು ನಿಜ, ಆದರೆ ಕಳಪೆ ಕಾಮಗಾರಿಯಿಂದ ಕಳೆದ ವರ್ಷ ಕಟ್ಟಿದ ಕೆಲವು ಮೊನ್ನೆ ಮಳೆಗೆ ಬಿದ್ದು ಹೋದ್ವು. ಮತ್ತೆ ಶೌಚಾಲಯ ಇರೋ ಎಲ್ರೂ ಅವನ್ನು ಬಳಸ್ತಾರೆ ಅಂತೇನೂ ಇಲ್ಲ. ಶೇ. 90ರಷ್ಟು ಜನ ಬಳಸಬಹುದು ಅಷ್ಟೆ. ಬೇಸಿಗೆಯಲ್ಲಿ ತೀರಾ ನೀರಿನ ಸಮಸ್ಯೆ ಇರುತ್ತೆ ನಮ್ಮಲ್ಲಿ. ಗುಜರಾತ್ ಮಾಡೆಲ್ ಅಂತ ತೋರಿಸಬೇಕಲ್ಲ ಹಿಂಗಾಗಿ ಕಾಗದದ ಮೇಲೆ ಎಲ್ಲವೂ 100%, ಸಚ್ ಮೇಂ ನಹೀ’ ಎಂದು ನಕ್ಕನಾತ. ಇದೀಗ ಕಾಗದದ ಮೇಲಿನ ಅಂಕಿಸಂಖ್ಯೆಗಳನ್ನು ನಂಬುವುದೋ ಅಥವಾ ಬಹಾದುರನಂತಹ ನೆಲದ ಮಕ್ಕಳು ಹೇಳುವುದನ್ನು ನಂಬುವುದೋ… ನಿಮಗೆ ಬಿಟ್ಟಿದ್ದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕಾಗೆ ಕಪ್ಪಗಿದೆ ಎಂಬ ಸತ್ಯವನ್ನು ಹೇಳುವುದೂ ಸಹ ಇಂದಿನ ಭವ್ಯ ಭಾರತದಲ್ಲಿ ‘ದೇಶದ್ರೋಹ’ವಾಗಲಿದೆ. ಆದುದರಿಂದ ಸಭ್ಯ ನಾಗರೀಕರಾದ ನಾವೆಲ್ಲರೂ “ಭಾರತ ಸಂಪೂರ್ಣ ಸ್ವಚ್ಛವಾಗಿ ಫಳಫಳ ಹೊಳೆಯುತ್ತಿದೆ” ಎಂದು ಪ್ರಮಾಣ ಪತ್ರ ಸಲ್ಲಿಸೋಣ.

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿ ಫುಡ್ಸ್‌ನಿಂದ ಜಿಎಸ್‌ಟಿ ಬಾಕಿ; ₹27.46 ಕೋಟಿ ವಸೂಲಿಗೆ ಶೋಕಾಸ್ ನೋಟಿಸ್

0
ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ಸ್‌ಗೆ ಜಿಎಸ್‌ಟಿ ಗುಪ್ತಚರ ಇಲಾಖೆ ಶೋಕಾಸ್ ನೋಟಿಸ್ ನೀಡಿದ್ದು, ₹27.46 ಕೋಟಿ ಮೌಲ್ಯದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಏಕೆ ವಸೂಲಿ ಮಾಡಬಾರದು ಎಂದು ಕಂಪನಿಗೆ ವಿವರಣೆ...