Homeಅಂಕಣಗಳುಆಧುನಿಕ ಶಿಕ್ಷಣದ ಪ್ರವಾದಿ ಸೈಯದ್ ಅಹ್ಮದ್ ಖಾನ್‌ರನ್ನು ಏಕೆ ನೆನೆಯಬೇಕು?

ಆಧುನಿಕ ಶಿಕ್ಷಣದ ಪ್ರವಾದಿ ಸೈಯದ್ ಅಹ್ಮದ್ ಖಾನ್‌ರನ್ನು ಏಕೆ ನೆನೆಯಬೇಕು?

"ಸುಂದರ ವಧುವಾದ ಹಿಂದುಸ್ತಾನಕ್ಕೆ ಮುಸ್ಲಿಂ ಮತ್ತು ಹಿಂದೂಗಳು ಎರಡು ಕಣ್ಣುಗಳಿದ್ದ ಹಾಗೆ. ಇಲ್ಲಿ ಒಬ್ಬರ ದೌರ್ಬಲ್ಯವು ಸುಂದರ ವಧುವಿನ ಸೌಂದರ್ಯವನ್ನು ಹಾಳುಮಾಡುತ್ತದೆ”

- Advertisement -
- Advertisement -

2017ಕ್ಕೆ ಸರ್ ಸೈಯದ್ ಅಹ್ಮದ್ ಖಾನ್ (1817-1898) ಅವರ 200ನೇ ವರ್ಷಾಚರಣೆಯನ್ನಾಗಿ ನೆನಪಿಸಿಕೊಳ್ಳಬೇಕಾದಂತಹ ಸಂದರ್ಭ. ದೇಶದೆಲ್ಲೆಡೆ ಬಹುಸಂಖ್ಯಾತವಾದದ ಮತೀಯವಾದ ತನ್ನ ಅಟ್ಟಹಾಸ ನಡೆಸುತ್ತಿರುವಾಗ ಮಹಾತ್ಮ ಜ್ಯೋತಿಬಾ ಫುಲೆ ಅವರ ಸಮಕಾಲೀನರಾದ ಸೈಯದ್ ಅಹ್ಮದ್ ಖಾನ್ ಇಂದು ನಮಗೆಲ್ಲ ತುಂಬಾ ಮುಖ್ಯರಾಗುತ್ತಾರೆ ಮತ್ತು ಪ್ರಸ್ತುತರಾಗುತ್ತಾರೆ. ಅವರ ಕುರಿತು ಅಷ್ಟೂ ಇಷ್ಟು ತಿಳಿದುಕೊಂಡಿರುವವರು ಸೈಯದ್ ಸಾಬ್ ಅವರನ್ನು 1875ರಲ್ಲಿ ‘ಅಲಿಘಡ್ ಮುಸ್ಲಿಂ ವಿ.ವಿ.’ (ಆಗ ಮಹ್ಮಡನ್- ಆಂಗ್ಲೋ ಓರಿಯೆಂಟಲ್) ಸ್ಥಾಪಿಸಿದವರು ಎಂದು ನೆನಪಿಸಿಕೊಳ್ಳುತ್ತಾರೆ. ಆದರೆ ಸೈಯದ್ ಅಹ್ಮದ್ ಖಾನ್ ಅಷ್ಟು ಮಾತ್ರವಲ್ಲ. 150 ವರ್ಷಗಳ ಹಿಂದೆ ಮುಸ್ಲಿಂ ಸಮುದಾಯಕ್ಕೆ ಆಧುನಿಕ ಶಿಕ್ಷಣದ ಅವಶ್ಯಕತೆ ಕುರಿತಾಗಿ ಕಳಕಳಿ ಉಳ್ಳವರಾಗಿದ್ದರು ಮತ್ತು ಆ ಕಲಿಕೆಯರಿಮೆ ಸೆಕ್ಯುಲರ್ ಆಗಿರಬೇಕು ಎಂದು ಚಿಂತಿಸಿದವರು.

ಅವರು ಅಂಧಶ್ರದ್ಧೆ ಎಂದಿಗೂ ನಂಬಿಕೆಯಾಗುವುದಿಲ್ಲ ಎಂದು ಬಲವಾಗಿ ನಂಬಿದ್ದರು. ಧರ್ಮ ಮತ್ತು ಆಧುನಿಕತೆಯನ್ನು ಸಮತೋಲನದಿಂದ ಬೆರೆಸಿದ ಸೈಯದ್ ಅಹ್ಮದ್ ಮುಸ್ಲಿಂ ಸಮುದಾಯ ವೈಜ್ಞಾನಿಕ ಚಿಂತನೆಗಳನ್ನು, ವೈಚಾರಿಕತೆಯನ್ನು ಬೆಳೆಸಿಕೊಳ್ಳುವ ಅಗತ್ಯದ ಕುರಿತಾಗಿ ಚಿಂತಿಸಿದರು ಮತ್ತು ಅದಕ್ಕಾಗಿ ಅನೇಕ ಮತ್ತು ಸಂಸ್ಥೆಗಳನ್ನು ಕಟ್ಟಿದರು. “ಅಲಿಘರ್ ಚಳುವಳಿ”ಯ ಮೂಲಕ ಆಧುನಿಕ ಶಿಕ್ಷಣಕ್ಕೆ ಬುನಾದಿ ಹಾಕಿದರು. ಮುಸ್ಲಿಂ ಸಮುದಾಯದ ಶಿಕ್ಷಣಕ್ಕಾಗಿ 1859ರಲ್ಲಿ ಮುರಾದಬಾದ್‍ನಲ್ಲೂ ಮತ್ತು 1863ರಲ್ಲಿ ಘಜಿಯಾಪುರದಲ್ಲಿ ಶಾಲೆಗಳನ್ನು ಪ್ರಾರಂಬಿಸಿದರು. ಇಷ್ಟರಿಂದಲೇ ಸಂಪೂರ್ಣ ಪ್ರಗತಿ ಸಾಧ್ಯವಿಲ್ಲ ಎಂದು ಅರಿತ ಸೈಯದ್ ಅಹ್ಮದ್ ಖಾನ್ ಅವರು ಮುಸ್ಲಿಂ ಸಮುದಾಯದ ಪ್ರತಿಯೊಬ್ಬನೂ ಈ ‘ಅಲಿಘರ್ ಚಳುವಳಿ’ ಭಾಗವಹಿಸಬೇಕು ಎಂದು “ಅಖಿಲ ಭಾರತ ಮುಸ್ಲಿಂ ಶಿಕ್ಷಣ ಸಮಾವೇಶ” ಎನ್ನುವ ಸಂಸ್ಥೆ ಸ್ಥಾಪಿಸುತ್ತಾರೆ. ಇದು ನಂತರದ ದಶಕಗಳಲ್ಲಿ ಮುಸ್ಲಿಂರು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಪ್ರೇರಣೆಯಾಯಿತು.

1875ರಲ್ಲಿ ಸ್ಥಾಪಿಸಿದ ‘ಅಲಿಘರ್ ಮುಸ್ಲಿಂ ವಿವಿ’ಯ ಕಟ್ಟಡ ನಿರ್ಮಾಣಕ್ಕೆ ಚೌದರಿ ಶೇರ್ ಸಿಂಗ್, ರಾಜಾ ಘನಶ್ಯಾಮ ಸಿಂಗ್, ರಾಜಾ ಉದಯ ಪ್ರತಾಪ್ ಸಿಂಗ್, ರಾಜಾ ಶಿವನಾರಾಯಣ ಸಿಂಗ್ ಮುಂತಾದವರು ಹಣಕಾಸಿನ ಸಹಾಯ ನೀಡುತ್ತಾರೆ. ಈಶ್ವರೀ ಪ್ರಸಾದ್ ಈ ವಿ.ವಿ.ಯ ಮೊದಲ ಪಧವೀದರ. ರಾಜಾ ಮಹೇಂದ್ರ ಪ್ರತಾಪ್ ಸಿಂಗ್, ಡಾ. ಜಾಕಿರ್ ಹುಸೇನ್, ಸೈಯದ್ ಮಹಮ್ಮದ್‍ರಂತಹವರು ಅಹ್ಮದ್ ಖಾನ್ ಸ್ಥಾಪಿಸಿದ ‘ಅಲಿಘರ್ ಮುಸ್ಲಿಂ ವಿವಿ’ ಆರಂಬದ ಪದವೀಧದರರು. ಇಷ್ಟಕ್ಕೆ ಸಂತೃಪ್ತರಾಗದೆ ಜ್ಞಾನವನ್ನು ವಿಸ್ತರಿಸಲು ಮತ್ತು ಆಧುನಿಕ ಸಂಶೋದನೆಗಳನ್ನು ಅಧ್ಯಯನ ಮಾಡಲು “ತೆಹೆಜಬುಲ್ ಅಕ್ಲಕ್” ಎನ್ನುವ ಪತ್ರಿಕೆಯನ್ನು ಪ್ರಾರಂಬಿಸುತ್ತಾರೆ.

ಸೈಯದ್ ಅಹ್ಮದ್ ಖಾನ್ ಅವರು “ಧರ್ಮ ಮತ್ತು ವಿಜ್ಞಾನ”ವನ್ನು ಬೆಸೆಯಬೇಕು ಎಂದು ಪ್ರತಿಪಾದಿಸುತ್ತಿದ್ದರು. ಮುಸ್ಲಿಂ ಸಮುದಾಯದ ಧರ್ಮ ಮತ್ತು ಸಾಮಾಜಿಕ ಏಳಿಗೆಯು ಪಾಶ್ಚಿಮಾತ್ಯ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಮತ್ತು ಕಲಿಕೆಯ ಮೂಲಕ ಮಾತ್ರ ಸಾಧ್ಯ ಎಂದು ಆಳವಾಗಿ ನಂಬಿದ್ದ ಸೈಯದ್ ಅಹ್ಮದ್ 1864 ರಲ್ಲಿ “ಅಲಿಘರ್ ವೈಜ್ಞಾನಿಕ ಸಮಾಜ” ಎನ್ನುವ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಇಲ್ಲಿ ಯುರೋಪಿಯನ್ ಮತ್ತು ಇಂಗ್ಲೀಷ್ ಭಾಷೆಗಳಲ್ಲಿನ ವೈಜ್ಞಾನಿಕ ಚಿಂತನೆಗಳನ್ನು, ಅದ್ಯಾಯಗಳನ್ನು, ಪಠ್ಯಗಳನ್ನು ಹಿಂದಿ ಮತ್ತು ಉರ್ದು ಭಾಷೆಗೆ ಅನುವಾದ ಮಾಡುವ ಕಾರ್ಯಯೋಜನೆಯನ್ನು ರೂಪಿಸುತ್ತಾರೆ.

ಮುಸ್ಲಿಂ ಸಮುದಾಯದಲ್ಲಿ ಸ್ವತಂತ್ರ, ಆಧುನಿಕ ಶಿಕ್ಷಣವನ್ನು ಕೊಡುವ ಉದ್ದೇಶ ಸೈಯದ್ ಸಾಬ್‍ರದಾಗಿತ್ತು. ಆ ಕಾಲದಲ್ಲಿಯೇ ಈ “ಅಲಿಘರ್ ವೈಜ್ಞಾನಿಕ ಸಮಾಜ”ದಲ್ಲಿ ಸೌರ ಜಗತ್ತು ಮತ್ತು ಅದರ ರಚನೆ, ಮಾನವ ವಿಕಾಸವಾದ ಮುಂತಾದ ವೈಜ್ಞಾನಿಕ ವಿಷಯಗಳ ಕುರಿತು ಅಧ್ಯಯನ ಮಾಡಲಾಗುತ್ತಿತ್ತು. ಆಗ ಸೈಯದ್ ಸಾಬ್ ಅವರ ನಿಕಟವರ್ತಿಯಾಗಿದ್ದ ‘ಜಾನಕಿ ದಾಸ್’ ಈ ವೈಜ್ಞಾನಿಕ ಸಮಾಜದ ಕಾರ್ಯದರ್ಶಿಯಾಗಿದ್ದರು. ಅಲಿಘರ್ ಸಂಸ್ಥೆಯ ಗೆಜೆಟ್‍ನಲ್ಲಿ ಮತ್ತಷ್ಟು ಮಾಹಿತಿಗಳು ದೊರಕುತ್ತವೆ. ಇದರ ಉದ್ದೇಶವನ್ನು ಪಾಶ್ಚಿಮಾತ್ಯ ಸಾಹಿತ್ಯದ ಅನುವಾದ, ಯಾಂತ್ರಿಕ ಕೃಷಿಯ ಕುರಿತು ಸಾಹಿತ್ಯ, ಸಾಮಾಜೋ-ರಾಜಕೀಯ ಕುರಿತಾದ ಅಧ್ಯಯನ, ವರ್ತಮಾನ ವಿಷಯಗಳ ಅಧ್ಯಯನ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದರು. ಈ “ಅಲಿಘರ್ ವೈಜ್ಞಾನಿಕ ಸಮಾಜ”ದಿಂದ ಪ್ರಕಟಗೊಂಡ ಕೆಲ ಪುಸ್ತಕಗಳ ಪಟ್ಟಿ ಹೀಗಿದೆ : ಇಂಡಿಯಾದ ಇತಿಹಾಸ (ಎಲ್ಫಿಸ್ಟೋನ್), ಆಧುನಿಕ ಭಾರತದ ಇತಿಹಾಸ (ಟಿ. ಮಾರಿಸನ್), ನಾಗರೀಕತೆಯ ಇತಿಹಾಸ (ಅಡಂ ಸ್ಮಿತ್), ಯುರೋಪಿನ ಕೃಷಿ ಸಲಕರಣೆಗಳು, ಇರಾನ್ ಇತಿಹಾಸ, ಭೂಪಾಲ್ ಇತಿಹಾಸ, ಕೃಷಿ ವಿಜ್ಞಾನ, ರಾಜಕೀಯ ಅರ್ಥಶಾಸ್ತ್ರ, ಹೀಗೆ ಈ ಪಟ್ಟಿ ಬೆಳೆಯುತ್ತದೆ.

ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕೊಡುವುದು ತುಂಬಾ ಮುಖ್ಯ ಎಂದು ಪ್ರತಿಪಾದಿಸಿದ ಸೈಯದ್ ಅಹ್ಮದ್ ಖಾನ್ 1867ರಲ್ಲಿ ಆಗಿನ ವೈಸರಾಯ್‍ಗೆ ಪಾಶ್ಚಿಮಾತ್ಯ ವಿಜ್ಞಾನ ಮತ್ತು ಇತರ ಮಾನವೀಯ ಶಾಸ್ತ್ರಗಳನ್ನು ಉರ್ದು ಭಾಷೆಯಲ್ಲಿ ಕಲಿಸಲು ಪ್ರತ್ಯೇಕ ವಿ.ವಿ.ಸ್ಥಾಪಿಸಬೇಕೆಂದು ಮನವಿ ಮಾಡುತ್ತಾರೆ. ಆದರೆ ವಿಮರ್ಶಕ ಎಶ್ತೇಮ್ ಹುಸೇನ್ ಅವರು “ಸೈಯದ್ ಅಹ್ಮದ್ ಖಾನ್ ಎಲೈಟ್ ಮುಸ್ಲಿಂರ, ಮೇಲ್ವರ್ಗದ ಪಕ್ಷಪಾತಿಯಾಗಿದ್ದರು, ಮುಸ್ಲಿಂ ಕಾರ್ಮಿಕರು, ಕುಶಲಕರ್ಮಿಗಳನ್ನು ನಿರ್ಲಕ್ಷಿಸಿದ್ದರು” ಎಂದು ಟೀಕಿಸುತ್ತಾರೆ. ಸೈಯದ್ ಅವರ ಜೀವನ ಶೈಲಿಯನ್ನು ಕಂಡಾಗ ಇದು ಮೇಲ್ನೋಟಕ್ಕೆ ನಿಜವೆನಿಸುತ್ತದೆ. ಆದರೆ 1882ರಲ್ಲಿ ಬ್ರಿಟೀಷ್ ಶಿಕ್ಷಣ ಸಮಿತಿ “ಹಂಟರ್ ಕಮಿಷನ್” ಮುಂದೆ (ಆಗ ಜ್ಯೋತಿಬಾ ಫುಲೆಯವರೂ ಸಹ ಸದಸ್ಯರಲ್ಲೊಬ್ಬರಾಗಿ ಸಮಾನ ಶಿಕ್ಷಣದ ಪರವಾಗಿ ಮನವಿ ಸಲ್ಲಿಸಿದ್ದರು) ತಮ್ಮ ಮನವಿ ಸಲ್ಲಿಸುತ್ತ ಸೈಯದ್ ಅಹ್ಮದ್ ಖಾನ್ ಅವರು “ಸಮಾಜದ ದಮನಿತ ಸಮುದಾಯಗಳಿಗೆ ಶಿಕ್ಷಣದ ಅವಶ್ಯತೆ ಇದೆ. ಶೋಷಿತರ ಪರವಾಗಿ ನಿಮ್ಮ (ಬ್ರಿಟೀಷ್‍ರ) ಮನಸ್ಸಾಕ್ಷಿಯನ್ನು ಒಮ್ಮೆ ಕೇಳಿಕೊಳ್ಳಿ” ಎಂದು ಹೇಳುತ್ತಾರೆ.

ಸೈಯದ್ ಅಹ್ಮದ್ ಖಾನ್ ಅವರು ಇಂಗ್ಲೆಂಡ್‍ಗೆ ಪ್ರವಾಸ ಮಾಡಿದ ಸಂದರ್ಭದಲ್ಲಿ ಬ್ರಿಟೀಷರ ಆಧುನಿಕತೆಯನ್ನು ಪ್ರಶಂಸಿಸುತ್ತಾರೆ. ಮುಸ್ಲಿಂ ಸಮುದಾಯಕ್ಕೆ ಯಾವುದೇ ರೀತಿಯ ರಾಜಕೀಯದಲ್ಲಿ ಪ್ರವೇಶ ಮಾಡಬೇಡಿ ಎಂದೇ ನಿರ್ಬಂಧಿಸುವ ಸೈಯದ್ ಅಹ್ಮದ್ ಅವರು “ಯಾವುದೇ ವ್ಯವಸ್ಥೆಯ ಕುರಿತಾದ ಆಳವಾದ ಜ್ಞಾನವಿಲ್ಲದೆ, ಆಧುನಿಕ ಶಿಕ್ಷಣವಿಲ್ಲದೆ ಬ್ರಿಟೀಷರನ್ನು ವಿರೋಧಿಸುವುದರಿಂದ ನಿಮಗೆ (ಮುಸ್ಲಿಂರಿಗೆ) ವಿಮೋಚನೆ ದೊರೆಯುವುದಿಲ್ಲ. ಮೊದಲು ಶಿಕ್ಷಣ ಪಡೆಯಿರಿ. ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಳ್ಳಿ” ಎಂದು ಬುದ್ಧಿವಾದ ಹೇಳುತ್ತಾರೆ ಮತ್ತು ಇದನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ. 19ನೇ ಶತಮಾನದ ಕೊನೆಯ ದಶಕದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮೊದಲನೇ ಸಮಾವೇಶಕ್ಕೆ ಅಹ್ಮದ್ ಖಾನ್ ಅವರನ್ನು ಆಹ್ವಾನಿಸುತ್ತದೆ ಆದರೆ ಅವರು ಈ ಆಹ್ವಾನವನ್ನು ನಿರಾಕರಿಸುತ್ತಾರೆ. ಅಹ್ಮದ್ ಖಾನ್ ಅವರ ಈ ನಿಲುವುಗಳನ್ನು ಒಬ್ಬ ಆಧುನಿಕ ಚಿಂತಕರಾಗಿ ತಮ್ಮ ಸಮುದಾಯದ ಸಬಲೀಕರಣ ಮತ್ತು ವಿಮೋಚನೆಗೆ ಅವರ ಮುಂದಿದ್ದ ಆಯ್ಕೆಗಳು ಮತ್ತು ಆದ್ಯತೆಗಳ ನೆಲೆಯಲ್ಲಿ ನೋಡಬೇಕೆ ಹೊರತು ಹುಸಿ ರಾಷ್ಟ್ರೀಯವಾದಿಯ ದೃಷ್ಟಿಕೋನದಲ್ಲಿ ಅಲ್ಲ.

ಮುಸ್ಲಿಂ ಸಮುದಾಯವು ತನ್ನ ಸಾಂಪ್ರದಾಯಿಕತೆಯನ್ನು ಮೀರಬೇಕೆಂದರೆ ಉದ್ಯಮಶೀಲತೆಯನ್ನು ಮೈಗೂಡಿಸಿಕೊಳ್ಳಲೇಬೇಕು ಎಂದು ನಿರಂತರವಾಗಿ ಪ್ರತಿಪಾದಿಸಿದ ಅಹ್ಮದ್ ಖಾನ್ ಅವರು ಸಿಪಾಯಿ ದಂಗೆಯ ಸಂದರ್ಭದಲ್ಲಿ (1857) ಮತ್ತು ನಂತರದ ಕೆಲ ವರ್ಷಗಳ ಕಾಲ ಹಿಂದೂ-ಮುಸ್ಲಿಂ ಐಕ್ಯತೆ ಕುರಿತಾಗಿ ಸಂಘಟನೆ ನಡೆಸುತ್ತಾರೆ. “ನಾವು (ಹಿಂದೂ ಮತ್ತು ಮುಸ್ಲಿಂ) ಒಂದೇ ಬಗೆಯ ಬೆಳೆಯನ್ನು ತಿನ್ನುತ್ತೇವೆ, ಒಂದೇ ನದಿಯಿಂದ, ಬಾವಿಯಿಂದ ನೀರನ್ನು ಕುಡಿಯುತ್ತೇವೆ, ಒಂದೇ ಬಗೆಯ ಗಾಳಿಯನ್ನು ಉಸಿರಾಡುತ್ತೇವೆ. ಸುಂದರ ವಧುವಾದ ಹಿಂದುಸ್ತಾನಕ್ಕೆ ಮುಸ್ಲಿಂ ಮತ್ತು ಹಿಂದೂಗಳು ಎರಡು ಕಣ್ಣುಗಳಿದ್ದ ಹಾಗೆ. ಇಲ್ಲಿ ಒಬ್ಬರ ದೌರ್ಬಲ್ಯವು ಸುಂದರ ವಧುವಿನ ಸೌಂದರ್ಯವನ್ನು ಹಾಳುಮಾಡುತ್ತದೆ” ಎಂದು ಸದಾ ಬುದ್ಧಿ ಮಾತು ಹೇಳುತ್ತಿದ್ದರು ಮತ್ತು ಅದೇ ರೀತಿಯಲ್ಲಿ ಬದುಕಿದರು.

ಮುಸ್ಲಿಂ ಸಮುದಾಯದೊಳಗಿನ ಬುರ್ಖಾ ಪದ್ಧತಿಯನ್ನು, ಬಹುಪತ್ನಿತ್ವವನ್ನು ಖಂಡಿಸಿದ್ದರು. ಅದೇ ಸಂದರ್ಭದಲ್ಲಿ ಅವರ ಸೆಕ್ಯುಲರ್ ಪರವಾದ ಚಿಂತನೆಗಳು ಮಸ್ಲಿಂ ದಿಯೋಬಂದ್ ಮತ್ತು ಇನ್ನಿತರ ಮೂಲಭೂತವಾದಿಗಳ ಗುಂಪಿನೊಂದಿಗೆ ಸಂಘರ್ಷಕ್ಕೆ ಕಾರಣವಾಗಿತ್ತು. ಸೈಯದ್ ಅವರನ್ನು ಕಾಫಿರ್ ಎಂದು ಹೀಗೆಳೆದರು. ಮತ್ತೊಂದೆಡೆ ಬಲಪಂಥೀಯ ಹಿಂದುತ್ವವಾದಿಗಳು, ಇತಿಹಾಸಕಾರರು ಸ್ವತಃ ಸಾವರ್ಕರ್ ಅವರೂ ಸಹ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಸಮರ್ಥಿಸಿದ್ದರು ಎನ್ನವುದನ್ನು ಬೇಕಂತಲೇ ಮರೆತು ಇವರನ್ನು ‘ಎರಡು ದೇಶಗಳ ಸಿದ್ಧಾಂತವನ್ನು ಪ್ರತಿಪಾಸಿದ ಪ್ರತ್ಯೇಕತಾವಾದಿ’ ಎಂದು ಅಪಪ್ರಚಾರ ಮಾಡುತ್ತಾರೆ. ಆದರೆ ಇದನ್ನು ಇಂದು ಸಮಾಜಶಾಸ್ತ್ರೀಯ ನೆಲೆಯಲ್ಲಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಏಕೆಂದರೆ ಆಧುನಿಕ ಭಾರತದ ಇತಿಹಾಸದಲ್ಲಿ “ಮುಸ್ಲಿಂ ಸಮುದಾಯದಲ್ಲಿ ಹೊಸ ದೃಷ್ಟಿಕೋನ”ವನ್ನು ಚಿಂತಿಸಿದ, ಆ ಕುರಿತು ನಿರಂತರವಾಗಿ ಕಾರ್ಯನಿರ್ವಹಿಸಿದ ಸೈಯದ್ ಅಹ್ಮದ್ ಖಾನ್ ಮುಸ್ಲಿಂ ಸಮುದಾಯದ ಮೊದಲ ಆಧುನಿಕ ಶಿಕ್ಷಣತಜ್ಞ, ವೈಚಾರಿಕ ಚಿಂತಕ. ನೆಹರೂ ಅವರು “ಧಾರ್ಮಿಕ ಪ್ರತ್ಯೇಕತವಾದಿಯಾಗಲು ನಿರಾಕರಿಸಿದ ಸೈಯದ್ ಅಹ್ಮದ್ ಖಾನ್ ಧಾರ್ಮಿಕ ಭಿನ್ನತೆಗಳು, ಭೇದಭಾವಗಳಿಗೆ ಯಾವುದೇ ಬಗೆಯ ರಾಜಕೀಯ ಮತ್ತು ರಾಷ್ಟ್ರೀಯ ಮಹತ್ವ ಇರುವುದಿಲ್ಲ ಮತ್ತು ಈ ಸಿದ್ಧಾಂತಗಳಿಗೆ ಪ್ರಾಮುಖ್ಯತೆಯನ್ನು ಕೊಡಬಾರದೆಂದು ಪ್ರತಿಪಾದಿಸಿದ್ದರು” ಎಂದು ಹೇಳುತ್ತಾರೆ.

1863ರಲ್ಲಿ ಅಹ್ಮದ್ ಖಾನ್ ಅವರು ಆಧುನಿಕ, ವೈಜ್ಞಾನಿಕ ಶಿಕ್ಷಣದ ಕುರಿತಾಗಿ “ಇಂಡಿಯಾದ ಎಲ್ಲಾ ಜನರಿಗೆ” ಎನ್ನುವ ಮನವಿ ಪುಸ್ತಕವನ್ನು ಬರೆಯುತ್ತಾರೆ. ಆದರೆ ಮುಸ್ಲಿಂ ಮಹಿಳೆಯರ ಶಿಕ್ಷಣದ ವಿಷಯದಲ್ಲಿ ಸೈಯದ್ ಅಹ್ಮದ್ ಖಾನ್ ಅವರು ತುಂಬಾ ಸಂಪ್ರದಾಯವಾದಿಯಾಗಿ ವರ್ತಿಸಿದರು ಎನ್ನುವ ಅಪಾದನೆಗಳಲ್ಲಿ ಸತ್ಯಾಂಶವೂ ಇದೆ. ಇವರ ಸಮಕಾಲೀನರಾದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾ ಫುಲೆಯವರ ಪ್ರಗತಿಪರ, ಆಧುನಿಕ ಸ್ತ್ರೀವಾದಿ ಚಿಂತನೆಗಳೊಂದಿಗೆ ಹೋಲಿಸಿದಾಗ ಮಹಿಳೆಯರ ಶಿಕ್ಷಣದ ಸಂದರ್ಭದಲ್ಲಿ ಸೈಯದ್ ಅಹ್ಮದ್ ಖಾನ್ ಅವರ ಮಿತಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ.

ಆದರೆ ಇದೆಲ್ಲದರ ಹೊರತಾಗಿಯೂ ಭಾರತೀಯ ಮುಸ್ಲಿಂ ಸಮುದಾಯದ ಪುನರುಜ್ಜೀವನಕ್ಕೆ (renaissance) ಸೈಯದ್ ಅಹ್ಮದ್ ಖಾನ್ ಅವರ ಕೊಡುಗೆ ಬಲು ದೊಡ್ಡದು. “ಫಿಲಾಸಫಿ ನಮ್ಮ ಬಲಗೈಯಾದರೆ ವೈಜ್ಞಾನಿಕ ಶಿಕ್ಷಣ ನಮ್ಮ ಎಡಗೈ” ಎನ್ನುವ ಅವರ ಮಾತು ಇಂದಿನ ಮುಸ್ಲಿಂ ಸಮುದಾಯಕ್ಕೆ ಅತ್ಯವಶ್ಯಕವಾದ ದಿಕ್ಸೂಚಿ ಪಠ್ಯವಾಗಬೇಕಾಗಿದೆ. ತಮ್ಮ ಕಡೆಯ ದಿನಗಳಲ್ಲಿ ತುಂಬಾ ಭ್ರಮನಿರಸನಕ್ಕೆ ಒಳಗಾದವರಂತೆ ಕಂಡುಬಂದ ಅಹ್ಮದ್ ಖಾನ್ ಅವರು “ಧರ್ಮದ ಆಧಾರದ, ಜಾತಿ ಆಧಾರಿತ ಪ್ರತ್ಯೇಕತೆಯು ಹಿಂಸೆಯ ರೂಪಕ್ಕೆ ತಿರುಗುತ್ತಿದೆ, ಶಿಕ್ಷಣವು ಧರ್ಮ ಮತ್ತು ಜಾತಿಯ ನಡುವೆ ಸಮಾನತೆ ತರಲು ಸಾಧ್ಯವಾಗಿಲ್ಲ” ಎಂದು ಹತಾಶರಾಗಿ ನುಡಿಯುತ್ತಾರೆ. ಇಲ್ಲಿ ಅವರ ಮಾತುಗಳು ಪ್ರತ್ಯೇಕ ರಾಷ್ಟ್ರಕ್ಕೆ ಮುನ್ಸೂಚನೆ ನೀಡುತ್ತವೆ ಎಂದು ಇತಿಹಾಸಕಾರರು ಟೀಕಿಸುತ್ತಾರೆ. ಆದರೆ ಇವೆಲ್ಲವಕ್ಕೂ ಒಂದು ವೈಜ್ಞಾನಿಕವಾದ, ಪಕ್ಷಪಾತವಿಲ್ಲದ ಪೂರ್ವಗ್ರಹಪೀಡಿತವಲ್ಲದ ಇತಿಹಾಸದ ಅಧ್ಯಯನದಿಂದ ಮಾತ್ರ ಹೊಸ ಒಳನೋಟಗಳು ದೊರಕುತ್ತವೆ.

ಸೈಯದ್ ಅಹ್ಮದ್ ಖಾನ್ ಅವರ ಇಡೀ ಬದುಕನ್ನು ಇಂದಿನ ಮತೀಯವಾದದ, ಮೂಲಭೂತವಾದದ ಪ್ರಕ್ಷುಬ್ದ ದಿನಗಳಲ್ಲಿ ಮತ್ತೊಮ್ಮೆ ಭಿನ್ನವಾಗಿ ಅಧ್ಯಯನ ಮಾಡಬೇಕಾಗಿದೆ. ಅಹ್ಮದ್ ಖಾನ್ ಅವರ ಚಿಂತನೆಗಳು, ಅಧ್ಯಯನಗಳು ಅವರು ಸಂಘಟಿಸಿದ ಸಂಸ್ಥೆಗಳ ಆಶಯಗಳು ಇಂದಿಗೂ ಪ್ರಸ್ತುತವಾಗಿದೆ ಮತ್ತು ಈ ಸ್ಪೂರ್ತಿಯೇ ಇಂದಿನ ಮುಸ್ಲಿಂ ಸಮುದಾಯವನ್ನು ಗೆಟ್ಟೋಗಳಿಂದ ವಿಮೋಚನೆ ಕೊಡಬಲ್ಲದು.

ಇಂದು ಪ್ರಜ್ಞಾವಂತರು ಸೈಯದ್‌ಅಹ್ಮದ್ ಅವರನ್ನು ಮತ್ತೆ ಮತ್ತೆ ಓದಬೇಕು, ಚರ್ಚಿಸಬೇಕು. ತಲೆಮಾರುಗಳಿಗೆ ದಾಟಿಸಬೇಕು. ಇಲ್ಲದೇ ಹೋದರೆ ಆಧುನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ, ರಾಜನಾಗಿದ್ದ, ತನ್ನೆಲ್ಲ ಮಿತಿಗಳ ನಡುವೆಯೂ ಸಮರ್ಥ ಆಡಳಿತಗಾರನಾಗಿದ್ದ, ದೇಶಪ್ರೇಮಿಯಾಗಿದ್ದ ಟಿಪ್ಪು ಸುಲ್ತಾನ್ ವಿರುದ್ಧ ಇಂದು ನಡೆಯುತ್ತಿರುವ ಅಪಪ್ರಚಾರವು ಸೈಯದ್ ಅಹ್ಮದ್ ಖಾನ್ ಅವರ ವಿರುದ್ಧವೂ ನಡೆಯುವ ಎಲ್ಲಾ ಸಾಧ್ಯತೆಗಳಿವೆ. ಮರೆತು ಹೋಗಿರುವ ಸೈಯ್ಯದ್ ಅಹ್ಮದ್ ಖಾನ್ ಅವರ ಚಿಂತನೆಗಳು, ವೈಚಾರಿಕತೆಯನ್ನು ಮರಳಿ ಜೀವಂತಗೊಳಿಸಬೇಕಾಗಿದೆ.

  • ಬಿ.ಶ್ರೀಪಾದ್ ಭಟ್, ಹಿರಿಯ ಲೇಖಕರು, ಚಿಂತಕರು ಮತ್ತು ಸಮಾನ ಶಿಕ್ಷಣಕ್ಕಾಗಿನ ಕಾರ್ಯಕರ್ತರು.

ಇದನ್ನೂ ಓದಿ: ಡಿ.ಜೆ ಹಳ್ಳಿಯಲ್ಲಿ ಗಲಭೆಯಾಗುತ್ತಿದ್ದಾಗ ಮುಸ್ಲಿಂ ಮುಖಂಡರು ಏನು ಮಾಡುತ್ತಿದ್ದರು? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...