ಭಾರತವು ಭಯೋತ್ಪಾದನೆ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿದೆ. ಪರಮಾಣು ಬೆದರಿಕೆಗೆ ಬಗ್ಗುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ಮತ್ತು ಅದರ ನಂತರದ ಬೆಳವಣಿಗೆಗಳ ನಡುವೆ ಮೊದಲ ಬಾರಿಗೆ ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ಭಾರತವು ಭಯೋತ್ಪಾದನೆ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ವಿಷಯಗಳ ಕುರಿತು ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತದೆ” ಎಂದಿದ್ದಾರೆ.
‘ಆಪರೇಷನ್ ಸಿಂಧೂರ’ವನ್ನು ಭಯೋತ್ಪಾದನೆಯ ವಿರುದ್ಧದ ಭಾರತದ ಹೊಸ ಅಧಿಕೃತ ನೀತಿ ಎಂದು ಹೇಳಿದ ಮೋದಿ, ಆ ಕಾರ್ಯಾಚರಣೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆಯೇ ಹೊರತು, ಕೊನೆಗೊಳಿಸಿಲ್ಲ ಎಂದು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಭಯೋತ್ಪಾದಕ ದಾಳಿಗಳು ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಭರವಸೆಯನ್ನು ಪಾಕಿಸ್ತಾನ ಉಳಿಸಿಕೊಳ್ಳುತ್ತದೆಯೇ ಎಂಬುವುದನ್ನು ಭಾರತ ಗಮನಿಸಲಿದೆ ಎಂದು ಪ್ರಧಾನಿ ಒತ್ತಿ ಹೇಳಿದ್ದಾರೆ.
ಭಾರತವು ಇನ್ನು ಮುಂದೆ ಭಯೋತ್ಪಾದಕ ನಾಯಕರು ಮತ್ತು ಅವರಿಗೆ ಆಶ್ರಯ ನೀಡುವ ಸರ್ಕಾರಗಳನ್ನು ಪ್ರತ್ಯೇಕ ಘಟಕಗಳಾಗಿ ನೋಡುವುದಿಲ್ಲ. ಇದು ಯುದ್ಧದ ಯುಗವಲ್ಲ, ಹಾಗಂತ ಭಯೋತ್ಪಾದನೆಯ ಯುಗವೂ ಅಲ್ಲ ಎಂದಿದ್ದಾರೆ.
ಭಾರತದ ನಿಲುವು ಬಹಳ ಸ್ಪಷ್ಟವಾಗಿದೆ. ಭಯೋತ್ಪಾದನೆ ಮತ್ತು ದ್ವಿಪಕ್ಷೀಯ ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ; ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ನಡೆಸಲು ಸಾಧ್ಯವಿಲ್ಲ, ಹಾಗೆಯೇ ನೀರು ಮತ್ತು ರಕ್ತ ಕೂಡ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ, ಪ್ರಧಾನಿ ತಮ್ಮ ಭಾಷಣದಲ್ಲಿ ಸಿಂಧೂ ಜಲ ಒಪ್ಪಂದದ ರದ್ದತಿಯನ್ನು ಉಲ್ಲೇಖಿಸಿದ್ದಾರೆ.
ಕದನ ವಿರಾಮಕ್ಕೆ ಮುಂದಾದದ್ದು ಪಾಕಿಸ್ತಾನ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳನ್ನು ನಾಶಮಾಡುವಲ್ಲಿ ಯಶಸ್ವಿಯಾದ ನಂತರವೇ ಭಾರತ ಕದನ ವಿರಾಮಕ್ಕೆ ಒಪ್ಪಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಭಯೋತ್ಪಾದಕರು ನಮ್ಮ ಸಹೋದರಿಯರ ಹಣೆಯ ಸಿಂಧೂರ ಅಳಿಸುವ ಧೈರ್ಯ ಮಾಡಿದರು. ಅದಕ್ಕಾಗಿಯೇ ಭಾರತ ಪಾಕಿಸ್ತಾನದಲ್ಲಿರುವ ಭಯೋತ್ಪಾದನೆ ಕೇಂದ್ರಗಳನ್ನು ನಾಶಪಡಿಸಿತು ಎಂದಿದ್ದಾರೆ.
‘ಆಪರೇಷನ್ ಸಿಂಧೂರ’ ಪಾಕಿಸ್ತಾನದಲ್ಲಿ ಆಘಾತದ ಅಲೆಗಳನ್ನು ಎಬ್ಬಿಸಿ, ಅಲ್ಲಿನ ನಾಯಕರನ್ನು ನಿರಾಶೆಗೊಳಿಸಿದೆ. ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸುವ ಬದಲು, ಪಾಕಿಸ್ತಾನವು ನಮ್ಮ ಧಾರ್ಮಿಕ ಸ್ಥಳಗಳು, ಶಾಲೆಗಳು, ನಾಗರಿಕರು ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ ಎಂದು ಮೋದಿ ಹೇಳಿದ್ದಾರೆ.
ಭಾರತದ ಮುಂದುವರಿದ, ಬಲಿಷ್ಠ ರಕ್ಷಣಾ ವ್ಯವಸ್ಥೆಗಳು ಪಾಕಿಸ್ತಾನದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಸುಲಭವಾಗಿ ತಟಸ್ಥಗೊಳಿಸುವುದನ್ನು ಜಗತ್ತು ನೋಡುತ್ತಿದೆ. ಪಾಕಿಸ್ತಾನ ಭಾರತದ ಗಡಿಗಳನ್ನು ಗುರಿಯಾಗಿಸಿಕೊಂಡಿದ್ದರೂ, ಭಾರತವು ಕಾರ್ಯತಂತ್ರದಿಂದ ಪ್ರತಿಕ್ರಿಯಿಸಿದೆ. ಅವರ ಪ್ರಮುಖ ಮೂಲಸೌಕರ್ಯಕ್ಕೆ ನಿಖರವಾದ ಹೊಡೆತ ನೀಡಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಪ್ರಧಾನಿ, ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ರೀತಿ ಒಂದು ದಿನ ಆ ರಾಷ್ಟ್ರವನ್ನೇ ನಾಶಪಡಿಸುತ್ತದೆ. ಪಾಕಿಸ್ತಾನ ಬದುಕುಳಿಯಲು ಬಯಸಿದರೆ, ಅದು ತನ್ನಲ್ಲಿರುವ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಬೇಕಾಗುತ್ತದೆ ಎಂದು ಒತ್ತಿ ಹೇಳಿದ್ದಾರೆ.
ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಭಾರತ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಬಹಾವಲ್ಪುರ್ ಮತ್ತು ಮುರಿಡ್ಕೆ ಮೂಲದ ಭಯೋತ್ಪಾದಕರ ನೆಲೆಗಳು ಭಯೋತ್ಪಾದನೆಯ ವಿಶ್ವವಿದ್ಯಾಲಯಗಳಾಗಿ ಅಭಿವೃದ್ಧಿ ಹೊಂದುತ್ತಿದ್ದರಿಂದ ಅವುಗಳನ್ನು ನಾಶಪಡಿಸಲಾಗಿದೆ. ಈ ಸ್ಥಳಗಳು ಅಮೆರಿಕದ 9/11ರ ದಾಳಿಗಳು, ಲಂಡನ್ ಟ್ಯೂಬ್ ಬಾಂಬ್ ದಾಳಿಗಳು ಮತ್ತು ಭಾರತದಲ್ಲಿ ದಶಕಗಳಿಂದ ನಡೆದ ಭಯೋತ್ಪಾದಕ ಘಟನೆಗಳು ಸೇರಿದಂತೆ ವಿಶ್ವದ ಪ್ರಮುಖ ಭಯೋತ್ಪಾದಕ ದಾಳಿಗಳೊಂದಿಗೆ ಸಂಬಂಧ ಹೊಂದಿವೆ ಎಂದು ಪ್ರಧಾನಿ ವಿವರಿಸಿದ್ದಾರೆ.
‘ಶಾಂತಿ’ ಗಾಗಿ ‘ಶಕ್ತಿ’ಯ ಬಳಕೆಯನ್ನು ಒತ್ತಿ ಹೇಳಿದ ಪ್ರಧಾನಿ, ಭಾರತ ಅದನ್ನು ಅನುಸರಿಸುತ್ತದೆ; ಆದಾಗ್ಯೂ, ಕೆಲವೊಮ್ಮೆ ಶಾಂತಿಗಾಗಿಯೂ ಶಕ್ತಿಯನ್ನು ಬಳಸಬೇಕಾಗುತ್ತದೆ ಎಂದಿದ್ದಾರೆ.
ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನಕ್ಕೆ ಉಂಟಾದ ಭಾರಿ ಹಾನಿಯನ್ನು ದೃಢಪಡಿಸಿದ ಪ್ರಧಾನಿ, ಭಾರತವು ಭಯೋತ್ಪಾದಕರ ಭದ್ರಕೋಟೆಗಳನ್ನು ನಾಶಮಾಡಿದೆ. ಇದರಿಂದಾಗಿ ಪಾಕಿಸ್ತಾನವು ತನ್ನ ಕಡೆಯಿಂದ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ಅಥವಾ ಮಿಲಿಟರಿ ಕಾರ್ಯಾಚರಣೆಗಳು ನಡೆಯುವುದಿಲ್ಲ ಎಂದು ಭರವಸೆ ನೀಡಬೇಕಾಯಿತು ಎಂದು ತಿಳಿಸಿದ್ದಾರೆ.
ಎಚ್ಚರಿಕೆಯಿಂದ ಪಾಕಿಸ್ತಾನದ ಭಯೋತ್ಪಾದಕರ ಕೇಂದ್ರಗಳು ಮತ್ತು ಮಿಲಿಟರಿ ನೆಲೆಗಳ ವಿರುದ್ಧದ ನಮ್ಮ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ಆದಾಗ್ಯೂ, ನಾವು ಜಾಗರೂಕರಾಗಿರುತ್ತೇವೆ. ಭವಿಷ್ಯದಲ್ಲಿಯೂ ಸಹ ಅವರ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದೇಶ ಒಗ್ಗಟ್ಟಿನಿಂದ ಇರಬೇಕೆಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ದೇಶದ ಜನತೆಗೆ ಮನವಿ ಮಾಡಿದ್ದಾರೆ. ಸಶಸ್ತ್ರ ಪಡೆಗಳು, ಅರೆಸೈನಿಕ ಪಡೆಗಳು, ಬಿಎಸ್‌ಎಫ್, ಗುಪ್ತಚರ ಸಂಸ್ಥೆಗಳು ಮತ್ತು ನಾಗರಿಕರು ಒಟ್ಟಾಗಿ ನಿಂತಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.
ಭಯೋತ್ಪಾದಕ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ ಪ್ರಧಾನಿ, ದೇಶದ ಮಹಿಳೆಯರ ಘನತೆಗೆ ಹಾನಿ ಮಾಡಲು ಪ್ರಯತ್ನಿಸಿದ್ದರ ಪರಿಣಾಮಗಳನ್ನು ಎಲ್ಲಾ ಭಯೋತ್ಪಾದಕ ಸಂಘಟನೆಗಳು ಈಗ ಸಂಪೂರ್ಣವಾಗಿ ಅರ್ಥಮಾಡಿಕೊಂಡಿವೆ ಎಂದು ಹೇಳಿದ್ದಾರೆ.
‘ಆಪರೇಷನ್ ಸಿಂಧೂರ’ ಕೇವಲ ಹೆಸರಲ್ಲ, ಬದಲಾಗಿ ಲಕ್ಷಾಂತರ ಭಾರತೀಯರ ಭಾವನೆಗಳ ಪ್ರತಿಬಿಂಬವಾಗಿದೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ನಂತರ ಭಾರತ ಇಷ್ಟೊಂದು ದಿಟ್ಟ ಕ್ರಮ ಕೈಗೊಳ್ಳುತ್ತದೆ ಎಂದು ಭಯೋತ್ಪಾದಕರು ಎಂದಿಗೂ ಊಹಿಸಿರಲಿಲ್ಲ ಎಂದಿದ್ದಾರೆ.
ಒಂದು ರಾಷ್ಟ್ರವು ‘ರಾಷ್ಟ್ರ ಮೊದಲು’ ಎಂಬ ತತ್ವವನ್ನು ಮಾರ್ಗದರ್ಶಿ ಸೂತ್ರವಾಗಿಟ್ಟುಕೊಂಡು ಒಗ್ಗಟ್ಟಿನಿಂದ ನಿಂತಾಗ, ಅದು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಪ್ರಭಾವಶಾಲಿ ಫಲಿತಾಂಶಗಳನ್ನು ಪಡೆಯುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಭಾರತವನ್ನು ಗುರಿಯಾಗಿಸುವ ಪ್ರಯತ್ನ ನಡೆದಾಗಲೆಲ್ಲಾ, ಭಾರತ ತನ್ನದೇ ಆದ ಕ್ರಮಗಳ ಮೂಲಕ ಭಯೋತ್ಪಾದಕ ನೆಲೆಗಳನ್ನು ಬೇರು ಸಹಿತ ಕಿತ್ತು ಹಾಕಿ ಪ್ರತೀಕಾರ ತೀರಿಸಿಕೊಂಡಿವೆ ಎಂದಿದ್ದಾರೆ.
ಅವಿವೇಕಿಗಳು ಯುದ್ಧಕ್ಕಾಗಿ ಪ್ರೇರೇಪಿಸಿದರೂ ನಾವು ಅದನ್ನು ಬೆಂಬಲಿಸಬಾರದು: ಜನರಲ್ ಮನೋಜ್ ನರವಾಣೆ