Homeಅನುವಾದಿತ ಲೇಖನತಮಿಳುನಾಡು : ತೂತುಕುಡಿ ಲಾಕಪ್‌ ಡೆತ್‌ಗೆ 1 ವರ್ಷ, ಕಮರುತ್ತಿದೆ ನ್ಯಾಯದ ನಿರೀಕ್ಷೆ

ತಮಿಳುನಾಡು : ತೂತುಕುಡಿ ಲಾಕಪ್‌ ಡೆತ್‌ಗೆ 1 ವರ್ಷ, ಕಮರುತ್ತಿದೆ ನ್ಯಾಯದ ನಿರೀಕ್ಷೆ

- Advertisement -
- Advertisement -

ದೇಶಾದ್ಯಂತ ಸುದ್ದಿಯಾಗಿದ್ದ ತಮಿಳುನಾಡಿನ ಲಾಕ್‌ಆಪ್ ಡೆತ್‌ಗೆ ಇಂದು 1 ವರ್ಷ ತುಂಬುತ್ತದೆ. 2020 ರ ಜೂನ್ 19 ರ   ಬೆಳಿಗ್ಗೆ 58 ವರ್ಷದ ಜಯರಾಜ್ ಮತ್ತು ಅವರ 31 ವರ್ಷದ ಮಗ ಇಮ್ಯಾನುವೆಲ್ ಬೆನಿಕ್ಸ್     ಸತಾಂಕುಲಮ್‌‌‌ನ ತಮ್ಮ ಮನೆಯಿಂದ ಹೊರಟಿದ್ದರು. ಮೊಬೈಲ್ ಅಂಗಡಿಯನ್ನು ನಡೆಸುತ್ತಿದ್ದ ತಂದೆ ಮಗ ಸಂಜೆ 7 ರ ಹೊತ್ತಿಗೆ ತಮ್ಮ ಅಂಗಡಿಯನ್ನು ಮುಚ್ಚಲು ಮುಂದಾಗಿದ್ದಾರೆ. ಆದರೆ ಆ ಸಂಜೆ ಕುಟುಂಬದ ನೆಮ್ಮದಿಯ ಬದುಕಿಗೆ ಕೊನೆ ಹಾಡಿತ್ತು.

ತಮಿಳುನಾಡಿನ ತೂತುಕುಡಿಯಲ್ಲಿ ಕಳೆದ ಜೂನ್‌ 19 ರಂದು ನಡೆದ ಲಾಕಪ್‌ ಡೆತ್ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ತಮಿಳುನಾಡಿನ ಪೊಲೀಸರ ಕ್ರೌರ್ಯದ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ಆದರೆ 1 ವರ್ಷಗಳ ನಂತರವೂ ತೂತುಕುಡಿ ಲಾಕಪ್‌ ಡೆತ್ ಪ್ರಕರಣದಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಲೇ ಇದೆ. ಈ ಸಂದರ್ಭದಲ್ಲಿ ಜಯರಾಜ್ ಮತ್ತು ಇಮ್ಯಾನುವೆಲ್ ಬಿನಿಕ್‌ ಅವರ ಸ್ನೇಹಿತರು ಲಾಕಪ್‌ ಡೆತ್‌ ಕುರಿತು ಏನು ಹೇಳುತ್ತಾರೆ ನೋಡೋಣ.

ಇದನ್ನೂ ಓದಿ : 7 ವರ್ಷಗಳ ದುರಾಡಳಿತ, ಏಳಬೇಕೀಗ ಭಾರತ: ಡಾ. ಎಚ್ ವಿ ವಾಸು

ಲಾಕಪ್‌ ಡೆತ್‌ಗೆ 1 ವರ್ಷ ಎಂದರೆ ನಂಬಲಾಗುತ್ತಿಲ್ಲ

ಲಾಕಪ್‌ ಡೆತ್‌ನಲ್ಲಿ ಮೃತಪಟ್ಟ ಜಯರಾಜ್ ಅವರ ಪತ್ನಿ ಸೆಲ್ವರಾಣಿಯವರು 2020 ರ ಆಗಸ್ಟ್ ನಲ್ಲಿ ತಮ್ಮ ಸಾತಂಕುಲಮ್‌ನ ಮನೆಯನ್ನು ತೊರೆದು ಮಗಳು ಪೆರ್ಸಿಸ್ ಜೊತೆ ಪಕ್ಕದ ಟೆಂಕಾಸಿ ಜಿಲ್ಲೆಯ ಪುಲ್ಲಂಗುಡಿಯಲ್ಲಿ ವಾಸಿಸುತ್ತಿದ್ದಾರೆ.

ಲಾಕಪ್‌ ಡೆತ್‌ ನಡೆದ ರಾತ್ರಿ ಪೊಲೀಸ್ ಠಾಣೆಯ ಆಚೆಗೆ ನಿಂತಿದ್ದ ಬಿನಿಕ್‌ ಅವರ ಸ್ನೇಹಿತ್ ರವಿ ತಮ್ಮ ಸ್ನೇಹಿತನನ್ನು ನೆನೆಸಿಕೊಂಡು ಮರುಗುತ್ತಾರೆ. ಬೆನಿಕ್‌ನನ್ನು ನೆನೆಯದ ಒಂದೇ ಒಂದು ದಿನವೂ ಇಲ್ಲ ಈ ಒಂದು ವರ್ಷದಲ್ಲಿ ಎಂದು ರವಿ ನೆನೆಸಿಕೊಂಡಿದ್ದಾರೆ. ಲಾಕಪ್‌‌‌ ಡೆತ್‌ಗೆ  1 ವರ್ಷವೆಂದರೆ ನಂಬಲಾಗದು ಎಂದು ರವಿ ತಮ್ಮ ದು:ಖವನ್ನು ಹಂಚಿಕೊಂಡಿದ್ದಾರೆ.

1 ವರ್ಷ ಆಗಿಹೋಯಿತೇ ? ಬೆನಿಕ್ ಮುಖ ಇನ್ನೂ ಅಚ್ಚಳಿಯದಂತೆ ನನ್ನ  ಕಣ್ಣ ಮುಂದಿದೆ ಎಂದು ಬೆನಿಕ್ ಅವರ ಮತ್ತೊಬ್ಬ ಸ್ನೇಹಿತ ತಮ್ಮ ನೋವನ್ನು ಹಂಚಿಕೊಳ್ಳುತ್ತಾರೆ.

ಜೂನ್ 22 ರಂದು ಜಯರಾಜ್ ಮತ್ತು ಬೆನಿಕ್ ಅವರ ಕುಟುಂಬ ಲಾಕಪ್ ಡೆತ್‌ನಲ್ಲಿ ಮಡಿದವರ ನೆನಪಿನಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಹಮ್ಮಿಕೊಂಡಿದೆ.

ಘಟನೆಯ ಹಿನ್ನಲೆ

2020 ರ ಜೂನ್ 18 ರಂದು ಜಯರಾಜ್ ಅವರ ಮೊಬೈಲ್ ಅಂಗಡಿಗೆ ಆಗಮಿಸಿದ ಪೊಲೀಸ್ ಪೇದೆಗಳು ಸರ್ಕಾರ ನಿಗದಿ ಪಡಿಸಿದ ಲಾಕ್‌ಡೌನ್ ಅವಧಿಯನ್ನು ಮೀರಿ ಅಂಗಡಿಯನ್ನು ತೆರೆದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ಹೋಗಿದ್ದರು. ಮಾರನೇ ದಿನ ಸಂಜೆ 7:45 ನಿಮಿಷಕ್ಕೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಾಲಕೃಷ್ಣನ್ ಕೆಲವು ಪೇದೆಗಳೊಂದಿಗೆ ಜಯರಾಜ್ ಅವರ ಅಂಗಡಿಗೆ ಆಗಮಿಸಿ ಮಾತಿನ ಚಕಮುಕಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಜಯರಾಜ್ ಮತ್ತು ಇಮ್ಯಾನುವೆಲ್ ಬೆನಿಕ್ ಅವರನ್ನು ಪೊಲೀಸ್ ಠಾಣೆಗೆ ಒಯ್ದಿದ್ದಾರೆ. ರಾತ್ರಿಯಿಡಿ ಪೊಲೀಸರು ಥಳಿಸಿದ ಪರಿಣಾಮ ಬೆನಿಕ್ ಅದೇ ರಾತ್ರಿ ಮೃತಪಟ್ಟಿದ್ದಾರೆ. ತಂದೆ ಜಯರಾಜ್ ಮಾರನೇಯ ದಿನ ಅಸು ನೀಗಿದ್ದಾರೆ.

ಜಯರಾಜ್ ಮತ್ತು ಬೆನಿಕ್‌ರನ್ನು ಪೊಲೀಸರು ಲಾಟಿಗಳಿಂದ ಮನಸೋ ಇಚ್ಛೆ ಥಳಿಸಿದರು. ರಕ್ತ ಹರಿಯುತ್ತಿತ್ತು. ನಿಲ್ಲಿಸಿ ಎಂದರೆ ಮತ್ತಷ್ಟು ಹೊಡೆದರು. ಪರಿಣಾಮ ತಂದೆ ಮತ್ತು ಮಗ ಪೊಲೀಸ್ ಠಾಣೆಯಲ್ಲಿಯೇ ಕೊನೆ ಉಸಿರು ಎಳೆದಿದ್ದಾರೆ ಎಂದು 2020 ರ ಜೂನ್ 19 ರಂದು ಸತಾಂಕುಲಮ್ ಪೊಲೀಸ್ ಠಾಣೆಯ ಎದುರು ಕಾಯುತ್ತ ನಿಂತಿದ್ದ ಬೆನಿಕ್ ಸ್ನೇಹಿತರು ತಿಳಿಸಿದ್ದಾರೆ.

ಪೊಲೀಸರು ದಾಖಲಿಸಿದ FIR ನಲ್ಲಿ ಸಾಕಷ್ಟು ದೋಷವಿರುವುದನ್ನು ಗಮನಿಸಿದ ತಮಿಳುನಾಡು ಹೈಕೋರ್ಟ್ ಸುಮೋಟೊ ಪ್ರಕರಣವನ್ನು ದಾಖಲಿಸಿಕೋಮಡು ವಿಚಾರಣೆಯನ್ನು ಆರಂಭಿಸಿತು. ಈ ನಡುವೆ ತಮಿಳುನಾಡಿನಾದ್ಯಂತ ಪೊಲೀಸರ ಕ್ರೌರ್ಯದ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದವು. ತಮಿಳುನಾಡು ಹೈಕೋರ್ಟ್‌ ಪ್ರಕತರಣವನ್ನು ಸಿಬಿಐಗೆ ವಹಿಸಿತ್ತು.

CBI ಲಾಕಪ್‌ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸತಾಂಕುಲಮ್ ಠಾಣಾಧಿಕಾರಿಯಾಗಿದ್ದ ಎಸ್‌.ಶ್ರೀಧರ್, ಕೆ. ಬಾಲಕೃಷ್ಣನ್ ಮತ್ತು ಮತ್ತೊಬ್ಬ ಸಬ್‌ ಇನ್ಸ್‌ಪೆಕ್ಟರ್, ಇಬ್ಬರು ಹೆಡ್‌ ಕಾನ್ಸಟೇಬಲ್, 4 ಜನ ಕಾನ್ಸಟೇಬಲ್ ಸೇರಿ 9 ಜನರನ್ನು ಬಂಧಿಸಿತ್ತು. ಅಪರಾಧಿಕ ಸಂಚು, ಕೊಲೆ, ಸುಳ್ಳು ಪ್ರಕರಣ ದಾಖಲು, ಸಾಕ್ಷಿ ನಾಶ, ಅಕ್ರಮ ಬಂಧನ ಸೇರಿ ಹಲವು ಪ್ರಕರಣಗಳನ್ನು ದಾಖಲಿಸಿದೆ. 9 ಜನರಲ್ಲಿ ಒಬ್ಬರು ಈಗಲೇ ಕೋವಿಡ್‌ ಕಾರಣಕ್ಕೆ ಮೃತಪಟ್ಟಿದ್ದಾರೆ. ಉಳಿದ 8 ಜನರು ಇನ್ನೂ ಜೈಲಿನಲ್ಲಿ ಇದ್ದಾರೆ.

ಕುಂಟುತ್ತ ಸಾಗುತ್ತಿರುವ CBI   ವಿಚಾರಣೆ

ಕಳೆದ 8 ತಿಂಗಳಿನಿಂದ CBI ಲಾಕಪ್‌ ಡೆತ್ ಪ್ರಕರಣದ ತನಿಖೆಯನ್ನು ನಡೆಸುತ್ತಲೇ ಇದೆ. ಈ ಸಂಬಂಧ ವಿಚಾರಣೆಯನ್ನು ಕೂಡ ನಡೆಸುತ್ತಿದೆ. ಮಾರ್ಚ್‌ 2021 ಜಯರಾಜ್ ಅವರ ಪತ್ನಿ ಸೆಲ್ವರಾಣಿಯವರು ಸಿಬಿಐ ತನಿಖೆಯನ್ನು ಶೀಘ್ರವೇ ಮುಗಿಸುವಂತೆ ಆದೇಶಿಸಬೇಕು ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ತನಿಖೆ ಯಾಕೆ ಮುಗಿಯುತ್ತಿಲ್ಲ ? 8 ತಿಂಗಳು ಬೇಕೆ ? ಎಂದು ಸುಪ್ರೀಂ ಕೋರ್ಟ್‌ ಕೇಳಿದ ಪ್ರಶ್ನೆಗೆ ಸಿಬಿಐ ಸಮರ್ಪಕವಾಗಿ ಉತ್ತರಿಸಿರಲಿಲ್ಲ.  1 ವರ್ಷವಾದರೂ ಸಿಬಿಐ ತನಿಖೆಯನ್ನು ನಡೆಸುತ್ತಲೇ ಇದೆ.

ಮಧುರೈ ಹೈಕೋರ್ಟ್‌ ಬೆಂಚ್ 2021 ಮಾರ್ಚ್‌ 28 ರಂದು  6 ತಿಂಗಳಲ್ಲಿ ವಿಚಾರಣೆಯನ್ನು ಮುಗಿಸುವಂತೆ ಮುಧರೈನ ಜಿಲ್ಲಾ ನ್ಯಾಯಾಧೀಶರಿಗೆ ಆದೇಶಿಸಿದೆ.

ಸುಪ್ರೀಂ ಕೋರ್ಟ್‌ ಮೇ 25 ರಂದು ಪ್ರಕರಣದ ಆರೋಪಿಯೊಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆ ಹುಟ್ಟಿಸುವ ಪ್ರಯತ್ನದಲ್ಲಿ ತಮಿಳುನಾಡು ಪೊಲೀಸ್ ಇಲಾಖೆ

ತೂತುಕುಡಿ ಲಾಕಪ್‌ ಡೆತ್‌ ಪ್ರಕರಣದ ನಂತರ ತಮಿಳುನಾಡು ಪೊಲೀಸ್ ಇಲಾಖೆ ಸಾಕಷ್ಟು ಮುಜುಗರ ಮತ್ತು ಅಪನಂಬಿಕೆಯನ್ನು ಅನುಭವಿಸಿದೆ. ಜನರು ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳ ತೊಡಗಿದ್ದಾರೆ. ತೂತುಕುಡಿ ಲಾಕಪ್‌ ಡೆತ್ ನಂತರ ಮತ್ತಷ್ಟು ಪೊಲೀಸ್ ದೌರ್ಜನ್ಯದ ಪ್ರಕರಣಗಳು ತಮಿಳುನಾಡಿನಲ್ಲಿ ಬೆಳಕಿಗೆ ಬಂದಿವೆ. ಸಾತಂಕುಲಂ ಪೊಲೀಸ್ ಠಾಣೆಯಲ್ಲಿ 30 ಜನ ಹೊಸ ಪೊಲೀಸ್ ಸಿಬ್ಬಂದಿಯನ್ನು ತಮಿಳುನಾಡು ಪೊಲೀಸ್ ಇಲಾಖೆ ನೇಮಿಸಿದೆ.

ಹೊಸದಾಗಿ ನೇಮಕವಾದ ಪೊಲೀಸ್ ಸಿಬ್ಬಂದಿ ಸಾತಂಕುಲ ಸುತ್ತಮುತ್ತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಜನತೆಯೊಂದಿಗೆ ಪೊಲೀಸ್ ಎಂಬ ಜನರ ದೂರುಗಳನ್ನು ಆಲಿಸುವ ಸಾರ್ವಜನಿಕ ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿದ್ದಾರೆ. ಜೊತೆಗೆ ಸಾತಂಕುಲ ಸುತ್ತ ಮುತ್ತ ಸಾಕಷ್ಟು ಸಿಸಿ ಟಿವಿಯನ್ನು ಕೂಡ ಪೊಲೀಸರು ಅಳವಡಿಸಿದ್ದಾರೆ. ಆದರೂ ಇನ್ನೂ ತೂತುಕುಡಿಯ ಜನರಿಗೆ ಪೊಲೀಸರ ಮೇಲಿನ ಭಯ ದೂರವಾಗಿಲ್ಲ. ಲಾಕಪ್‌ ಡೆತ್ ಘಟನೆ ತಮಿಳುನಾಡಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಕೂತುಬಿಟ್ಟಿದೆ. ಲಾಕಪ್‌ ಡೆತ್‌ಗೆ ಕಾರಣವಾದ ಪೊಲೀಸ್ ಅಧಿಕಾರಿಗಳಿಗೆ ಶೀಘ್ರದಲ್ಲಿ ಶಿಕ್ಷೆಯಾದರೆ ಮಾತ್ರ ಜನರಿಗೆ ಪೊಲೀಸ್ ಇಲಾಖೆಯ ಮೇಲೆ ಒಂದಷ್ಟು ನಂಬಿಕೆ ಹುಟ್ಟಲು ಸಾಧ್ಯ.

ಅನುವಾದ –ರಾಜೇಶ್ ಹೆಬ್ಬಾರ್ 

ಮೂಲ : ಕ್ವಿಂಟ್ ಇಂಡಿಯಾ

ಇದನ್ನೂ ಓದಿ : ತೆಲಂಗಾಣ ಸಂಪೂರ್ಣ ಅನ್‌ಲಾಕ್‌‌‌; ರಾಜ್ಯಗಳಿಗೆ ಐದು ಕಾರ್ಯತಂತ್ರಗಳನ್ನು ಸೂಚಿಸಿದ ಒಕ್ಕೂಟ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...