Homeಮುಖಪುಟಶಿಕ್ಷಕ; ಅರಿವು ಮತ್ತು ಆಚರಣೆ - ಡಾ. ಸಿ.ಬಿ. ಐನಳ್ಳಿ

ಶಿಕ್ಷಕ; ಅರಿವು ಮತ್ತು ಆಚರಣೆ – ಡಾ. ಸಿ.ಬಿ. ಐನಳ್ಳಿ

ಶಿಕ್ಷಕರನ್ನ ದೈವತ್ವಕ್ಕೇರಿಸುವ ಸಂದೇಶಗಳಿಗೂ ಮತ್ತು ಶಿಕ್ಷಕರ ಉಪನ್ಯಾಸವನ್ನು ಬಹಳಷ್ಟು ವಿದ್ಯಾರ್ಥಿಗಳು ಎಳ್ಳಷ್ಟೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿರುವುದಕ್ಕೂ ಸಂಬಂಧವಿದೆ

- Advertisement -
- Advertisement -

ಶಿಕ್ಷಕರ ದಿನಾಚರಣೆಯ ದಿನ ಹರಿದಾಡುವ ವಾಟ್ಸಪ್ ಸಂದೇಶಗಳು ಮತ್ತು ಪ್ರೊಫೈಲ್ ಫೋಟೋಗಳು ಶಿಕ್ಷಕರನ್ನ ದೈವತ್ವಕ್ಕೇರಿಸಿ ಏಕಮುಖಿಯಾಗಿ ವೈಭವೀಕರಿಸುತ್ತಿರುತ್ತವೆ. ಗೌರವಿಸುವುದು ಅಪೇಕ್ಷಣೀಯ. ಆದರೆ ಇಂಥ ವೈಭವೀಕೃತ ಸಂದೇಶಗಳಿಗೂ ಮತ್ತು ನಮ್ಮ ತರಗತಿಗಳಲ್ಲಿ ಶಿಕ್ಷಕರ ಉಪನ್ಯಾಸವನ್ನು ಬಹಳಷ್ಟು ವಿದ್ಯಾರ್ಥಿಗಳು ಎಳ್ಳಷ್ಟೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿರುವುದಕ್ಕೂ ಸಂಬಂಧವಿದೆ ಎನಿಸುತ್ತದೆ. ಜ್ಞಾನವೆಂದರೆ ಅಕ್ಷರದ ತಿಳುವಳಿಕೆಯ ಮೂಲಕ ಗಳಿಸುವ ಮಾಹಿತಿ ಮತ್ತು ಶಿಕ್ಷಕರೆಂದರೆ ಅಕ್ಷರದ ತಿಳುವಳಿಕೆ ನೀಡಿ ಸಿದ್ಧಜ್ಞಾನವನ್ನು ನಮಗೆ ಪೂರೈಸುವವರು ಎಂಬ ದೃಷ್ಟಿಕೋನದಿಂದ ಉಂಟಾಗಿರುವ ಪರಿಣಾಮವಿದು.     ಅನಾರೋಗ್ಯಕರ ಸ್ಪರ್ಧೆಯಿಂದ ನರಳುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಈ ಕಾಲಘಟ್ಟದಲ್ಲಂತೂ, ಸುಲಭೋಪಾಯಗಳ ಮೂಲಕ ಅತಿ ಹೆಚ್ಚು ಅಂಕಗಳಿಸುವ ಕಲೆಯನ್ನ ಕಲಿಸುವವರು ಶ್ರೇಷ್ಠ ಶಿಕ್ಷಕರು ಎಂಬಂತಾಗಿದೆ; ಪರಿಣಾಮವಾಗಿ ಶಿಕ್ಷಕರಿಗೆ ಇರಬೇಕಿದ್ದ ಅರಿವಿನ ಪ್ರಚೋದಕ ಮತ್ತು ಅರಿವಿನ ಉತ್ಪಾದಕರ ಪಾತ್ರ ಅಲಕ್ಷ್ಯಕ್ಕೊಳಗಾದಂತಿದೆ.

ಮಾನವಿಕಗಳಂತಹ ಜ್ಞಾನಶಿಸ್ತುಗಳಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಅರಿವಿನ ಕೊಡು-ಕೊಳ್ಳುವಿಕೆಯಲ್ಲಿ ಕೆಲವೊಮ್ಮೆ ವಿದ್ಯಾರ್ಥಿಗಿರುವ ನೈಜ ಬದುಕಿನ ತಿಳುವಳಿಕೆ ಶಿಕ್ಷಕರ ಅಕಾಡೆಮಿಕ್ ಜ್ಞಾನವನ್ನು ಗೊಂದಲಕ್ಕೀಡುಮಾಡಿರುವುದು ಕೂಡಾ ಸೂಕ್ಷ್ಮ  ಸಂವೇದನೆಯುಳ್ಳ ಶಿಕ್ಷಕರ ಅನುಭವಕ್ಕೆ ಬಂದಿರುತ್ತದೆ. ಆದರೆ ನಿಗದಿಪಡಿಸಿದ ಪಠ್ಯದಲ್ಲಿರುವ ಸಂಗತಿಯೇ ಆತ್ಯಂತಿಕ ಸತ್ಯವೆಂಬ ಹುಸಿನಂಬಿಕೆಯಲ್ಲಿರುವವರಿಗೆ ಇದು ಗಮನಿಸಬೇಕಾದ ಸಂಗತಿಯೆನಿಸುವುದಿಲ್ಲ. ಬಹಳಷ್ಟು ಸಲ, ನಮ್ಮ ಸಾಂಪ್ರದಾಯಿಕ ಬೋಧನೆ-ಕಲಿಕೆಯ ಸಂದರ್ಭಗಳಲ್ಲಿ ಶಿಕ್ಷಕ-ವಿದ್ಯಾರ್ಥಿ ಸಂಬಂಧವನ್ನ ಒಂದು ಅಧಿಕಾರದ  ಶ್ರೇಣಿಕೃತ  ಸಂಬಂಧದಂತೆ ಗ್ರಹಿಸಿರುವುದು ವಿದ್ಯಾರ್ಥಿಗಳ ಅರಿವಿನ ಸ್ವಚ್ಛಂದ ಮತ್ತು ಸ್ವತಂತ್ರ  ಅರಳುವಿಕೆಯನ್ನು ಸ್ವಲ್ಪಮಟ್ಟಿಗೆ ತಡೆದಂತೆ  ಕಾಣುತ್ತದೆ.

ಇಂತಹ ಗ್ರಹಿಕೆಗೆ ಕಾರಣವಾಗಿರುವ ನಮ್ಮ ಒಟ್ಟಾರೆ ಶಿಕ್ಷಣದ ಕ್ರಮವನ್ನು ನಿಕಷಕ್ಕೊಡ್ಡಬೇಕಿದೆ.  ಕಂಠಪಾಠ, ನೆನಪಿನ ಶಕ್ತಿ, ಸಾಮಾಜಿಕವಾಗಿ ವಿನಯಶೀಲ ನಡೆ-ನುಡಿ, ಸಮಾಜದ ಮುಖ್ಯಧಾರೆಯ ಮೌಲ್ಯವ್ಯವಸ್ಥೆ – ಇವುಗಳನ್ನು ಮಕ್ಕಳಲ್ಲಿ ರೂಢಿಸುವುದಕ್ಕೆ ಮಾತ್ರ  ಶಿಕ್ಷಣದ ವ್ಯವಸ್ಥೆ ಸೀಮಿತವಾದಂತಿದೆ.  ಪದವಿ ಹಂತದ ಸಮಾಜವಿಜ್ಞಾನಗಳು ಮತ್ತು ಮಾನವಿಕಗಳ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಚಿಂತನಶೀಲರನ್ನಾಗಿ ಮಾಡುವ ಪಾಠಗಳ ಪ್ರಮಾಣ ಎಷ್ಟಿದೆ? ಚಿಂತನಶೀಲತೆಯನ್ನು ಹುಟ್ಟಿಸದ ಶಿಕ್ಷಣ ಸ್ಥಾಪಿತವ್ಯವಸ್ಥೆ ಮತ್ತು ಯಥಾಸ್ಥಿತಿಯನ್ನು  ರಕ್ಷಿಸುತ್ತದೆ. ಆದ್ದರಿಂದ ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆ ಯಾರ ದೃಷ್ಟಿಕೋನದಿಂದ ರೂಪಿಸಲ್ಪಟ್ಟಿದೆ ಎಂಬುದನ್ನು ಪುನರ್ ವಿಮರ್ಶಿಸಿಕೊಳ್ಳಬೇಕಿದೆ.

ಯಾವ ಸೈದ್ಧಾಂತಿಕತೆಯೂ ವೈಚಾರಿಕತೆಯೂ ಮತ್ತು ಜ್ಞಾನ ವ್ಯವಸ್ಥೆಯೂ ಆತ್ಯಂತಿಕವಲ್ಲ.   ಮನುಷ್ಯನ ನಾಗರಿಕತೆಯ ವಿಕಸನ ಪರಿಪೂರ್ಣವಾಗಿಲ್ಲ ; ಅದೊಂದು ಪ್ರಕ್ರಿಯೆಯಾದ್ದರಿಂದ  ಪರಿಪೂರ್ಣತೆ ಎಂಬುದು ಇರುವುದೂ ಇಲ್ಲ. ಸದ್ಯ, ನಾಗರೀಕತೆಯ ವಿಕಸನದ ಯಾವುದೋ ಒಂದು ಬಿಂದುವಿನಲ್ಲಿರುವ ನಾವು, ಸ್ಥಾಪಿತ ಸಂಪ್ರದಾಯಗಳು ಸಾಮಾಜಿಕ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನ ನಿರಂತರ ನಿಕಷಕ್ಕೊಡ್ಡುತ್ತಾ ವಿಕಸನದ ಪರಿಪೂರ್ಣತೆ ಎಂಬ ಮುಗಿಯದ ಹಾದಿಯಲ್ಲಿ ನಾಲ್ಕು ಹೊಸ ಹೆಜ್ಜೆ ಮುಂದಿಡಬೇಕಿದೆ. ಈ ಹಾದಿಯಲ್ಲಿ  ಮುನ್ನಡೆಸಲು, ಸಮಾಜದ ನಾನಾ ಸಮಸ್ಯೆಗಳಿಗೆ ತಾತ್ವಿಕ ಕಾರಣಗಳನ್ನು ತಿಳಿದು, ಅವುಗಳಿಗೆ  ಮದ್ದು ಅರೆಯುವಂತಹ ಚಿಂತನಶೀಲತೆಯನ್ನು ಹುಟ್ಟಿಸುವ ಶಿಕ್ಷಣಕ್ರಮ ಇಂದಿನ ಅಗತ್ಯ.  ಜಿಡ್ಡು ಕೃಷ್ಣಮೂರ್ತಿ ಮುಕ್ತವಾಗಿ ಮತ್ತು ನಿರ್ಭಯವಾಗಿ ಆಲೋಚಿಸುವಂತೆ ಕಲಿಸುವುದೇ ಶಿಕ್ಷಣದ ಬಹುಮುಖ್ಯವಾದ ಕಾರ್ಯ ಎನ್ನುತ್ತಾರೆ. ಈ  ದಿಸೆಯಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಿದ್ದಾರೆಯೇ? ಇದಕ್ಕೆ  ಅನುವು ಮಾಡಿಕೊಡುವಂತಹ ಶೈಕ್ಷಣಿಕ ನೀತಿ ರೂಪಿಸುವ ರಾಜಕೀಯ ವ್ಯವಸ್ಥೆ ನಮ್ಮಲ್ಲಿದೆಯೇ? ಇಂಥ ಮುಕ್ತ ಮತ್ತು ನಿರ್ಭಯ ಆಲೋಚನಾಕ್ರಮವನ್ನು ಪ್ರೋತ್ಸಾಹಿಸುವ ಕೆಲವೇ ಕೆಲವು ಉನ್ನತ ಶಿಕ್ಷಣದ ಸಂಸ್ಥೆಗಳು ಇಂದು ಕೇಡಿನ ಕೇಂದ್ರಗಳಂತೆ ಕೀಳೀಕರಿಸಲ್ಪಟ್ಟಿರುವುದು ಈ ಬಗ್ಗೆ ನಮ್ಮನ್ನು ನಿರಾಶರನ್ನಾಗಿಸುತ್ತದೆ.

ಜ್ಞಾನವೆಂಬುದು ಕೂಡ ಒಂದು ನಿರ್ಮಿತಿ. ಹಾಗಾಗಿ ಶಿಕ್ಷಣವೆಂದರೆ ಲೋಕವನ್ನು ಮತ್ತು ಅದು ಜ್ಞಾನವೆಂದು ಮುಂದಿಡುವ ಸಂಗತಿಯನ್ನು ವ್ಯಾಖ್ಯಾನಿಸುವ ವಿಶ್ಲೇಷಿಸುವ ತಾತ್ವಿಕರಿಸುವ ಸಾಮರ್ಥ್ಯವನ್ನು ಕೊಡುವುದು; ಆ ಮೂಲಕ ಲೋಕದ ಬಗೆಗಿನ ಜ್ಞಾನವನ್ನು ತಾವೇ ಕಟ್ಟಿಕೊಳ್ಳುವಂತೆ ಮಾಡುವುದು. ಬಸವಣ್ಣ, ಅಂಬೇಡ್ಕರ್, ಗಾಂಧಿ ತಮ್ಮ ಲೋಕಜ್ಞಾನವನ್ನು  ಸೃಜಿಸಿಕೊಂಡದ್ದು ಹೀಗೆಯೇ ಅಲ್ಲವೇ? ಬದುಕಿನ ಬಗೆಗಿನ ಸಹಜ ಕುತೂಹಲ, ಗುಮಾನಿ,  ಪ್ರಶ್ನಿಸುವಿಕೆ ಮತ್ತು ಪರ್ಯಾಯ ಆಲೋಚನಾ ಕ್ರಮಗಳು ಸಂಶೋಧನಾ ಹಂತದಲ್ಲಿ ಮಾತ್ರ  ಹುಟ್ಟಬೇಕಾದ ಮತ್ತು ಚರ್ಚಿಸಬೇಕಾದ ಸಂಗತಿಗಳೆಂದುಕೊಳ್ಳದೆ, ಇದಕ್ಕೆ ಪೂರಕವಾದ ಪಠ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪದವಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಿದೆ.  ಯಾಕೆಂದರೆ, ಇಂದು ಮಾಹಿತಿ ಮತ್ತು ಜ್ಞಾನದ ನಡುವಿನ ವ್ಯತ್ಯಾಸವನ್ನು ಕೂಡ ಗುರುತಿಸದಂತಹ ಸ್ಥಿತಿಯಲ್ಲಿ ಯುವಜನಾಂಗವಿದೆ.

‘ಅರಿವಿಂಗೆ ಬಂಧವುಂಟಲ್ಲದೆ ಅರುಹಿಸಿಕೊಂಬವಂಗುಂಟೆ ಬಂಧ? ಅರಿದಿಹೆನೆಂಬ ಭ್ರಮೆ, ಅರುಹಿಸಿಕೊಂಡಿಹೆನೆಂಬ ಕುರುಹು, ಉಭಯನಾಸ್ತಿಯಾಗಿಯಲ್ಲದೆ ಭಾವಶುದ್ಧವಿಲ್ಲ’. ವಚನಕಾರ ಮಾದಾರ ದೂಳಯ್ಯನ ಈ  ಮಾತುಗಳಲ್ಲಿರುವ ಎಚ್ಚರ ನಮಗಿಂದು ಅಗತ್ಯವೆನಿಸುತ್ತದೆ. ನೀಡಿದ ಜ್ಞಾನದ ಬಗ್ಗೆ ಶಿಕ್ಷಕ ಮತ್ತು  ಗಳಿಸಿದ ಜ್ಞಾನದ ಬಗ್ಗೆ ವಿದ್ಯಾರ್ಥಿ ಇಬ್ಬರೂ ಅದು ಆತ್ಯಂತಿಕವೆಂದು ಭಾವಿಸದೆ, ಜ್ಞಾನವೆಂಬುದು ಒಂದು ಮುಕ್ತ ಅಂತ್ಯವುಳ್ಳ ಅರಿವಿನ ಪ್ರವಾಹವೆಂಬುದನ್ನು ಅರಿತು, ನಿರಂತರವಾಗಿ ಕ್ರಿಯಾಶೀಲರಾಗಿದ್ದಾಗ ಹೊಸ ಸಂಶೋಧಕರು, ಚಿಂತಕರು, ತತ್ವಜ್ಞಾನಿಗಳು, ವಿಜ್ಞಾನಿಗಳು  ಹುಟ್ಟಬಲ್ಲರು.

  • ಡಾ. ಸಿ.ಬಿ. ಐನಳ್ಳಿ
ಡಾ. ಸಿ. ಬಿ. ಐನಳ್ಳಿ

(ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.)


ಇದನ್ನೂ ಓದಿ: ವೈಚಾರಿಕತೆಯನ್ನು ಕಡೆಗಣಿಸಿ ಅಬ್ಬರಿಸುವ ಜನಪ್ರಿಯ ನಟರ ಸಿನಿಮಾದಾಚೆಗಿನ ವಿಚಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...