Homeಮುಖಪುಟತೇಜ್ ಬಹದೂರ್ ಯಾದವ್ ಮೋದಿಯ ಕಟ್ಟಾ ಅಭಿಮಾನಿಯಾಗಿದ್ದರು ಗೊತ್ತೇ?

ತೇಜ್ ಬಹದೂರ್ ಯಾದವ್ ಮೋದಿಯ ಕಟ್ಟಾ ಅಭಿಮಾನಿಯಾಗಿದ್ದರು ಗೊತ್ತೇ?

- Advertisement -
- Advertisement -

ನಾನುಗೌರಿ ಡೆಸ್ಕ್

ವಿಶಿಷ್ಟವಾದ ಸ್ವತಂತ್ರ ಮಾಧ್ಯಮ ಸಂಸ್ಥೆಯನ್ನು ಕಟ್ಟಲು ಶ್ರಮಿಸುತ್ತಿರುವ ಹಿರಿಯ ಪತ್ರಕರ್ತ ವಿನೋದ್ ಚಂದ್ ಅವರು ಸ್ವಲ್ಪ ‘ತನಿಖೆ’ ನಡೆಸಿ ತೇಜ್ ಬಹಾದೂರ್ ಯಾದವ್‍ರ ಹಿನ್ನೆಲೆಯನ್ನು ಪತ್ತೆ ಹಚ್ಚಿದ್ದಾರೆ. ಅವರು ಫೇಸ್‍ಬುಕ್‍ನಲ್ಲಿ ಹಾಕಿರುವ ಪೋಸ್ಟ್‍ನ ಸಾರಾಂಶ ಕೆಳಗಿದೆ. ಎಲ್ಲರೂ ಅಚ್ಚರಿ ಪಡುವಂತಹ ಹಲವು ಸಂಗತಿಗಳು ಇದರಲ್ಲಿವೆ.

ವಿನೋದ್ ಚಂದ್

‘ತೇಜ್ ಬಹಾದೂರ್ ಯಾದವ್ ಮೋದಿಯವರ ತೀವ್ರ ಬೆಂಬಲಿಗನಾಗಿದ್ದರು. ಅವರ ಫೇಸ್‍ಬುಕ್ ಟೈಂಲೈನ್‍ನಲ್ಲಿ ಮೋದಿಯವರಿಗೆ ಬಹಿರಂಗ ಬೆಂಬಲ ಸೂಚಿಸುವ ಮತ್ತು ದ್ವೇಷಪೂರಿತ ಪೋಸ್ಟ್‍ಗಳು ತುಂಬಿ ಹೋಗಿವೆ. ಬೇರಾವುದೇ ಮೋದಿ ಬೆಂಬಲಿಗನಂತೆ ಈತನೂ, ಮೋದಿ ದೊಡ್ಡ ಬದಲಾವಣೆ ತರುತ್ತಾರೆಂದು ಬಲವಾಗಿ ನಂಬಿದ್ದರು.

ಇದೇ ಭರವಸೆಯೊಂದಿಗೇನೇ, ತನಗೂ ಸಮಸ್ಯೆಯಾಗಿದ್ದ, ತನ್ನ ಸೈನಿಕ ಪಡೆಯಲ್ಲಿದ್ದ ಭ್ರಷ್ಟಾಚಾರವನ್ನು ಹೊರಗೆಳೆಯಲು ನಿರ್ಧರಿಸಿದ್ದರು. ಅದರ ಭಾಗವಾಗಿಯೇ ಈಗ ಪ್ರಸಿದ್ಧವಾಗಿರುವ ವಿಡಿಯೋವನ್ನು ಶೂಟ್ ಮಾಡಿದ್ದರು. ಅದರಲ್ಲಿ ಆತನಂತೆಯೇ ಕೊರೆಯುವ ಛಳಿಯಲ್ಲಿ ಗಡಿ ಕಾಯುತ್ತಿದ್ದ ಸೈನಿಕರಿಗೆ ಕೊಳೆತ ಆಹಾರವನ್ನು ನೀಡುವುದರ ಬಗ್ಗೆ ಯಾದವ್ ಮಾತಾಡಿದ್ದರು.

ಸಾಮಾಜಿಕ ಜಾಲತಾಣಗಳನ್ನು ಗಮನಿಸುವ ಮತ್ತು ಭ್ರಷ್ಟಾಚಾರ ವಿರೋಧಿ ನಾಯಕ, ದೇವದೂತ ಮೋದಿಯವರು ತನ್ನ ವಿಡಿಯೋವನ್ನು ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಮತ್ತು ವ್ಯವಸ್ಥೆಯನ್ನು ಬದಲಿಸುತ್ತಾರೆಂದು ಆತನಿಗೆ ಅಪಾರವಾದ ವಿಶ್ವಾಸವಿತ್ತು.
ಆದರೆ, ಅಂಥದ್ದೇನೂ ಆಗಲಿಲ್ಲ. ಅದೇ ವ್ಯವಸ್ಥೆಯೇ ಆತನ ಮೇಲೆ ದಾಳಿ ಮಾಡಿತು, ತೇಜ್ ಬಹಾದೂರ್‍ರನ್ನು ಹುಚ್ಚನೆಂದು ಕರೆದು, ಕೆಲಸದಿಂದ ಹೊರದಬ್ಬಿತು. ಸೈನಿಕರಿಗಾಗಿ ಕಣ್ಣೀರು ಸುರಿಸುವ ಮತ್ತು ಭ್ರಷ್ಟಾಚಾರವನ್ನು ಬುಡಸಮೇತ ನಿರ್ಮೂಲನೆ ಮಾಡಲು ಬಯಸುವ ದೇವದೂತ ಮೋದಿಯವರು ಆತನ ಸಹಾಯಕ್ಕೆ ಬರಲಿಲ್ಲ.

ಅದೇ ಸಂದರ್ಭದಲ್ಲಿ ತೇಜ್ ಬಹಾದೂರ್ ಯಾದವ್‍ರು ಮಾಡಿದ್ದನ್ನು ಸೈನ್ಯದಲ್ಲಿ ಸಹಿಸುವುದು ಸಾಧ್ಯವೇ ಇರಲಿಲ್ಲ. ಸೈನಿಕ ಸೈನಿಕನಾಗಿರಬೇಕಷ್ಟೇ, ಬರುವ ತೊಂದರೆ ಅನುಭವಿಸಬೇಕು, ಇಲ್ಲವೇ ಹೊರನಡೆಯಬೇಕು. ಆತ ಹೊರಜಗತ್ತಿಗೆ ದೂರುವಂತಿಲ್ಲ. ಅಲ್ಲಿನ ನಿಯಮಗಳು ಏನು ಹೇಳುತ್ತವೋ ಅದಕ್ಕೆ ಬದ್ಧನಾಗಿರಬೇಕು.

ಆದರೆ, ತೇಜ್ ಬಹಾದೂರ್‍ರ ಭಿನ್ನಮತದ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಆತನಿಗೆ, ಬಹುಶಃ, ಯಾವ ನಿವೃತ್ತಿಯ ಸೌಲಭ್ಯಗಳನ್ನೂ ನೀಡದೇ ಮನೆಗೆ ಕಳಿಸಲಾಯಿತು. ಈಗ ಆತ ಸಾಮಾನ್ಯ ನಾಗರಿಕ. ಯಾವುದನ್ನು ಸೈನಿಕನಾಗಿ ಮಾಡಲಾಗಲಿಲ್ಲವೋ, ಅದನ್ನೀಗ ಮಾಡುವುದು ಸುಲಭವಾಗಿದೆ. ತಾನು ಯಾರ ಮೇಲೆ ಭರವಸೆಯಿಟ್ಟಿದ್ದರೋ, ಆ ವ್ಯಕ್ತಿಯೆದುರಿಗೇ ಸೆಣಿಸಿ ಕೊಡಬೇಕಾದ ಸಂದೇಶವನ್ನು ಕೊಡಲು ಹೊರಟಿದ್ದಾರೆ.

ಹಾಗೆ ನೋಡಿದರೆ, ಮೋದಿಯವರಿಗೆ ತೇಜ್ ಬಹಾದೂರ್ ಅವರು ಮಾಡಿದ ವಿಡಿಯೋ ಒಂದು ಸುವರ್ಣ ಅವಕಾಶವಾಗಿತ್ತು. ಅದರ ಮೂಲಕ ಬಿಎಸ್‍ಎಫ್‍ನಲ್ಲಿನ ಭ್ರಷ್ಟಾಚಾರ ಹಾಗೂ ಸೈನಿಕರ ದುಸ್ಥಿತಿಯನ್ನು ಸರಿಪಡಿಸಬಹುದಿತ್ತು. ಸೈನ್ಯ ಮತ್ತು ಅರೆಸೇನಾಪಡೆಗಳಲ್ಲಿನ ಎಲ್ಲರಿಗೂ ಕಠಿಣ ಸಂದೇಶ ರವಾನಿಸುವ ಸಾಧ್ಯತೆಯಿತ್ತು. ನನಗೆ ಕೆಲವೊಮ್ಮೆ ಆಶ್ಚರ್ಯವಾಗುವುದೆಂದರೆ, ತೇಜ್ ಬಹಾದೂರ್‍ರ ಪರ ನಿಲ್ಲದಿರಲು ಮೋದಿಯವರಿಗೆ ಸಲಹೆ ನೀಡಿದವರು ಯಾರು ಎಂದು. ಏಕೆಂದರೆ, ಆ ಸೈನಿಕನ ದೂರನ್ನು ಆಲಿಸಿ ಕ್ರಮಗಳನ್ನು ತೆಗೆದುಕೊಂಡು ತಪ್ಪಿತಸ್ಥರನ್ನು ಶಿಕ್ಷಿಸಿದ್ದರೆ ಮೋದಿಯವರ ಕೀರ್ತಿಪತಾಕೆ ಹಾರುತ್ತಿತ್ತು.

ಹಾಗಾಗಿಯೇ ತೇಜ್ ಬಹಾದೂರ್ ಯಾದವ್, ಸೈನ್ಯದಲ್ಲಿನ ಭ್ರಷ್ಟಾಚಾರವನ್ನು ಸರಿಪಡಿಸುವಲ್ಲಿ ಮತ್ತು ಬದುಕಿನ ಎಲ್ಲಾ ಆಯಾಮಗಳಲ್ಲೂ ಮೋದಿಯವರ ವೈಫಲ್ಯದ ಪ್ರತೀಕವಾಗಿದ್ದಾರೆ. ಮೋದಿಯವರ ವ್ಯಕ್ತಿತ್ವದಲ್ಲಿನ ದ್ವಂದ್ವವನ್ನು ಬಯಲುಗೊಳಿಸಲು ಬಯಸುವ ಎಲ್ಲರೂ ತೇಜ್ ಯಾದವ್‍ರನ್ನು ಬೆಂಬಲಿಸಬೇಕು’ ಎಂದು ಹೇಳುವ ವಿನೋದ್ ಚಂದ್, ಅವರ ಪ್ರಚಾರಕ್ಕಾಗಿ ಮೇ 10ರಿಂದ 17ರವರೆಗೆ ವಾರಣಾಸಿಗೆ ಹೋಗುತ್ತಿದ್ದಾರೆ. ತೇಜ್ ಬಹಾದೂರ್‍ರ ಸಿದ್ಧಾಂತವನ್ನಾಗಲೀ, ಆತನ ವಿಧಾನವನ್ನಾಗಲೀ ತಾನು ಒಪ್ಪುವುದಿಲ್ಲವಾದರೂ ದೇಶದ ಬಹುದೊಡ್ಡ ಸಮಸ್ಯೆಯನ್ನು ಎದುರಿಸುವುದು ಬಹಳ ಮುಖ್ಯ ಎನ್ನುತ್ತಾರೆ. ಜೊತೆಗೆ ಇದನ್ನು ಒಬ್ಬ ಅಸಲೀ ಸೈನಿಕ ಮತ್ತು ನಕಲಿ ರಾಷ್ಟ್ರವಾದಿಯ ನಡುವಿನ ನೇರ ಸಮರವನ್ನಾಗಿಸಲು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳಬೇಕೆಂದೂ ಅವರ ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...