Homeಮುಖಪುಟತೇಜಸ್ವಿನಿಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದು ‘ಡಿಎನ್ಎ ಪೊಲಿಟಿಕ್ಸ್’ಕಾರಣಕ್ಕಲ್ಲ!  ಅಸಲೀ ಕಾರಣ ಕೇಳಿದ್ರೆ ಶಾಕ್ ಆಗ್ತೀರ....!! 

ತೇಜಸ್ವಿನಿಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದು ‘ಡಿಎನ್ಎ ಪೊಲಿಟಿಕ್ಸ್’ಕಾರಣಕ್ಕಲ್ಲ!  ಅಸಲೀ ಕಾರಣ ಕೇಳಿದ್ರೆ ಶಾಕ್ ಆಗ್ತೀರ….!! 

- Advertisement -
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಬೆಂಕಿ ಇನ್ನೂ ಆರಿಲ್ಲ. ಸತತ ಆರು ಬಾರಿ ಸಂಸದರಾಗಿದ್ದ ಅನಂತಕುಮಾರ್ ಜಾಗಕ್ಕೆ ಅವರ ಹೆಂಡತಿ ತೇಜಸ್ವಿನಿಯವರಿಗೆ ಬಿಜೆಪಿ ಟಿಕೇಟ್ ನೀಡಲಿದ್ದು, ಈ ಕ್ಷೇತ್ರ ಬಿಜೆಪಿ ಪಾಲಿಗೆ ಕೇಕ್ವಾಕ್ ಆಗಲಿದೆ ಅಂತಲೇ ಎಲ್ಲರೂ ಲೆಕ್ಕ ಹಾಕಿದ್ದರು. ಆದರೆ ಆಗಿದ್ದೇ ಬೇರೆ. ಹಾಲಿ ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯರ ಅಣ್ಣನ ಮಗ ತೇಜಸ್ವಿ ಸೂರ್ಯ ಎಂಬ ಹೊಸ ಮುಖವನ್ನು ಕಣಕ್ಕಿಳಿಸಿದ ಬಿಜೆಪಿ, ತನ್ನ ಕಾರ್ಯಕರ್ತರಿಗೇ ದೊಡ್ಡ ಶಾಕ್ ಕೊಟ್ಟಿತ್ತು. ರಾಜಕಾರಣದಲ್ಲಿ ಆಗಾಗ ಅನಂತ್ಕುಮಾರರ ಕಾಲೆಳೆಯುತ್ತಾ, ಹೆಚ್ಚುಬಾರಿ ಅವರಿಂದಲೇ ಕಾಲೆಳೆಸಿಕೊಂಡು ನರಳಾಡುತ್ತಾ ಬಂದಿದ್ದ ಸ್ವತಃ ಯಡ್ಯೂರಪ್ಪನವರೇ ಪಕ್ಷದ ನಿರ್ಧಾರ ಕಂಡು ಕಕ್ಕಾಬಿಕ್ಕಿಯಾಗಿದ್ದು ಸುಳ್ಳಲ್ಲ. ಯಾಕೆಂದ್ರೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅವರು ಶಿಫಾರಸ್ಸು ಮಾಡಿದ್ದು ಕೂಡಾ ತೇಜಸ್ವಿನಿಯವರ ಹೆಸರನ್ನೆ.
ಹಾಗೆ ನೋಡಿದರೆ ಕ್ಷೇತ್ರದಲ್ಲಿ ಅನಂತ್ಕುಮಾರರಿಗಿಂತಲೂ ಅವರ ಪತ್ನಿ ತೇಜಸ್ವಿನಿಯವರೇ ಒಳ್ಳೆ ಹೆಸರು ಸಂಪಾದಿಸಿದ್ದರು. ತನ್ನ ‘ಅದಮ್ಯ-ಚೇತನ’ ಟ್ರಸ್ಟ್ ಮೂಲಕ ಜನಮನಸೆಳೆಯುವ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಅನಂತ್ಕುಮಾರ್ ಅತ್ತ ದಿಲ್ಲಿ ರಾಜಕಾರಣದಲ್ಲಿ ಬ್ಯುಸಿಯಾದಾಗ ಕಾರ್ಯಕರ್ತರ ಮನೆಗಳ ಸಮಾರಂಭಗಳಿಗೆ ಓಡಾಡುತ್ತಾ ಒಳ್ಳೆ ಜನಬೆಂಬಲವನ್ನೂ ಗಳಿಸಿಕೊಂಡಿದ್ದರು. ಅನಂತ್ಕುಮಾರ್ ಎಲೆಕ್ಷನ್ ನಿಂತಾಗಲೆಲ್ಲ ಸ್ಟಾರ್ ಪ್ರಚಾರಕಿಯಂತೆ ಕೆಲಸ ಮಾಡುತ್ತಿದ್ದುದು ಇದೇ ತೇಜಸ್ವಿನಿಯವರು. ತೇಜಸ್ವಿನಿಯವರು ಬಿಜೆಪಿಯ ಕಾರ್ಯಕರ್ತೆಯಾಗಿಯೇ ನಿರಂತರವಾಗಿ ಕೆಲಸ ಮಾಡುತ್ತಿದ್ದವರು. ಅವರಲ್ಲೂ ಸದಸ್ಯತ್ವ ರಸೀತಿ ಇತ್ತು!
ಈ ಸಲ ಈ ಜನಪ್ರಿಯತೆ ಜೊತೆಗೆ ಅನಂತ್ಕುಮಾರ್ ನಿಧನದ ಅನುಕಂಪವೂ ವರ್ಕ್ಔಟ್ ಆಗೋದ್ರಿಂದ ಅವರ ಗೆಲುವು ಸುಲಭ ಎನ್ನುವುದರಲ್ಲಿ ಯಾವ ಅನುಮಾನವೂ ಇರಲಿಲ್ಲ. ಆದರೆ ಪಕ್ಷ ಇಂಥಾ ಅನಾಯಾಸದ ಗೆಲುವನ್ನು ಕೈಚೆಲ್ಲಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಅನನುಭವಿ ತೇಜಸ್ವಿ ಸೂರ್ಯರನ್ನು ಯಾಕೆ ಕಣಕ್ಕಿಳಿಸಿತು? ಇದರ ಹಿಂದೆ ಯಾರ ಚಿತಾವಣೆ ಕೆಲಸ ಮಾಡಿದೆ? ಎಂಬ ಪ್ರಶ್ನೆಗಳು ಕಾಡುತ್ತಲೇ ಇದ್ದವು. ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿದ್ದಾಗಲಿ, ತೇಜಸ್ವಿ ಸೂರ್ಯಗೆ ಟಿಕೆಟ್ ದಕ್ಕಿದ್ದಾಗಲಿ ಬಿಜೆಪಿಯ ಮಲ್ಲೇಶ್ವರಂ ಕಚೇರಿ ಮಟ್ಟದಲ್ಲಲ್ಲ, ಶೇಷಾದ್ರಿಪುರದ ಕೇಶವ ಕೃಪಾದ ಪಡಸಾಲೆಯಲ್ಲಿ ಅನ್ನೋದರ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಅದರಲ್ಲೂ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರತ್ತಲೇ ಅನುಮಾನದ ನೋಟಗಳು ಸರಿದಾಡುತ್ತಿದ್ದವು.
ಮೊನ್ನೆ ಚಾಮರಾಜನಗರದಲ್ಲಿ ನಡೆದ ಬಿಜೆಪಿಯ ಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಸಂತೋಷ್ ಅವರು ಉತ್ತರಿಸಿದ ವೈಖರಿ ನೋಡಿದಾಗ ತೇಜಸ್ವಿನಿಗೆ ಟಿಕೇಟ್ ತಪ್ಪುವಲ್ಲಿ ಅವರ ಪಾತ್ರ ಇರೋದು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಗಿದೆ. ಡಿಎನ್ಎ, ವಂಶವಾಹಿ ಆಧಾರದಲ್ಲಿ ಟಿಕೆಟ್ ಕೊಡಬೇಕು ಅಂದರೆ ಹೇಗೆ? ಹಾಗೆ ಕೊಡುತ್ತಾಹೋದರೆ ಪಕ್ಷದ ಸದಸ್ಯತ್ವದ ರಸೀದಿಗೆ ಬೆಲೆ ಬೇಕಲ್ಲವೇ? ಅನಂತ್ಕುಮಾರ್ ಅವರಿಗೆ ಪಕ್ಷ ಕೊಡಬೇಕಾದ ಗೌರವವನ್ನೆಲ್ಲ ಕೊಟ್ಟಿದೆ, ಕೊಡುತ್ತದೆ. ಆದ್ರೆ ಅದರ ಲಾಭವನ್ನು ಅವರ ಪತ್ನಿ ಪಡೆದುಕೊಳ್ಳಬೇಕು ಅಂದ್ರೆ ಹೇಗೆ? ಅದು ಸರಿಯಲ್ಲ!!!!
ಅಲ್ಲಿಗೆ ತೇಜಸ್ವಿನಿಯವರಿಗೆ ಟಿಕೇಟ್ ತಪ್ಪಲು ಆರೆಸೆಸ್ ಮಟ್ಟದಲ್ಲಿ, ಅದರಲ್ಲೂ ಸಂತೋಷ್ಜಿ ನೇತೃತ್ವದಲ್ಲಿ ಕೈಯಾಡಿಸಿರುವುದು ಖಾತ್ರಿಯಾಯ್ತು. ಅಚ್ಚರಿಯ ಸಂಗತಿಯೆಂದರೆ ದಿವಂಗತ ಅನಂತ್ಕುಮಾರ್ ಹೊರಜಗತ್ತಿಗೆ ಪ್ರಖರ ಕೋಮುವಾದಿಯಂತೆ ಮಾತುಗಳನ್ನಾಡದಿದ್ದರು ಆಂತರ್ಯದಲ್ಲಿ ಆರೆಸ್ಸೆಸ್ನ ಕಟ್ಟರ್ ಅನುಯಾಯಿ. ಆರೆಸೆಸ್ ಹದ್ದುಬಸ್ತನ್ನೂ ಮೀರುವಷ್ಟು ಯಡಿಯೂರಪ್ಪನವರು ಪಕ್ಷದಲ್ಲಿ ಪ್ರಭಾವಿಯಾದಾಗಲೆಲ್ಲ ಸಂಘ ಪರಿವಾರ ಚೆಕ್ಮೇಟ್ ಥರ ಅನಂತ್ಕುಮಾರ್ ಅವರನ್ನು ಬಳಸುತ್ತಿದ್ದುದು ಸುಳ್ಳಲ್ಲ. ಸಿಎಂ ಆಗಬೇಕೆಂಬ ಪ್ರಬಲ ಗುಪ್ತ ಆಸೆಯನ್ನಿಟ್ಟುಕೊಂಡಿದ್ದ ಅನಂತ್ಕುಮಾರ್ ಅವರಿಗೂ ಆರೆಸೆಸ್ನ ಅನಿವಾರ್ಯತೆ ಚೆನ್ನಾಗಿ ಮನದಟ್ಟಾಗಿದ್ದರಿಂದ ಅವರು ಸಂಘಕ್ಕೆ ನಿಷ್ಠರಾಗುತ್ತಲೇ ಬಂದಿದ್ದರು. ಹಾಗಿರುವಾಗ ಆರೆಸೆಸ್ ದಿಢೀರನೆ ಅವರ ಪತ್ನಿ ವಿರುದ್ಧ ನಿಲುವು ತಳೆಯಲು ಏನು ಕಾರಣ? ಅದೂ ಗೆಲುವಿಗಾಗಿ ಕೇಂದ್ರ ಸರ್ಕಾರ ಏದುಸಿರು ಬಿಡುತ್ತಿರುವ ಸಂದರ್ಭದಲ್ಲಿ ಸುಲಭ ತುತ್ತಾಗಬಹುದಾಗಿದ್ದ ಬೆಂಗಳೂರು ದಕ್ಷಿಣವನ್ನು ಕೈಚೆಲ್ಲಿಕೊಂಡು….?
ಇಂಥಾ ಪ್ರಶ್ನೆಗಳು ಭುಗಿಲೇಳಲು ಸಂತೋಷ್‘ಜಿ’ ಕೊಟ್ಟಿರುವ ‘ಡಿಎನ್ಎ ಸ್ಪಷ್ಟನೆ’ಯಲ್ಲಿರುವ ಗೊಂದಲಗಳೇ ಕಾರಣ. ಮೊದಲನೆಯದು, ಬಿಜೆಪಿಯೊಳಗೆ ಕುಟುಂಬ ರಾಜಕಾರಣ ಸಂಸ್ಕೃತಿಯೇ ಇಲ್ಲವೇ? ಈ ಪ್ರಶ್ನೆಗೆ ಇದೇ ಮಾರ್ಚ್ 29ರಂದು ಇಂಗ್ಲಿಷ್ನ ಸ್ಕ್ರೋಲ್.ಇನ್ ಆನ್ಲೈನ್ ಪತ್ರಿಕೆ ನಡೆಸಿದ ಸಮೀಕ್ಷಾ ವರದಿಯೇ ಸ್ಪಷ್ಟ ಉತ್ತರ ನೀಡುತ್ತೆ. 1952ರಲ್ಲಿ ನಡೆದ ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯಿಂದ 2014ರ ಲೋಕಸಭಾ ಎಲೆಕ್ಷನ್ವರೆಗೆ ಆಯ್ಕೆಯಾದ ಎಲ್ಲಾ 4,807 ಎಂಪಿಗಳ ಹಿನ್ನೆಲೆಯನ್ನು ಅಧ್ಯಯನ ನಡೆಸಿರುವ ಆ ವರದಿಯು ಕುಟುಂಬ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲ ಎಂದು ತಿಳಿಸಿದೆ. 1999ರ ಎಲೆಕ್ಷನ್ ನಂತರ ಪಾರ್ಲಿಮೆಂಟಿನಲ್ಲಿ ಕಾಂಗ್ರೆಸ್ನಿಂದ 36 (8%) ಕುಟುಂಬ ರಾಜಕಾರಣದ (ಡಿಎನ್ಎ ಪೊಲಿಟಿಕ್ಸ್) ಎಂಪಿಗಳಿದ್ದರೆ, ಬಿಜೆಪಿಯಿಂದ 31 (6%) ಸಂಸದರಿದ್ದರು. ಆದರೆ 2009ರ ವೇಳೆಗೆ ಕುಟುಂಬ ರಾಜಕಾರಣದಲ್ಲಿ ಕಾಂಗ್ರೆಸನ್ನು ಓವರ್ಟೇಕ್ ಮಾಡಿದ ಬಿಜೆಪಿಯಿಂದ 12% ವಂಶವಾಹಿ ಸಂಸದರು ಪಾರ್ಲಿಮೆಂಟ್ ಪ್ರವೇಶಿಸಿದರೆ, ಕಾಂಗ್ರೆಸ್ನ ವಂಶವಾಹಿ ಪೊಲಿಟಿಕ್ಸ್ ಇದಕ್ಕಿಂತಲೂ 1% ಕಮ್ಮಿ, ಅಂದರೆ 11% ಇತ್ತು! ಹೀಗೆ ಬಿಜೆಪಿಯೊಳಗೂ ಕುಟುಂಬ ರಾಜಕಾರಣ ಗಡದ್ದಾಗಿ ಬೆಳೆಯುತ್ತಿದೆ.
ಈಗ ಎರಡನೇ ಪ್ರಶ್ನೆ ಬರೋಣ, ಹಾಗಾದರೆ ಬಿಜೆಪಿ ವಂಶವಾಹಿ ಆಧಾರದಲ್ಲಿ ಈ ಚುನಾವಣೆಯಲ್ಲಿ ಯಾರಿಗೂ ಟಿಕೇಟ್ ಕೊಟ್ಟಿಲ್ಲವೇ? ಮನೇಕಾ ಗಾಂಧಿ ಮತ್ತು ವರುಣ್ ಗಾಂಧಿ, ಈ ತಾಯಿ ಮಗ ಇಬ್ಬರಿಗೂ ಟಿಕೇಟ್ ಕೊಟ್ಟಿರುವಂತ ದೂರದ ಉದಾಹರಣೆಗಳನ್ನು ಬಿಟ್ಟುಹಾಕಿ ಕರ್ನಾಟಕದ ವಿಚಾರಕ್ಕೇ ಬರೋಣ. ಸ್ವತಃ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ತಮ್ಮ ಮಗ ರಾಘವೇಂದ್ರನಿಗೆ ಟಿಕೇಟ್ ತಂದಿಲ್ಲವೇ, ಹಾವೇರಿಯಿಂದ ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ಶಿವಕುಮಾರ್ ಉದಾಸಿ ಕುಟುಂಬ ರಾಜಕಾರಣದ ಕುರುಹಲ್ಲವೇ, ಬಿಜೆಪಿ ನಾಯಕ ಅಣ್ಣಾಸಾಹೇಬ ಜೊಲ್ಲೆ ಹೆಂಡತಿ ಶಶಿಕಲಾ ಜೊಲ್ಲೆಯವರಿಗೆ ಬೆಳಗಾವಿಯಿಂದ ಟಿಕೇಟ್ ಸಿಕ್ಕಿಲ್ಲವೇ, ಜಿ.ಎಂ.ಮಲ್ಲಿಕಾರ್ಜುನಪ್ಪನವರ ಮಗ ಜಿ.ಎಂ.ಸಿದ್ದೇಶ್ವರ್ ಸತತ ಮೂರನೇ ಬಾರಿಗೆ ದಾವಣಗೆರೆಯಿಂದ ಬಿಜೆಪಿ ಹುರಿಯಾಳಾಗಿರೋದು ವಂಶವಾಹಿ ರಾಜಕಾರಣವಲ್ಲವೇ? ಹಾಗಿದ್ದರೆ, ತೇಜಸ್ವಿನಿಯವರಿಗೆ ಟಿಕೇಟ್ ತಪ್ಪಿಸಲು ಮಾತ್ರ ಯಾಕೆ ವಂಶವಾಹಿ ನೆಪವಾಯ್ತು!
ಇನ್ನು ಗಂಭೀರ ಎನಿಸುವ ಮೂರನೇ ಪ್ರಶ್ನೆ. ಸಂತೋಷ್ ಅವರು ಡಿಎನ್ಎ, ವಂಶವಾಹಿ ಮಾತನಾಡಿ ತೇಜಸ್ವಿನಿಯವರಿಗೆ ಟಿಕೇಟ್ ತಪ್ಪಿಸಿ ಬಿಜೆಪಿ ಅಭ್ಯರ್ಥಿಯಾಗಿಸಿರೋದಾದದರು ಯಾರನ್ನು? ಬಸವಗುಡಿಯ ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯರ ಅಣ್ಣನ ಮಗ ತೇಜಸ್ವಿ ಸೂರ್ಯ ಅವರನ್ನು. ಅಂದರೆ ಚಿಕ್ಕಪ್ಪ ಶಾಸಕ, ಮಗ ಸಂಸದ ಅಭ್ಯರ್ಥಿ! ಇದು ಕುಟುಂಬ ರಾಜಕಾರಣವಲ್ಲವೇ? ತೇಜಸ್ವಿ ಸೂರ್ಯಗೆ ಟಿಕೇಟ್ ಕೊಡಲು ಡಿಎನ್ಎ ಪೊಲಿಟಿಕ್ಸ್ ಅಡ್ಡಿ ಬರಲಿಲ್ಲವೇ?
ಹಾಗಾದರೆ ಸಂತೋಷ್ ಅವರು ಕೊಟ್ಟಿರುವ ಡಿಎನ್ಎ ಕಾರಣ ಕೇವಲ ನೆಪ ಎಂಬುದು ಇಲ್ಲಿ ಖಾತ್ರಿಯಾಯ್ತು. ಅಂದರೆ ನಿಜವಾದ ಕಾರಣವೇನು? ಆರೆಸೆಸ್ನ ಹತ್ತಿರದ ಮೂಲಗಳು ಹೇಳುವಂತೆ ತೇಜಸ್ವಿನಿಯವರಿಗೆ ಟಿಕೇಟ್ ತಪ್ಪಲು ಮುಖ್ಯ ಕಾರಣ ಸಂಘ ಪರಿವಾರದ ಮೌಢ್ಯ ತುಂಬಿದ ಮೂಲಭೂತವಾದವಂತೆ. ಮೊದಲಿನಿಂದಲೂ ಆರೆಸೆಸ್ಗೆ ಹೆಣ್ಣುಮಕ್ಕಳ ಬಗ್ಗೆ ವಿಪರೀತ ತಾತ್ಸಾರ. ಹೆಂಗಸರು ನಾಲ್ಕು ಗೋಡೆಗಳ ಮಧ್ಯೆ ಮನೆಕೆಲಸ ಮಾಡುವುದಕ್ಕಷ್ಟೇ ಸೀಮಿತ, ಆಕೆ ಸ್ವತಂತ್ರಕ್ಕೆ ಅರ್ಹಳಲ್ಲ, ಗಂಡಸಿನ ಅಧೀನದಲ್ಲೇ ಇರಬೇಕು, ಶಿಕ್ಷಣ-ಸಮಾನತೆ ಹೆಣ್ಣಿಗೆ ನಿಷಿದ್ಧ ಎಂಬ ಮನಸ್ಥಿತಿಯೇ ಸಂಘ ಪರಿವಾರದ ಸಿದ್ಧಾಂತ. ಅದರಲ್ಲೂ ವಿಧವೆಯೆಂದರೆ ವಿಪರೀತ ಅಮಂಗಳಕರ ಎನ್ನುವ ಮೌಢ್ಯ ಈಗಲೂ ಮೂಲಭೂತವಾದಿ ಮನಸ್ಸುಗಳಲ್ಲಿವೆ. ಅಂತದ್ದೇ ಮನಸ್ಥಿತಿಗಳ ಲಾಭ ಪಡೆದು, ಆ ಕಾರಣಗಳನ್ನೇ ಮುಂದೆ ಮಾಡಿ ತೇಜಸ್ವಿನಿಯವರಿಗೆ ಟಿಕೇಟ್ ತಪ್ಪಿಸಲಾಗಿದೆಯಂತೆ. https://www.indiatoday.in/india/north/story/rss-mohan-bhagwat-at-it-again-says-women-should-be-just-housewives-and-husbands-should-be-the-breadwinners-150908-2013-01-06
ಇಲ್ಲಿಯೇ ಇನ್ನೊಂದು ಉದಾಹರಣೆಯನ್ನೂ ಕೊಡಬೇಕು. 2010ರಲ್ಲಿ ಬಿಜೆಪಿ ಸರ್ಕಾರವಿದ್ದಾಗಲೂ ಕಲಬುರ್ಗಿ ಗ್ರಾಮೀಣದಿಂದ ಬಿಜೆಪಿ ಶಾಸಕರಾಗಿದ್ದ ಚಂದ್ರಶೇಖರ ಪಾಟೀಲ್ ರೇವೂರ್ ನಿಧನರಾದರು. ಬಿಜೆಪಿಯು ಆಪರೇಷನ್ ಕಮಲ ಮಾಡುತ್ತಾ, ಒಬ್ಬೊಬ್ಬ ಎಂಎಲ್ಎಯನ್ನು ಹಿಡಿದು ರಾಜೀನಾಮೆ ಕೊಡಿಸುವ ಪರಿಸ್ಥಿತಿಯಲ್ಲಿತ್ತು. ಏಕೆಂದರೆ ಅತ್ಯಂತ ಸರಳ ಬಹುಮತ ಹೊಂದಿದ್ದು, ಹೆಚ್ಚು ಕಡಿಮೆ ಆದರೆ ಸರ್ಕಾರ ಬಿದ್ದು ಹೋಗುತ್ತಿತ್ತು. ಆಗ, ಆ ಕ್ಷೇತ್ರವನ್ನು ಉಳಿಸಿಕೊಳ್ಳುವ ಅಗತ್ಯವಿದ್ದಾಗಲೂ ಅವರ ಪತ್ನಿಗೆ ಅಲ್ಲಿ ಟಿಕೆಟ್ ನಿರಾಕರಿಸಲಾಯಿತು. ಆಗ ಡಿಎನ್ಎ ವಿಚಾರವೇನೂ ಹೇಳಲಿಲ್ಲ.
ರೇವೂರ್ ಅವರ ಪತ್ರಿ ಅರುಣಾ ಪಾಟೀಲ್ರಿಗೆ ಜೆಡಿಎಸ್ ಟಿಕೆಟ್ ಕೊಟ್ಟು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡಿತು. ಆಶ್ಚರ್ಯವೆಂದರೆ, ಆ ಅವಧಿ ಮುಗಿದ ನಂತರ ಅವರ ಮಗ ದತ್ತಾತ್ತೇಯ ಪಾಟೀಲ ರೇವೂರ್ಗೆ ಟಿಕೆಟ್ ಕೊಟ್ಟು ಮತ್ತೆ ಬಿಜೆಪಿಗೆ ಕರೆಸಿಕೊಂಡರು. ಆಗ ಡಿಎನ್ಎ ಸಮಸ್ಯೆ ಏನೂ ಆಗಲಿಲ್ಲ. ಬಹುಶಃ ಗಂಡು ಡಿಎನ್ಎ ಬೇಕೆಂದು ಕಾಣುತ್ತದೆ. ಅನಂತಕುಮಾರ್-ತೇಜಸ್ವಿನಿ ದಂಪತಿಗಳಿಗೆ ಗಂಡು ಮಕ್ಕಳಿಲ್ಲ.
ಹಾಗೆಂದು ಗಂಡ ತೀರಿಕೊಂಡ ಮಹಿಳೆಯರಿಗೆ ಬಿಜೆಪಿ ಟಿಕೆಟ್ ಕೊಟ್ಟೇ ಇಲ್ಲವೆಂದಲ್ಲ. ಸತ್ತ ಕೂಡಲೇ ಸೂತಕವಿರುತ್ತದೆಂದು ಯೋಚಿಸುವಷ್ಟು ಮೌಢ್ಯದಲ್ಲಿ ಅವರಿದ್ದಾರೆಂದೂ ಹೇಳಲಾಗದು. ಎಲ್ಲವೂ ಅನುಕೂಲಸಿಂಧು ರಾಜಕಾರಣ. ಪಕ್ಷದ ಮೇಲೆ ಹಿಡಿತ ಸಾಧಿಸಲು ಹೊರಟಿರುವ ಸಂತೋಷ್ಗೆ ತೇಜಸ್ವಿನಿಯವರು ಬೇಡ, ತೇಜಸ್ವಿ ಬೇಕು ಎನಿಸಿದೆ. ಅವರದೇ ಹಿತಾಸಕ್ತಿಗಾಗಿ. ಅಷ್ಟನ್ನು ಹೇಳಿ ಸುಮ್ಮನಿದ್ದರೆ ಆಗುತ್ತಿತ್ತು. ಆದರೆ ಡಿಎನ್ಎ, ವಂಶವಾಹಿ ಇತ್ಯಾದಿ ಮಾತುಗಳನ್ನು ಆಡಿ ಮೊದಲೇ ನೊಂದಿರುವ ತೇಜಸ್ವಿನಿಯವರನ್ನು ನೋಯಿಸುವ ಕೆಲಸ ಮಾಡುವ ಅಗತ್ಯವಿರಲಿಲ್ಲ.
ಯಡಿಯೂರಪ್ಪನವರನ್ನೂ ಓವರ್ಟೇಕ್ ಮಾಡಿ ರಾಜಕಾರಣದಲ್ಲಿ ಮಿಂಚುವ ಮಹತ್ವಾಕಾಂಕ್ಷೆ ಹೊಂದಿರುವ ಸಂತೋಷ್‘ಜಿ’ ಈ ನೆಪವನ್ನೂ ಸಂಘ ಪರಿವಾರವನ್ನು ಒಪ್ಪಿಸಲಷ್ಟೇ ಬಳಸಿಕೊಂಡಿರುವ ಸಾಧ್ಯತೆಯೂ ಉಂಟು. ಯಾಕೆಂದರೆ ಕ್ರಮೇಣ ಪಕ್ಷದೊಳಗೆ ತನ್ನ ವಿರೋಧಿ ಬಲವನ್ನು ಕುಗ್ಗಿಸಿ, ಹಿಂಬಾಲಕರ ಸಾಮಥ್ರ್ಯ ಹಿಗ್ಗಿಸಿಕೊಂಡು ಬಲಾಢ್ಯರಾಗಲು ಯಾವ್ಯಾವ ಕ್ಷೇತ್ರಕ್ಕೆ ಏನೇನು ಸಬೂಬುಗಳು ಬೇಕೊ ಅವುಗಳನ್ನು ಚಲಾವಣೆಗೆ ತರುತ್ತಿದ್ದಾರೆ ಎನ್ನಲಾಗುತ್ತಿದೆ. ಅದೇನಾದರು ಆಗಲಿ ಇಪ್ಪತ್ತೊಂದನೆಯ ಈ ಶತಮಾನದಲ್ಲು ತನ್ನದು ವಿಶ್ವದ ಅತಿದೊಡ್ಡ ಪೊಲಿಟಿಕಲ್ ಪಾರ್ಟಿ ಎಂದೇಳಿಕೊಳ್ಳುವ ಪಕ್ಷವೊಂದು ಒಬ್ಬ ಹೆಣ್ಮಗಳಿಗೆ ಟಿಕೇಟ್ ತಪ್ಪಿಸಲು ವೈಧವ್ಯದ ಮೌಢ್ಯ ಹಿಡಿದುಕೊಂಡು ತರ್ಕಿಸುತ್ತದೆಂಬ ಸುದ್ದಿ ನಿಜಕ್ಕೂ ಈ ಪೀಳಿಗೆಗೆ ಮಾಡಿದ ಅವಮಾನವೇ ಸರಿ!
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...