Homeಮುಖಪುಟಕಾಳೇಶ್ವರಂ ಏತ ನೀರಾವರಿ ಯೋಜನೆಯಲ್ಲಿ ಲೋಪ: ನ್ಯಾಯಾಂಗ ತನಿಖೆಗೆ ಮುಂದಾದ ಸರ್ಕಾರ

ಕಾಳೇಶ್ವರಂ ಏತ ನೀರಾವರಿ ಯೋಜನೆಯಲ್ಲಿ ಲೋಪ: ನ್ಯಾಯಾಂಗ ತನಿಖೆಗೆ ಮುಂದಾದ ಸರ್ಕಾರ

- Advertisement -
- Advertisement -

ಗೋದಾವರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾಳೇಶ್ವರಂ ಏತ ನೀರಾವರಿ ಯೋಜನೆಯ ನಿರ್ಮಾಣ ಮತ್ತು ಕಾರ್ಯಾಚರಣೆಯಲ್ಲಿ ಇಂಜಿನಿಯರಿಂಗ್ ಲೋಪ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ನಡೆಸುವುದಾಗಿ ತೆಲಂಗಾಣ ಸರ್ಕಾರ ಶುಕ್ರವಾರ ತಿಳಿಸಿದೆ.

ರಾಜ್ಯದ ನೂತನ ನೀರಾವರಿ ಸಚಿವ ಎನ್.ಉತ್ತಮ್ ಕುಮಾರ್ ರೆಡ್ಡಿ ನೇತೃತ್ವದ ಉನ್ನತ ಇಂಜಿನಿಯರ್‌ಗಳು ಮತ್ತು ಹಿರಿಯ ಅಧಿಕಾರಿಗಳ ತಂಡ ಏತ ನೀರಾವರಿ ಯೋಜನೆಯ ಸ್ಥಳಕ್ಕೆ ಭೇಟಿ ನೀಡಿ, ಬರೋಬ್ಬರಿ ₹1 ಲಕ್ಷ ಕೋಟಿ ವೆಚ್ಚದ ಯೋಜನೆಯ ಬ್ಯಾರೇಜ್‌ಗಳ ಪಿಲ್ಲರ್‌ಗಳ ಮುಳುಗುವಿಕೆಯಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದ ನಂತರ ಈ ಪ್ರಕಟಣೆ ಹೊರಬಿದ್ದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಉತ್ತಮ್ ಕುಮಾರ್ ರೆಡ್ಡಿ, 2019ರಲ್ಲಿ ನಿರ್ಮಿಸಲಾದ ಏತ ನೀರಾವರಿ ಯೋಜನೆಯ ಇಂಜಿನಿಯರಿಂಗ್ ಲೋಪಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

“ಕಾರಣ ಏನೇ ಇರಲಿ, ಮೇಡಿಗಡ್ಡ ಬ್ಯಾರೇಜ್‌ನ ಅಡಿಪಾಯ ಮುಳುಗಿದೆ. ಅಣ್ಣಾರಾಮ್ ಬ್ಯಾರೇಜ್‌ನಲ್ಲಿ ಸೋರಿಕೆಯಾಗ್ತಿದೆ ಮತ್ತು ಬಿರುಕುಗಳು ಕಾಣಿಸಿಕೊಂಡಿವೆ. ಸುಂಡಿಲ್ಲಾ ಬ್ಯಾರೇಜ್ ಹಾನಿಗೊಳಗಾಗಿದೆ. ಇವುಗಳ ವಿಚಾರಣೆ ಮತ್ತು ದುರಸ್ತಿ ಕಾರ್ಯಗಳು ನಡೆಯಲಿವೆ. ಈ ಕಾರಣಕ್ಕೆ ಕೆಲ ಸಮಯ ಏತ ನೀರಾವರಿ ಕಾರ್ಯಾಚರಣೆ ಸ್ಥಗಿತಗೊಳ್ಳಬಹುದು” ಎಂದು ಹೇಳಿದ್ದಾರೆ.

ಕಾಳೇಶ್ವರಂ ಯೋಜನೆಯಿಂದಾಗಿ ತೆಲಂಗಾಣದ ಮೇಲೆ ವರ್ಷಕ್ಕೆ ₹15,000 ಕೋಟಿ ಆರ್ಥಿಕ ಹೊರೆಯಾಗುತ್ತಿದೆ. ನೀರಾವರಿ ಇಲಾಖೆಯಲ್ಲಿ ಈಗಾಗಲೇ ₹10,000 ಕೋಟಿ ಬಿಲ್‌ಗಳು ಬಾಕಿ ಉಳಿದಿವೆ ಎಂದು ಸಚಿವರು ತಿಳಿಸಿದ್ದಾರೆ.

15 ರಿಂದ 20 ರವರೆಗೆ 86 ಪಿಯರ್‌ಗಳಲ್ಲಿ ಆರು ಮುಳುಗಡೆಯಾಗಿವೆ. ಮೇಡಿಗಡ್ಡ ಬ್ಯಾರೇಜ್‌ನ ಆರು, ಏಳು ಮತ್ತು ಎಂಟು ಬ್ಲಾಕ್‌ಗಳಲ್ಲಿ ಗೇಟ್‌ಗಳು ದುರ್ಬಲಗೊಂಡಿವೆ. ಈ ವಿಚಾರ ಕಳೆದ ಅಕ್ಟೋಬರ್ 21 ರಂದು ಬೆಳಕಿಗೆ ಬಂದಿತ್ತು. ನೀರಾವರಿ ಅಧಿಕಾರಿಗಳು ಜಲಾಶಯವನ್ನು ಖಾಲಿ ಮಾಡಲು ಒತ್ತಾಯಿಸಿದ್ದಾರೆ. ಬ್ಯಾರೇಜ್ ಮೇಲೆ ನಿರ್ಮಿಸಿರುವ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಮೇಡಿಗಡ್ಡಾ ಬ್ಯಾರೇಜ್‌ನ ಹಾನಿಗೊಳಗಾದ ಭಾಗಗಳನ್ನು ಪರಿಶೀಲಿಸಲು ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ ರಚಿಸಿದ್ದ ತಾಂತ್ರಿಕ ತಜ್ಞರ ಸಮಿತಿಯು, ಬ್ಯಾರೇಜ್ ಅನ್ನು ಸಂಪೂರ್ಣವಾಗಿ ಪುನಶ್ಚೇತನಗೊಳಿಸದ ಹೊರತು ಪ್ರಸ್ತುತ ಸ್ಥಿತಿಯಲ್ಲಿ ಅದು ‘ಸಂಪೂರ್ಣವಾಗಿ ನಿಷ್ಪ್ರಯೋಜಕ’ ಎಂದು ಘೋಷಿಸಿದೆ ಎಂದು ಉತ್ತಮ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಇಂತಹ ಮಹತ್ವದ ಯೋಜನೆ ನಿರ್ಮಾಣವಾದ ಕೆಲವೇ ವರ್ಷಗಳಲ್ಲಿ ಹಾನಿಗೊಳಗಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಈ ಯೋಜನೆಯಲ್ಲಿನ ಲೋಪದೋಷಗಳ ಕುರಿತು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಸರ್ಕಾರ ನಿರ್ಧರಿಸಿದೆ. ಮುಂದಿನ ಕ್ರಮಕ್ಕಾಗಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ವರದಿ ಸಲ್ಲಿಸಲಾಗುವುದು. ಹಾನಿಗೆ ಹೊಣೆಗಾರರಾದ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಹಿಂದಿನ ಕಾಂಗ್ರೆಸ್ ಸರ್ಕಾರವು, ಆರಂಭದಲ್ಲಿ ಕಾಳೇಶ್ವರಂನ ಮೇಲ್ಭಾಗದ ತುಮ್ಮಿಡಿ ಹಟ್ಟಿ ಗ್ರಾಮದಲ್ಲಿ ಪ್ರಾಣಹಿತ ಚೇವೆಲ್ಲಾ ಯೋಜನೆ ಎಂದು ಹೆಸರಿಸಲಾದ ಯೋಜನೆಯ ನಿರ್ಮಾಣವನ್ನು ಯೋಜಿಸಿತ್ತು. ಆದರೆ ಬಿಆರ್‌ಎಸ್‌ ಸರ್ಕಾರ “ವೈಜ್ಞಾನಿಕ ವಿಧಾನವಿಲ್ಲದೆ ಕಾಳೇಶ್ವರಂಗೆ ಸ್ಥಳವನ್ನು ಬದಲಾಯಿಸುವ ಮೂಲಕ ಅದನ್ನು ಮರುವಿನ್ಯಾಸಗೊಳಿಸಿದೆ” ಎಂದು ಸಚಿವರು ಆರೋಪಿಸಿದ್ದಾರೆ.

ಬಿಆರ್‌ಎಸ್ ಶಾಸಕ ಮತ್ತು ಮಾಜಿ ರಾಜ್ಯ ಸಚಿವ ಕಡಿಯಂ ಶ್ರೀಹರಿ ಅವರು ಮಹಾರಾಷ್ಟ್ರದ ಪ್ರದೇಶಗಳು ಮುಳುಗುವುದನ್ನು ತಡೆಯಲು ಮತ್ತು ಭಾರೀ ಪರಿಹಾರವನ್ನು ಪಾವತಿಸುವುದನ್ನು ತಪ್ಪಿಸಲು ಯೋಜನೆಯನ್ನು ಮರುವಿನ್ಯಾಸಗೊಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಆರ್‌ಎಸ್‌, ಕೇಂದ್ರದಿಂದ 11 ರೀತಿಯ ಅನುಮತಿಗಳನ್ನು ಪಡೆದ ನಂತರವೇ ಬಿಆರ್‌ಎಸ್ ಸರ್ಕಾರವು ಕಾಳೇಶ್ವರಂ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ನ್ಯಾಯಾಂಗ ತನಿಖೆ ಪ್ರಾರಂಭವಾಗುವ ಮೊದಲೇ ಕಾಂಗ್ರೆಸ್ ಸರ್ಕಾರದ ಸಚಿವರು ತೀರ್ಪು ನೀಡುತ್ತಿರುವುದು ಆಶ್ಚರ್ಯಕರವಾಗಿದೆ ಎಂದಿದೆ.

ಕಾಳೇಶ್ವರಂ ಏತ ನೀರಾವರಿ ಯೋಜನೆ ತೆಲಂಗಾಣದ ಈ ಹಿಂದಿನ ಬಿಆರ್‌ಎಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. 10 ವರ್ಷಗಳ ತೆಲಂಗಾಣ ಬಿಆರ್‌ಎಸ್‌ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳಿಸಿದ ಅತ್ಯಂತ ದೊಡ್ಡ ಯೋಜನೆ ಇದು ಎಂದು ಪರಿಗಣಿಸಲಾಗಿದೆ. ಕಾಳೇಶ್ವರಂ ವಿಶ್ವದ ಅತೀ ದೊಡ್ಡ ಏತ ನೀರಾವರಿ ಯೋಜನೆಯೂ ಹೌದು. ಬಿಆರ್‌ಎಸ್‌ ಸರ್ಕಾರ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಯೋಜನೆಯಲ್ಲಿ ಲೋಪದ ಆರೋಪ ಮಾಡಿರುವ ನೂತನ ಕಾಂಗ್ರೆಸ್ ಸರ್ಕಾರ ನ್ಯಾಯಾಂಗ ತನಿಖೆಗೆ ಮುಂದಾಗಿದೆ.

ಇದನ್ನೂ ಓದಿ : ಪಿಂಚಣಿ ಅರ್ಹತಾ ವಯಸ್ಸು 50ಕ್ಕೆ ಇಳಿಕೆ, ಶೇ.75% ಉದ್ಯೋಗ ಸ್ಥಳೀಯರಿಗೆ ಮೀಸಲು: ಹೇಮಂತ್ ಸುರೇನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...