Homeಮುಖಪುಟಬರಗೂರು ರಾಮಚಂದ್ರಪ್ಪನವರ ’ಕಾಗೆ ಕಾರುಣ್ಯದ ಕಣ್ಣು’ ಬಿಡುಗಡೆಯಲ್ಲಿ ಕೆ.ವಿ ನಾರಾಯಣ ಅವರ ಮಾತುಗಳು (ಭಾಗ-2)

ಬರಗೂರು ರಾಮಚಂದ್ರಪ್ಪನವರ ’ಕಾಗೆ ಕಾರುಣ್ಯದ ಕಣ್ಣು’ ಬಿಡುಗಡೆಯಲ್ಲಿ ಕೆ.ವಿ ನಾರಾಯಣ ಅವರ ಮಾತುಗಳು (ಭಾಗ-2)

- Advertisement -
- Advertisement -

ನಾನು ಬರಗೂರು ಅವರ ಎರಡು ವ್ಯಕ್ತಿತ್ವ ಅಂತ ಹೇಳಿದೆ, ಎರಡು ವ್ಯಕ್ತಿತ್ವ ಅಲ್ಲ, ಇಬ್ಬರು ಬರಗೂರರು ಅಂತ ಹೇಳಿದೆ, ವ್ಯಕ್ತಿತ್ವ ಅಂದರೆ ತಪ್ಪು ಅರ್ಥ ಬರುತ್ತೆ. ಅದರಲ್ಲಿ ಒಂದು ಪರ್ಸನಲ್ ಅಂದರೆ ವೈಯಕ್ತಿಕವಾಗಿರತಕ್ಕಂತಹದು, ಮತ್ತೊಂದು ಸಾಮಾಜಿಕವಾದ ವ್ಯಕ್ತಿ. ನಮ್ಮ ಸಮಾಜದಲ್ಲಿ ವಿಶೇಷವಾಗಿ ನಮ್ಮ ತಲೆಮಾರಿನವರಿಗೆ, ತಲೆಮಾರು ಯಾಕೆ ಹೇಳ್ದೆ ಅಂದರೆ ಮಿಲೆನಿಯಲ್‌ಗಳಿಗೆ, ಅಂದರೆ, 90ರ ದಶಕದ ನಂತರ ಹುಟ್ಟಿದವರಿಗೆ ಈ ಸಮಸ್ಯೆಗಳು ಹೆಚ್ಚಾಗಿ ಕಾಡ್ತಾ ಇಲ್ಲ. ನಮ್ಮ ತಲೆಮಾರು ಅಂದರೆ, ಈಗ ನನಗೆ ಎಪ್ಪತ್ತೈದು ವಯಸ್ಸು; ಈ ವಯಸ್ಸಿನೋರಿಗೆ ಬಹಳ ವಿಚಿತ್ರವಾದ ತುಯ್ತ ಇರುತ್ತದೆ. ಪರ್ಸನಲ್ ಮತ್ತು ಸೋಶಿಯಲ್, ಇದರ ನಡುವೆ ಅಂತರವನ್ನು ಹೇಗೆ ಕಾಯ್ಕೋಬೇಕು, ಕಾಯ್ಕೋಬೇಕೇ, ಕಾಯ್ಕೊಳೋದು ಸಾಧ್ಯವೇ ಅಂತ. ಈ ಸಂದರ್ಭದಲ್ಲಿ ನಾನು ಎ.ಕೆ. ರಾಮಾನುಜನ್ ಅವರ ಲೇಖನವನ್ನ ನೆನಪು ಮಾಡ್ಕೋಳಕ್ಕೆ ಪ್ರಯತ್ನ ಪಡ್ತಾ ಇದ್ದೀನಿ. ಸುಮಾರು 1986-87ರಲ್ಲಿ ಪ್ರಕಟವಾದ ಲೇಖನ ಅದು. Is there an Indian way of thinking ಅಂತ. ಅದನ್ನು ಕನ್ನಡಕ್ಕೆ ಅನುವಾದ ಮಾಡಿರತಕ್ಕಂತ ಇಬ್ಬರು, ಕೆ.ವಿ.ಸುಬ್ಬಣ್ಣ ಅವರು ಮತ್ತು ಓ.ಎಲ್. ನಾಗಭೂಷಣಸ್ವಾಮಿ ಅವರು, ಇಬ್ಬರೂ ಕೂಡ ಇಂಡಿಯನ್ ಅನ್ನೋ ಪದಕ್ಕೆ ಭಾರತೀಯ ಅನ್ನೋ ಪದವನ್ನು ಬಳಸ್ತಾರೆ. ಬಳಸೋದಕ್ಕೆ ಕಾರಣಗಳೇನೂ ಇಲ್ಲ. ಇಂಡಿಯನ್ ಅನ್ನೋದು ಭಾರತೀಯ ಆಗ್ಬೇಕಾಗಿಲ್ಲ. ಯಾಕೆ ಅಂದ್ರೆ ನಿಮಗೆ ಗೊತ್ತಾಗತ್ತೆ; ಅದೇ ಲೇಖನ ಪ್ರಕಟವಾದಂತಹ ಜರ್ನಲ್ ಒಳಗಡೇನೆ, ಮೆಲಿಂಡಾ ಮೂರ್ ಅನ್ನೋ ಶಿಕಾಗೊ ಯೂನಿವರ್ಸಿಟಿ ಪ್ರೊಫೆಸರ್ ಒಬ್ಬರು, ಕೇರಳದ ಮನೆಗಳ ಬಗ್ಗೆ ಅಧ್ಯಯನ ಮಾಡಿ ಹಿಂದು ಕಾಸ್ಮಾಸ್ ಅಂತ ಬಳಸುತ್ತಾರೆ. ಪರ್ಟಿಕ್ಯುಲರ್ಲಿ ಹಿಂದು. ಹಿಂದು ಅನ್ನೋದನ್ನ ಇಂಡಿಯನ್ ಅಂತ ಕರೀಬೇಕಾ, ಅಥವ ಭಾರತೀಯ ಅಂತ ಕರೀಬೇಕಾ ಆ ಬಿಕ್ಕಟ್ಟಲ್ಲಿ ನಾವೆಲ್ಲಾ ಇದೀವಿ. ಯಾಕೆ ಈ ಮಾತನ್ನು ಹೇಳ್ತೀನಿ ಅಂತಂದ್ರೆ, ರಾಮಾನುಜನ್ ಆ ಲೇಖನದಲ್ಲಿ ತಮ್ಮ ತಂದೆಯ ರೆಫರೆನ್ಸ್ ಕೊಡ್ತಾರೆ, ಅವರ ತಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಬಹಳ ದೊಡ್ಡ ಮ್ಯಾಥಮೆಟಿಕ್ಸ್ ಪ್ರೊಫೆಸರ್ ಆಗಿದ್ರು. ಅವರು ತಮ್ಮ ವೈಯಕ್ತಿಕ ಬದುಕಿನ ಚಹರೆಗಳಾಗಿರತಕ್ಕಂತಹ, ಅಂದರೆ ಜಾತಿಗೆ ಸಂಬಂಧಪಟ್ಟಂಥ, ಜುಟ್ಟಿರಬಹುದು, ಅವರ ಉಡುಪಿನ ವ್ಯವಸ್ಥೆಗಳಿರಬಹುದು, ಅವರ ಹಣೆಯ ಮೇಲೆ ಹಾಕತಕ್ಕಂತಹ ನಾಮಗಳಿರಬಹುದು, ಇವುಗಳನ್ನೆಲ್ಲಾ ಉಳಿಸ್ಕೊಂಡಿದ್ರು; ಆದರೆ ವೇಷಭೂಷಣಗಳಲ್ಲಿ ಅವರು ಆಧುನಿಕರಾಗಿರುತ್ತಿದ್ದರು. ಅತ್ಯಂತ ಆಧುನಿಕವಾದ ಮ್ಯಾಥಮೆಟಿಕ್ಸ್‌ನ ಥಿಯರಿಗಳು ಅವರಿಗೆ ಗೊತ್ತಿರ್ತಿತ್ತು, ಆದರೆ ಅಸ್ಟ್ರಾಲಜಿಯ ಜೊತೆಗೂ ಕೂಡ ಅವರ ಸಂಬಂಧ ಇರ್ತಿತ್ತು. ಅವರ ಮನೆಯಲ್ಲಿ ಮಹಡಿ ಮೇಲೆ ಒಂದು ಕೋಣೆಯನ್ನು ಅಸ್ಟ್ರಾಲಜಿಗೇ ಮೀಸಲಾಗಿಟ್ಟುಕೊಂಡಿದ್ರು, ಕೆಳಗಡೆ ಮ್ಯಾಥಮೆಟಿಕ್ಸ್‌ಗೆ ಒಂದು ಕೋಣೆನ ಮೀಸಲಾಗಿಟ್ಟುಕೊಂಡಿದ್ರು. ನೀವು ಮಂಕುತಿಮ್ಮನ ಕಗ್ಗ ಓದಿದ್ರೆ, ಅದರಲ್ಲಿ ಒಂದು ಚತುಷ್ಪತಿ ಬರುತ್ತೆ. ಎರಡು ಕೋಣೆಗಳ ನೀಂ ಮಾಡು ಮನದಾಲಯದಲಿ, ಹೊರಗೋಣೆಯಲಿ ಲೋಕದಾಟವನಾಡು, ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ, ವರಯೋಗ ಸೂತ್ರವಿದು ಮಂಕುತಿಮ್ಮ. ಆಮೇಲೆ ಇದನ್ನು ತೊಗೊಂಡು ಹೋಗಿ ಉಪನಿಷತ್‌ನ ’ದ್ವಾಸುಪರ್ಣಾ..’ ಅಂತಾ ಮೊದಲಾಗುವ ಉಕ್ತಿಗೂ ಸಂಪರ್ಕ ಬೆಸೆಯುತ್ತಾರೆ. ಅಂದರೆ ಇವೆರಡೂ ಪ್ರತ್ಯೇಕವಾದ ಘಟಕಗಳು. ಇವೆರಡನ್ನೂ ವಾಟರ್ ಟೈಟ್ ಕಂಪಾರ್ಟ್‌ಮೆಂಟುಗಳಾಗಿ ಇಟ್ಟುಕೊಳ್ಳುವ ಸಾಧ್ಯತೆ ಇದೆ. ಇದು ಭಾರತೀಯ ವಿಧಾನ ಅಂತ ರಾಮಾನುಜನ್ ಹೇಳ್ತಾರೆ. ಸ್ವಲ್ಪ ನೋಡದ್ರೆ ನಂಬಿಕೆ ಮತ್ತು ಆಚರಣೆಗಳೆರಡೂ ಕೂಡ, ಹೀಗೆ ಬೇರೆಬೇರೆಯಾಗಿರುವುದಕ್ಕೆ ಸಾಧ್ಯ ಆಗೋದು, ಬಹಳ ನಿಡುಗಾಲದ ಸಾಂಸ್ಕೃತಿಕ ನೆನಪುಗಳನ್ನು ಹೊಂದಿರತಕ್ಕಂತಹ, ಸಾಮಾಜಿಕವಾಗಿ ಸ್ಥಾನಮಾನ ಹೊಂದಿರತಕ್ಕಂತಹ ಜಾತಿಗಳಿಗೆ ಮಾತ್ರ ಸಾಧ್ಯ. ಕೆಳ ಜಾತಿಯಿಂದ ಬಂದವರಿಗೆ, ಕೆಳವರ್ಗದಿಂದ ಬಂದವರಿಗೆ, ಇವೆರಡರಲ್ಲೂ ಯಾವಾಗಲೂ ಸಂಘರ್ಷ ಇರುತ್ತದೆ. ಯಾವುದು ಯಾವುದನ್ನು ಹತ್ತಿಕ್ತಾ ಇರುತ್ತದೆ, ಪರ್ಸನಲ್ ಆದದ್ದು ಯಾವಾಗ ಸೋಷಿಯಲ್ ಆಗತ್ತೆ, ಸೋಷಿಯಲ್ ಆದದ್ದು ಯಾವಾಗ ಪರ್ಸನಲ್ ಆಗತ್ತೆ, ಈ ತಿಕ್ಕಾಟದಿಂದ ಇವರಿಗೆ ಬಿಡುಗಡೇನೆ ಇಲ್ಲ. ಅಥವ ಬಹಳ ವ್ಯವಸ್ಥಿತವಾಗಿ ಇವೆರಡನ್ನೂ ಕೂಡ ಪ್ರತ್ಯೇಕವಾಗಿ ಇಡಬೇಕಾಗಿ ಬರತ್ತೆ.

ಈ ಸೌಕರ್ಯ ಬಹಳಷ್ಟು ವಲಯಗಳಿಂದ ಬಂದಂತಹ ವ್ಯಕ್ತಿಗಳಿಗೆ ಬಹಳ ಕಷ್ಟ. ಈ ಸೌಕರ್ಯ ಇರತಕ್ಕಂತಹವರು, ಇವತ್ತಿನ ಚರ್ಚೆಗಳಲ್ಲಿ ನಾವು ನೋಡ್ತಾ ಇರ್ತೀವಿ; ವಿಜ್ಞಾನಿಗಳು ತಮ್ಮ ಬಾಹ್ಯಾಕಾಶ ಉಡಾವಣೆಯ ಮಾಡೆಲ್‌ಗಳನ್ನು ತೆಗೆದುಕೊಂಡು ಹೋಗಿ ತಿರುಪತಿಯಲ್ಲಿ ಪೂಜೆ ಮಾಡಿದ್ರು, ಗುರುವಾಯೂರಲ್ಲಿ ಪೂಜೆ ಮಾಡಿದ್ರು; ತಮ್ಮ ಕೆಲಸ ಮತ್ತು ಈ ಆಚರಣೆಯ ನಡುವೆ ಪರಸ್ಪರ ವಿರೋಧ ಇದೆ ಅಂತ ನಮಗೆ ಅನ್ಸೋದೆ ಇಲ್ಲ ಅಂತಾರೆ ಅವರು; ಯಾಕೆ ವಿರೋಧ ಇಲ್ಲ ಅಂತಂದ್ರೆ ಇವೆರಡನ್ನೂ ಅವರು ಸಪರೇಟ್ ಮಾಡ್ಕೊಂಡಿದ್ದಾರೆ. They have that luxury to keep them apart, ಅದು ಸಾಧ್ಯವೇ ಇಲ್ದೇ ಇರೋ ನಾವು ಅವರ ವಿರುದ್ಧ ತಿರುಗಿ ಬೀಳ್ತಾ ಇರ್ತೀವಿ, ಈತರ ಮಾಡೋದು ತಪ್ಪು ಅಂತ ಹೇಳ್ತಾ ಇರ್ತೀವಿ. ನಂಬಿಕೆ ಮತ್ತು ಆಚರಣೆಗಳ ನಡುವೆ ಈತರ ಸಂಘರ್ಷಗಳು ಆಗ್ದಲೇ ಇರೋತರದಲ್ಲಿ ನೋಡ್ಕೊಳೋದು ಇದೆಯಲ್ಲಾ, ಇದು ಒಂದು, ಈ ಪ್ರಜಾಪ್ರಭುತ್ವ ವ್ಯವಸ್ಥೆ ನಮಗೆ ಒದಗಿಸಿರುವ ಸವಲತ್ತು ಅಲ್ಲ ಅಂತ ನಾವು ಹೇಳ್ತಾ ಇರ್ತೀವಿ, ಆದರೆ ಅದು ಸಹಜ ಅಂತ ಅವರಿಗೆ ಅನ್ನಿಸ್ತಾ ಇರ್ತದೆ.

ಕನ್ನಡದ ಮುಖ್ಯ ಬರಹಗಾರರು ಇವೆಲ್ಲವನ್ನೂ ಅನುಭವಿಸಿದ್ದಾರೆ. ಈ ವರ್ಗದಿಂದ ಬಂದಂತಹ ಬರಹಗಾರರೆಲ್ಲರೂ ಕೂಡ ಇದನ್ನು ಅನುಭವಿಸಿದ್ದಾರೆ. ಕುವೆಂಪು ಅವರು ಕಾನೂರ ಹೆಗ್ಗಡತಿಯ ಒಳಗಡೆ ಇದನ್ನು ಬಹಳ ವಿಚಿತ್ರವಾಗಿ ನಿರ್ವಹಿಸುತ್ತಾರೆ, ಕಾನೂರ ಹೆಗ್ಗಡತಿಯಲ್ಲಿ ಮನೆ ಪಾಲಾಗತ್ತಕ್ಕಂತಹ ಪ್ರಸಂಗ ಬಂದಾಗ, ಮನೆಯ ಕೆಳ ಭಾಗದಲ್ಲಿ ಪಾಲಾಗುವ ಮಾತುಕತೆಗಳು ನಡೀತಾ ಇರಬೇಕಾದ್ರೆ, ಹೂವಯ್ಯ ಮಹಡಿ ಮೇಲೆ ಕುಳಿತ್ಕೊಂಡು ಭಗವದ್ಗೀತೆ ವಿಶ್ಲೇಷಣೆ ಮಾಡ್ತಾ ಇರ್ತಾನೆ, ಮಾಥ್ಯೂ ಆರ್ನಾಲ್ಡ್‌ನ ’ರಗ್ಬಿ ಚಾಪೆಲ್’ನ ಕುರಿತು ವ್ಯಾಖ್ಯಾನ ಮಾಡ್ತಾ ಇರ್ತಾನೆ. ಇದರ ನಡುವೆ ಏಣಿ ಹತ್ತಿ ಚಿನ್ನಮ್ಮ ಬರ್ತಾಳೆ, ಬಂದು ಬೈಯ್ಯಿಸ್ಕೊಂಡು ಹೋಗ್ತಾಳೆ. ಇವೆರಡು ಲೋಕಗಳನ್ನು ಬೇರೆ ಇಡ್ಬೇಕು ಎಂದು ವ್ಯವಸ್ಥಿತವಾಗಿ ನವಿಲುಕಲ್ಲಿನ ಮೇಲೆ ಹೋಗಿ ಕೂತ್ಕೊಳೋದು, ಕವಿಶೈಲದ ಮೇಲೆ ಹೋಗಿ ಕೂತ್ಕೋಳೋದು; ಮೇಲೇರಿ ತಪ್ಪಿಸಿಕೊಳ್ಳಬೇಕೆಂಬ ಹೂವಯ್ಯನಿಗೆ ತಪ್ಪಿಸಿಕೊಳ್ಳೋದಕ್ಕೆ ಆಗೋದೇ ಇಲ್ಲ. ನಿರಂತರವಾಗಿ ಇವೆರಡೂ ಒಟ್ಟೊಟ್ಟಿಗೆ, ಬಲೀಂದ್ರ ಹೋತದ ರೂಪದಲ್ಲಿರಬಹುದು, ಸೀತೆಯ ತರದಲ್ಲಿ ಇರಬಹುದು, ಯಾವ್ಯಾವುದೋ ರೂಪದಲ್ಲಿ ಒಳಗಡೆ ಅದು ನುಗ್ಗುತ್ತಾ ಇರ್ತವೆ. ಕೊನೆಗೆ ಆಶಾಚಿಂತನೆ ತರದಲ್ಲಿ ಅಂತಿಮ ಚಾಪ್ಟರ್ ಬರೆದು ಕುವೆಂಪು ಕೈತೊಳೆದುಕೊಂಡುಬಿಟ್ಟರು. ಅಲ್ಲ ಹೋಗಿ ಕೂತ್ಕೊಂಡು ಬುದ್ಧನ್ನ ಪೂಜೆ ಮಾಡ್ಕೊಂಡು ಕೂತ್ಕೊಂಡುಬಿಟ್ಟ ಅಂತ ಬರೆದುಬಿಟ್ಟರು. ಆದರೆ ವಾಸ್ತವವಾಗಿ ಹಾಗೆ ಇರೊದಕ್ಕೆ ಸಾಧ್ಯವೇ ಇಲ್ಲ. ಈ ಬಿಕ್ಕಟ್ಟು ಬರಗೂರವರನ್ನ ಬಹಳವಾಗಿ ಕಾಡಿಸಿದೆ ಎನ್ನುವುದನ್ನ ವೈಯುಕ್ತಿಕವಾಗಿ ಬಲ್ಲೆ ನಾನು.

ಬರಗೂರು ಅವರಿಗೆ ಈ ಬಿಕ್ಕಟ್ಟಿನ ಪರಿಚಯ ಇಲ್ಲ ಅಂತಲ್ಲ, ಅದನ್ನು ಅವರು ಹೇಗೆ ಹತ್ತಿಕ್ತಾರೆ ಅನ್ನೋದನ್ನು ನಾವು ಪ್ರತ್ಯೇಕವಾಗಿ ನೋಡೋಣ. ಒಂದು ಸಣ್ಣ ಉದಾಹರಣೆ ಕೊಡ್ತೀನಿ, ಅವರಿಗೆ ರಾಜಕುಮಾರ್ ಅವರ ಒಡನಾಟ ಇತ್ತು, ಅದರ ಬಗ್ಗೆ ಒಂದು ದೀರ್ಘವಾದ ಲೇಖನವನ್ನೂ ಕೂಡ ಬರೆದಿದ್ದಾರೆ ಮತ್ತು ಬೇಕಾದಷ್ಟು ಕಡೆ ಮಾತನಾಡಿದ್ದಾರೆ ಕೂಡ. ಆ ಲೇಖನವನ್ನು ನೀವು ಓದ್ತಾ ಇದ್ರೆ, ರಾಜಕುಮಾರ್ ಅವರಿಗೆ ಇವರಲ್ಲಿ, ಇವರಿಗೆ ರಾಜಕುಮಾರ್ ಅವರಲ್ಲಿ ರಿಲೇಟ್ ಆದ ಸಂಗತಿ ಯಾವುದು? ಇದೇನೆ, ಆ ವ್ಯಕ್ತಿಯಲ್ಲಿ ಕೂಡ ಇದೇನೆ, ಪರ್ಸನಲ್ ಆಗಿರ್ತಕ್ಕಂತದ್ದು ಮತ್ತು ಸೋಷಿಯಲ್ ಆಗಿರ್ತಕ್ಕಂತದ್ದು. ಇವೆರಡರ ನಡುವೆ ಹೇಗೆ ಗೆರೆ ಎಳ್ಕೊಬೇಕು? ಅವರೂ ಕೂಡ ಪರ್ಸನಲ್ ಆಗಿರ್ತಕ್ಕಂತದ್ದನ್ನ ಎಲ್ಲಾದ್ರೂ ಯಾರಾದ್ರೂ ಕೆದಕ್ತಾರ ಅನ್ನುವ ರೀತಿಯಲ್ಲಿ ಕಾಯ್ತಾ ಇದ್ರು ಅಂತ ಕಾಣ್ಸತ್ತೆ. ಇವರು ಅದನ್ನ ಕೆದಕ್ತಾರೆ. ಅವರಿಗೆ ಇದ್ದಕ್ಕಿದ್ದಂತೆ ಉಲ್ಲಾಸ ಬಂದ್ಬಿಡತ್ತೆ. ಎಲ್ಲಾ ಕತೆಗಳನ್ನೂ ಹೇಳೋದಕ್ಕೆ ಶುರುಮಾಡ್ತಾರೆ. ಅವರ ಊರಿನ ಕತೆಗಳನ್ನ, ಬಾಲ್ಯದ ಕತೆಗಳನ್ನ ಹೇಳೋದಕ್ಕೆ ಶುರುಮಾಡ್ತಾರೆ. ಅದನ್ನ ಯಾರ ಹತ್ರಾನೂ ಹೇಳಿಕೊಳ್ಳಲಾಗದಂತಹ, ಹತ್ತಿಕ್ಕಲಾದದಂತಹ ಜಗತ್ತು ಅದು. ಅವರು ನಟರಾಗಿ, ಅಭಿಮಾನಿಗಳ ಆರಾಧ್ಯ ದೈವವಾಗಿದ್ದವರು; ಆ ಸೋಷಿಯಲ್ ವ್ಯಕ್ತಿತ್ವ ಇತ್ತಲ್ಲ ಅದು ಇದಕ್ಕೆಲ್ಲಾ ಅವಕಾಶ ಕೊಡ್ತಾ ಇರಲಿಲ್ಲ. ಬಹುಶಃ ಅವರ ಪರ್ಸನಲ್ ಲೈಫ್‌ನ ಈ ನಿಧಿ, ಅವರ ಬದುಕಿನಲ್ಲೇನೆ ಒತ್ತಾಸೆಯಾಗಿ ನಿಂತದ್ದು, ವೀರಪ್ಪನ್ ಅವರನ್ನು ಕರ್ಕೊಂಡು ಹೋಗಿ, ಎರಡೂವರೆ ತಿಂಗಳುಗಳು ಜೊತೆಯಲ್ಲಿ ಇಟ್ಕೊಂಡಾಗ; ಆ ನೆನಪುಗಳು ಇಲ್ದೇ ಹೋಗಿದ್ದಿದ್ರೆ, ಆ ರಾಜಕುಮಾರ್ ಜಾಗೃತವಾಗ್ದೇ ಹೋಗಿದ್ದಿದ್ದರೆ ಬಹುಶಃ ರಾಜಕುಮಾರ್ ಅವರಿಗೆ ಅದನ್ನು ತಡ್ಕೊಳೋಕೆ ಆಗ್ತಾ ಇರಲಿಲ್ಲ. ಅವರ ಸೋಷಿಯಲ್ ಕ್ಯಾರೆಕ್ಟರ್‌ನೇ ಅವರು ಮುಂದಿಟ್ಟುಕೊಂಡಿದ್ದರೆ ಅವರು ಕೊಲಾಪ್ಸ್ ಆಗ್ಬೇಕಿತ್ತು. ಅದು ಒಳಗಿದ್ದಿದ್ರಿಂದ ಆ ದೀರ್ಘಕಾಲ ಆ ವ್ಯಕ್ತಿಯ ಜೊತೆ ಒಡನಾಟ ಮಾಡೋದಕ್ಕೆ ಸಾಧ್ಯ ಆಯಿತು. ಬರಗೂರರಲ್ಲಿಯೂ ಕೂಡ ರಾಜಕುಮಾರ್‌ಗೆ ಇಷ್ಟ ಆಗಿರುವಂತಹ ಸಂಗತಿಗಳಿವೆ. ಅದರ ಹಲವಾರು ಉದಾಹರಣೆಗಳನ್ನು ನೋಡ್ತೀವಿ. ರಾಜಲಕ್ಷ್ಮಿಯವರ ಕಣ್ಣುಗಳಲ್ಲಿ ಅವರ ತಾಯಿಯನ್ನ ನೋಡ್ತಕ್ಕಂತಹದು, ತಾಯಿಯ ಮಲಗುವ ಕೋಣೆಯ ನೆನಪುಗಳನ್ನು ಅವರು ಕಾಯ್ಕೊಂಡಿರತಕ್ಕಂತಹದು, ಇವೆಲ್ಲವನ್ನೂ ಕೂಡ ನೋಡದ್ರೆ, ಅಂದರೆ ರಾಜಕುಮಾರ್ ಅವರು ಇವರಿಗೆ ಹೇಗೆ ಕಂಡಿರಬಹುದು ಅಂತಂದ್ರೆ, ಪರ್ಸನಲ್ ಆಗಿರುವ ಮತ್ತು ಸೋಷಿಯಲ್ ಆಗಿರ್ತಕ್ಕಂತಹ ವ್ಯಕ್ತಿತ್ವದಲ್ಲಿನ ಸಂಘರ್ಷಗಳಲ್ಲಿ ಇಬ್ಬರೂ ಇದ್ದವರು ಅಂತ ನನಗೆ ಅನಿಸುತ್ತದೆ. ಇದು ಅನಿವಾರ್ಯ ವಾಗಿರುವಂತಹದು; ಇದನ್ನು ಯಾವ ರೀತಿ ಎಲ್ಲರೂ ಅನುಭವಿಸುತ್ತಾರೆ, ಹೇಗೆ ಅದರಿಂದ ಹೊರಬರ್ತಾರೆ ಇತ್ಯಾದಿಗಳನ್ನ ನಾವು ಪ್ರತ್ಯೇಕವಾಗಿ ಚರ್ಚೆ ಮಾಡ್ಬೇಕಾಗಿ ಬರ್ತದೆ.

ಇನ್ನೊಂದು ಸಂಗತಿಯನ್ನು ನಿಮ್ಮ ಗಮನಕ್ಕೆ ತರಲು ಪ್ರಯತ್ನ ಪಡುತ್ತೇನೆ. ನಮ್ಮ ತಲೆಮಾರುಗಳನ್ನ ರೂಪಿಸೋದು, ವ್ಯಕ್ತಿಗಳಾಗಿ ನಮ್ಮನ್ನು ರೂಪಿಸಿರುವಂತದ್ದು; ಬದುಕುಗಳು ಇರಬಹುದು.. ನಮ್ಮ ಮನೆ ನಮ್ಮ ಅಪ್ಪ ಅಮ್ಮ, ಬಂಧುಗಳು, ಗೆಳೆಯರು, ಹಳ್ಳಿಯ ವಾತಾವರಣ, ಶಾಲೆಯ ಅಧ್ಯಾಪಕರುಗಳು, ಇವರೆಲ್ಲರೂ ಕೂಡ ರೂಪಿಸಿರೋದು ನಿಜ. ಇದರಿಂದ ಆಚೆಗೆ ಇವೆಲ್ಲವನ್ನೂ ಮೀರಿದ ಸಾಮಾಜಿಕ ವಾತಾವರಣ ನಮ್ಮೆಲ್ಲರನ್ನೂ ರೂಪಿಸಿದೆ. ಕಳೆದ ಶತಮಾನದ ಎಪ್ಪತ್ತರ ದಶಕ ಇದೆಯಲ್ಲಾ, ಆ ದಶಕ, ಜಾಗತಿಕವಾಗಿ ಅದನ್ನ global radicalisation era ಅಂತ ಕರೀತಾರೆ. ಇಡೀ ಜಗತ್ತಿನಾದ್ಯಂತ ಹಲವಾರು ಬಗೆಯ ಪಲ್ಲಟಗಳು ನಡೆಯುತ್ತಿದ್ದಂತಹ ಕಾಲ ಅದು. ಅದರಲ್ಲೂ ಬಹಳ ಮುಖ್ಯವಾಗಿ ಅಮೆರಿಕದಲ್ಲಿ ನೋಡಿದರೆ ವಿಯೆಟ್ನಾಮ್ ಯುದ್ಧಕ್ಕೆ ವಿರುದ್ಧವಾಗಿ ನಡೆದ ಚಳವಳಿ ಇರಬಹುದು, ಅದರ ಜೊತೆಯಲ್ಲಿನೆ ಹಿಪ್ಪಿಗಳ ಚಳವಳಿ ಕೂಡ ನಡೀತಾ ಇದ್ದದ್ದು. ಚೈನಾದಲ್ಲಿ ಸಾಂಸ್ಕೃತಿಕ ಕ್ರಾಂತಿ ನಡೀತ ಇತ್ತು, ರಷ್ಯಾದಲ್ಲಿ ನಡೆಯುತ್ತಿದ್ದ ಬದಲಾವಣೆಗಳು ಕೊನೆಗೆ ರಷ್ಯಾ ವಿಘಟನೆಯಾಗಿದ್ದು. ವಸಾಹತುಗಳಿಂದ ಆಚೆ ಬಂದ ಆಫ್ರಿಕ ದೇಶಗಳಲ್ಲಿ ಬದಲಾವಣೆಗಳು ನಡೀತಾ ಇತ್ತು. ಭಾರತದಲ್ಲೂ ಕೂಡ ತೀವ್ರವಾದ ಬದಲಾವಣೆಗಳು ಸಾಮಾಜಿಕವಾಗಿ ನಡೀತಾ ಇದ್ವು, ಆಡಳಿತ ಕೇಂದ್ರ ತನ್ನ ಅಸ್ತಿತ್ವವನ್ನ ಅಂದರೆ ಏಕೀಕೃತವಾದ ಅಸ್ತಿತ್ವವನ್ನ 1967ರ ಎಲೆಕ್ಷನ್‌ನನಲ್ಲಿ ಕಳೆದುಕೊಂಡ ಮೇಲೆ, ಅದು ಹೆಚ್ಚುಹೆಚ್ಚು ವಾಮಪಂಥೀಯ, ಅಂದರೆ ಎಡಪಂಥೀಯದ ಕಡೆಗೆ ಚಲನೆ ಮಾಡ್ತಾ ಹೋದದ್ದರಿಂದ, ಅದಕ್ಕೆ ಪರ್ಯಾಯವಾಗಿ, ಅದರ ಜೊತೆಯಲ್ಲಿ ನಕ್ಸಲೀಯ ಚಳವಳಿ ಹುಟ್ಟಿಕೊಳ್ಳುತ್ತದೆ, ಅದಕ್ಕೆ ವಿರೋಧವಾಗಿ ಒಂದು ಬಲಪಂಥೀಯ ಪ್ರತಿಭಟನೆ ಕಾಣಿಸಿಕೊಳ್ಳುತ್ತದೆ. ಆಗ ಜೆ.ಪಿ. ಚಳವಳಿಯನ್ನ ಒಂದು ಪ್ರಗತಿಪರ ಚಳುವಳಿ ಎಂದು ನೋಡಿದರೂ ಕೂಡ, ಜೆ.ಪಿ. ಚಳವಳಿಯ ಹಿಂದೆ ಇದ್ದ ಒತ್ತಾಸೆ ಬಲಪಂಥೀಯ ಚಿಂತನೆಗಳೇ ಇರಬಹುದು ಅಂತ ಅನ್ಸಕ್ಕೆ ಶುರುವಾಗುತ್ತದೆ ಇವಾಗ. ಅದರ ಪರಿಣಾಮ ಏನು ಅನ್ನೋದನ್ನು ಮುಂದಿನ ಜನತಾ ಗವರ್ನಮೆಂಟಿನಲ್ಲಿ ಮತ್ತು ಇವತ್ತೂ ಕೂಡ ನೋಡ್ತಾ ಇದ್ದೀವಿ. ಎರಡೂ ಬಗೆಯ ಜನರು ಅದರಲ್ಲಿ ಬಂದರು. ಅತ್ಯಂತ ತೀವ್ರವಾದ, ತೀವ್ರವಲ್ಲದಿದ್ದರೂ ಎಡಪಂಥೀಯ ಆಡಳಿತಗಾರರು ಬಂದರು, ಮತ್ತು ಬಲಪಂಥೀಯ ಆಡಳಿತಗಾರರು ಕೂಡ ಬಂದರು. ಇವೆಲ್ಲವೂ ಕೂಡ ಕರ್ನಾಟಕದ ಮನಸ್ಸುಗಳನ್ನು ರೂಪಿಸ್ತಾ ಇದ್ದವು. ಬರಗೂರು ಅವರ ಫಾರ್ಮೆಟಿವ್ ಪೀರಿಯಡ್‌ನಲ್ಲಿ, ಬೌದ್ಧಿಕ ವ್ಯಕ್ತಿತ್ವವನ್ನು ರೂಪಿಸ್ತಾ ಇರೋ ಸಂದರ್ಭದಲ್ಲಿ, ಈ ರೀತಿಯ ಒಂದು ಸಾಮಾಜಿಕವಾದ ಒಂದು ಸನ್ನಿವೇಶ ಕೂಡ, global radicalisation eraದ ಪರಿಣಾಮ ಏನಿದೆ ಅದು ಯಾವ ರೀತಿ ಕರ್ನಾಟಕದಲ್ಲಿ ಇತ್ತು, ನಾವಿನ್ನೂ ಕೂಡ ಅದನ್ನು reconstruct ಮಾಡಿಲ್ಲ. ಎಪ್ಪತ್ತನೆ ದಶಕವನ್ನು ನಾವು ಒಂದು ಸಾರ್ತಿ ರೀವಿಸಿಟ್ ಮಾಡಬೇಕಾಗಿದೆ, ರೀಕನ್‌ಸ್ಟ್ರಕ್ಟ್ ಮಾಡಬೇಕಾಗಿದೆ. ಕುವೆಂಪು ಅವರು ’ವಿಚಾರ ಕ್ರಾಂತಿಗೆ ಆಹ್ವಾನ’ ಭಾಷಣ ಮಾಡಿದ್ದಿರಬಹುದು, ಅಥವ ’ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಉಪನ್ಯಾಸವನ್ನ ಮಾಡಿದ್ದಿರಬಹುದು, ಇವೆಲ್ಲವನ್ನೂ ನಾವು ರೀವಿಸಿಟ್ ಮಾಡಬೇಕಾಗಿದೆ, ಆ ಕಾಲದಲ್ಲಿ ಏನೇನೆಲ್ಲಾ ಆಯ್ತು ಎನ್ನುವುದನ್ನ. ಬರಗೂರು ಅವರ ಸಾಮಾಜಿಕ ವ್ಯಕ್ತಿತ್ವವನ್ನ ರೂಪಿಸೋದಕ್ಕೆ ಬಹಳ ಮುಖ್ಯವಾದ ಕಾರಣಗಳನ್ನು ನಾನಿಲ್ಲಿ ನಮೂದಿಸಿದ್ದೇನೆ.

ಇದನ್ನೂ ಓದಿ: ಬರಗೂರು ರಾಮಚಂದ್ರಪ್ಪನವರ ’ಕಾಗೆ ಕಾರುಣ್ಯದ ಕಣ್ಣು’ ಬಿಡುಗಡೆಯಲ್ಲಿ ಕೆ.ವಿ. ನಾರಾಯಣ ಅವರ ಮಾತುಗಳು (ಭಾಗ-1)

ಈ ಅನುಭವ ಕಥನಗಳಲ್ಲಿ ಮುಂದಕ್ಕೆ ಅವರು ಬಹಳ ಹೆಚ್ಚು ತಮ್ಮ ಸಾಮಾಜಿಕ ವಲಯಗಳಲ್ಲಿ ಅವರ ಪಾತ್ರಗಳೇನಿದೆ, ಮತ್ತು ಭೇಟಿಯಾದ ವ್ಯಕ್ತಿಗಳು ಯಾರ್‍ಯಾರು ಇದಾರೆ, ಅನ್ನುವುದನ್ನ ನಿರೂಪಿಸ್ತಾ ಬರ್ತಾರೆ; ಅವುಗಳೆಲ್ಲವನ್ನೂ ಕೂಡ ಸ್ವಲ್ಪಮಟ್ಟಿಗೆ ಡಾ. ಪರಮೇಶ್ವರ್ ಅವರು ಸೂಚಿಸಿದ್ದಾರೆ. ಅವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದು ಅಧ್ಯಾಪಕರಾಗಿ ಸೇರಿದ್ರು. ಬಹಳ ಮುಖ್ಯವಾದ ಘಟನೆ ಇದು. ಬಹುಶಃ ಅವರು ಸರ್ಕಾರೀ ಕಾಲೇಜಿನಲ್ಲೇ ಅಧ್ಯಾಪಕರಾಗಿ ಉಳಿದಿದ್ರೆ ಅವರ ಸಾಮಾಜಿಕ ವ್ಯಕ್ತಿತ್ವ ರೂಪುಗೊಳ್ಳುವ ಕ್ರಮ ಬೇರೇನೇ ಆಗುತ್ತಿದ್ದಿರಬಹುದು ಅಂತ ನನಗೆ ಅನ್ನಿಸುತ್ತದೆ. ಅವರು ಆಗ ಚಲನಚಿತ್ರ ನಿರ್ದೇಶಕರಾಗಿ ರೂಪುಗೊಳ್ಳೋದಕ್ಕೆ ಎಷ್ಟು ಸಾಧ್ಯತೆ ಇತ್ತು ಅನ್ನುವುದು ನನಗೆ ಗೊತ್ತಿಲ್ಲ, ಗೌರ್ನಮೆಂಟ್ ಕಾಲೇಜಿನಲ್ಲಿದ್ರೆ ಅವರನ್ನು ಎಲ್ಲೆಲ್ಲಿಗೊ ಹಾಕ್ತಾ ಇರ್ತಾರೆ, ತುಮಕೂರು ಇರಬಹುದು, ಶಿವಮೊಗ್ಗ ಇರಬಹುದು, ಚಿತ್ರದುರ್ಗ ಇರಬಹುದು. ಗೌರ್ನಮೆಂಟ್ ಕಾಲೇಜುಗಳು ಆಗ ಬಹಳ ಕಡಿಮೆ ಇದ್ದವು. ಜಿಲ್ಲೆಗಳಲ್ಲಿ ಮಾತ್ರ ಇರುತ್ತಿದ್ದವು. ಬಹುಶಃ ಅವರ ಚಲನಚಿತ್ರಗಳ ಬಗ್ಗೆ ಇದ್ದ ಆಸಕ್ತಿ ಬೇರೂರೋದಕ್ಕೆ ಮತ್ತು ಗಟ್ಟಿಗೊಳ್ಳೋದಕ್ಕೆ ಕಾರಣವಾದದ್ದು ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂಡಿದ್ದರಿಂದ.

ಎಪ್ಪತ್ತಾರನೆ ಇಸವಿ ದಾಟಿಬಿಟ್ಟಿದ್ದರೆ ಬಹುಶಃ ಅದು ಸಾಧ್ಯ ಆಗ್ತಾನೆ ಇರಲಿಲ್ಲ, ಯಾಕಂದ್ರೆ ಎಪ್ಪತ್ತೈದನೇ ಇಸವಿಯಲ್ಲಿ ಅವರು ಅಧ್ಯಾಪಕರಾಗಿದ್ದು, ಆಗ ಮೂರು ಜನ ಅಧ್ಯಾಪಕರಿಗೆ ಮಾತ್ರ ಕಾಲ್ ಮಾಡಿದ್ದು; ಅಪ್ಲಿಕೆಂಟ್ಸ್ ತುಂಬಾನೆ ಇದ್ರು; ಆದರೆ ನಾಲ್ಕು ಜನ ಅಧ್ಯಾಪಕರಾಗಿದ್ದೋರು ಬೆಳಿಗ್ಗಿನ ಇಂಟರ್ವ್ಯೂನಲ್ಲಿ ರೀಡರ್ಸ್‌ಗಳಾಗಿಬಿಟ್ಟರು. ಅದರಿಂದ ನಾಲ್ಕು ಹುದ್ದೆಗಳು ಖಾಲಿಯಾಗಿಬಿಟ್ಟವು. ನಾಲ್ಕು ಮತ್ತು ಮೂರು, ಏಳು ಜನಗಳಿಗೆ ಅಪಾಯಿಂಟ್ ಮಾಡೋಕೆ ಸಾಧ್ಯ ಆಯ್ತು. ಹಾಗೆ ಮಾಡಬಹುದು ಅನ್ನುವ ಅಧಿಕಾರ ಕುಲಪತಿಗಳಿಗೆ ಇತ್ತು ಆವಾಗ. ಹೆಚ್.ಎನ್. ಅವರು ನಿರ್ಧಾರ ತೊಗೊಂಡ್ರು, ಅರ್ಧ ಗಂಟೆ ಒಳಗಡೆ ಮಧ್ಯಾಹ್ನ ಇಂಟರ್ವ್ಯೂನಲ್ಲಿ ಏಳು ಜನರನ್ನ ಇಂಟರ್ವ್ಯೂ ಮಾಡಿಬಿಟ್ರು, ಬರಗೂರು ಅವರು ಒಳಗಡೆಗೆ ಬಂದುಬಿಟ್ರು. ಹಾಗಿಲ್ದೇ ಇದ್ದಿದ್ರೆ ಬರ್ತಿರಲಿಲ್ಲ. ಎಪ್ಪತ್ತಾರನೇ ಇಸವಿಯಲ್ಲಿ ಆಗ್ತಿರಲಿಲ್ಲ ಅಂದ್ರೆ, ಎಪ್ಪತ್ತಾರರಲ್ಲಿ ದೇವರಾಜ ಅರಸು ಅವರ ಸರ್ಕಾರ ಕರ್ನಾಟಕ ವಿಶ್ವವಿದ್ಯಾಲಯ ಆಕ್ಟ್‌ಅನ್ನು ಜಾರಿಗೊಳಿಸಿತು, ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಇದ್ದ ಸ್ವಾಯತ್ತತೆಯನ್ನ ಕಡಿಮೆ ಮಾಡ್ತು; ಅದನ್ನ ಡಾ. ಪರಮೇಶ್ವರ್ ಅವರು ಒಪ್ತಾರೆ ಅಂತ ಕಾಣತ್ತೆ, ಮುಂದೆ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಅದೇ ಕಾಯಿದೆಯನ್ನ 2000ನೆ ಇಸವಿಯಲ್ಲಿ ಬಲಪಡಿಸಿದರು ಅನ್ನೋದಕ್ಕೆ ಪುರಾವೆಗಳಿವೆ, ನಾನು ಅದರ ಬಗ್ಗೆ ಹೇಳುವುದಿಲ್ಲ. ಬರಗೂರರವರು ಅಧ್ಯಾಪಕರಾಗಿದ್ದು ಬಹಳ ಮುಖ್ಯವಾದ ಒಂದು ಘಟನೆ ಅಂತ ನಾನು ಅಂದ್ಕೊತೀನಿ.

ಅವರು ಮುಂದೆ ಬಂಡಾಯ ಚಳವಳಿಯ ನೇತಾರರಾಗ್ತಾರೆ, ಹಲವಾರು ಸಾಂಸ್ಥಿಕ ಜವಾಬ್ದಾರಿಗಳನ್ನು ಹೊರ್ತಾರೆ, ಅದರ ವಿವರ ನಾನು ಹೆಚ್ಚು ಕೊಡಬೇಕಾಗಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರಬಹುದು, ಅಥವಾ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಿರಬಹುದು, ಬೇರೆಬೇರೆ ಸಮಿತಿಗಳ ನೇತಾರರಾಗಿದ್ದುಕೊಂಡು ವರದಿಗಳನ್ನು ಕೊಟ್ಟಿದ್ದಿರಬಹುದು, ಅಥವ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ನೇತಾರರಾಗಿದ್ದಿರಬಹುದು. ಇವುಗಳಲ್ಲಿ ಏನಾಯಿತು ಅನ್ನೋದನ್ನ ಇವರು ದಾಖಲೆ ಮಾಡ್ತಾರೆ. ಅವುಗಳು ನೆನಪುಗಳನ್ನ ಆಧರಿಸಿದ್ದು ಅಂತ ಹೇಳುವುದಕ್ಕಿಂತ ಹೆಚ್ಚಾಗಿ, ಘಟನೆಗಳನ್ನು ಆಧರಿಸಿರುವಂಥವು. ಆ ಘಟನೆಗಳಿಗೊಂದು ರೆಫರೆನ್ಸ್ ಪಾಯಿಂಟ್ ಇದೆ, ನಮ್ಮ ನೆನಪುಗಳಿಗೆ ರೆಫರೆನ್ಸ್ ಪಾಯಿಂಟ್ ಇರೋದಿಲ್ಲ. ಯಾಕಂದ್ರೆ ಅದಕ್ಕೆ ನಾವೇ ಹಕ್ಕುದಾರರು. ಆದರೆ ಇಲ್ಲಿ ನಿರೂಪಿಸಿದಂತಹ ಘಟನೆಗಳಿಗೆ ಸಾಮಾಜಿಕವಾದಂತಹ ಒಂದು ರೆಫರೆನ್ಸ್ ಪಾಯಿಂಟ್ ಇದೆ. you can go and verify it. ನಿಜವೋ ಸುಳ್ಳೋ ಅಂತ ನೋಡಬಹುದು. ಕೌಂಟರ್ ಪಾಯಿಂಟ್ ಇದೆಯಾ ಅಂತ ನೋಡಬಹುದು. ಅದರಿಂದ ಆ ರೀತಿಯ ನಿರೂಪಣೆಯನ್ನು ಇಲ್ಲಿ ಮಾಡಿದ್ದಾರೆ. ಆದರೆ ಇದರ ಹಿಂದೆ ಇರುವ ಒಂದೇ ಒಂದು ದೃಷ್ಟಿಕೋನವನ್ನು ನಾನು ಹೇಳೋದಕ್ಕೆ ಇಷ್ಟ ಪಡ್ತೇನೆ. ಇದು ಬಂಡಾಯ ಚಳವಳಿಯ ನೇತಾರರಾಗಿ ಒಂದು ಸಂಘಟನೆಯನ್ನ ಕಟ್ಟೋದು ಇರಬಹುದು, ಅದರ ಒಳಗಡೆಗೆ ಬೇರೆಬೇರೆ ಕಡೆಯಿಂದ ಜನಗಳನ್ನ ಕರ್ಕೊಂಡು ಬರೋದು ಇರಬಹುದು, ಅದರ ಪರಿಣಾಮ ಇವತ್ತೂ ನೋಡ್ತಾ ಇದೀವಿ, ಇಲ್ಲೂ ಕೂಡ ಕಾಣಸ್ತಾ ಇದೆ. ಈ ಸಮಾರಂಭಕ್ಕೆ ಕರ್ನಾಟಕದ ಹಲವು ಕಡೆಯಿಂದ ಜನಗಳು ಬಂದಿರುವ ಕಾರಣ ಅದೇನೆ ಆಗಿದೆ. ಈ ಸಾಂಸ್ಥಿಕ ಜವಾಬ್ದಾರಿಗಳನ್ನು ವಹಿಸುತ್ತಿರುವಾಗ, ಅವರ ವೈಯಕ್ತಿಕ ಸಾಧನೆಗಳು ಏನು ಅಂತಂದ್ರೆ, ಒಂದು ಸಂಘಟನೆ, ಹತ್ತು ಜನರನ್ನ ಸಾಹಿತ್ಯ ಅಕಾಡಮಿಯ ಪ್ರಾಜೆಕ್ಟ್‌ಗಳಲ್ಲಿ ಇರಬಹುದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಇರಬಹುದು, ಅಥವ ಬೇರೆಬೇರೆ ರೀತಿಯ ಸಂಸ್ಥೆಗಳಲ್ಲಿ ಅವರು ಕೆಲಸ ಮಾಡಿದಾಗ ಇರಬಹುದು, ಹಲವು ಜನರ ಅಭಿಪ್ರಾಯಗಳನ್ನು ತಗೊಂಡು, ಅವರ ಅನುಭವಗಳನ್ನ ತಗೊಂಡು, ಅವುಗಳನ್ನು ಸಮಗ್ರೀಕರಣಗೊಳಿಸಿ ರೂಪಿಸಿದ ಒಂದು ಸಾಂಸ್ಕೃತಿಕ ನೀತಿ ಇರಬಹುದು, ಇಲ್ಲೆಲ್ಲಾ ಬರಗೂರು ಅವರನ್ನು ಗೈಡ್ ಮಾಡಿರುವಂತಹ ಪ್ರಿನ್ಸಿಪಲ್‌ಗಳು, ಒಂದು ಪ್ರಜಾಪ್ರಭುತ್ವ, ಇನ್ನೊಂದು ಸಾಮಾಜಿಕ ಸಮಾನತೆ; ಇವೆರಡು. ಇದಕ್ಕೆಲ್ಲಾ ಪ್ರಜಾಪ್ರಭುತ್ವದ ಡೆಮಾಕ್ರಟೈಸ್‌ಡ್ ಪ್ರಾಸೆಸ್ ಇರಬೇಕು. ಪ್ರಜಾಪ್ರಭುತ್ವದ ನೆನಪುಗಳು ಇರಬೇಕಾಗಿ ಬರುತ್ತದೆ. ಒಳಗೊಳ್ಳುವ ನೆಲೆ ಯಾವುದನ್ನು ಹೇಳ್ತಾ ಇದೆ, ಆ ಒಳಗೊಳ್ಳುವ ನೆಲೆ ಇರಬೇಕಾಗ್ತದೆ. ಎರಡನೇದು ಅಸಮಾನತೆಯನ್ನು ಪೋಷಿಸದೇನೆ ಸಮಾನತೆಯನ್ನ ಬೆಳೆಸುವ ರೀತಿಯಲ್ಲಿ ಜನರನ್ನ ಒಳಗೊಳ್ಳಬೇಕಾಗುತ್ತದೆ. ಈ ರೆಪ್ರೆಸೆಂಟೇಶನ್ ಕೊಡತಕ್ಕಂತ ವಿಧಾನಗಳಲ್ಲಿರಬಹುದು, ಇವೆರಡೂ ಅವರ ಗೈಡಿಂಗ್ ಪ್ರಿನ್ಸಿಪಲ್‌ಗಳಾಗಿವೆ ಅಂತ ಅಂದ್ಕೊಳ್ತೀನಿ. ಇವೆಲ್ಲವೂ ಹೆಚ್ಚು ಚರ್ಚೆಗೆ ಒಳಗಾಗಬೇಕಾದಂತಹ ಸಂಗತಿಗಳು, ಮುಂದೆ ಓದಿದವರು, ಇದರ ಬಗ್ಗೆ ಹೆಚ್ಚು ಪರಿಚಯವಿದ್ದವರು ಮಾತನಾಡಬೇಕಾದಂತಹ ಸಂಗತಿಗಳು.

ನಾನು ಮೊದಲು ಒಂದು ಮಾತು ಹೇಳಿದೆ. ಇಬ್ಬರು ಬರಗೂರರು ಇದ್ದಾರೆ ಎಂದು. ನನಗೆ ಯಾವ ಬರಗೂರರು ಹೆಚ್ಚು ಹತ್ತಿರ ಅಂತ ಕೇಳಿದರೆ ನಾನು ಸದ್ಯಕ್ಕೆ ಉತ್ತರ ಕೊಡೋದಿಲ್ಲ. ಆದರೂ ಕೂಡ ಆ ಹತ್ತಿಕ್ಕಿದ ಬರಗೂರರು ಇದ್ದಾರಲ್ಲ ಅವರು ಯಾವಾಗ್ಯಾವಾಗ ತಲೆ ಹಾಕಿದ್ದಾರೆ ಅನ್ನುವುದನ್ನು ನಾನು ವೈಯಕ್ತಿಕವಾಗಿ ಬಲ್ಲೆ, ಯಾವಾಗ ಆ ಪರ್ಸನಲ್ ಬರಗೂರು ಅವರು ಈ ಸಾಮಾಜಿಕವಾದ ಬರಗೂರರ ಒಳಗಡೆಗೆ ನುಗ್ಗಿ ಬಂದಿದ್ದಾರೆ ಎಂದು. ಆ ಬರಗೂರು ಇದ್ದಾರಲ್ಲ ಅವರು ನನಗೆ ಬಹಳ ಆಪ್ತರಾದವರು, ನಿಮಗೆಲ್ಲಾ ಆಪ್ತರಾದ ಬರಗೂರು ಸಾಮಾಜಿಕವಾದ ಬರಗೂರು ಅವರು. ನನಗೆ ಆಪ್ತರಾದ ಬರಗೂರು ಅವರ ಆತ್ಮಕಥನವನ್ನ, ಅವರ ಜೀವನಚಿತ್ರವನ್ನ, ಅವರ ಅನುಭವ ಕಥನಗಳನ್ನು ಇನ್ನೂ ಬರೆಯಬೇಕಾಗಿದೆ ಅನ್ನುವುದು ನನ್ನ ಅಭಿಪ್ರಾಯ.

ಅಕ್ಷರ ರೂಪಕ್ಕೆ: ಕೆ. ಶ್ರೀನಾಥ್

23.07.23ರಂದು ಬೆಂಗಳೂರಿನಲ್ಲಿ ಬಿಡುಗಡೆಯಾದ ಹಿರಿಯ ಸಾಹಿತಿ-ಚಿಂತಕ ಬರಗೂರು ರಾಮಚಂದ್ರಪ್ಪ ಅವರ ಆಯ್ದ ಅನುಭವಗಳ ಕಥನ ’ಕಾಗೆ ಕಾರಣ್ಯದ ಕಣ್ಣು’ ಪುಸ್ತಕದ ಬಿಡುಗಡೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಮರ್ಶಕ ಪ್ರೊ. ಕೆ.ವಿ. ನಾರಾಯಣ ಅವರ ಮಾತುಗಳ ಅಕ್ಷರ ರೂಪವಿದು. ಆ ಕಾರ್ಯಕ್ರಮದಲ್ಲಿ ಕರ್ನಾಟಕದ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಕೂಡ ಭಾಗವಹಿಸಿದ್ದರು. ಆದುದರಿಂದ ಅವರ ಉಲ್ಲೇಖ ಈ ಮಾತುಗಳಲ್ಲಿ ಕಾಣುತ್ತದೆ.

ಕೆ ವಿ ನಾರಾಯಣ
ಭಾಷಾಶಾಸ್ತ್ರಜ್ಞ, ವಿಮರ್ಶಕ. ’ತೊಂಡುಮೇವು’ ಕೆವಿಎನ್ ಅವರ ಬರಹಗಳನ್ನು ಸಂಕಲಿಸಿದ ಸಂಪುಟ ಸರಣಿ. ಇತ್ತೀಚಿಗೆ ಸಾರ್ತ್ರನ ’ಬುದ್ಧಿಜೀವಿಗಳ ಬಿಕ್ಕಟ್ಟು’ ಪುಸ್ತಕವನ್ನು ಕನ್ನಡದಲ್ಲಿ ನಿರೂಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...