Homeಮುಖಪುಟಕೇಂದ್ರದ ಜೊತೆ 3ನೇ ಸುತ್ತಿನ ಮಾತುಕತೆ: ಈಡೇರದ ರೈತರ ಬೇಡಿಕೆಗಳು

ಕೇಂದ್ರದ ಜೊತೆ 3ನೇ ಸುತ್ತಿನ ಮಾತುಕತೆ: ಈಡೇರದ ರೈತರ ಬೇಡಿಕೆಗಳು

- Advertisement -
- Advertisement -

ಪಂಜಾಬ್-ಹರಿಯಾಣ ಗಡಿಯ ಎರಡು ಕಡೆಗಳಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆಯ ನಡುವೆಯೇ ಗುರುವಾರ ರಾತ್ರಿ ಮೂವರು ಕೇಂದ್ರ ಸಚಿವರು ಪ್ರತಿಭಟನಾ ನಿರತ ರೈತ ಸಂಘಟನೆಗಳ ಮುಖಂಡರೊಂದಿಗೆ ಐದು ಗಂಟೆಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.

ಚಂಡೀಗಢದ ಸೆಕ್ಟರ್ 26 ರ ಮಹಾತ್ಮ ಗಾಂಧಿ ಸ್ಟೇಟ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ ನಡೆದ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಭಾಗವಹಿಸಿದ್ದರು. ಭಾನುವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ಜಾರಿ ಸೇರಿದಂತೆ ರೈತ ವಿವಿಧ ಬೇಡಿಕೆಗಳ ಕುರಿತ ಸಭೆಯಲ್ಲಿ ಕೇಂದ್ರ ಸರ್ಕಾರದ ಪರವಾಗಿ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹಾಗೂ ರೈತ ಸಂಘಟನೆಗಳ ಪರವಾಗಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಅರ್ಜುನ್ ಮುಂಡಾ, ಐದು ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆ ಶುಕ್ರವಾರ ಮುಂಜಾನೆ ಮುಕ್ತಾಯವಾಗಿದೆ. ಸಭೆಯಲ್ಲಿ ಸಕಾರತ್ಮ ಚರ್ಚೆಗಳು ನಡೆದಿವೆ. ಭಾನುವಾರ ಸಂಜೆ 6 ಗಂಟೆಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಎರಡೂ ಕಡೆಯವರು ಪ್ರತಿಯೊಂದು ವಿಷಯಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದಾತೆ. ಹಲವಾರು ವಿಷಯಗಳ ಬಗ್ಗೆ ಒಮ್ಮತಕ್ಕೆ ಬರಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದಾರೆ.

ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಮೂರನೇ ಸುತ್ತಿನ ಮಾತುಕತೆ ಇದಾಗಿದೆ. ಈ ಹಿಂದೆ ಫೆಬ್ರವರಿ 8 ಮತ್ತು 12 ರಂದು ಎರಡು ಸುತ್ತಿನ ಮಾತುಕತೆ ನಡೆದಿದ್ದು, ಯಾವುದೇ ಪ್ರಯೋಜನ ಕಂಡಿಲ್ಲ.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು “ದೆಹಲಿ ಚಲೋ” ಗೆ ಕರೆ ನೀಡಿವೆ. ಪಂಜಾಬ್‌ನಿಂದ ರೈತರು ಕಳೆದ ಮಂಗಳವಾರ ರಾಷ್ಟ್ರ ರಾಜಧಾನಿಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದ್ದು, ಪಂಜಾಬ್- ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ.

ಕೇಂದ್ರ ಸಚಿವರುಗಳ ಜೊತೆಗಿನ ಮಾತುಕತೆ ಕೊನೆಗೊಳ್ಳುವ ತನಕ ದೆಹಲಿ ಪ್ರವೇಶಸುವ ಪ್ರಯತ್ನ ಮಾಡುವುದಿಲ್ಲ. ಸರ್ಕಾರದ ನಿರ್ಧಾರ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

‘ದೆಹಲಿ ಚಲೋ’ ಹಮ್ಮಿಕೊಂಡಿರುವ ರೈತರ ವಿರುದ್ಧ ಹರಿಯಾಣ ಪೊಲೀಸರ ದೌರ್ಜನ್ಯ ಖಂಡಿಸಿ ರೈತರು ಪಂಜಾಬ್‌ನ ಹಲವೆಡೆ ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟಿಸಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರನ್) ಮತ್ತು ಬಾಕು ದಕೌಂಡ (ಧನೇರ್) “ರೈಲ್ ರೋಕೋ” ಕರೆ ನೀಡಿವೆ.

ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಹರಿಯಾಣದ ಭದ್ರತಾ ಸಿಬ್ಬಂದಿ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿರುವುದನ್ನು ವಿರೋಧಿಸಿ ರೈತರು ರೈಲ್ ರೋಕೋಗೆ ಕರೆ ಕೊಟ್ಟಿದ್ದಾರೆ. ಹರಿಯಾಣ ಪೊಲೀಸರ ಕ್ರಮವನ್ನು ಖಂಡಿಸಿ ರೈತರು ಪಂಜಾಬ್‌ನ ಹಲವು ಟೋಲ್ ಪ್ಲಾಜಾಗಳಿಗೆ ನುಗ್ಗಿ ಪ್ರತಿಭಟಿಸಿದ್ದಾರೆ.

ಒಂದೆಡೆ ಕೇಂದ್ರ ಸಚಿವರ ಜೊತೆಗಿನ ಮಾತುಕತೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಆಗಿಲ್ಲ. ಮತ್ತೊಂದೆಡೆ ರೈತರು ದಿಲ್ಲಿ ಚಲೋ ಮುಂದುವರೆಸಲು ಅಣಿಯಾಗಿದ್ದಾರೆ. ಇವೆಲ್ಲದರ ನಡುವೆ ಇಂದು (ಫೆ.16) ಗ್ರಾಮೀಣ ಭಾರತ ಬಂದ್‌ಗೆ ರೈತ ಸಂಘಟನೆಗಳು ಕರೆಕೊಟ್ಟಿವೆ.

ಇದನ್ನೂ ಓದಿ : ರೈತ ಸಂಘಟನೆಗಳಿಂದ ಇಂದು ‘ಗ್ರಾಮೀಣ ಭಾರತ ಬಂದ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...