Homeಕರ್ನಾಟಕ‘ನನಗೆ ಪಕ್ಷ ಮಾಡುತ್ತಿರುವ ದೊಡ್ಡ ಅವಮಾನವಿದು’ - ಹಿರಿಯೂರು ಬಿಜೆಪಿ ಶಾಸಕಿ

‘ನನಗೆ ಪಕ್ಷ ಮಾಡುತ್ತಿರುವ ದೊಡ್ಡ ಅವಮಾನವಿದು’ – ಹಿರಿಯೂರು ಬಿಜೆಪಿ ಶಾಸಕಿ

40 ಲಕ್ಷಕ್ಕೂ ಹೆಚ್ಚು ಗೊಲ್ಲ ಸಮುದಾಯದ ಮತಗಳಿದ್ದು, ಒಂದು ಸ್ಥಾನ ನೀಡದೇ ಇರುವುದು ತುಂಬಾ ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ

- Advertisement -
- Advertisement -

ರಾಜ್ಯದ ಮಂತ್ರಿ ಮಂಡಲ ಕೊನೆಗೂ ರಚನೆಯಾಗಿದೆ. ಇದರ ಮಧ್ಯೆ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಅವರು ಬಹಿರಂಗವಾಗಿ ಪಕ್ಷದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಜೆಪಿಯು ಹಗರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವರಿಗೆ ಮತ್ತೆ ಸಚಿವ ಸ್ಥಾನ ನೀಡಿದೆ. ನನಗೆ ಪಕ್ಷ ಮಾಡುತ್ತಿರುವ ದೊಡ್ಡ ಅವಮಾನವಿದು. ಪಕ್ಷ ಚಿತ್ರದುರ್ಗ ಜಿಲ್ಲೆಗೂ ಅವಮಾನ ಮಾಡಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ರಾಜ್ಯದ ಗೊಲ್ಲ ಸಮುದಾಯ 80% ದಷ್ಟು ಭಾಗ ಬಿಜೆಪಿಗೆ ಮತ ನೀಡಿದ್ದು ಪಕ್ಷ ಮರೆಯಬಾರದು ಇತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟು 29 ಶಾಸಕರು ರಾಜಭವನದಲ್ಲಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೊಸ ಸಂಪುಟದಲ್ಲಿ ರಾಜ್ಯದ ಒಟ್ಟು 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ನಡುವೆ ಹಲವು ಶಾಸಕರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಪಟ್ಟಿಯಲ್ಲಿ ಹೆಸರಿಲ್ಲದ ಕೆಲ ಶಾಸಕರು ಬಂಡಾಯವೆದ್ದಿದ್ದಾರೆ. ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ್ ಬೆಂಬಲಿಗರು ಪ್ರತಿಭಟನೆ ನಡೆಸಿದರೆ, ಯಡಿಯೂರಪ್ಪ ಆಪ್ತ ರೇಣುಕಾಚಾರ್ಯ ಕಣ್ಣೀರು ಹರಿಸಿದ್ದಾರೆ.

ಇದನ್ನೂ ಓದಿ: 12 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಇಲ್ಲ ಪ್ರಾತಿನಿಧ್ಯ: ಹಲವೆಡೆ ಬಂಡಾಯ ಆರಂಭ

ಕೆ. ಪೂರ್ಣಿಮಾ ಅವರು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಯವರಿಗೆ ಸಚಿವ ಸ್ಥಾನ ನೀಡಿರುವುದಕ್ಕೂ ಕಿಡಿ ಕಾರಿದ್ದಾರೆ. ಜೊಲ್ಲೆ ಅವರು ಪ್ರಸ್ತುತ ಸಂಪುಟದಲ್ಲಿರುವ ಏಕೈಕ ಮಹಿಳಾ ಮಂತ್ರಿಯಾಗಿದ್ದಾರೆ, ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು.

ತನ್ನ ಫೇಸ್‌ಬುಕ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಪೂರ್ಣಿಮಾ, “ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಮನೆಯವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗಲೂ ನಾನು ಪಕ್ಷದ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡಿ ಶಿರಾ ಬೈ ಎಲೆಕ್ಷನ್ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಕ್ಷಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೆ. ಎಂಎಲ್ಸಿ ಚುನಾವಣೆಯಲ್ಲಿ ಕೂಡಾ ನನ್ನ ಯಜಮಾನರ ಪರವಾಗಿ ಪ್ರಚಾರ ಮಾಡಿರಲಿಲ್ಲ” ಎಂದು ಹೇಳಿದ್ದಾರೆ.

“ಕಳೆದ ಬಸವಕಲ್ಯಾಣ ಉಪಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಆದೇಶದಂತೆ ಕ್ಷೇತ್ರದಲ್ಲಿ ಓಡಾಡಿ ಗೊಲ್ಲ ಸಮುದಾಯದ ಹೆಚ್ಚು ಮತಗಳನ್ನು ಕೂಡ ಕ್ಷೇತ್ರದಲ್ಲಿ ಪಕ್ಷಕ್ಕೆ ತಂದಿದ್ದೆ. ಮುಖ್ಯವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಮಾಜಿ ಪ್ರಧಾನಿಗಳನ್ನು ಸೋಲಿಸಲು ನಮ್ಮ ಸಮುದಾಯದ ಮತಗಳು ಹೆಚ್ಚು ನಿರ್ಣಯವಾಗಿದ್ದವು, ಪಕ್ಷವು ಅದನ್ನೆಲ್ಲ ಮರೆತಿದೆ” ಎಂದು ತಿಳಿಸಿದ್ದಾರೆ.

“ಹಲವು ಜಿಲ್ಲೆಯ ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಸಮುದಾಯದ ಹಾಗೂ ಇತರೆ ಹಿಂದುಳಿದ ಸಮಾಜಗಳನ್ನು ಸಂಘಟನೆ ಮಾಡಿ ಪಕ್ಷಕ್ಕೆ ಹೆಚ್ಚು ಮತಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಎಲ್ಲವನ್ನು ಮರೆತು ಪಕ್ಷ ಈಗ ಜಾಣ ಕುರುಡರಂತೆ ವರ್ತಿಸುತ್ತಿರುವುದು ನೋವುಂಟು ಮಾಡಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ ಹೊತ್ತಿರುವ ಶಶಿಕಲಾ ಜೊಲ್ಲೆಗೆ ಮತ್ತೆ ಸಚಿವ ಸ್ಥಾನ!

“ರಾಜ್ಯದಲ್ಲಿ ಗೊಲ್ಲ ಸಮುದಾಯದಿಂದ ಏಕೈಕ ವಿಧಾನಸಭಾ ಜನಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸಿದ್ದ ನಾನು ಎಂದು ಪಕ್ಷ ಬಾಹಿರ ಚಟುವಟಿಕೆಯಲ್ಲಿ ಇರಲಿಲ್ಲ. ಯಾವುದೇ ಹಗರಣ ನನ್ನ ಸುತ್ತಿ ಕೊಂಡಿರಲಿಲ್ಲ. ಇಂದು ಪಕ್ಷ ತೆಗೆದುಕೊಂಡಿರುವ ನಿರ್ಧಾರ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ಹಗರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವರಿಗೆ ಮತ್ತೆ ಸಚಿವ ಸ್ಥಾನ ನೀಡಿ, ಒಂದೇ ಮನೆಯಲ್ಲಿ ಎರಡು ಮೂರು ಅಧಿಕಾರ ನೀಡಿದೆ. ಯಾವುದೇ ಹಗರಣ ಇಲ್ಲದೆ ಇರುವ ಇನ್ನೊಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿದರೆ ಸಂತೋಷದಿಂದ ಸ್ವಾಗತಿಸುತ್ತಿದೆ” ಎಂದು ಶಶಿಕಲಾ ಜೊಲ್ಲೆ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಸ್ವಂತ ಬಲದಿಂದ ಗೆದ್ದಿರುವ ನನಗೂ ಹಾಗೂ ಇನ್ನೊಬ್ಬ ಮಹಿಳಾ ಶಾಸಕಿಯವರಿಗೂ ಇದು ಪಕ್ಷ ಮಾಡುತ್ತಿರುವ ದೊಡ್ಡ ಅವಮಾನ. ಚಿತ್ರದುರ್ಗ ಜಿಲ್ಲೆಯಲ್ಲಿ ಗೂಳಿಹಟ್ಟಿ ಶೇಖರ್‌‌, ಚಂದ್ರಪ್ಪರಂತಹ ಹಿರಿಯ ನಾಯಕರು ಮತ್ತು ಆರು ಬಾರಿ ಗೆದ್ದಂತಹ ತಿಪ್ಪಾರೆಡ್ಡಿ ಅವರಿಗಾದರೂ ಸಚಿವ ಸ್ಥಾನ ನೀಡಬಹುದಿತ್ತು” ಎಂದು ಅವರು ಹೇಳಿದ್ದಾರೆ.

“ಇದು ಪಕ್ಷವು ನಮ್ಮ ಜಿಲ್ಲೆಗೆ ಮಾಡುತ್ತಿರುವ ಅವಮಾನ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ರಾಜ್ಯದ ಗೊಲ್ಲ ಸಮುದಾಯದ 80 ರಷ್ಟು ಭಾಗವು ಬಿಜೆಪಿಗೆ ಮತ ನೀಡಿದೆ, ಇದನ್ನು ಪಕ್ಷ ಮರೆಯಬಾರದು ಇತ್ತು. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಗೊಲ್ಲ ಸಮುದಾಯದ ಮತಗಳಿದ್ದು, ಒಂದು ಸ್ಥಾನ ನೀಡದೇ ಇರುವುದು ತುಂಬಾ ನೋವುಂಟು ಮಾಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದ 5 ನೂತನ ಸಚಿವರಿವರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್ ವಿನ್ಯಾಸ, ನಿರ್ವಣಾ ವಿಧಾನದ ಬಗ್ಗೆ ಗಂಭೀರ ಪ್ರಶ್ನೆಗಳಿವೆ: ಕಾಂಗ್ರೆಸ್

0
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಸಮಗ್ರತೆ ಮತ್ತು ನೀಟ್ ಅನ್ನು ವಿನ್ಯಾಸಗೊಳಿಸಿದ, ನಿರ್ವಹಿಸುವ ವಿಧಾನದ ಬಗ್ಗೆ "ಗಂಭೀರ ಪ್ರಶ್ನೆಗಳು" ಇವೆ ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ. ಸಂಸತ್ತಿನ ಹೊಸ ಸ್ಥಾಯಿ ಸಮಿತಿಗಳು ರಚನೆಯಾದಾಗ, ಅದು ನೀಟ್,...