ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಅಮೂಲ್ಯ ಎಂಬ ಯುವತಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದಾರೆ. ಈ ವೇಳೆ ಸಂಘಟಕರು ಅವರ ಕೈಯ್ಯಿಂದ ಮೈಕನ್ನು ಕಿತ್ತು ಪ್ರತಿಭಟನಾ ಸ್ಥಳದಿಂದ ಹೊರದಬ್ಬಿದ ಘಟನೆ ನಡೆದಿದೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಲು ಅಮೂಲ್ಯ ಪ್ರಾರಂಭಿಸಿದಂತೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದು, ನಂತರದಲ್ಲಿ ಏನೋ ಹೇಳಲು ಪ್ರಯತ್ನಿಸುತ್ತಿದ್ದಂತೆ ಸಂಘಟಕರು ಆಕ್ಷೇಪಿಸಿದ್ದಾರೆ. ನಂತರ ಆಕೆ ಹಿಂದೂಸ್ತಾನ್ ಜಿಂದಾಬಾದ್ ಎಂಬ ಘೋಷಣೆಯನ್ನು ಅಮೂಲ್ಯ ಹಾಕಿದ್ದಾರೆ. ಅಲ್ಲಿಗೆ ಬಂದ ಅಸಾದುದ್ದೀನ್ ಒವೈಸಿ ಮತ್ತು ಸಂಘಟಕರು ಆಕೆಯ ಕೈಯ್ಯಿಂದ ಮೈಕನ್ನು ಕಿತ್ತುಕೊಂಡಿದ್ದಾರೆ. ಕೂಡಲೇ ಪೋಲಿಸರು ಧಾವಿಸಿ ಆಕೆಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದರು. ಮೈಕನ್ನು ಬಿಟ್ಟು ಮತ್ತೆ ವೇದಿಕೆಯ ಮುಂಭಾಗಕ್ಕೆ ಬಂದ ಅಮೂಲ್ಯ ತನ್ನ ಘೋಷಣೆಯ ವಿಚಾರವಾಗಿ ಮಾತನಾಡಲು ಆರಂಭಿಸಿದರು. ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಹೊರಗೆ ಕರೆದುಕೊಂಡು ಹೋದರು.
ಆ ನಂತರ ಮಾತನಾಡಿದ ಅಸಾವುದ್ದೀನ್ ಓವೈಸಿ ʼಈ ಮುಂಚೆ ವೇದಿಕೆಯಿಂದ ಆಡಿದ ಮಾತುಗಳನ್ನು ನಾನು ಖಂಡಿಸುತ್ತೇನೆ. ಇವರ ಜೊತೆ ನಮಗೆ ಯಾವುದೇ ಸಂಬಂಧವಿಲ್ಲ. ಇಂತಹ ಘಟನೆ ನಡೆಯುತ್ತದೆ ಎಂದು ಗೊತ್ತಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ನಾವು ಬದುಕಿರುವವರೆಗೂ ಭಾರತವೇ ನಮ್ಮ ದೇಶ. ನಮ್ಮ ಶತ್ರು ದೇಶದ ಕುರಿತು ಯಾರಾದರೂ ಮಾತಾಡಿದರೆ ನಾವು ಮುರ್ದಾಬಾದ್ ಹೇಳಬೇಕು ಅಷ್ಟೇʼ ಎಂದು ಹೇಳಿದರಲ್ಲದೇ, ಇಂತಹವರಿಗೆ ಮಾತಾಡಲು ಅವಕಾಶ ಕೊಟ್ಟ ಸಂಘಟಕರನ್ನೂ ಬೈದ ಘಟನೆ ನಡೆದಿದೆ.
ಅಮೂಲ್ಯ ಆಡಿದ ಮಾತುಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಅವರಲ್ಲಿ ಹೆಚ್ಚಿನವರು ಸಿಎಎ ವಿರೋಧಿ ಪ್ರತಿಭಟನಾಕಾರರೇ ಹೆಚ್ಚಿರುವುದು ವಿಶೇಷ.
ಅಮೂಲ್ಯ ಬೆಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಭಾಷಣ ಮಾಡುತ್ತಿದ್ದರು. ಆಕೆಯ ಭಾಷಣದ ಸ್ವರೂಪದ ಕುರಿತು ಹಿಂದೆಯೂ ಹಲವರು ಆಕ್ಷೇಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದರು.