ಗುತ್ತಿಗೆದಾರರಿಂದ ಕಸದ ತೊಟ್ಟಿಯಾಗಿದೆ ಕಾಲೇಜು ಮೈದಾನ; ಸಂಸದ-ಶಾಸಕರ ಬೆಂಬಲ

ಸಂಸದರು ಹಾಗೂ ಶಾಸಕರು ಗುತ್ತಿಗೆದಾರರ ಬೆಂಬಲಕ್ಕೆ ನಿಂತಿದ್ದಾರೆ. ಇದು ಪ್ರಾಂಶುಪಾಲರ ಉಸಿರುಗಟ್ಟಿಸುವಂತೆ ಮಾಡಿದೆ ಎಂದು ಕಾಲೇಜು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

0
ತುಮಕೂರು: ಗುತ್ತಿಗೆದಾರರಿಂದ ಕಸದ ತೊಟ್ಟಿಯಾದ ಕಾಲೇಜು ಮೈದಾನ !

ತುಮಕೂರಿನಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಉತ್ಪತ್ತಿಯಾಗುವ ಅವಶೇಷಗಳನ್ನು ತಂದು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸುರಿಯಲಾಗುತ್ತಿದ್ದು, ಇದರಿಂದ ಮೈದಾನ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿದೆ. ನಿತ್ಯವೂ ಹತ್ತಾರು ಲೋಡುಗಟ್ಟಲೆ ಅವಶೇಷ ಸುರಿಯುತ್ತಿರುವುದರಿಂದ ಮಕ್ಕಳ ಆಟಕ್ಕೆ ಮತ್ತು ಮುಂಜಾನೆ ವಾಯು ವಿಹಾರಕ್ಕೆ ಬರುವವರಿಗೆ ತೊಂದರೆಯಾಗಿದೆ ಎಂದು ನಾಗರಿಕರು ದೂರಿದ್ದಾರೆ.

ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಪೂರ್ವಭಾಗದಲ್ಲಿ ಮೈದಾನ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾಮಗಾರಿ ಮಾಡಬಾರದೆಂಬ ನಿಯಮವಿದೆ. ಹಸಿರು ಪೀಠ ಮತ್ತು ಹೈಕೋರ್ಟ್ ಆದೇಶಗಳ ನಿಯಮಗಳು ಇವೆ. ಆದರೆ ಇದೆಲ್ಲವನ್ನೂ ಉಲ್ಲಂಘಿಸಿ ಮೈದಾನದಲ್ಲಿ ಕಸ ಮತ್ತು ಚರಂಡಿ, ರಸ್ತೆ ನಿರ್ಮಾಣ ಕಾಮಗಾರಿಯ ಅವಶೇಷಗಳನ್ನು ತಂದು ಸುರಿಯುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮೈದಾನದ ಪೂರ್ವ ಭಾಗದಲ್ಲಿ ಖೋಖೋ, ಟೆನ್ನಿಸ್ ಕೋರ್ಟ್‌‌ಗಳನ್ನು ನಿರ್ಮಾಣ ಮಾಡಿದ್ದು ಅಲ್ಲಿ ನಿತ್ಯವೂ ನೂರಾರು ಮಂದಿ ಆಟವಾಡುತ್ತಿದ್ದರು. ಟೆನ್ನಿಸ್ ಮತ್ತು ಖೋಖೋ ತರಬೇತಿ ಪಡೆಯುತ್ತಿದ್ದರು. ಮೈದಾನದ ಅಂಚಿನದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 90 ಲಕ್ಷ ರೂಪಾಯಿ ವೆಚ್ಚದಲ್ಲಿ ವಾಕಿಂಗ್ ಪಾಥ್ ನಿರ್ಮಾಣ ಮಾಡಿದೆ. ಈಗ ಮಣ್ಣು ಮತ್ತು ಅವಶೇಷಗಳನ್ನು ಸುರಿದಿರುವುದರಿಂದ ವಾಕಿಂಗ್ ಪಾತ್, ಟಿನ್ನಿಸ್, ಖೋಖೋ ಕೋರ್ಟ್ ಗಳು ಸಂಪೂರ್ಣ ಮುಚ್ಚಿ ಹೋಗಿವೆ.

ರಸ್ತೆ, ಚರಂಡಿ ಕಾಮಗಾರಿಯ ಅವಶೇಷಗಳನ್ನು ಬೇರೆ ಕಡೆ ಸಾಗಿಸಬೇಕು. ಅದು ಕಾಮಗಾರಿ ಗುತ್ತಿಗೆ ಪಡೆದವರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಗುತ್ತಿಗೆದಾರರರಿಗೆ ಸಂಸದರು ಮತ್ತು ಶಾಸಕರ ಬೆಂಬಲ ಇದೆ ಎಂಬ ಕಾರಣಕ್ಕೆ ಕಸ, ಮಣ್ಣು, ಕಲ್ಲುಗಳನ್ನು ಸರ್ಕಾರಿ ಜಾಗದಲ್ಲಿ ಸುರಿಯುತ್ತಿರುವುದು ಸರಿಯಲ್ಲ. ಇದು ಸಾರ್ವಜನಿಕ ಸ್ಥಳ. ಇಂತಹ ಕಡೆ ಕಸ ಇತ್ಯಾದಿ ಸುರಿಯಬಾರದು ಎಂಬ ನಿಯಮ ಇದೆ. ಆದರೆ ಇದ್ಯಾವುದನ್ನು ಲೆಕ್ಕಿಸದೆ ಗುತ್ತಿಗೆ ದಾರರು ಅವಶೇಷಗಳನ್ನು ಸುರಿಯುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ನಾಗಣ್ಣ ದೂರಿದ್ದಾರೆ.

ಕಾಲೇಜು ಆವರಣದಲ್ಲಿ ಗುತ್ತಿಗೆದಾರರು ಕಸ, ಅವಶೇಷ ಸುರಿಯುತ್ತಿದ್ದರೂ ಕಾಲೇಜು ಪ್ರಾಂಶುಪಾಲರು ಅವರಿಗೆ ಹೇಳಲಾರದಂತಹ ಅಸಹಾಯಕತೆ ಸಿಲುಕಿದ್ದಾರೆ. ಕಾಲೇಜು ಎಸ್ ಡಿ.ಎಂ.ಸಿ ಗೆ ಅಧ್ಯಕ್ಷರಾದ ಶಾಸಕ ಜ್ಯೋತಿ ಗಣೇಶ್ ಹಾಗೂ ಸಂಸದ ಬಸವರಾಜ್ ಈ ಇಬ್ಬರೂ ಗುತ್ತಿಗೆದಾರರ ಬೆಂಬಲಕ್ಕೆ ನಿಂತಿದ್ದಾರೆ. ಇದು ಪ್ರಾಂಶುಪಾಲರ ಉಸಿರುಗಟ್ಟಿಸುವಂತೆ ಮಾಡಿದೆ ಎಂದು ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿಯೊಬ್ಬರು ನಾನುಗೌರಿ.ಕಾಮ್‌ಗೆ ತಿಳಿಸಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು ಮತ್ತು ಶಾಸಕರೇ ಗುತ್ತಿಗೆದಾರರಿಗೆ ಬೆಂಬಲ ನೀಡಿರುವುದು ಸಾರ್ವಜನಿಕರು ಬಹಿರಂಗವಾಗಿ ಪ್ರಶ್ನಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಶಾಸಕ ಸಂಸದರ ಮೌನ ಸಮ್ಮತಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಅವಶೇಷ ಸುರಿಯುತ್ತಿರುವುದರಿಂದ ಆಟವಾಡಲು ಮತ್ತು ವಾಕಿಂಗ್‌ಗೂ ತೊಂದರೆಯಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಬೇರೆ ಚಟುವಟಿಕೆಗಳನ್ನು ಮಾಡಬಾರದೆಂಬ ನಿಯಮವಿದೆ. ಇದಕ್ಕೆ ವಿರುದ್ದವಾಗಿ ಇಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ನಗರದ ಹೃದಯ ಭಾಗದಲ್ಲಿರುವ ಮೈದಾನ ನಿಧಾನವಾಗಿ ಕಡಿಮೆ ಆಗುತ್ತಿದೆ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸ ಬೇಕಾದವರೇ ಹೀಗೆ ಜವಾಬ್ದಾರಿ ಮರೆತು ನಡೆದು ಕೊಂಡರೆ ನಾವೇನು ಮಾಡಬೇಕು ಎಂದು ಜನತೆ ಪ್ರಶ್ನಿಸಿದ್ದಾರೆ.


ಓದಿ: ಸಬ್ ಜೈಲಿನಲ್ಲಿ ಒಂದು ದಿನ ಕಳೆದ ಕೊರೊನಾ ಸೋಂಕಿತ?


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here