Homeಮುಖಪುಟನಾವು ಹೇಳಬಹುದಾದ ಮತ್ತು ಹೇಳಬಾರದ ವಿಷಯಗಳು - ಅರುಂಧತಿ ರಾಯ್

ನಾವು ಹೇಳಬಹುದಾದ ಮತ್ತು ಹೇಳಬಾರದ ವಿಷಯಗಳು – ಅರುಂಧತಿ ರಾಯ್

ಇರಾನಿನಲ್ಲಿ ಹಿಜಾಬ್ ಕಡ್ಡಾಯ ಮತ್ತು ಭಾರತದಲ್ಲಿ ನಿಷೇಧ ವಿರೋಧಾಭಾಸದಂತೆ ಕಾಣಬಹುದು. ಅದು ನಿಜವಲ್ಲ. ಹಿಜಾಬ್ ಧರಿಸುವಂತೆ ಅಥವಾ ಹಿಜಾಬ್ ತೆಗೆಯುವಂತೆ ಒತ್ತಾಯಿಸುವುದು ಎರಡೂ ಹಿಜಾಬಿಗೆ ಸಂಬಂಧಿಸಿದ ವಿಷಯಗಳೇ ಅಲ್ಲ. ಅದು ದಬ್ಬಾಳಿಕೆಯ ವಿಷಯ: ಅವಳಿಗೆ ಬಟ್ಟೆ ಹಾಕಿಸಿ, ಅವಳ ಬಟ್ಟೆ ಬಿಚ್ಚಿಸಿ ಮಹಿಳೆಯ ಮೇಲೆ ಪೊಲೀಸ್‌ಗಿರಿ ಮಾಡುವ ಬಹಳ ಹಳೆಯ ಚಾಳಿ.

- Advertisement -
- Advertisement -

ಇತರರಿಗಾಗಿ ದನಿಯೆತ್ತಿ ಮಾತನಾಡುವ ಬದ್ಧತೆಯ ಐಕ್ಯಮತ್ಯವು ಇಂದು ಹಿಂದೆಂದಿಗಿಂತಲೂ ಮುಖ್ಯವಾಗಿದೆ. ಆದರೆ, ಇದೂ ಕೂಡಾ ಇಂದು ಒಂದು ಅಪಾಯಕಾರಿ ಕೆಲಸವಾಗಿದೆ ಎನ್ನುತ್ತಾರೆ ಪ್ರಸಿದ್ಧ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್. ಇದು ಅವರು ಸೆಪ್ಟೆಂಬರ್ 30, 2022ರಂದು ಲಂಡನ್‌ನ ಕಾನ್ವೇಹಾಲ್‌‌ನಲ್ಲಿ ನೀಡಿದ ಸ್ಟುವರ್ಟ್ ಹಾಲ್ ಸ್ಮಾರಕ ಉಪನ್ಯಾಸದ ಪೂರ್ಣ ಪಾಠದ ಮೊದಲ ಭಾಗ.

***

ಇಂದು ಸ್ಟುವರ್ಟ್ ಹಾಲ್ ಅವರ ಸ್ಮರಣಾರ್ಥ ಇಲ್ಲಿ ನನ್ನನ್ನು ಮಾತನಾಡಲು ಕರೆದಿರುವುದಕ್ಕೆ ಧನ್ಯವಾದಗಳು. ಇದು ಸಾಧ್ಯವಾಗುವಂತೆ ಮಾಡಲು ನಾನು, ಈಗ ಅನಿಸುತ್ತಿರುವಂತೆ- ವರ್ಷಗಳಿಂದ ಯತ್ನಿಸುತ್ತಿದ್ದೇನೆ. ಇಷ್ಟೊಂದು ಸಹ ಮಾನವರ ಜೊತೆಗೆ ಒಂದೇ ಕೊಠಡಿಯಲ್ಲಿ ಇರುವ ಸಂತಸವನ್ನು ನಾನು ಇನ್ನೆಂದಿಗೂ ಲಘುವಾಗಿ ಪರಿಗಣಿಸಲಾರೆ. ಕೋವಿಡ್ ಸಾಂಕ್ರಾಮಿಕ ಪಿಡುಗು ಬಹುಮಟ್ಟಿಗೆ ಮಾಸಿಹೋಗುತ್ತಿದೆ. ಆದರೆ, ನಮ್ಮಲ್ಲಿ ಬಹಳಷ್ಟು ಜನರು ಅದು ತನ್ನ ಹಿಂದೆ ಬಿಟ್ಟುಹೋದ ಯಾತನೆಯ ಅಂದಾಜು ಮಾಡಲು ಇನ್ನೂ ಹೆಣಗುತ್ತಿದ್ದೇವೆ. ನಾನು ಯಾವತ್ತೂ ಸ್ಟುವರ್ಟ್ ಹಾಲ್ ಅವರನ್ನು ಭೇಟಿ ಮಾಡಿಲ್ಲ ಎಂದು ನನಗೆ ನಂಬಲಾಗುತ್ತಿಲ್ಲ. ಆದರೆ, ಅವರ ಕೃತಿಗಳನ್ನು ಓದುವುದರಿಂದಲೇ ನಾವು ಬಹಳಷ್ಟು ಸಮಯವನ್ನು ಜೊತೆಗೆಯೇ ಹಲವಾರು ವಿಷಯಗಳ ಕುರಿತು ನಗುತ್ತಾ ಕಳೆಯುತ್ತಿದ್ದೆವು ಎಂಬ ಭಾವನೆ ಉಂಟಾಗುತ್ತದೆ.

ಈ ಉಪನ್ಯಾಸದ ಮುಖ್ಯ ಶೀರ್ಷಿಕೆಯು ನಾನು ನಟ ಜಾನ್ ಕುಸಾಕ್ ಜೊತೆಗೆ ಬರೆದ ಚಿಕ್ಕ ಪುಸ್ತಕದ ಶೀರ್ಷಿಕೆಯೂ ಆಗಿದೆ. ಅದು, ನಾನು ಮತ್ತು ಅವರು ಡಿಸೆಂಬರ್ 2013ರಲ್ಲಿ ಎಡ್ವರ್ಡ್ ಸ್ನೋಡೆನ್ ಅವರನ್ನು ಭೇಟಿಯಾಗಲು ರಷ್ಯಾಕ್ಕೆ ಮಾಡಿದ ಯಾತ್ರೆಯ ಕುರಿತಾಗಿತ್ತು. ನಮ್ಮ ಇನ್ನೊಬ್ಬ ಜೊತೆಗಾರ ಡೇನಿಯಲ್ ಎಲಿಸ್‌ಬರ್ಗ್ ಆಗಿದ್ದರು. ನಿಮ್ಮಲ್ಲಿ ಎಳೆಯವರಿಗಾಗಿ, ಅವರನ್ನು ನೆನಪಿಸಲು-  ಅವರು ಅವರ ಕಾಲದ ಸ್ನೋಡೆನ್ ಆಗಿದ್ದರು- ವಿಯೆಟ್ನಾಂ ಯುದ್ಧಕಾಲದಲ್ಲಿ ಪೆಂಟಗನ್ ರಹಸ್ಯ ದಾಖಲೆಗಳನ್ನು ಸಾರ್ವಜನಿಕರಿಗೆ ಬಹಿರಂಗಗೊಳಿಸಿದ ವಿಸಿಲ್ ಬ್ಲೋವರ್ ಅವರಾಗಿದ್ದರು. ನಾವು ಒಂದು ಕಣ್ಗಾವಲು ರಾಜ್ಯದತ್ತ ನಿದ್ದೆಯಲ್ಲಿ ನಡೆಯುತ್ತಿದ್ದೇವೆ ಎಂದು ನಮ್ಮನ್ನು ಎಚ್ಚರಿಸಿದ್ದ ಸ್ನೋಡೆನ್ ಇನ್ನೂ ಮಾಸ್ಕೋದಲ್ಲಿ ತನ್ನ ದೇಶಭ್ರಷ್ಟ ಜೀವನವನ್ನು ಮುಂದುವರಿಸಿದ್ದಾರೆ. ನಮ್ಮ ಚಲನವಲನಗಳನ್ನು ಗುರುತಿಸಿ, ನಮ್ಮನ್ನು ನಿಯಂತ್ರಿಸಲು, ಏಕರೂಪಗೊಳಿಸಲು, ಸಾಧುಪ್ರಾಣಿಗಳನ್ನಾಗಿ ಮಾಡಲು ಸಾಧ್ಯವಾಗುವಂತೆ, ನಮ್ಮ ಮೇಲೆ ಗುಪ್ತಚರ್ಯೆ ಮಾಡಿ, ನಮ್ಮ ಅತ್ಯಂತ ಖಾಸಗಿ ಮಾಹಿತಿಗಳನ್ನು ದಾಖಲಿಸಿಟ್ಟುಕೊಂಡು, ಪ್ರಸಾರ ಮಾಡುವ, ನಮ್ಮ ದೇಹದ ಯಾವದೋ ಒಂದು ಅಂಗವೋ ಎಂಬಂತೆ ಅನಿವಾರ್ಯವಾಗಿಬಿಟ್ಟಿರುವ ನಮ್ಮ ಚಿಕ್ಕ ಮೊಬೈಲ್ ಫೋನ್ ಸಂಗಾತಿಯ ಮೂಲಕ ನಾವು- ಅವರು ಎಚ್ಚರಿಸಿದಂತಾ ಕಣ್ಗಾವಲು ರಾಜ್ಯಕ್ಕೆ ಉತ್ಸಾಹದಿಂದಲೇ ಎಡವಿಬಿದ್ದಿದ್ದೇವೆ. ಇದು ಸರಕಾರದಿಂದ ಮಾತ್ರ ನಡೆಯುತ್ತಿಲ್ಲ. ಒಬ್ಬರಿಂದ ಇನ್ನೊಬ್ಬರ ಮೇಲೂ ನಡೆಯುತ್ತಿದೆ.

ನಿಮ್ಮ ಯಕೃತ್ತು ಅಥವಾ ಮೂತ್ರಕೋಶವು ನಿಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ ಎಂದು ಊಹಿಸಿಕೊಳ್ಳಿ. ಆಗ ನೀವು ಮಾರಣಾಂತಿಕವಾಗಿ ಅಸ್ವಸ್ಥರಾಗಿದ್ದೀರಿ ಎಂದು ವೈದ್ಯರು ನಿಮಗೆ ಹೇಳುತ್ತಾರೆ. ಅಂತಾ ಒಂದು ಬಂಧನದಲ್ಲಿ ನಾವೀಗ ಸಿಲುಕಿಕೊಂಡಿದ್ದೇವೆ. ಅದು ಇಲ್ಲದೇ ನಾವು ಬದುಕುವಂತಿಲ್ಲ; ಅದರೆ, ಅದು ನಮ್ಮನ್ನು ಮುಗಿಸುತ್ತಿದೆ. ನನ್ನ ಉಪನ್ಯಾಸದ ಮೊದಲ ಭಾಗವು ನಾವು ಮಾಡಬಹುದಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ಇರುತ್ತದೆ. ಎರಡನೆಯದು ನಾವು ತಿಳಿದಿರುವಂತ ಪ್ರಪಂಚವನ್ನು ಕಿತ್ತು ಭಗ್ನಗೊಳಿಸುವುದರ ಕುರಿತು ಇರುತ್ತದೆ.

ಹೇಳಲಾರದ ವಿಷಯಗಳನ್ನು ಹೇಳಿದವರಿಗೂ ಮಾಡಿದವರಿಗೂ ಇದು ಕೆಟ್ಟ ವರ್ಷವಾಗಿದೆ. ಇರಾನಿನಲ್ಲಿ 22 ವರ್ಷ ಪ್ರಾಯದ ಮಹ್ಸಾ ಹಬೀಬಿ ಅಧಿಕೃತವಾಗಿ ಆದೇಶಿಸವಾಗಿರುವ ರೀತಿಯಲ್ಲಿ ಹಿಜಾಬ್ ಧರಿಸಿಲ್ಲ ಎಂಬ “ಪಾಪ”ಕ್ಕಾಗಿ ಅಲ್ಲಿ ನೈತಿಕ ಪೊಲೀಸ್ ವಶದಲ್ಲಿ ಇರುವಾಗಲೇ ಸತ್ತರು. ನಂತರ ನಡೆದ ಮತ್ತು ಇನ್ನೂ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಇನ್ನಷ್ಟು ಜನರು ಸತ್ತರು.

ಇದೇ ಹೊತ್ತಿಗೆ ಭಾರತದಲ್ಲಿ, ದಕ್ಷಿಣ ರಾಜ್ಯವಾದ ಕರ್ನಾಟಕದಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ತಮ್ಮ ಅಸ್ಮಿತೆಗಾಗಿ ತರಗತಿಯಲ್ಲಿ ಹಿಜಾಬ್ ಧರಿಸಿದರೆ, ಬಲಪಂಥೀಯ ಗಂಡಸರು ಅವರನ್ನು ದೈಹಿಕವಾಗಿ ಬೆದರಿಸುತ್ತಾರೆ. ಇದು ನಡೆಯುತ್ತಿರುವುದು ಹಿಂದೂಗಳು ಮತ್ತು ಮುಸ್ಲಿಮರು ಶತಮಾನಗಳಿಂದ ಸಾಮರಸ್ಯದಿಂದ ಬದುಕುತ್ತಿದ್ದ ಮತ್ತು ಈಗ ಅಪಾಯಕಾರಿಯಾಗಿ ಧ್ರುವೀಕರಣಗೊಂಡಿರುವ ಸ್ಥಳದಲ್ಲಿ.

ಎರಡೂ ಸಂದರ್ಭಗಳಲ್ಲಿ- ಇರಾನಿನಲ್ಲಿ ಹಿಜಾಬನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸುತ್ತಿರುವುದು ಮತ್ತು ಭಾರತ ಮತ್ತಿತರ ದೇಶಗಳಲ್ಲಿ ಅದನ್ನು ನಿಷೇಧಿಸುತ್ತಿರುವುದು ವಿರೋಧಾಭಾಸದಂತೆ ಕಾಣಬಹುದು. ಅದು ನಿಜವಾಗಿಯೂ ಹಾಗಿಲ್ಲ. ಹಿಜಾಬ್ ಧರಿಸುವಂತೆ ಒಬ್ಬಳು ಮಹಿಳೆಯನ್ನು ಒತ್ತಾಯಿಸುವುದು ಮತ್ತು ಅದನ್ನಾಕೆ ಧರಿಸದಂತೆ ಒತ್ತಾಯಿಸುವುದು ಎರಡೂ ಹಿಜಾಬಿಗೆ ಸಂಬಂಧಿಸಿದ ವಿಷಯಗಳೇ ಅಲ್ಲ. ಅದು ದಬ್ಬಾಳಿಕೆಯ ವಿಷಯ: ಅವಳಿಗೆ ಬಟ್ಟೆ ಹಾಕಿಸಿ, ಅವಳ ಬಟ್ಟೆ ಬಿಚ್ಚಿಸಿ. ಇದು ಮಹಿಳೆಯ ಮೇಲೆ ಪೊಲೀಸ್‌ಗಿರಿ ಮಾಡುವ ಬಹಳ ಹಳೆಯ ಚಾಳಿ.

ಆಗಸ್ಟ್‌ನಲ್ಲಿ ಸಲ್ಮಾನ್ ರಶ್ದಿಯವರ ಮೇಲೆ ಅವರ “ಸೆಟಾನಿಕ್ ವರ್ಸಸ್” ಪುಸ್ತಕಕ್ಕಾಗಿ ಇಸ್ಲಾಮಿಕ್ ಮತಾಂಧನೊಬ್ಬ ಉತ್ತರ ನ್ಯೂಯಾರ್ಕ್‌ನಲ್ಲಿ ಅಮಾನುಷವಾಗಿ ದಾಳಿ ಮಾಡಿದ. ಈ ಪುಸ್ತಕ ಮೊದಲ ಬಾರಿ 1988ರಲ್ಲಿ ಪ್ರಕಟವಾಗಿತ್ತು. 1989ರಲ್ಲಿ ಇರಾನಿನ ಇಸ್ಲಾಮಿಕ್ ಕ್ರಾಂತಿ ಮತ್ತು ಇಸ್ಲಾಮಿಕ್  ಗಣರಾಜ್ಯದ ಮೊದಲ ನಾಯಕ ಅಯಾತೊಲ್ಲ ಖೊಮೇನಿ- ರಶ್ದಿಯವರನ್ನು ಕೊಲ್ಲಲು ಫತ್ವಾ ಹೊರಡಿಸಿದ್ದರು. ಇಷ್ಟೆಲ್ಲಾ ವರ್ಷಗಳ ನಂತರ, ಅವರ ಪುಸ್ತಕ ಉಂಟುಮಾಡಿದ್ದ ಭಾವೋನ್ಮಾದ ಮತ್ತು ಸಿಟ್ಟು ಶಮನವಾಗಿದೆಯೆಂದು ಅವರು ನಿಧಾನವಾಗಿ ತನ್ನ ಅಡಗುದಾಣದಿಂದ ಹೊರಬಂದ ಹೊತ್ತಿನಲ್ಲಿ ದಾಳಿ ನಡೆದಿದೆ. 75 ವರ್ಷ ಪ್ರಾಯದ ರಶ್ದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮತ್ತು ಆರಾಮವಾಗಿ ಇದ್ದಾರೆ ಎಂಬ ಆರಂಭಿಕ ಸುದ್ದಿಯ ಬಳಿಕ ಬೇರಾವುದೇ ಸುದ್ದಿಯೇ ಇಲ್ಲ. ಅವರು ಸಂಪೂರ್ಣವಾಗಿ ಗುಣಮುಖರಾಗಿ ತನ್ನೆಲ್ಲಾ ಶಕ್ತಿಯೊಂದಿಗೆ ಸಾಹಿತ್ಯ ಪ್ರಪಂಚಕ್ಕೆ ಮರಳುತ್ತಾರೆ ಎಂದು ಆಶಿಸಬಹುದಷ್ಟೇ. ಯುರೋಪ್ ಮತ್ತು ಯುಎಸ್ಎಯ ಸರಕಾರಗಳ ನಾಯಕರು- ಸ್ವಲ್ಪ ಸ್ವಾರ್ಥದಿಂದಲೇ- ಬಲವಾಗಿ ರಶ್ದಿಯವರ ಬೆಂಬಲಕ್ಕೆ ಬಂದಿದ್ದು, “ಅವರ ಹೋರಾಟ, ನಮ್ಮ ಹೋರಾಟವೂ” ಎಂದು ಘೋಷಿಸಿದ್ದಾರೆ.

ಇದೇ ಹೊತ್ತಿಗೆ ಆ ದೇಶಗಳ ಸೈನಿಕರ- ಅದಕ್ಕಿಂತಲೂ ಹೆಚ್ಚು ಕ್ರೂರವಾದ, ಸಾವಿರಾರು ಜನರ ಸಾವಿಗೆ ಕಾರಣವಾದ ಯುದ್ಧಾಪರಾಧಗಳನ್ನು ಬಯಲುಗೊಳಿಸಿದ ಜೂಲಿಯನ್ ಅಸಾಂಜ್, ತೀರಾ ಅನಾರೋಗ್ಯದಿಂದ ಇದ್ದು, ಮರಣದಂಡನೆ ಅಥವಾ ಹಲವಾರು ಜೀವಾವಧಿ ಶಿಕ್ಷೆಗಳನ್ನು ಎದುರಿಸಬೇಕಾದ ಯುಎಸ್ಎಗೆ ಗಡಿಪಾರಿನ ಭಯದಲ್ಲಿ ಬೆಲ್‌ಮಾರ್ಷ್‌ನ ಜೈಲಿನಲ್ಲಿ ಬಂಧನದಲ್ಲಿ ಇದ್ದಾರೆ. “ನಾಗರಿಕತೆಗಳ ಸಂಘರ್ಷ”, “ಪ್ರಜಾಪ್ರಭುತ್ವ ಮತ್ತು ಕರಾಳತೆಗಳ ಯುದ್ಧ” ಇತ್ಯಾದಿ ಕ್ಲೀಷೆಗಳಲ್ಲಿ ರಶ್ದಿ ಮೇಲಿನ ಭಯಾನಕ ದಾಳಿಯನ್ನು ಬಣ್ಣಿಸುವುದಕ್ಕೆ ಮೊದಲೇ ನಾವು ನಿಂತುಬಿಡಬೇಕು‌. ಯಾಕೆಂದರೆ, ಈ ತಥಾಕಥಿತ ಮುಕ್ತರಾಷ್ಟ್ರಗಳ ದೇವದೂತರುಗಳು ನಡೆಸಿದ ಆಕ್ರಮಣಗಳಲ್ಲಿ ಲಕ್ಷಾಂತರ ಜನರು ಸತ್ತಿದ್ದಾರೆ. ಈ ಲಕ್ಷಾಂತರ ಜನರಲ್ಲಿ ಲೇಖಕರು, ಕವಿಗಳು, ಕಲಾವಿದರು ಕೂಡಾ ಸೇರಿದ್ದಾರೆ.

ಭಾರತದ ಸುದ್ದಿಯ ಕುರಿತು  ಹೇಳುವುದಾದರೆ, ಟಿವಿ ಕಾರ್ಯಕ್ರಮಗಳಲ್ಲಿ ಗೂಂಡಾಗಿರಿ ತೋರಿಸುವ ದೇಶದ ಆಳುವ ಹಿಂದೂ ರಾಷ್ಟ್ರೀಯವಾದಿ ಪಕ್ಷ ಬಿಜೆಪಿಯ ವಕ್ತಾರೆ ನೂಪುರ್ ಶರ್ಮಾ, ನೋವುಂಟು ಮಾಡುವುದೇ ಉದ್ದೇಶವೆಂಬಂತೆ ಕಾಣುವ ಆಕ್ರಮಣಕಾರಿ ಕಾರ್ಯಕ್ರಮಗಳಲ್ಲಿ ಹಲವಾರು ಬಾರಿ ಪ್ರವಾದಿ ಮೊಹಮ್ಮದರ ಮೇಲೆ ನಿಂದನಾತ್ಮಕ ಹೇಳಿಕೆ ನೀಡಿದರು.

ಇದರ ಕುರಿತು ಅಂತರರಾಷ್ಟ್ರೀಯ ಬೊಬ್ಬೆಯೆದ್ದು, ಹಲವಾರು ಜೀವಬೆದರಿಕೆಗಳ ನಂತರ ಅವರು ಸಾರ್ವಜನಿಕ ಜೀವನದಿಂದ ಹಿಂದೆ ಸರಿದಿದ್ದಾರೆ. ಆದರೆ, ಅವರನ್ನು ಬೆಂಬಲಿಸಿದ ಇಬ್ಬರು ಹಿಂದೂ ಗಂಡಸರ ಶಿರಚ್ಛೇದನ ಮಾಡಲಾಯಿತು ಮತ್ತು ನಂತರದ ದಿನಗಳಲ್ಲಿ ಕೆಲವು ಮುಸ್ಲಿಂ ಮತಾಂಧರು ಗುಂಪುಸೇರಿ “ತನ್ ಸೆ ಸರ್ ಜುದಾ” (ದೇಹದಿಂದ ತಲೆಗೆ ವಿದಾಯ) ಎಂಬ ಘೋಷಣೆ ಕೂಗಿದರು. ದೇವನಿಂದನೆಯ ವಿರುದ್ಧ ಕಾನೂನು ತರಬೇಕೆಂದು ಸರಕಾರವನ್ನು ಒತ್ತಾಯಿಸಿದರು. ಬಹುಶಃ ಇದರಷ್ಟು ಕುಶಿಯ ವಿಷಯ ಸರಕಾರಕ್ಕೆ ಬೇರೆ ಇರಲಾರದು ಎಂಬುದು ಅವರ ತಲೆಗೆ ಹೊಳೆದಿರಲಾರದು.

ನಿಷೇಧ ಮತ್ತು ಹತ್ಯೆಗಳನ್ನು ವೈಭವೀಕರಿಸುವವರು ಅವರು ಮಾತ್ರವೇ ಅಲ್ಲ. ತನ್ನ ಮನೆಯ ಹೊರಗೆ ಹಿಂದೂ ಮತಾಂಧರ ಗುಂಡಿಗೆ ಬಲಿಯಾದ ಪತ್ರಕರ್ತೆ ಮತ್ತು ನನ್ನ ಗೆಳತಿ ಗೌರಿ ಲಂಕೇಶ್ ಅವರ ಹತ್ಯೆಯ ಐದನೇ ವರ್ಷದ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ನಾನು ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದೆ. ಅವರ ಹತ್ಯೆಯು ಒಂದೇ ಕರಾಳ ಸಂಘಟನೆಗೆ ಸಂಬಂಧ ಹೊಂದಿರುವಂತೆ ಕಂಡುಬರುವ ಹತ್ಯಾ ಸರಣಿಯಲ್ಲಿ ಒಂದಾಗಿತ್ತು. ವೈದ್ಯರು ಮತ್ತು ಪ್ರಸಿದ್ಧ ವಿಚಾರವಾದಿಯಾಗಿದ್ದ ಡಾ. ನರೇಂದ್ರ ದಾಬೋಲ್ಕರ್ ಅವರನ್ನು 2013ರಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಲೇಖಕ ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಕಾಮ್ರೇಡ್ ಗೋವಿಂದ ಪನ್ಸಾರೆ ಅವರನ್ನು ಫೆಬ್ರವರಿ 2015ರಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಮತ್ತು ಅದೇ ವರ್ಷ ಆಗಸ್ಟ್‌ನಲ್ಲಿ ಕನ್ನಡದ ಪ್ರಸಿದ್ಧ ವಿದ್ವಾಂಸರಾದ ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಟ್ಟು ಕೊಲ್ಲಲಾಗಿತ್ತು.

ಹತ್ಯೆಯು ಮಾತ್ರವೇ ನಾವು ಅನುಭವಿಸುತ್ತಿರುವ ಈ ನಿಷೇಧದ ಏಕೈಕ ರೂಪವಲ್ಲ. 2022ನೇ ವರ್ಷದ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚಿಯಲ್ಲಿ ಭಾರತವು 180ರಲ್ಲಿ 150ನೇ ಸ್ಥಾನದಲ್ಲಿ, ಅಂದರೆ, ಪಾಕಿಸ್ತಾನ, ಶ್ರೀಲಂಕಾ ಮತ್ತು ಮ್ಯಾನ್ಮಾರ್‌ಗಿಂತಲೂ ಕೆಳಗಿನ ಸ್ಥಾನದಲ್ಲಿದೆ. ನಾವು ಪೊಲೀಸ್‌ಗಿರಿಗೆ ಒಳಗಾಗುತ್ತಿರುವುದು ಕೇವಲ ಸರಕಾರದಿಂದ ಮಾತ್ರವೇ ಅಲ್ಲ, ಹಾದಿಬೀದಿ ಗುಂಪುಗಳಿಂದ, ಸಾಮಾಜಿಕ ಮಾಧ್ಯಮಗಳ ಟ್ರೋಲ್‌ಗಳಿಂದ ಮತ್ತು ವಿಪರ್ಯಾಸ ಎಂಬಂತೆ ಸ್ವತಃ ಮಾಧ್ಯಮಗಳಿಂದ ಕೂಡಾ.

ನಾವು ಆಗಾಗ “ರೇಡಿಯೋ ರುವಾಂಡ” ಎಂದು ಕರೆಯುವ ನೂರಾರು 24×7 ಟಿವಿ ಸುದ್ದಿ ಚಾನೆಲ್‌ಗಳಲ್ಲಿ ನಮ್ಮ ಅರಚುವ ನಿರ್ವಾಹಕರು ಮುಸ್ಲಿಮರ, “ದೇಶದ್ರೋಹಿಗಳ” ವಿರುದ್ಧ ಸಿಟ್ಟು ಕಾರುತ್ತಾರೆ. ಭಿನ್ನಮತ ಸೂಚಿಸುವವರನ್ನು ಬಂಧಿಸಲು, ಕೈಬಿಡಲು, ಶಿಕ್ಷಿಸಲು ಕರೆಕೊಡುತ್ತಾರೆ. ಆವರು ಸಂಪೂರ್ಣ ರಕ್ಷಣೆಯೊಂದಿಗೆ, ಯಾವುದೇ ಉತ್ತರದಾಯಿತ್ವ ಇಲ್ಲದೇ ನೂರಾರು ಜೀವನಗಳನ್ನು, ಗೌರವಗಳನ್ನು ಹಾಳುಗೆಡವಿದ್ದಾರೆ. ಸಾಮಾಜಿಕ ಕಾರ್ಯಕರ್ತರು, ಕವಿಗಳು, ಬುದ್ಧಿಜೀವಿಗಳು, ವಕೀಲರು ಮತ್ತು ವಿದ್ಯಾರ್ಥಿಗಳನ್ನು ಪ್ರತೀದಿನವೂ ಬಂಧಿಸಲಾಗುತ್ತಿದೆ. ಯಾವುದೇ ಸುದ್ದಿ ಹೊರಬರದ ಕಾಶ್ಮೀರ ಕಣಿವೆಯಂತೂ ಒಂದು ದೊಡ್ಡ ಸೆರೆಮನೆಯಾಗಿದೆ. ಬೇಗನೇ ಅಲ್ಲಿ ನಾಗರಿಕರಿಗಿಂತ ಹೆಚ್ಚು ಸೈನಿಕರು ಇರಲಿದ್ದಾರೆ.

ಕಾಶ್ಮೀರಿಗಳ ಪ್ರತಿಯೊಂದು ಖಾಸಗಿ ಮತ್ತು ಸಾರ್ವಜನಿಕ ಸಂವಹನವು, ಉಸಿರಿನ ಲಯವು ಕೂಡಾ ಮೇಲುಸ್ತುವಾರಿಯಲ್ಲಿ ನಡೆಯುತ್ತಿದೆ. ಶಾಲೆಗಳಲ್ಲಿ ಗಾಂಧಿಯನ್ನು ಪ್ರೀತಿಸಲು ಕಲಿಸುವ ಸೋಗಿನಲ್ಲಿ ಮುಸ್ಲಿಂ ಮಕ್ಕಳಿಗೆ ಹಿಂದೂ ಭಜನೆಗಳನ್ನು ಹಾಡಲು ಕಲಿಸಲಾಗುತ್ತಿದೆ. ಯಾಕೋ ನಾನು ಕಾಶ್ಮೀರವನ್ನು ಕುರಿತು ಯೋಚಿಸುವಾಗ ನನಗೆ- ಅಟ್ಟಿ ಕಟ್ಟಲು ಸುಲಭವಾಗುವಂತೆ ಪ್ರಪಂಚದ ಕೆಲವು ಭಾಗಗಳಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಚಚ್ಚೌಕದ ಅಚ್ಚುಗಳಲ್ಲಿ ಬೆಳೆಯುವಂತೆ ಹೇಗೆ ಮಾಡುತ್ತಾರೆ ಎಂಬುದು ನೆನಪಾಗುತ್ತದೆ.  ಕಾಶ್ಮೀರ ಕಣಿವೆಯಲ್ಲಿ ಭಾರತ ಸರಕಾರವು ಈ ಪ್ರಯೋಗವನ್ನು ಕಲ್ಲಂಗಡಿಗೆ ಬದಲಾಗಿ ಕೋವಿ ತೋರಿಸಿ, ಮನುಷ್ಯರ ಮೇಲೆ ಮಾಡುತ್ತಿರುವಂತಿದೆ. ಕೌಬೆಲ್ಟ್ ಅಥವಾ ಗೋವುಗಳ ಪಟ್ಟಿ ಎಂದು ಕರೆಯಲಾಗುವ ಉತ್ತರ ಭಾರತದ ಗಂಗಾನದಿ ಬಯಲಿನಲ್ಲಂತೂ ಮಾಧ್ಯಮಗಳು ಯಾವುದೋ ಕಾರಣಕ್ಕಾಗಿ “ಸಾಧು, ಸಂತರು” ಎಂದು ಕರೆಯುವ ಡೋಂಗಿ ದೇವಮಾನವರ ನಾಯಕತ್ವದಲ್ಲಿ ಹಿಂದೂತ್ವದ ಗುಂಪುಗಳು ಯಾವುದೇ ಭಯವಿಲ್ಲದೆ, ಸಂಪೂರ್ಣ ರಕ್ಷಣೆಯೊಂದಿಗೆ ಮುಸ್ಲಿಯರ ಹತ್ಯಾಕಾಂಡಕ್ಕೆ, ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಕರೆಕೊಡುತ್ತವೆ.

ನಾವು ಹಾಡುಹಗಲೇ ಗುಂಪಲ್ಲಿ ಹೊಡೆದು ಕೊಲ್ಲುವುದಕ್ಕೆ ಸಾಕ್ಷಿಯಾಗಿದ್ದೇವೆ. ಒಂದು ಸಾವಿರಕ್ಕೂ ಹೆಚ್ಚು ಮುಸ್ಲಿಮರನ್ನು  (ಸರಕಾರೇತರ ಸಂಸ್ಥೆಗಳು ಇದನ್ನು ಎರಡು ಸಾವಿರಕ್ಕೆ ಹತ್ತಿರವೆಂದು ಹೇಳುತ್ತವೆ.) ಗುಜರಾತಿನಲ್ಲಿ 2002ರಲ್ಲಿ- ಹತ್ಯಾಕಾಂಡದ ಮಾದರಿಯಲ್ಲಿ ಕೊಲ್ಲಲಾಗಿದೆ. 2013ರಲ್ಲಿ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನೂರಾರು ಜನರನ್ನು ಕೊವಲ್ಲಲಾಗಿದೆ. ಈ ಎರಡೂ ಹತ್ಯಾಕಾಂಡಗಳು ನಿರ್ಣಾಯಕ ಚುನಾವಣೆಗಳಿಗೆ ಸ್ವಲ್ಪವೇ ಮೊದಲು ನಡೆದಿರುವುದರಲ್ಲಿ ಅಚ್ಚರಿಯೇನಿಲ್ಲ.

ಯಾರು ಮುಖ್ಯಮಂತ್ರಿ ಆಗಿರುವಾಗ ಗುಜರಾತ್ ಹತ್ಯಾಕಾಂಡ ನಡೆಯಿತೋ, ಅ ಮನುಷ್ಯ ನರೇಂದ್ರ ಮೋದಿ “ಹಿಂದೂ ಹೃದಯ ಸಾಮ್ರಾಟ”ನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು ಮತ್ತು ದೇಶದ ಅತ್ಯುನ್ನತ ಹುದ್ದೆಗೆ ಏರಿದರು. ಏನು ನಡೆಯಿತೋ ಅದಕ್ಕಾಗಿ ಅವರು ಯಾವತ್ತೂ ಕ್ಷಮಾಪಣೆ ಕೇಳಿಲ್ಲ. ಅವರು ತನ್ನ ಮುಸ್ಲಿಂ ವಿರೋಧಿ ಜನ ಮರುಳು ಭಾಷಣಗಳಿಂದ ರಾಜಕೀಯ ಬಂಡವಾಳ ಕೂಡಿಹಾಕುವುದನ್ನು ನಾವು ನೋಡಿದ್ದೇವೆ. ದೇಶದ ಅತ್ಯುನ್ನತ ನ್ಯಾಯಾಲಯವು ಎಲ್ಲಾ ರೀತಿಯ, ಕಾಯಿದೆಯ ಪ್ರಕಾರ ಮತ್ತು ನೈತಿಕವಾದ ಜವಾಬ್ದಾರಿಯಿಂದ ಮುಕ್ತಗೊಳಿ‌ಸಿರುವುದನ್ನು ನಾವು ನೋಡಿದ್ದೇವೆ. ತಥಾಕಥಿತ ಮುಕ್ತ ಪ್ರಪಂಚದ ನಾಯಕರು ಆತನನ್ನು ಒಬ್ಬ ಮುತ್ಸದ್ಧಿ ಮತ್ತು ಪ್ರಜಾಪ್ರಭುತ್ವವಾದಿ ಎಂದು ಅಪ್ಪಿಕೊಳ್ಳುವುದನ್ನು ಹೇವರಿಕೆಯೊಂದಿಗೆ ನೋಡಿದ್ದೇವೆ.

ಇತ್ತೀಚೆಗೆ ಭಾರತವು ಬ್ರಿಟಿಷರಿಂದ ಪಡೆದ ತನ್ನ ಸ್ವಾತಂತ್ರ್ಯದ 75ನೇ ವರ್ಷಾಚರಣೆಯನ್ನು ಮಾಡಿತು. ದಿಲ್ಲಿಯ ಕೆಂಪುಕೋಟೆಯ ತನ್ನ ಎತ್ತರದ ವೇದಿಕೆಯ ಮೇಲೆ ನಿಂತು ಮೋದಿ, ಭಾರತದ ಮಹಿಳೆಯರನ್ನು ಸಶಕ್ತಗೊಳಿಸುವ ತನ್ನ ಕನಸಿನ ಬಗ್ಗೆ ಗುಡುಗಿದರು. ಆವರು ಭಾವಾವೇಶದಿಂದ ಮಾತನಾಡಿ, ತನ್ನ ಮುಷ್ಟಿಯನ್ನು ಅಲ್ಲಾಡಿಸಿದರು. ಅವರು ರಾಷ್ಟ್ರಧ್ವಜದ ಬಣ್ಣಗಳಿರುವ ಮುಂಡಾಸು ಧರಿಸಿದ್ದರು. ದಲಿತ ಮತ್ತು ಆದಿವಾಸಿ‌ ಮಹಿಳೆಯರ ದೇಹ ಮೇಲೆ ತಮಗೆ ದೈವದತ್ತ ಅಧಿಕಾರವಿದೆ ಎಂದು ನಂಬಿ, ಅದನ್ನು ಅನುಸರಿಸುತ್ತಿರುವ ಮೇಲ್ಜಾತಿಯ ಗಂಡಸರಿರುವ ಹಿಂದೂ ಜಾತಿ ವ್ಯವಸ್ಥೆಯ ಮೇಲೆ ಕಟ್ಟಲಾಗಿರುವ ಸಮಾಜವೊಂದರಲ್ಲಿ ಮಹಿಳೆಯರನ್ನು ಸಶಕ್ತಗೊಳಿಸುವುದು ಎಂದರೆ, ಕೇವಲ ಧೋರಣೆಯ ವಿಷಯ ಮಾತ್ರವೇ ಅಲ್ಲ. ಅದು ಒಂದು ಸಾಮಾಜೀಕರಣದ ಮತ್ತು ಶ್ರದ್ಧಾ ವ್ಯವಸ್ಥೆಗೆ ಸಂಬಂಧಿಸಿದ ವಿಷಯ.

ಇದನ್ನೂ ಓದಿ: ಇತಿಹಾಸ ನೋಡಿದರೆ ಭರವಸೆ ಕಳೆದುಕೊಳ್ಳಬೇಕಿಲ್ಲ: ಅರುಂಧತಿ ರಾಯ್

ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಸೂಚ್ಯಂಕದಲ್ಲಿ ಏರಿಕೆಯಾಗಿದ್ದು, ಪ್ರಪಂಚದಲ್ಲಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಎನಿಸಿಕೊಂಡಿರುವ ಜಾಗಗಳ ಸಾಲಿನಲ್ಲಿ ಅದನ್ನು ತಂದು ನಿಲ್ಲಿಸಿದೆ. ಇಂತಾ ಕ್ರಿಮಿನಲ್‌ಗಳು ಹೆಚ್ಚು ಹೆಚ್ಚಾಗಿ ಆಳುವ ಕೂಟದ ಸದಸ್ಯರು ಅಥವಾ ಅದಕ್ಕೆ ಸಂಬಂಧಿಸಿದವರು ಆಗಿರುವುದು ಈಗಿನ ದಿನಗಳಲ್ಲಿ ಯಾರಿಗೂ ಅಚ್ಚರಿ ಉಂಟುಮಾಡುವುದಿಲ್ಲ. ಇಂತಾ ಪ್ರಕರಣಗಳಲ್ಲಿ ಅತ್ಯಾಚಾರಿಗಳ ಪರವಾಗಿ ಸಭೆಗಳು ನಡೆಯುವುದನ್ನೂ ನಾವು ನೋಡಿದ್ದೇವೆ. ಅತ್ಯಂತ ಈಚೆಗಿನ ಪ್ರಕರಣವೊಂದರಲ್ಲಿ, 19 ವರ್ಷದ ಹುಡುಗಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಲೆಗೈಯ್ಯಲಾಯಿತು. ಸ್ಥಳೀಯ ನಾಯಕನೊಬ್ಬ “ಹಸಿದ ಬೆಕ್ಕುಗಳ ಮುಂದೆ ಹಾಲು ಚೆಲ್ಲಿದಕ್ಕಾಗಿ” ಅವಳ ತಂದೆಯನ್ನೇ ಅರೋಪಿಸಿದ.

ಮೋದಿ ಸ್ವಾತಂತ್ರ್ಯ ದಿನದ  ಭಾಷಣ ಮಾಡುತ್ತಿರುವಾಗಲೇ, ಗುಜರಾತಿನ ಭಾರತೀಯ ಜನತಾ ಪಕ್ಷದ ಸರಕಾರವು 2002ರಲ್ಲಿ 19 ವರ್ಷ ಪ್ರಾಯದ ಬಿಲ್ಕಿಸ್ ಬಾನುವನ್ನು ಸಾಮೂಹಿಕ ಅತ್ಯಾಚಾರ ಮಾಡಿದ್ದಕ್ಕಾಗಿ ಮತ್ತು ಆಕೆಯ ತಾಯಿ, ಸಹೋದರಿಯರು, ಆಕೆಯ ಎಳೆ ಪ್ರಾಯದ ತಮ್ಮಂದಿರು, ಚಿಕ್ಕಪ್ಪ ಮತ್ತು ಚಿಕ್ಕಮ್ಮಂದಿರು, ಅವರ ಒಂದು ದಿನದ ಶಿಶು ಮತ್ತು ಕಲ್ಲಿಗೆ ತಲೆ ಜಜ್ಜಿ ಕೊಲ್ಲಲಾದ ಆಕೆಯ ಮೂರು ವರ್ಷದ ಹೆಣ್ಣು ಮಗು ಸಲೇಹಾ ಸೇರಿದಂತೆ- ಆಕೆಯ 14 ಮಂದಿ ಕುಟುಂಬದ ಸದಸ್ಯರನ್ನು ಕೊಲೆ ಮಾಡಿದ್ದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಮಂದಿ ಗಂಡಸರಿಗೆ ವಿಶೇಷ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿತು.

ಈ ಭಯಾನಕ ಅಪರಾಧವು ಹಿಂದೆ ಉಲ್ಲೇಖಿಸಿರುವ 2002ರ ಗುಜರಾತ್ ಮುಸ್ಲಿಮರ ನರಮೇಧದ ಇಂತದ್ದೇ ಹಲವಾರು ಪ್ರಕರಣಗಳಲ್ಲಿ ಒಂದಾಗಿತ್ತು. ಅವರ ಬಿಡುಗಡೆಗೆ ಅನುಮತಿ ನೀಡಿದ ಮಂಡಳಿಯಲ್ಲಿ ಒಬ್ಬ ಚುನಾಯಿತ ಶಾಸಕನೂ ಸೇರಿದಂತೆ ಹಲವಾರು ಬಿಜೆಪಿ ಸದಸ್ಯರಿದ್ದರು. ಆ ಶಾಸಕ ಮುಂದೆ- ಶಿಕ್ಷೆಗೆ ಒಳಗಾದವರು ಬ್ರಾಹ್ಮಣರಾಗಿರುವುದರಿಂದ “ಒಳ್ಳೆಯ ಸಂಸ್ಕಾರ” ಹೊಂದಿದವರಾಗಿದ್ದು, ಅವರು ಈ ಅಪರಾಧ ಮಾಡಿರುವ ಸಾಧ್ಯತೆಯೇ ಇಲ್ಲ ಎಂದು ಬಹಿರಂಗವಾಗಿಯೇ ಹೇಳುವಷ್ಟು ಮುಂದುವರಿದ.

ಈ ಪ್ರಕರಣದಂತೆಯೇ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಿದ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕ್ಷಮಾಪಣೆ ನೀಡಬೇಕಾದರೆ, ಕೇಂದ್ರ ಸರಕಾರವು ಅಂಗೀಕರಿಸಬೇಕು ಎಂದು ಕಾನೂನಿನಲ್ಲಿಯೇ ಇದೆ. ಆದುದರಿಂದ, ಕೇಂದ್ರ ಸರಕಾರ, ಅಂದರೆ, ಸ್ಪಷ್ಟವಾಗಿಯೇ ನರೇಂದ್ರ ಮೋದಿ ಸರಕಾರ ಇದಕ್ಕೆ ಅನುಮತಿ ನೀಡಿದೆ ಎಂದು ನಾವು ಭಾವಿಸಬೇಕು.

ಈ ಅಪರಾಧಿಗಳು ಹೊರಗೆ ಬಂದಾಗ, ಅವರನ್ನು ಜೈಲಿನ ಗೋಡೆಗಳ ಹೊರಗೆ ಹೀರೋಗಳಂತೆ ಸ್ವಾಗತಿಸಲಾಯಿತು. ಬಿಜೆಪಿಯ ಜೊತೆ ಸಡಿಲವಾದ ಸಂಬಂಧ ಹೊಂದಿರುವ (ಈ ಸಡಿಲ ಎಂಬುದು ನಿರಾಕರಣೆಗೆ ಅನುಕೂಲಕರವಾದ ಒಂದು ನೆವನ) ಸಂಘ ಪರಿವಾರ ಎಂದು ಕರೆಯಲ್ಪಡುವ ಹಿಂದೂತ್ವದ ಗುಂಪಿನ ಸದಸ್ಯರು ಅಪರಾಧಿಗಳಿಗೆ ಹೂಹಾರ ಹಾಕಿದರು, ಸಿಹಿ ತಿನ್ನಿಸಿದರು ಮತ್ತು ಕಾಲಿಗೂ ಬಿದ್ದರು. ಕೆಲವೇ ತಿಂಗಳುಗಳಲ್ಲಿ ಗುಜರಾತ್‌ನಲ್ಲಿ ಚುನಾವಣೆ ನಡೆಯಲಿದೆ.

ಭಾರತದಲ್ಲಿ ನಮ್ಮ ಮುಕ್ತ ಮತ್ತು ನ್ಯಾಯಬದ್ಧ ಚುನಾವಣೆಗಳಿಗೆ ಮೊದಲು ವಿಚಿತ್ರ ಸಂಗತಿಗಳು ಸಂಭವಿಸುತ್ತವೆ. ಇವು ಯಾವತ್ತೂ ಅತ್ಯಂತ ಅಪಾಯಕಾರಿ ಸಮಯಗಳು. ಸಾಮೂಹಿಕ ಅತ್ಯಾಚಾರಿ ಕೊಲೆಗಡುಕರು ಸಮಾಜದಲ್ಲಿ ತಮ್ಮ ಗೌರವದ ಸ್ಥಾನಗಳಿಗೆ ಮರಳಿದ ಹೊತ್ತಿನಲ್ಲಿಯೇ, 2002ರ ಹತ್ಯಾಕಾಂಡದಲ್ಲಿ ಸಾಮಾನ್ಯವಾಗಿ ಗುಜರಾತ್ ಸರಕಾರದ ಶಾಮೀಲಾತಿ, ಮತ್ತು ನಿರ್ದಿಷ್ಟವಾಗಿ ನರೇಂದ್ರ ಮೋದಿಯ ಶಾಮೀಲಾತಿಯ ಕುರಿತು ದಾಖಲೆ ಸಹಿತ ಸಾಕ್ಷ್ಯಾಧಾರಗಳ ಬೆಟ್ಟವನ್ನೇ ಕಲೆಹಾಕಿದ “ಸಿಟಿಜನ್ಸ್ ಫಾರ್ ಜಸ್ಟಿಸ್ ಎಂಡ್ ಪೀಸ್” ಸಂಘಟನೆಯ ಸಾಮಾಜಿಕ ಕಾರ್ಯಕರ್ತೆ, ಪತ್ರಕರ್ತೆ, ವಕೀಲೆ ತೀಸ್ತಾ ಸೆತಲ್ವಾಡ್ ಅವರನ್ನು ಫೋರ್ಜರಿ, ಸಾಕ್ಷ್ಯ ತಿರುಚುವಿಕೆ ಮತ್ತು “ಮಡಕೆಯು ಕುದಿಯುತ್ತಲೇ ಇರುವಂತೆ ನೋಡಿಕೊಂಡ” ಆರೋಪದಲ್ಲಿ ಬಂಧಿಸಲಾಗುತ್ತದೆ.

ಇವುಗಳು ನಾವು ಬದುಕಬೇಕಾಗಿರುವ, ದುಡಿಯಬೇಕಾಗಿರುವ; ಹೇಳಬಾರದ್ದನ್ನು ಹೇಳಲೇ ಬೇಕಾದ ಪರಿಸ್ಥಿತಿಗಳು. ಭಾಷಣಗಳ ವಿಷಯ ಬಂದಾಗ ಉಳಿದವುಗಳಲ್ಲಿ ಆಗುವಂತೆ, ಜಾತಿಯ, ಧರ್ಮದ, ಲಿಂಗ ಮತ್ತು ವರ್ಗಗಳ ಆಧಾರದಲ್ಲಿ ಕಾನೂನುಗಳನ್ನು ಅನ್ವಯಿಸಲಾಗುತ್ತಿದೆ. ಒಬ್ಬ ಹಿಂದೂ ಹೇಳಬಹುದಾದದ್ದನ್ನೇ ಒಬ್ಬ ಮುಸ್ಲಿಂ ಹೇಳುವಂತಿಲ್ಲ. ಪ್ರತಿಯೊಬ್ಬರೂ ಹೇಳಬಹುದಾದನ್ನು ಒಬ್ಬ ಕಾಶ್ಮೀರಿ ಹೇಳುವಂತಿಲ್ಲ. ಐಕಮತ್ಯ ಮತ್ತು ಬೇರೆಯವರಿಗಾಗಿ ದನಿಯೆತ್ತುವ ಹಿಂದೆಂದಿಗಿಂತಲೂ ಅಗತ್ಯವಾಗಿರುವಂತೆಯೇ, ಅತ್ಯಂತ ಅಪಾಯಕಾರಿ ಕೆಲಸವೂ ಆಗಿದೆ.

ಇತರ ದೇಶಗಳಂತೆ ಭಾರತದಲ್ಲಿಯೂ ಅಸ್ಮಿತೆಯನ್ನು ಅಸ್ತ್ರವನ್ನಾಗಿ ಮಾಡುವುದು, ಅದರಲ್ಲೂ ಅಸ್ಮಿತೆಯನ್ನು ಅಣು ಸೂಕ್ಷ್ಮ ಗುಂಪುಗಳಾಗಿ ವಿಭಜಿಸಿ, ವದಂತಿ ಮಾತುಗಳ ಆಧಾರದಲ್ಲಿಯೇ ಒಂದು ರೀತಿಯ ಶಿಕ್ಷೆ ನೀಡುವ ಯಂತ್ರವನ್ನಾಗಿ ಮಾಡಿಬಿಟ್ಟಿದೆ. ಈ ಅಸ್ಮಿತೆಯ ಸೂಕ್ಷ್ಮ ವಿಭಜನೆಯೂ ಒಂದು ಅಧಿಕಾರದ ಶ್ರೇಣೀಕರಣವನ್ನು ಹುಟ್ಟುಹಾಕಿದೆ. “ಎಲೀಟ್ ಕ್ಯಾಪ್ಚರ್” ಎಂಬ ತನ್ನ ಪುಸ್ತಕದಲ್ಲಿ ಒಲುಫೆಮಿ ಒ. ತೈವೋ ಅವರು, ಹೇಗೆ ಕೆಲವು ನಿರ್ದಿಷ್ಟ ಮನುಷ್ಯರು, ಈ ಗುಂಪುಗಳಲ್ಲಿ ಉನ್ನತ ಸ್ಥಾನಕ್ಕೆ ಏರಿದಾಗ, ಆ ವ್ಯಕ್ತಿಗಳು ಸಾಮಾನ್ಯವಾಗಿ ಪ್ರಬಲ ದೇಶಗಳಲ್ಲಿ, ದೊಡ್ಡ ನಗರಗಳಲ್ಲಿ ಇದ್ದಾಗ, ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಇದ್ದಾಗ, ಇಂಟರ್ನೆಟ್ಟಿನಲ್ಲಿ ಸಾಮಾಜಿಕ ಬಂಡವಾಳ ಹೊಂದಿರುವಾಗ, ಮತ್ತೆ ಅವರಿಗೆ ತಮ್ಮ ಸಮುದಾಯದ ಇತರರೆಲ್ಲರ ಪರವಾಗಿ ಮಾತನಾಡಲು ಪ್ರತಿಷ್ಟಾನಗಳು, ಮಾಧ್ಯಮಗಳು ಮತ್ತು ಕಾರ್ಪೊರೇಟ್ ಉದ್ಯಮಗಳು ವೇದಿಕೆ ಒದಗಿಸಿದಾಗ ಹೇಗೆ ವರ್ತಿಸುತ್ತಾರೆ ಎಂದು ವಿಶ್ಲೇಷಿಸಿದ್ದಾರೆ.

ಇದೊಂದು ಐತಿಹಾಸಿಕ ನೋವು ಮತ್ತು ಮಾನವೀಕರಣದ, ನಾವು ಅರ್ಥ ಮಾಡಿಕೊಳ್ಳಬಹುದಾದ ಪ್ರತಿಕ್ರಿಯೆಯಾಗಿದೆ. ಮೈಕ್ರೋ ಎಲೀಟ್ ಕ್ಯಾಪ್ಚರ್ ಎಂಬುದು ಮ್ಯಾಕ್ರೋ ಎಲೀಟ್ ಕ್ಯಾಪ್ಚರ್ ಆಗಲು ಸಾಧ್ಯವಿಲ್ಲ. (Micro-Elite Capture cannot be the only answer to Macro-Elite Capture.) ಕೆಲವು ಸೈದ್ಧಾಂತಿಕವಾದ ಪ್ರಾಯೋಗಿಕ ಸಂಶೋಧನೆಗಳು ತೋರಿಸಿಕೊಟ್ಟಿರುವಂತೆ, ನಾವು ಲಿಖಿತಶಾಸನ ಮತ್ತು ನಿಷೇಧದ ಸಂಸ್ಕೃತಿಯನ್ನು ಅಂಗೀಕರಿಸಿದಾಗ ಪ್ರಮಾಣರಹಿತವಾಗಿ ಲಾಭಪಡೆಯುವುದು ಅಸತ್ಯವೇ. ಪೆನ್ ಅಮೆರಿಕದ (PEN America)ದ ನಿಷೇಧಕ್ಕೆ ಒಳಗಾದ ಪಠ್ಯಪುಸ್ತಕಗಳ ಕುರಿತ ಇತ್ತೀಚಿನ ಸಂಶೋಧನೆಯಂತೆ ನಿಷೇಧಕ್ಕೆ ಒಳಗಾದ ಬಹುಸಂಖ್ಯಾತ ನಿಷೇಧಿತ ಪಠ್ಯಗಳು ಲಿಂಗ ಮತ್ತು ಜನಾಂಗಕ್ಕೆ ಸಂಬಂಧಿಸಿದಂತೆ ಪ್ರಗತಿಪರವಾದ ಬರವಣಿಗೆಗಳನ್ನು ಹೊಂದಿವೆ.

ಸಮುದಾಯಗಳಲ್ಲಿ ಮೊಹರು ಮಾಡಿ ಇಡುವುದು, ಕುಂಠಿತಗೊಳಿಸಿಡುವುದು, ಅವರ ಅಸ್ಮಿತೆಯನ್ನು ಸಂಕುಚಿತ ತೊಟ್ಟಿಗಳ ರೂಪದಲ್ಲಿ ಸಂಕುಚಿತ ಮಾಡುವುದು ಅವರ ನಡುವೆ ಪರಸ್ಪರ ಐಕಮತ್ಯವನ್ನು ತಡೆಯುತ್ತದೆ. ವಿಪರ್ಯಾಸ ಎಂದರೆ, ಭಾರತದಲ್ಲಿ ಜಾತಿ ಪದ್ಧತಿಯ ಅಂತಿಮ ಗುರಿಯೇ ಇಂತಾ ಮೇಲುಕೀಳಿನ, ಮುರಿಯಲಾಗದ ತೊಟ್ಟಿಗಳಲ್ಲಿ ಜನರನ್ನು ವಿಭಜಿಸುವುದಾಗಿತ್ತು ಮತ್ತು ಈಗಲೂ ಆಗಿದೆ. ಮತ್ತು ಇದರಿಂದಾಗಿ ಯಾವುದೇ ಒಂದು ಸಮುದಾಯವು ಇನ್ನೊಂದು ಸಮುದಾಯದ ನೋವನ್ನು ಅರ್ಥ ಮಾಡಿಕೊಳ್ಳುವಂತಿಲ್ಲ. ಯಾಕೆಂದರೆ, ಅವು ಯಾವತ್ತೂ ಪರಸ್ಪರ ಸಂಘರ್ಷದಲ್ಲಿಯೇ ಇರುತ್ತವೆ. ಅದೊಂದು ಸ್ವಯಂಚಾಲಿತ, ಬಹಳ ಜಟಿಲವಾದ ಕಗ್ಗಂಟಿನ ಆಡಳಿತ ಮತ್ತು ಕಣ್ಗಾವಲಿನ ವ್ಯವಸ್ಥೆಯಂತೆ ಕೆಲಸ ಮಾಡುತ್ತದೆ. ಇದರಲ್ಲಿ ಸಮಾಜವು ತನ್ನನ್ನು ತಾನೇ ಆಳಿಕೊಂಡು, ಕಣ್ಗಾವಲು ಮಾಡಿಕೊಂಡು ಹಾಗೆಯೇ ಬದುಕಿರುತ್ತದೆ. ಈ ಪ್ರಕ್ರಿಯೆಯಲ್ಲಿ ಶೋಷಣೆಯ ಕಮಾನು ಭದ್ರವಾಗಿ ನಿಂತುಕೊಂಡಿರುವುದನ್ನು ಖಾತರಿಪಡಿಸುತ್ತದೆ. ಅತ್ಯಂತ ಮೇಲೆ ಮತ್ತು ಅತ್ಯಂತ ಕೆಳಗಿರುವವರ ಹೊರತಾಗಿ, (ಇವುಗಳನ್ನು ಕೂಡಾ ಸೂಕ್ಷ್ಮವಾಗಿ ಶ್ರೇಣೀಕರಣ ಮಾಡಲಾಗಿದೆ) ಸ್ವತ ತಾವು ಉಳಿದವರ ಶೋಷಣೆಗೆ ಒಳಗಾಗಲು ಅಥವಾ ಶೋಷಣೆ ಮಾಡಲು ಯಾರಾದರೊಬ್ಬರು ಇದ್ದೇ ಇದ್ದಾರೆ. ಒಮ್ಮೆ ಈ ಮಾಯಾಜಾಲದಂತ ಬಲೆಯನ್ನು ಹರಡಿಬಿಟ್ಟರೆ, ಯಾರೂ ಶುದ್ಧತೆ ಮತ್ತು ಸತ್ಯದ ಪರೀಕ್ಷೆಯಲ್ಲಿ ಪಾರಾಗಲು ಸಾಧ್ಯವಿಲ್ಲ. ಹಾಗೆ ನೋಡಿದರೆ, ಖಂಡಿತವಾಗಿಯೂ ಒಂದು ಕಾಲದಲ್ಲಿ ಮಹಾನ್ ಸಾಹಿತ್ಯ ಎಂದು ಬಣ್ಣಿಸಲಾದವುಗಳಲ್ಲಿ ಬಹುತೇಕ ಯಾವುದೂ ಏನೇನೂ ಅಲ್ಲ. ಖಂಡಿತವಾಗಿಯೂ ಶೇಕ್ಸ್‌ಪಿಯರ್ ಅಲ್ಲ. ಟಾಲ್‌ಸ್ಟಾಯ್ ಕೂಡಾ ಅಲ್ಲ. ಅವನು ಆ ಕಾಲದಲ್ಲಿ ಅನ್ನಾ ಕರೇನೀನ ಎಂಬ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗಿತ್ತು ಎಂಬುದನ್ನು ಬರೇ ಊಹಿಸಿ. ವಯಸ್ಸಾದ ಮಹಿಳೆಯರನ್ನು ಬರೇ “ಮುದಿಗೊಡ್ಡು” ಎಂದು ಮಾತ್ರ ಉಲ್ಲೇಖಿಸುವ ದಾಸ್ತೋಯೇವಸ್ಕಿಯೂ ಆಲ್ಲ. ಆತನ ಮಾನದಂಡದಲ್ಲಿ ನಾನೂ ಖಂಡಿತವಾಗಿಯೂ “ಮುದಿಗೊಡ್ಡು” ಎಂದು ಕರೆಸಿಕೊಳ್ಳಲು ಅರ್ಹಳಾಗುತ್ತೇನೆ. ಆದರೂ, ಜನರು ಆತ ಬರೆದದ್ದನ್ನು ಓದಬೇಕು ಎಂದು ನಾನು ಬಯಸುತ್ತೇನೆ. ಈ ಮಾನದಂಡವನ್ನು ಅನುಸರಿಸಿ ಹೋಗುವುದಾದರೆ, ಪ್ರತಿಯೊಂದು ಧರ್ಮದ ಪ್ರತಿಯೊಂದು ಪವಿತ್ರ ಗ್ರಂಥವೂ ಈ ಪರೀಕ್ಷೆಯಲ್ಲಿ ಪಾರಾಗಲಾರದು ಎಂದು ಬೇರೆ ಹೇಳಬೇಕಾಗಿಲ್ಲ.

ಸಾರ್ವಜನಿಕ ಕಥಾನಕದಲ್ಲಿ ಬಹಿರಂಗವಾಗಿ ಕೇಳಿಸುತ್ತಿರುವ ಸದ್ದಿನ ನಡುವೆ, ನಾವು ಒಂದು ರೀತಿಯ ಸ್ಪಷ್ಟವಾದ ಬೌದ್ಧಿಕ ಬಿಕ್ಕಟ್ಟನ್ನು ಸಮೀಪಿಸುತ್ತಿದ್ದೇವೆ. ಐಕಮತ್ಯವು ಯಾವಾಗಲೂ ಶುದ್ಧ, ಮೂಲರೂಪದಲ್ಲಿ ಇರುವುದು ಸಾಧ್ಯವಿಲ್ಲ. ಅದಕ್ಕೆ ಸವಾಲೆಸೆಯಬೇಕು, ಅದರ ಕುರಿತು ಚರ್ಚಿಸಬೇಕು ಮತ್ತು ಪರಿಷ್ಕರಿಸಬೇಕು. ಅವುಗಳನ್ನು  ನಿಷೇಧಿಸುವುದರಿಂದ ನಾವು ಯಾವುದನ್ನು ವಿರೋಧಿಸುತ್ತೇವೆ ಎಂದು ಹೇಳುತ್ತೇವೆಯೋ ಅದನ್ನೇ ಬಲಪಡಿಸಿದಂತಾಗುತ್ತದೆ.

****
(ನಾವು ಭಗ್ನಗೊಳಿಸಬೇಕಾದ- ನಾವು ಕಂಡಂತ ಸಮಾಜದ ತಿಳುವಳಿಕೆ ಕುರಿತ ಭಾಗ-2 ಮುಂದಿನ ಸಂಚಿಕೆಯಲ್ಲಿ)

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಇದನ್ನೂ ಓದಿ: ಅರುಂಧತಿ ರಾಯ್: ಕತ್ತಲ ಸೀಳುವ ಮಿಂಚುಹುಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಲೇಖನವನ್ನು ಡಾಬಸ್ ಪೇಟೆ ವಾಯ್ಸ್ ಕನ್ನಡ ಮಾಸಿಕದಲ್ಲಿ ಪ್ರಕಟಿಸಲು ಅನುಮತಿ ನೀಡಬೇಕೆಂದು ವಿನಂತಿ.

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...