Homeಮುಖಪುಟ'ಅಲ್-ಅರೇಬಿಯಾ' ವರದಿಗಾರನ ಕುಟುಂಬದ 20 ಸದಸ್ಯರನ್ನು ಹತ್ಯೆ ಮಾಡಿದ ಇಸ್ರೇಲ್‌

‘ಅಲ್-ಅರೇಬಿಯಾ’ ವರದಿಗಾರನ ಕುಟುಂಬದ 20 ಸದಸ್ಯರನ್ನು ಹತ್ಯೆ ಮಾಡಿದ ಇಸ್ರೇಲ್‌

- Advertisement -
- Advertisement -

ಗಾಝಾದ ದಕ್ಷಿಣ ನಗರವಾದ ಖಾನ್ ಯೂನಿಸ್‌ ನಗರದಲ್ಲಿ ಇಸ್ರೇಲ್‌ ನಡೆಸಿದ ಬಾಂಬ್‌ ದಾಳಿಯಲ್ಲಿ ಅಲ್-ಅರೇಬಿಯಾದ ವರದಿಗಾರ ಮೊಹಮ್ಮದ್ ಅವದ್ ಅವರ ಕುಟುಂಬದ 20 ಮಂದಿ ಮೃತಪಟ್ಟಿದ್ದು, ಗಾಝಾದಲ್ಲಿ ಇಸ್ರೇಲ್‌ ಹತ್ಯಾಕಾಂಡವನ್ನು ಮುಂದುವರಿಸಿದೆ.

ಅಲ್-ಅರೇಬಿಯಾದ ವರದಿಗಾರ ಮೊಹಮ್ಮದ್ ಅವದ್ ಅವರ ಕುಟುಂಬಸ್ಥರು ಆಶ್ರಯ ಪಡೆದಿದ್ದ ಮನೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆದಿದೆ. ತನ್ನ ಸಹೋದರ, ಅತ್ತಿಗೆ, ಸೊಸೆಯಂದಿರು ಮತ್ತು ಸೋದರಳಿಯರು ಸೇರಿ 20 ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಅವದ್ ಅಲ್-ಅರೇಬಿಯಾಗೆ ತಿಳಿಸಿದ್ದಾರೆ. ರಾತ್ರಿ ವೇಳೆಯಲ್ಲಿ ಇಸ್ರೇಲ್‌ ವೈಮಾನಿಕ ದಾಳಿಯನ್ನು ನಡೆಸಿದ್ದು, ಅವರಿಗೆ ಮನೆಯಿಂದ ಓಡಿಹೋಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಅವಾದ್ ಅವರ ಮೂವರು ಸಂಬಂಧಿಕರು ಈ ಹಿಂದೆ ಗಾಝಾ ಪಟ್ಟಿಯಲ್ಲಿ ನುಸೈರಾತ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದರು.

ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7 ರಂದು ಗಾಝಾದ ಮೇಲೆ ಇಸ್ರೇಲ್ ತನ್ನ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದಾಗಿನಿಂದ ಕನಿಷ್ಠ 22,700 ಪ್ಯಾಲೆಸ್ತೀನಿಯನ್‌ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಈ ಪ್ರದೇಶದ 2.3 ಮಿಲಿಯನ್ ಜನಸಂಖ್ಯೆಯಲ್ಲಿ 85 ಪ್ರತಿಶತಕ್ಕಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಮೃತರಲ್ಲಿ 70 ಪ್ರತಿಶತ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ.

ಗಾಝಾದಲ್ಲಿ ಪ್ರತಿದಿನ ಕೊಲ್ಲಲ್ಪಡುವ ಮಕ್ಕಳ ಸಂಖ್ಯೆ ‘100 ಕ್ಕಿಂತ ಹೆಚ್ಚು’ ಎಂದು ವೈದ್ಯರು ಶಾಕಿಂಗ್‌ ಅಂಕಿ-ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಇಸ್ರೇಲ್‌ ಸೇನೆಯು ಗಾಝಾಪಟ್ಟಿಯಲ್ಲಿ 125 ಪ್ಯಾಲೆಸ್ತೀನ್‌ ನಾಗರಿಕರನ್ನು ಹತ್ಯೆ ಮಾಡಿದೆ.  318 ಜನರು ಗಾಯಗೊಂಡಿದ್ದಾರೆ ಎಂದು ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಖೆದ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗಾಝಾ ನಗರ ಮತ್ತು ಉತ್ತರದ ಮೂರು ಪ್ರಮುಖ ಆಸ್ಪತ್ರೆಗಳ ನಿರ್ದೇಶಕರು ಸೇರಿದಂತೆ 99 ಆರೋಗ್ಯ ಕಾರ್ಯಕರ್ತರನ್ನು ಇಸ್ರೇಲ್‌ ಪಡೆಗಳು ಬಂಧಿಸಿವೆ.  ದಕ್ಷಿಣ ಗಝಾ ನಗರವಾದ ಖಾನ್ ಯೂನಿಸ್‌ನಲ್ಲಿ ನಾಸರ್ ಮೆಡಿಕಲ್ ಕಾಂಪ್ಲೆಕ್ಸ್ ಮತ್ತು ಅಲ್-ಅಮಲ್ ಆಸ್ಪತ್ರೆಯ ಮೇಲೆ ಇಸ್ರೇಲ್‌ ದಾಳಿ ನಡೆಸುತ್ತಿದೆ. ಆಸ್ಪತ್ರೆಗಳನ್ನು ರಕ್ಷಿಸಲು ಅಂತರಾಷ್ಟ್ರೀಯ ಸಂಸ್ಥೆಗಳು ತುರ್ತು ಕ್ರಮ ತೆಗೆದುಕೊಳ್ಳುವಂತೆ ಕರೆ ನೀಡಿವೆ.

ನೆತನ್ಯಾಹು ವಿರುದ್ಧ ಇಸ್ರೇಲ್‌ನಲ್ಲಿ ಪ್ರತಿಭಟನೆ

ಗಾಝಾ ಮೇಲೆ ಇಸ್ರೇಲ್‌ ಬಾಂಬ್‌ ದಾಳಿ ವಿರುದ್ದ ಇಸ್ರೇಲ್‌ನಲ್ಲಿ ವ್ಯಾಪಕವಾದ ಪ್ರತಿಭಟನೆ ಮುಂದುವರಿದಿದೆ.  ಹಮಾಸ್‌ ಒತ್ತೆಯಾಳುಗಳಾಗಿರಿಸಿರುವ ಇಸ್ರೇಲ್‌ ನಾಗರಿಕರನ್ನು ವಾಪಾಸ್ಸು ಕರೆತರಬೇಕು, ಪ್ರಧಾನಿ ನೆತನ್ಯಾಹು  ರಾಜೀನಾಮೆ ನೀಡಬೇಕು, ಗಾಝಾ ಮೇಲಿನ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಅ.7ರಂದು ಹಮಾಸ್ ವಶಕ್ಕೆ ಪಡೆದುಕೊಂಡ ಇಸ್ರೇಲ್‌ ಒತ್ತೆಯಾಳುಗಳ ಬೆಂಬಲಿಗರು, ಸ್ನೇಹಿತರು ಮತ್ತು ಕುಟುಂಬಗಳು ಶನಿವಾರ ಟೆಲ್ ಅವಿವ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇಸ್ರೇಲ್‌ ಗಾಝಾ ಮೇಲೆ ಯುದ್ಧ ಘೋಷಣೆ ಬಳಿಕ ಈ ಪ್ರತಿಭಟನೆಗಳು ಪ್ರಾರಂಭವಾಗಿದ್ದವು. ಆದರೆ ಇದೀಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಹೆಚ್ಚಿನ ಸಂಖ್ಯೆಯ ಇಸ್ರೇಲ್‌ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರತಿಭಟನಕಾರರು ಬುಷಾ ಬುಷಾ, ಬುಷಾ, ಅಂದರೆ ಅವಮಾನ, ಅವಮಾನ ಎಂದು ಸರ್ಕಾರವನ್ನು ಉಲ್ಲೇಖಿಸಿ ಘೋಷಣೆಗಳನ್ನು ಕೂಗಿದ್ದಾರೆ. ಕೆಲವರು ಅ.7ರ ಘಟನೆಗಳಿಗೆ ನೆತನ್ಯಾಹು ಮತ್ತು ಅವರ ಸರಕಾರದ ಇತರ ಅಧಿಕಾರಿಗಳನ್ನು ದೂಷಿಸಿದ್ದಾರೆ.

ಇದನ್ನು ಓದಿ: ‘ಜೈಲಿನಲ್ಲಿ ಸತ್ತರೆ ಒಳ್ಳೆಯದು’: ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್‌ ಗೋಯಲ್‌

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read