ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳು ದಿಢೀರ್ ನಾಪತ್ತೆಯಾಗುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಗಂಗಾವತಿಯಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಚಿರಪರಿಚಿತರಾಗಿರುವ, ಗಂಗಾವತಿ ಬಸವ ಕೇಂದ್ರದ ಅಧ್ಯಕ್ಷರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು, ನಿರುತ್ತ ಪ್ರೌಢಶಾಲೆಯಲ್ಲಿ ಸಹ-ಶಿಕ್ಷಕರಾಗಿ ಹಾಗೂ ‘ಸುದ್ದಿ ಚಿಂತನ’ ಪತ್ರಿಕೆಯ ಸಂಪಾದಕರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಗಣ್ಯರಾದ ಛತ್ರಪ್ಪ ಹನುಮಪ್ಪ ನಾರಿನಾಳ ಅವರ ಹೆಸರನ್ನೇ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತಾವು ಎದುರಿಸಿದ ಈ ವಿಚಿತ್ರ ಅನುಭವ ಮತ್ತು ಚುನಾವಣಾ ಸಿಬ್ಬಂದಿಯ ನಿರ್ಲಕ್ಷ್ಯದ ಕುರಿತು ಸಾಹಿತಿ ಛತ್ರಪ್ಪ ಅವರು ವಿಡಿಯೋ ಸಂದೇಶದ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಾನು ಕಳೆದ 1970ರಿಂದಲೂ ಅಂದರೆ ಸುಮಾರು 55–56 ವರ್ಷಗಳಿಂದ ಗಂಗಾವತಿಯ ನಿವಾಸಿಯಾಗಿದ್ದೇನೆ. 1970ರಿಂದಲೂ ಪ್ರತಿಯೊಂದು ಚುನಾವಣೆಯಲ್ಲೂ ಸಕ್ರಿಯವಾಗಿ ಭಾಗವಹಿಸಿ ಮತದಾನ ಮಾಡುತ್ತಾ ಬಂದಿದ್ದೇನೆ. 2002 ಹಾಗೂ 2025ರ ಮತದಾರರ ಪಟ್ಟಿಯಲ್ಲೂ ನನ್ನ ಹೆಸರಿರುವುದಕ್ಕೆ ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಛತ್ರಪ್ಪ ಅವರು ತಿಳಿಸಿದ್ದಾರೆ.
“ಇಷ್ಟಿದ್ದರೂ, ಇತ್ತೀಚೆಗೆ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ನನಗೆ ಯಾವುದೇ ಎನ್ಯುಮರೇಷನ್ ಫಾರ್ಮ್ ನೀಡಿಲ್ಲ. ನಾನು ಖುದ್ದಾಗಿ ಬಿಎಲ್ಒ ಅವರನ್ನು ವಿಚಾರಿಸಿದಾಗ, ‘ಸದ್ಯಕ್ಕೆ ನಿಮ್ಮ ಹೆಸರು ಪಟ್ಟಿಯಲ್ಲಿ ಇಲ್ಲ, ಮುಂದೆ ನೋಡೋಣ’ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ಹೇಳಲಾಗುತ್ತಿದೆ. ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ, ಸಮ್ಮೇಳನದ ಅಧ್ಯಕ್ಷನಾಗಿ ಊರಿನಲ್ಲಿ ಪ್ರತಿಯೊಬ್ಬರಿಗೂ ಚಿರಪರಿಚಿತನಿರುವ ನನಗೇ ಈ ಪರಿಸ್ಥಿತಿಯಾದರೆ, ಇನ್ನು ಯಾವುದೇ ಬೆಂಬಲವಿಲ್ಲದ ಸಾಮಾನ್ಯ ಜನರ ಮತದಾನದ ಹಕ್ಕಿನ ಕಥೆಯೇನು?” ಎಂದು ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ಆಕ್ರೋಶ, ತಕ್ಷಣದ ನ್ಯಾಯಕ್ಕೆ ಆಗ್ರಹ
ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಮುನ್ನ ಯಾವುದೇ ನೋಟಿಸ್ ನೀಡದಿರುವುದು ಹಾಗೂ ಸೂಕ್ತ ದಾಖಲೆಗಳನ್ನು ಪರಿಶೀಲಿಸದಿರುವುದು ಆಡಳಿತ ಯಂತ್ರದ ಜವಾಬ್ದಾರಿ ರಹಿತ ನಡವಳಿಕೆಯನ್ನು ತೋರಿಸುತ್ತದೆ. ಅಧಿಕಾರಿಗಳು ತಕ್ಷಣವೇ ಈ ಪ್ರಮಾದವನ್ನು ಸರಿಪಡಿಸಿ, ತಮ್ಮ ಮತದಾನದ ಹಕ್ಕನ್ನು ಮರುಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೊಪ್ಪಳ ಜಿಲ್ಲೆಯಾದ್ಯಂತ ಹಲವು ಹಿರಿಯ ನಾಗರಿಕರು ಹಾಗೂ ಮೂಲ ನಿವಾಸಿಗಳ ಹೆಸರುಗಳು ಇದೇ ರೀತಿ ಮತದಾರರ ಪಟ್ಟಿಯಿಂದ ಮಾಯವಾಗುತ್ತಿರುವ ದೂರುಗಳು ಕೇಳಿಬರುತ್ತಿದ್ದು, ತಾಲೂಕು ಆಡಳಿತ ಹಾಗೂ ಜಿಲ್ಲಾಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕಿದೆ.
ಕರಡು ಮತದಾರರ ಪಟ್ಟಿ ಪ್ರಕಟಣೆಗೆ ದಿನಗಣನೆ ಆರಂಭವಾಗಿರುವಾಗ, ಬಿಎಲ್ಒ (BLO) ಹಂತದಲ್ಲೇ ಎನ್ಯೂಮರೇಷನ್ ಪ್ರಕ್ರಿಯೆಯ ಲೋಪಗಳು ಕಂಡುಬರುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುವಂತಹದ್ದು. ಅರ್ಹ ನಾಗರಿಕರಿಗೆ ಸೂಕ್ತ ಸಮಯದಲ್ಲಿ ಎನ್ಯೂಮರೇಷನ್ ಫಾರಂಗಳು ತಲುಪದಿರುವುದು ಹಾಗೂ ಅವರ ಅರಿವಿಗೆ ಬಾರದೆ ಮತದಾರರ ಪಟ್ಟಿಯಿಂದ ಹೆಸರುಗಳು ಬಿಟ್ಟುಹೋಗುವ ಭೀತಿ ಎದುರಾಗಿರುವುದು ಚುನಾವಣಾ ವ್ಯವಸ್ಥೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ.
ಬೆಳಕಿಗೆ ಬಾರದ ಇಂತಹ ನೂರಾರು ಪ್ರಕರಣಗಳು ಲಕ್ಷಾಂತರ ಅರ್ಹ ಮತದಾರರನ್ನು ಅತಂತ್ರರನ್ನಾಗಿಸುವ ಮುನ್ನ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ತಕ್ಷಣವೇ ಜಾಗೃತಗೊಳ್ಳಬೇಕಿದೆ. ಕರಡು ಪಟ್ಟಿ ಪ್ರಕಟವಾದ ತಕ್ಷಣ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳಲು ಜಾಗೃತಿ ಮೂಡಿಸುವುದರ ಜೊತೆಗೆ, ತಾಂತ್ರಿಕ ಹಾಗೂ ಆಡಳಿತಾತ್ಮಕ ಲೋಪಗಳಿಂದ ಮತಹಕ್ಕು ಕಳೆದುಕೊಂಡವರಿಗೆ ತಕ್ಷಣವೇ ಹಕ್ಕುಚಲಾವಣೆಗೆ ಅವಕಾಶ ಕಲ್ಪಿಸುವ ‘ಹಕ್ಕು-ಆಕ್ಷೇಪಣೆ’ (Claims & Objections) ಪ್ರಕ್ರಿಯೆಯನ್ನು ಅತ್ಯಂತ ಸರಳ ಮತ್ತು ಪಾರದರ್ಶಕಗೊಳಿಸಬೇಕಿದೆ.


