BJP ರಾಷ್ಟ್ರೀಯ ವಕ್ತಾರ ಶೆಹಝಾದ್ ಪೂನಾವಾಲಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ತಮ್ಮ ಹುದ್ದೆಗೆ ಮತ್ತೊಮ್ಮೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ತಕ್ಷಣವೇ ಅಂಗೀಕರಿಸುವಂತೆ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಕೋರಿಕೊಂಡಿದ್ದಾರೆ.
ಈ ಹಿಂದೆ ಜುಲೈ 30ರಂದು ಅವರು ಮೊದಲ ಬಾರಿಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಪಕ್ಷದ ಹಿರಿಯ ನಾಯಕತ್ವವು ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿ, ರಾಜೀನಾಮೆಯನ್ನು ಸ್ವೀಕರಿಸಲು ನಿರಾಕರಿಸಿತ್ತು. ಆದರೆ ಇದೀಗ ಪೂನಾವಾಲಾ ಸಕ್ರಿಯ ರಾಜಕೀಯದಿಂದ ಹೊರನಡೆಯುವ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಎಕ್ಸ್ (X) ಪೋಸ್ಟ್ನಲ್ಲಿ ಪೂನಾವಾಲಾ ಹೇಳಿದ್ದೇನು?
ತಮ್ಮ ನಿರ್ಧಾರದ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪೂನಾವಾಲಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ನಿತಿನ್ ನಬಿನ್ ಸೇರಿದಂತೆ ಪ್ರಮುಖ ನಾಯಕರನ್ನು ಟ್ಯಾಗ್ ಮಾಡಿದ್ದಾರೆ.
ತೀವ್ರವಾದ ಆರ್ಥಿಕ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ನಾನು ಸಕ್ರಿಯ ರಾಜಕೀಯದಿಂದ ಹೊರಬಂದು ಖಾಸಗಿ ವಲಯಕ್ಕೆ ಮರಳುತ್ತಿದ್ದೇನೆ. ಜುಲೈ 30ರಂದು ನಾನು ರಾಜೀನಾಮೆ ನೀಡಿದಾಗ ಪಕ್ಷವು ತಕ್ಷಣ ಸ್ವೀಕರಿಸದೇ ಮರುಪರಿಶೀಲಿಸಲು ಕೋರಿದ್ದು ನನಗೆ ಅತ್ಯಂತ ಭಾವುಕ ಕ್ಷಣವಾಗಿತ್ತು. ಆದರೆ ಸುದೀರ್ಘ ಆಲೋಚನೆಯ ನಂತರ, ರಾಷ್ಟ್ರೀಯ ವಕ್ತಾರ ಹುದ್ದೆ ಹಾಗೂ ಸಕ್ರಿಯ ಸದಸ್ಯತ್ವದಿಂದ ಬಿಡುಗಡೆ ಹೊಂದುವ ಅಂತಿಮ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
“ವ್ಯವಸ್ಥೆಯನ್ನು ತೊರೆಯುತ್ತಿದ್ದೇನೆ ಹೊರತು ವಿಚಾರವನ್ನಲ್ಲ”
BJP ನಾಯಕತ್ವ ತಮಗೆ ನೀಡಿದ ವೇದಿಕೆ ಮತ್ತು ಬೆಂಬಲವನ್ನು ಸ್ಮರಿಸಿರುವ ಅವರು, “ನನ್ನಂತಹ ರಾಜಕೀಯ ಹಿನ್ನೆಲೆಯಿಲ್ಲದ, ಯುವ ಪಸ್ಮಾಂದ ಮುಸ್ಲಿಂ ವ್ಯಕ್ತಿಗೆ ಭಾರತದ ಬೇರೆ ಯಾವುದೇ ಪಕ್ಷದಲ್ಲೂ ಇಂತಹ ದೊಡ್ಡ ಅವಕಾಶ ಸಿಗುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಬಿಜೆಪಿಯ ಸಿದ್ಧಾಂತಕ್ಕೆ ನನ್ನ ಬೆಂಬಲ ಮುಂದುವರಿಯಲಿದೆ. ನಾನು ವ್ಯವಸ್ಥೆಯನ್ನು ತೊರೆಯುತ್ತಿದ್ದೇನೆ ಹೊರತು ವ್ಯಕ್ತಿ ಅಥವಾ ವಿಚಾರವನ್ನಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.


