ಹೈದರಾಬಾದ್ ಜಿಲ್ಲಾ ಚುನಾವಣಾ ಪ್ರಾಧಿಕಾರವು (ಡಿಇಎ) ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) 2026ರ ಅಡಿಯಲ್ಲಿ ಸೋಮವಾರ (ಆ. 17) ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ನಂತರ, 5.82 ಲಕ್ಷ ಮತದಾರರಿಗೆ ನೋಟಿಸ್ ಜಾರಿ ಮಾಡಲಿದೆ ಎಂದು ವರದಿಗಳು ಹೇಳಿವೆ.
deccanchronicle.com ವರದಿ ಪ್ರಕಾರ, 5.82 ಲಕ್ಷ ಮತದಾರರು ಎಂದರೆ, ಡಿಜಿಟಲೀಕರಿಸಿದ 27.95 ಲಕ್ಷ ಮತದಾರರ ಗಣತಿ ನಮೂನೆಗಳ ಪೈಕಿ ಶೇಕಡ 20.83 ರಷ್ಟಾಗಿದೆ. ಮತದಾರರ ಗಣತಿ ನಮೂನೆಗಳಲ್ಲಿ ಒದಗಿಸಲಾದ ವಿವರಗಳನ್ನು ಎಸ್‌ಐಆರ್ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪ್ ಮಾಡಲು ಅಥವಾ ಲಿಂಕ್ ಮಾಡಲು ಸಾಧ್ಯವಾಗದ ಮತದಾರರಿಗೆ ಈ ನೋಟಿಸ್‌ಗಳನ್ನು ನೀಡಲಾಗುತ್ತದೆ.
ಹೈದರಾಬಾದ್ ಜಿಲ್ಲೆಯ ಮತದಾರರ ಪಟ್ಟಿಯಲ್ಲಿರುವ ಒಟ್ಟು 43.76 ಲಕ್ಷ ಹೆಸರುಗಳ ಪೈಕಿ, 27.95 ಲಕ್ಷ ಗಣತಿ ನಮೂನೆಗಳನ್ನು (ಅಂದರೆ ಶೇಕಡಾ 59.01 ರಷ್ಟು) ಎಸ್‌ಐಆರ್ 2026 ರ ಅಡಿಯಲ್ಲಿ ಡಿಜಿಟಲೀಕರಿಸಲಾಗಿದೆ. ಉಳಿದ 19.41 ಲಕ್ಷ ಹೆಸರುಗಳನ್ನು (ಅಂದರೆ ಶೇಕಡಾ 40.99 ರಷ್ಟು) ಗೈರುಹಾಜರು, ಸ್ಥಳಾಂತರಗೊಂಡವರು ಮತ್ತು ಮೃತಪಟ್ಟವರು (ಎಎಸ್‌ಡಿ) ಎಂಬ ವರ್ಗದಲ್ಲಿ ಇರಿಸಲಾಗಿದೆ.
ಡಿಜಿಟಲೀಕರಿಸಿದ 27.95 ಲಕ್ಷ ನಮೂನೆಗಳ ಪೈಕಿ, 5.82 ಲಕ್ಷ ಮತದಾರರ ಮ್ಯಾಪಿಂಗ್ ವಿವರಗಳು ಪತ್ತೆಯಾಗದ ಕಾರಣ ಅವರಿಗೆ ನೋಟಿಸ್‌ಗಳನ್ನು ನೀಡಲಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ.
ಅತಿ ಹೆಚ್ಚು ಮ್ಯಾಪ್ ಆಗದ ಮತದಾರರು ಸಿಕಂದರಾಬಾದ್ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಲ್ಲಿ ಇದ್ದು, ಅವರ ಸಂಖ್ಯೆ 66,471 ಆಗಿದೆ. ಇದರ ನಂತರದ ಸ್ಥಾನಗಳಲ್ಲಿ ಜುಬಿಲಿ ಹಿಲ್ಸ್ (63,448) ಮತ್ತು ಮುಶೀರಾಬಾದ್ (58,321) ಕ್ಷೇತ್ರಗಳಿವೆ.
ಹೆಚ್ಚಿನ 5.82 ಲಕ್ಷ ಮತದಾರರು ತಮ್ಮ ಗಣತಿ ನಮೂನೆಗಳಲ್ಲಿ 2002ರ ಮತದಾರರ ಪಟ್ಟಿಯ ವಿವರಗಳನ್ನು ಕೋರುವ ಅಂಕಣವನ್ನು ಭರ್ತಿ ಮಾಡಿಲ್ಲ ಅಥವಾ ಹೆಸರು ಮತ್ತು ವಯಸ್ಸಿನಲ್ಲಿನ ವ್ಯತ್ಯಾಸಗಳು ಸೇರಿದಂತೆ ಹಲವು ತಪ್ಪುಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.
ಚುನಾವಣಾ ಪ್ರಾಧಿಕಾರಕ್ಕೆ 2002ರ ಮತದಾರರ ಪಟ್ಟಿಯಲ್ಲಿ ಮತದಾರನ ಹೆಸರು ಪತ್ತೆಯಾಗದಿದ್ದರೆ, ಆ ಮತದಾರನ ಪೋಷಕರ ಹೆಸರುಗಳನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ಪೋಷಕರ ಹೆಸರುಗಳೂ ಸಹ 2002ರ ಪಟ್ಟಿಯಲ್ಲಿ ಸಿಗದಿದ್ದರೆ, ಅಂತಹ ಮತದಾರನನ್ನು ಮ್ಯಾಪ್ ಆಗದ ಮತದಾರ ಎಂದು ಗುರುತಿಸಲಾಗುತ್ತದೆ.
ನೋಟಿಸ್‌ಗಳು 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವರಗಳನ್ನು ಕೋರುತ್ತವೆ. ಒಂದು ವೇಳೆ ಮತದಾರನಿಗೆ 2002ರಲ್ಲಿ ಮತದಾನದ ಹಕ್ಕು ಇಲ್ಲದಿದ್ದರೆ, 2002ರ ಪಟ್ಟಿಯಲ್ಲಿದ್ದ ಅವರ ಪೋಷಕರಲ್ಲಿ ಒಬ್ಬರ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಈ ಎರಡು ಮಾನದಂಡಗಳು ಪೂರೈಸದಿದ್ದರೆ, ಮತದಾರನು ಭಾರತೀಯ ಚುನಾವಣಾ ಆಯೋಗವು (ಇಸಿಐ) ಅಂಗೀಕರಿಸಿರುವ ಜನ್ಮ ದಿನಾಂಕ ಮತ್ತು ಜನ್ಮ ಸ್ಥಳಕ್ಕೆ ಸಂಬಂಧಿಸಿದ 12 ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕಾಗುತ್ತದೆ.
ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು), ಬಿಎಲ್‌ಒ ಮೇಲ್ವಿಚಾರಕರು ಅಥವಾ ಇತರ ಚುನಾವಣಾ ಅಧಿಕಾರಿಗಳು ಈ ನೋಟಿಸ್‌ಗಳನ್ನು ಜಾರಿ ಮಾಡಲಿದ್ದಾರೆ. ಇವರು ಮತದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು ಮತ್ತು ಭೌತಿಕ ನೋಟಿಸ್‌ಗಳನ್ನು ನೀಡಬಹುದು. ಕೆಲವು ಸಂದರ್ಭಗಳಲ್ಲಿ ಮತದಾರರೇ ಬಿಎಲ್‌ಒ ಅವರಿಂದ ನೋಟಿಸ್‌ಗಳನ್ನು ಪಡೆದುಕೊಳ್ಳಬೇಕಾಗಬಹುದು, ಇನ್ನು ಕೆಲವು ಸಂದರ್ಭಗಳಲ್ಲಿ ನೋಟಿಸ್‌ಗಳನ್ನು ಅವರ ಮನೆಗೇ ತಲುಪಿಸಲಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ.
ನೋಟಿಸ್ ಜಾರಿ ಮಾಡಿದ ನಂತರ ಪರಿಶೀಲನಾ ಪ್ರಕ್ರಿಯೆ ನಡೆಯಲಿದ್ದು, ಈ ಅವಧಿಯಲ್ಲಿ ಚುನಾವಣಾ ಅಧಿಕಾರಿಗಳು ಮತದಾರರ ಚುನಾವಣಾ ಇತಿಹಾಸವನ್ನು ಧೃಡೀಕರಿಸಲು ಪೂರಕ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ.
ಆಕ್ಷೇಪಣೆಗಳು ಮತ್ತು ಹಕ್ಕುಗಳ ಸಲ್ಲಿಕೆ ಅವಧಿಯು ಆಗಸ್ಟ್ 17 ರಂದು ಕರಡು ಪಟ್ಟಿಯ ಪ್ರಕಟಣೆಯೊಂದಿಗೆ ಪ್ರಾರಂಭವಾಗಿ ಸೆಪ್ಟೆಂಬರ್ 16 ರವರೆಗೆ ಮುಂದುವರಿಯುತ್ತದೆ. ಇನ್ನು ನೋಟಿಸ್‌ಗಳ ವಿಲೇವಾರಿ, ಹಕ್ಕುಗಳು ಹಾಗೂ ಆಕ್ಷೇಪಣೆಗಳ ಪರಿಶೀಲನೆಯು ಅಕ್ಟೋಬರ್ 15 ರವರೆಗೆ ಮುಂದುವರಿಯಲಿದ್ದು, ತದನಂತರ ಅಕ್ಟೋಬರ್ 19 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಗೈರುಹಾಜರು, ಸ್ಥಳಾಂತರಗೊಂಡವರು ಮತ್ತು ಮೃತಪಟ್ಟವರು (ಎಎಸ್‌ಡಿ) ವರ್ಗದಲ್ಲಿ ಇರಿಸಲಾದ 19.41 ಲಕ್ಷ ಹೆಸರುಗಳು ಆಗಸ್ಟ್ 17 ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಂತಹ ಮತದಾರರು ಮತ್ತೊಮ್ಮೆ ನಮೂನೆ 6 ಅನ್ನು ಸಲ್ಲಿಸಬೇಕಾಗುತ್ತದೆ, ಇದರಲ್ಲಿ ಹಿಂದಿನ ಮತದಾರರ ಪಟ್ಟಿಗಳ ವಿವರಗಳನ್ನು ಕೇಳಲಾಗುತ್ತದೆ. ಪ್ರಸ್ತುತ ತೆಲಂಗಾಣದಲ್ಲಿ ಯಾವುದೇ ನ್ಯಾಯಮಂಡಳಿಗಳನ್ನು ಸ್ಥಾಪಿಸಿಲ್ಲ. ಆದ್ದರಿಂದ ನೋಟಿಸ್‌ಗಳ ಪರಿಶೀಲನೆ ಮತ್ತು ಅಂತಿಮ ನಿರ್ಧಾರದ ಜವಾಬ್ದಾರಿಯು ಆಯಾ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳ (ಇಆರ್‌ಒ) ಮೇಲಿರುತ್ತದೆ.
Courtesy : deccanchronicle.com


