Homeಮುಖಪುಟಹಿಂದೂಯಿಸಂ ಒಂದು ಧರ್ಮವಲ್ಲ; ಅದೊಂದು ಕಾನೂನು; ಭಾಗ-1

ಹಿಂದೂಯಿಸಂ ಒಂದು ಧರ್ಮವಲ್ಲ; ಅದೊಂದು ಕಾನೂನು; ಭಾಗ-1

- Advertisement -
- Advertisement -

ಬಾಬಾ ಸಾಹೇಬರ ವಿಶ್ಲೇಷಣೆಯಂತೆ ಹಿಂದೂಯಿಸಂ ಒಂದು ಧರ್ಮವಲ್ಲ; ಅದು ನಿಜಕ್ಕೂ ಒಂದು ಕಾನೂನು. ಅದು ಹೃದಯಹೀನ ಬ್ರಾಹ್ಮಣ್ಯದಿಂದ ಹೇರಲ್ಪಟ್ಟದ್ದು. ಜಾತಿ ನಿಯಮಗಳ ಯಾವುದೇ ಉಲ್ಲಂಘನೆಗೆ ನಾಲಿಗೆಯನ್ನು ತುಂಡುತುಂಡಾಗಿ ಕತ್ತರಿಸುವಂತ (ಉಚ್ಛೋಹಾರನಾತ್ ಹಿಹ್ವಾ ಛೇದ:), ಶೂದ್ರನು ಪಂಡಿತನಾದರೆ ಆತನ ತಲೆಕತ್ತರಿಸುವುದು (ಧಾರಣಾತ್ ಶರೀರ ಭೇದ), ಶೂದ್ರನ ಕಿವಿಗೆ ಕಾದ ಸೀಸವನ್ನು ಹೊಯ್ಯುವುದು (ಶ್ರಾವಣೇ ತ್ರಪು ಜತುಪರಿಪೂರಣಂ) ಮುಂತಾದ ತೀವ್ರತರ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಆದುದರಿಂದಲೇ ಯಾವುದೇ ಹಿಂದೂವೊಬ್ಬ ಜನಸಮುದಾಯಕ್ಕೆ ನೆರವಾಗಲಿಕ್ಕಾಗಿ ತನ್ನ ಧಾರ್ಮಿಕ ತತ್ವಗಳನ್ನು ಬದಲಿಸಲು ಇಚ್ಛಿಸುವುದಿಲ್ಲ. ತನ್ನ ಧರ್ಮವು ನಿಜಕ್ಕೂ ಒಂದು ಕಾನೂನು; ಹಳೆಯದು ಮತ್ತು ಪುರಾತನವಾದದ್ದು ಎಂದು ಒಬ್ಬ ಹಿಂದೂವಿಗೆ ಗೊತ್ತಾದಾಗ, ಆತ ಅದನ್ನು ಬದಲಿಸಲು ಸಿದ್ಧನಾಗುತ್ತಾನೆ. ಆದುದರಿಂದಲೇ ರಾಷ್ಟ್ರದ ಹಿತಾಸಕ್ತಿಯಲ್ಲಿ ಕಾನೂನನ್ನು ಬದಲಾಯಿಸಬಹುದು ಎಂದು ಜನರು ತಿಳಿದುಕೊಳ್ಳಬೇಕು.

ಆದರೆ, ಹಿಂದೂಯಿಸಂಗೆ ಧರ್ಮದ ಅರ್ಥ ನೀಡಲಾಗಿರುವುದರಿಂದ ಅದು ಯಾವತ್ತೂ ಬದಲಾಗಲಿಲ್ಲ. ವಿದೇಶಿ ಶಕ್ತಿಗಳ ನೆರವು ಪಡೆದು ಕೂಡಾ ಅದನ್ನು ಭಾರತದಲ್ಲಿ ಅನುಷ್ಠಾನಗೊಳಿಸಲಾಗುತ್ತಿತ್ತು. ಬೇರೆಬೇರೆ ಜಾತಿಗುಂಪುಗಳು ಯಾವತ್ತೂ ವಿದೇಶಿ ಶಕ್ತಿಗಳಿಂದ ಆಳಲ್ಪಡಲು ಇಷ್ಟಪಟ್ಟಿದ್ದವು. ಅವು ವಿದೇಶಿ ಆಕ್ರಮಣಕಾರರನ್ನು ಭಾರತಕ್ಕೆ ಆಹ್ವಾನಿಸಿದ್ದವು. ಮುಸ್ಲಿಮರು ಹಿಂದೂಗಳ ಸಾಮಾಜಿಕ ಸಂರಚನೆಯೊಂದಿಗೆ ಯಾವುದೇ ಹಸ್ತಕ್ಷೇಪ ಮಾಡದೆಯೇ ನೂರಾರು ವರ್ಷಗಳ ಕಾಲ ಈ ದೇಶವನ್ನು ಆಳಿದರು. ಇದು ಮುಸ್ಲಿಮರ ಹಿತಾಸಕ್ತಿಯಲ್ಲಿಯೂ ಇತ್ತು. ಹಿಂದಿ ರಾಮಾಯಣವನ್ನು ರಚಿಸಿದ ಕವಿ ತುಳಸೀದಾಸರು, ಬ್ರಾಹ್ಮಣೇತರರು, ಮಹಿಳೆಯರು ಮತ್ತು ಶೂದ್ರರ ಮೇಲೆ ಎಲ್ಲಾ ರೀತಿಯ ನಿಂದನೆಗಳನ್ನು ಬರೆದರು. ಅವರ ಗ್ರಂಥವನ್ನು ಹಿಂದೂಗಳಲ್ಲಿ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಅದನ್ನು ಪೂಜಿಸಲಾಗುತ್ತದೆ. ಅದರ ಪಠಣವನ್ನು ಒಂದು ಪವಿತ್ರ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಅದು ಬ್ರಾಹ್ಮಣ ಮೇಲ್ಮೆಯನ್ನು ಎತ್ತಿಹಿಡಿಯುತ್ತದೆ. ಎಲ್ಲಾ ಬ್ರಾಹ್ಮಣೇತರರು ಗೊಂದಲದಿಂದಲೇ ಬ್ರಾಹ್ಮಣರ ಎದುರು ತಮ್ಮ ಕೀಳುತನವನ್ನು ಒಪ್ಪಿಕೊಳ್ಳುತ್ತಾರೆ. ಇದೆಲ್ಲವೂ ತುಳಸೀದಾಸರ ರಾಮಾಯಣದ ಪ್ರಚಾರದ ಕಾರಣದಿಂದಲೇ ಆದುದು.

ಭಾರತದ ಸಂವಿಧಾನವು ಸಮಾನತೆಯನ್ನು ಸ್ಥಾಪಿಸಿದೆ; ಅದೇ ಹೊತ್ತಿಗೆ ಹಿಂದೂ ಧರ್ಮಗ್ರಂಥಗಳು ಅಸಮಾನತೆಯನ್ನು ಪ್ರತಿಪಾದಿಸುತ್ತವೆ. ಎರಡು ದಶಕಗಳಿಗೂ ಮೀರಿದ ಬ್ರಿಟಿಷ್ ಆಡಳಿತದ ಹಿಂದಿನ ಗುಟ್ಟೆಂದರೆ, ಅವರು ತಮ್ಮ ಸಾಮ್ರಾಜ್ಯ ಸ್ಥಾಪನೆಗೆ ಜಾತಿ ಕಾನೂನುಗಳನ್ನು ಬಳಸಿಕೊಂಡರು. ವಿಕ್ಟೋರಿಯಾ ರಾಣಿಯ ಘೋಷಣೆ ಒಂದು ಉದಾಹರಣೆಯಾಗಿದೆ. ಧರ್ಮ ಮತ್ತು ಹಿಂದೂ ಸಾಮಾಜಿಕ ಸಂರಚನೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ಈ ಪ್ರಸಿದ್ಧ ಘೋಷಣೆಯಲ್ಲಿ ಭರವಸೆ ನೀಡಿದ್ದರು. ಬ್ರಿಟಿಷರು ಜಾತಿ ಮೇಲುಕೀಳಿನ ವ್ಯವಸ್ಥೆಯನ್ನು ಮುಟ್ಟದೆ ಹಾಗೆಯೇ ಉಳಿಸಿಕೊಂಡರು. ಅವರು ಶಿಕ್ಷಿತ ಬ್ರಾಹ್ಮಣ, ಬನಿಯಾಗಳನ್ನು ಸರಕಾರಿ ಸೇವೆಯಲ್ಲಿ ನೇಮಿಸಿಕೊಂಡರು. ಸೇನೆಗೆ ಅಸ್ಪೃಶ್ಯರ ನೇಮಕಾತಿಯನ್ನು ನಿಷೇಧಿಸಲಾಯಿತು. ಅವರಿಗೆ ಸರಕಾರಿ ಸೇವೆಗಳ ಬಾಗಿಲನ್ನು ಮುಚ್ಚಲಾಯಿತು. ಅವರಿಗೆ ಶಿಕ್ಷಣವನ್ನು ನಿರಾಕರಿಸಲಾಯಿತು. ಅಸ್ಪೃಶ್ಯತೆಯನ್ನು ಕಾದುಕೊಂಡು ಹೋಗಲಾಯಿತು. ಶತಮಾನಗಳಷ್ಟು ಹಳೆಯ ಒಡೆದು ಆಳುವ ನೀತಿಗೆ ಅವರು ಸಂಪೂರ್ಣ ರಕ್ಷಣೆ ಕೊಟ್ಟರು. ಬ್ರಿಟಿಷರೂ ತಮ್ಮ ಸ್ವಂತ ಹಿತಾಸಕ್ತಿಗಳಿಗಾಗಿ ಇದೇ ಧೋರಣೆ ಅನುಸರಿಸಿದರು. ಒಡೆದು ಆಳುವುದು ಜಾತಿ ವ್ಯವಸ್ಥೆಯ ಧಾರ್ಮಿಕ ಧೋರಣೆಯಾಗಿತ್ತು.

ಇಂದು 4222 ಉಪಜಾತಿಗಳಿವೆ. ಇಲ್ಲಿ ಅಂತರ್ಜಾತೀಯ ವಿವಾಹಗಳೂ ಇಲ್ಲ; ಯಾವುದೇ ರೀತಿಯ ಸಹಭೋಜನವೂ ಇಲ್ಲ. ಈ ಧಾರ್ಮಿಕ ವಿಭಜನೆಯು ಎಷ್ಟು ಬಲವಾಗಿತ್ತೆಂದರೆ, ವಿದೇಶಿ ಆಡಳಿತಗಾರರು ಅದನ್ನು ಅನುಸರಿಸಿದರು. ಜಾತಿಗಳ ನಡುವಿನ ಹಿಂಸಾಚಾರ ಸಾಮಾನ್ಯವಾಗಿತ್ತು. ಆಗಲೇ ಇದ್ದ ಜಾತಿ ಸಂಘರ್ಷಗಳಿಗೆ ಹಿಂದೂ-ಮುಸ್ಲಿಂ ಗಲಭೆಗಳನ್ನು ಬ್ರಿಟಿಷರು ಹೆಚ್ಚುವರಿಯಾಗಿ ಸೇರಿಸಿದರು. ಅವರು ಹಿಂದೂಗಳ ನಡುವಿನ ಬಿರುಕುಗಳನ್ನು ಬಳಸಿಕೊಂಡು ಹೆಚ್ಚಿನ ಕಷ್ಟವಿಲ್ಲದೆಯೇ ಈ ದೇಶವನ್ನು ಆಳಿದರು.

ಡಾ. ಅಂಬೇಡ್ಕರ್ ಅವರು ಅರ್ಚಕರಿಗೆ ಒಂದೇ ಸಮಾನ ಗ್ರಂಥದ ಸಲಹೆಯನ್ನು ಮಾಡಿದ್ದರು..

ಬಾಬಾಸಾಹೇಬರು ಹಿಂದೂ ಜಾತಿ ತಾರತಮ್ಯ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಹೊಂದಿದ್ದರು. ಅದನ್ನು ಸುಧಾರಿಸಲು ಅವರು ಹಲವಾರು ಕಾರ್ಯಸಾಧ್ಯ ಕ್ರಮಗಳನ್ನು ಸಲಹೆ ಮಾಡಿದ್ದರು. ಒಂದು ವೇಳೆ ಅವರ ಸಲಹೆಗಳನ್ನು ಸ್ವೀಕರಿಸಲಾಗುತ್ತಿದ್ದರೆ, ಭಾರತದ ಇತಿಹಾಸವು ಹಿಂದಿದ್ದಕ್ಕಿಂತ ಮತ್ತು ಈಗಿರುವುದಕ್ಕಿಂತ ಬೇರೆಯಾಗಿರುತ್ತಿತ್ತು. ಅವರ ಸಲಹೆಗಳಲ್ಲಿ:

1. ಎಲ್ಲಾ ಹಿಂದೂಗಳಿಗೆ ಸ್ವೀಕಾರಾರ್ಹವಾದ ಮತ್ತು ಎಲ್ಲಾ ಹಿಂದೂಗಳು ಮಾನ್ಯಮಾಡುವ ಒಂದೇ ಒಂದು ಸಮಾನ ಹಿಂದೂ ಧಾರ್ಮಿಕ ಗ್ರಂಥವಿರಬೇಕು; ಇದರ ಅರ್ಥ- ಸಹಜವಾಗಿಯೇ ವೇದಗಳು, ಶಾಸ್ತ್ರಗಳು, ಸ್ಮೃತಿಗಳು ಮತ್ತು ಪುರಾಣಗಳು ಮುಂತಾದ- ಪವಿತ್ರ ಮತ್ತು ಅಧಿಕೃತ ಎಂದು ಪರಿಗಣಿಸಲಾಗುವ ಹಿಂದೂ ಧಾರ್ಮಿಕ ಗ್ರಂಥಗಳು ಮುಂದೆ ಕಾನೂನುಪ್ರಕಾರ ಆ ಅರ್ಹತೆಯನ್ನು ಕಳೆದುಕೊಳ್ಳಬೇಕು ಮತ್ತು ಈ ಗ್ರಂಥಗಳಲ್ಲಿ ಇರುವ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಸಿದ್ಧಾಂತಗಳ ಬೋಧನೆಯು ಶಿಕ್ಷಾರ್ಹವಾಗುತ್ತದೆ ಎಂದು.

2. ಅವರು ರೂಪಿಸಿದ ಸಂವಿಧಾನವು ಎಲ್ಲಾ ಶಾಸ್ತ್ರಗಳನ್ನು ಪರಿಣಾಮರಹಿತವನ್ನಾಗಿ ಮಾಡಿದೆ ಮತ್ತು ಅಸ್ಪೃಶ್ಯತೆಯನ್ನು ಶಿಕ್ಷಾರ್ಹವಾಗಿಸಿದೆ. ಇದು ಅವರು ಜೀವಿತವಿಡೀ ನಡೆಸಿದ ಜಾತಿವಿರೋಧಿ ಸಂಘರ್ಷದ ಸಾಧನೆಯಾಗಿದೆ. ಅವರು ಹಿಂದೂಗಳ ನಡುವೆ ಅರ್ಚಕ ಹುದ್ದೆಯನ್ನು ರದ್ದುಮಾಡಬೇಕೆಂಬ ಬೇಡಿಕೆಯನ್ನಿಟ್ಟಿದ್ದರು. ಆದರೆ, ಅದು ಅಸಾಧ್ಯವೆಂಬಂತೆ ಕಂಡಿತ್ತು. ಕನಿಷ್ಠ ಅರ್ಚಕ ಹುದ್ದೆಯು ವಂಶಪಾರಂಪರ್ಯ ಆಗಿರಬಾರದು; ತಾನು ಹಿಂದೂ ಎಂದು ಹೇಳಿಕೊಳ್ಳುವ ಪ್ರತೀ ವ್ಯಕ್ತಿಯೂ ಅರ್ಚಕನಾಗಲು ಅರ್ಹನಾಗಿರಬೇಕು ಎಂದು ಡಾ. ಅಂಬೇಡ್ಕರ್ ಹೇಳಿದ್ದರು. ಸರಕಾರವು ನಿಗದಿಪಡಿಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಸರಕಾರದಿಂದ ತನ್ನ ವೃತ್ತಿ ಅನುಸರಿಸಲು ಪರವಾನಗಿ ನೀಡುವ ’ಸನದು’ ಹೊಂದಿರದ ಹೊರತು, ಯಾವುದೇ ಹಿಂದೂ ವ್ಯಕ್ತಿ ಅರ್ಚಕನಾಗಲು ಅರ್ಹನಲ್ಲವೆಂಬ ನಿಯಮ ಕಾನೂನುಪ್ರಕಾರ ಇರಬೇಕು.

3. ಸನದು ಹೊಂದಿರದ ಯಾವುದೇ ಅರ್ಚಕ ನಿರ್ವಹಿಸಿದ ಯಾವುದೇ ಧಾರ್ಮಿಕ ಕಾರ್ಯಕ್ರಮವು ಕಾನೂನು ಪ್ರಕಾರ ಸಿಂಧುವಾಗಬಾರದು ಮತ್ತು ಸನದು ಇಲ್ಲದ ಯಾವುದೇ ವ್ಯಕ್ತಿಯು ಅರ್ಚಕನಾಗಿ ಕಾರ್ಯನಿರ್ವಹಿಸುವುದನ್ನು ಶಿಕ್ಷಾರ್ಹಗೊಳಿಸಬೇಕು.

4. ಒಬ್ಬ ಅರ್ಚಕನು ಸರಕಾರಿ ನೌಕರನಾಗಿರಬೇಕು ಮತ್ತು ಇತರ ನಾಗರಿಕರಂತೆಯೇ ದೇಶದ ಸಾಮಾನ್ಯ ಕಾನೂನಿಗೆ ಒಳಪಡುವುದರ ಮೂಲಕ ಶಿಸ್ತು ಕ್ರಮಕ್ಕೆ ಬಾಧ್ಯನಾಗಿರಬೇಕು.

5. ಐಎಎಸ್, ಐಪಿಎಸ್ ಮತ್ತಿತರ ಹುದ್ದೆಗಳಲ್ಲಿ ಮಾಡಲಾಗುವಂತೆ ಸರಕಾರದ ಅಗತ್ಯಗಳಿಗೆ ಅನುಗುಣವಾಗಿ ಅರ್ಚಕರ ಸಂಖ್ಯೆಯನ್ನು ಮಿತಗೊಳಿಸಬೇಕು.

ಬಾಬಾಸಾಹೇಬರು ಹೀಗೆ ಹೇಳಿದ್ದರು: “ಕೆಲವರಿಗೆ ಇದು ಕ್ರಾಂತಿಕಾರಿ ಎಂಬಂತೆ ಕಾಣಬಹುದು. ನನ್ನ ಮನಸ್ಸಿನಲ್ಲಿ ಇದರಲ್ಲಿ ಕ್ರಾಂತಿಕಾರಿಯಾದುದು ಏನೂ ಇಲ್ಲ. ಭಾರತದಲ್ಲಿ ಪ್ರತಿಯೊಂದು ವೃತ್ತಿಯೂ ನಿಯಂತ್ರಿಸಲ್ಪಡುತ್ತವೆ. ಇಂಜಿನಿಯರ್‌ಗಳು ತಮ್ಮ ವೃತ್ತಿಯನ್ನು ಆರಂಭಿಸುವ ಮೊದಲು ತಮ್ಮ ವೃತ್ತಿಕುಶಲತೆಯನ್ನು ಸಾಬೀತುಪಡಿಸಬೇಕಾಗುತ್ತದೆ ಮತ್ತು ತಮ್ಮ ಇಡೀ ವೃತ್ತಿಜೀವನದಲ್ಲಿ ದೇಶದ ಕ್ರಿಮಿನಲ್ ಮತ್ತು ಸಿವಿಲ್ ಕಾನೂನುಗಳೆರಡನ್ನೂ ಪಾಲಿಸಬೇಕಾಗುತ್ತದೆ. ಅದಲ್ಲದೇ ಅವರು ತಮ್ಮತಮ್ಮ ವೃತ್ತಿಯು ನಿರ್ದೇಶಿಸುವ ವಿಶೇಷ ನಿಯಮಗಳು ಮತ್ತು ನೀತಿ ಸಂಹಿತೆಯನ್ನು ಅನುಸರಿಸಬೇಕಾಗುತ್ತದೆ. ಅರ್ಚಕ ವೃತ್ತಿಯು ಕುಶಲತೆ ಬೇಕಾಗಿರದ ಏಕೈಕ ವೃತ್ತಿಯಾಗಿದೆ. ಹಿಂದೂ ಅರ್ಚಕನ ವೃತ್ತಿಯೊಂದು ಮಾತ್ರವೇ ಯಾವುದೇ ಸಂಹಿತೆಗೆ ಒಳಪಡದ ವೃತ್ತಿಯಾಗಿದೆ. ಮಾನಸಿಕವಾಗಿ ಒಬ್ಬ ಅರ್ಚಕನು ಮೂರ್ಖನಾಗಿರಬಹುದು. ದೈಹಿಕವಾಗಿ ಯಾವುದೋ ಕೆಟ್ಟ ಕಾಯಿಲೆಯಿಂದ ಬಳಲುತ್ತಿರಬಹುದು, ನೈತಿಕವಾಗಿ ದುಷ್ಟನೇ ಆಗಿರಬಹುದು; ಆದರೆ ಆತ ಹಿಂದೂ ದೇವಾಲಯವೊಂದರ ಗರ್ಭಗುಡಿಯನ್ನು ಪ್ರವೇಶಿಸಿ ಹಿಂದೂ ದೇವರುಗಳನ್ನು ಅರ್ಚಿಸಿ, ಪವಿತ್ರವಾದ ಕಾರ್ಯಗಳನ್ನು ಮಾಡಲು ಅರ್ಹನಾಗುತ್ತಾನೆ. ಇವೆಲ್ಲವೂ ಹಿಂದೂಗಳಲ್ಲಿ ಸಾಧ್ಯವಾಗುತ್ತದೆ ಏಕೆಂದರೆ, ಒಬ್ಬ ಅರ್ಚಕನು ಪುರೋಹಿತರ ಜಾತಿಯಲ್ಲಿ ಹುಟ್ಟಿದರೆ ಸಾಕಾಗುತ್ತದೆ. ಇಡೀ ವಿಷಯವು ಅಸಹ್ಯಕರವಾಗಿದೆ ಮತ್ತು ಹಿಂದೂಗಳಲ್ಲಿ ಪುರೋಹಿತ ವರ್ಗವು ಯಾವುದೇ ಕಾನೂನಿಗಾಗಲೀ, ಕರ್ತವ್ಯವನ್ನು ಗುರುತಿಸುವ ಯಾವುದೇ ನೈತಿಕತೆಗಾಗಲೀ ಒಳಪಡದಿರುವುದರಿಂದಲೇ ಇದು ಸಾಧ್ಯವಾಗುತ್ತದೆ. ಆ ವರ್ಗಕ್ಕೆ ಹಕ್ಕುಗಳು ಮತ್ತು ಸೌಲಭ್ಯಗಳು ಮಾತ್ರ ಗೊತ್ತಿರುವುದು. ಈ ಹುದ್ದೆಯು ಜನಸಮುದಾಯದ ಮಾನಸಿಕ ಮತ್ತು ನೈತಿಕ ಅವನತಿಗಾಗಿಯೇ ದೈವತ್ವವು ಅವರ ಮೇಲೆ ಛೂಬಿಟ್ಟಂತಿದೆ”. (ಅನಿಹಿಲೇಶನ್ ಆಫ್ ಕಾಸ್ಟ್: ಬಾಬಾಸಾಹೇಬ್ ಅಂಬೇಡ್ಕರ್ಸ್ ರೈಟಿಂಗ್ಸ್ ಅಂಡ್ ಸ್ಪೀಚಸ್. ಸಂ. 1, ಪುಟಗಳು 26-77).

ಹಿಂದೂ ಕಾನೂನಿನ ಕಟ್ಟಲೆ

ಬಾಬಾಸಾಹೇಬರು ಸಂವಿಧಾನ ನಿಯಮಗಳಿಗೆ ಅನುಗುಣವಾಗಿ, ಆಧುನಿಕ ಕಾಲಕ್ಕೆ ಉದಾರವಾಗಿ ಸರಿಹೊಂದುವಂತೆ, ಹಿಂದೂ ಸಮಾಜದ ಮೂಲಭೂತ ಸಾಮಾಜಿಕ ಚೌಕಟ್ಟನ್ನು ಕಾನೂನಿನ ಅಡಿಯಲ್ಲಿ ಬದಲಾಯಿಸಲು, ತಿದ್ದಲು, ಕ್ರೋಢೀಕರಿಸಲು ಪ್ರಯತ್ನಗಳನ್ನು ಮಾಡಿದರು. ಅವರ ಪ್ರಸ್ತಾಪವು ಅನುಲೋಮ-ಪ್ರತಿಲೋಮ ವಿವಾಹಗಳನ್ನು ನಿಷೇಧಿಸುವುದಾಗಿತ್ತು. ಅವರು ಕೆಲವು ಷರತ್ತುಗಳಿಗೆ ಒಳಪಟ್ಟು ವಿವಾಹ ವಿಚ್ಛೇದನವನ್ನು ಸರಳಗೊಳಿಸಿದರು. ಅಂತರ್ಜಾತೀಯ ವಿವಾಹದ ವಿಷಯದಲ್ಲಿ, ಹುಡುಗಿಯನ್ನು ಸೂಚಿತ ಅವಧಿಯ ಒಳಗೆ ಅಥವಾ ನ್ಯಾಯಾಲಯದಲ್ಲಿ ಪ್ರಕರಣ ನೊಂದಾಯಿಸುವುದಕ್ಕಿಂತ ಮೊದಲೇ ವರಿಸಿದಲ್ಲಿ ಅದನ್ನು ಕಾನೂನುಬದ್ಧಗೊಳಿಸಿ ಅಂಗೀಕರಿಸಲಾಗುವುದು. ಹೆಣ್ಣುಮಕ್ಕಳನ್ನು ತಂದೆಯ ಆಸ್ತಿಯಲ್ಲಿ ಸಹ ಪಾಲುದಾರರನ್ನಾಗಿ ಮಾಡಲಾಯಿತು. ಅವರ ವಿಚಾರಗಳು ಹಿಂದೂ ಕಾನೂನನ್ನು ಬದಲಿಸುವಷ್ಟು ಪ್ರಗತಿಪರವಾಗಿದ್ದವು; ಆದರೆ, ಮತ್ತೆ ಅವರನ್ನು ಅದೇ ಬ್ರಾಹ್ಮಣ-ಬನಿಯಾ ಕೂಟದ ಸಂಚು ವಿರೋಧಿಸಿತು. ಮುಗ್ಧ ಹಿಂದೂಗಳು ಅವರ ಮನೆಯ ಮತ್ತು ಸಂಸತ್ತಿನ ಮುಂದೆ ಪ್ರದರ್ಶನ ನಡೆಸುವಂತೆ ಮಾಡಲಾಯಿತು. 1951ರಲ್ಲಿ ಅವರ ಮನೆಯ ಮುಂದೆ ನಡೆಸಲಾದ ಯೋಜಿತ ಪ್ರದರ್ಶನವನ್ನು ಈ ಲೇಖಕ ಚದುರಿಸಿದರು. ಈ ಪ್ರಹಸನ ರೂಪದ ಯೋಜಿತ ಪ್ರತಿಭಟನೆ, ಮತ್ತು ಗೂಂಡಾಗಿರಿಗಾಗಿ ಕೆಲವು ಸನ್ಯಾಸಿಗಳು ಮತ್ತು ಮಹಿಳೆಯರನ್ನು ಟ್ರಕ್ಕುಗಳಲ್ಲಿ ತರಲಾಯಿತು. ಈ ಪ್ರದರ್ಶನಗಳಿಗೆ ಬಿರ್ಲಾಗಳು, ದಾಲ್ಮಿಯಾಗಳು, ಗೋಯೆಂಕಾಗಳು ಮತ್ತು ಸಿಂಘಾನಿಯಾಗಳು ಹಣಕಾಸು ಒದಗಿಸಿದರು. ಬಾಬಾಸಾಹೇಬರನ್ನು ಹತ್ಯೆ ಮಾಡಲು ಸಂಚೊಂದನ್ನು ರೂಪಿಸಲಾಯಿತು.

ಈ ಸಂಚನ್ನು ಈ ಲೇಖಕ ಬಹಿರಂಗಪಡಿಸಿದರು. ಸಂಚುಕೋರರನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಬಾಬಾಸಾಹೇಬರನ್ನು ಕೊಲ್ಲಲು ದಿಲ್ಲಿಗೆ ಹೋಗಿದ್ದ ಬ್ರಾಹ್ಮಣನಿಗೆ ಥಳಿಸಲಾಯಿತು. ಬಾಬಾಸಾಹೇಬರ ಕಾರಿಗೆ ಮುತ್ತಿಗೆ ಹಾಕಲಾಯಿತು ಮತ್ತು ಕೆಲವು ಸಲ ಕಲ್ಲೆಸೆಯಲಾಯಿತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಹಿಂದೂ ಸಮಾಜವನ್ನು ಸುಧಾರಿಸಲು ಮಾಡಿದ ಪ್ರಯತ್ನಗಳಿಗೆ ಪ್ರತಿಯಾಗಿ ಬಾಬಾಸಾಹೇಬ್ ಅವರಿಗೆ ಸಿಕ್ಕಿದ್ದು ಇಷ್ಟೇ.

ಶಂಕರಾನಂದ್ ಶಾಸ್ತ್ರಿ
(ಬಾಬಾಸಾಹೇಬರ ಒಡನಾಡಿಯಾಗಿದ್ದ ಶಂಕರಾನಂದ್ ಶಾಸ್ತ್ರಿಯವರ ’ಮೈ ಮೆಮರೀಸ್ ಎಂಡ್ ಎಕ್ಸ್‌ಪೀರಿಯೆನ್ಸಸ್ ಆಫ್ ಬಾಬಾಸಾಹೇಬ್ ಡಾ. ಅಂಬೇಡ್ಕರ್’-1989 ಪುಸ್ತಕದಿಂದ ಆಯ್ದ ಭಾಗ)

ಕನ್ನಡಕ್ಕೆ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಪ್ರವಾಹ: ಅಭಿವೃದ್ಧಿಯ ಭ್ರಷ್ಟಾಚಾರ ಮತ್ತು ಅಸಂಬದ್ಧತೆಗಳಿಂದ ಬೆಂಗಳೂರನ್ನು ಕಾಪಾಡಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...