Homeಕರ್ನಾಟಕಶಿವಮೊಗ್ಗ ಕೋಮು ಗಲಭೆಗೆ ಟ್ವಿಸ್ಟ್: ಬಜರಂಗದಳದ ರೋಹನ್ ಕಲ್ಲೆಸೆತವೇ ಸಂಘರ್ಷಕ್ಕೆ ಕಾರಣವಾಯ್ತಾ?

ಶಿವಮೊಗ್ಗ ಕೋಮು ಗಲಭೆಗೆ ಟ್ವಿಸ್ಟ್: ಬಜರಂಗದಳದ ರೋಹನ್ ಕಲ್ಲೆಸೆತವೇ ಸಂಘರ್ಷಕ್ಕೆ ಕಾರಣವಾಯ್ತಾ?

- Advertisement -
- Advertisement -

ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಶಿವಮೊಗ್ಗದ ರಾಗಿಗುಡ್ಡದಲ್ಲಿ ಉಂಟಾದ ಕೋಮು ಗಲಭೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ’ಈ ದಿನ’ ನ್ಯೂಸ್ ವೆಬ್ಸೈಟ್ ವರದಿ ಬಿತ್ತರಿಸಿದ್ದು, ಶಾಂತಿನಗರದಲ್ಲಿ ಅಶಾಂತಿ ಸೃಷ್ಟಿಗೆ ಪ್ರಚೋದನೆ ನೀಡಿದ್ದು ಬಜರಂಗದಳದ ಮುಖಂಡ ‘ರೋಹನ್ ಅಲಿಯಾಸ್ ರೋಯಾ’ ಎನ್ನುವ ವ್ಯಕ್ತಿ ಎಂದು ವರದಿ ಹೇಳಿದೆ.

ಶಿವಮೊಗ್ಗ ನಗರದ ಶಾಂತಿನಗರ (ರಾಗಿಗುಡ್ಡ) ಬಡಾವಣೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ತೂರಿ ಬಂದ ಕಲ್ಲೊಂದು ಉಭಯ ಸಮುದಾಯಗಳ ನಡುವೆ ಗಲಭೆಗೆ ಕಾರಣವಾಗಿತ್ತು.

ಈ ಕಾರ್ಯಕ್ರಮದ ಮೆರವಣಿಗೆ ಮೇಲೆ ಕಲ್ಲು ಬಿದ್ದ ಬಳಿಕ ಉದ್ರಿಕ್ತರಾದ ಮುಸ್ಲಿಂ ಯುವಕರು ತಾವು ಕೂಡ ಕಲ್ಲೆಸೆದು ಪ್ರತಿಕ್ರಿಯಿಸಿದ್ದಾರೆ.

ಈದ್ ಮಿಲಾದ್ ಹಬ್ಬದ ಸಂಭ್ರಮ ಕೆಡಿಸಿ ಪ್ರಚೋದಿಸಲೆಂದು ಕಲ್ಲು ಎಸೆಯಲಾಗಿತ್ತು. ಆದರೆ ಕಲ್ಲು ಎಸೆದದ್ದು ಯಾರೆಂಬುದು ಆರಂಭದಲ್ಲಿ ಪತ್ತೆಯಾಗಿರಲಿಲ್ಲ. ಹಾಗಾಗಿ ಬಿಜೆಪಿ ನಾಯಕರು ಹಾಗೂ ಬಹುತೇಕ ಮಾಧ್ಯಮಗಳು ಇದು ಮುಸ್ಲಿಮ್ ಸಮುದಾಯದವರು ಸೃಷ್ಟಿಸಿದ ಸಂಘರ್ಷ ಎಂದು ಬಿಂಬಿಸಲಾಗಿತ್ತು.

ಈ ಬಗ್ಗೆ ‘ಈ ದಿನ.ಕಾಂ’ಗೆ ಇದೀಗ ಲಭ್ಯವಾಗಿರುವ ಬಲ್ಲಮೂಲಗಳ ಪ್ರಕಾರ ಬಜರಂಗದಳದ ಮುಖಂಡ, ಶಾಂತಿನಗರದ ನಿವಾಸಿ ’ರೋಹನ್ ಅಲಿಯಾಸ್ ರೋಯಾ’ ಎಂಬಾತನೇ ಮೊದಲು ಕಲ್ಲು ಎಸೆದಿದ್ದು ಎಂಬುದು ಖಚಿತವಾಗಿದೆ.

ಸಧ್ಯ ಶಿವಮೊಗ್ಗದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದ್ದು, ರಾಗಿಗುಡ್ಡ ಶಾಂತವಾಗಿದೆ. ಸೆಕ್ಷನ್ 144 ಜಾರಿಗೊಳಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಈವರೆಗೆ 60 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಬಜರಂಗದಳದವರೂ ಇದ್ದಾರೆ. ಮುಸ್ಲಿಂ ಸಂಘಟನೆಯ ಕೆಲವು ಯುವಕರು ಬಂಧಿತರಾಗಿದ್ದಾರೆ. ಈವರೆಗೆ 25 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಮೂಲಗಳ ಪ್ರಕಾರ, ಬಜರಂಗದಳದ ಮುಖಂಡ ‘ರೋಹನ್ ಅಲಿಯಾಸ್ ರೋಯಾ’ ಕಲ್ಲು ಎಸೆದ ಬಳಿಕ ಗಲಭೆ ಶುರುವಾಯಿತು. ಉದ್ರಿಕ್ತ ಯುವಕರ ಗುಂಪು ಪ್ರತಿಕ್ರಿಯಿಸಿ ಮತ್ತೊಂದು ಕೋಮಿನ ಮನೆಗಳತ್ತ ಕಲ್ಲು ಎಸೆಯಿತು. ಗಲಭೆಯಲ್ಲಿ ಮೂರೂ ಧರ್ಮಗಳವರ ಮನೆಗಳಿಗೂ ಹಾನಿಯಾಗಿದೆ ಹೇಳಲಾಗಿದೆ.

ಹಿಂದೂ ಮಹಾಗಣಪತಿ ಮೆರವಣಿಗೆಯ ವೇಳೆ ವಾರಾಣಸಿಯ ‘ವಿವಾದಿತ’ ಗ್ಯಾನವಾಪಿ ಮಸೀದಿ ಶಿವನ ಮಹಾದ್ವಾರ, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಇಲ್ಯಾಸ್ ನಗರದತ್ತ ಶ್ರೀರಾಮನು ಬಾಣ ಬಿಡುತ್ತಿದ್ದಾನೆ ಎಂಬಂತೆ ನಿರ್ಮಿಸಲಾದ ದ್ವಾರ, ಮುಸಲ್ಮಾನರಂತೆ ಗಡ್ಡಧಾರಿ ಹಾಗೂ ಹಸಿರು ಬಣ್ಣದ ಪಂಚೆ ತೊಟ್ಟ ಹಿರಣ್ಯಕಶ್ಯಪುವಿನ ಕರುಳು ಬಗೆಯುತ್ತಿರುವಂತೆ ನಿರ್ಮಿಸಲಾದ ನರಸಿಂಹನ ಕಲಾಕೃತಿ – ಇತ್ಯಾದಿಗಳನ್ನು ಪ್ರದರ್ಶಿಸಲಾಗಿತ್ತು. ಆದರೆ ಅಲ್ಪಸಂಖ್ಯಾತರು ಶಾಂತಿ ರೀತಿಯಲ್ಲಿ ವರ್ತಿಸಿ ಗಣೇಶ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ತಾವು ಕೂಡ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದರು.

ಅದೇ ರೀತಿಯಲ್ಲಿ ಭಾನುವಾರ ನಗರಾದ್ಯಂತ ಈದ್ ಹಬ್ಬವನ್ನು ನಗರದಾದ್ಯಂತ್ಯ ಆಯೋಜನೆಯಾಗಿತ್ತು. ಈ ವೇಳೆ ಹಿಂದೂಗಳೂ ಸಹಕರಿಸಿ ಸಂಭ್ರಮಿಸಿದ್ದರು. ಆದರೆ, ಶಾಂತಿನಗರದಲ್ಲಿ ಮಾತ್ರ ಕಲ್ಲು ತೂರಿ ಪ್ರಚೋದಿಸುವ ಮೂಲಕ ಅಶಾಂತಿ ಸೃಷ್ಟಿಸಲಾಯಿತು. ಮೊದಮೊದಲು ಈ ಕಲ್ಲು ತೂರಾಟದ ಹಿಂದೆ ಯಾರಿದ್ದಾರೆಂಬುದು ತಿಳಿದಿರಲಿಲ್ಲ.

ಈ ಮಧ್ಯೆ ಮೊದಲ ಕಲ್ಲು ಎಲ್ಲಿಂದ ಬಂದಿತು ಎಂಬುದಕ್ಕೆ ಈಗ ಸದ್ಯ ರೋಹನ್‌ ಕಡೆಗೆ ಬೆರಳು ಮಾಡಿ ತೋರಿಸಿದೆ. ಕಲ್ಲು ತೂರಿದ ಬಳಿಕ ಭಾನುವಾರ ಸಂಜೆ 5.45ರ ವೇಳೆಯಲ್ಲಿ ಬಜರಂಗದಳದ ಒಂದು ಗುಂಪು ಮರದ ದೊಣ್ಣೆಗಳನ್ನು ಹಿಡಿದು ಓಡಾಡುತ್ತಾ ಗಲಭೆಗೆ ಪ್ರಚೋದಿಸುತ್ತಿರುವುದು ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಪ್ರಚೋದನೆಯ ಕೃತ್ಯವನ್ನು ತಡೆಯಲು ಪೊಲೀಸ್ ಅಧಿಕಾರಿಗಳು ನಡೆಸಿರುವ ಪ್ರಯತ್ನವನ್ನೂ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್‌ ಆಗಿದೆ.

 

ಈ ವಿಡಿಯೋದಲ್ಲಿ ರೋಹನ್ ಜೊತೆಗೆ ಇತರರೂ ಮರದ ತಡಿಕೆಯೊಂದನ್ನು ಮುರಿದು, ಕೋಲುಗಳನ್ನು ಹಿಡಿದುಕೊಂಡು ಓಡಾಡುತ್ತಿರುವುದನ್ನು ಇಲ್ಲಿ ಕಾಣಬಹುದು. ಅದರಲ್ಲಿ ಸಿ.ಆರ್. ಎಂಬ ಅಕ್ಷರಗಳನ್ನು ಬರೆದಿರುವ ಟೀ ಶರ್ಟ್ ಧರಿಸಿರುವಾತನೇ ರೋಹನ್ ಅಲಿಯಾಸ್ ರೋಯಾ. ಈತ ಬಜರಂಗದಳದಲ್ಲಿ ಸಕ್ರಿಯನಾಗಿದ್ದಾನೆ ಎಂದು ಬಲ್ಲಮೂಲಗಳು ತಿಳಿಸಿವೆ.

ರಾಗಿಗುಡ್ಡದಲ್ಲಿ ಆಯೋಜಿಸಿದ್ದ ಈದ್ ಮಿಲಾದ್ ಮೆರವಣಿಗೆಯು ದೊಡ್ಡ ಪ್ರಮಾಣದಲ್ಲಿ ಶುರುವಾಗಿತ್ತು. ರೋಹನ್ ಮತ್ತು ಆತನ ಗುಂಪು ಮೆರವಣಿಗೆಯ ಮೇಲೆ ಕಲ್ಲು ಎಸೆಯುವ ಮೂಲಕ ಕೋಮು ವೈಮನಸ್ಯಕ್ಕೆ ಕಾರಣವಾಗಿದೆ.

”ನಗರದಲ್ಲಿ ಹಿಂದೂ ಗಣಪತಿ ಆಚರಣೆಯ ವೇಳೆ ವಿವಾದಾತ್ಮಕ ಮಹಾದ್ವಾರಗಳನ್ನು ನಗರಸಭೆ ತೆಗೆಸಬೇಕು. ಪೊಲೀಸರು ಈ ಕುರಿತು ಹೆಚ್ಚಿನ ಕ್ರಮ ಜರುಗಿಸಲು ಅಸಾಧ್ಯವಾಗಿದೆ” ಎಂದೂ ಕೆಲವು ಪೊಲೀಸರು ಅಸಹಾಯಕತೆ ತೋಡಿಕೊಂಡಿದ್ದಾರೆ ಎಂದು ಈ ದಿನ.ಕಾಂ ವರದಿ ಮಾಡಿದೆ.

ಇದನ್ನೂ ಓದಿ: ಶಿವಮೊಗ್ಗ: ತಲ್ವಾರು ಹಿಡಿದು ಉತ್ತರ ಕೊಡಲು ಗೊತ್ತಿದೆ; ಈಶ್ವರಪ್ಪ ಪ್ರಚೋದನಾಕಾರಿ ಹೇಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅಲಾ ನಿಮಗೆ ಕೊಲ್ಲಿ ರಾಷ್ಟ್ರಗಳಿಂದ ಅಷ್ಟೋಂದು ಹಣ ಬರುತ್ತಿದೆ. ಮತ್ತೇಕೆ ಹೀಗೆ ಡಿಜಿಟಲ್ ಬಿಕ್ಷೆ ಬೇಡುವಿರಿ? ಪೊಲೀಸರಿಗೇ ಸಿಗದ ಸಾಕ್ಷಿಗಳು ನಿಮಗೆ ಹೇಗೆ ಸಿಗುತ್ತಿವೆ? ನಿಮ್ಮ ಅಂಕಣಗಳು, ಲೇಖನಗಳನ್ನು ನೋಡಿದರೇ ಆ ಗೌರಿ ಲಂಕೇಶ್ ಎಂತಹವಳು ಎಂಬ ಅರಿವಾಗುತ್ತದೆ. ನಿಮ್ಮಂತಹ ಹಿಂದೂ ವಿರೋಧಿಗಳನ್ನು ಬೆಂಬಲಿಸುವ ಸರ್ಕಾರವನ್ನು ಜನತೆ ಆರಿಸಿದ ಪರಿಣಾಮ ಕರ್ನಾಟಕದಲ್ಲಿ ಮಳೆ ಇಲ್ಲದೇ ಬರ ಬಂದಿರುವುದು. ಛೀ ಥೂ ನಿಮ್ಮಗಳ ಜನ್ಮಕ್ಕೆ.

LEAVE A REPLY

Please enter your comment!
Please enter your name here

- Advertisment -

Must Read