Homeಮುಖಪುಟಯುಎಸ್ ಕಂಪನಿಗೆ ಕೇಂದ್ರದ ನೆರವು: ಮಾತು ಬದಲಿಸಿದ ಸಚಿವ ಕುಮಾರಸ್ವಾಮಿ

ಯುಎಸ್ ಕಂಪನಿಗೆ ಕೇಂದ್ರದ ನೆರವು: ಮಾತು ಬದಲಿಸಿದ ಸಚಿವ ಕುಮಾರಸ್ವಾಮಿ

- Advertisement -
- Advertisement -

ಗುಜರಾತ್‌ನಲ್ಲಿ ಸೆಮಿಕಂಡಕ್ಟರ್‌ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿರುವ ಕಂಪನಿಗೆ ನೀಡುತ್ತಿರುವ ಸಹಾಯಧನದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಮಾತು ಬದಲಿಸಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ (ಜೂನ್ 14) ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, “ಅಮೆರಿಕ ಮೂಲದ ಮೈಕ್ರಾನ್ ಟೆಕ್ನಾಲಜಿ ಗುಜರಾತ್‌ನಲ್ಲಿ 22,976 ಕೋಟಿ ರೂಪಾಯಿ (2.75 ಬಿಲಿಯನ್ ಡಾಲರ್) ಹೂಡಿಕೆ ಮಾಡುತ್ತಿದೆ. ಅದಕ್ಕೆ ಕೇಂದ್ರ ಹಾಗೂ ಗುಜರಾತ್ ರಾಜ್ಯ ಸರ್ಕಾರ ನೀಡುತ್ತಿರುವ ಸಹಾಯಧನ ಶೇ. 70ರಷ್ಟಿದೆ. ಕಂಪನಿ 5 ಸಾವಿರ ಉದ್ಯೋಗ ನೀಡುವ ಭರವಸೆ ನೀಡಿದೆ. ಇದಕ್ಕೆ ನೀಡುವ ಸಹಾಯಧನ ಲೆಕ್ಕ ಹಾಕಿದರೆ ಪ್ರತಿ ಉದ್ಯೋಗಕ್ಕೆ 3.2 ಕೋಟಿ ರೂ. ವೆಚ್ಚವಾಗುತ್ತದೆ. ಒಂದು ಉದ್ಯೋಗಕ್ಕೆ ಅಷ್ಟು ಹಣ ನೀಡುವುದು ಎಷ್ಟು ಸರಿ ಎಂದು ಸಚಿವನಾದ ಬಳಿಕ ಮೊದಲ ಸಭೆಯಲ್ಲೇ ನಾನು ಅಧಿಕಾರಿಗಳನ್ನು ಪ್ರಶ್ನಿಸಿದ್ದೆ” ಎಂದು ಹೇಳಿದ್ದರು.

“ಬೆಂಗಳೂರಿನ ಪೀಣ್ಯದಲ್ಲಿಯೂ ಹಲವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿವೆ. ಆ ಕಂಪನಿಗಳಿಗೆ ಎಷ್ಟು ಸಹಾಯಧನ ನೀಡಲಾಗಿದೆ?” ಎನ್ನುವ ಮೂಲಕ ಕೇಂದ್ರದ ಸಹಾಯಧನ ನೀತಿಯನ್ನು ಪ್ರಶ್ನಿಸಿದ್ದರು.

ಕುಮಾರಸ್ವಾಮಿಯವರ ಹೇಳಿಕೆಯನ್ನು ಸ್ವಾಗತಿಸಿದ್ದ ರಾಜ್ಯದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್, “ಕುಮಾರಸ್ವಾಮಿ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೇನೆ. ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿಸಬೇಕು. ಆದರೆ, ಉದ್ಯೋಗ ಸೃಷ್ಟಿಸಲು ಸರ್ಕಾರವೇ 70% ಹಣ ನೀಡುವುದಾದರೆ, ಆ ಘಟಕಗಳನ್ನು ಸಾರ್ವಜನಿಕ ವಲಯದ ಉದ್ಯಮ ಎಂದು ಪರಿಗಣಿಸಬಹುದು. ಕೇಂದ್ರ ಸರ್ಕಾರ ಇದೇ ನೀತಿ ಮುಂದುವರೆಸುವುದಾದರೆ, ದೇಶದ ಎಲ್ಲಾ ರಾಜ್ಯಗಳಿಗೂ ಸಮಾನ ಸೂತ್ರ ಮತ್ತು ಅವಕಾಶ ದೊರೆಯಬೇಕು” ಎಂದಿದ್ದರು.

ತನ್ನ ಹೇಳಿಕೆಯ ಕುರಿತು ಶನಿವಾರ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, “ಸೆಮಿಕಂಡಕ್ಟರ್ ಒಂದು ಕಾರ್ಯತಂತ್ರದ ಉದ್ಯಮವಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಆಟೋ ಮೊಬೈಲ್ ಉತ್ಪಾದನೆಗೆ ಇದು ಮೂಲಭೂತ ಅವಶ್ಯಕತೆಯಾಗಿದೆ. ಈ ಎರಡೂ ಕ್ಷೇತ್ರಗಳು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಕ್ಷೇತ್ರದ ಬೆಳವಣಿಗೆಗೆ ಪ್ರಧಾನಿ ಮೋದಿಯವರು ತೆಗೆದುಕೊಂಡ ಉಪಕ್ರಮಗಳನ್ನು ಶ್ಲಾಘಿಸುತ್ತೇನೆ. ನನ್ನ ಸಚಿವಾಲಯದ ಮೂಲಕ ಅವುಗಳ ಅಗತ್ಯ ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ : ‘ಇಂಡಿಯಾ ಬ್ಲಾಕ್‌’ನ ಐತಿಹಾಸಿಕ ಗೆಲುವು ಬಿಜೆಪಿಯನ್ನು 240 ಸ್ಥಾನಗಳಿಗೆ ಸೀಮಿತಗೊಳಿಸಿದೆ: ಎಂಕೆ ಸ್ಟಾಲಿನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...