ಒಕ್ಕೂಟ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ಶುಕ್ರವಾರ ಎಡವಟ್ಟು ಮಾಡಿರುವ ಘಟನೆ ನಡೆದಿದೆ. ಹುತಾತ್ಮ ಸೈನಿಕನೊಬ್ಬನ ಮನೆಗೆ ತೆರಳಬೇಕಿದ್ದ ಅವರು, ಕರ್ತವ್ಯದಲ್ಲಿದ್ದ ಸೈನಿಕನೊಬ್ಬನ ಮನೆಗೆ ತೆರಳಿ ಸಾಂತ್ವಾನ ಹೇಳಿದ್ದಲ್ಲದೆ, ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಮತ್ತು ಭೂಮಿ ನೀಡುವುದಾಗಿ ಭರವಸೆ ನೀಡದ್ದಾರೆ.
ಸಚಿವ ನಾರಾಯಣಸ್ವಾಮಿ ತೆರಳಿದ್ದ ಮನೆಯಲ್ಲಿನ ಸೈನಿಕ ರವಿಕುಮಾರ್ ಕಟ್ಟಿಮನಿ ಜಮ್ಮೂ ಕಾಶೀರದಲ್ಲಿ ಕರ್ತವ್ಯದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವರ್ಷಗಳ ಹಿಂದೆ ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದ ಮುಳಗುಂದದ ಯೋಧ ಬಸವರಾಜ್ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಬೇಕಿದ್ದ ಸಚಿವ ಜೀವಂತ ಇರುವ ಸೈನಿಕನ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ: ನಿರ್ಮಾಣ ಹಂತದಲ್ಲೆ ಕುಸಿದ ‘ನಮೋ’ ಕಾಲೇಜ್; ‘ಬ್ರಾಂಡ್‌ನೇಮ್ ಎಫೆಕ್ಟ್? – ಮಾಜಿ ಐಎಎಸ್ ಪ್ರಶ್ನೆ!
ಬಿಜೆಪಿಯ ಜನ ಆಶೀರ್ವಾದ ಯಾತ್ರೆಯಲ್ಲಿ ಈ ಘಟನೆ ನಡೆದಿದೆ. ಯಾತ್ರೆ ಅಂಗವಾಗಿ ಗದಗ ಜಿಲ್ಲೆಯಲ್ಲಿನ ಮುಳಗುಂದದಲ್ಲಿರುವ ಹುತಾತ್ಮ ಸೈನಿಕನ ನಿವಾಸಕ್ಕೆ ಭೇಟಿ ನೀಡಬೇಕಿತ್ತು. ಆದರೆ ಅವರು ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ರವಿಕುಮಾರ್ ಕಟ್ಟಿಮನಿ ಅವರ ಮನೆಗೆ ತೆರಳಿದ್ದಾರೆ. ಕುಟುಂಬ ಸದಸ್ಯರ ಆರೋಗ್ಯ ಮತ್ತು ಮನೆಯ ಪರಿಸ್ಥಿತಿಯನ್ನು ವಿಚಾರಿಸಿ, ನಂತರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಮತ್ತು ಭೂಮಿ ನೀಡುವುದಾಗಿ ಘೋಷಿಸಿದ್ದಾರೆ.
ಇದರಿಂದಾಗಿ ಕುಟುಂಬದ ಸದಸ್ಯರು ಗೊಂದಲಕ್ಕೆ ಸಿಲುಕಿ ಆಘಾತಕ್ಕೊಳಗಾಗಿದ್ದು, ತಕ್ಷಣವೆ ಕುಟುಂಬದ ಪರಿಚಯಸ್ಥರೊಬ್ಬರು ಸೈನಿಕ ರವಿಕುಮಾರ್‌ಗೆ ವಿಡಿಯೋ ಕರೆ ಮಾತನಾಡಿದ್ದಾರೆ. ನಂತರ ಸಚಿವರು ಕೂಡಾ ಅವರೊಂದಿಗೆ ಮಾತನಾಡಿ, ಕುಟುಂಬವನ್ನು ಅಭಿನಂದಿಸಿ ಅಲ್ಲಿಂದ ತೆರಳಿದ್ದಾರೆ.
ಸೈನಿಕನ ನಿವಾಸವನ್ನು ತೊರೆದ ನಂತರ ಸಚಿವರು ಸ್ಥಳೀಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ಹಿಂದೂ ವರದಿ ಮಾಡಿದೆ. ಸ್ಥಳೀಯ ಬಿಜೆಪಿ ನಾಯಕರು ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: ಕೊರೊನಾ ಎದುರಿಸಲು ನೆಹರು-ಇಂದಿರಾ-ಮನಮೋಹನ್ ಸಿಂಗ್ ಕಟ್ಟಿದ ವ್ಯವಸ್ಥೆಯೆ ದೇಶಕ್ಕೆ ಸಹಾಯ ಮಾಡಿದೆ: ಶಿವಸೇನೆ