Homeಮುಖಪುಟಜೀವ ರಕ್ಷಣೆಯ ಬಳಿಕ ಅತಂತ್ರ ಸ್ಥಿತಿಯಲ್ಲಿ ಸಿಲ್ಕ್ಯಾರ ಸುರಂಗ ಕಾರ್ಮಿಕರು

ಜೀವ ರಕ್ಷಣೆಯ ಬಳಿಕ ಅತಂತ್ರ ಸ್ಥಿತಿಯಲ್ಲಿ ಸಿಲ್ಕ್ಯಾರ ಸುರಂಗ ಕಾರ್ಮಿಕರು

- Advertisement -
- Advertisement -

ಉತ್ತರಾಖಂಡದ ಸಿಲ್ಕ್ಯಾರ ಸುರಂಗದೊಳಗೆ 17 ದಿನಗಳ ಕಾಲ ಒದ್ದಾಡಿ ಹೊರಬಂದ ಕಾರ್ಮಿಕರು ಈಗ ಗೊಂದಲಕ್ಕೆ ಸಿಲುಕಿದ್ದಾರೆ. ದೊಡ್ಡ ದುರಂತದ ಬಳಿಕ ಸುರಂಗ ಕಾಮಗಾರಿ ಸ್ಥಗಿತಗೊಂಡಿದ್ದು, ಕಾರ್ಮಿಕರು ಮನೆಗೆ ಹೋಗಬೇಕಾ? ಕಾಮಗಾರಿ ಸ್ಥಳದಲ್ಲಿಯೇ ಉಳಿಯಬೇಕಾ? ಎಂಬ ಚಿಂತೆಯಲ್ಲಿದ್ದಾರೆ.

“ನಾನು ಮನೆಗೆ ಹೋಗಲು ರಜಾ ಅರ್ಜಿ ಬರೆದಿಟ್ಟಿದ್ದೇನೆ. ಮತ್ತೆ ಯಾವಾಗ ಕೆಲಸ ಪ್ರಾರಂಭವಾಗುತ್ತದೆ ಎಂದು ಗೊತ್ತಿಲ್ಲ. ಕುಟುಂಬಸ್ಥರು ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಮೆಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಬಿಹಾರ ಮೂಲಕ ಕಾರ್ಮಿಕನೊಬ್ಬ ಹೇಳಿದ್ದಾರೆ.

“ಸುರಂಗ ಕೊರೆಯುವ ಕೆಲಸ ಅತ್ಯಂತ ಅಪಾಯಕಾರಿ. ಅದನ್ನು ಬಿಟ್ಟು ಮನೆಗೆ ಬರುವಂತೆ ನನ್ನ ಅಮ್ಮ ಒತ್ತಾಯಿಸಿದ್ದಾರೆ” ಎಂದು ಮತ್ತೊಬ್ಬ ಕಾರ್ಮಿಕ ಹೇಳಿದ್ದಾಗಿ ಟೈಮ್ಸ್ ನೌ ವರದಿ ಮಾಡಿದೆ.

ಸರ್ಕಾರದ ಮೂಲಗಳ ಪ್ರಕಾರ, ಸುರಂಗದ ಸುರಕ್ಷತೆಯ ಪರಿಶೀಲನೆ ನಡೆದ ನಂತರವೇ ಕಾಮಗಾರಿ ಪುನರಾರಂಭವಾಗಲಿದೆ. ಸುರಂಗದ ಮೇಲ್ಬಾಗದಲ್ಲಿ 45 ಮೀಟರ್‌ಗಳಷ್ಟು ರಂಧ್ರ ಕೊರೆಯಲಾಗಿತ್ತು. ತ್ಯಾಜ್ಯಗಳು ಇನ್ನೂ ಸುರಂಗದೊಳಗಡೆ ಇದೆ.

“ನಾವು ಇಲ್ಲಿ ಉಳಿಯಬೇಕಾ? ಮನೆಗೆ ಹೋಗಬೇಕಾ? ಗೊತ್ತಿಲ್ಲ” ಎಂದು ಕಳೆದ ಎರಡು ವರ್ಷಗಳಿಂದ ಸಿಲ್ಕ್ಯಾರ ಸುರಂಗ ಕಾಮಗಾರಿಯಲ್ಲಿ ದುಡಿಯುತ್ತಿರುವ ಒಡಿಶ್ಶಾ ಮೂಲದ ಕಾರ್ಮಿಕ ಹೇಳಿದ್ದಾರೆ.

“ನಾವು ವಿಶ್ರಾಂತಿಗಾಗಿ ಎರಡು ದಿನಗಳ ರಜೆ ಕೇಳಿದ್ದೆವು. ನಮ್ಮ ಕಾಂಟ್ರಾಕ್ಟರ್ ರಜೆ ಕೊಟ್ಟಿದ್ದಾರೆ. ನಾವು ನಮ್ಮ ರಜೆಯನ್ನು ವಿಸ್ತರಣೆ ಮಾಡುವ ಯೋಚನೆಯಲ್ಲಿದ್ದೇವೆ” ಎಂದು ಉತ್ತರ ಪ್ರದೇಶದ ಮತ್ತೊಬ್ಬ ಕಾರ್ಮಿಕ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಪ್ರಸ್ತುತ ಸುರಂಗ ಕಾಮಗಾರಿಯ ಕಾರ್ಮಿಕರು, ಅಧಿಕಾರಿಗಳು ಸಿಲ್ಕ್ಯಾರದ ಆಸುಪಾಸಿನ ಅತಿಥಿ ಗೃಹ, ಹೋಮ್ ಸ್ಟೇಗಳಲ್ಲಿ ಉಳಿದುಕೊಂಡಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಮೇಲುಸ್ತುವಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಕಳೆದ ನಾಲ್ಕು ವರ್ಷಗಳಿಂದ ಸಿಲ್ಕ್ಯಾರ ಸುರಂಗ ಕಾಮಗಾರಿ ನಡೆಸುತ್ತಿದೆ. ಚಾರ್ ಧಾಮ ರಸ್ತೆ ಕಾಮಗಾರಿಯ ಪ್ರಮುಖ ಭಾಗವಾದ ಸಿಲ್ಕ್ಯಾರ ಸುರಂಗ ಯಮನೋತ್ರಿ ಮತ್ತು ಗಂಗೋತ್ರಿ ನಡುವಿನ 28 ಕಿ.ಮೀ ದೂರವನ್ನು 4 ಕಿ.ಮೀ ಗೆ ಇಳಿಸುವ ಉದ್ದೇಶ ಹೊಂದಿದೆ.

ನವೆಂಬರ್ 12ರಂದು ಸಿಲ್ಕ್ಯಾರ ಸುರಂಗದೊಳಗೆ ಕುಸಿತ ಸಂಭವಿಸಿ 41 ಕಾರ್ಮಿಕರು ಸಿಲುಕಿಕೊಂಡಿದ್ದರು. 17 ದಿನಗಳ ಸತತ ಕಾರ್ಯಾಚರಣೆಯ ಬಳಿಕ ನ.28ರಂದು ಎಲ್ಲಾ ಕಾರ್ಮಿಕರನ್ನು ಸುರಕ್ಷಿತವಾಗಿ ಸುರಂಗದಿಂದ ಹೊರ ತರಲಾಗಿದೆ.ಗ

ಇದನ್ನೂ ಓದಿ : ಜೀವ ರಕ್ಷಣೆಯ ಜೊತೆಗೆ ಸಾಮರಸ್ಯದ ಸಂದೇಶ ಸಾರಿದ ಸಿಲ್ಕ್ಯಾರ ಕಾರ್ಯಾಚರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಟಿಪ್ಪು ಸುಲ್ತಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬುವುದು ಸುಳ್ಳು

0
"ಜಿಹಾದಿ ಶಾರುಖ್ ಖಾನ್‌ನ ಭಾರೀ ಬಜೆಟ್‌ನಿಂದ ತಯಾರಾದ ದೇಶದ್ರೋಹಿ, ಮತಾಂಧ ತಿಪ್ಪೆ ಸುಲ್ತಾನನ ನಕಲಿ ಚರಿತ್ರೆ ಬರುತ್ತಿದೆ. ಇಂತಹ ದೇಶದ್ರೋಹಿಯ ಸಿನಿಮಾವನ್ನು ಬಹಿಷ್ಕರಿಸಲು ಶೇರ್ ಮಾಡಿ" ಎಂದು ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ...