Homeಮುಖಪುಟಬಿಜೆಪಿ ಶಾಸಕನ ಪುತ್ರಿಯ ಆರೋಪ ಅಲ್ಲಗಳೆದ ಯುಪಿ ಪೊಲೀಸರು

ಬಿಜೆಪಿ ಶಾಸಕನ ಪುತ್ರಿಯ ಆರೋಪ ಅಲ್ಲಗಳೆದ ಯುಪಿ ಪೊಲೀಸರು

- Advertisement -
- Advertisement -

ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಬಿದುನಾ ವಿನಯ್ ಶಾಕ್ಯಾ ಅವರ ಪುತ್ರಿ ರಿಯಾ ಶಕ್ಯಾ ಅವರು, “ನಮ್ಮ ತಂದೆಯನ್ನು ಬಲವಂತವಾಗಿ ಲಕ್ನೋಗೆ ಕರೆದೊಯ್ದಿದ್ದಾರೆ” ಎಂದು ಆರೋಪಿಸಿದ್ದಾರೆ. ಆದರೆ ಇದು ನಿರಾಧಾರ ಎಂದು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಹೇಳಿದ್ದಾರೆ.

ರಿಯಾ ಅವರ ವೀಡಿಯೊ ವೈರಲ್ ಆಗಿದೆ. ಆ ಬಳಿಕ , ಔರೈಯಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಭಿಷೇಕ್ ವರ್ಮಾ ಪ್ರತಿಕ್ರಿಯೆ ನೀಡಿದ್ದು, “ವಿನಯ್ ಶಾಕ್ಯಾ ಪ್ರಸ್ತುತ ತಮ್ಮ ಇಟಾವಾ ನಿವಾಸದಲ್ಲಿ ನೆಲೆಸಿದ್ದಾರೆ. ಪೊಲೀಸ್ ಸಿಬ್ಬಂದಿ ಕೂಡ ಸ್ಥಳದಲ್ಲಿದ್ದಾರೆ” ಎಂದು ತಿಳಿಸಿದ್ದಾರೆ.

“ನಾನು ಶಾಸಕ ವಿನಯ್ ಶಾಕ್ಯಾ ಅವರೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡಿದ್ದೇನೆ. ವಿನಯ್‌ ಅವರು ಪ್ರಸ್ತುತ ಅವರ ಇಟಾವಾ ನಿವಾಸದಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿಯಿತು. ಪೊಲೀಸ್ ಭದ್ರತಾ ಸಿಬ್ಬಂದಿ ಕೂಡ ಸ್ಥಳದಲ್ಲಿದ್ದಾರೆ. ಶಾಸಕ ವಿನಯ್ ಶಾಕ್ಯಾ ಅವರ ಪುತ್ರಿ ರಿಯಾ ಶಕ್ಯಾ ಅವರ ವೈರಲ್ ವೀಡಿಯೊ ಆಧಾರರಹಿತವಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಒಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮೂವರು ಶಾಸಕರು ಪಕ್ಷವನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿದಿರುವ ಬಿಜೆಪಿಗೆ ಇದು ಆಘಾತ ನೀಡಿದೆ. ತಿಂಡವಾರಿ ಶಾಸಕ ಬ್ರಜೇಶ್ ಪ್ರಜಾಪತಿ, ತಿಲ್ಹಾರ್‌ನ ರೋಷನ್ ಲಾಲ್ ವರ್ಮಾ ಮತ್ತು ಬಿಲ್ಹೌರ್‌ನ ಭಗವತಿ ಸಾಗರ್ ಅವರು ಪಕ್ಷವನ್ನು ತೊರೆಯುವುದನ್ನು ಖಚಿತಪಡಿಸಿದ ನಂತರ, ವಿನಯ್ ಶಾಕ್ಯಾ ಬಿಜೆಪಿಯನ್ನು ತೊರೆದಿದ್ದಾರೆ ಎಂಬ ವರದಿಗಳೂ ಆಗಿವೆ.

ಬಿಧುನಾ ಶಾಸಕ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ವರದಿಗಳನ್ನು ನಿರಾಕರಿಸಿದ ರಿಯಾ ಶಕ್ಯಾ, “ಪಾರ್ಶ್ವವಾಯು ಪೀಡಿತ ನನ್ನ ತಂದೆಯನ್ನು ನನ್ನ ಚಿಕ್ಕಪ್ಪ ದೇವೇಶ್ ಶಾಕ್ಯಾ ಅವರು ವೈಯಕ್ತಿಕ ರಾಜಕೀಯಕ್ಕಾಗಿ ಲಕ್ನೋಗೆ ಬಲವಂತವಾಗಿ ಕರೆದೊಯ್ದಿದ್ದಾರೆ” ಎಂದು ದೂರಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ರಿಯಾ, “ನನ್ನ ತಂದೆಗೆ ಕೆಲವು ವರ್ಷಗಳ ಹಿಂದೆ ಪಾರ್ಶ್ವವಾಯು ಆಗಿದೆ. ಅವರಿಗೆ ನಡೆದಾಡಲೂ ಸಾಧ್ಯವಾಗುತ್ತಿಲ್ಲ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ನನ್ನ ತಂದೆಯ ಅನಾರೋಗ್ಯದ ಲಾಭವನ್ನು ಪಡೆದುಕೊಂಡು ವೈಯಕ್ತಿಕ ರಾಜಕೀಯ ಮಾಡಿಕೊಳ್ಳಲು ನನ್ನ ಚಿಕ್ಕಪ್ಪ ದೇವೇಶ್ ಶಾಕ್ಯಾ ಆರಂಭಿಸಿದ್ದಾರೆ” ಎಂದು ಹೇಳಿದ್ದರು.

“ಇಂದು, ಅವರು (ದೇವೇಶ್‌‌ ಶಾಕ್ಯಾ) ಎಲ್ಲಾ ಮಿತಿಗಳನ್ನು ದಾಟಿದ್ದು ನಮ್ಮ ಮನೆಯಿಂದ ನನ್ನ ತಂದೆಯನ್ನು ಬಲವಂತವಾಗಿ ಕರೆದೊಯ್ದು ಎಸ್ಪಿಗೆ ಸೇರಿಸಲು ಲಕ್ನೋಗೆ ಹೋಗಿದ್ದಾರೆ” ಎಂದು ವಿಡಿಯೊ ಮೂಲಕ ತಿಳಿಸಿದ್ದರು.

“ನಾವು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯೊಂದಿಗೇ ಯಾವಾಗಲೂ ದೃಢವಾಗಿ ನಿಲ್ಲುತ್ತೇವೆ” ಎಂದು ಹೇಳುವ ಮೂಲಕ ರಿಯಾ ತನ್ನ ತಂದೆ ಇರುವ ಸ್ಥಳವನ್ನು ಕಂಡುಹಿಡಿಯಲು ಸಹಾಯ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ವಿನಂತಿಸಿದ್ದರು. ಆದರೆ ಪೊಲೀಸರು ರಿಯಾ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ಏಳು ಹಂತಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫೆ.10ರಂದು ಆರಂಭವಾಗಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.


ಇದನ್ನೂ ಓದಿರಿ: ಯುಪಿ ಬಿಜೆಪಿಗೆ ಬಿಗ್‌ ಶಾಕ್‌: ಸಚಿವರ ನಂತರ ಮತ್ತೆ ಮೂವರು ಶಾಸಕರ ರಾಜೀನಾಮೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...