ಹಿಂದೆ ರಾಹುಲ್‍ ಗಾಂಧಿಯವರಿಗೆ ನಿಕಟವಾಗಿದ್ದ ಕಾಂಗ್ರೆಸ್‍ ನಾಯಕ, ಕೇಂದ್ರದ ಮಾಜಿ ಸಚಿವ ಜಿತಿನ್ ಪ್ರಸಾದ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ದೆಹಲಿಯ ತನ್ನ ಕಚೇರಿಯಲ್ಲಿ ಕಾಂಗ್ರೆಸ್‍ ನಾಯಕತ್ವವು, ಪಂಜಾಬ್‍ ಕಾಂಗ್ರೆಸ್‍ನ ಆಂತರಿಕ ಬಿಕ್ಕಟ್ಟನ್ನು ನಿವಾರಿಸಲು ಸಭೆ ನಡೆಸುತ್ತಿರುವ ಸಮಯದಲ್ಲೇ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಸಿನ ಪ್ರಧಾನ ಬ್ರಾಹ್ಮಣ ಮುಖವಾಗಿದ್ದ 47 ವರ್ಷದ ಜಿತಿನ್‍ ಪ್ರಸಾದ ಕಾಂಗ್ರೆಸ್‍ನಿಂದ ನಿರ್ಗಮಿಸಿದ್ದಾರೆ.

“ಬಿಜೆಪಿ ಮಾತ್ರ ನಿಜವಾದ ರಾಜಕೀಯ ಪಕ್ಷ. ಇದು ಏಕೈಕ ರಾಷ್ಟ್ರೀಯ ಪಕ್ಷ. ಉಳಿದ ಪಕ್ಷಗಳು ಪ್ರಾದೇಶಿಕ. ಬಿಜೆಪಿ ಮತ್ತು ಮೋದಿ ಮಾತ್ರ ದೇಶವು ಈಗ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಬಲ್ಲರು” ಎಂದು ಜಿತನ್ ಪ್ರಸಾದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಹೇಳಿದ್ದಾರೆ.

ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ತೊರೆದ ನಂತರ ಜಿತಿನ್‍ ನಿರ್ಗಮನ ಎರಡನೇ ದೊಡ್ಡ ನಿರ್ಗಮನವಾಗಿದೆ. ಜಿತಿನ್‍ ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂಬ ವದಂತಿಗಳನ್ನು ಅವರು 2019ರಲ್ಲಿ ನಿರಾಕರಿಸಿದ್ದರು. ಆ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್‍ನಲ್ಲೇ ಉಳಿಯಲು ಜಿತಿನ್‍ ಅವರಿಗೆ ಮನವರಿಕೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

“ನೀವು ಪ್ರತಿನಿಧಿಸುವ ಜನರಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ ಒಂದು ಪಕ್ಷವಾಗಿ ಇರುವುದರ ಅರ್ಥವೇನು?” ಎಂದು ಜಿತಿನ್‍ ಕಾಂಗ್ರೆಸ್‍ ಕುರಿತು ಇಂದು ಹೇಳಿದರು.

‘ಕಾಂಗ್ರೆಸ್‍ ಜೊತೆಗಿನ 20 ವರ್ಷಗಳ ಪಯಣದಲ್ಲಿ ಇದೇನೂ  ಅವರ ಮೊದಲ ಬಾರಿಯ ಹತಾಶೆಯಲ್ಲ ಎಂಬುದು ರಹಸ್ಯವೇನೂ ಅಲ್ಲ. ಅವರು “ಜಿ -23” ಅಥವಾ 23 ಕಾಂಗ್ರೆಸ್ ನಾಯಕರ ಗುಂಪಿನ ಭಾಗವಾಗಿದ್ದರು. ಈ ಗುಂಪು ಕಳೆದ ವರ್ಷ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಪತ್ರ ಬರೆದು, ಪಕ್ಷದಲ್ಲಿ ಆಂತರಿಕ ಸುಧಾರಣೆಗಳು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಪೂರ್ಣಾವಧಿಯ ಜನಪ್ರಿಯ ನಾಯಕತ್ವಕ್ಕೆ ಕರೆ ನೀಡಿತ್ತು.

ಪಕ್ಷವು ಇದೆಲ್ಲದರ ತಿದ್ದುಪಡಿಯ ಬಗ್ಗೆ ಮಾತನಾಡಿದ್ದರೂ ಮತ್ತು ಸಮಿತಿಯನ್ನೂ ನೇಮಿಸಿದ್ದರೂ ವಾಸ್ತವದಲ್ಲಿ ಏನೂ ಬದಲಾಗಿಲ್ಲ.

ಈ ಪತ್ರದ ನಂತರ, ಯಾವುದೇ ಮುಖ್ಯ ಪಾತ್ರವನ್ನು ಪಡೆಯಬಹುದಾದ ಕೆಲವೇ “ಭಿನ್ನಮತೀಯರಲ್ಲಿ” ಜಿತಿನ್‍ ಒಬ್ಬರಾಗಿದ್ದರು. ಕಾಂಗ್ರೆಸ್‍ನ ಬಂಗಾಳ ಚುನಾವಣಾ ಪ್ರಚಾರದ ಕಾರ್ಯವನ್ನು ಅವರು ನಿರ್ವಹಿಸಿದರು, ಆದರೆ ಅಲ್ಲಿ ತೀವ್ರ ಹಿನ್ನಡೆಯ ಫಲಿತಾಂಶ ಬಂದಿತು.

ಮೌಲ್ವಿಯೊಬ್ಬರ  ನೇತೃತ್ವದ ಇಂಡಿಯನ್‍ ಸೆಕ್ಯುಲರ್ ಫ್ರಂಟ್‍ ಜೊತೆ ಕಾಂಗ್ರೆಸ್‍ನ  ಮೈತ್ರಿ ಸೇರಿದಂತೆ, ತಮ್ಮ ಪಕ್ಷದ ಇತರ ನಿರ್ಧಾರಗಳನ್ನು ಅವರು ಬಹಿರಂಗವಾಗಿ ಟೀಕಿಸಿದ್ದರು. ನಂತರವೂ, ‘ಇದು ಪಕ್ಷದ ನಿರ್ಧಾರ. ಎಲ್ಲರೊಟ್ಟಿಗೆ ಕೆಲಸ ಮಾಡೋಣ’ ಎಂದು ಬಂಗಾಳ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರು.

ಉತ್ತರ ಪ್ರದೇಶದ ಧೌರಾಹ್ರಾ ಕ್ಷೇತ್ರದ ಮಾಜಿ ಲೋಕಸಭಾ ಸಂಸದರಾದ ಜಿತಿನ್‍, ಉತ್ತರಪ್ರದೇಶದ ಉನ್ನತ ಕಾಂಗ್ರೆಸ್‍ ನಾಯಕರಲ್ಲಿ ಒಬ್ಬರಾಗಿದ್ದರು. ಈಗ ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಅಲ್ಲಿ ಚುನಾವಣೆ ನಡೆಯಲಿದ್ದು ಇದು ಕಾಂಗ್ರೆಸ್‍ಗೆ ಹಿನ್ನಡೆ ಎನ್ನಲಾಗಿದೆ.

ಲೆಟರ್ ಬಾಂಬ್ ನಂತರ, ಉತ್ತರಪ್ರದೇಶದ ಕಾಂಗ್ರೆಸ್ ಘಟಕವು ಜಿ -23 ಗುಂಪಿನ ವಿರುದ್ಧ ಕ್ರಮಕೈಗೊಳ್ಳಲು ಕರೆ ನೀಡಿತ್ತು. ಜಿತಿನ್‍ ತಂದೆ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಜಿತೇಂದ್ರ ಪ್ರಸಾದ್‍ ಅವರು 1999ರಲ್ಲಿ ಸೋನಿಯಾ ಗಾಂಧಿಯವರ ನಾಯಕತ್ವವನ್ನು ಪ್ರಶ್ನಿಸಿದ್ದರು ಮತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ಅವರ ವಿರುದ್ಧ ಸ್ಪರ್ಧಿಸಿದ್ದರು. ಅವರು 2002ರಲ್ಲಿ ನಿಧನರಾದರು.

ರಾಹುಲ್ ಗಾಂಧಿಯವರ ಆಂತರಿಕ ವಲಯದಲ್ಲಿದ್ದ ಜಿತಿನ್ ಪ್ರಸಾದ ಅವರು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದರು.


ಇದನ್ನೂ ಓದಿ: ಚುನಾವಣಾ ಆಯುಕ್ತರಾಗಿ ನಿವೃತ್ತ IAS ಅಧಿಕಾರಿ ಅನುಪ್‌ ಚಂದ್ರ ಪಾಂಡೆ ನೇಮಕ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here