ಫೆಬ್ರವರಿ 7, 2021ರಂದು ಕೇಂದ್ರ ಸರ್ಕಾರದ ನೀತಿ ಆಯೋಗ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿತು. ಪರಿಸರ ಪರವಾದ ತೀರ್ಪುಗಳಿಂದ ಭಾರತದ ಆರ್ಥಿಕ ಅಭಿವೃದ್ಧಿಯ ಮೇಲೆ ಉಂಟಾದ ಪರಿಣಾಮಗಳ ಕುರಿತು ಅಧ್ಯಯನ ನಡೆಸುವ ಕುರಿತ ಪ್ರಕಟಣೆ ಅದಾಗಿತ್ತು. ಈ ಅಂಗವಾಗಿ ಪರಮೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯ ಮತ್ತು ರಾಷ್ಟ್ರೀಯ ಹಸಿರು ಪೀಠಗಳು ನೀಡಿದ 5 ತೀರ್ಪುಗಳ ಅಧ್ಯಯನ ನಡೆಸಿ, ಅದರಿಂದ ಹೇಗೆ ಆರ್ಥಿಕ ಪ್ರಗತಿಯ ಮೇಲೆ ಪರಿಣಾಮವಾಗಿದೆ ಎಂಬುದರ ಕುರಿತು ನ್ಯಾಯಮೂರ್ತಿಗಳಿಗೆ “ಅರಿವು” ಮೂಡಿಸುವ ಯೋಜನೆಯನ್ನೂ ಹಾಕಿಕೊಂಡಿತ್ತು.

ಈ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಉತ್ತರಾಖಂಡದ ಚಮೋಲಿ ಜಿಲ್ಲೆಯ ಖುಷಿ ಗಂಗಾ, ಧೌಲಿ ಗಂಗಾ ನದಿಗಳಲ್ಲಿ ಭಾರೀ ಪ್ರಮಾಣದಲ್ಲಿ ಕ್ಷಿಪ್ರ ಪ್ರವಾಹ ಬಂದು ಅಪಾರ ಸಾವುನೋವು ಉಂಟಾದ ಸುದ್ದಿ ಬರಹತ್ತಿತು. ಪ್ರವಾಹದ ತೀವ್ರತೆ ಎಷ್ಟಿತ್ತೆಂದರೆ ಋಷಿಗಂಗಾ ಜಲವಿದ್ಯುತ್ ಯೋಜನೆಯು ಕೊಚ್ಚಿಕೊಂಡುಹೋಗಿತ್ತು. ಧೌಲಿ ಗಂಗಾ ಅಣೆಕಟ್ಟೆಯೇ ಒಡೆದುಹೋಗಿತ್ತು ಮತ್ತು ನದಿ ಪಾತ್ರದ 13 ಹಳ್ಳಿಗಳು ಕೊಚ್ಚಿಕೊಂಡು ಹೋಗಿದ್ದವು. “ನಿಮ್ಮ ಅತಿ ಬುದ್ಧಿವಂತಿಕೆ ನನ್ನ ಮುಂದೆ ನಡೆಯುವುದಿಲ್ಲ” ಎಂದು ಪ್ರಕೃತಿಯು ನೀತಿ ಆಯೋಗಕ್ಕೆ ನೀತಿ ಪಾಠ ಹೇಳಬಯಸಿತ್ತೋ ಏನೋ?

ಹಿಮಾಲಯದ ಮಡಿಲಲ್ಲಿ ಇರುವ ಪುಟ್ಟ ರಾಜ್ಯ ಉತ್ತರಾಖಂಡಕ್ಕೆ ಇದೇನೂ ಮೊದಲನೇ ಪ್ರವಾಹವೂ ಅಲ್ಲ ಮತ್ತು ಕೊನೆಯದೂ ಆಗಿರುವುದಿಲ್ಲ. ಆದರೆ ಇದಕ್ಕೂ ಮುಂಚೆ ಉಂಟಾದ ತೊಂದರೆಗಳಿಂದ ನಾವು ಪಾಠ ಕಲಿತಿದ್ದರೆ ಅದು ಜಾಣತನದ ಲಕ್ಷಣವಾಗಿರುತ್ತಿತ್ತು. ಆದರೆ ಪಾಠ ಕಲಿಯುವುದು ಒತ್ತಟ್ಟಿಗಿರಲಿ ಈ ಮುಂಚೆಯಿದ್ದ ಎಲ್ಲ ನಿಯಮಗಳನ್ನು ಮತ್ತು ಅಪಾಯದ ಮುನ್ಸೂಚನೆಗಳನ್ನು ಗಾಳಿಗೆ ತೂರಿ ಇನ್ನೂ ಹೆಚ್ಚಿನ ವಿನಾಶಕ್ಕೆ ನಾವೇ ಮುನ್ನುಡಿ ಬರೆಯುತ್ತಿದ್ದೇವೆ. ಇದಕ್ಕೂ ಮುಂಚೆ 2013ರಲ್ಲಿ ಇನ್ನೂ ದೊಡ್ಡ ಮಟ್ಟದ ಪ್ರವಾಹವನ್ನು ಉತ್ತರಾಖಂಡವು ನೋಡಿತ್ತು. ಮೇಘ ಸ್ಫೋಟದಿಂದಾಗಿ ನದಿಗಳೆಲ್ಲ ಉಕ್ಕಿ ಹರಿದು ಸುಮಾರು 5 ಸಾವಿರ ಜನರು ಪ್ರಾಣವನ್ನು ಕಳೆದುಕೊಂಡಿದ್ದರು.

ಆಗಿನ ಕೇಂದ್ರ ಸರ್ಕಾರವು ಇದರ ಕುರಿತು ವರದಿಯನ್ನು ಸಲ್ಲಿಸಲು ತಜ್ಞರನ್ನು ಒಳಗೊಂಡ ಉನ್ನತಮಟ್ಟದ ಸಮಿತಿಯನ್ನು ರಚಿಸಿತ್ತು. ಅವರ ವರದಿಯ ಪ್ರಕಾರ ಪ್ರವಾಹದಿಂದ ಉಂಟಾದ ನಷ್ಟಕ್ಕೆ ಅತಿಯಾದ ಮಾನವ ಹಸ್ತಕ್ಷೇಪವೇ ಕಾರಣ ಎಂದು ದಾಖಲಿಸಿದ್ದಲ್ಲದೆ ಇನ್ನು ಮುಂದೆ ಹಿಮನದಿಗಳು ಇರುವ ಪ್ರದೇಶದಲ್ಲಿ ಮತ್ತು ಅಸ್ಥಿರವಾಗಿರುವ ಬೆಟ್ಟ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳನ್ನು ನಿಷೇಧಿಸುವಂತೆ ಆ ಸಮಿತಿಯು ಹೇಳಿತ್ತು. ಆದರೆ 2016ರಲ್ಲಿ ಹೊಸ ಸರ್ಕಾರವು, ಈ ಮುಂಚೆ ಈ ವರದಿಯನ್ನು ಅನುಮೋದಿಸಿದ ಅಧಿಕಾರಿಯನ್ನು ವರ್ಗಾವಣೆ ಮಾಡಿ ಈ ಶಿಫಾರಸ್ಸುಗಳನ್ನು ಕಡೆಗಣಿಸಿತು. ಈಗ ಉತ್ತರಾಖಂಡದ ಹಿಮನದಿಗಳಿರುವ ಸೂಕ್ಷ್ಮ ಪ್ರದೇಶದಲ್ಲಿ ಸುಮಾರು 76 ಜಲವಿದ್ಯುತ್ ಯೋಜನೆಗಳಿವೆ ಮತ್ತು ತಜ್ಞರೇ ಹೇಳುವಂತೆ ಅವೆಲ್ಲ ಸಿಡಿಯಲು ಸಿದ್ದವಾಗಿರುವ ಟೈಮ್‌ಬಾಂಬಿನಂತೆ ಕುಳಿತಿವೆ.

ಈ ಪ್ರವಾಹಕ್ಕೆ ನಿಖರ ಕಾರಣವನ್ನು ಇನ್ನೂ ಕಂಡುಹಿಡಿಯಬೇಕಾಗಿದ್ದರೂ ಹಿಮನದಿಗಳು ಕರಗುವಿಕೆಯೇ ಈ ಪ್ರವಾಹಕ್ಕೆ ಕಾರಣವಿರಬಹುದು ಎಂಬುದು ತಜ್ಞರ ಅನಿಸಿಕೆ. ತಾಪಮಾನವು ಹೆಚ್ಚಿದಂತೆ ಹಿಮನದಿಗಳು ಹೆಚ್ಚಿನ ಪ್ರಮಾಣದಲ್ಲಿ ಕರಗಿ ಎತ್ತರದ ಪ್ರದೇಶದಲ್ಲಿ ನೀರಿನ ಸರೋವರಗಳು ಉಂಟಾಗುತ್ತವೆ. ಇವುಗಳಲ್ಲಿ ನೀರು ಹೆಚ್ಚಿದಂತೆ ಅತಿಯಾದ ಒತ್ತಡ ಉಂಟಾಗಿ ಸರೋವರದ ಒಡ್ಡುಗಳು ಕುಸಿಯತೊಡಗುತ್ತವೆ, ಇದರಿಂದಾಗಿ ಅಪಾರ ಪ್ರಮಾಣದ ನೀರು ಕಲ್ಲು ಬಂಡೆಗಳನ್ನು ಒಳಗೊಂಡು ಇಳಿಜಾರಿನಲ್ಲಿ ರಭಸವಾಗಿ ಹರಿಯತೊಡಗುತ್ತದೆ. ಕಡಿದಾದ ಬೆಟ್ಟಗಳಿಂದ ಹರಿಯುವ ಈ ನೀರಿಗೆ ಎಷ್ಟು ರಭಸವಿರುತ್ತದೆ ಎಂದರೆ ಇದು ಅಣೆಕಟ್ಟೆಯನ್ನೇ ಒಡೆದು ಮುನ್ನುಗ್ಗಬಹುದು.

ಒಂದು ಅಧ್ಯಯನದ ಪ್ರಕಾರ ಹಿಮಾಲಯದಲ್ಲಿದ್ದ ದೊಡ್ಡ ಹಿಮನದಿಗಳು ಸುಮಾರು 20%ರಷ್ಟು ಹಿಂದಕ್ಕೆ ಸರಿದಿವೆ ಮತ್ತು ಪ್ರತಿವರ್ಷ ಸುಮಾರು ಮೀಟರುಗಳಷ್ಟು ಹಿಮವು ಕರಗಿ ಹಿಮನದಿಗಳ ತಳವೂ ಗೋಚರಿಸುತ್ತಿದೆ. ಹಿಮನದಿಗಳು ಒಂದು ರೀತಿಯಲ್ಲಿ ನೀರಿನ ಠೇವಣಿಯಿದ್ದಂತೆ. ಹಿಮವು ನಿಧಾನವಾಗಿ ಕರಗಿ ವರ್ಷವಿಡೀ ನೀರನ್ನು ಉಣಿಸುತ್ತಲೇ ಇರುತ್ತವೆ. ಒಂದು ರೀತಿಯಲ್ಲಿ ನಮ್ಮ ಪಶ್ಚಿಮಘಟ್ಟದ ಶೋಲಾ ಅರಣ್ಯಗಳು ಹೇಗೆ ಸ್ಪಂಜಿನಂತೆ ನೀರನ್ನು ಹಿಡಿದುಕೊಂಡ ವರ್ಷಪೂರ್ತಿ ನದಿಹಳ್ಳಗಳಲ್ಲಿ ನೀರಿನ ಹರಿವು ಇರುವಂತೆ ನೋಡಿಕೊಳ್ಳುತ್ತವೆಯೋ ಹಾಗೆ. ಶೋಲಾ ಅರಣ್ಯದ ನಾಶದಿಂದ ಪಶ್ಚಿಮಘಟ್ಟದ ನದಿಗಳು ಹೇಗೆ ಬತ್ತುತ್ತವೆಯೋ ಹಾಗೆಯೇ ಹಿಮನದಿಗಳು ಕರಗಿ ಹೋಗುವುದರಿಂದ ಉತ್ತರ ಭಾರತದ ಬಹುತೇಕ ನದಿಗಳು ಗಂಭೀರವಾದ ನೀರಿನ ಕೊರತೆಯನ್ನು ಅನುಭವಿಸಲಿವೆ. ನಾವು ಇಂಗಾಲದ ಹೊರಸೂಸುವಿಕೆಯನ್ನು ತಡೆದು ಜಾಗತಿಕ ತಾಪಮಾನವನ್ನು ಹದ್ದುಬಸ್ತಿನಲ್ಲಿ ಇಟ್ಟರೂ ಶತಮಾನದ ಅಂಚಿಗೆ ನಮ್ಮಲ್ಲಿದ್ದ ಒಟ್ಟಾರೆ 33% ಹಿಮನದಿಗಳು ಸಂಪೂರ್ಣವಾಗಿ ಕರಗಿ ಹೋಗಲಿವೆ. ನಾವು ಯಾವ ನಿಯಂತ್ರಣವನ್ನು ಹೇರದೆ ಯಥಾಸ್ಥಿತಿಯನ್ನು ಮುಂದುವರಿಸಿದರೆ ಸುಮಾರು 66% ಹಿಮನದಿಗಳು ಶಾಶ್ವತವಾಗಿ ಕರಗಿಹೋಗಲಿವೆ.

ಸರಿ ಇನ್ನೂ ಒಂದು ಶತಮಾನ ತಾನೇ, ಈಗ ನಾವು ಆರಾಮವಾಗಿ ಇರಬಹುದಲ್ಲ ಎಂದು ನಾವೇನೂ ಯೋಚಿಸುವಂತಿಲ್ಲ. ಈ ಎಲ್ಲ ಬದಲಾವಣೆಗಳು ಒಂದೇ ಸಾರಿ ಆಗಿಬಿಡುವುದಿಲ್ಲ. ಸಾಮಾನ್ಯವಾಗಿ ಕಳೆದೆರಡು ದಶಕಗಳಲ್ಲಿ ಹೇಗೆ ಹವಾಮಾನದ ವೈಪರೀತ್ಯ ಉಂಟಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿರುತ್ತದೆ. ಒಂದು ತಿಂಗಳಿನಲ್ಲಿ ಆಗಬೇಕಾದ ಮಳೆ ಒಂದೇ ವಾರದಲ್ಲಿ ಆಗುವುದು, ಬಿತ್ತಿದ ಫಸಲನ್ನು ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿಯೇ ಏಕಾಏಕಿ ಮಳೆಯಾಗಿ ಆ ವರ್ಷದ ಶ್ರಮ ಮತ್ತು ಬಂಡವಾಳವನ್ನು ಹಾಳು ಮಾಡಿಬಿಡುವುದು, ಇವೆಲ್ಲ ವಿದ್ಯಮಾನಗಳು ಸಹಜವೇನೋ ಅನ್ನುವಂತಾಗಿವೆ. ಕೊಡಗಿನಲ್ಲಿ, ಕೇರಳದಲ್ಲಿ ಕಂಡುಕೇಳರಿಯದಂತಹ ಭೂಕುಸಿತ ಉಂಟಾಗಿದೆ.

ಹೀಗೆ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಅನಾಹುತಗಳು ಉಂಟಾಗುತ್ತಲೇ ಇರುತ್ತವೆ. ಎರಡು ವರ್ಷದ ಹಿಂದೆ ನಾನು ಸಿಕ್ಕಿಂಗೆ ಹೋದ ಸಂದರ್ಭದಲ್ಲಿ ಸ್ಥಳೀಯರನ್ನು ಮಾತಿಗೆಳೆದಾಗ ಅವರೂ ಇದೇ ಮಾತನ್ನು ಪುನರುಚ್ಚರಿಸಿದರು. ಮುಂಚೆ ಹಿಮಪಾತವಾಗುತ್ತಿದ್ದ ಸ್ಥಳಗಳಲ್ಲಿ ಈಗ ಹಿಮಪಾತವೇ ಆಗುತ್ತಿಲ್ಲ, ಎಲ್ಲೋ ಮಂಜಿನಂತೆ ಸ್ವಲ್ಪ ಹಿಮ ಬಿದ್ದು ಹೋಗುತ್ತದಷ್ಟೇ. ಅವರು ಕೃಷಿ ಚಟುವಟಿಕೆಗಳಿಗಾಗಿ ಸಾಂಪ್ರದಾಯಿಕವಾಗಿ ಪಾಲಿಸುತ್ತಿದ್ದ ಪಂಚಾಂಗ, ತಿಥಿ ಮತ್ತು ನಕ್ಷತ್ರಗಳ ಲೆಕ್ಕಾಚಾರಗಳೆಲ್ಲ ಈಗ ಅವರ ಉಪಯೋಗಕ್ಕೆ ಬರುತ್ತಲೇ ಇಲ್ಲ. ಕಾರಣ ಮಳೆ ಮತ್ತು ಹಿಮಪಾತ ಆಗುತ್ತಿದ್ದ ವೇಳಾಪಟ್ಟಿಯೇ ಬುಡಮೇಲಾಗಿದೆ.

ಭಾರತದ ಪರಿಸರ ಹೋರಾಟಗಳಲ್ಲಿ ಎದ್ದು ಕಾಣುವುದು ಇದೇ ಚಮೋಲಿ ಜಿಲ್ಲೆಯ ಸುಂದರಲಾಲ್ ಬಹುಗುಣ ಮತ್ತು ಇತರ ಮಹಿಳೆಯರ ನೇತೃತ್ವದಲ್ಲಿ ನಡೆದ ಚಿಪ್ಕೋ(ಅಪ್ಪಿಕೋ) ಚಳವಳಿ. ಕಾಕತಾಳೀಯವೆಂದರೆ ಚಳವಳಿ ಪ್ರಾರಂಭವಾದ ಇದೇ ರೇಣಿ ಗ್ರಾಮದ ಆನತಿ ದೂರದಲ್ಲಿಯೇ ಈ ಅನಾಹುತ ಸಂಭವಿಸಿದೆ. ಅರಣ್ಯ ನಾಶದಿಂದ ಏನೇನು ಪರಿಣಾಮಗಳು ಉಂಟಾಗಬಹುದೆಂದು ಆ ಗ್ರಾಮಸ್ಥರು ಹೋರಾಟಕ್ಕೆ ಇಳಿದಿದ್ದರೋ ಅವೆಲ್ಲವೂ ಒಂದೊಂದಾಗಿ ಅವರ ಕಣ್ಣಮುಂದೆಯೇ ಘಟಿಸುತ್ತಿವೆ. ಚಿಪ್ಕೋ ಚಳವಳಿ ಈಗ ನೇಪಥ್ಯಕ್ಕೆ ಸರಿದಿದೆ, ಈ ಅನಾಹುತಗಳ ಕುರಿತು ಎಚ್ಚರಿಸುವ ವಿಜ್ಞಾನಿಗಳ ಮಾತಿಗೆ ಬೆಲೆಯಿಲ್ಲ, ಇದ್ದಬದ್ದ ಪರಿಸರ ಕಾನೂನುಗಳನ್ನು ಗಾಳಿಗೆ ತೂರಿ ಎಲ್ಲೆಡೆ ಜೆಸಿಬಿ, ಬುಲ್ಡೋಜರ್‌ಗಳನ್ನು ನುಗ್ಗಿಸಲಾಗುತ್ತಿದೆ ಡೈನಮೇಟುಗಳನ್ನು ಸಿಡಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪರಿಸರದ ಮತ್ತು ಎಲ್ಲ ಜೀವಿಗಳ ಉಳಿವು ನಾವೆಲ್ಲರೂ ಈ ವಿಷಯಗಳನ್ನು ಎಷ್ಟು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಈ ಕುರಿತು ಎಷ್ಟು ಗಟ್ಟಿಯಾಗಿ ದನಿ ಎತ್ತುತ್ತೇವೆ ಎಂಬುದರ ಮೇಲೆ ಆಧಾರಪಟ್ಟಿದೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ರೈತ ಹೋರಾಟದ ಬಿಸಿ: ಪಂಜಾಬ್, ಹರಿಯಾಣಗಳಲ್ಲಿ ಜಿಯೋ ಚಂದಾದಾರರ ಗಣನೀಯ ಕುಸಿತ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಗುರುಪ್ರಸಾದ್ ತಿಮ್ಮಾಪುರ

LEAVE A REPLY

Please enter your comment!
Please enter your name here