Homeಕರ್ನಾಟಕಕಾಂಗ್ರೆಸ್‌ ತೆರೆದಿರುವ ‘40ಪರ್ಸೆಂಟ್‌ಸರ್ಕಾರ.ಕಾಂ’ ವೆಬ್‌ಸೈಟ್‌ನಲ್ಲಿ ಏನೇನಿದೆ?

ಕಾಂಗ್ರೆಸ್‌ ತೆರೆದಿರುವ ‘40ಪರ್ಸೆಂಟ್‌ಸರ್ಕಾರ.ಕಾಂ’ ವೆಬ್‌ಸೈಟ್‌ನಲ್ಲಿ ಏನೇನಿದೆ?

- Advertisement -
- Advertisement -

‘40 ಪರ್ಸೆಂಟ್‌ ಕಮಿಷನ್‌ ಭ್ರಷ್ಟ ಸರ್ಕಾರ’ ಎಂಬ ಆರೋಪ ರಾಜ್ಯ ಬಿಜೆಪಿಯ ವಿರುದ್ಧ ಕೇಳಿ ಬರುತ್ತಿರುವ ಬೆನ್ನಲ್ಲೇ ಪ್ರತಿಪಕ್ಷ ಕಾಂಗ್ರೆಸ್‌, ಸರ್ಕಾರವನ್ನು ಟೀಕಿಸಲು ಹೊಸಹೊಸ ಪ್ರಯೋಗಗಳಿಗೆ ಕೈಹಾಕಿದೆ. ‘40ಪರ್ಸೆಂಟ್‌ಸರ್ಕಾರ.ಕಾಂ’ (www.40percentsarkara.com) ಎಂಬ ಜಾಲತಾಣವನ್ನು ಕಾಂಗ್ರೆಸ್ ತೆರೆದಿದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ರಾಜ್ಯದ ವಿವಿಧ ಪತ್ರಿಕೆಗಳಿಗೆ, ಸುದ್ದಿಮಾಧ್ಯಮಗಳಿಗೆ ಅಪಾರ ಜಾಹೀರಾತನ್ನು ನೀಡಿತ್ತು. ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿತ್ತು. ‘ಇದು ಹತ್ತು ಪರ್ಸೆಂಟ್ ಸರ್ಕಾರ’ ಎಂದು ಮೂದಲಿಸಿತ್ತು. ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕರು ಕೂಡ ತಮ್ಮ ಪ್ರಚಾರ ಭಾಷಣಗಳಲ್ಲಿ ಇದನ್ನೇ ಪುನರುಚ್ಚರಿಸಿದ್ದರು.

ಚುನಾವಣೆ ಮುಗಿದು ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಏರ್ಪಟ್ಟು ಸರ್ಕಾರ ರಚನೆಯಾಯಿತು. ನಂತರ ಆಪರೇಷನ್‌ ಕಮಲವೂ ಆಗಿ, ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು. ನಂತರ ಅಧಿಕಾರಕ್ಕೇರಿದ ಬಿ.ಎಸ್.ಯಡಿಯೂರಪ್ಪನವರು ಕೆಲಕಾಲ ಆಡಳಿತ ನಡೆಸಿದರು. ಅವರನ್ನೂ ಸಿಎಂ ಕುರ್ಚಿಯಿಂದ ಕೆಳಗಿಳಿಸಿದ ಬಳಿಕ ಬಸವರಾಜ ಬೊಮ್ಮಾಯಿಯವರು ಅಧಿಕಾರಕ್ಕೇರಿದರು.

ಅಧಿಕಾರ ಹಿಡಿದಾಗಿನಿಂದ ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿರುವ ಬಿಜೆಪಿ ವಿರುದ್ಧ ಗುತ್ತಿಗೆದಾರರು ಸಿಡಿದೆದ್ದಿದ್ದಾರೆ. ನಲವತ್ತು ಪರ್ಸೆಂಟ್‌ ಕಮಿಷನ್‌ ನೀಡಬೇಕಾಗಿದೆ ಎಂದು ದೂರುತ್ತಿದ್ದಾರೆ.

ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಅವರು ಕೆ.ಎಸ್.ಈಶ್ವರಪ್ಪನವರ ವಿರುದ್ಧ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಚುರುಕಾಗಿದ್ದು, ಭ್ರಷ್ಟಾಚಾರ ವಿಚಾರವನ್ನೇ ಮುನ್ನೆಲೆಗೆ ತಂದು ಪ್ರಚಾರ ಮಾಡುವ ಸೂಚನೆಯನ್ನು ನೀಡುತ್ತಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಯಾವ ತಂತ್ರವನ್ನು ರೂಪಿಸಿತ್ತೋ ಅದೇ ತಂತ್ರವನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾಲಿಸುತ್ತಿರುವಂತೆ ಕಾಣುತ್ತಿದೆ.

‘ಭ್ರಷ್ಟ ಸರ್ಕಾರ’ ಎಂಬ ಆರೋಪ ಹೊರಿಸಿ ಹಾಡನ್ನೂ ಕಾಂಗ್ರೆಸ್ ಬಿಡುಗಡೆ ಮಾಡಿದೆ. ‘ನಲವತ್ತು ಪರ್ಸೆಂಟ್ ಸರ್ಕಾರ’ ಎಂಬ ಫೇಸ್‌ಬುಕ್‌ ಪೇಜ್‌ ತೆರೆಯಲಾಗಿದೆ. ಈಗ ‘40ಪರ್ಸೆಂಟ್‌ಸರ್ಕಾರ.ಕಾಂ’ (www.40percentsarkara.com) ಎಂಬ ಜಾಲತಾಣವನ್ನೂ ತೆರೆದು ಬಿಜೆಪಿಗೆ ತಿರುಗೇಟು ನೀಡಲಾಗುತ್ತಿದೆ.

‘40ಪರ್ಸೆಂಟ್‌ಸರ್ಕಾರ.ಕಾಂ’ನಲ್ಲಿ ಏನೇನಿದೆ?

‘ಇಂಗ್ಲಿಷ್ ಹಾಗೂ ಕನ್ನಡ’ ಎರಡು ಭಾಷೆಯಲ್ಲೂ ಓದಲು ಲಭ್ಯವಿರುವ ಈ ವೆಬ್‌ಸೈಟ್‌ನಲ್ಲಿ ‘40% ಸರ್ಕಾರ, ಬಿಜೆಪಿ ಎಂದರೆ ಭ್ರಷ್ಟಾಚಾರ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಕರ್ನಾಟಕದ ಚಿತ್ರವಿರುವ ಲೋಗೋವನ್ನು ಡಿಸೈನ್ ಮಾಡಲಾಗಿದೆ. ಎಷ್ಟು ಜನ ದನಿ ಎತ್ತಿದ್ದಾರೆಂಬ ಲೆಕ್ಕವನ್ನು ಪ್ರದರ್ಶಿಸಲಾಗುತ್ತಿದೆ. ತಮ್ಮ ಆಕ್ಷೇಪಗಳನ್ನು ದಾಖಲಿಸಲು ‘8447704040′ ನಂಬರ್‌ ನೀಡಲಾಗಿದೆ.

ಬಿಟ್‌ಕಾಯಿನ್‌ ಸ್ಕ್ಯಾಮ್, ಪಿಎಸ್‌ಐ ಹಗರಣ, ರೋಡ್‌ ಸ್ಕ್ಯಾಮ್‌- ಮೊದಲಾದ ಪೋಸ್ಟರ್‌ಗಳ ಸ್ಲೈಡ್ ರಚಿಸಲಾಗಿದೆ. ಜೊತೆಗೆ ‘ನಿಮ್ಮ ಧ್ವನಿ ಏರಿಸಿ’ ಎಂಬ ಕೋರಿಕೆಯನ್ನು ಸಲ್ಲಿಸಲಾಗಿದೆ. “ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆಯಿರಿ. ನಿಮ್ಮ ಧ್ವನಿ ಏರಿಸಿ” ಎಂಬ ಕಾಲಂ ಮಾಡಲಾಗಿದ್ದು, ಹೆಸರು, ಕ್ಷೇತ್ರ, ಮೊಬೈಲ್‌ ನಂಬರ್‌ ಹಾಗೂ ಅಭಿಪ್ರಾಯನ್ನು ನಮೂದಿಸಿ ಸಬ್‌ಮಿಟ್ ಮಾಡಿದರೆ, ನಿಮ್ಮ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ನಮೂದಿಸಿದರೆ ನಿಮ್ಮ ಅಭಿಪ್ರಾಯ ಇಲ್ಲಿ ದಾಖಲಾಗುತ್ತದೆ.

‘ಜನರ ಧ್ವನಿಗಳು’ ಎಂಬ ಶೀರ್ಷಿಕೆಯಲ್ಲಿ ಸ್ಲೈಡ್ ರಚಿಸಲಾಗಿದ್ದು, ಅಲ್ಲಿ ಜನರ ಅಭಿಪ್ರಾಯಗಳನ್ನು ಪ್ರದರ್ಶಿಸಲಾಗುತ್ತಿದೆ.

ವೆಬ್‌ಸೈಟ್ ಸ್ಕ್ರಾಲ್‌ ಮಾಡಿದರೆ, ‘ಗುಳುಂ ಸ್ವಾಹಃ ರಿಪೋರ್ಟ್’ ಎಂಬ ಶೀರ್ಷಿಕೆಯಲ್ಲಿ ಭ್ರಷ್ಟಾಚಾರ ಹಗರಣಗಳನ್ನು ಪಟ್ಟಿ ಮಾಡಲಾಗಿದೆ.

`40ಪರ್ಸೆಂಟ್ ಸರ್ಕಾರ’ ವೆಬ್‌ಸೈಟ್‌ನಿಂದ ಆಯ್ದ ಚಿತ್ರ
`40ಪರ್ಸೆಂಟ್ ಸರ್ಕಾರ’ ವೆಬ್‌ಸೈಟ್‌ನಿಂದ ಆಯ್ದ ಚಿತ್ರ

‘ಬಿಜೆಪಿ ಬಂಪರ್‌ ಆಫರ್‌’ ಎಂಬ ಶೀರ್ಷಿಕೆಯಡಿ, ‘ಯಾವ ಹುದ್ದೆಗೆೆ ಎಷ್ಟು ಹಣ’ ಎಂದು ಗೇಲಿ ಮಾಡಲಾಗಿದೆ.

ಕೊನೆಯಲ್ಲಿ ವಿಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದೆ. ವಿವಿಧ ಹಗರಣಗಳ ಕುರಿತು ಮಾಧ್ಯಮದಲ್ಲಿ ಬಂದಿರುವ ವರದಿಗಳನ್ನು ಇಲ್ಲಿ ನೀಡಲಾಗಿದೆ. ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮಗಳಲ್ಲಿ ಆಗಿರುವ ವರದಿಗಳನ್ನು ಇಲ್ಲಿ ನೋಡಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...