Homeಮುಖಪುಟಮೋದಿ ಮಿತ್ರನ ಸಂಪತ್ತು ಹೆಚ್ಚಲು ಯಾವ ಮ್ಯಾಜಿಕ್ ನಡೆದಿದೆ?: ಖರ್ಗೆ ವಾಗ್ದಾಳಿ

ಮೋದಿ ಮಿತ್ರನ ಸಂಪತ್ತು ಹೆಚ್ಚಲು ಯಾವ ಮ್ಯಾಜಿಕ್ ನಡೆದಿದೆ?: ಖರ್ಗೆ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಯಾವುದಕ್ಕೂ ಹೆದರುವುದಿಲ್ಲ ಎನ್ನುವುದಾದರೆ, ಅದಾನಿ-ಹಿಂಡನ್‌ಬರ್ಗ್ ವಿವಾದದ ಕುರಿತು ಜಂಟಿ ಸಂಸದೀಯ ತನಿಖೆ ನಡೆಸಲು ಯಾಕೆ ಹೆದರುತ್ತಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ

- Advertisement -
- Advertisement -

ಕೇಂದ್ರ ಸರ್ಕಾರವು ಅದಾನಿ ಗ್ರೂಪ್‌ನೊಂದಿಗೆ ಹೊಂದಿರುವ ಸಂಪರ್ಕದ ಸಂಬಂಧ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ತಿನಲ್ಲಿ ಬುಧವಾರ ವಾಗ್ದಾಳಿ ನಡೆಸಿದರು.

ಎರಡೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಆತ್ಮೀಯ ಸ್ನೇಹಿತರ ಸಂಪತ್ತು 13 ಪಟ್ಟು ಹೆಚ್ಚಾಗಿದೆ ಎಂದು ದೂರಿದರು. ಇದು ರಾಜ್ಯಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು.

“2014ರಲ್ಲಿ ಪ್ರಧಾನಿ ಮೋದಿಯವರು ನಾ ಖಾವೂಂಗಾ ನಾ ಖಾನೇ ದುಂಗಾ (ನಾನು ತಿನ್ನಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ) ಎಂದು ಹೇಳಿದ್ದರು. ಕೆಲವು ಕೈಗಾರಿಕೋದ್ಯಮಿಗಳನ್ನು ತಿನ್ನಲು ಏಕೆ ಬಿಡುತ್ತಿದ್ದಾರೆ ಎಂದು ಈಗ ನಾನು ಕೇಳಬಯಸುತ್ತೇನೆ” ಎಂದು ಖರ್ಗೆ ಪ್ರಶ್ನಿಸಿದರು.

“ಪ್ರಧಾನಿ ಮೋದಿಯವರ ಆತ್ಮೀಯ ಸ್ನೇಹಿತರೊಬ್ಬರ ಸಂಪತ್ತು 2.5 (ಎರಡೂವರೆ) ವರ್ಷಗಳಲ್ಲಿ 13 ಪಟ್ಟು ಹೆಚ್ಚಾಗಿದೆ. 2014ರಲ್ಲಿ 50,000 ಕೋಟಿಯಷ್ಟಿದ್ದ ಅವರ ಸಂಪತ್ತು 2019ರಲ್ಲಿ 1 ಲಕ್ಷ ಕೋಟಿ ಆಯಿತು. ಕೇವಲ ಎರಡು ವರ್ಷಗಳಲ್ಲಿ ಅವರ ಆಸ್ತಿ 12 ಲಕ್ಷ ಕೋಟಿ ರೂ.ಗೆ ತಲುಪಲು ಏನೆಲ್ಲಾ ಮ್ಯಾಜಿಕ್ ನಡೆದಿದೆ ಎಂದು ನನಗೆ ಗೊತ್ತಿಲ್ಲ” ಎಂದು ಕುಟುಕಿದರು. ಇದರ ನಡುವೆ ಬಿಜೆಪಿ ಸಂಸದರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚೆಯನ್ನು ಆರಂಭಿಸಲು ರಾಜ್ಯಸಭೆಯು ಬುಧವಾರ ‘ಶೂನ್ಯ ವೇಳೆ’ ಮತ್ತು ‘ಪ್ರಶ್ನೋತ್ತರ ಅವಧಿ’ ಎರಡನ್ನೂ ರದ್ದುಗೊಳಿಸಿತು.

ಅದಾನಿ ಸಮೂಹದ ಮೇಲೆ ಹಿಂಡೆನ್‌ಬರ್ಗ್‌ ರಿಸರ್ಚ್‌ ಮಾಡಿರುವ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿಯು ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿರುವುದು ಸದನಗಳಲ್ಲಿ ಸದ್ದು ಮಾಡುತ್ತಿದೆ.

ಅದಾನಿ ಗ್ರೂಪ್‌ನೊಂದಿಗೆ ಸಾರ್ವಜನಿಕ ವಲಯದ ಎಲ್‌ಐಸಿ ಮತ್ತು ಎಸ್‌ಬಿಐ ಹಣವನ್ನೂ ಹೂಡಿಕೆ ಮಾಡಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಅದಾನಿ ಗ್ರೂಪ್ ಷೇರುಗಳ ಇತ್ತೀಚಿನ ತೀವ್ರ ಕುಸಿತವು ಸಾಮಾನ್ಯ ಜನರ ಹಣವನ್ನು ಒಳಗೊಂಡಿರುವ ‘ಮೆಗಾ ಹಗರಣ’ ಎಂದು ವಿರೋಧ ಪಕ್ಷಗಳು ಬಣ್ಣಸಿವೆ. ಅದಾನಿ ಹಗರಣ ಸಂಬಂಧ ಯಾವ ಕ್ರಮ ಜರುಗಿಸಲಾಗಿದೆ ಎಂದು ಪ್ರತಿಪಕ್ಷಗಳು ಸರ್ಕಾರವನ್ನು ಪ್ರಶ್ನಿಸುತ್ತಿವೆ.

ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಬುಧವಾರ ಸದನದಲ್ಲಿ ಮಾತನಾಡುತ್ತಾ, “ನಾನು ಸತ್ಯವನ್ನು ಮಾತನಾಡಿದರೆ ಅದು ದೇಶವಿರೋಧಿಯಾಗುತ್ತದೆಯೇ? ನಾನು ದೇಶವಿರೋಧಿ ಅಲ್ಲ, ನಾನು ಇಲ್ಲಿ ಎಲ್ಲರಿಗಿಂತಲೂ ಹೆಚ್ಚು ದೇಶಭಕ್ತನಾಗಿದ್ದೇನೆ. ನಾನು ‘ಭೂಮಿ-ಪುತ್ರ’. ನೀವು ದೇಶವನ್ನು ಲೂಟಿ ಮಾಡುತ್ತಿದ್ದೀರಿ, ಆದರೆ ನನ್ನನ್ನು ದೇಶವಿರೋಧಿ ಎನ್ನುತ್ತಿದ್ದೀರಿ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಯಾವುದಕ್ಕೂ ಹೆದರುವುದಿಲ್ಲ ಎನ್ನುವುದಾದರೆ, ಅದಾನಿ-ಹಿಂಡನ್‌ಬರ್ಗ್ ವಿವಾದದ ಕುರಿತು ಜಂಟಿ ಸಂಸದೀಯ ತನಿಖೆ ನಡೆಸಲು ಯಾಕೆ ಹೆದರುತ್ತಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದರು.

ಖರ್ಗೆ ಅವರ ಆರೋಪಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, “ಅವರು (ಪ್ರತಿಪಕ್ಷಗಳು) ಸೂಕ್ಷ್ಮವಾಗಿ ಮತ್ತು ಬಹಿರಂಗವಾಗಿ, ಪ್ರಧಾನಿ ವಿರುದ್ಧ ಪದೇ ಪದೇ ಚುಚ್ಚು ಮಾತುಗಳನ್ನಾಡುತ್ತಿದ್ದಾರೆ” ಎಂದು ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳನ್ನು ಖಂಡಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, “ಖರ್ಗೆ ಅವರ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

“ಉದ್ದೇಶಪೂರ್ವಕ ಸಂಪತ್ತಿನ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಅದು ಷೇರು ಮಾರುಕಟ್ಟೆ ಲೆಕ್ಕಾಚಾರವಾಗಿದೆ. ಅದರಲ್ಲಿ ಸರ್ಕಾರದ ಪಾತ್ರವಿಲ್ಲ” ಎಂದಿದ್ದಾರೆ ಗೋಯಲ್.

“ಈ ಮೌಲ್ಯಮಾಪನ ಹೇಗಿರುತ್ತದೆ ಎಂಬುದನ್ನು ಮಾಜಿ ಹಣಕಾಸು ಸಚಿವರಿಂದ ಕಲಿಯಬೇಕೆಂದು ನಾನು ಅವರಲ್ಲಿ ಒತ್ತಾಯಿಸುತ್ತೇನೆ” ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿರಿ: ರೈತರ ಸಾಲಮನ್ನಾದಿಂದ ದೇಶಕ್ಕೆ ಉಪಯೋಗವಾಗಿಲ್ಲ; ತೇಜಸ್ವಿ ಸೂರ್ಯ ಹೇಳಿಕೆಗೆ ಮಣ್ಣಿನ ಮಕ್ಕಳ ಆಕ್ರೋಶ

ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಪ್ರಧಾನಿ ಮೋದಿಯವರ ಮೇಲೆ ಕಟುವಾದ ವಾಗ್ದಾಳಿ ನಡೆಸಿದ್ದರು. ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರ ಬೆಳವಣಿಗೆಗೆ ಮೋದಿ ಕಾರಣರು ಎಂದು ದೂರಿದ್ದರು.

ಅದಾನಿಯ ವ್ಯಾಪಾರ ಸಮೂಹಕ್ಕೆ ಅನುಕೂಲವಾಗುವಂತೆ ಹಲವಾರು ನಿಯಮಗಳನ್ನು ಬದಲಾಯಿಸಿದ್ದರಿಂದ ಅದಾನಿಯವರ ಬೆಳವಣಿಗೆಗೆ ಪ್ರಧಾನಿ ಮೋದಿ ಕಾರಣ ಎಂದು ಆರೋಪಿಸಿದ್ದರು.

ವಿಮಾನ ನಿಲ್ದಾಣಗಳ ಸಂಬಂಧ ಅನುಭವವಿಲ್ಲದವರನ್ನು ವಿಮಾನ ನಿಲ್ದಾಣಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬಾರದು ಎಂಬ ನಿಯಮವಿದೆ. ಈ ನಿಯಮವನ್ನು ಭಾರತ ಸರ್ಕಾರ ಬದಲಾಯಿಸಿದೆ ಎಂದು ಟೀಕಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...