Homeಮುಖಪುಟರೆಪೊ ದರ ಹೆಚ್ಚಿಸಿದ ಆರ್‌ಬಿಐ: ಹಣದುಬ್ಬರ ನಿಯಂತ್ರಣ ಸಾಧ್ಯವೇ?

ರೆಪೊ ದರ ಹೆಚ್ಚಿಸಿದ ಆರ್‌ಬಿಐ: ಹಣದುಬ್ಬರ ನಿಯಂತ್ರಣ ಸಾಧ್ಯವೇ?

- Advertisement -
- Advertisement -

ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ರೆಪೊ ದರವನ್ನು 0.25%ರಷ್ಟು ಹೆಚ್ಚಿಸಿ 6.5%ಕ್ಕೆ ಏರಿಕೆ ಮಾಡಿದೆ. ಕೇಂದ್ರ ಬ್ಯಾಂಕ್ ಆಗಿರುವ ಆರ್‌ಬಿಐ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಹಣದ ಬಡ್ಡಿ ದರವೇ ‘ರೆಪೊ’ ಆಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಸೆಂಟ್ರಲ್ ಬ್ಯಾಂಕಿನ ದ್ವೈಮಾಸಿಕ ಹಣಕಾಸು ನೀತಿ ಸಭೆಯ ನಂತರ ರೆಪೊ ದರ ಹೆಚ್ಚಳದ ಘೋಷಣೆ ಮಾಡಿದ್ದಾರೆ.

ಮೇ ತಿಂಗಳ ನಂತರ ರೆಪೋ ದರದಲ್ಲಿ ಮಾಡುತ್ತಿರುವ ಆರನೇ ಏರಿಕೆ ಇದಾಗಿದೆ. ಸೆಂಟ್ರಲ್ ಬ್ಯಾಂಕ್ ಡಿಸೆಂಬರ್‌ನಲ್ಲಿ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್‌ಗಳಿಂದ 6.25%ಗೆ ಹೆಚ್ಚಿಸಿದೆ.

“ಕಳೆದ ಮೂರು ವರ್ಷಗಳಲ್ಲಿ ಅಭೂತಪೂರ್ವ ಘಟನೆಗಳು ಪ್ರಪಂಚದಾದ್ಯಂತ ವಿತ್ತೀಯ ನೀತಿಯನ್ನು ಪರೀಕ್ಷಿಸಿವೆ” ಎಂದು ಶಕ್ತಿಕಾಂತ್ ದಾಸ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

2023-24ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು 6.4% ಆಗಲಿದೆ ಎಂದು ಶಕ್ತಿಕಾಂತ್ ದಾಸ್‌ ಭವಿಷ್ಯ ನುಡಿದಿದ್ದಾರೆ.

ಜನವರಿ 31ರಂದು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆಯು, ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ದೇಶೀಯ ಬೆಳವಣಿಗೆ ಅಥವಾ ಜಿಡಿಪಿ 6% ರಿಂದ 6.8% ರಷ್ಟಿರುತ್ತದೆ ಎಂದು ಅಂದಾಜಿಸಿದೆ. ಈ ಹಣಕಾಸು ವರ್ಷದಲ್ಲಿ (2022-’23), ಭಾರತದ ಆರ್ಥಿಕತೆಯು 7% ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತದೆ.

ಈ ಹಣಕಾಸು ವರ್ಷದಲ್ಲಿ 6.5% ಮತ್ತು ಮುಂದಿನ ವರ್ಷ 5.3% ಹಣದುಬ್ಬರವನ್ನು ರಿಸರ್ವ್ ಬ್ಯಾಂಕ್‌ ಅಂದಾಜಿಸಿದೆ ಎಂದು ದಾಸ್ ಹೇಳಿದ್ದಾರೆ.

ರೆಪೊ ರೇಟ್ ಹೆಚ್ಚಳದಿಂದ ಹಣದುಬ್ಬರ ತಡೆಯಲು ಸಾಧ್ಯವೇ?

“ಹಣದುಬ್ಬರವನ್ನು ತಡೆಯಲು ರಿಸರ್ವ್ ಬ್ಯಾಂಕ್ ರೆಪೊ ರೇಟ್ ಹೆಚ್ಚಿಸುತ್ತದೆ. ಆದರೆ ನಿಜಕ್ಕೂ ರೆಪೊ ರೇಟ್ ಹೆಚ್ಚಳದಿಂದ ಹಣದುಬ್ಬರ ನಿಯಂತ್ರಣ ಸಾಧ್ಯವೇ?” ಎಂಬ ಪ್ರಶ್ನೆ ನಮ್ಮ ಮುಂದಿದೆ.

ಆರ್ಥಿಕ ವಿಶ್ಲೇಷಕರಾದ ಶಿವಸುಂದರ್‌ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಹಣವನ್ನು ರಿಸರ್ವ್ ಬ್ಯಾಂಕ್‌ ಪ್ರಿಂಟ್ ಮಾಡುತ್ತದೆ. ರಿಸರ್ವ್ ಬ್ಯಾಂಕ್‌ನಿಂದ ಹಣವನ್ನು ಇತರ ಬ್ಯಾಂಕ್‌ಗಳು ತೆಗೆದುಕೊಳ್ಳುತ್ತವೆ. ಅದು ಸಾಲದ ರೂಪದಲ್ಲಿ ಇರುತ್ತದೆ. ಈ ಸಾಲದ ಬಡ್ಡಿ ದರವೇ ರೆಪೊ ಆಗಿದೆ. ರೆಪೊ ರೇಟ್‌ ಹೆಚ್ಚಾದರೆ ವಾಣಿಜ್ಯ ಬ್ಯಾಂಕ್‌ಗಳು ನೀಡುವ ಇತರ ಸಾಲದಲ್ಲೂ ಬಡ್ಡಿ ಹೆಚ್ಚಳವಾಗುತ್ತದೆ” ಎಂದು ವಿವರಿಸಿದರು.

ಮುಂದುವರಿದು, “ಬಡ್ಡಿ ದರ ಹೆಚ್ಚಾದಾಗ ಜನರು ಸಾಲ ತೆಗೆದುಕೊಳ್ಳುವುದನ್ನೂ ಕಡಿಮೆ ಮಾಡುತ್ತಾರೆ. ಸಾಲ ತೆಗೆದುಕೊಳ್ಳುವುದು ಕಡಿಮೆಯಾದಾಗ ಆರ್ಥಿಕತೆಯಲ್ಲಿ ನಗದಿನ ಹರಿವೂ ಕಡಿಮೆಯಾಗುತ್ತದೆ. ನಗದಿನ ಹರಿವು ಕಡಿಮೆಯಾದರೆ ಹಣದುಬ್ಬರ ಕಡಿಮೆಯಾಗುತ್ತದೆ ಎಂಬುದು ಆರ್‌ಬಿಐ ಮಾಡುವ ಯೋಚನೆ. ಹಣದುಬ್ಬರಕ್ಕೆ ಕೇವಲ ನಗದಿನ ಏರಿಳಿತ ಮಾತ್ರ ಕಾರಣವಲ್ಲ” ಎಂದು ತಿಳಿಸಿದರು.

“ಹಣದುಬ್ಬರಕ್ಕೆ ಆರ್ಥಿಕತೆಯಲ್ಲಿನ ಬೇಡಿಕೆ, ಪೂರೈಕೆಯ ಕೊರತೆ, ಖರೀದಿನ ಸಾಮರ್ಥ್ಯ ಕುಸಿತ ಇವೆಲ್ಲವೂ  ಕಾರಣವಾಗಿರುತ್ತವೆ. ನಗದಿನ ಹರಿವಿನ ನಿಯಂತ್ರಣದಿಂದ ಇವೆಲ್ಲವನ್ನೂ ಸರಿದೂಗಿಸಲು ಸಾಧ್ಯವಿಲ್ಲ. ಸಾಲದ ಕೊರತೆಯನ್ನು ಉಂಟು ಮಾಡಿದರೆ ಒಟ್ಟಾರೆ ಆರ್ಥಿಕ ಚಟುವಟಿಕೆಗಳೂ ಕಡಿಮೆಯಾಗುತ್ತವೆ. ಆರ್ಥಿಕ ಚಟುವಟಿಕೆಗಳು ಕಡಿಮೆಯಾದಾಗ, ತೆರಿಗೆ ಸಂಗ್ರಹವೂ ಕುಸಿತವಾಗುತ್ತದೆ, ನಿರುದ್ಯೋಗವೂ ಹೆಚ್ಚುತ್ತದೆ. ಜನರ ಖರೀದಿ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಇದರಿಂದಾಗಿ ಹಣದುಬ್ಬರ ಹೆಚ್ಚೂ ಆಗಬಹುದು” ಎಂಬ ಅಭಿಪ್ರಾಯಪಟ್ಟರು.

“ಹಣದುಬ್ಬರ ಕಡಿಮೆ ಮಾಡಲು ಆರ್‌ಬಿಐ ಯೋಚಿಸುತ್ತದೆ. ನಗದಿನ ಹರಿವಿನ ವಿಚಾರದಲ್ಲಿ ಒಟ್ಟಾರೆ ಆರ್ಥಿಕ ಚಟುವಟಿಕೆಯನ್ನು ನೋಡುವುದು ಅತ್ಯಂತ ಸೀಮಿತ ತಿಳಿವಳಿಕೆ. ರೆಪೊ ರೇಟ್ ಹೆಚ್ಚಾದಾಗ ಬಡ್ಡಿ ದರ ಹೆಚ್ಚಾಗಿ ಹಣದ ಹರಿವು ಕಡಿಮೆಯಾಗುತ್ತದೆ ಎಂಬುದಷ್ಟೇ ತಕ್ಷಣಕ್ಕೆ ಕಣ್ಣಿಗೆ ಕಾಣುತ್ತದೆ” ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...