Homeಮುಖಪುಟಮೌನವಾದ ದನಿಗಳು: ’ಹೊಸ ಭಾರತ’ದಲ್ಲಿ ಪತ್ರಿಕೋದ್ಯಮಕ್ಕಿರುವ ಬೆದರಿಕೆಗಳು

ಮೌನವಾದ ದನಿಗಳು: ’ಹೊಸ ಭಾರತ’ದಲ್ಲಿ ಪತ್ರಿಕೋದ್ಯಮಕ್ಕಿರುವ ಬೆದರಿಕೆಗಳು

- Advertisement -
- Advertisement -

(ಹಿರಿಯ ಪತ್ರಕರ್ತ, ಭಾರತದ ಮೊದಲ ಪ್ರಾದೇಶಿಕ ಟಿವಿ ಚಾನೆಲ್ ಏಷ್ಯಾನೆಟ್‌ನ ಸಂಸ್ಥಾಪಕರು ಮತ್ತು ಹಾಲಿ ಚೆನ್ನೈನ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನ ಅಧ್ಯಕ್ಷರಾಗಿರುವ ಸಸಿಕುಮಾರ್ ಅವರು ಗೌರಿ ಲಂಕೇಶ್ ಅವರ 61ನೇ ಜನ್ಮದಿನದ ಅಂಗವಾಗಿ ನೀಡಿದ ಸ್ಮಾರಕ ಉಪನ್ಯಾಸದ ಆಯ್ದ ಮುಖ್ಯ ಭಾಗಗಳು ಇಲ್ಲಿವೆ. ಇದು ತದ್ರೂಪಿ ಪೂರ್ಣಪಾಠ ಅಲ್ಲವಾಗಿ, ವಿಡಿಯೋದಿಂದ ಬರಹ ರೂಪಕ್ಕೆ ಮಾಡಿದ ಕನ್ನಡ ಅನುವಾದವಾದರೂ, ಬಹುತೇಕ ಎಲ್ಲವೂ ಅವರ ಮಾತುಗಳೇ ಆಗಿವೆ- ಅನುವಾದಕ.)

ನಾನು ಗೌರಿ ಲಂಕೇಶ್ ಪ್ರತಿಪಾದಿಸಿದ ಮೌಲ್ಯಗಳ ಜೊತೆ, ಇಲ್ಲಿರುವ ಅವರ ಕುಟುಂಬದ ಸದಸ್ಯರ ಜೊತೆ, ಅವರ ಗೆಳೆಯರ ಜೊತೆ ನಿಂತಿದ್ದೇನೆ ಎಂದು ಇಲ್ಲಿ ಹೇಳಲು ನನಗೆ ಈ ಅವಕಾಶ ದೊರತಿರುವುದಕ್ಕೆ ಎಲ್ಲರಿಗೂ ಆಭಾರಿಯಾಗಿದ್ದೇನೆ.

* ಗೌರಿಯನ್ನು ಅವರ ಮನೆಯೆದುರೇ ಗುಂಡಿಕ್ಕಿ ಹೊಡೆದುರುಳಿಸಿದಾಗ, ಅದು ಬಹಳಷ್ಟು ಮಂದಿಗೆ ವೈಯಕ್ತಿಕ ನಷ್ಟವಾಗಿತ್ತು. ಆದರೆ, ಆ ಗುಂಡುಗಳು ನಮ್ಮೆಲ್ಲರನ್ನು- ಕೇವಲ ವೈಯಕ್ತಿಕವಾಗಿ ಬಲ್ಲವರು ಮಾತ್ರವಲ್ಲ- ನಾನು ಗೌರಿಯನ್ನು ವೈಯಕ್ತಿಕವಾಗಿ ಬಲ್ಲವನಲ್ಲ- ಎಲ್ಲರನ್ನೂ ತಾಕಿ ಆಘಾತಕ್ಕೆ ಗುರಿಪಡಿಸಿದವು. ಅದು ಬಲವಾದ ಆಘಾತವಾಗಿದ್ದು, ನಿರಂತರವಾಗಿದೆ.

ಧೈರ್ಯ

* ಇಂದು ಯುವ ಜನರು, ಹಿರಿಯರು ಗೌರಿಯ ಬಗ್ಗೆ ಮಾತನಾಡುತ್ತಿರುವಾಗ, ಗೌರಿಯ ಹೆಸರು ನಮ್ಮ ಸಮಾಜದಲ್ಲಿ ಘಟಿಸಿದ ಅತ್ಯಂತ ದೊಡ್ಡ ಅನ್ಯಾಯವನ್ನು ಪ್ರತಿನಿಧಿಸುತ್ತದೆ. ಅದು ಪ್ರಭುತ್ವಕ್ಕೆ ನಿಜ ಹೇಳುವ ಧೈರ್ಯ ಮತ್ತು ಸತ್ಯಕ್ಕಾಗಿ ಹುತಾತ್ಮರಾದವರನ್ನು ಕೂಡಾ ಸಂಕೇತಿಸುತ್ತದೆ. ಪ್ರಭುತ್ವದ ಅತ್ಯಂತ ಉನ್ನತಾಧಿಕಾರವನ್ನು ಪ್ರಶ್ನಿಸಿ ಸತ್ಯ ತಿಳಿಸುವ ಕೆಲಸವನ್ನು ಗೌರಿ ಮಾಡಿದ್ದಾರೆ. ಇಲ್ಲಿರುವ ತೀಸ್ತಾ ಸೆತಲ್ವಾಡ್ ಇನ್ನೊಂದು ಅದ್ಭುತ ಉದಾಹರಣೆ. ಈಗಾಗಲೇ ಹೇಳಿದಂತೆ ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿ ಇರುವವರಿಗೆ ಸತ್ಯವನ್ನು ತಿಳಿಸಬೇಕು ಎಂದರೆ ಅಪಾರ ಧೈರ್ಯ ಬೇಕು. ನಾನು ಆಗಾಗ ನನ್ನನ್ನೇ ಕೇಳಿಕೊಳ್ಳುತ್ತೇನೆ: ಒಂದು ವೇಳೆ ಅಂತಹದ್ದೊಂದು ಪರಿಸ್ಥಿತಿಗೆ ತಳ್ಳಲ್ಪಟ್ಟರೆ, ಗೌರಿ ಲಂಕೇಶ್ ಮಾಡಿದ್ದನ್ನು, ತೀಸ್ತಾ ಈಗಲೂ ಮಾಡುತ್ತಿರುವುದನ್ನು ಮಾಡುವಂತಾ ಧೈರ್ಯ ನನಗಿದೆಯೇ? ಈ ಪ್ರಶ್ನೆಯನ್ನು ಕೇಳಿಕೊಂಡಾಗ ನಾನು ಒಪ್ಪಿಕೊಳ್ಳಬೇಕು: ನನಗೆ ಅಂತಾ ಧೈರ್ಯ ಇಲ್ಲ. ಒಂದು ವೇಳೆ ಅನಿವಾರ್ಯವಾಗಿ ಅಂತಾ ಪರಿಸ್ಥಿತಿಗೆ ತಳ್ಳಲ್ಪಟ್ಟರೆ ನಂತರ ಏನಾಗುತ್ತದೆ ಎಂಬುದು ಬೇರೆಯೇ ಪ್ರಶ್ನೆ. ಆದರೆ, ಇದು ನಾವು ದಿನನಿತ್ಯ ಕೇಳುವಂತಾ ಸಾಮಾನ್ಯ ವಿಷಯವಲ್ಲ. ಅಥವಾ ನಾನು ಕತೆ ಪುಸ್ತಕಗಳಲ್ಲಿ ಓದಬಹುದಾದ ಧೈರ್ಯದ ವಿಷಯವೂ ಅಲ್ಲ. ನೀವು ಮಾಡುತ್ತಿರುವುದರ ಘೋರ ಪರಿಣಾಮಗಳ ವಾಸ್ತವಿಕತೆಯು ನಿಮಗೆ ಗೊತ್ತಿರುವಾಗ; ನಿಮ್ಮ ಮನೆಯವರಿಗೆ, ನಿಮ್ಮ ಗೆಳೆಯರಿಗೆ, ಹತ್ತಿರದವರಿಗೆ ನೀವು ಇನ್ನಿಲ್ಲವಾದ ಬಳಿಕ ಏನಾಗುತ್ತದೆ ಎಂದು ಅರಿವಿದ್ದೂ ಮಾಡುವುದಿದೆಯಲ್ಲ- ಆ ಧೈರ್ಯ ಯಾವತ್ತೂ, ಮತ್ತೆಮತ್ತೆ ನೆನಪಿಸಿಕೊಳ್ಳಬೇಕಾದ ವಿಷಯ. ಯಾಕೆಂದರೆ, ಈ ನೆನಪು ನೀವು ನೆನಪಿಸಿಕೊಳ್ಳುವವರನ್ನು ಮಾತ್ರ ಜೀವಂತವಾಗಿ ಉಳಿಸುವುದಲ್ಲ; ಅವರು ಯಾತಕ್ಕಾಗಿ ಬಲಿದಾನ ಮಾಡಿದರೋ- ಆ ಮೌಲ್ಯಗಳನ್ನು ಕೂಡಾ ನಿರಂತರವಾಗಿ ಜೀವಂತ ಉಳಿಸುತ್ತದೆ. ಈ ವಿಷಯದಲ್ಲಿ ಗೌರಿ ನಮಗೆ ಮುಖ್ಯವಾಗುತ್ತಾರೆ. ಯಾಕೆಂದರೆ, ಗೌರಿ ಒಬ್ಬರು ಪತ್ರಕರ್ತರಾಗಿದ್ದರು ಮತ್ತು ಪತ್ರಕರ್ತರ ಕೆಲಸವೇ ಅಧಿಕಾರಸ್ಥರಿಗೆ ಸತ್ಯವನ್ನು ತಿಳಿಸುವುದು.

ಸತ್ಯ

* ನಾವಿಂದು ಎಂಥ ದುರಿತ ಕಾಲದಲ್ಲಿ ಇದ್ದೇವೆಂದರೆ, ಸತ್ಯದ ವ್ಯಾಖ್ಯಾನದ ಮೇಲೆಯೇ ದಾಳಿ ಮಾಡಿ, ಅದನ್ನೇ ಪ್ರಶ್ನಿಸಲಾಗುತ್ತಿದೆ. ಸತ್ಯ ಎಂದರೆ ಏನು? (ಫ್ರೆಡರಿಕ್) ನೀಷೆ ಹೇಳಿದಂತೆ ಸತ್ಯ ಎಂದರೆ ಸುಳ್ಳಿನ ದೀರ್ಘ ಇತಿಹಾಸ. ದುರದೃಷ್ಟವಶಾತ್ ಅಂಥದ್ದೊಂದು ಕಾಲಘಟ್ಟದಲ್ಲಿ ನಾವಿದ್ದೇವೆ. ಸುಳ್ಳು ಹೇಳಿ, ಮತ್ತೆ ಮತ್ತೆ ಮತ್ತೆ ಸುಳ್ಳು ಹೇಳಿ!- ಇದರ ಪರಿಣಾಮ ಏನಾಗಿದೆ ಎಂದರೆ, ನಾವು ಸುಳ್ಳಿನಲ್ಲೂ ಏನಾದರೂ ಸತ್ಯವಿದೆಯೇ ಎಂದು ಹುಡುಕಲು, ನಾವು ಇತ್ತೀಚಿನವರೆಗೆ ನಂಬಿದ ಸತ್ಯವು ಸುಳ್ಳಾಗಿರಬಹುದೆ ಎಂದೂ ಸಂಶಯಿಸಲು ಆರಂಭಿಸಿದ್ದೇವೆ. ಸತ್ಯವನ್ನು ವಿಚಿತ್ರವಾಗಿ ತನ್ನ ತಲೆಯ ಮೇಲೆ ನಿಲ್ಲಿಸಲಾಗಿದೆ. ನಾವು ನಮ್ಮ ಸುತ್ತಲೂ ನೋಡುತ್ತಿರುವ ಉದ್ದೇಶಪೂರ್ವಕ ಮತ್ತು ಸಂಕೀರ್ಣ ಪ್ರಕ್ರಿಯೆಯ ಮೂಲಕ ಇದನ್ನು ಮಾಡಲಾಗುತ್ತಿದೆ. ಈಗ ನಾವು ಫ್ಯಾಷನ್ ಎಂಬಂತೆ ಸತ್ಯೋತ್ತರ (ಪೋಸ್ಟ್ ಟ್ರುತ್) ಪರಿಕಲ್ಪನೆಯ ಬಗ್ಗೆ ಮಾತನಾಡುತ್ತೇವೆ. ಇದು ತೀರಾ ವಿಷಯನಿಷ್ಠವಾದುದು. ಅದರಲ್ಲಿ ನೀವು ಯಾವುದು ಸತ್ಯ ಎಂದು ಭಾವಿಸಿದ್ದೀರೋ ಅದೇ ಸತ್ಯ ಎಂದು ನಂಬುತ್ತೀರಿ. ಕೆಲವರು ಪರ್ಯಾಯ ಸತ್ಯ ಎಂಬ ಪರಿಕಲ್ಪನೆಯನ್ನು ತಂದಿದ್ದಾರೆ. ಅದೆಂದರೆ, ಒಬ್ಬ ಅಧಿಕಾರಸ್ಥ ತನ್ನ ಭಾಷಣಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು ಎಂದು ಹೇಳಿಕೊಳ್ಳುತ್ತಾನೆ. ಅಲ್ಲಿರುವ ಮಾಧ್ಯಮಗಳು ಅದಕ್ಕಿಂತಲೂ ಹೆಚ್ಚು ಜನರು ಸೇರಿದ್ದರು ಎಂದು ಹೇಳುತ್ತವೆ. ಆತ ಅದನ್ನು ಸಮರ್ಥಿಸಿಕೊಳ್ಳುತ್ತಾನೆ. ಅವರ ಹಿಂಬಾಲಕರು, ಹೊಗಳುಭಟರು ಇದನ್ನೇ ಮಾಡುತ್ತಾರೆ. ನಂಬಲು ಸಾಧ್ಯವೇ ಇಲ್ಲದ ಅಸತ್ಯವನ್ನು, ನಂಬಬಹುದಾದ ಸತ್ಯವಾಗಿ ಮಾರ್ಪಡಿಸಲಾಗುತ್ತಿದೆ. ಇದನ್ನು ಉದ್ದೇಶಪೂರ್ವಕವಾಗಿ ಮತ್ತು ಯೋಜಿತವಾಗಿ ಮಾಡಲಾಗುತ್ತಿದೆ. ಯಾಕೆಂದರೆ, ನೀಷೆ ಹೇಳಿದಂತೆ ಇದು ಅಧಿಕಾರಸ್ಥರಿಗೆ ಅನುಕೂಲಕರವಾಗಿರುತ್ತದೆ. ಇದು ನಾವಿಂದು ಎದುರಿಸುತ್ತಿರುವ ಸಮಸ್ಯೆ. ಇದು ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆ.

ಕರ್ತವ್ಯ

ಪತ್ರಕರ್ತರ ಕೆಲಸ ಪ್ರಭುತ್ವಕ್ಕೆ ಸತ್ಯವನ್ನು ತಿಳಿಸುವುದು. ಪತ್ರಕರ್ತರು ಯಾವತ್ತೂ ಅಧಿಕಾರಸ್ಥರ ಜೊತೆ ವಿರೋಧಿಯಾದ ಸಂಬಂಧವನ್ನು ಹೊಂದಿರಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪತ್ರಿಕಾರಂಗದ ಶಕ್ತಿ ಮತ್ತು ಕರ್ತವ್ಯ ಇರುವುದು ಇಲ್ಲಿಯೇ. ಪ್ರಭುತ್ವ ಹೇಳುವುದನ್ನೇ ನೀವು ಇನ್ನಷ್ಟು ಉತ್ಪ್ರೇಕ್ಷಿಸಿ ಪುನರುಚ್ಚರಿಸಿದಾಗ, ನೀವು ಸರಕಾರದ ಪ್ರಚಾರ ವಿಭಾಗಕ್ಕಿಂತ ಬೇರೆಯಾಗಿರುವುದಿಲ್ಲ. ನಿಮ್ಮ ಕೆಲಸವೆಂದರೆ, ಸರಕಾರವನ್ನು ಪ್ರಶ್ನಿಸುವುದು ಮತ್ತು ವಿಮರ್ಶಿಸುವುದು. ಎಲ್ಲಿ ಶ್ರೇಯವನ್ನು ಕೊಡಬೇಕೋ, ಅಲ್ಲಿ ಕೊಡಬೇಕು. ಆದರೆ, ಅಧಿಕಾರಸ್ಥರ ತಪ್ಪುಗಳನ್ನು ಎತ್ತಿತೋರಿಸಬೇಕು.

ಇದನ್ನೂ ಓದಿ: ಗೌರಿ ಹತ್ಯೆ ಪ್ರಕರಣ| ಜನವರಿ ತಿಂಗಳ ವಿಚಾರಣೆಯಲ್ಲಿ ಒಂಬತ್ತು ಸಾಕ್ಷಿಗಳು ಹೇಳಿದ್ದೇನು?

* ಇಂತದ್ದೊಂದು ಪರಿಸ್ಥಿತಿಯಲ್ಲಿ ನೀವು ಹಾದಿಬೀದಿಯಲ್ಲಿ, ಗುಂಪುಗಳಿಂದ, ನಿಮ್ಮನ್ನು ದೈಹಿಕವಾಗಿ ಮುಗಿಸಿಬಿಡುವಂತೆ ಪ್ರಚೋದಿತರಾದ ಸಹಭಾಗಿ ಸಂಘಟನೆಗಳಿಂದ ಬೆದರಿಕೆಗೆ ಗುರಿಯಾಗಿರುತ್ತೀರಿ. ಆದುದರಿಂದಲೇ ಅಂತಾರಾಷ್ಟ್ರೀಯವಾಗಿ ನಾವು ಪ್ರಪಂಚದ ಅತ್ಯಂತ ದೊಡ್ಡ ಚುನಾಯಿತ ಪ್ರಜಾಪ್ರಭುತ್ವ ಎಂದು ಕರೆಸಿಕೊಳ್ಳುತ್ತಿದ್ದವರು- ಈಗ ಚುನಾಯಿತ ಸರ್ವಾಧಿಕಾರ ಎಂದು ಕರೆಸಿಕೊಳ್ಳುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ 180 ಚಿಲ್ಲರೆ ದೇಶಗಳಲ್ಲಿ 150ರಷ್ಟು ಸ್ಥಾನದವರೆಗೆ ಕೆಳಗಿಳಿದಿದ್ದೇವೆ. ಇಂತಹ ಕಟು ವಾಸ್ತವಗಳನ್ನೇ ಸುಳ್ಳು ಎಂದು ನಿರಾಕರಿಸಲಾಗುತ್ತಿದೆ.

ಬಾಯಿ ಮುಚ್ಚಿಸುವುದು

* ಬನಾನ ರಿಪಬ್ಲಿಕ್ ಎಂದು ಕರೆಯಲ್ಪಡುವ ಚಿಕ್ಕ ದೇಶಗಳು ಮತ್ತು ಸರ್ವಾಧಿಕಾರಿ ದೇಶಗಳಲ್ಲಿ ಮಾಧ್ಯಮ ಸ್ವಾತಂತ್ರ್ಯ ಇಲ್ಲ. ಇದು ನಮ್ಮಲ್ಲಿಯೂ ಇಲ್ಲ ಎಂದು ಹೇಳಿದರೆ, ಅದು ಸುಳ್ಳು ಎಂದು ಬಿಂಬಿಸಲಾಗುತ್ತಿದೆ. ಇದು ಅವರ ತಂತ್ರವಾಗಿದೆ: ಬಾಯಿ ಮುಚ್ಚಿಸುವುದು- ಈ ಬಾಯಿ ಮುಚ್ಚಿಸುವುದು- ಹೇಗಾದರೂ ಮಾಡಿ ಬಾಯಿ ಮುಚ್ಚಿಸುವುದು- ಇದೇ ನನ್ನ ಇಂದಿನ ಮಾತಿನ ಮುಖ್ಯ ವಿಷಯವಾಗಿದೆ. ಇದು ಇಂದು ನಡೆಯುತ್ತಿದೆ ಎಂದರೆ, ಅರ್ಥ: ನಾವು ನಮ್ಮನ್ನೇ ಸೆನ್ಸಾರ್ ಮಾಡಿಕೊಳ್ಳುತ್ತೇವೆ. ಇದು ಏಕಿರಬಹುದು ಎಂದರೆ, ಇದರ ಪರಿಣಾಮ ನಮಗೆ, ನಮ್ಮ ಕುಟುಂಬದವರಿಗೆ, ಬಹುಶಃ ಅತೀ ಮುಖ್ಯವಾಗಿ ನಮ್ಮ ಮಾಲಕರಿಗೆ ಏನಾಗಬಹುದು ಎಂಬ ಭಯದಿಂದ. ಬಹುಶಃ ಇದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬಹುದು. ಆದರೆ, ಅರ್ಥವಾಗದ್ದು ಏನೆಂದರೆ, ಈ ಮಾಧ್ಯಮ ಧಣಿಗಳು ತಾವಾಗಿಯೇ ಸ್ವಯಂಸೇವಕರಂತೆ ಅಡಿಯಾಳುಗಳಾಗಿ, ಬಹುಶಃ ಈಗಾಗಲೇ ಹೇಳಿರುವ ಭಯದಿಂದ- ಪ್ರಭುತ್ವದ ಬೇರೆಬೇರೆ ರೀತಿಯ ಭಯದಿಂದ ಹಾಗೆ ವರ್ತಿಸುತ್ತಾರೆ. ಆದರೆ, ನಾನು ಪ್ರತಿನಿಧಿಸುತ್ತಿದ್ದ ಮುಖ್ಯವಾಹಿನಿಯ ದೊಡ್ಡ ಭಾಗಗಳು ಇದನ್ನು ಗೊತ್ತಿದ್ದೇ ಮಾಡುತ್ತಿವೆ ಎಂಬುದೇ ನಾಚಿಕೆಗೇಡಿನ ವಿಷಯ.

* ಇಂದು ಬಹುಸಂಖ್ಯಾತವಾದವು ಎಲ್ಲವನ್ನೂ ದಮನಿಸಿ, ತನ್ನಿಚ್ಛೆಯ ಪ್ರಭುತ್ವವನ್ನು ಸ್ಥಾಪಿಸಲು ಬಯಸಿದೆ. ಅದಕ್ಕಾಗಿ ಅಲ್ಪಸಂಖ್ಯಾತರನ್ನು ಧರ್ಮ ಮತ್ತಿತರ ಕಾರಣಗಳಿಂದ ಪ್ರತ್ಯೇಕಿಸಿ ಭ್ರಮೆಯನ್ನು ಹುಟ್ಟಿಸಿ ಭಯ ಹರಡಲಾಗುತ್ತಿದೆ. ಈ ಭ್ರಮೆಯಿಂದಲೇ ಅದು ಜೀವಂತವಾಗಿ ಬೆಳೆಯುತ್ತಿದೆ. ಧ್ರುವೀಕರಣದ ಉದ್ದೇಶವಿರುವ ಇಂತಹ ರಾಜಕೀಯ ಭ್ರಮೆಯಿಂದ ಮಾತ್ರವೇ ಬಹುಸಂಖ್ಯಾತ ಆಡಳಿತದ ಭ್ರಮೆಯನ್ನು ಹುಟ್ಟಿಸಲು ಸಾಧ್ಯ.

* ಹಾಗೆಂದು ಮುಖ್ಯ ಮಾಧ್ಯಮದಲ್ಲಿಯೂ, ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿಯೂ ಇಂದು ಒಂದು ಒಳ್ಳೆಯ ವಿಭಾಗವಿಲ್ಲ ಎಂದು ನಾನು ಹೇಳುತ್ತಿಲ್ಲ. ಅದರೆ, ಅವು ನಾನು ಈಗಾಗಲೇ ಹೇಳಿರುವ ಸ್ಪಷ್ಟವಾದ ಕಾರಣಗಳಿಗಾಗಿ- ತಾವು ನಂಬಿರುವಷ್ಟನ್ನು, ತಾವು ಮಾಡಬೇಕಾಗಿರುವುದನ್ನು, ತಾವು ಮಾಡಬೇಕಾದಷ್ಟು ಮಾಡುತ್ತಿಲ್ಲ.

ಪತ್ರಕರ್ತರ ಪಾತ್ರ

* ಹಾಗಾದರೆ ಪತ್ರಕರ್ತರ ಪಾತ್ರವೇನು? ಪತ್ರಕರ್ತರಾಗಿ ಎಡವಾಗಲೀ, ಬಲವಾಗಲೀ ಅಥವಾ ಮಧ್ಯವಾಗಲೀ ಯಾವುದೇ ರೀತಿಯ ಚಿಂತನೆಯನ್ನು, ಸಿದ್ಧಾಂತವನ್ನು ಪ್ರತಿಪಾದಿಸುವುದು ತಪ್ಪಲ್ಲ. ಒಂದು ಆರೋಗ್ಯಕರ ಆಯ್ಕೆಯೇ ಪ್ರಜಾಪ್ರಭುತ್ವವನ್ನು ಜೀವಂತ ಇರಿಸುವಂಥದ್ದು. ಆದುದರಿಂದ, ಮಾಧ್ಯಮಗಳು ಜನರಿಗೆ ಎಲ್ಲಾ ರೀತಿಯ ಪ್ರಜಾಸತ್ತಾತ್ಮಕವಾದ ಮಾಹಿತಿ, ವಿಚಾರಗಳ ಆಯ್ಕೆಗಳನ್ನು ಕೊಡಬೇಕು. ಆ ರೀತಿಯಿಂದಲೇ ಜನರನ್ನು ಎಲ್ಲಾ ವಿಷಯಗಳನ್ನು ಅರಿತಂತಹ ನಾಗರಿಕರನ್ನಾಗಿ ಮಾಡಲು ಸಾಧ್ಯ. ಒಂದೇ ರೀತಿಯ, ಒಂದೇ ವಿಚಾರದ, ಭಟ್ಟಂಗಿತನದ ಅಸತ್ಯ ಮಾಹಿತಿಗಳನ್ನು ಕೊಡುವುದರ ಮೂಲಕವಲ್ಲ. ಯಾಕೆಂದರೆ ವಿವಿಧ ವಿಚಾರಗಳೆಲ್ಲವನ್ನೂ ತಿಳಿದ ಪ್ರಬುದ್ಧ ನಾಗರಿಕರು ಮಾತ್ರವೇ ಒಂದು ಪ್ರಬುದ್ಧ ಪ್ರಜಾಪ್ರಭುತ್ವವನ್ನು ಕಟ್ಟಲು ಸಾಧ್ಯ. ಪ್ರಜಾಪ್ರಭುತ್ವದ ಮೂಲ ಗುಣಲಕ್ಷಣವೆಂದರೆ, ಸ್ವತಂತ್ರವಾದ, ಜವಾಬ್ದಾರಿಯುತವಾದ ಮಾಧ್ಯಮ. ಅದಿಲ್ಲದೇ ಹೋದರೆ, ಪ್ರಜಾಪ್ರಭುತ್ವ ಎಂಬುದೊಂದು ಪ್ರಹಸನ. ಚುನಾವಣೆಯೇ ಪ್ರಜಾಪ್ರಭುತ್ವದ ಮಾನದಂಡವಲ್ಲ. ಯಾಕೆಂದರೆ, ಮುಸ್ಸೋಲಿನಿ ಮತ್ತು ಹಿಟ್ಲರ್‌ನಂತಾ ಸರ್ವಾಧಿಕಾರಿಗಳೂ ಚುನಾವಣೆಯ ಮೂಲಕ ಆಯ್ಕೆಯಾದವರು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬಲಪ್ರಯೋಗದ ಮೂಲಕ ವಶಪಡಿಸಿಕೊಂಡು ಸರ್ವಾಧಿಕಾರಿಗಳಾದವರು. ಆದುದರಿಂದ ಮಾಧ್ಯಮ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಬಹುಮುಖ್ಯ ಭಾಗ. ನಾಲ್ಕನೇ ಸ್ಥಂಭ ಅನಿಸಿದ ಮಾಧ್ಯಮವು ಹಾಗೆ ನೋಡಿದರೆ, ಅಧಿಕೃತವಾಗಿ ಒಂದು ಅಂಗವಲ್ಲವಾಗಿದ್ದರೂ, ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವಿನ ಅಧಿಕಾರ ವಿಭಜನೆಯನ್ನು ಮತ್ತು ಅವುಗಳ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಹೊಂದಿದೆ. ಪ್ರಜಾಪ್ರಭುತ್ವವು ಸಾಂವಿಧಾನಿಕವಾದ ಕಾನೂನಿನ ಆಡಳಿತವನ್ನು ಹೊಂದಿರಬೇಕು.

ಷಡ್ಯಂತ್ರ

* ಆದುದರಿಂದ, ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದೆಂದರೆ, ಮೂರೂ ಅಂಗಗಳ ಸ್ವಾತಂತ್ರ್ಯವನ್ನು ಮತ್ತು ಅವುಗಳ ನಡುವಿನ ಸಮತೋಲನವನ್ನು ಉದ್ದೇಶಪೂರ್ವಕವಾಗಿ ಹಾಳುಗೆಡವಿ, ಕಾರ್ಯಾಂಗದ ಪ್ರಾಬಲ್ಯವನ್ನು ಇಂಚುಇಂಚಾಗಿ ದಿನೇದಿನೇ ಹೆಚ್ಚಿಸುವುದಾಗಿದೆ. ಈಗಾಗಲೇ ಶಾಸಕಾಂಗವನ್ನು ಹಲ್ಲಿಲ್ಲದ ಹುಲಿಯನ್ನಾಗಿ ಮಾಡಲಾಗಿದೆ. ಇಂದು ಸಂಸತ್ತಿನಲ್ಲಿ ಎಷ್ಟರ ಮಟ್ಟಿಗೆ ಚರ್ಚೆಗಳು ನಡೆಯುತ್ತಿವೆ? ಎಲ್ಲಾ ಪ್ರಮುಖ ನಿರ್ಧಾರಗಳನ್ನು, ಕಾನೂನುಗಳನ್ನು ಕಾರ್ಯಾಂಗದ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರಲಾಗುತ್ತಿದೆ. ಇಲ್ಲಿ ನ್ಯಾಯಾಂಗ ಮತ್ತು ಮಾಧ್ಯಮಗಳ ಪಾತ್ರ ಮಹತ್ತರವಾದುದುದು. ಆದರೆ, ಇವೆರಡೂ ಇಂದು ಎಷ್ಟು ಸ್ವತಂತ್ರವಾಗಿವೆ ಎಂಬುದು ನಮ್ಮ ಕಣ್ಣೆದುರಿಗೇ ಇದೆ.

(ಇಂತಹ ಒಂದು ಮಹಾ ಪ್ರಜಾಪ್ರಭುತ್ವ ವಿರೋಧಿ, ಕೋಮುವಾದಿ, ಬಾಯಿ ಮುಚ್ಚಿಸುವ ಷಡ್ಯಂತ್ರದ ಭಾಗವಾಗಿಯೇ ಗೌರಿ ಲಂಕೇಶ್ ಅವರಂತಹ ಪತ್ರಕರ್ತರ ಬಾಯಿಮುಚ್ಚಿಸಲಾಗಿದೆ ಎಂಬುದನ್ನು ಯಾವತ್ತೂ ಮರೆಯದಿರೋಣ. ಸಸಿಕುಮಾರ್ ಅವರು ಈ ಕುರಿತು ನೀಡಿರುವ ಒಳನೋಟಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.)

ಮಾತು: ಸಸಿಕುಮಾರ್
ಅನುವಾದ ಮತ್ತು ಬರಹರೂಪ: ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳದಲ್ಲಿ ತೀವ್ರಗೊಳ್ಳಲಿರುವ ಮಳೆ; ಆರೇಂಜ್-ಯೆಲ್ಲೋ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

0
ಮುಂದಿನ ಕೆಲವು ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಗುರುವಾರ ಕೇರಳದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮೇ 18 ರಂದು ಪಾಲಕ್ಕಾಡ್ ಮತ್ತು ಮಲಪ್ಪುರಂ, ಮೇ 19 ರಂದು...