ಕಳೆದ ವಾರದ ಮಾತು. ಕರ್ನಾಟಕ ಸರಕಾರ ಹೊಸ ಕೈಗಾರಿಕಾ ನೀತಿಯನ್ನು ರೂಪಿಸಿದೆ ಹಾಗೂ ಅದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆಯನ್ನೂ ನೀಡಿದೆ. 2020-25 ಈ ಐದು ವರ್ಷಗಳಿಗೆ ಅನ್ವಯವಾಗುವಂತೆ ಈ ಕೈಗಾರಿಕಾ ನೀತಿಯನ್ನು ಅನ್ವಯಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ನೀತಿಯಲ್ಲಿ ಮುಖ್ಯವಾಗಿ ಚರ್ಚೆಗೆ ಬಂದದ್ದು – ಹೊಸದಾಗಿ ಸ್ಥಾಪನೆಯಾಗುವ ಕೈಗಾರಿಕೆಗಳಲ್ಲಿ 70% ರಿಂದ 100% ಕನ್ನಡಿಗರಿಗೆ ಉದ್ಯೋಗಾವಕಾಶ ನೀಡುವ ವಿಷಯ. ಇದು ಅತ್ಯಂತ ಸಂತಸದ ಸಂಗತಿ. ಕನ್ನಡದ ಪ್ರದೇಶಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಖಂಡಿತವಾಗಿಯೂ ಕನ್ನಡಿಗರಿಗೆ ಉದ್ಯೋಗ ಸಿಗಲೇಬೇಕು, ನಮ್ಮ ಭಾಷೆ ಅನ್ನದ ಭಾಷೆಯಾಗಬೇಕು. ಮಾತೃಭಾಷೆಯನ್ನು ನಂಬಿ-ನೆಚ್ಚಿ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೂ ಕನ್ನಡದಲ್ಲಿ ಕಲಿಯುವವರಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ.

ಕೆಲದಿನಗಳ ಹಿಂದೆ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿಯನ್ನು ರೂಪಿಸಿ ಪ್ರಕಟಿಸಿದೆ. ಸುಮಾರು 34 ವರ್ಷಗಳ ತರುವಾಯ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಮತ್ತಷ್ಟು ಆಧುನಿಕತೆಯ ಸ್ಪರ್ಶ ನೀಡುತ್ತ ಗುಣಮಟ್ಟದ ಕಲಿಕೆಯನ್ನು ಧೃಢೀಕರಿಸಲು ಬೇಕಾಗುವಂತಹ ನವನವೀನ ತಂತ್ರ-ಯೋಜನೆಗಳನ್ನುಳ್ಳನ್ನು ರೂಪಿಸಲಾಗಿದೆ. ಹೊಸದಾಗಿ ರಚಿಸಲ್ಪಟ್ಟ ಈ ಶಿಕ್ಷಣ ನೀತಿಯಲ್ಲಿ ಮುಖ್ಯವಾಗಿ ಚರ್ಚೆಗೆ ಬಂದದ್ದು ಪ್ರಾಥಮಿಕ ಶಿಕ್ಷಣ ಅಂದರೆ 1-5 ನೆ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂಬುದು. ಕಲಿಕೆ ಸುಗಮವಾಗಲು ಹಾಗೂ ತಿಳುವಳಿಕೆಯ ನೆಲೆ ಗಟ್ಟಿಯಾಗಲು ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದು ಪ್ರಾಚೀನ ಕಾಲದಿಂದಲೂ ಹೇಳುತ್ತಲೇ ಬಂದ ಅಂಶವನ್ನು ಈಗ ಮತ್ತೆ ಒತ್ತಿ ಹೇಳಲಾಗುತ್ತಿದೆ. ಹೀಗಿರುವಾಗ ಈ ನಿಟ್ಟಿನಲ್ಲಿ ಕೆಲವೊಂದು ಅಂಶಗಳನ್ನು ಚರ್ಚಿಸುವುದು ಅಗತ್ಯವೆಂದೆನಿಸುತ್ತದೆ.

ಮೊದಲಿಗೆ, ಮಾತೃಭಾಷೆ ಎಂದರೇನು? ಮಾತೃಭಾಷೆ ಎಂದರೆ ಮಗು ತನ್ನ ಮನೆಯಲ್ಲಿ ತನ್ನ ಪರಿವಾರದೊಂದಿಗೆ ಮಾತಾಡುವ ಭಾಷೆ. ಇನ್ನಷ್ಟು ವಿವರವಾಗಿ ಹೇಳುವುದಾದರೆ ತಾಯಿ ಮಾತಾಡುವ ಭಾಷೆ ತಾಯಿಭಾಷೆ, ತಾಯ್ನುಡಿ ಅಥವಾ ಮಾತೃಭಾಷೆ ಎಂದೆನ್ನಬಹುದು. ಸಾಮಾನ್ಯವಾಗಿ ಮಾತೃಭಾಷೆಯೇ ಪರಿಸರದ ಭಾಷೆಯೂ ಆಗಿರುತ್ತದೆ, ಉದಾಹರಣೆಗೆ ಕರ್ನಾಟಕದಲ್ಲಿ ವಾಸಿಸುವ ಮೂಲ ಕನ್ನಡ ಜನರು ಆಡುವ ನುಡಿ ಕನ್ನಡ ನುಡಿ, ಇದೇ ಭಾಷೆ ಪರಿಸರದಲ್ಲಿಯೂ, ಶಿಕ್ಷಣದಲ್ಲಿಯೂ, ವ್ಯವಹಾರದಲ್ಲಿಯೂ, ಆಡಳಿತದಲ್ಲಿಯೂ, ಉದ್ಯೋಗದಲ್ಲಿಯೂ ಬಳಸಲ್ಪಡುತ್ತದೆ. ಅಪವಾದವೆಂದರೆ, ಕರ್ನಾಟಕದಲ್ಲಿ ವಾಸಿಸುವ ಅನ್ಯರಾಜ್ಯದ ಪರಿವಾರಗಳ ಮಕ್ಕಳಿಗೆ ಮನೆಭಾಷೆಯೇ ಬೇರೆಯಾಗಿರುತ್ತದೆ, ರಾಜಸ್ಥಾನದಿಂದ ಬಂದು ಕರ್ನಾಟಕದಲ್ಲಿ ವಾಸಿಸುವ ಪರಿವಾರಗಳ ಭಾಷೆ ರಾಜಸ್ಥಾನಿಯಾಗಿದ್ದು ಅವರು ಮನೆಯಲ್ಲಿ ರಾಜಸ್ಥಾನಿ ಬಳಸಿ ಹೊರಗೆ ವ್ಯವಹಾರದಲ್ಲಿ ಕನ್ನಡ, ಹಿಂದಿ, ಇಂಗ್ಲೀಷ್‌ನ್ನು ಬಳಸುತ್ತಾರೆ. ಇಂತಹ ಪರಿವಾರಗಳ ಮಕ್ಕಳ ಮಾತೃಭಾಷೆ ರಾಜಸ್ಥಾನಿ ಆಗಿರುತ್ತದೆ. ಇಂತಹ ಪರಿವಾರಗಳು ಬಹುಕಾಲ ಇಲ್ಲಿಯೇ ಇದ್ದು ಕನ್ನಡ ಕಲಿಯುವ ಸಾಧ್ಯತೆಯೂ ಇದೆ.

ಇನ್ನೊಂದು ಉದಾಹರಣೆ, ಮಹಾರಾಷ್ಟ್ರದಲ್ಲಿ ವಾಸಿರುವ ಕನ್ನಡಿಗರ ಮಾತೃಭಾಷೆ ಕನ್ನಡವೇ ಆಗಿದ್ದು ಮನೆಯಲ್ಲಿ ಅವರು ಕನ್ನಡವನ್ನೇ ಬಳಸುತ್ತಾರೆ, ಆದರೆ ಹೊರಗೆ ವ್ಯವಹಾರದಲ್ಲಿರುವ ಭಾಷೆ ಮಾತ್ರ ಮರಾಠಿ. ಹೊಸ ಶಿಕ್ಷಣ ನೀತಿಯ ಪ್ರಕಾರದ ಮಹಾರಾಷ್ಟ್ರದಲ್ಲಿ ನೆಲೆಸಿದ್ದರೂ ಕನ್ನಡ ಮಾತೃಭಾಷಿಕ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಶಿಕ್ಷಣ ದೊರೆಯಬೇಕು ಎಂದಾಯಿತು. ಆದರೆ ಮಹಾರಾಷ್ಟ್ರದಲ್ಲಿ ಇಂದು ಉಳಿದಿರುವ ಬೆರಳೆಣಿಕೆಯಷ್ಟಿರುವ ಕನ್ನಡ ಶಾಲೆಗಳ ಬಗ್ಗೆ ಮಹಾರಾಷ್ಟ್ರ ಸರಕಾರದ ಧೋರಣೆ ಏನಿದೆ ಎಂಬುದು ಎಲ್ಲರಿಗೂ ಗೊತ್ತು. ಅಷ್ಟಾಗಿಯೂ ಮಹಾರಾಷ್ಟ್ರದಲ್ಲಿರುವ ಕನ್ನಡ ಪರಿವಾರಗಳು ತಮ್ಮ ಭಾಷಾಭಿಮಾನ ಮೆರೆಯುತ್ತ, ಮಾತೃಭಾಷೆಯ ಮೇಲಿನ ಕಾಳಜಿ ಹಾಗೂ ಕನ್ನಡವೇ ಉಸಿರು ಎಂದುಕೊಂಡು ತಮ್ಮ ಮಕ್ಕಳಿಗೆ ಕನ್ನಡ ಶಾಲೆಗಳಲ್ಲಿಯೇ ಓದಿಸುತ್ತಿದ್ದಾರೆ. ಇತ್ತೀಚೆಗೆ ಈ ಸಂಖ್ಯೆ ಸ್ಪಲ್ಪ ಕಡಿಮೆಯೂ ಆಗಿದೆ. ಅದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವೆಂದರೆ ಉದ್ಯೋಗದ ಕುರಿತಾದ ಅಭದ್ರತೆ. ಕನ್ನಡ ಕಲಿತರೆ ಮಹಾರಾಷ್ಟ್ರದಲ್ಲಿ ನೌಕರಿ ಸಿಗುವುದಿಲ್ಲ. ಕರ್ನಾಟಕದತ್ತ ಮುಖ ಮಾಡಿದರೆ ಹೊರನಾಡಿನಲ್ಲಿ ಕಲಿತಿರುವ ಕಾರಣಕ್ಕೆ ನೌಕರಿಯಲ್ಲಿ ಅವಕಾಶವಿಲ್ಲ. ಭಾಷಾನೀತಿ ಹಾಗೂ ನಾಡಿನ ಪರಿಕಲ್ಪನೆ ಇವುಗಳಲ್ಲಿನ ದ್ವಂದ್ವ ಇಲ್ಲಿ ಸ್ಪಷ್ಟವಾಗುತ್ತದೆ.

ಹೊಸ ಕೈಗಾರಿಕಾ ನೀತಿಯ ಪ್ರಕಾರ, 70%-100% ಕನ್ನಡಿಗರಿಗೆ ನೌಕರಿಯಲ್ಲಿ, ಉದ್ಯೋಗದಲ್ಲಿ ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ. ಈಗ ಮೊದಲಿಗೆ ಕನ್ನಡಿಗ ಅಂದರೆ ಯಾರು? ಎಂಬುದನ್ನು ಅರಿಯಬೇಕು. ಕನ್ನಡಿಗ ಎಂಬುದು ಭಾಷಿಕ ಗುರುತೋ ಅಥವಾ ಪ್ರಾದೇಶಿಕ ಗುರುತೋ? ಕನ್ನಡ ಮಾತಾಡುವರು, ಕನ್ನಡದಲ್ಲೇ ವ್ಯವಹರಿಸುವರು, ಕನ್ನಡ ಕಲಿತವರು, ಕನ್ನಡ ಓದಲು ಬರೆಯಲು ಬರುವವರು ಕನ್ನಡಿಗರು ಎಂದಾದರೆ ಇದು ಭಾಷಿಕ ಗುರುತು. ಹಾಗಿದ್ದರೆ ಸೀಮಾತೀತವಾಗಿ ಕರ್ನಾಟಕದ ಒಳಗಿರಲಿ ಅಥವಾ ಹೊರಗಿರಲಿ ಕನ್ನಡದಲ್ಲೇ ವ್ಯವಹಿಸುವವರೆಲ್ಲರೂ ಕನ್ನಡಿಗರು ಎಂದಾಯಿತು. ಅಂದರೆ ಅವರನ್ನು ‘ನೀವು ನಾಡಿನ ಗಡಿಯಾಚೆಗೆ ಇರುವುದರಿಂದ ಕನ್ನಡಿಗರಲ್ಲ’ ಎಂದೆನ್ನಲು ಯಾರಿಗೂ ಹಕ್ಕಿಲ್ಲ. ಕರ್ನಾಟಕದ ಹೊರಗಿದ್ದು ಕನ್ನಡ ಕಲಿತಿರುವ ಕಾರಣವನ್ನು ಅಂದರೆ ಪ್ರಾದೇಶಿಕ ಕಾರಣವನ್ನು ಮುಂದೆಮಾಡಿ ನೀವು ಕನ್ನಡಿಗರಲ್ಲ ಹೊರನಾಡಿನವರು ಎಂದು ಉದ್ಯೋಗದಿಂದ ವಂಚಿತರಾಗಿಸುವುದು ಯೋಗ್ಯವಲ್ಲ. ಹೊರನಾಡಿನಲ್ಲಿದ್ದರೂ ಕನ್ನಡ ಮಾಧ್ಯಮದಲ್ಲಿಯೇ ಕಲಿತು, ಕನ್ನಡವನ್ನೇ ಉಸಿರಾಡುತ್ತಿರುವುದೇ ಕನ್ನಡಿಗ ಎಂದೆನಿಸಿಕೊಳ್ಳಲು ನೀಡಿದ ಸಾಕ್ಷಿ ಎಂದೆನಿಸುತ್ತದೆ.

ಇನ್ನು ಕನ್ನಡಿಗ ಎಂಬುದು ಪ್ರಾದೇಶಿಕ ಗುರುತು ಎಂದಾದರೆ ಪ್ರಾದೇಶಿಕವಾಗಿ ಕರ್ನಾಟಕದಲ್ಲಿ ವಾಸಿರುವವರೆಲ್ಲರೂ ಕನ್ನಡಿಗರು ಎಂದಾಯಿತು. ಉದಾ : ರಾಜಸ್ತಾನೀಯರು ಎಂದರೆ ರಾಜಸ್ಥಾನದಲ್ಲಿ ವಾಸಿಸುವವರು. ರಾಜಸ್ಥಾನ ಬಿಟ್ಟು ಹೊಟ್ಟೆಪಾಡಿಗೆಂದು ಬಂದು ಕರ್ನಾಟಕದಲ್ಲಿ ನೆಲೆಸಿದವರನ್ನು ರಾಜಸ್ಥಾನೀಯರು ಎಂದು ಗ್ರಹಿಸಬೇಕೆ ಅಥವಾ ಅವರನ್ನು ಕನ್ನಡಿಗರು ಅಥವಾ ಕರ್ನಾಟಕೀಯರು ಎಂದೆನ್ನಬೇಕೆ? ಕನ್ನಡಿಗ ಎಂಬುದು ಪ್ರಾದೇಶಿಕ ಗುರುತು ಎಂದಾದರೆ ಅವರನ್ನು ನಾವು ಕನ್ನಡಿಗರು ಎಂದು ಗ್ರಹಿಸಲೇಬೇಕಾಗುತ್ತದೆ. ಆದರೆ ವಸ್ತುಸ್ಥಿತಿ ಬೇರೆಯೇ ಇದೆ, ನಾವು ಖಂಡಿತವಾಗಿಯೂ ಅವರನ್ನು ಕರ್ನಾಟಕೀಯರು ಅಥವಾ ಕನ್ನಡಿಗರು ಎಂದೆನ್ನದೇ ರಾಜಸ್ಥಾನೀಯರು ಎನ್ನುತ್ತೇವೆ. ಅಂತೆಯೇ ಎಲ್ಲ ರಾಜ್ಯಗಳು ತಮ್ಮ ಪ್ರಾದೇಶಿಕ ಗುರುತು ಗ್ರಹಿಸುವುದಾದರೆ ಕರ್ನಾಟಕದಿಂದ ಹೊರಗೆ ಬದುಕು ಕಟ್ಟಿಕೊಂಡಿರುವ ಕನ್ನಡಿಗರನ್ನು ಆಯಾ ರಾಜ್ಯಗಳು ತಮ್ಮ ವ್ಯವಸ್ಥೆಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಮಹಾರಾಷ್ಟ್ರದಲ್ಲಿ ಇದ್ದುಕೊಂಡು ಕನ್ನಡ ಕಲಿತವರ ಗತಿಯೂ ಇದೇ ಆಗಿದೆ. ಮಹಾರಾಷ್ಟ್ರದವರು ಕನ್ನಡಿಗರನ್ನು ತಮ್ಮವರು ಎಂದುಕೊಳ್ಳುವುದಿಲ್ಲ. ಕರ್ನಾಟಕದವರು ಪ್ರಾದೇಶಿಕ ಕಾರಣವನ್ನೊಡ್ಡುತ್ತ ನೀವು ಹೊರನಾಡಿಗರು ಅಥವಾ ಮಹಾರಾಷ್ಟ್ರಿಯನ್‌ರು ಎನ್ನುತ್ತಾರೆ. ಹೀಗಿರುವ ತ್ರಿಶಂಕು ಬದುಕು ಹೊರರಾಜ್ಯದಲ್ಲಿರುವ ಕನ್ನಡ ಜನರದು, ಇವರಿಗೆ ಕನ್ನಡಿಗರೆನ್ನಬೇಕೋ ಬೇಡವೋ ಎಂಬುದನ್ನು ಯಾರು ನಿರ್ಧರಿಸುವವರು?

ಹೊಸ ಕಾನೂನು ನೀತಿ ಪ್ರಕಟವಾಗುತ್ತಿದ್ದಂತೆಯೇ ಕನ್ನಡಿಗರು ಎಂದರೆ ಯಾರು ಎಂಬ ಚರ್ಚೆ ಶುರುವಾಯಿತು. 70%-100% ಕನ್ನಡಿಗರಿಗೆ ಮೀಸಲಾತಿ ನೀಡುವುದಾದರೆ, ಅದಕ್ಕಿಂತ ಪೂರ್ವದಲ್ಲಿ ಕನ್ನಡಿಗರು ಎಂದರೆ ಯಾರು ಎಂಬುದನ್ನು ವ್ಯಾಖ್ಯಾನಿಸುವ ತುರ್ತು ಅಗತ್ಯವಿದೆ. ಕನ್ನಡಿಗರು ಎಂದರೆ ಕನ್ನಡ ಮಾಧ್ಯಮದಲ್ಲಿ ಓದಿದವರೇ? ಕನ್ನಡ ಮಾತಾಡುವವರೇ? ಅಥವಾ ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರೇ? ಅಥವಾ ಕರ್ನಾಟಕದಲ್ಲಿ ವಾಸಿಸುವ ಮತ್ತು ಕನ್ನಡ ಬರೆಯಲು ಮಾತಾಡಲು ವ್ಯವಹರಿಸಲು ಬರುವವರು ಮಾತ್ರವೇ? ಅಥವಾ ದೇಶದ ಯಾವುದೇ ಪ್ರದೇಶದಲ್ಲಿಯೇ ಇದ್ದರೂ ಕನ್ನಡ ಮಾತಾಡಲು, ಬರೆಯಲು, ಓದಲು ಬರುವವರನ್ನು ಕನ್ನಡಿಗರೆಂದು ಪರಿಗಣಿಸಬೇಕೆ? ಎಂಬ ಹಲವಾರು ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಂಡವು. ಪರಿಷ್ಕೃತ ಮಹಿಷಿ ವರದಿಯ ಪ್ರಕಾರ ‘ಕನ್ನಡಿಗರೆಂದರೆ 15 ವರ್ಷಗಳಿಗೆ ಕಡಿಮೆ ಇಲ್ಲದಂತೆ ಕರ್ನಾಟಕದಲ್ಲಿ ವಾಸ ಮಾಡುತ್ತಿರುವವರು, ಕನ್ನಡವನ್ನು ಓದಲು ಬರೆಯಲು ಮತ್ತು ಮಾತಾಡಲು ಸಮರ್ಥರಾಗಿರುವ ಭಾರತೀಯ ನಾಗರಿಕರು’ ಎಂಬ ಸ್ಪಷ್ಟ ಉಲ್ಲೇಖವಿದೆ. ಈ ವರದಿಯನ್ನು ಗಮನಿಸಿದರೆ ಬರೀ ಕರ್ನಾಕಟದಲ್ಲಿ ಅಷ್ಟೇ ಅಲ್ಲ ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ಕನ್ನಡವನ್ನು ಸಮರ್ಥವಾಗಿ ಮಾತಾಡಲು, ಓದಲು, ಬರೆಯಲು ಬರುವವರೆಲ್ಲರೂ ಕನ್ನಡಿಗರು ಎಂಬುದರ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಹೀಗಿರುವಾಗ ಸರಕಾರ ಎಲ್ಲ ಇಲಾಖೆಗಳಿಗೂ ಈ ವರದಿಯ ಅನುಷ್ಠಾನಕ್ಕೆ ಒತ್ತಾಯಿಸಬೇಕು.

ಕಾಲ ಬದಲಾದಂತೆ ಮಾನವ ಬದುಕಿನ ಅವಶ್ಯಕತೆಗಳು ಬದಲಾಗುತ್ತವೆ. ಹೊಸ ಸಮಸ್ಯೆಗಳು ಹುಟ್ಟಿಕೊಂಡಾಗ ಹೊಸ ಪರಿಹಾರಗಳೂ ಹುಟ್ಟಿಕೊಳ್ಳುತ್ತವೆ. ಈಗ ಹೊಸ ಶಿಕ್ಷಣ ನೀತಿ, ಹೊಸ ಕೈಗಾರಿಕಾ ನೀತಿ ಬಂದಂತೆ ಹಲವಾರು ಹೊಸ ನೀತಿ-ನಿಯಮಗಳು ಬರುತ್ತವೆ. ಏನೆಲ್ಲ ಬಂದರೂ ಕನ್ನಡಿಗರ ಬಾಳು ಹಸನಾಗುವುದಕ್ಕೆ ಅವೆಲ್ಲ ಪೂರಕವಾಗಬೇಕು. ಯಾರು ಕನ್ನಡಿಗರು ಯಾರು ಕನ್ನಡಿಗರಲ್ಲ ಎಂಬುದನ್ನು ಸರಕಾರ, ಸಂಸತ್ತು, ಸಂವಿಧಾನಗಳು ನಿರ್ಧರಿಸುತ್ತವೆ ಹೊರತಾಗಿ ಕನ್ನಡದ ಕೆಲ ನಾಮಧಾರಿ ಸಂಘಗಳಲ್ಲ. ಕನ್ನಡದ ಹೆಸರಿನಲ್ಲಿ ಸಂಘಕಟ್ಟಿಕೊಂಡ ಕೆಲವರು ಮಾಡುತ್ತಿರುವುದೇನು ಎಂಬುದು ಎಲ್ಲರಿಗೂ ತಿಳಿದೇ ಇದೆ. ಒಳನಾಡಿರಲಿ, ಹೊರನಾಡಿರಲಿ ಮೊದಲು ಕನ್ನಡ ಉಳಿಯಬೇಕು, ಬೆಳೆಯಬೇಕು ಹಾಗೂ ಕನ್ನಡಿಗರ ಶ್ರೇಯೋಭಿವೃದ್ಧಿಯಾಗಬೇಕು ಎಂಬ ಮನಸು ವಿಶಿಷ್ಟರಲ್ಲಿಯೂ ಸಾಮಾನ್ಯರಲ್ಲಿಯೂ ಇರಬೇಕು. ಕನ್ನಡಿಗರೆಂದರೆ ಸೀಮಾತೀತವಾಗಿ ನಾವೆಲ್ಲರೂ ಒಂದೆನ್ನಬೇಕು. ಬಹುತ್ವದ ನೆಲೆಯುಳ್ಳ ಈ ನಾಡಿದಲ್ಲಿ ಏನೇನೋ ಕಾರಣಗಳನ್ನು, ಗೊಂದಲಗಳನ್ನು ಸೃಷ್ಟಿಸಿ ಒಡೆದು ಆಳುವ ನೀತಿಗೆ ಜನರು ಮಣೆಹಾಕಬಾರದು. ಇಂದು ಭಾಷೆ, ನಾಳೆ ಪ್ರಾಂತ, ನಾಡಿದ್ದು ಮತ್ತೆ ಯಾವುದೋ ದೈತ್ಯ ಹುಟ್ಟಿಕೊಳ್ಳುತ್ತದೆ. ಇಂದು ರಾಜ್ಯಗಳ ಸೀಮಾರೇಖೆಗಳಿಂದಾಗಿ ಇಂತಹ ಗೊಂದಲ ಸೃಷ್ಟಿಯಾಗಿದೆ, ಆದರೆ ಕಾವೇರಿಯಿಂದ ಗೋದಾವರಿಯವರೆಗಿನ ನಾಡು ನಮ್ಮದು ಎಂಬುದನ್ನು ಕನ್ನಡಿಗರು ಮರೆಯಬಾರದು.

  • ಗಿರೀಶ ಜಕಾಪುರೆ. ಇವರು ಹೊಸತಲೆಮಾರಿನ ಕತೆಗಾರರರು, ಅನುವಾದಕರಾಗಿದ್ದು ಎರಡು ಭಿನ್ನ ಭಾಷೆಯ ಪರಂಪರೆಗಳನ್ನು ಪರಿಚಯಿಸುವ ಮತ್ತು ಬೆಸೆಯುವ ಅಂಕಣಗಳನ್ನು ನೀಡುತ್ತಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದ ಮೈಂದರ್ಗಿಯಲ್ಲಿ ವಾಸವಿದ್ದಾರೆ.

ಇದನ್ನೂ ಓದಿ: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ‘ಬಹುಭಾಷೆಗಳಲ್ಲಿ ದ್ವಿಭಾಷೆ’: ಕುವೆಂಪು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

LEAVE A REPLY

Please enter your comment!
Please enter your name here