Homeಮುಖಪುಟಮೇಲ್ಮನೆ ವಿಧಾನ ಪರಿಷತ್ ಯಾರಿಗೆ ಬೇಕಾಗಿದೆ?

ಮೇಲ್ಮನೆ ವಿಧಾನ ಪರಿಷತ್ ಯಾರಿಗೆ ಬೇಕಾಗಿದೆ?

- Advertisement -
- Advertisement -

ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಮೊನ್ನೆ ವಿಧಾನಸಭೆಯಲ್ಲಿ ಮಾಡಿದ ಘೋಷಣೆ ಸಂಚಲನ ಸೃಷ್ಟಿಸಿತು. ಅವರು ಕೆಲವರ್ಷಗಳ ಹಿಂದೆ ವಿಭಜನೆಗೊಂಡಿದ್ದ ಆ ಹೊಸ ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಸೃಷ್ಟಿಸುವ ಮಸೂದೆಯೊಂದನ್ನು ಮಂಡಿಸಿದ್ದರು. ಆಗ ಅದು ‘ಒಂದು ರಾಜ್ಯ ಮೂರು ರಾಜಧಾನಿ’ ಎನ್ನುವ ಹೆಡ್‌ಲೈನ್‌ನೊಂದಿಗೆ ಜಗತ್ತಿನಾದ್ಯಂತ ಸುದ್ದಿ ಮಾಡಿತ್ತು.

ಈಗ “ಆ ಮಸೂದೆಯನ್ನು ನಾವು ಹಿಂದೆ ತೆಗೆದುಕೊಳ್ಳುತ್ತಿದ್ದೇವೆ” ಎನ್ನುವ ಅವರ ಘೋಷಣೆ ರಾಷ್ಟ್ರಮಟ್ಟದಲ್ಲಿ ಸುದ್ದಿಮಾಡಿತು. ಇದರೊಂದಿಗೆ ಇಂದ್ರಪ್ರಸ್ಥವನ್ನು ಕಟ್ಟಿದ ಧರ್ಮರಾಜನ ಇಮೇಜು ಬೆಳೆಸಿಕೊಳ್ಳುವ ತಯಾರಿಯಲ್ಲಿದ್ದ ಜಗನ್ ಅವರ ಪ್ರಯತ್ನಕ್ಕೆ ಹಿನ್ನಡೆ ಆದಂತಿದೆ.

ಆ ಯುವ ಮುಖ್ಯಮಂತ್ರಿಯ ಹೊಸ ರೀತಿಯ ವಿಚಾರಕ್ಕೆ, ಅಧಿಕಾರ ವಿಕೇಂದ್ರೀಕರಣದ ಯೋಜನೆಗೆ ಅಡ್ಡಹಾಕಿದ್ದು ಅಲ್ಲಿನ ವಿಧಾನಪರಿಷತ್ತು. ಅವರ ವೈಎಸ್‌ಆರ್ ಪಕ್ಷಕ್ಕೆ ಅಲ್ಲಿನ ಮೇಲ್ಮನೆಯಲ್ಲಿ ಬಹುಮತ ಇಲ್ಲ. ಅಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಇತರ ಪಕ್ಷಗಳು ಪರಿಷತ್ತಿನಲ್ಲಿ ಈ ಕಾಯಿದೆಗಳನ್ನು ಉಪಸಮಿತಿಗೆ ಹಾಕಿ ಅನಿರ್ದಿಷ್ಟ ಕಾಲದವರೆಗೆ ಮುಂದಕ್ಕೆ ಹಾಕಿದವು. ಅಷ್ಟೇಅಲ್ಲದೆ, ರಾಜ್ಯವನ್ನು ಒಡೆಯಲು ಹೊರಟಿರುವ ಮುಖ್ಯಮಂತ್ರಿ ಎನ್ನುವ ಅಪಪ್ರಚಾರ ಶುರುಮಾಡಿದರು.

ಹಿಂದೊಮ್ಮೆ ನಮಗೆ ಪರಿಷತ್ತು ಬೇಕಿಲ್ಲ. ಅದನ್ನು ಬರಖಾಸ್ತು ಮಾಡಬೇಕು ಎಂದು ಅಲ್ಲಿನ ಆಳುವ ಪಕ್ಷದ ಕೆಲವು ನಾಯಕರು ಹೇಳಿದರು. ಈ ಮಾತಿಗೆ ಚಂದ್ರಬಾಬುನಾಯ್ಡು ಅವರು ಮತ್ತು ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರು ತೀವ್ರ ವಿರೋಧ ಮಾಡಿದರು. ಕೆಳಮನೆಯಲ್ಲಿ ದೊಡ್ಡ ಬಹುಮತ ಇರುವ ಜಗನ್ ಸರಕಾರ ಮೇಲ್ಮನೆಯನ್ನು ಕಿತ್ತುಹಾಕಿಬಿಡುತ್ತದೆ ಎಂದು ಎಲ್ಲರೂ ನಂಬಿದ್ದರು. ಆದರೆ ಅವರು ಹಾಗೆ ಮಾಡಲಿಲ್ಲ. ಮಸೂದೆ ವಾಪಸ್ ಪಡೆಯುವ ಘೋಷಣೆ ಮಾಡಿದಾಗಲೂ ಕೂಡ ಅವರು ಯಾರನ್ನು ದೂಷಿಸಲಿಲ್ಲ. ಆದರೆ ಮರುದಿನ ಪತ್ರಿಕೆಗಳು ಮೇಲ್ಮನೆ ಸದಸ್ಯರ ವಿರೋಧವೇ ಇದಕ್ಕೆ ಕಾರಣ ಅಂತ ಬರೆದವು.

ಆಳುವ ಪಕ್ಷದ ಕ್ರಮ ಸರಿಯೋ ತಪ್ಪೋ, ಆದರೆ ವಿರೋಧ ಪಕ್ಷದವರು, ಅವರ ಎಲ್ಲಾ ಯೋಜನೆಗಳಿಗೂ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಮೇಲ್ಮನೆಯಲ್ಲಿ ಬಹುಮತ ಇದ್ದ ಮಾತ್ರಕ್ಕೆ ಸುಖಾಸುಮ್ಮನೇ ಎಲ್ಲದಕ್ಕೂ ವಿರೋಧ ಮಾಡಿದರೆ, ವಿರೋಧ ಪಕ್ಷದವರು ಅಧಿಕಾರ ನಡೆಸಿದಂತೆ ಆಗುತ್ತದೆ, ಇದು ಸಂಸದೀಯ ಪ್ರಜಾಪ್ರಭುತ್ವದ ವಿರೋಧಿ ನಿಲುವು ಎಂದು ಕೆಲವರು ಅಭಿಪ್ರಾಯಪಟ್ಟರು.

ಹಾಗಾದರೆ ಈ ಮೇಲ್ಮನೆ ಇರುವುದು ಏಕೆ? ಅದರ ಕೆಲಸ ಏನು? ಅದರಲ್ಲಿ ಯಾರು ಇರಬೇಕು? ಈ ಪ್ರಶ್ನೆಗಳು ಕಾಲಕಾಲಕ್ಕೆ ಏಳುತ್ತವೆ. ಪ್ರತಿ ಪರಿಷತ್ ಚುನಾವಣೆಯ ಮುಂಚೆ ಈ ಚರ್ಚೆ ಆರಂಭ ಆಗುತ್ತದೆ.

ಪ್ರತಿ ವರ್ಷದ ಸಾಹಿತ್ಯ ಸಮ್ಮೇಳನದ ಮುಂಚೆ ಸಾಹಿತ್ಯ ಸಮ್ಮೇಳನ ಎನ್ನುವ ಜಾತ್ರೆ ಬೇಕೆ ಎನ್ನುವ ಪ್ರಶ್ನೆ ಏಳುತ್ತದಲ್ಲಾ, ಹಾಗೆ. ಈಗ ಕರ್ನಾಟಕದಲ್ಲಿ ಪರಿಷತ್ ಚುನಾವಣೆ ಬಂದಿರುವ ಸಮಯದಲ್ಲಿ ಈ ಪ್ರಶ್ನೆಗಳು ಮತ್ತೆ ಎದ್ದಿವೆ. ಇವು ಸೀಮಿತ ಮತದಾರರ ಪಟ್ಟಿಯ ಮೇಲೆ ಆಧರಿಸಿರುವ ಚುನಾವಣೆ ಆಗಿರುವುದರಿಂದ ಇದರಲ್ಲಿ ಮತ ಹಾಕುವವರು ಕಮ್ಮಿ, ಇದರ ಬಗ್ಗೆ, ಬರೆಯುವವರು, ಓದುವವರು, ಚರ್ಚೆ ಮಾಡುವವರು ಹೆಚ್ಚು. ಮತ ಚಲಾವಣೆ ಮಾಡುವವರು ಕಮ್ಮಿ.

ಶಾಸನ ರಚನೆ ಎನ್ನುವುದು ಹರಕತ್ತಿನ ಕೆಲಸ ಅಲ್ಲ. ತುಂಬಾ ನಿಧಾನವಾಗಿ ಅಧ್ಯಯನ ಮಾಡಿ, ಉಭಯ ಬಣಗಳು ಚರ್ಚಿಸಿ, ಬರಲಿರುವ ಕಾಯಿದೆಯ ಬಗ್ಗೆ ಒಳಿತು-ಕೆಡಕುಗಳನ್ನು ಪರಾಮರ್ಶಿಸಿ, ಅನೇಕ ಬಾರಿ ತಿದ್ದುಪಡಿ ಮಾಡಿದ ನಂತರ ಮಸೂದೆ ಎನ್ನುವುದು ಕಾಯಿದೆಯಾಗಿ ಹೊರಬರುತ್ತದೆ.

ಇದು ಸರಳವಾದ ಕೆಲಸ ಅಲ್ಲ. ಆ ಕಾಯಿದೆಯ ಹಿನ್ನೆಲೆ-ಪ್ರಭಾವ, ಹಿಂದು-ಮುಂದುಗಳನ್ನು ಓದಿ, ಚರ್ಚಿಸಿ, ತಿಳಿದವರನ್ನು ಕೇಳಿ-ವಿರೋಧಿಗಳ ಸಕಾರಣ ಟೀಕೆಗಳನ್ನು ಕೇಳಿಸಿಕೊಂಡು ಮಾಡಬೇಕಾದ ಕೆಲಸ. ಇದನ್ನು ಮಾಡಲು ಕೆಳಮನೆಯ ಶಾಸಕರಿಗೆ ಸಾಧ್ಯ ಆಗಲಾರದು, ಸಮಯ ಸಿಗಲಾರದು, ಅವರಿಗೆ ವ್ಯವಧಾನ ಇರಲಿಕ್ಕಿಲ್ಲ ಮುಂತಾದ ಕಾರಣಗಳಿಗಾಗಿ, ಒಂದು ಮೇಲ್ಮನೆಯನ್ನು ಸೃಷ್ಟಿಸಲಾಯಿತು. ಇದನ್ನು ಯುರೋಪಿನ ದೇಶಗಳಲ್ಲಿ ಸ್ಲೋ ಹೌಸ್ ಎಂದು ಕರೆಯುತ್ತಾರೆ. ಅಂದರೆ ಗಡಿಬಿಡಿ ಇಲ್ಲದ, ನಿಧಾನಗತಿಯ ಕೆಲಸ ನಡೆಯುವ ಶಾಸನಸಭೆ ಅಂತ ಅರ್ಥ.

ಆ ಉದ್ದೇಶ ಸಫಲವಾಗಬೇಕಾದರೆ, ಅಲ್ಲಿಗೆ ಚಿಂತಕರು, ಪ್ರಬುದ್ಧರು, ಪ್ರಸ್ತುತ ಚುನಾವಣಾ ವ್ಯವಸ್ಥೆಯಲ್ಲಿ ಗೆದ್ದುಬರಲು ಆಗಲಾರದವರಿಗೆ ಮೇಲ್ಮನೆಯಲ್ಲಿ ಆಸನ ಮೀಸಲು ಇಡಬೇಕು ಎಂದು ಸಂವಿಧಾನತಜ್ಞರು ಆಸೆ ಪಟ್ಟರು. ಅದರಂತೆ ಅಲ್ಲಿಗೆ ನಾಮನಿರ್ದೇಶನಕ್ಕೆ ಅವಕಾಶಕೊಟ್ಟರು.

ಇನ್ನು ಕಲೆ-ಸಾಹಿತ್ಯ, ಸಂಗೀತ, ರಂಗಭೂಮಿ, ವಿಜ್ಞಾನ, ಸಮಾಜ ಸೇವೆ, ಆಟೋಟಗಳಂಥ ಕ್ಷೇತ್ರಗಳಿಂದ ಕೆಲವು ಜನ ಇಲ್ಲಿಗೆ ಬರಬೇಕು, ಶಿಕ್ಷಕರು, ಪದವೀಧರರು, ಗ್ರಾಮ ಪಂಚಾಯಿತಿ- ನಗರಸಭೆಯಂತಹ ಕ್ಷೇತ್ರಗಳಿಗೆ ಇಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂದು ತಯಾರಿ ಮಾಡಲಾಯಿತು. ಇದಲ್ಲದೇ, ಕೆಳಮನೆಯ ಸದಸ್ಯರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸಬಹುದು ಎಂದು ಕಾಯಿದೆ ಮಾಡಲಾಯಿತು.

ಆದರೆ ನಮ್ಮ ಪೂರ್ವಸೂರಿಗಳ ಆಶಯ ನೆರವೇರಿದೆಯೇ? ಈಗ ನಮ್ಮ ರಾಜ್ಯದ ವಿಧಾನ ಪರಿಷತ್ ಚುನಾವಣೆಗೆ ನಿಲ್ಲುತ್ತಿರುವ, ಹಿಂದೆ ಗೆದ್ದುಹೋಗಿರುವ, ಮುಂದೆ ಹೋಗಬಹುದಾದ ನಮ್ಮ ನಾಯಕರನ್ನು ನೋಡಿದರೆ ನಿರಾಶೆಯಾಗುತ್ತದೆ.

ಇದಕ್ಕೆ ಅನೇಕ ಕಾರಣಗಳು ಇವೆ.

1. ವಿಷಯ ತಜ್ಞರು ಇಲ್ಲಿಗೆ ಬರುತ್ತಿಲ್ಲ. ಯಾಕೆ ಅಂದರೆ ಆಳುವ ಪಕ್ಷಗಳು ಇಂತಹ ಜನರನ್ನು, ಪಕ್ಷ ನಿರಪೇಕ್ಷವಾಗಿರುವ ಪಂಡಿತರನ್ನು, ತಜ್ಞರನ್ನು ಆರಿಸಿ ಕಳಿಸುತ್ತಿಲ್ಲ. ಅವರಿಗೆ ನಾಮನಿರ್ದೇಶನ ಮಾಡುತ್ತಿಲ್ಲ, ಚುನಾವಣೆಗೆ ಟಿಕೆಟ್ ಕೊಡುತ್ತಿಲ್ಲ.

2. ಕೆಳಮನೆ ಚುನಾವಣೆಯಲ್ಲಿ ಸೋತವರು, ಕೆಲಕ್ಷೇತ್ರಗಳ ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಹೊಂದಲಾರದವರು, ಹೊಂದಾಣಿಕೆ ರಾಜಕೀಯದ ಪಗಡೆಕಾಯಿಗಳು, ಹೈ ಕಮಾಂಡ್‌ಅನ್ನು ಮೆಚ್ಚಿಸುವುದಕ್ಕಾಗಿ ಬಳಕೆ ಆಗುವ ಕೆಲ ಹುದ್ದರಿಗಳು ಇಲ್ಲಿಗೆ ಹೋಗುತ್ತಿದ್ದಾರೆ.

3. ಪ್ರಬಲ ರಾಜಕಾರಣಿಗಳು ತಮ್ಮ ಸಂಬಂಧಿಕರು, ಕುಟುಂಬ ಸದಸ್ಯರು, ಸರಳವಾಗಿ ರಾಜಕೀಯ ಜೀವನಕ್ಕೆ ಬರಲಿ ಎಂದು ಪರಿಷತ್‌ಅನ್ನು ಮೊದಲ ಮೆಟ್ಟಿಲಾಗಿ ಬಳಸುತ್ತಿದ್ದಾರೆ.

4. ಮೇಲ್ಮನೆ ಎನ್ನುವುದು ಮೇಲುಜಾತಿಗಳ ಗೂಡಾಗಿ ಬದಲಾಗಿದೆ.

ಮೇಲ್ಮನೆಯವರು ಮಾಡುವ ಚರ್ಚೆ, ಅಲ್ಲಿ ನಡೆಯುವ ವಿಚಾರವಿನಿಮಯ ನೋಡಿದರೆ ನಮಗೆ ಈ ಮೇಲಿನ ಮಾತುಗಳು ಸರಿ ಅಂತ ಅನ್ನಿಸುತ್ತದೆ. ಅಲ್ಲಿಗೆ ಹೋಗಬೇಕಾದವರು ಹೋಗಿಲ್ಲ ಎನ್ನುವುದು ಖಚಿತ ಆಗುತ್ತದೆ.

ಇದರಲ್ಲಿ ಕೊನೆಯ ಎರಡು ಅಂಶಗಳನ್ನು ನೋಡೋಣ.

ರಕ್ತ ಸಂಬಂಧಿಗಳು

ಬೀದರ್‌ನಲ್ಲಿ ಶಾಸಕ ರಾಜಶೇಖರ ಪಾಟೀಲ್ ಅವರ ಸೋದರ ಚಂದ್ರಶೇಖರ್ ಅವರು ಪರಿಷತ್ ಸದಸ್ಯರು. ಅಲ್ಲಿ ಖಾಲಿಯಾಗಿರುವ ಇನ್ನೊಂದು ಸೀಟಿಗೆ ಅವರ ತಮ್ಮ ಭೀಮರಾವು ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಅವರ ಸೋದರ ಸಂಬಂಧಿ ಪ್ರಕಾಶ್ ಖಂಡ್ರೆ ಅವರಿಗೆ ಬಿಜೆಪಿ ಈ ಬಾರಿ ಟಿಕೆಟು ಕೊಟ್ಟಿದೆ.

ಗುಲ್ಬರ್ಗದ ಜೇವರ್ಗಿ ಶಾಸಕ ಅಜಯ್ ಸಿಂಗ್ ಅವರ ಸಹೋದರ ವಿಜಯ ಸಿಂಗ್ ಅವರು ಎರಡು ಬಾರಿ ಪರಿಷತ್ ಸದಸ್ಯರಾಗಿದ್ದು ಈಗ ನಿರ್ಗಮಿಸಿ ವಿಧಾನಸಭೆ ಚುನಾವಣೆ ತಯಾರಿ ನಡೆಸಿದ್ದಾರೆ.

ರಾಯಚೂರಿನ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಹತ್ತಿರ ಸಂಬಂಧಿ ಶರಣೆಗೌಡ ಬಯ್ಯಾಪುರ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ಬಿಜಾಪುರದಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ್ ಅವರ ತಮ್ಮ ಸುನಿಲ್ ಗೌಡರು ಕಾಂಗ್ರೆಸ್ ಅಭ್ಯರ್ಥಿ. ಬಾಗಲಕೋಟೆಯ ಮುರುಗೇಶ್ ನಿರಾಣಿ ಅವರ ತಮ್ಮ ಹನುಮಂತ ನಿರಾಣಿ ಅವರು ಹಾಲಿ ಸದಸ್ಯರು. ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬದ ಮೂವರು ಶಾಸಕರು ಇದ್ದರೆ, ನಾಲ್ಕನೆಯವರಾಗಿ ಲಖನ ಜಾರಕಿಹೊಳಿ ಅವರು ಇಂದು ಪರಿಷತ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೋಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ತಮ್ಮ.

ದಕ್ಷಿಣದಲ್ಲಿಯೂ ಇಂತಹ ಅನೇಕ ಉದಾಹರಣೆಗಳು ಇವೆ

ಎಚ್‌ಡಿ ರೇವಣ್ಣ ಅವರು ತಮ್ಮ ಮಗ ಸೂರಜ್ ಅವರಿಗೆ ಜನಾಗ್ರಹದ ಮೇರೆಗೆ ಟಿಕೆಟು ನೀಡಿರುವುದಾಗಿ ಹೇಳಿದ್ದಾರೆ. ಎ. ಮಂಜು ಅವರ ಮಗನಿಗೆ ಕಾಂಗ್ರೆಸ್ ಟಿಕೆಟು ತೆಗೆದುಕೊಂಡಿದ್ದಕ್ಕಾಗಿ ಅವರನ್ನು ಬಿಜೆಪಿಯಿಂದ ಹೊರಗೆ ಹಾಕಬೇಕು ಎನ್ನುವ ಕೂಗು ಕೇಳಿ ಬಂದಿದೆ.

ಇನ್ನು ಈಗ ಇರುವ 25 ಖಾಲಿ ಸ್ಥಾನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೇಲುವರ್ಗದ, ಭೂಮಾಲೀಕ ಜಾತಿಯ ಅಭ್ಯರ್ಥಿಗಳು ಇದ್ದಾರೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು, ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಲಿ ಸದಸ್ಯರೂ, ಅದೇ ಜಾತಿಯವರು ಇದ್ದರೆ, ಅವರಿಗೆ ಪ್ರತಿಸ್ಪರ್ಧಿಯಾಗಿರುವ ಅಥವಾ ಅವರ ಜಾಗಕ್ಕೆ ಸ್ಪರ್ಧೆ ಮಾಡುತ್ತಿರುವ ಹೊಸಬರು-ಎಲ್ಲಾ ಪಕ್ಷದವರು ಸೇರಿದಂತೆ- ಒಂದೇ ಜಾತಿಯವರು ಇದ್ದಾರೆ. ಮೇಲೆ ಹೇಳಿದ ಅಷ್ಟು ಜನರಲ್ಲಿ ಬೀದರ್‌ನ ಸಿಂಗ್ ಸಹೋದರರು, ಬೆಳಗಾವಿಯ ಜಾರಕಿಹೊಳಿ ಸಹೋದರರನ್ನು ಬಿಟ್ಟರೆ ಹಿಂದುಳಿದ ಜಾತಿಯವರು, ತಳಸಮುದಾಯದವರು ಯಾರೂ ಇಲ್ಲ. ಇವರಿಗೆ ಮತ ಹಾಕುವ ಗ್ರಾಮ ಪಂಚಾಯತ್ ಹಾಗೂ ನಗರಸಭೆಗಳಲ್ಲಿ ಶೇ.22.5 ಮಂದಿ ಎಸ್‌ಸಿ, ಎಸ್‌ಟಿ ಸಮುದಾಯದವರು ಇದ್ದರೂ ಕೂಡ ಅವರಿಗೆ ತಮ್ಮೊಳಗಿನ ಒಬ್ಬರನ್ನು ಚುನಾಯಿಸಿ ಕಳಿಸುವ ಅವಕಾಶ ಇಲ್ಲ. ಇದು ವಿಪರ್ಯಾಸ. ಯಾರಿಗೂ ಕಾಣದ ಮೌನ ದುರಂತ.

ಇದಕ್ಕೆ ಮೂಲಕಾರಣ ಏನು ಎಂದರೆ ಕೆಳಮನೆಯ ಕ್ಷೇತ್ರಗಳಿಗೆ ಇರುವಂತೆ ಮೇಲ್ಮನೆಯಲ್ಲಿ ಜಾತಿ ಆಧಾರಿತ ಮೀಸಲಾತಿ ಇಲ್ಲ. ಈ ಕಾರಣದಿಂದಾಗಿಯೇ ಮೇಲ್ಮನೆ ಎನ್ನುವುದು ಸಮಾಜದ ಬಿಂಬದಂತೆ ಕಾಣುವುದಿಲ್ಲ.

ಮೇಲ್ಮನೆ ಎನ್ನುವುದು ಮೇಲುಜಾತಿಗಳ ಆಡುಂಬೊಲವಾಗಿಬಿಟ್ಟಿದೆ. ಸೋತ ರಾಜಕಾರಣಿಗಳ, ಜನಬೆಂಬಲ ಕಳೆದುಕೊಂಡರೂ ಹಿಂದಿನ ಬಾಗಿಲಿನಿಂದ ಅಧಿಕಾರಕ್ಕೆ ಬರಬೇಕು ಎನ್ನುವ ಒಂದು ಕಾಲದ ನಾಯಕರ, ಸಾಹುಕಾರರ ಮನೆಯ ಮಕ್ಕಳ, ಜನರ ತಲೆ ಮೇಲೆ ಧುತ್ ಎಂದು ಬಂದು ಕೂಡುವ ಪ್ಯಾರಾಚೂಟು ಹುದ್ದರಿಗಳ, ಹೈಕಮಾಂಡ್ ಮುದ್ರೆ ಒತ್ತಿಸಿಕೊಂಡ ಲಕೋಟೆ ನಾಯಕರ ಪುನರ್ವಸತಿ ತಾಣವಾಗಿಬಿಟ್ಟಿದೆ.

ಹಾಗಾದರೆ ಮೇಲ್ಮನೆ ಯಾರಿಗೆ ಬೇಕಾಗಿದೆ?

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.


ಇದನ್ನೂ ಓದಿ: 12 ಸಂಸದರ ಅಮಾನತು ರದ್ದುಗೊಳಿಸುವುದಿಲ್ಲ: ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...