ಅಧಿವೇಶನದ ಪೂರ್ತಿ ಯಡಿಯೂರಪ್ಪ ಮತ್ತು ಬಿಜೆಪಿಯವರು ಮಾತನಾಡಿದ್ದು ಹೆಚ್ಚು ಕಮ್ಮಿ ಒಂದೇ ಮಾತು. ಅದು ಬೇಗ ವಿಶ್ವಾಸಮತ ಸಾಬೀತುಪಡಿಸಿ ಎಂಬುದೇ ಆಗಿತ್ತು. ಅದರರ್ಥ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಸಂಖ್ಯಾಬಲ ಇಲ್ಲದಿರುವುದರಿಂದ ಈ ಸರ್ಕಾರ ಬಿದ್ದುಹೋಗುತ್ತದೆ ಕೂಡಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದು ಎಲ್ಲಾ ಬಿಜೆಪಿಗರ ಮನದಾಸೆ. ಅದಕ್ಕಾಗಿ ಸುಪಾರಿ ಪಡೆದವರಂತೆ ವರ್ತಿಸಿದ್ದವು ಮುಖ್ಯವಾಹಿನಿ ಎಲೆಕ್ಟ್ರಾನಿಕ್ ಮಾಧ್ಯಮಗಳು..

ಈಗ ಕುಮಾರಸ್ವಾಮಿಯವರು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಎರಡುದಿನಗಳಾಗುತ್ತಾ ಬಂದರೂ ಹೊಸ ಸರ್ಕಾರದ ಸುದ್ದಿಯೇ ಇಲ್ಲವಲ್ಲ?? ಸದನದಲ್ಲಿ ಚರ್ಚೆ ನಡೆಯುವಾಗ ಬಿಜೆಪಿ ಮತ್ತು ಮಾಧ್ಯಮಗಳಿಗಿದ್ದ ಆತುರ ಹೀಗೆಕ್ಕಿಲ್ಲ? ಏಕೆಂದರೆ ಅಧಿಕಾರ ಹಿಡಿಯುವ ಕಾರಣಕ್ಕಾಗಿ ಬಿಜೆಪಿಯವರು ಯಾವ ಆಪರೇಷನ್ ಮಾಡಿದರೋ, ಅದೇ ಆಪರೇಷನ್ ಅವರಿಗೆ ಮುಳುವಾಗಿಬಿಡದೆಂಬ ಭಯ ಕಾಡುತ್ತಿದೆ. ಅದಕ್ಕೆ ಇಲ್ಲ ಸಲ್ಲದ ನೆಪಗಳನ್ನು ಹುಡುಕುತ್ತಿದ್ದಾರೆ. ಅಂತಹ ನೆಪಗಳು ಇಲ್ಲಿವೆ ನೋಡಿ

ಜ್ಯೋತಿಷ್ಯದ ಜೋತು ಬಿದ್ದ ಯಡಿಯೂರಪ್ಪ

ಈ ಹಿಂದಿನ ಸರ್ಕಾರ ಲೋಕೋಪಯೋಗಿ ಇಲಾಖೆಯ ಸಚಿವ ಎಚ್.ಡಿ ರೇವಣ್ಣನವರನ್ನು ನಿಂಬೆ ಹಣ್ಣು ರೇವಣ್ಣ ಎಂದು ಎಲ್ಲರೂ ಆಡಿಕೊಂಡು ಸುಸ್ತಾಗಿದ್ದರು. ಸ್ವತಃ ಸ್ಪೀಕರ್ ಸಹ ರೇವಣ್ಣನವರು ಚರ್ಚೆಗೆ ಸಮಯ ಕೇಳಿದಾಗ ನಮ್ಮ ಜ್ಯೋತಿಷಿಗಳ ಬಳಿ ಕೇಳಿ ಗಳಿಗೆ ನಿಗಧಿ ಮಾಡುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು. ಈಗ ಯಡಿಯೂರಪ್ಪನವರು ಸಹ ತಾವೇನು ಕಮ್ಮಿ ಎಂದು ರೇಣುಕಾರ್ಚಾರ ಎಂಬ ಜ್ಯೋತಿಷಿಯ ಮೊರೆಹೋಗಿದ್ದಾರೆ.

ಆ ಜ್ಯೋತಿಷಿಯು ಅಳೆದು ತೂಗಿ ಶುಕ್ರವಾರ ಸಂಜೆ 6 ಗಂಟೆ ಮೇಲೆ, ಇಲ್ಲ ಸೋಮವಾರ ಅಥವಾ ಆಷಾಡ ಮುಗಿದ ಮೇಲೆ ಯಡಿಯೂರಪ್ಪನವರು ಪ್ರಮಾಣವಚನ ಸ್ಪೀಕರಿಸಿದರೆ ಒಳ್ಳೇಯದು ಎಂದು ಷರಾ ಬರೆದಿದ್ದಾರೆ. ಎಂದರೆ ಅಷ್ಟು ದಿನ ಸರ್ಕಾರ ರಚಿಸುವ ಸರ್ಕಸ್ಸನ್ನು ಎಳೆಯಲು ಅನುವು ಮಾಡಿಕೊಟ್ಟಿದ್ದಾರೆ.

ಅವರು ಹಾಗೇ ಹೇಳಿ ಮುಗಿಸಿದ ಮೂರೇ ನಿಮಿಷಕ್ಕೆ ಕನ್ನಡದ ಖಾಸಗಿ ಚಾನೆಲ್ ಒಂದರಲ್ಲಿ ಮೂವತ್ತು ನಿಮಿಷದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಪಾಪಾ ಅವರಷ್ಟು ಸ್ಪೀಡು ಬಿಜೆಪಿ ಸರ್ಕಾರಕ್ಕಿಲ್ಲ.

ಐವರು ಡಿಸಿಎಂಗಳನ್ನು ತಪ್ಪಿಸಬೇಕು

ಸರ್ಕಾರ ರಚನೆ ತಡವಾಗುತ್ತಿರುವುದಕ್ಕೆ ಟಿವಿ ಮಾಧ್ಯಮಗಳು ಕಂಡುಕೊಂಡ ಪರಿಹಾರ ಐವರು ಡಿಸಿಎಂಗಳನ್ನು ತಪ್ಪಿಸಬೇಕು ಎಂಬುದಾಗಿದೆ. ಅವರ ಪ್ರಕಾರ ಬಿಜೆಪಿಯಲ್ಲಿ ಐವರು ನಾಯಕರು ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅವರಿಗೆ ಕೊಡುವುದು ಕಷ್ಟ ಹಾಗಾಗಿ ಸರ್ಕಾರ ರಚನೆ ವಿಳಂಬವಾಗುತ್ತಿದೆ.

ಜಗದೀಶ್ ಶೆಟ್ಟರ್, ಕೆ.ಎಸ್ ಈಶ್ವರಪ್ಪ, ಬಿ.ಶ್ರೀರಾಮುಲು, ಆರ್.ಅಶೋಕ್ ಮತ್ತು ಗೋವಿಂದ ಕಾರಜೋಳ ರವರು ಹೆಸರನ್ನು ಪದೇ ಪದೇ ಉಲ್ಲೇಖಿಸುತ್ತಿರುವ ಟಿ.ವಿಗಲು ಸದ್ದಿಲ್ಲದೇ ಅರವಿಂದ ಲಿಂಬಾವಳಿ ಹೆಸರನ್ನು ಕೈಬಿಟ್ಟಿದ್ದಾರೆ. ವಿಶ್ವಾಸಮತ ಯಾಚನೆಗೂ ಮುನ್ನವೇ ರೆಸಾರ್ಟ್ ನಲ್ಲಿ ಕೆ.ಎಸ್ ಈಶ್ವರಪ್ಪ ಮತ್ತು ಅರವಿಂದ ಲಿಂಬಾವಳಿ ನಡುವೆ ಇದೇ ಡಿಸಿಎಂ ಸ್ಥಾನಕ್ಕಾಗಿ ಕಿತ್ತಾಟವಾದುದ್ದಾಗಿಯೂ, ತದನಂತರವೇ ಅಶ್ಲೀಲ ಸಿ.ಡಿ ಬಿಡುಗಡೆಯಾಗಿದ್ದು ಆದರೂ ಅವರ ಬಗ್ಗೆ ಟಿವಿಗಳು ಚಕಾರವೆತ್ತುತ್ತಿಲ್ಲ.

ಸ್ಪೀಕರ್ ರವರು ಏನಂಥಾರೆ?

ಇನ್ನು ಅತೃಪ್ತ ಶಾಸಕರೆಂದು ಕರೆಯುವ 16 ಜನ ಶಾಸಕರ ರಾಜೀನಾಮೆ ವಿಚಾರವಿನ್ನು ಬಗೆಹರಿದಿಲ್ಲ. ಸುಪ್ರೀಂ ಕೋರ್ಟ್ ಸಹ ಅಂತಿಮ ತೀರ್ಪು ನೀಡಿಲ್ಲ. ಅವರನ್ನು ಈ ವಿಧಾನಸಭಾ ಅವಧಿಪೂರ್ತಿ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹ ಮಾಡಬೇಕೇಂದು ಸ್ಪೀಕರ್ ರವರು ಕಾಯುತ್ತಿದ್ದಾರೆ.

ಇಂದು ಮಾಧ್ಯಮಗಳು ಸ್ಪೀಕರ್ ರವರಿಗೆ ಪದೇ ಪದೇ ಆ ಶಾಸಕರ ರಾಜೀನಾಮೆ ಏನು ಮಾಡುತ್ತೀರಿ? ಅನರ್ಹತೆ ಯಾವಾಗ ಮಾಡುತ್ತೀರಿ ಎಂದು ಪ್ರಶ್ನೆ ಹಾಕುತ್ತಿದ್ದರು. ಒಂದೂ ಚಾನೆಲ್ ಅಂತೂ ಆ ಶಾಸಕರನ್ನು ಮತ್ತೆ ವಿಚಾರಣೆಗೆ ಕರೆಯುತ್ತೀರಾ ಎಂದು ಪ್ರಶ್ನಿಸಿತು. ಆಗ ಸಿಟ್ಟಿಗೆದ್ದ ಸ್ಪೀಕರ್ ರಮೇಶ್ ಕುಮಾರ್, “ನಮಗೇನು ಬೇರೆ ಕೆಲಸ ಇಲ್ಲ ಅನ್ಕೊಂಡ್ರ? ಬೇಕಾದರೆ ನೀವೆ ಕರೆಸಿ ವಿಚಾರಣೆ ಮಾಡಿಕೊಳ್ಳಿ” ಎಂದು ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ಗುಟ್ಟು ಬಿಟ್ಟುಕೊಡಲು ನಿರಾಕರಿಸಿದ್ದಾರೆ.

ಹೈಕಮಾಂಡ್ ಎಂಬ ಗುಮ್ಮ

ಇನ್ನು ಬಿಜೆಪಿ ಹೈಕಮಾಂಡ್ ಕೂಡ ಗೊಂದಲಕ್ಕೆ ಬಿದ್ದಿದೆ. ಹಾಗಾಗಿ ರಾಜ್ಯ ಬಿಜೆಪಿಗೆ ಯಾವುದೇ ಸ್ಪಷ್ಟ ಸೂಚನೆಯನ್ನು ಕೊಟ್ಟಿಲ್ಲ. ಇದು ಯಡಿಯೂರಪ್ಪನವರ ಎದೆಬಡಿತವನ್ನು ಹೆಚ್ಚಿಸಿದೆ. ಕಷ್ಟಪಟ್ಟು ಮೈತ್ರಿ ಸರ್ಕಾರ ಬೀಳಿಸಿದ್ದರೂ ತಾನು ಪಟ್ಟಕ್ಕೆರಲು ತಡವಾಗುತ್ತಿರುವುದು ಅವರ ಚಿಂತೆಗೆ ಕಾರಣವಾಗಿದೆ. ಹೈಕಮಾಂಡ್ ಮುಖ್ಯಮಂತ್ರಿಯನ್ನೇ ಬದಲಾವಣೆ ಮಾಡಿಬಿಟ್ಟರೆ ಏನು ಮಾಡುವುದು ಎಂಬುದು 76 ವರ್ಷದ ಯಡಿಯೂರಪ್ಪನವರ ಅನುಮಾನ.

ಹೈಕಮಾಂಡ್ ಅನುಮತಿ ನೀಡುವವರೆಗೂ ಸರ್ಕಾರ ರಚನೆಯ ಪ್ರಕ್ರಿಯೆ ನಿಂತಲ್ಲೇ ನಿಲ್ಲಲ್ಲಿದೆ.. ಒಟ್ಟಿಗೆ ಅಷ್ಟೆಲ್ಲಾ ಅರ್ಜೆಂಟ್ ಮಾಡಿದವರಿಗೆ ಈಗ ತಾವು ಕಾಲ ತಳ್ಳುವಂತ ಪರಿಸ್ಥಿತಿ ಬಂದೊದಗಿದೆ. ಇದೆಲ್ಲದರ ನೋವು ಅನುಭವಿಸುತ್ತಿರುವವರು ಮಾತ್ರ ಜನಸಾಮಾನ್ಯರು. ಸ್ಪೀಕರ್ ರವರು ಇದನ್ನು ಸೂಚ್ಯವಾಗಿ ಹೇಳಿದರು. ಬೇಗ ಹೊಸ ಸರ್ಕಾರ ರಚನೆಯಾಗಬೇಕು, ನಾನು ಯಾವಾಗ ಬೇಕಾದರೂ ಸದನ ನಡೆಸಲು ಸಿದ್ದನಿದ್ದೇನೆ ಏಕೆಂದರೆ ತಿಂಗಳ ಕೊನೆ ಆಗಿರುವುದರಿಂದ ಸರ್ಕಾರಿ ನೌಕರರಿಗೆ ಸಂಬಳ ಹಾಕುವುದು ಸಹ ಕಷ್ಟವಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here