Homeಅಂತರಾಷ್ಟ್ರೀಯಪ್ರಾಜೆಕ್ಟ್ - ಜೋರ್ ಸೆ ಬೋಲೊ; ಷೋರ್ ಸೆ ಬೋಲೊ! (ಜೋರಾಗಿ ಹೇಳು; ...

ಪ್ರಾಜೆಕ್ಟ್ – ಜೋರ್ ಸೆ ಬೋಲೊ; ಷೋರ್ ಸೆ ಬೋಲೊ! (ಜೋರಾಗಿ ಹೇಳು; ಅಳುಕಿಲ್ಲದೆ ಕೂಗಿ ಹೇಳು)

- Advertisement -
- Advertisement -

ಈ ಸೊರೋಸ್ 90ಕಳೆದಿರುವ ವಯೋವೃದ್ಧ ಅಸಾಮಿ. ಮೂಲತಃ ಹಂಗೇರಿಯನ್. ಅಮೆರಿಕ ವಾಸಿ. ಶ್ರೀಮಂತ, ಹಿಂದೊಮ್ಮೆ ಶಾರ್ಟ್ ಟ್ರೇಡಿಂಗ್ ಮಾಡಿಯೇ ಬ್ಯಾಂಕ್ ಆಫ್ ಇಂಗ್ಲೆಂಡ್‌ಅನ್ನು ಕಂಗಾಲು ಮಾಡಿದ್ದ ಹೆಜ್ ಫಂಡ್ ಮ್ಯಾನೇಜರ್; ದಾನಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿಪರ ಮತ್ತು ಲಿಬರಲ್ ರಾಜಕೀಯಗಳ ಪರ ನಿಂತಿರುವ ವ್ಯಕ್ತಿ ಎಂಬ ಗುಮಾನಿ ಇರುವ ವ್ಯಕ್ತಿ.

ಈ ಆರ್ಕೆಸ್ಟ್ರಾಗಳೆಲ್ಲ ನೋಡಲು ಬಲುಚೆಂದ. ಮಗ್ಗುಲ ಮುಳ್ಳುಗಳು ಸರ್ಕಾರಕ್ಕೆ ಚುಚ್ಚಿದಾಗಲೆಲ್ಲ, ಕೂಡಲೇ ಒಂದು ನರೆಟಿವ್ ಕಟ್ಟುವುದಕ್ಕೆ ಅದರ ಸಮರ್ಥಕರು, ಅವರ ಡಿಯರ್_ಮೀಡಿಯಾ ಮತ್ತು ಟ್ರೋಲ್ ಸೇನೆಗಳು ಒಟ್ಟಾಗಿ ಕೋರಸ್ ಎತ್ತಿ ಹಾಡುತ್ತವೆ; ಆಗ ಯಾವ ಅರಚು ಕಂಠಕ್ಕಾದರೂ ಆ ಹಾಡು ಒಲಿಯಬೇಕು, ಹಾಗಿರುತ್ತದೆ ಈ ಆರ್ಕೆಸ್ಟ್ರೇಷನ್.

ವಿಷಯ ಇಷ್ಟೇ. ಸುಮಾರು ನಮ್ಮಲ್ಲಿನ “ಲಿಟ್ ಫೆಸ್ಟ್” ಮಾದರಿಯಂತೆಯೇ, ಯುರೊ-ಅಟ್ಲಾಂಟಿಕ್ ವಲಯದ ಖಾಸಗಿ ವ್ಯವಸ್ಥೆಯೊಂದು, ಜಗತ್ತಿನಾದ್ಯಂತದಿಂದ ಒಂದಿಷ್ಟು ರಾಜಕಾರಣಿಗಳು, ಅಕಡೆಮೀಷಿಯನ್‌ಗಳು ಮತ್ತು ಭದ್ರತಾ ವೃತ್ತಿಪರರನ್ನು ಕರೆಸಿ ನಡೆಸುವ ವಾರ್ಷಿಕ ಸಮ್ಮೇಳನ ಇದು. ಇದರಲ್ಲಿ ಭಾರತದಿಂದ ಈ ವರ್ಷ ಪಾಲ್ಗೊಂಡದ್ದು ಭದ್ರತಾ ಉಪಸಲಹೆಗಾರ ವಿಕ್ರಂ ಮಿಸ್ರಿ ಮತ್ತು ಗುಪ್ತಚರ ವಿಭಾಗ “ರಾ”-RAWದ ಕಾರ್ಯದರ್ಶಿ ಸುಮಂತ್ ಕುಮಾರ್ ಗೋಯಲ್. ಒಂದಿಷ್ಟು ಯುರೋಪಿಯನ್ ಪುಟ್ಟ ದೇಶಗಳ ಮುಖ್ಯಸ್ಥರೂ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಇಂತಿಪ್ಪ ಸಮಾವೇಶದಲ್ಲಿ, ಜಾರ್ಜ್ ಸೊರೋಸ್ ಎಂಬ ಇಲ್ಲಿಯತನಕ ಭಾರತಕ್ಕೆ ’ಬಹುತೇಕ ಅಪರಿಚಿತ’ ವ್ಯಕ್ತಿಯೊಬ್ಬರು ಮೊನ್ನೆ, “ಭಾರತದಲ್ಲಿ ಪ್ರಜಾತಂತ್ರ ಇದೆ; ಆದರೆ ಭಾರತದ ಪ್ರಧಾನಮಂತ್ರಿಗಳು ಪ್ರಜಾತಾಂತ್ರಿಕ ಅಲ್ಲ. ಅದಾನಿ ಬಳಗ ವ್ಯಾವಹಾರಿಕ ತೊಂದರೆಗಳಲ್ಲಿ ಸಿಕ್ಕಿಹಾಕಿಕೊಂಡಿರುವುದರ ಕುರಿತು ಪ್ರಧಾನಿ ಮೋದಿ ಅವರ ಮೌನವು ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ಅವರು ದೇಶದ ಜನತೆಗೆ, ವಿದೇಶಿ ಹೂಡಿಕೆದಾರರಿಗೆ ಮತ್ತು ಸಂಸತ್ತಿಗೆ ಮೌನ ಮುರಿಯಲೇಬೇಕಾಗುತ್ತದೆ” ಎಂದೆಲ್ಲ ಭಾಷಣ ಕುಟ್ಟಿದ್ದರು.

ಜಗತ್ತಿನಾದ್ಯಂತ ಪ್ರತಿದಿನವೆಂಬಂತೆ ನಡೆಯುವ ಬಗೆಬಗೆಯ ಈ ರೀತಿಯ ಸಮಾವೇಶಗಳಲ್ಲಿ ಇಂತಹ ನೂರಾರು ಭಾಷಣಗಳು ನಡೆದು ಮುಚ್ಚಿಹೋಗಿರುತ್ತವೆ. ಅದು ಬಹಳ ಸಹಜ ಸಂಗತಿ. ಆದರೆ ಅಲ್ಲಿ ಯಾರೋ ಒಬ್ಬರು ಮಾಡಿದ ಭಾಷಣ ಏಕಾಏಕಿ ಇಲ್ಲಿ ಭಾರತದಲ್ಲಿ ಸ್ಫೋಟಿಸಿ, ಅನುರಣಿಸಿದ್ದು ಯಾಕೆ?

ಸ್ಮೃತಿ ಇರಾನಿ ಕೆಂಡ
ಭಾಷಣ ನಡೆದು ಕೇವಲ ಇಪ್ಪತ್ತನಾಲ್ಕು ತಾಸುಗಳ ಒಳಗೆ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಕರೆದ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಯವರು ಸಿಡ್ನಿಯಲ್ಲಿ ಸೊರೋಸ್ ಅವರು ಮಾಡಿದ ಭಾಷಣದ ವಿರುದ್ಧ ಉಗ್ರವಾಗಿ ಹರಿಹಾಯ್ದು, “ಇದು ಭಾರತದ ಪ್ರಜಾತಾಂತ್ರಿಕ ಪ್ರಕ್ರಿಯೆಗಳಲ್ಲಿ ನಡೆಸಿದ ಹಸ್ತಕ್ಷೇಪ; ಅವರು ಇಲ್ಲಿನ ಪ್ರಜಾಪ್ರಭುತ್ವವನ್ನು ನಾಶ ಮಾಡಿ, ತನ್ನ ಆಯ್ಕೆಯ ಜನ ಇಲ್ಲಿ ಅಧಿಕಾರ ಹಿಡಿಯಬೇಕೆಂದು ಬಯಸಿದ್ದಾರೆ” ಎಂದೆಲ್ಲ ಹೇಳಿದರು.

ಸಾಮಾನ್ಯವಾಗಿ ಇಂತಹ ಸಂಗತಿಗಳಿಗೆ ಸರ್ಕಾರದ ಕಡೆಯಿಂದ ಪ್ರತಿಕ್ರಿಯಿಸುವುದಿದ್ದರೆ ಗೃಹ ಇಲಾಖೆ ಅಥವಾ ವಿದೇಶಾಂಗ ಇಲಾಖೆಯ ವಕ್ತಾರರು ಪ್ರತಿಕ್ರಿಯಿಸುವುದು ಸಂಪ್ರದಾಯ. ಬಿಬಿಸಿ ಡಾಕ್ಯುಮೆಂಟರಿ ಪ್ರಕರಣದಲ್ಲಿ ಇದನ್ನು (ವಿದೇಶಾಂಗ ಇಲಾಖೆ ವಕ್ತಾರ ಅರಿಂಧಾಮ್ ಬಾಗ್ಚಿ ಪ್ರತಿಕ್ರಿಯಿಸಿದ್ದು) ನಾವು ಕಂಡಿದ್ದೇವೆ. ಆದರೆ ಇಲ್ಲಿ ಏಕಾಏಕಿ ಸರ್ಕಾರದ ಸಂಪುಟ ದರ್ಜೆಯ, ಹೆವಿವೆಯ್ಟ್ ಸಚಿವರೊಬ್ಬರು ಪತ್ರಿಕಾಗೋಷ್ಠಿ ನಡೆಸಿದ್ದು ಸಹಜವಾಗಿಯೇ ಸರ್ಕಾರದ ಪರ ಇರುವ ಮಾಧ್ಯಮಗಳ ಗಮನ ಸೆಳೆಯಿತು ಮತ್ತು ಸೊರೋಸ್ ಯಾರೆಂದು ದೇಶ ಹುಡುಕಾಟ ನಡೆಸುವಂತಾಯಿತು.

ಮುದುಕ ಡೇಂಜರಸ್ ಎಂದ ಜೈಶಂಕರ್
ಇದು ಅಲ್ಲಿಗೇ ಮುಗಿಯಲಿಲ್ಲ. ಸಚಿವಮಟ್ಟದ ಜಿ20 ಶೃಂಗಸಭೆಗೆ ಪೂರ್ವಭಾವಿಯಾಗಿ, ಆಸ್ಟ್ರೇಲಿಯನ್ ಸ್ಟ್ರಾಟಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್ (ASPI) ಮತ್ತು ಭಾರತದ ಅಬ್ಸರ್ವರ್ ರಿಸರ್ಚ್ ಫೌಂಡೇಷನ್ (ORF) ಜಂಟಿಯಾಗಿ ಆಸ್ಟ್ರೇಲಿಯಾದಲ್ಲಿ ರೈಸಿನಾ@ಸಿಡ್ನಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಪಾಲ್ಗೊಂಡ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್, ಅಲ್ಲಿನ ಕ್ಲೈಮೇಟ್ ಚೇಂಜ್ ಮತ್ತು ಎನರ್ಜಿ ಸಚಿವ ಕ್ರಿಸ್ ಬ್ರೌನ್ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲೂ ಪಾಲ್ಗೊಂಡರು. ಎರಡು ದಿನಗಳ ಹಿಂದೆ ಆಸ್ಟ್ರೇಲಿಯಾದಲ್ಲೇ ಸೊರೋಸ್ ಅವರು ಭಾರತದ ಕುರಿತು ನೀಡಿದ್ದ ಹೇಳಿಕೆಯ ಬಗ್ಗೆ ಪತ್ರಕರ್ತರೊಬ್ಬರು ವಿದೇಶಾಂಗ ಸಚಿವರ ಪ್ರತಿಕ್ರಿಯೆ ಕೇಳಿದಾಗ ಅವರು ಈ ಗದ್ದಲಕ್ಕೆ ಒಂದು ಹೊಸ ತಿರುವು ತರಲು ಪ್ರಯತ್ನಿಸಿದರು. ’ಸೊರೋಸ್ ಅವರದು ಹಳೆಯ ಯುರೋ-ಅಟ್ಲಾಂಟಿಕ್ ಮಾದರಿಯ ವರಸೆ. ಅವರು ಮುದುಕ, ಶ್ರೀಮಂತ, ಸ್ಥಾಪಿತ ಅಭಿಪ್ರಾಯಗಳ ಮನುಷ್ಯ ಮತ್ತು ಅಪಾಯಕಾರಿ. ಅವರು ನ್ಯೂಯಾರ್ಕಿನಲ್ಲಿ ಕುಳಿತು, ಜಗತ್ತು ಹೇಗೆ ಕೆಲಸ ಮಾಡಬೇಕೆಂದು ತನ್ನ ದೃಷ್ಟಿಕೋನಗಳೇ ನಿರ್ಧರಿಸುತ್ತವೆ ಎಂದು ನಂಬಿರುವವರು; ಅವರು ನರೆಟಿವ್‌ಗಳನ್ನು ಕಟ್ಟಲು ಶ್ರಮಿಸುತ್ತಾರೆ. ಅವರಿಗೆ ಬೇಕಾದವರು ಗೆದ್ದರೆ ಮಾತ್ರ ಅದು ಡೆಮಾಕ್ರಸಿ, ಇಲ್ಲದಿದ್ದರೆ ಅಲ್ಲಿ ಡೆಮಾಕ್ರಸಿ ಇಲ್ಲ ಅನ್ನುವವರು ಅವರು. ಮುಕ್ತ ಸಮಾಜದ ಹೆಸರಲ್ಲೇ ಅವರು ಇದನ್ನೆಲ್ಲ ಹೇಳಿ ದಕ್ಕಿಸಿಕೊಳ್ಳುತ್ತಾರೆ. ವಸಾಹತುಶಾಹಿ ಬದುಕಿನ ಕಷ್ಟ ಉಂಡಿರುವ ಭಾರತಕ್ಕೆ ವಿದೇಶೀ ಹಸ್ತಕ್ಷೇಪಗಳ ಪರಿಣಾಮಗಳ ಅರಿವಿದೆ. ಜಗತ್ತು ಈಗ ಮರುಸಂತುಲನಗೊಳ್ಳುತ್ತಿದ್ದು, ಡೆಮಾಕ್ರಸಿ ಎಂದರೆ ಏನೆಂಬ ಯೂರೊ-ಅಟ್ಲಾಂಟಿಕ್ ಕೇಂದ್ರಿತ ವ್ಯಾಖ್ಯಾನಕ್ಕಿಂತ ಭಿನ್ನವಾದ ನಿಲುವುಗಳ ಚರ್ಚೆಗೂ ಈಗ ಅವಕಾಶಗಳು ತೆರೆದಿವೆ’ ಎಂದೆಲ್ಲ ವಿವರಿಸಿ ಇಡಿಯ ಪ್ರಕರಣಕ್ಕೆ ಒಂದು ಜಾಗತಿಕ ರಾಜಕೀಯದ ಸ್ವರೂಪ ತಂದುಕೊಟ್ಟರು.

ಇದನ್ನೂ ಓದಿ: ಭಟ್ಕಳದಲ್ಲಿ ಫೆ.28ರಂದು ಅಂಬೇಡ್ಕರ್‌ ದೀಕ್ಷೆ ಸಮಾವೇಶ; ವಿವಿಧ ಸಂಘಟನೆಗಳು ಭಾಗಿ

ಮಾಧ್ಯಮ ಆರ್ಕೆಸ್ಟ್ರಾ

ಇಂತಹದೊಂದು ಚರ್ಚೆಗೆ ಭಾರತದ ಸುದ್ದಿ ಹಸಿವಿನ ವರ್ಗ ತೆರೆದುಕೊಳ್ಳುವಂತೆ ಮಾಧ್ಯಮಗಳು ಭರ್ಜರಿಯಾಗಿ ಕೆಲಸ ಮಾಡಿದವು. ಎಎನ್‌ಐ ಅಂತಹ ಸರ್ಕಾರ ಪರವಾದ ಪ್ರಬಲ ಸುದ್ದಿಮೂಲಸಂಸ್ಥೆಯು ಈ ಸುದ್ದಿ ಗದ್ದಲವಾಗುವಲ್ಲಿ ಮಹತ್ವದ ಪಾತ್ರ ವಹಿಸಿರುವಂತೆ ಕಾಣಿಸುತ್ತಿದೆ. ದೇಶದಿಂದ ಹೊರಗೆ ಎಲ್ಲೋ ಯಾರೋ ಮಾತನಾಡಿದ ಬೀಸುಮಾತಿನ ಸುದ್ದಿಯೊಂದು ಭಾರತದಲ್ಲಿ ಈ ಪರಿ ಉರಿ ಹೊತ್ತಿಸಿದೆ ಮತ್ತು ಸರ್ಕಾರವು ಚತುರಂಗಬಲದ ಮೂಲಕ ತಾನೇ ಆ ಸುದ್ದಿಯನ್ನು ತಳಮಟ್ಟಕ್ಕೆ ತಲುಪಿಸಲು ಶ್ರಮ ಯಾಕೆ ಹಾಕುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡರೆ ಪರಿಸ್ಥಿತಿ ಸ್ಪಷ್ಟವಾಗುತ್ತದೆ.

ಈ ಸೊರೋಸ್ 90 ಕಳೆದಿರುವ ವಯೋವೃದ್ಧ ಅಸಾಮಿ. ಮೂಲತಃ ಹಂಗೇರಿಯನ್. ಅಮೆರಿಕ ವಾಸಿ. ಶ್ರೀಮಂತ, ಹಿಂದೊಮ್ಮೆ ಶಾರ್ಟ್ ಟ್ರೇಡಿಂಗ್ ಮಾಡಿಯೇ ಬ್ಯಾಂಕ್ ಆಫ್ ಇಂಗ್ಲೆಂಡ್‌ಅನ್ನು ಕಂಗಾಲು ಮಾಡಿದ್ದ ಹೆಜ್ ಫಂಡ್ ಮ್ಯಾನೇಜರ್; ದಾನಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿಪರ ಮತ್ತು ಲಿಬರಲ್ ರಾಜಕೀಯಗಳ ಪರ ನಿಂತಿರುವ ವ್ಯಕ್ತಿ ಎಂಬ ಗುಮಾನಿ ಇರುವ ವ್ಯಕ್ತಿ.

ಆತ ಭಾರತವನ್ನೇ ಉದ್ದೇಶಿಸಿ ಈ ಮಾತನ್ನು ಹೇಳಿ, ಇಲ್ಲಿ ಅಲೆ ಎಬ್ಬಿಸುವ ಉದ್ದೇಶ ಇದ್ದಿದ್ದರೆ ಅದಕ್ಕೆ ನಾಲ್ಕಾರು ಭಾರತೀಯರು ಹೆಚ್ಚಿರುವ ಜಾಗ ಆಯ್ದುಕೊಳ್ಳುತ್ತಿದ್ದರೇನೋ. ಅವರು ವಾಸವಿರುವ ಅಮೆರಿಕದಲ್ಲೇ ಭಾರತೀಯರಿಗೇನೂ ಕಡಿಮೆ ಇಲ್ಲ. ಮೇಲಾಗಿ ಆತ ಒಬ್ಬ ಹೆಜ್ ಫಂಡ್ ಮ್ಯಾನೇಜರ್ ಆಗಿ ಮೊನ್ನೆ ಮಾತನಾಡಿದ್ದು ನೂರಕ್ಕೆ ಎಂಬತ್ತು ಭಾಗ ಅದಾನಿ ವ್ಯವಹಾರಗಳು, ಹಿಂಡೆನ್‌ಬರ್ಗ್ ವರದಿ ಮತ್ತು ಅದರ ಫಲಿತಗಳ ಬಗ್ಗೆ. ಭಾರತದ ಪ್ರಜಾತಂತ್ರದ ಬಗ್ಗೆ ಮತ್ತು ಪ್ರಧಾನಮಂತ್ರಿಗಳ ಬಗ್ಗೆ ಆತನ ಹೇಳಿಕೆ ಒಟ್ಟೂ ಹೇಳಿಕೆಯ ಒಂದು ಪುಟ್ಟ ಭಾಗ ಮಾತ್ರ.

ಆದರೆ ಮಾಧ್ಯಮಗಳು, ಸರ್ಕಾರ, ಸರ್ಕಾರದ ಚತುರಂಗಬಲಗಳು ಸೊರೋಸ್ ಮಾತಿನಲ್ಲಿ ಅದಾನಿ ಬಳಗದ ಕುರಿತ ದೊಡ್ಡ ಸುದ್ದಿಗೆ ಸಂಪೂರ್ಣ ಫಿಲ್ಟರ್ ತೊಡಿಸಿ, ಕೇವಲ ’ಪ್ರಜಾಪ್ರಭುತ್ವ ಎಂಬ ಪದವನ್ನು ಮಾತ್ರ ಆಯ್ದುಕೊಂಡು, ಅದಕ್ಕೆ ’ದೇಶದ ಆಂತರಿಕ ವ್ಯವಹಾರಗಳೊಳಗೆ ವಿದೇಶೀ ಹಸ್ತಕ್ಷೇಪದ’, ’ಪ್ರತಿಪಕ್ಷಗಳು ವಿದೇಶಿ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಅಪವಾದ’ವನ್ನು ದೊಡ್ಡ ಧ್ವನಿಯಲ್ಲಿ ಎತ್ತುತ್ತಿವೆ.

ಹಿಂಡೆನ್‌ಬರ್ಗ್ ವರದಿ, ಬಿಬಿಸಿ ಡಾಕ್ಯುಮೆಂಟರಿ ಮತ್ತು ಈಗ ಸೊರೋಸ್ ಹೇಳಿಕೆಗಳು- ಆ ಮೂರೂ ಸನ್ನಿವೇಶಗಳಲ್ಲಿ, ಭಾರತ ಸರ್ಕಾರವು ಪ್ರಧಾನಿ ಮೋದಿಯವರು ಯಾವಾಗಲೂ ಹೇಳುವಂತೆ “ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ” ಸೂತ್ರವನ್ನು ನಿಖರವಾಗಿ ಪ್ರಯೋಗಿಸಿದೆ. ಈ ಪ್ರಯತ್ನದಲ್ಲಿ ಆಳುವ ಪಕ್ಷದ ಚತುರಂಗ ಬಲಗಳು ಅವರಿಗೆ ಸಂಪೂರ್ಣ ಸಾತ್ ನೀಡಿ ’ಆರ್ಕೆಸ್ಟ್ರಾವನ್ನು ಅದ್ದೂರಿಗೊಳಿಸಿವೆ. ಈ ಆರ್ಕೆಸ್ಟ್ರಾದ ಅಬ್ಬರದಲ್ಲಿ ಚರ್ಚಿಸಲೇಬೇಕಾಗಿದ್ದ ಸಂಗತಿಗಳು ಎಂದಿನಂತೆಯೇ ಮೂಲೆ ಹಿಡಿದಿವೆ.

– ರಾಜಾರಾಂ ತಲ್ಲೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...