Homeಮುಖಪುಟ‘ನಾನೇಕೆ ಗಾಂಧಿ ಕೊಂದೆ’ ಸಿನಿಮಾ ಬಿಡುಗಡೆ ತಡೆಗೆ ನಿರಾಕರಿಸಿದ ಸುಪ್ರೀಂಕೋರ್ಟ್‌

‘ನಾನೇಕೆ ಗಾಂಧಿ ಕೊಂದೆ’ ಸಿನಿಮಾ ಬಿಡುಗಡೆ ತಡೆಗೆ ನಿರಾಕರಿಸಿದ ಸುಪ್ರೀಂಕೋರ್ಟ್‌

- Advertisement -
- Advertisement -

ಲೈಮ್‌ಲೈಟ್‌ ಒಟಿಟಿಯಲ್ಲಿ ʼನಾನೇಕೆ ಗಾಂಧಿ ಕೊಂದೆʼ (ವೈ ಐ ಕಿಲ್ಡ್ ಗಾಂಧಿ) ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸೋಮವಾರ ಸುಪ್ರೀಂಕೋರ್ಟ್ ನಿರಾಕರಿಸಿದೆ.

ಸಿನಿಮಾ ಬಿಡುಗಡೆಯಿಂದ ಸಂವಿಧಾನದ 32ನೇ ವಿಧಿಯಡಿ ಅರ್ಜಿದಾರರ ಮೂಲಭೂತ ಹಕ್ಕಿಗೆ ಚ್ಯುತಿಯಾಗಿಲ್ಲ. ಹೀಗಾಗಿ, ಈ ವಿಧಿಯಡಿ ಸಲ್ಲಿಸಲಾಗಿರುವ ಮನವಿಯನ್ನು ಪರಿಗಣಿಸಲಾಗದು ಎಂದು ನ್ಯಾ.ಇಂದಿರಾ ಬ್ಯಾನರ್ಜಿ ನೇತೃತ್ವದ ಪೀಠವು ಹೇಳಿದ್ದು, ಇತರ ದೂರುಗಳಿದ್ದಲ್ಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ಕಲ್ಪಿಸಿದೆ.

ಮೂಲಭೂತ ಹಕ್ಕುಗಳ ಉಲ್ಲಂಘನೆಯ ಪ್ರಶ್ನೆಯಿದ್ದಾಗ ಮಾತ್ರ ಕಲಂ 32ರಡಿ ರಿಟ್‌ ಅರ್ಜಿ ಸಲ್ಲಿಸಬಹುದು. ಇಲ್ಲಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ತೋರುತ್ತಿಲ್ಲ. ಹೀಗಾಗಿ ಮನವಿ ಪರಿಗಣಿಸಲಾಗುವುದಿಲ್ಲ. ಆದರೆ ಅರ್ಜಿದಾರರಿಗೆ ಗಂಭೀರ ಕಳವಳ ಇದ್ದಲ್ಲಿ 226ರ ಅಡಿ ಹೈಕೋರ್ಟ್ ಮೊರೆ ಹೋಗಬಹುದು ಎಂದು ನ್ಯಾಯಾಲಯ ಹೇಳಿದೆ.

“ಈ ಚಲನಚಿತ್ರವು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ವರ್ಚಸ್ಸಿಗೆ ಕಳಂಕ ತರಲು, ಹಂತಕ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಲು ಮತ್ತು ಮಹಾತ್ಮಾ ಗಾಂಧಿ ಹತ್ಯೆಯ ಸಂಭ್ರಮಾಚಣೆ ಮಾಡಲು ಉದ್ದೇಶಿಸಿದೆ” ಎಂದು ಅರ್ಜಿ ಸಲ್ಲಿಕೆಯಾಗಿತ್ತು.

ಕೋಮು ಸಾಮರಸ್ಯ ಕದಡುವುದು, ದ್ವೇಷ ಹರಡುವುದು, ಅಶಾಂತಿ ನಿರ್ಮಿಸುವ ಗುರಿಯನ್ನು ಈ ಚಲನಚಿತ್ರ ಹೊಂದಿದೆ. ಸೆನ್ಸಾರ್ ಮಂಡಳಿ ಈ ಸಿನಿಮಾ ಬಿಡುಗಡೆಗೆ ಅನುಮತಿ ನೀಡದೆ ಇರುವುದರಿಂದ ಜನವರಿ 30 ರಂದು ಒಟಿಟಿ ಪ್ಲಾಟ್ ಫಾರ್ಮ್ ‘ಲೈಮ್ ಲೈಟ್’ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ವಕೀಲ ಅನುಜ್ ಭಂಡಾರಿ ಅವರ ಮೂಲಕ ಸಿಕಂದರ್ ಬೆಹ್ಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಪ್ರಸ್ತುತ ಸೆನ್ಸಾರ್ ಮಂಡಳಿಯ ವ್ಯಾಪ್ತಿಯಿಂದ ಹೊರಗುಳಿದ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸುವುದು, ಮತ್ತು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿಅನಿಯಂತ್ರಿತ, ಸೆನ್ಸಾರ್ ಮಾಡದ ವಿಷಯವನ್ನು ಪ್ರಕಟಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ಕೋರಿದ್ದರು.

ಅಶೋಕ್ ತ್ಯಾಗಿ ನಿರ್ದೇಶನದ, ಕಲ್ಯಾಣಿ ಸಿಂಗ್ ಅವರು 2017ರಲ್ಲಿ ನಿರ್ಮಿಸಿದ ಈ ಚಿತ್ರವನ್ನು ಸೆನ್ಸಾರ್ ಮಂಡಳಿಯು ತೆರವುಗೊಳಿಸದ ಕಾರಣ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿಲ್ಲ.

ಎನ್‌ಸಿಪಿ ನಾಯಕ ಮತ್ತು ಶಿರೂರು ಲೋಕಸಭಾ ಕ್ಷೇತ್ರದ ಸಂಸದ ಅಮೋಲ್ ಕೋಲ್ಹೆ ಚಿತ್ರದಲ್ಲಿ ಗೋಡ್ಸೆ ಪಾತ್ರವನ್ನು ಮಾಡಿದ್ದಾರೆ. ತಾವು ಗಾಂಧಿ ಚಿಂತನೆಗಳಲ್ಲಿ ದೃಢ ನಂಬಿಕೆ ಹೊಂದಿದ್ದು, ನಟನಾಗಿ ಸವಾಲು ಹಾಕುವ ಸಲುವಾಗಿಯೇ ವಿವಾದಾತ್ಮಕ ಪಾತ್ರವನ್ನು ಕೈಗೆತ್ತಿಕೊಂಡಿರುವುದಾಗಿ ಅವರು ಇತ್ತೀಚೆಗೆ ಸ್ಪಷ್ಟಪಡಿಸಿದ್ದರು.

ಚಿತ್ರದ ಎರಡು ನಿಮಿಷಗಳ ಇಪ್ಪತ್ತು ಸೆಕೆಂಡುಗಳ ಟ್ರೇಲರ್‌ನಲ್ಲಿ, ಭಾರತದ ವಿಭಜನೆ ಮತ್ತು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಮಹಾತ್ಮ ಗಾಂಧಿಯನ್ನು ದೂರುವ ಪ್ರಯತ್ನವನ್ನು ಮಾಡಲಾಗಿದೆ. ಆ ಮೂಲಕ ಮಹಾತ್ಮ ಗಾಂಧೀಜಿಯವರ ಹತ್ಯೆಯನ್ನು ಸಮರ್ಥಿಸಲಾಗಿದೆ ಎಂದು ಆಕ್ಷೇಪ ಎತ್ತಲಾಗಿದೆ.

ಈ ಚಿತ್ರ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘವು (AICWA) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸಲು ಉದ್ದೇಶಿಸಿರುವ ಚಿತ್ರವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಆಗ್ರಹಿಸಿದೆ.

ಈ ಚಿತ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸದ ಅಮೋಲ್ ಕೋಲ್ಹೆ ಗೋಡ್ಸೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಳೆದ ಕೆಲವು ದಿನಗಳಿಂದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮಿತ್ರಪಕ್ಷಗಳಾದ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವೆ ಘರ್ಷಣೆಯನ್ನು ಹುಟ್ಟುಹಾಕಿದೆ.

ಗಾಂಧಿ ಹಂತಕ ಗೋಡ್ಸೆ

ಗಾಂಧೀಜಿ ಹತ್ಯೆ ಮಾಡಲು ಗೋಡ್ಸೆ ಹೇಗೆ ಪ್ರೇರೇಪಿತನಾದ, ಆರ್‌ಎಸ್‌ಎಸ್‌ ಸಿದ್ಧಾಂತಗಳಿಂದ, ಆರ್‌ಎಸ್‌ಎಸ್‌ ನಾಯಕರಿಂದ ಗೋಡ್ಸೆ ಹೇಗೆ ಪ್ರಭಾವಿತನಾದ ಎಂಬುದನ್ನು ಇತ್ತೀಚೆಗೆ ಬಿಡುಗಡೆಯಾಗಿರುವ ‘ಗಾಂಧೀಸ್‌ ಅಸಾಸಿನ್‌’ (ಲೇಖಕರು: ಧೀರೇಂದ್ರ ಝಾ) ಅವರ ಕೃತಿ ಅತ್ಯಂತ ಪರಿಣಾಮಕಾರಿಯಾಗಿ ಚರ್ಚೆಸಿದೆ. ಈ ಕುರಿತ ಲೇಖನವನ್ನು ಇಲ್ಲಿ ಓದಬಹುದು.


ಇದನ್ನೂ ಓದಿರಿ: ‘gandhi’s assassin’: ಇತಿಹಾಸದ ತಾಯಿ ಸತ್ಯದ ಶೋಧನೆಯಲ್ಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಬೆತ್ತಲೆ ಮೆರವಣಿಗೆ: ಗಲಭೆಕೋರರ ಗುಂಪಿಗೆ ಮಹಿಳೆಯರನ್ನು ಒಪ್ಪಿಸಿದ್ದ ಪೊಲೀಸರು, ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳು...

0
ಮಣಿಪುರ ಹಿಂಸಾಚಾರದ ಸಮಯದಲ್ಲಿ ನಡೆದಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳ ಉಲ್ಲೇಖವಾಗಿದ್ದು, ಮಹಿಳೆಯರನ್ನು ಗಲಭೆಕೋರರ ಗುಂಪಿಗೆ ಪೊಲೀಸರೇ ಒಪ್ಪಿಸಿದ್ದಾರೆ ಎಂದು ತಿಳಿಸಿದೆ. ಪೊಲೀಸರ...