ಪ್ರಜಾವಾಣಿ ಈ ನಾಡಿಗೆ ಜನಪರವಾದ ಸೈದ್ಧಾಂತಿಕ ನೆಲೆಗಟ್ಟನ್ನು ಕಟ್ಟಿಕೊಟ್ಟ ಪತ್ರಿಕೆ. ಪತ್ರಿಕೆಯ ಮಾಲೀಕರು ಪ್ರಜಾವಾಣಿಯನ್ನು ಒಂದು ನಿರ್ಧಿಷ್ಟ ಸಿದ್ದಾಂತಪರ ಎಂದು ಘೋಷಿಸಿಕೊಂಡಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಆ ಪತ್ರಿಕೆಯನ್ನು ಓದುಗರು,ಜನಪರ ಚಳವಳಿ-ಹೋರಾಟಗಾರರು, ದಮನಿತ ಸಮುದಾಯಗಳು , ವೈಚಾರಿಕ ವಲಯ, ಸಾಮಾನ್ಯ ಜನಸಮುದಾಯ ಕೂಡ ಈ ಪತ್ರಿಕೆ ತಮ್ಮ ಕನ್ನಡಿಯಂತಲೂ… ಮುಖವಾಣಿಯಂತಲೂ, ನ್ಯಾಯ ಕೊಡಿಸುವ ವಕ್ತಾರಿಕೆಯ ಮಾರ್ಗವೆಂತಲೂ ಭಾವಿಸುತ್ತಾ ಬಂದಿದ್ದವು. ಬಹುಶಃ ಸಾಮಾನ್ಯ ಜನಸಮುದಾಯವೇ ಪ್ರಜಾವಾಣಿಯನ್ನು ಸೈದ್ದಾಂತಿಕ ಗೂಟಕ್ಕೆ ಕಟ್ಟಿಬಿಟ್ಟಿರಬೇಕು.!.

ಅನೇಕ ಹಿರಿಯ ಪತ್ರಕರ್ತರು, ಸಾಹಿತಿಗಳು, ಹೋರಾಟಗಾರರು, ಚಿಂತಕರು ಮಾತನಾಡುವಾಗ ಪ್ರಜಾವಾಣಿಯನ್ನು ಧನಾತ್ಮಕವಾಗಿ ನೆನಪಿಸಿಕೊಳ್ಳುವುದನ್ನು ನಾನು ಕೇಳಿದ್ದೇನೆ. ಅಷ್ಟೇ ಏಕೆ? ನಾನು ಅಕ್ಷರ ಕಂಡ ಕಾಲದಿಂದಲೂ ಪ್ರಜಾವಾಣಿಯನ್ನು ಭಗವದ್ಗೀತೆ -ಕುರಾನ್ -ಬೈಬಲ್‌ನಂತೆ ಓದುತ್ತಾ ಬಂದಿದ್ದೇನೆ ಮತ್ತು ನಂಬಿದ್ದೇನೆ. ಈ ಕಾರಣದಿಂದಲೇ ನಾನು ಪ್ರಜಾವಾಣಿಯ ನಡೆಯನ್ನು ಹಕ್ಕಿನಿಂದ ಪ್ರಶ್ನಿಸಬಲ್ಲೆ.! ನಾನು ಪತ್ರಕರ್ತನಾದರೆ ಪ್ರಜಾವಾಣಿಯಲ್ಲೇ ಆಗಬೇಕು ಎಂಬ ಮಹಾದಾಸೆ ಇಟ್ಟು ಕೊಂಡಿದ್ದೆ. 1996ರ ಸಂದರ್ಭದಲ್ಲಿ ನನಗೆ ಪ್ರಜಾವಾಣಿಯಲ್ಲಿ ವರದಿಗಾರನಾಗಿ ಸೇರುವ ಅವಕಾಶವೊಂದು ತೆರೆದಿತ್ತು. ಆದರೆ ಶಿವಮೊಗ್ಗ ಬಿಟ್ಟು ಹೋಗುವ ಸಂದರ್ಭ ನನಗಿರಲಿಲ್ಲ. ಮಿಸ್ ಮಾಡಿಕೊಂಡೆ. ಶೂದ್ರರು, ದಮನಿತರು ಪತ್ರಕರ್ತರಾಗಿ ನೆಲೆಕಂಡಿದ್ದು ಇದೇ ಪ್ರಜಾವಾಣಿಯಿಂದಲೇ. ಬಹುಶಃ ಪ್ರಜಾವಾಣಿ ಇಲ್ಲದಿದ್ದರೆ ಸಾಹಿತಿಯಾಗಿಯೋ, ಚಿಂತಕನಾಗಿಯೂ, ಪತ್ರಕರ್ತನಾಗಿಯೂ, ಜನನಾಯಕನಾಗಿಯೋ ಗುರುತಿಸಲ್ಪಡುತ್ತಿರಲಿಲ್ಲವೇನೋ ಎಂಬ ಮಾತುಗಳನ್ನು ಅನೇಕರ ಬಾಯಲ್ಲಿ ಕೇಳಿದ್ದಿದೆ. ಅಷ್ಟರ ಮಟ್ಟಿಗೆ ಪ್ರಜಾವಾಣಿ ಅದೊಂದು ಕಾಲಘಟ್ಟದಲ್ಲಿ ಜನರ ಬದುಕಿನ ಸಂವರ್ಧನ ಶಕ್ತಿಯಾಗಿತ್ತು, ಬೆಳಕಾಗಿತ್ತು. ಸಾಮಾಜಿಕ ಚಳವಳಿಗಳಿಗೂ ಪ್ರಜಾವಾಣಿ ದೊಡ್ಡ ದನಿಯೇ ಸರಿ. ಇಂತಹ ಕಾರಣಗಳಿಗಾಗಿಯೇ ಪ್ರಜಾವಾಣಿ ಇತರೆ ಎಲ್ಲಾ ಪತ್ರಿಕೆಗಳಿಗಿಂತಲೂ ಭಿನ್ನ ಮತ್ತು ಜನಪರ ಎಂಬ ಆಳವಾದ ಭಾವನೆಯನ್ನು ಜನಸಮುದಾಯದ ನಡುವೆ ಬೆಸೆದುಕೊಂಡಿದೆ(ತ್ತು).

ಇಂತಹ ಪ್ರಜಾವಾಣಿ ಜನನಂಬುಗೆಯ ತನ್ನ ಸೈದ್ಧಾಂತಿಕ ಜಗುಲಿಯಿಂದ ಒಂದಿಂಚು ಅಗಲಿದರೂ ಪ್ರಜಾವಾಣಿಯ ಅಭಿಮಾನಿ ಬಳಗದಲ್ಲಿ ಸಿಟ್ಟು ಸ್ಫೋಟಗೊಳ್ಳುತ್ತದೆ. ಇದು ದ್ವೇಷದ ಸಿಟ್ಟಲ್ಲ. ಅದರ ಮೇಲಿನ ಅತೀವ ಪ್ರೀತಿಯಿಂದ ಹುಟ್ಟುವಂತದ್ದು ಎಂದು ನಾನಾದರೂ ಭಾವಿಸುತ್ತೇನೆ. ಹಿಂದೊಮ್ಮೆ ಶಿವಮೊಗ್ಗದ ಮತ್ತೂರಿನಲ್ಲಿ ಬ್ರಾಹ್ಮಣರು ಯಜ್ಞ ಮಾಡಿ ಎಳೆಕರು ಬಲಿ ಕೊಟ್ಟ ಸುದ್ದಿಯೊಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡಾಗ ಯಾರು ಹೇಗೆಲ್ಲಾ ಪ್ರಜಾವಾಣಿ ವಿರುದ್ಧ ವೃತ್ತಿಪರವಾಗಿಯೇ ಮುಗಿಬಿದ್ದರು. ಸೈದ್ಧಾಂತಿಕ ದ್ವೇಷವನ್ನು ಕಾರಿಕೊಂಡರು. ಈ ಪತ್ರಿಕೆಯನ್ನೆ ಓದಬಾರದು ಎಂದು ಬಹಿಷ್ಕಾರಕ್ಕೆ ಕರೆಕೊಡಲಾಯಿತು (ಗಿಂಡಿಮಾಣಿ ರೇಪ್ ಪ್ರಕರಣದಲ್ಲೂ ಕೂಡ) ಎಂಬುದನ್ನು ಒಮ್ಮೆ ತಿರುಗಿ ನೋಡಬಹುದು. ಹಾಗೆಲ್ಲಾ ಪ್ರಜಾವಾಣಿಯ ಬೆಂಬಲಕ್ಕೆ ನಿಂತದ್ದು ಇದೇ ಎಡಪಂಥೀಯ ವಲಯ ಮತ್ತು ಪ್ರಜಾವಾಣಿ ಸೃಷ್ಟಿಸಿಕೊಂಡಿದ್ದ ವಿಶ್ವಾಸಾರ್ಹತೆಯ ಓದುಗ ಸಮುದಾಯ.

ಈ ನಾಡಿನ ಯಾವುದೇ ಮೂಲೆಯಲ್ಲಿ ದಲಿತರಿಗೆ ಕುಡಿಯಲು ನೀರು ಕೊಡದ, ಕ್ಷೌರ ಮಾಡದ, ಹಲ್ಲೆ ನಡೆಸಿದ ಸುದ್ದಿಗಳು ಯಾವ ಪತ್ರಿಕೆಗಳಲ್ಲೂ ಬರದಿದ್ದರೂ ಪ್ರಜಾವಾಣಿಯಲ್ಲಿ ಬಂದೇ ಬರುತ್ತದೆ. ಅದು ಸರ್ಕಾರದ ಕಣ್ಣು ತೆರೆಸಿ ನ್ಯಾಯ ಕೊಡಿಸುತ್ತದೆ ಎಂಬ ಭರವಸೆಯಲ್ಲಿ ಆ ಸಮುದಾಯಗಳು ಕತ್ತಲನ್ನು ಕಳೆದು ಮುಂಜಾನೆಗೆ ಕಾಯುತ್ತಿದ್ದವು. ಈ ವಿಶ್ವಾಸಕ್ಕೆ ಎಂದಿಗೂ ಧಕ್ಕೆ ಆಗುತ್ತಿರಲಿಲ್ಲ. ಅಂತಿಮವಾಗಿ ಪ್ರಜಾವಾಣಿಯಲ್ಲಿ ಬಂದದ್ದೆಲ್ಲವೂ ಸತ್ಯವೇ ಎಂಬಷ್ಟರ ಮಟ್ಟಿಗೆ ಆತ್ಮವಿಶ್ವಾಸವನ್ನು ಮೂಡಿಸಿತ್ತು. ‘ನನ್ನ ದಲಿತ ಸಮುದಾಯಕ್ಕೆ ಭಾರತದಲ್ಲಿ ಪತ್ರಿಕೆಗಳಿಲ್ಲ’ ಎಂದು ನೊಂದು ಬೆಂದು ತಾವೆ ಪತ್ರಿಕೆಗಳನ್ನು ಹುಟ್ಟು ಹಾಕಿದರು. ಸ್ವಾತಂತ್ರ ಭಾರತದಲ್ಲಿಯೂ ದಲಿತರಿಗೆ ಪತ್ರಿಕೆಗಳಿಲ್ಲ ಎಂದು ನೊಂದು ಬೇಯುವಾಗ ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಜಾವಾಣಿ ಈ ಕೊರತೆಯನ್ನು ನೀಗಿಸಿತ್ತು. ಇಂತಹ ಪ್ರಜಾವಾಣಿ ಈಗ ತನ್ನದೇ ಓದುಗರ, ಅಭಿಮಾನಿಗಳಲ್ಲಿ ಅನುಮಾನ ಹುಟ್ಟಿಸುವಂತೆ ನಡೆದುಕೊಳ್ಳುತ್ತಿದೆ. ಪ್ರಜಾವಾಣಿಯ ಆಂತರ್ಯದಲ್ಲಿ ಅನೇಕ ನಿರ್ಗಮನ, ಆಗಮನಗಳು ನಡೆದಿರುವುದರ ಬದಲಾವಣೆಯೂ, ಸೈದ್ಧಾಂತಿಕ ಬದ್ಧತೆ ಇಲ್ಲದವರು, ಹುಲ್ಲೊಳಗಿನ ಹಾವುಗಳು ಪ್ರಜಾವಾಣಿಯ ಮನೆ ಹೊಕ್ಕಿರುವುದರ ಪರಿಣಾಮಗಳು ಇರಬಹುದೆ?

ಹೊಸಬಾಳೆ ಅವರ ಸಂದರ್ಶನದ ಫಲವಾಗಿ ಆರ್‌ಎಸ್‌ಎಸ್ ಸಮುದಾಯ ಪ್ರಜಾವಾಣಿಯನ್ನು ಕೊಂಡಾಡಿ ಕೊನೆ ಮೇಲೆ ಕೂರಿಸಿಕೊಳ್ಳತೊಡಗಿದೆ. ಇತ್ತ ಪ್ರಜಾವಾಣಿಯ ಪಾರಂಪರಿಕ ಓದುಗರು, ಅಭಿಮಾನಿಗಳು , ಸೈದ್ದಾಂತಿಕ ವಲಯ ಪ್ರಜಾವಾಣಿಯ ನಡೆಯನ್ನು ಟೀಕಿಸತೊಡಗಿವೆ. ಆರ್‌ಎಸ್‌ಎಸ್ ಮುಖಂಡನ ಸಂದರ್ಶನ (ಅಕಾಲಿಕ) ಪ್ರಜಾವಾಣಿಯ ಪಾಲಿಗೆ ತಿರುವು-ಮುರುವಿನಿ ಸನ್ನಿವೇಶವನ್ನು ಕಾಣುತ್ತಿದ್ದೇನೆ.

ಪ್ರಜಾವಾಣಿಯ ಇತ್ತೀಚೆಗಿನ ನಡೆ ಬಗ್ಗೆ ಟೀಕಿಸುವವರಿಗೆ ಉತ್ತರವಾಗಿ ಪತ್ರಿಕೆ ನಡೆಯಬೇಕಲ್ಲ. ಆರ್ಥಿಕ ನಷ್ಟವನ್ನು ಸರಿದೂಗಿಸಿಕೊಳ್ಳಲು ಅನಿವಾರ‍್ಯವಾಗಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಪತ್ರಿಕೆ ಮಾಡುವುದು ಎಷ್ಟು ಕಷ್ಟದ ಕೆಲಸ ಎಂಬುದು ಸೋಮಾರಿ ಕಟ್ಟೆಗಳ ಮೇಲೆ ಕುಳಿತು ಸಿದ್ದಾಂತ, ಲೊಟ್ಟೆ, ಲೋಸಗು ಎಂದು ಭಾಷಣ ಬಿಗಿಯುವವರಿಗೆ ಅರ್ಥವಾಗುವುದಿಲ್ಲ. ಇಂತಹವರು ಒಂದು ಪತ್ರಿಕೆ ಮಾಡಿ ನೋಡಲಿ ಎಂಬ ಸಮರ್ಥನೀಯ ಮಾತುಗಳು ಪ್ರಜಾವಾಣಿ ಅಂಗಳದಿಂದ ಎಸೆಯಲ್ಪಡುತ್ತಿವೆ. ಪತ್ರಿಕೆಯನ್ನು ನಡೆಸುವುದು ಕಷ್ಟ ನಿಜ, ಅದರಲ್ಲೂ ” ಇಸಂ” ಗಳಿಂದ ನಡೆಸುವುದಂತೂ ಇನ್ನೂ ಕಷ್ಟ ಎನ್ನುವ ಕಾಲ ಈಗ ಬಂದೊದಗಿದೆ. “ಆರು ಕೊಟ್ರೆ ಅತ್ತೆ ಕಡೆ ಮೂರು ಕೊಟ್ರೆ ಸೊಸೆ ಕಡೆ” ಎಂಬಂತೆ ಅವಕಾಶವಾದಿತನವನ್ನು, ಲಾಭಕೋರತನವನ್ನು ಅಳವಡಿಸಿಕೊಳ್ಳಲೇ ಬೇಕಾಗಿರಬಹುದೇನೋ.?! ಇಂದೊಂದು ‘ಮಾರ್ಕೇಟಿಂಗ್ ಮೆಥಡ್’ ಎಂದು ಗೌರವವಾಗಿ ಕರೆಯಬಹುದು. ಉದ್ಯಮ ಸ್ವರೂಪವೆಂದಾದಾಗ ಅಲ್ಲಿ “ವೆಲ್ಫೇರ್”, ಇಸಂ, ಎಥಿಕ್ಸ್ ಎಂಬುದಕ್ಕೆ ಜಾಗವಿಲ್ಲ, ಬಂಡವಾಳ, ಲಾಭ, ನಷ್ಟ…. ಇವು ಮಾತ್ರ ಮುಖ್ಯವಾಗುತ್ತವೆ.

ಈಗ ಸುದ್ದಿ ಮಾಧ್ಯಮರಂಗವೂ ಇಂತಹ ಉದ್ಯಮ ಸ್ವರೂಪವನ್ನು ಪಡೆದುಕೊಂಡಿರುವುದರಿಂದ ಪತ್ರಿಕೆಗಳ ವರದಿಗಳು, ಸಂದರ್ಶನಗಳು, ಅಡ್ವಟೋರಿಯೋಲ್ ರೈಟ್‌ಅಪ್ ಗಳು, ಇಸಂ, ಎಥಿಕ್ಸ್ ಗಳ ಪರಿಧಿಗೆ ಬರಲಾರವು ಎಂಬುದನ್ನು ಪ್ರಜಾವಾಣಿಯ ಮೇಲಿನ ಅತಿರೇಕದ ಪ್ರೀತಿಯಿಂದ ಬಳಲುವವರು ಅರ್ಥ ಮಾಡಿಕೊಳ್ಳಬೇಕು(?). ಇಸಂ ಗೆ ಜೋತು ಬಿದ್ದು ಒಂದು ವರ್ಗವನ್ನು ಕಳೆದುಕೊಂಡಿದ್ದೇವೆ ಎಂದು ಪ್ರಜಾವಾಣಿಗೆ ಎಂದಾದರೂ ಅನಿಸಿದ್ದರೆ . ಹೊಸಬಾಳೆ ಅವರ ಸಂದರ್ಶನದ ನಂತರ ಆ ವರ್ಗವನ್ನು ಮರುಪಡೆದಿರಬಹುದೇ?. ಪ್ರಜಾವಾಣಿಯ ಸರ್ಕ್ಯೂಲೇಷನ್ ಹೆಚ್ಚಾಗಿರಬಹುದು. ವ್ಯವಹಾರಿಕವಾಗಿ ಲಾಭವನ್ನು ತಂದುಕೊಟ್ಟಿರಬಹುದು. ಆದರೆ ಒಂದು ಪತ್ರಿಕೆ ಉದ್ಯಮ ದೃಷ್ಟಿಯಲ್ಲೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಾದರೆ ಅದನ್ನು ಕಾರ್ಖಾನೆ, ಅಲ್ಲಿರುವವರನ್ನು ಕಾರ್ಮಿಕರು, ಪತ್ರಿಕೆ ಒಂದು ಉತ್ಪನ್ನ ಎಂದೇ ಕರೆಯಬಹುದೇ ವಿನಃ ಅದೊಂದು ಜನಸಾಮಾನ್ಯರ ದನಿಯಾಗಿದೆ ಎಂತಲೂ, ದಮನಿತರ ದುಃಖ-ದುಮ್ಮಾನಗಳ ಕನ್ನಡಿಯಾಗಿದೆ ಯಂತಲೂ, ನ್ಯಾಯಪರತೆಯಿಂದ ಇದೆಯಂತಲೂ.. ಅಂತಿಮವಾಗಿ ಅದೊಂದು ಪ್ರಜಾಪ್ರಭುತ್ವದ ಕಾವಲು ನಾಯಿ ಯಂತಲೂ ಕರೆಯಲು ಸಾಧ್ಯವೇ? ಒಬ್ಬ ಪತ್ರಕರ್ತ ತಾನು ಪ್ರಜಾವಾಣಿಯ ನಡುಮನೆಯಿಂದ ಬಂದವನು/ಳು , ಲಂಕೇಶ್ ಅವರ ಗರಡಿಯಲ್ಲಿ ಬೆಳೆದವನು/ಳು, ವಡ್ಡರ್ಸೆ ರಘುರಾಮ ಶೆಟ್ಟರ ಮುಂಗಾರಿನಲ್ಲಿದ್ದವನು/ಳೂ ಎಂದು ಹೇಳಿಕೊಳ್ಳುವಾಗ ಅವರಲ್ಲಿ ವ್ಯಕ್ತವಾಗುವ ಆತ್ಮವಿಶ್ವಾಸ ಆ ಪತ್ರಿಕೆಗಳು ರೂಪಿಸಿಕೊಟ್ಟ ಕಾಣ್ಕೆಗಳಲ್ಲವೇ?

ಪತ್ರಿಕೆ ನಡೆಸುವುದು ಕಷ್ಟ ಅದಕ್ಕಾಗಿ ಪರಂಪರಾಗತವಾಗಿ ಪಾಲಿಸಿಕೊಂಡು ಬಂದ ಬದ್ಧತೆಯನ್ನು ಸಡಿಲಿಸಿ ರಾಜಿಯೊಂದಿಗೆ ಸಾಗಬೇಕಾಗಿದೆ ಎಂದು ಸಮರ್ಥಿಸಿಕೊಳ್ಳುವ ಯಾವುದೇ ಪತ್ರಿಕೆಯ ಮಾಲೀಕ ಮಂಡಳಿ ಅಸಲಿಗೆ ಒಂದು ಉದ್ಯಮ(ಅ)ಶೀಲತೆ ಮತ್ತು ಆರ್ಥಿಕ ಸಂಪಾದನೆಯ ಹಿಂದೆ ಬಿದ್ದಿರುತ್ತದೆ ವಿನಃ ಅದು ಜನರ ಹಿತವನ್ನು ತಾನು ಹೊಂದಿದ್ದ ವ್ಯಕ್ತಿತ್ವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಬಹಳಷ್ಟು ಸಂದರ್ಭದಲ್ಲಿ ನನಗೆ ಆರ್ಥಿಕ ದಿಗ್ದರ್ಶಕ ‘ರೈನಿಸ್ ಸೈತುಂಗ್ ‘ ಪತ್ರಿಕೆಯ ಸಂಪಾದಕರನೂ ಆಗಿದ್ದ ಕಾರ್ಲ್ ಮಾರ್ಕ್ಸ್ ನ ಈ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಲೆ ಇರುತ್ತದೆ. ” ಪತ್ರಕರ್ತನಾದವನಿಗೆ ಬರೆಯಲೂ, ಬದುಕಲೂ ಸಂಪಾದನೆ ಅಗತ್ಯ ಆದರೆ ಸಂಪಾದನೆಗಾಗಿಯೇ ಬರೆಯುವ, ಬದುಕುವ ಅವಸ್ಥೆ ಪತ್ರಕರ್ತನದ್ದಾಗಿರಬಾರದು”

ದೇವನೂರು ಮಹಾದೇವ ಅವರನ್ನು ಒಂದು ದಿನದ ಮಟ್ಟಿಗೆ ಪ್ರಜಾವಾಣಿಯ ಸಂಪಾದಕ ಸ್ಥಾನದಲ್ಲಿ ಕೂರಿಸಿದ್ದು ಪತ್ರಿಕೋದ್ಯಮದ ಗಿಮಿಕ್ ಅಲ್ಲ. ಅದೊಂದು ಬದ್ದತೆಯ ಒಂದು ಐತಿಹಾಸಿಕ ಮೈಲಿಗಲ್ಲು. ಇತರೆ ಪತ್ರಿಕೆಗಳಲ್ಲಿ ಸಿದ್ದಾಂತದ ಕಾರಣಕ್ಕೋ, ಸತ್ಯ ಬರೆದ ಕಾರಣಕ್ಕೋ, ಮಾಲೀಕರೊಂದಿಗೆ ನಿಕಟ ಸಂಪರ್ಕ ಹೊಂದಿದ ರಾಜಕಾರಣಿಯ ಆರ್ಥಿಕ , ನೈತಿಕ ಭ್ರಷ್ಟತೆಯನ್ನು ಬಯಲು ಮಾಡಿದ ಕಾರಣಕ್ಕೋ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ವೃತ್ತಿಪರ ಪತ್ರಕರ್ತರನ್ನು, ಜನಪರ ಚಳವಳಿಗಳಿಂದ ಜೈಲು, ವನವಾಸ ಅನುಭವಿಸಿದ ಯುವ ಪ್ರತಿಭೆಗಳನ್ನು ತಾಯ್ತನದಿಂದ ಕರೆದು ಕೆಲಸ ಕೊಟ್ಟಿದೆ. ಇದರ ಹಿಂದೆ ಬದ್ಧತೆ ಹೊಂದಿದ ಹಿರಿಯ ಪತ್ರಕರ್ತರು ಪ್ರಜಾವಾಣಿಯ ಸಾಮಾಜಿಕ ಹೊಣೆಗಾರಿಕೆಯನ್ನು ಎಚ್ಚರದಿಂದ ಕಾಯ್ದುಕೊಂಡಿದ್ದರು.

ಯು.ಆರ್ ಅನಂತಮೂರ್ತಿ ಅವರು ಹೀಗೆ ಬರೆಯುತ್ತಾರೆ..

‘ಕನ್ನಡ ಪತ್ರಿಕೋದ್ಯಮದಲ್ಲಿ ‘ಪ್ರಜಾವಾಣಿ’ ನಮಗೊಂದು ನಿತ್ಯದ ಅಭ್ಯಾಸವಾಗಿಬಿಟ್ಟಿತ್ತು. ನಮ್ಮಲ್ಲಿ ಉದಾರವಾದ ಮನಸ್ಸು ಹುಟ್ಟಿದ್ದು ಟಿಎಸ್ಸಾರ್ ಪ್ರಜಾವಾಣಿಯನ್ನು ಸಂಪಾದಿಸುತ್ತಿದ್ದ ಕಾಲದಲ್ಲಿ. ಮತ್ತು ಕೆಲವು ಪತ್ರಿಕೆಗಳಿಗೆ ತಮ್ಮದೇ ಆದ ವ್ಯಕ್ತಿತ್ವ ಇರುತ್ತದೆ. ಪತ್ರಿಕೆಗೆ ಒಂದು ವ್ಯಕ್ತಿತ್ವ ಇದೆ ಎಂದು ಕನ್ನಡದಲ್ಲಿ ನಮಗೆ ಅನಿಸುವಂತೆ ಮಾಡಿದ್ದು ಪ್ರಜಾವಾಣಿ ಮತ್ತು ಸಂಯುಕ್ತ ಕರ್ನಾಟಕ. ಇಂಗ್ಲಿಷ್‌ನಲ್ಲಿ ದಿ ಹಿಂದೂ’ ( ಪ್ರತಿಭಾ ನಂದಕುಮಾರ್ ನಿರೂಪಣೆಯ ಸಂವಹನ ಸಂಚಿಕೆ -೨೦೦೫ ) ಇಂತಹ ವ್ಯಕ್ತಿತ್ವ ಗುರುತಿಸಲ್ಪಟ್ಟಿದ್ದ ಪ್ರಜಾವಾಣಿ ಯಾಕೀಗ ಮಸುಕಾಗುತ್ತಿದೆ.? ಕಾರಣವೇನು?

ಷರಾ: ಪ್ರಜಾವಾಣಿಯಲ್ಲಿ ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರ ಸಂದರ್ಶನ ಅದು ಆ ಪತ್ರಿಕೆಯ ವೃತ್ತಿಯ ಒಂದು ಭಾಗ ಎಂದು ಭಾವಿಸುತ್ತೇನೆ. ಅದರ ಬಗ್ಗೆ ತಕಾರಾರಿಲ್ಲ. ! ಯಾರು ಯಾಕೆ ಸಂದರ್ಶಿಸಿದರು. ? ಅದು ಈ ಸಂದರ್ಭಕ್ಕನುಗುಣವಾಗಿತ್ತೇ? ಇದರ ಉದ್ದೇಶವೇನು ? ಇತ್ಯಾದಿ ಇತ್ಯಾದಿ ಎಂದು ನಾನು ಪ್ರಶ್ನಿಸುವುದಿಲ್ಲ. ಮುಂದೊಂದಿನ ಪ್ರಜಾವಾಣಿಯಲ್ಲಿ ಇಮಾಮ್ ಬುಖಾರಿ ಅವರ ಸಂದರ್ಶನ ಬಂದರೂ ಬರಬಹುದು ಎಂಬ ವಿಶ್ವಾಸವಿದೆ!

(ಲೇಖಕರು ಪತ್ರಕರ್ತರು ಮತ್ತು ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)


ಇದನ್ನೂ ಓದಿ: ಮೋದಿಗೆ ದುಬಾರಿ ಸೂಟ್‌ ನೀಡಿದ್ದ ಕಂಪನಿಯ ಫೇಕ್‌ ವೆಂಟಿಲೇಟರ್‌ ಹಗರಣ.. 

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here