Homeಕರ್ನಾಟಕಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುತ್ತೇನೆ: ಸಿದ್ದರಾಮಯ್ಯ ಘೋಷಣೆ

ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುತ್ತೇನೆ: ಸಿದ್ದರಾಮಯ್ಯ ಘೋಷಣೆ

- Advertisement -
- Advertisement -

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ರಾಜ್ಯದ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಕೋಲಾರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಬಹು ಚರ್ಚೆಗೆ ಒಳಗಾಗಿತ್ತು. ಆ ಕುತೂಹಲಕ್ಕೆ ತೆರೆ ಎಳೆದಿರುವ ಅವರು ಇಂದು ಕೋಲಾರವೇ ಅಂತಿಮ ಎಂದಿದ್ದಾರೆ.

ದಲಿತ-ರೈತ ಚಳವಳಿಯ ಜಿಲ್ಲೆ

ರಾಜ್ಯದಲ್ಲಿ ಅತಿ ಹೆಚ್ಚು ದಲಿತ ಸಮುದಾಯವಿರುವ ಜಿಲ್ಲೆಗಳಲ್ಲಿ ಕೋಲಾರವೂ ಒಂದು. ಹಾಗಾಗಿಯೇ ಇಲ್ಲಿ ದಲಿತ ಚಳವಳಿ ಗರಿಗೆದರಿತ್ತು. ಹೋಬಳಿಗೊಂದು ವಸತಿ ಶಾಲೆ, ಹಾಸ್ಟೆಲ್ ಬೇಕು ಎಂಬ ಹಕ್ಕೊತ್ತಾಯದೊಂದಿಗೆ ಇಲ್ಲಿ ದೊಡ್ಡ ಹೋರಾಟವೇ ನಡೆದಿದೆ. ಅದರ ಪರಿಣಾಮವಾಗಿ ಜಿಲ್ಲೆಯಲ್ಲಿ ಹಲವಾರು ಶಾಲೆಗಳು- ಹಾಸ್ಟೆಲ್‌ಗಳು ಆರಂಭವಾಗಿವೆ. ’ಹೆಂಡ ಬೇಡ ಭೂಮಿ ಬೇಕು’ ಘೋಷಣೆಯಡಿ ನಾಗಸಂದ್ರದ 80ಕ್ಕೂ ಹೆಚ್ಚು ದಲಿತ ಕುಟುಂಬಗಳನ್ನು ಜೀತದಿಂದ ವಿಮುಕ್ತರಾಗಿಸಿ ಜಮೀನು ದೊರಕಿಸಿ ಚಾರಿತ್ರಿಕ ಸಾಧನೆ ಮಾಡಿದ ಹೋರಾಟ ನಾಗಸಂದ್ರ ಭೂ ಚಳವಳಿಯೆಂದೇ ಇತಿಹಾಸದಲ್ಲಿ ದಾಖಲಾಗಿದೆ.

ಅಹಿಂದ ಚಳವಳಿ

ಅಹಿಂದ ಚಳವಳಿಗೆ ಬುನಾದಿಯಾಗಿದ್ದು ಕೋಲಾರ ಜಿಲ್ಲೆ. 1998ರಲ್ಲಿ ಕೋಲಾರದಲ್ಲಿ ನಡೆದ ಬೃಹತ್ ಅಹಿಂದ ಸಮಾವೇಶ ಅದಕ್ಕೆ ಸಾಕ್ಷಿ. ಈಡಿಗ ಸಮುದಾಯಕ್ಕೆ ಸೇರಿದ್ದ ಜಾಲಪ್ಪನವರು ಕೋಲಾರದಲ್ಲಿ ಹಿಂದುಳಿದ ವರ್ಗಗಳ ಟ್ರಸ್ಟ್ ಮುಖಾಂತರ ದೇವರಾಜ ಅರಸು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಿದ್ದರು. ಅದೇ ಕೋಲಾರದಲ್ಲಿ ಅಹಿಂದ ಸಮಾವೇಶ ಸಂಘಟಿತವಾದಾಗ ಅದರ ಪೂರ್ಣ ಹೊಣೆ ಹೊತ್ತು ಜಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯನವರು ಆ ಸಮಾವೇಶ ಉದ್ಘಾಟಿಸಿ ಚಳವಳಿಗೆ ಚಾಲನೆ ನೀಡಿದ್ದರು.

ಸದ್ಯದ ರಾಜಕೀಯ ಸ್ಥಿತಿಗತಿ

2018ರಲ್ಲಿ ಭಾರೀ ಅಂತರದಿಂದ ಗೆದ್ದು 4ನೇ ಬಾರಿ ಶಾಸಕನಾಗಿರುವ ಕೆ.ಶ್ರೀನಿವಾಸಗೌಡರು ಇತ್ತೀಚಿನ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದರು. ಏಕೆ ಹೀಗೆ ಮಾಡಿದಿರಿ ಎಂಬ ಪತ್ರಕರ್ತರ ಪ್ರಶ್ನೆಗೆ “ಬಿಕಾಸ್ ಐ ಲವ್ ಕಾಂಗ್ರೆಸ್” ಎಂಬ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಸದ್ಯ ಕಾಂಗ್ರೆಸ್ ಪಾಳಯದಲ್ಲಿರುವ ಅವರು ತಾನು ಕ್ಷೇತ್ರ ಬಿಟ್ಟುಕೊಡುತ್ತೇನೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಬರಬೇಕೆಂದು ಮನವಿ ಮಾಡಿದ್ದರು.

ಜಾತಿವಾರು ಜನಸಂಖ್ಯೆ

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮುದಾಯದ ಮತಗಳು ಮೊದಲನೇ ಸ್ಥಾನದಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ 60,000ಕ್ಕೂ ಹೆಚ್ಚು ಮತಗಳಿವೆ ಎನ್ನಲಾಗುತ್ತಿದೆ. ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದು ಸುಮಾರು 40,000 ದಷ್ಟು ಮತಗಳಿವೆ. ಒಕ್ಕಲಿಗರು 30,000ದಷ್ಟು ಇದ್ದರೆ ಕುರುಬರು 20,000ಕ್ಕೂ ಹೆಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ: ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣ ಹೀಗಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read