ಚರ್ಚಿಲ್ ಮಾತು ನಿಜವಾಯಿತು ಎನ್ನುವ ಸ್ಥಿತಿ ಭಾರತಕ್ಕೆ ಬರಬಾರದು..

ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಇಂಗ್ಲೆಂಡಿನ ಮಾಜಿ ಪ್ರಧಾನಿ ಚರ್ಚಿಲ್ ಆಗಿನ ಪ್ರಧಾನಮಂತ್ರಿಯಾಗಿದ್ದ ಲಾರ್ಡ್ ಅಟ್ಲೀ ಅವರಿಗೆ ಹೇಳುವ ಮಾತು ಇದು. ‘ಸ್ಕೌಂಡ್ರಲ್ಸ್ ಮತ್ತು ಥಗ್ಸ್ ಕೈಯಲ್ಲಿ ಭಾರತವನ್ನು ಕೊಟ್ಟು ಬಂದಿದ್ದೀರಿ’ ಎಂದು

1

ಬಿಜೆಪಿಯ ಅಧ್ಯಕ್ಷರು ಮತ್ತು ಕೇಂದ್ರ ಗೃಹಮಂತ್ರಿಗಳೂ ಆದ ಅಮಿತ್ ಷಾ ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ಕಾರ್ಯಾಚರಣೆ (Coup) ಒಂದು ರಾಜಕೀಯ ಕ್ರೀಡೆ ಎನ್ನುತ್ತಾರೆ. ರಾಜಕೀಯ ಒಂದು ಚದುರಂಗದಾಟ ಎಂದು ಷಾ ಭಾವಿಸಿರುವಂತಿದೆ. ರಾಜಮಹಾರಾಜರ ಕಾಲದಲ್ಲಿ ರಾಜಕೀಯ ಒಂದು ಚದುರಂಗದಾಟ ಆಗಿತ್ತು. ಷಾ ಇನ್ನೂ ರಾಜರ ಕಾಲದಲ್ಲೆ ಇದ್ದಾರೆ. ಮೋದಿ ಮತ್ತು ಷಾ ಜೋಡಿ ಗುಜರಾತಿನಲ್ಲಿ ಮಾಡಿದ್ದೂ ಅದನ್ನೇ. ಅವರು ಆ ಆಟದಲ್ಲಿ ಗೆಲುವು ಸಾಧಿಸಿದ್ದರಿಂದ ಅದೇ ಚದುರಂಗದಾಟದಿಂದ ಹುರುಪುಗೊಂಡು ಎಲ್ಲಾ ರಾಜ್ಯಗಳಿಗೂ ವಿಸ್ತರಿಸಲು ತೊಡಗಿದ್ದಾರೆ.

ಮಹಾರಾಷ್ಟ್ರದಲ್ಲಿ ಈ ಚದುರಂಗದಾಟ ಆಡಲು ಹೋಗಿ ಪ್ರಥಮ ಚುಂಬನದಲ್ಲೇ ದಂತಭಗ್ನ ಮಾಡಿಕೊಂಡಿದ್ದಾರೆ. ಮೋದಿ ಮತ್ತು ಷಾ ಪ್ರಜಾಪ್ರಭುತ್ವದ ವಿರೋಧಿಗಳು, ಅಧಿಕಾರ ಹಿಡಿಯುವ ಅಮಲಿನಲ್ಲಿ ಅವರು ಮಾಡಬಾರದ್ದನ್ನು ಮಾಡುತ್ತಾರೆ. ರಾಜಕೀಯ ತನ್ನ ಪವಿತ್ರತೆಯನ್ನು ಉಳಿಸಿಕೊಳ್ಳಬೇಕು, ರಾಜ್ಯಾಂಗವನ್ನು ಗೌರವಿಸಬೇಕು. ಅದು ಬಿಟ್ಟು ರಾಜಕೀಯ ಅಪಮಾರ್ಗ ಹಿಡಿಯುವುದು ಆತಂಕಕಾರಿ ವಿಷಯ.

ಚುನಾವಣೆ ಒಂದು ಆಟ ಅಲ್ಲ. ಹುಡುಗಾಟ ಅಲ್ಲವೇ ಅಲ್ಲ. ದೇಶದ ಭವಿಷ್ಯವನ್ನು ರೂಪಿಸುವ ಜನಪ್ರತಿನಿಧಿಗಳನ್ನು ಮುತುವರ್ಜಿಯಿಂದ ಆಯ್ಕೆ ಮಾಡುವ ಸಾಧನ ಚುನಾವಣೆ. ಅದು ಹುಡುಗಾಟವಾದರೆ ಗೂಂಡಾಗಳು, ಸಮಯಸಾಧಕರು, ಪಟ್ಟಭದ್ರರು ಸರ್ಕಾರವನ್ನು ಕಬ್ಜಾ ಮಾಡುತ್ತಾರೆ. ಅವರು ಈ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಈಗ ಮಹಾರಾಷ್ಟ್ರದಲ್ಲಿ ಆ ಪ್ರಯೋಗವನ್ನು ಮೋದಿ, ಷಾಗಳು ರೂಪಿಸಿದರು.

ಈ ಸಾರಿಯ ಚುನಾವಣೆಯಲ್ಲಿ, ಬಿಜೆಪಿ ಬಹುಮತ ಪಡೆಯಲಿಲ್ಲ. ಶರದ್ ಪವಾರರ ಎನ್.ಸಿ.ಪಿ., ಶಿವಸೇನೆ ಯಾವುದಕ್ಕೂ ಬಹುಮತ ಬರಲಿಲ್ಲ. ಎಂದಿನಂತೆ ಬಿಜೆಪಿ ಶಿವಸೇನಾ ಜೊತೆ ಸೇರಿಕೊಂಡು ಮಂತ್ರಿಮಂಡಲ ರಚಿಸುವ ನಿರೀಕ್ಷೆ ಇತ್ತು. ಆದರೆ ಶಿವಸೇನೆ ತನಗೆ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಪದವಿ ಬಿಟ್ಟು ಕೊಡಬೇಕೆಂದು ಷರತ್ತು ಹಾಕಿತು. ಬಿಜೆಪಿಯು ಶಿವಸೇನೆಯ ಈ ಡಿಮ್ಯಾಂಡನ್ನು ಒಪ್ಪಿಕೊಳ್ಳಲಿಲ್ಲ. ಆಗ ಶಿವಸೇನಾ, ಎನ್.ಸಿ.ಪಿ ಮತ್ತು ಕಾಂಗ್ರೆಸ್ ಬೆಂಬಲದಿಂದ ಸರ್ಕಾರ ರಚಿಸುವ ಪ್ರಸ್ತಾವನೆಯನ್ನು ಶರದ್ ಪವಾರ್ ಮುಂದೆ ಇಟ್ಟಿತು.

ಶರದ್ ಪವಾರ್, ಶಿವಸೇನೆಯೊಡನೆ ಕೈಜೋಡಿಸಲು ಒಪ್ಪಿ ಕಾಂಗ್ರೆಸ್‍ನ ನೆರವನ್ನು ಪಡೆಯಲು ಮುಂದಾದರು. ಆದರೆ ಕಾಂಗ್ರೆಸ್ಸಿಗೆ, ಶಿವಸೇನೆಯೊಡನೆ ಕೂಡಿಕೊಂಡು ಸರ್ಕಾರ ನಡೆಸುವುದು ಕಷ್ಟಸಾಧ್ಯವೆನಿಸಿತು. ಏಕೆಂದರೆ ಶಿವಸೇನೆ ಬಿಜೆಪಿಯಂತೆಯೇ ಕೋಮುವಾದಿ ಪಕ್ಷ. ಬಿಜೆಪಿ ಜೊತೆಗೆ ಇದ್ದುಕೊಂಡು ಸಮಸ್ಯೆಗಳನ್ನೂ ಸೃಷ್ಟಿಸಿ ಸದಾ ಗುದ್ದಾಡುತ್ತಲೇ ಕಾಲಕಳೆಯುವ ಪಕ್ಷ. ಈ ಪಕ್ಷದೊಡನೆ ಹೊಂದಾಣಿಕೆ ಮಾಡಿಕೊಳ್ಳುವುದು ಅಸಾಧ್ಯ ಎಂಬುದು ಕಾಂಗ್ರೆಸ್ಸಿನ ನಿಲುವು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಮಹಾರಾಷ್ಟ್ರದಲ್ಲಿ ಅಧಿಕಾರದಿಂದ ದೂರ ಇಡಲು ಇದು ಸದವಕಾಶ ಎಂಬ ದೃಷ್ಟಿಯಿಂದ ಕಾಂಗ್ರೆಸ್ ಶರದ್ ಪವಾರ್ ಜೊತೆಗೂಡಲು ನಿರ್ಧರಿಸಿತು. ಇದನ್ನರಿತ ಮೋದಿ, ಷಾದ್ವಯರು ಎನ್.ಸಿ.ಪಿಯಲ್ಲಿ ಒಂದು ಕ್ಷಿಪ್ರ ಕಾರ್ಯಾಚರಣೆ (Coup) ನಡೆಸಲು ಮುಂದಾದರು.

ಎನ್.ಸಿ.ಪಿಯ ಅಧ್ಯಕ್ಷ ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್‍ಪವಾರರನ್ನು ಬಳಸಿಕೊಂಡು ಎನ್.ಸಿ.ಪಿಯನ್ನು ಒಡೆಯುವ ಯತ್ನ ನಡೆಯಿತು. ಫಡ್ನವಿಸ್‍ಗೆ ಮುಖ್ಯಮಂತ್ರಿ ಅಜಿತ್ ಪವಾರ್‍ಗೆ ಉಪಮುಖ್ಯಮಂತ್ರಿ ಪದವಿ ನೀಡುವ ಹುನ್ನಾರಕ್ಕೆ ಕೈ ಹಾಕಿತು, ರಾಜಕೀಯ ಒಂದು ಚದುರಂಗದಾಟ ಎನ್ನುವ ಅಮಿತ್ ಷಾ ಈ ‘ಕ್ಷಿಪ್ರ ಕಾರ್ಯಾಚರಣೆ’ಗೆ ಅಧ್ವರ್ಯುವಾಗಿ ನಿಂತರು.

ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್, ಕಾಂಗ್ರೆಸ್ಸಿನೊಡನೆ ಸಂಧಾನ ನಡೆಸುತ್ತಿದ್ದಾಗಲೇ ರಾತ್ರೋರಾತ್ರಿ ರಾಷ್ಟ್ರಾಧ್ಯಕ್ಷರ ಆಡಳಿತ ರದ್ದುಗೊಳಿಸಿ, ಬಿಜೆಪಿಯ ಫಡ್ನವೀಸರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಎಂದೂ ಅಜಿತ್ ಪವಾರರನ್ನು ಉಪಮುಖ್ಯಮಂತ್ರಿಯೆಂದೂ ಹೆಸರಿಸಿ ಅವರಿಗೆ ಬೆಳಗಿನ ಜಾವ ಪಟ್ಟ ಕಟ್ಟಿಯೇ ಬಿಟ್ಟರು. ಈ ಸುದ್ದಿ ತಿಳಿದ ಶರದ್ ಪವಾರ್‍ಗೆ ಶಾಕ್ ಆಯಿತು.

ಶರದ್ ಪವಾರ್ ತಡಮಾಡದೆ ತನ್ನ ಪಕ್ಷದ ಶಾಸಕರನ್ನು ತನ್ನೊಂದಿಗಿಟ್ಟುಕೊಳ್ಳಲು ತೊಡಗಿದರು. ಶಿವಸೇನೆ ಎನ್.ಸಿ.ಪಿ. ಕಾಂಗ್ರೆಸ್ ಒಟ್ಟುಗೂಡಿ ಸರ್ವೋಚ್ಚ ನ್ಯಾಯಾಲಯಕ್ಕೆ ಇದರ ಕುರಿತು ತನಿಖೆ ಮಾಡಲು ಅರ್ಜಿ ಸಲ್ಲಿಸಿದರು. 24 ಗಂಟೆಯೊಳಗೆ ಶಾಸನಸಭೆ ಕರೆದು ತಮಗೆ ಬಹುಮತ ಇದೆಯೆಂದು ಸಾಬೀತು ಮಾಡಬೇಕೆಂದು ನ್ಯಾಯಾಲಯ ತೀರ್ಮಾನಿಸಿತು. ಫಡ್ನವಿಸ್ ತನಗೆ ಬಹುಮತವಿಲ್ಲವೆಂದು ಅರಿತು ಶಾಸನಸಭೆ ಕರೆಯದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಇತ್ತರು.

ಬಿಜೆಪಿಗೆ ಅದರಲ್ಲೂ ಮುಖ್ಯವಾಗಿ ಮೋದಿ ಮತ್ತು ಷಾ ಅವರಿಗೆ ತಮ್ಮ ಆಟ ನಡೆಯದಿದ್ದಕ್ಕೆ ನಿರಾಸೆ ಆಯಿತು. ಅರ್ಥಾತ್ ಷಾ ಮತ್ತು ಮೋದಿಯವರ ಭಾರತೀಯ ಜನತಾ ಪಕ್ಷದ ಮಧ್ಯರಾತ್ರಿಯ ತಂತ್ರಗಾರಿಕೆ ಇಂತಿದೆ. ಕಳೆದ ಭಾನುವಾರ ರಾತ್ರಿ 11.45ಕ್ಕೆ ಬಿಜೆಪಿಯು ಎನ್‍ಸಿಪಿ ಲೀಡರ್ ಅಜಿತ್ ಪವಾರ್ ಜೊತೆಗೆ ಡೀಲ್ ಮಾಡುತ್ತದೆ. 11.55ಕ್ಕೆ ಬಿಜೆಪಿ ನಾಯಕ ಫಡ್ನವೀಸ್ ತನ್ನ ನಾಯಕರಿಗೆ ಬೆಳಗ್ಗೆ ಪ್ರತಿಜ್ಞಾವಿಧಿ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ರಾತ್ರಿ 12.30ಕ್ಕೆ ಗೌರ್ನರ್ ಬಿ.ಎಸ್.ಕೋಶ್ಯಾನಿ ತನ್ನ ಡೆಲ್ಲಿಗೆ ಹೋಗುವ ಪ್ರಯಾಣವನ್ನು ರದ್ದುಗೊಳಿಸುತ್ತಾರೆ.

ಬೆಳಗಿನ ಜಾವ 5.47ಕ್ಕೆ ರಾಷ್ಟ್ರಪತಿ ಆಡಳಿತ ರದ್ದುಗೊಳಿಸುವ ನೋಟಿಫಿಕೇಷನ್ ಜಾರಿಗೊಳಿಸುವಂತೆ ರಾತ್ರಿ 2.10 ರಲ್ಲಿ ಸೂಚನೆ ನೀಡಲಾಗುತ್ತದೆ. ಪ್ರತಿಜ್ಞಾವಿಧಿ ಸ್ವೀಕರಿಸಲು ಬೆಳಗಿನ 7.30ರ ಸಮಯವನ್ನು ನಿಗದಿಮಾಡಿರುವುದಾಗಿ ಕಾರ್ಯದರ್ಶಿ ಬೆಳಗಿನ 2.30ರಲ್ಲಿ ರಾಜ್ಯಪಾಲರಿಗೆ ತಿಳಿಸುತ್ತಾರೆ.

ಫಡ್ನವೀಸ್ ಮತ್ತು ಅಜಿತ್‍ಪವಾರ್ ಬೆಳಗಿನ ಜಾವ 5.30ಕ್ಕೆ ರಾಜಭವನಕ್ಕೆ ಆಗಮಿಸುತ್ತಾರೆ. 5.47ಕ್ಕೆ ಅಧ್ಯಕ್ಷರ ಆಡಳಿತದ ಆಜ್ಞೆಯನ್ನು ಹಿಂಪಡೆಯಲಾಗುತ್ತದೆ. 7.30ಕ್ಕೆ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಜಿತ್‍ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಾರೆ.

ಈ ಎಲ್ಲ ಬೆಳವಣಿಗೆಯನ್ನು ಫಡ್ನವೀಸ್‍ರಿಂದಲೂ ಮುಚ್ಚಿಡಲಾಗಿತ್ತು ದೆಹಲಿಯಲ್ಲೆ ಈ Coup ಜನ್ಮತಳೆದದ್ದು. ಈ ‘ಚಾಣಕ್ಯ ರಾಜಕೀಯ’ ಷಾರವರ ಕೊಡುಗೆ. ಷಾರವರ ಆಪ್ತರೂ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಗಳೂ ಆದ ಭೂಪೇಂದ್ರಯಾದವ್‍ರವರು ಶುಕ್ರವಾರ ರಾತ್ರಿಯೇ ಮುಂಬೈಗೆ ತೆರಳಿ ಈ ಪ್ರಹಸನಕ್ಕೆ ಬೇಕಾದ ಎಲ್ಲಾ ಸಿದ್ಧತೆಯನ್ನು ಮಾಡಿದರು. ಪ್ರಧಾನಿ ಮೋದಿಯವರಿಗೆ ಈ ಹುನ್ನಾರದ ವಿವರಗಳೆಲ್ಲಾ ತಿಳಿದಿತ್ತು.

ಈ ಪ್ಲಾನ್ ಪರಾಭವಗೊಂಡದ್ದರಿಂದ ಮೋದಿ ಮತ್ತು ಷಾರವರು ಇತರ ರಾಜ್ಯಗಳಿಗೂ ಈ ವ್ಯಾಧಿ ಹರಡುವಂತೆ ಮಾಡುವ ಪ್ರಯತ್ನಗಳಿಗೆ ಕಲ್ಲುಬಿದ್ದಂತೆ ಆಗಿದೆ.

ಮಹಾರಾಷ್ಟ್ರದಲ್ಲಿ ಆದ ಈ ಪರಾಭವ, ದೇಶದ ಎಲ್ಲ ಮತದಾರರನ್ನೂ ಬಿಜೆಪಿಯ ನಡವಳಿಕೆಯ ಬಗೆಗೆ ಚಿಂತಿಸುವಂತೆ ಮಾಡಿದೆ. ಮುಂದೆ ನಡೆಯುವ ರಾಜ್ಯಗಳಲ್ಲಿನ ಚುನಾವಣೆಗಳಲ್ಲೂ, 2024ರಲ್ಲಿ ನಡೆಯುವ ಪಾರ್ಲಿಮೆಂಟ್ ಚುನಾವಣೆ ಸಂದರ್ಭದಲ್ಲೂ ಇಂತಹ ಕುತಂತ್ರಿಗಳಿಗೆ ಮತಹಾಕಿ ದೇಶವನ್ನು ಅಧೋಗತಿಗೆ ತರಲು ಸಹಕಾರಿಗಳಾಗಬೇಕೇ ಎಂದು ಚಿಂತಿಸುವ ಹಾಗೆ ಮಾಡಿದೆ.

ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಇಂಗ್ಲೆಂಡಿನ ಮಾಜಿ ಪ್ರಧಾನಿ ಚರ್ಚಿಲ್ ಆಗಿನ ಪ್ರಧಾನಮಂತ್ರಿಯಾಗಿದ್ದ ಲಾರ್ಡ್ ಅಟ್ಲೀ ಅವರಿಗೆ ಹೇಳುವ ಮಾತು ಇದು. ‘ಸ್ಕೌಂಡ್ರಲ್ಸ್ ಮತ್ತು ಥಗ್ಸ್ ಕೈಯಲ್ಲಿ ಭಾರತವನ್ನು ಕೊಟ್ಟು ಬಂದಿದ್ದೀರಿ’ ಎಂದು. ಆದರೆ ಅಂದು ರಾಜಕೀಯದಲ್ಲಿ ಇದ್ದವರು ಸ್ಕೌಂಡ್ರಲ್ಸ್ ಮತ್ತು ಥಗ್ಸ್ ಆಗಿರಲಿಲ್ಲ. ಏನೇ ಕೊರತೆಗಳಿದ್ದರೂ, ಭಾರತವು ಒಂದು ಪ್ರಜಾತಂತ್ರ ದೇಶವಾಗಿ ಸ್ಥಿರಗೊಳ್ಳುತ್ತಾ ಸಾಗಿತ್ತು. ಇಂದಿನ ರಾಜಕೀಯದಲ್ಲಿ ಅಂತಹ ಬದಲಾವಣೆ ಆಗಿದೆಯೆ? ಎಂಬ ಸಂದೇಹ ಮೂಡುತ್ತದೆ. ಅದಕ್ಕೆ ಒಂದು ಕಾರಣ ಮಹಾರಾಷ್ಟ್ರದ ರಾಜಕೀಯದಲ್ಲಿ ಇತ್ತೀಚೆಗೆ ಆಗಿರುವ ರಾಜಕೀಯ ಗೋಲ್ ಮಾಲ್.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಮಹಾರಾಷ್ಟ್ರದಲ್ಲಿ ಮನುವಾದಿಗಳ ಕುತಂತ್ರಕ್ಕೆ ಸೋಲುಂಟಾಗಿರುವುದು ಆಶಾದಾಯಕ ಬೆಳವಣಿಗೆ.

LEAVE A REPLY

Please enter your comment!
Please enter your name here