Homeಮುಖಪುಟವಿಶ್ವ ಪ್ರವಾಸೋದ್ಯಮ ದಿನದ ವಿಶೇಷ; ತೃಪ್ತಿಪ್ರಜ್ಞೆಯ ಭೂತಾನ

ವಿಶ್ವ ಪ್ರವಾಸೋದ್ಯಮ ದಿನದ ವಿಶೇಷ; ತೃಪ್ತಿಪ್ರಜ್ಞೆಯ ಭೂತಾನ

- Advertisement -
- Advertisement -

ಪ್ರವಾಸ ಹೋದಾಗ, ಜನ ಶ್ರೀಮಂತಿಕೆಯಿಲ್ಲದಿದ್ದರೂ ಹೇಗೆ ಸುಖವಾಗಿದ್ದಾರೆಂದು ತಿಳಿವ ಕುತೂಹಲವಿತ್ತು. ಸಂತೃಪ್ತಿಯ ಭಾವದಲ್ಲಿ ಭೂತಾನ ದೇಶ ಜಗತ್ತಿನಲ್ಲೆ ಮೊದಲ ಸ್ಥಾನದಲ್ಲಿದೆ. ಭಾರತವು ಪಾಕಿಸ್ತಾನಕ್ಕಿಂತಲೂ ಕೆಳಗಿನ ಹಂತದಲ್ಲಿದೆ. ಭಾರತ ಮತ್ತು ಚೀನಾಗಳೆಂಬ ಎರಡು ದೇಶಗಳ ಬೃಹತ್ ದೇಶಗಳ ನಡುವೆ ಪುಟ್ಟ ಭೂತಾನ, ಅಪ್ಪಚ್ಚಿಯಾದ ಮಗುವಿನಂತಿದೆ. ಚೀನಾ ಕಮ್ಯುನಿಸ್ಟ್ ದೇಶವಾಗಿದ್ದರೂ ಸಾಮ್ರಾಜ್ಯಶಾಹಿ ಗುಣವನ್ನು ರೂಪಿಸಿಕೊಂಡಿದೆ. ಭಾರತ, ಸಮಾಜವಾದಿ ಎಂದು ಘೋಷಿಸಿಕೊಂಡ ಪ್ರಜಾಪ್ರಭುತ್ವ ದೇಶವಾದರೂ, ನಿರಂಕುಶ ರಾಜರಿಗಿಂತಲೂ ಮಿಗಿಲಾದ ಸರ್ವಾಧಿಕಾರಿಗಳಿಗೆ ಜನ್ಮ ಕೊಟ್ಟಿದೆ. ಇವುಗಳ ನಡುವೆ ರಾಜಪ್ರಭುತ್ವ ಇರುವ ಭೂತಾನವು ಪ್ರಜ್ಞಾಪ್ರಭುತ್ವಗೊಳ್ಳಲು ತುಡಿಯುತ್ತಿದೆ. ಇಂಥದೇ ತುಡಿತದಲ್ಲಿ ನೇಪಾಳವು ರಾಜಪ್ರಭುತ್ವವನ್ನು ತೆಗೆದು ಪ್ರಜಾಪ್ರಭುತ್ವಕ್ಕೆ ತೆರೆದುಕೊಂಡಿದೆ. ಆದರೆ ಅದು ಸದಾ ರಾಜಕೀಯ ಅಸ್ಥಿರತೆಯಲ್ಲಿ ನರಳುತ್ತಿದೆ.
ಇವುಗಳ ನಡುವಿರುವ ಭೂತಾನ ನೆರೆಯ ದೇಶಗಳಿಗೆ ತನ್ನ ಜೀವನಕ್ರಮದಿಂದ ಪಾಠ ಮಾಡುವಂತೆ ಬಾಳುವೆ ಮಾಡಿದೆ. ಸೇನೆಯಿಲ್ಲದ ದೇಶವನ್ನು ಅದು ತನ್ನ ಹುಶಾರಾದ ರಾಜನೀತಿಯಿಂದ ಕಾಪಾಡಿಕೊಂಡು ಬಂದಿದೆ. ಇಲ್ಲಿನ ದೊರೆಗಳು ನಿರಂಕುಶರಲ್ಲ. ಪ್ರಜಾಪ್ರೀತಿ ಗಳಿಸಿದವರು. ಅವರ ಅರಮನೆಗಳು ದೊಡ್ಡ ವಾಡೆಗಳಂತೆ ಇವೆ. ಆತ ಪ್ರಜೆಗಳ ಜತೆಗೂಡಿ ವರುಷಕ್ಕೊಮ್ಮೆ ಗಿಡ ನೆಡುವುದರಲ್ಲಿ ಭಾಗವಹಿಸುತ್ತಾನೆ. ಜನ ದೊರೆಯನ್ನು ಗೌರವಿಸುವರು; ಬಸ್ಸು ಅಂಗಡಿ ಹೋಟೆಲು ವಿಹಾರ ಎಲ್ಲೆಲ್ಲೂ ದೊರೆಯ ಚಿತ್ರಪಟಗಳಿವೆ. ಅವನಿಗೆ ಬುದ್ಧನಷ್ಟೆ ಗೌರವವಿದೆ. ದೊರೆಯು ಅಧಿಕಾರವನ್ನು ಪ್ರಜಾಪ್ರತಿನಿಧಿಗಳಿಗೆ ಬಿಟ್ಟುಕೊಡಲು ನಿರ್ಧರಿಸಿದಾಗ, ಹಳಬರು ಹೋಗಿ ಅರಮನೆಯ ಮುಂದೆ ಅತ್ತರಂತೆ-ನಮ್ಮನ್ನು ಕೈಬಿಡಬೇಡಿ ಎಂದು. ಆದರೆ ಹೊಸತಲೆಮಾರಿನ ಜನರು ರಾಜಪ್ರಭುತ್ವವನ್ನು ಎಷ್ಟರಮಟ್ಟಿಗೆ ಇಷ್ಟಪಡುವರೊ ಗೊತ್ತಿಲ್ಲ.

ಜಗತ್ತಿನಿಂದ ಕತ್ತರಿಸಲ್ಪಟ್ಟ ಹಾಗೆ ಪರ್ವರ್ತಗಳ ನಡುವೆ ಬಾಳುವ ಪ್ರದೇಶಗಳಲ್ಲಿ, ಪಕ್ಕದ ಊರಿಗೆ ಹೋಗಲು ದೊಡ್ಡದೊಂದು ಪರ್ವತ ಹತ್ತಿಳಿಯಾಬೇಕಿರುವ, ಕಡಿಮೆ ಸಂಪನ್ಮೂಲಗಳಲ್ಲಿ ಬದುಕುವ ಅನಿವಾರ್ಯತೆ ಇರುತ್ತದೆ. ಬಡತನವನ್ನು ಹಂಚಿಕೊಂಡು ಬದುಕಿರುವ ಭೂತಾನಿಗಳು, ಇರುವುದರಲ್ಲೇ ಸುಖಕಾಣುವ ಮನೋಭಾವ ಪಡೆದುಕೊಂಡಿರಬಹುದು. ಅಥವಾ ಅವರಲ್ಲಿ ಹೊಗೆಯಾಡುತ್ತಿರುವ ಅತೃಪ್ತಿ ನನಗೆ ಕಾಣಲು ಸಾಧ್ಯವಾಗಲಿಲ್ಲವೇ? ಭೂತಾನದಲ್ಲಿ ಬಡತನವಿದೆ. ಆದರೆ ಅವರ ಬದುಕಲ್ಲಿ ಒಂದು ಶಿಸ್ತಿದೆ. ಸಂಯಮವಿದೆ. ಹಂಚಿಕೊಂಡು ತಿನ್ನುವ ಪ್ರವೃತ್ತಿಯಿದೆ. ಭೂತಾನದಲ್ಲಿ ಎಲ್ಲೆಲ್ಲಿಯೂ ಇರುವ ಬೋಧಿಸತ್ವನಿಗೆ ಸಂಬಂಧಿಸಿದ ಚಿತ್ರವೊಂದು ಇದನ್ನು ಮಾರ್ಮಿಕವಾಗಿ ಕಾಣಿಸುತ್ತದೆ. ಮರದಡಿ ನಿಂತ ಆನೆಯ ಮೇಲೆ ಕೋತಿ, ಅದರ ಮೇಲೆ ಮೊಲ, ಅದರ ಮೇಲೆ ಕುಳಿತ ಹಕ್ಕಿ ಹಣ್ಣನ್ನು ಎಟುಕಿಸಿಕೊಳ್ಳುತ್ತಿರುವ ಚಿತ್ರವದು.

ದೇವರು ಕಾಲಕಾಲಕ್ಕೆ ಪ್ರವಾದಿಗಳನ್ನು ಕಳಿಸುತ್ತಾನೆ. ಸ್ವತಃ ಬೇರೆಬೇರೆ ರೂಪಗಳಲ್ಲಿ ಭೂಮಿಗೆ ಅವತರಿಸುತ್ತಾನೆ ಎಂಬ ಪರಿಕಲ್ಪನೆಗಳಿವೆ. ಈ ಪರಿಕಲ್ಪನೆಗಳು ಜನರಲ್ಲಿ ಅವಲಂಬನಾ ಭಾವವನ್ನು ಬೆಳೆಸಬಲ್ಲವು. ಆದರೆ ಬೌದ್ಧ ಧರ್ಮದ ಪ್ರಕಾರ ಮನುಷ್ಯರು ಮಾಡಿಕೊಂಡ ತೊಡಕನ್ನು ಅವರೆ ಬಿಡಿಸಿಕೊಳ್ಳಬೇಕು. ಬುದ್ಧ ದೇವರಲ್ಲ. ಅವನು ಒಬ್ಬನೂ ಅಲ್ಲ. ಹಲವು ಬುದ್ಧರು ಇದ್ದಾರೆ. ಬುದ್ಧತ್ವ ಎನ್ನುವುದು ತತ್ವ. ಅದನ್ನು ಪಡೆದ ಮನುಷ್ಯರೆಲ್ಲ ಬುದ್ಧರಾಗಬಹುದು. ಇದು ಅಂತಿಮವಾಗಿ ಮನುಷ್ಯ ಘನತೆಯನ್ನು ಎತ್ತಿಹಿಡಿವ ತತ್ವ. ಬೌದ್ಧವು ನಾಸ್ತಿಕ ದರ್ಶನ. ದೇವರಿಲ್ಲ ಎಂದರೂ ಬುದ್ಧ ಅಥವಾ ಭಿಕ್ಷುಗಳು ದೇವರಾಗುವುದನ್ನು ತಪ್ಪಿಸುವುದು ಸಾಧ್ಯವಾಗಲಿಲ್ಲ. ಸಂತೃಪ್ತಿ ಎಂಬುದು ಬೌದ್ಧಧರ್ಮದ ಅಸಂಗ್ರಹ ತತ್ವದಿಂದ ಬಂದಿದೆ. ಸುಖೀಬಾಳಿಗೆ ಬೌದ್ಧಧರ್ಮದ ಅಸಂಗ್ರಹ ತತ್ವ ಕೆಲಸ ಮಾಡಿದಂತೆ ತೋರಿತ್ತದೆ. ದುಃಖ ಲೋಕದಲ್ಲಿ ಇರುವ ತನಕ ಮುರುಹುಟ್ಟು ಪಡೆಯುತ್ತೇನೆಂದು ಬುದ್ಧ ಪ್ರತಿಜ್ಞೆ ಮಾಡಿದ್ದರಿಂದಲೇ ಬೋಧಿಸತ್ವರು ಹುಟ್ಟಿದರು. ಆ ಸುಖ ಎನ್ನುವುದು ಭೌತಿಕ ಸೌಲಭ್ಯಗಳಿಗೆ ಸಂಬಂಧಿಸಿದ್ದಲ್ಲ; ಮನಃಸ್ಥಿತಿಯದು. ಒಂದು ಸಮಾಜವೇ ಅಂಥ ಮನಃಸ್ಥಿತಿಯನ್ನು ರೂಪಿಸಿಕೊಳ್ಳುತ್ತದೆ. ಅದಕ್ಕೆ ಅವರ ಧರ್ಮವೂ ಸರ್ಕಾರದ ಕಾನೂನುಗಳೂ ನೆರವಾಗಿರಬಹುದು. ಎಲ್ಲವೂ ಸೇರಿ ಒಂದು ಆವರಣವನ್ನು ಸೃಷ್ಟಿಸಿಕೊಳ್ಳುತ್ತವೆ. ಭೂತಾನದಲ್ಲಿ ಅಂಥ ಆವರಣ ಸೃಷ್ಟಿಯಾಗಿರಬಹುದಾದ ದೇಶ.

ಭೂತಾನ ಚರಿತ್ರೆಯಲ್ಲಿ ಮುಖ್ಯ ಸಂಗತಿಯೆಂದರೆ ಅದು ಯಾವ ದೇಶಕ್ಕೂ ವಸಾಹತುವಾಗದೆ ಬದುಕಿದ ದೇಶ. ಟಿಬೆಟ್ ಮತ್ತು ಕೂಚ್ ಬಿಹಾರಿನ ದೊರೆಗಳು ಅದನ್ನೊಮ್ಮೆ ವಶಪಡಿಸಿಕೊಂಡಿದ್ದರೂ ಬಹಳ ಕಾಲ ಆಳಲಿಲ್ಲ. ಧನುರ್ವಿದ್ಯೆಯಲ್ಲಿ ಪರಿಣತರಾದ ಭೂತಾನಿಗಳು ಅವರನ್ನು ಸೋಲಿಸಿದರು. ಈಗಲೂ ಭೂತಾನದ ರಾಷ್ಟ್ರೀಯ ಕ್ರೀಡೆ ಬಿಲ್ವಿದ್ಯೆ. ಪಾರೊ ನಗರದ ಬಳಿ ಟ್ರಕ್‌ಗೆಲ್ ಗಡಿಕಲ್ಲುನಂತಹ ಸ್ಥೂಪವನ್ನು ಭೂತಾನವು ಗೆದ್ದಭೂಮಿ ಎಂದು ನಮ್ಮ ಮರ್ಗದರ್ಶಿಯೂ ಕಾರುಚಾಲಕನೂ ಆದ ಸೋನಂ ತೋರಿಸಿದ. ಹೀಗಾಗಿ ಭೂತಾನಕ್ಕೆ ಸ್ವಾತಂತ್ರ್ಯ ದಿನಾಚರಣೆ ಅಂತಿಲ್ಲ. ಮೊದಲ ದೊರೆ ಸಿಂಹಾಸನ ಏರಿದ ದಿನವನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸುವರು. ಭೂತಾನದ ಅಸ್ಮಿತೆ ಠಾಕುಠೀಕಾಗಿದೆ.

ಭೂತಾನಿಗರು ತಮ್ಮ ನಾಡನ್ನು ಚಂದವಾಗಿ ಇಟ್ಟುಕೊಂಡಿದ್ದಾರೆ. ಸರ್ಕಾರವು ಪರಿಸರ ರಕ್ಷಣೆಯ ಸುಖಿ ಮನೋಭಾವವನ್ನು ರಾಷ್ಟ್ರೀಯ ನೀತಿಯನ್ನಾಗಿ ರೂಪಿಸಿದೆ. ಹಾರನ್ ಮಾಡುವಂತಿಲ್ಲ. ಎಲ್ಲಿ ಬೇಕಲ್ಲಿ ಕಸ ಚೆಲ್ಲುವತಿಲ್ಲ. ಭೂತಾನಿನಲ್ಲಿ ಪ್ರತಿದಿನ ವಿದೇಶಿ ಪ್ರವಾಸಿಗರು ೨೫ ಡಾಲರ್ ತೆರಬೇಕು. ಟಿಕೇಟಿನ ಬೆಲೆಗಳೂ ಹೆಚ್ಚು. ಒಂದು ಪ್ರಾಂತ್ಯದಿಂದ ಇನ್ನೊಂದಕ್ಕೆ ಹೋಗಲು ವೀಸಾ ಕಟ್ಟುಪಾಡುಗಳಿವೆ. ಪ್ರವಾಸಿಗಳು ತಮ್ಮ ದೇಶವನ್ನು ಬಚ್ಚಲುಮನೆ ಮಾಡದಿರಲು ಭೂತಾನವು ಹೂಡಿರುವ ಉಪಾಯದಂತೆ ಇವೆಲ್ಲವೂ ತೋರುತ್ತವೆ.

ಕುಟುಂಬವೊಂದರ ನೆಮ್ಮದಿ, ಅದರ ಸದಸ್ಯರ ಮುಖದ ಮೇಲೆ ತೋರುವಂತೆ, ದೇಶದ ಸಂತೃಪ್ತಿಯನ್ನು ಅಲ್ಲಿನ ಮಹಿಳೆಯರಲ್ಲಿ ನೋಡಬಹುದು. ನಾವು ಪಾರೊನಲ್ಲಿ ಉಳಿದುಕೊಂಡಿದ್ದ ಹೋಟೆಲಿನಲ್ಲಿ ಮ್ಯಾನೆಜರಿನಿಂದ ಸರ್ವರ್ ತನಕ ಎಲ್ಲರೂ ಮಹಿಳೆಯರು. ಭೂತಾನಿನದು ಹೆಣ್ಣಾಳಿಕೆಯ ಸಮಾಜವಿರಬೇಕು. ಹೋಟೆಲು ಅಂಗಡಿಗಳಲ್ಲಿ ಮಹಿಳೆಯರು ವಿಶೇಷವಾಗಿದ್ದರು. ದುಡಿಮೆ ಕ್ರಿಯಾಶೀಲತೆಯು ಹಿಮಾಲಯ ತಪ್ಪಲಿನ ಜನರಲ್ಲಿ ಸಾಮಾನ್ಯ. ಬಸ್ಸಿನಲ್ಲಿ ಬಸ್ಸಿಗೆ ಕಾಯುವಲ್ಲಿ, ದನ ಮೇಯಿಸುವಲ್ಲಿ, ಜಗುಲಿಯಲ್ಲಿ ಕುಳಿತಲ್ಲಿ, ಅಂಗಡಿಯ ಗಲ್ಲದ ಮೇಲೆ ಕುಳಿತಲ್ಲಿ ಮಹಿಳೆಯರು ನೂಲುತ್ತಿರುತ್ತಾರೆ. ಭೂತಾನದಲ್ಲಿ ವಿಧವೆ ಅಥವಾ ವಿಚ್ಛೇದಿತೆ ಮರುಮದುವೆ ಆಗಬಹುದು. ಕೆಲವೆಡೆ ಒಟ್ಟಿಗೆ ಹಲವು ಗಂಡಂದಿರು ಇರುವ ನಿದರ್ಶನಗಳೂ ಇವೆಯಂತೆ. ಇಲ್ಲಿ ಮದುವೆ ಎರಡು ಕುಟುಂಬದವರು ಮಾತ್ರ ಮಾಡುವ ಆಚರಣೆ. ಎಷ್ಟೊ ಸಲ ಪಕ್ಕದ ಮನೆಯವರಿಗೂ ತಿಳಿಯುವುದಿಲ್ಲವಂತೆ. ಪ್ರೇಮವಿವಾಹ ಸಾಮಾನ್ಯ. ಯಾವುದನ್ನು ಆಧುನಿಕ ಯೂರೋಪಿಯನ್ ವ್ಯಕ್ತಿವಾದ ಮೌಲ್ಯವೆಂದು ಭಾವಿಸುತ್ತೇವೆಯೊ, ಅದು ಆಫ್ರಿಕಾ ಏಶಿಯಾದ ಬುಡಕಟ್ಟುಗಳಲ್ಲಿ ಅವರ ಸಂಸ್ಕೃತಿಯ ಭಾಗವಾಗಿದೆ. ವರದಕ್ಷಿಣೆಯ ಹೆಸರೇ ಅವರು ಕೇಳಿಲ್ಲ.

ಸ್ತ್ರೀಯರಿಗೆ ಘನತೆಯ ಬದುಕು ಇರುವ ದೇಶವಿದು. ನಾವು ಉಳಿದುಕೊಂಡಿದ್ದ ಪಾರೊವಿನ ಹೋಟೆಲಿನ ಮ್ಯಾನೇಜರ್ ಸೆರಿನಾ ಜತೆ ಮಾತಾಡಿದೆ. ಆಕೆ ಕುಡುಕ ಗಂಡನಿಗೆ ವಿಚ್ಛೇದನ ಕೊಟ್ಟು ತನ್ನ ಪುಟ್ಟ ಮಗನೊಂದಿಗೆ ಸ್ವತಂತ್ರವಾಗಿ ಬಾಳುತ್ತಿದ್ದಳು. ಕುಡಿತದ ಸಂಸ್ಕೃತಿ ನೇಪಾಳದಲ್ಲಿರುವಂತೆಯೇ ಭೂತಾನಿನಲ್ಲಿ ಎಲ್ಲೆಡೆ ಇದೆ. ಹಿಮಾಲಯದ ಚಳಿಗೂ ಕುಡಿತಕ್ಕೂ ಸಂಬಂಧವಿರಬೇಕು. ಜನ ಮನೆಯಲ್ಲೇ ಭತ್ತದಿಂದ ಸಾರಾಯಿ ತಯಾರಿಸಿಕೊಳ್ಳುವರು. ನಮಗೆ ಪಾರೊದಲ್ಲಿ ಒಬ್ಬನೇ ಒಬ್ಬ ರಸ್ತೆಯಲ್ಲಿ ವಾಲಾಡುತ್ತಿರುವ ಕುಡುಕ ಕಂಡ. ಬಹುಶಃ ಇಲ್ಲಿ ಕುಡಿತ ಸಮಸ್ಯೆಯೂ ಆಗಿದೆ. ಸೆರೆನಾಗೆ ಕೇಳಿದೆ ಯಾಕೆ ಗಂಡನನ್ನು ಬಿಟ್ಟೆ ಎಂದು. ‘ಗಂಡಸರು ಸ್ವಲ್ಪ ಕುಡಿದರೆ ಪರವಾಗಿಲ್ಲ. ಆದರೆ ಆತ ಅತಿಯಾಗಿ ಕುಡಿಯುತ್ತಿದ್ದ’ ಎಂದು ಧೀಮಂತವಾಗಿ ಉತ್ತರಿಸಿದಳು. ಅವಳಿಗೆ ಬೌದ್ಧ ಲಾಮಾಗಳ ಬಗ್ಗೆ ಆಸಕ್ತಿಯಿರಲಿಲ್ಲ. ಕಟುದನಿಯಲ್ಲಿ `ನಾನು ವಿಹಾರಗಳಿಗೆ ಹೋಗುವುದಿಲ್ಲ’ ಎಂದಳು. ಧರ್ಮವು ತನ್ನ ಕಷ್ಟಕ್ಕೆ ಬರಲಿಲ್ಲ ಎಂಬುದೇ ಈ ಉಪೇಕ್ಷೆಗೆ ಕಾರಣವೇ?

ಭೂತಾನವು ದುಃಖವಿಲ್ಲದ ದೇಶವೆಂದು ಅನಿಸಲಿಲ್ಲ. ಬೇಕಾದಷ್ಟು ಬಡವರು ನಿತ್ರಾಣದವರು ಕಂಡರು. ನಾವು ನೋಡಿದ ಪುನೇಕಾ ನಗರದ ಮಾರುಕಟ್ಟೆ ಕೊಳಕಾಗಿತ್ತು. ವಿಹಾರಗಳ ಎದುರು ಕೂರುತ್ತಿದ್ದ ಜನರ ಬಟ್ಟೆಬರೆ ನೋಡಿದರೆ ಹೆಚ್ಚಿನವರು ಬಡವರು. ಥಿಂಪು ಹಾದಿಯಲ್ಲಿ ರಸ್ತೆಬದಿ ಹಣ್ಣುಮಾರುವ ಮುದುಕಿ ಹಾಗೂ ಒಬ್ಬ ಚೀನೀ ಮೂಲದ ಮುದುಕ ದುಃಸ್ಥಿತಿಯಲ್ಲಿದ್ದರು. ಆದರೆ ಅವರನ್ನೆಲ್ಲ ಅತೃಪ್ತರೆಂದು ಯಾವ ಮಾನದಂಡದಲ್ಲಿ ತೀರ್ಮಾನಿಸುವುದು? ನಮ್ಮ ಪ್ರವಾಸದಲ್ಲಿ ಇಬ್ಬರೇ ಭಿಕ್ಷಕರನ್ನು ಕಂಡೆವು. ಭಿಕ್ಷುಕಿಯನ್ನು ಒಬ್ಬ ಭೂತಾನಿ ತಿರುಪೆ ಬೇಡಬೇಡ ಎಂದು ಬೈಯುತ್ತಿದ್ದನು. ಪಾರೊ ಪಟ್ಟಣದ ಹೊರವಲಯದಲ್ಲಿದ್ದ ನಮ್ಮ ಗೆಸ್ಟ್ ಹೌಸಿನ ಪಕ್ಕ ಒಂದು ಕುಟುಂಬವಿತ್ತು. ಕುತ್ತಿಗೆ ನಿಮಿರಿಸಿ ಗೋಡೆಯಾಚೆ ಕಣ್ಣುಹಾಯಿಸಿ ನೋಡಿದೆ. ಒಬ್ಬ ಬಡಕಲು ದೇಹವನ್ನು ಬಿಸಿಲಿಗೊಡ್ಡಿ ಕುಳಿತಿದ್ದನು. ಅವನಿಗೆ ಆರೋಗ್ಯದ ಸಮಸ್ಯೆ ಇರಬಹುದು ಎಂದು ಸೋನು ಹೇಳಿದನು. ನಾವು ನೋಡಿದ ಟಿವಿ ಸುದ್ದಿಯಲ್ಲಿ, ಕಾಲುಮುರಿದ ವ್ಯಕ್ತಿಯನ್ನು ಬೆಡ್‌ಶೀಟಿನಲ್ಲಿ ಹೊತ್ತುಕೊಂಡು ಬರುವ ವರದಿಯಿತ್ತು. `ಹಣವೆಲ್ಲ ನಗರಗಳ ನಿರ್ಮಾಣಕ್ಕೆ ಹೋಗುತ್ತಿದೆ. ಹಳ್ಳಿಗೆ ರಸ್ತೆಗಳಿಲ್ಲ. ಅಧಿಕಾರಸ್ಥರಿಗೆ ಮಾತ್ರ ಸರ್ಕಾರ ಮಿಡಿಯುತ್ತದೆ. ನಮಗೆ ಸರ್ಕಾರಿ ಆಸ್ಪತ್ರೆಯಲ್ಲಿ ಜಾಗ ಸಿಗಲಿಲ್ಲ’ ಎಂದು ಒಬ್ಬ ಆಕ್ರೋಶ ತೋಡಿಕೊಳ್ಳುತ್ತಿದ್ದನು. ಭೂತಾನದಲ್ಲಿ ಮೇಲುನೋಟಕ್ಕೆ ಕಾಣದ ಸಂಕಟಗಳಿರಬಹುದು. ಅವನ್ನು ಹೇಳುವ ವಿಮರ್ಶಕರು ನಮಗೆ ಸಿಗಲಿಲ್ಲ.

ಆಧುನಿಕತೆಗೆ ಅಷ್ಟಾಗಿ ತೆರೆದುಕೊಳ್ಳದೇ ಇರುವುದರಿಂದ ಭೂತಾನದ ಹಿಂದುಳಿವಿಕೆಗೆ ಅದೊಂದು ಕಾರಣವಿರಬಹುದೇ? ತಿಳಿಯದು. ಇಲ್ಲಿ ವಿಶ್ವವಿದ್ಯಾಯಲಯವಿಲ್ಲ. ಮೆಡಿಕಲ್ ಕಾಲೇಜಿಲ್ಲ. ವೈದ್ಯರಿಲ್ಲ. ಕಾಯಿಲೆಗಳೂ ಇಲ್ಲ. ದೊಡ್ಡ ಕೈಗಾರಿಕೆಗಳಿಲ್ಲ. ಎರಡು ನದಿಗಳು ಹರಿಯುವ ಆಸುಪಾಸಿನ ಬಯಲಲ್ಲಿರುವ ಎರಡು ಪುಟ್ಟ ನಗರಗಳನ್ನು ಬಿಟ್ಟರೆ ದೊಡ್ಡ ನಗರಗಳಿಲ್ಲ. ಮನೆ ನಗರ ಹಳ್ಳಿ ಕೈಗಾರಿಕೆ ಸೈನ್ಯ ಹೊಲಗದ್ದೆ ಕೈತೋಟ ಎಲ್ಲವೂ ಕಿರಿದು. ಆದರೆ ಹೊಳೆ ಕಣಿವೆ ಪರ್ವತಗಳು ಬೃಹತ್ತಾದವು. ಒಂದೆಡೆ ನೀಲರಸ ತುಂಬಿದ ಕಣಿವೆ ಕಂಡೆವು. ಅದು ಅಲ್ಲಿನ ಅಣೆಕಟ್ಟು. ಅಲ್ಲಿಂದ ದಟ್ಟ ಕಾಡಿನಲ್ಲಿ ಎತ್ತರ ಪರ್ವತಗಳಲ್ಲಿ ವಿದ್ಯುತ್ ಕಂಬಗಳು ನೆಟ್ಟುಗೊಂಡಿದ್ದವು. ಇಲ್ಲಿ ಹುಟ್ಟಿದ ಕರೆಂಟಿಗೆ ಭಾರತವು ಮಾರುಕಟ್ಟೆ. ಆದರೂ ದೊಡ್ಡ ಅಣೆಕಟ್ಟು ಕಟ್ಟದೆ ವಿದ್ಯುತ್ ತಯಾರಿಸುವ ಜಾಣ್ಮೆಯನ್ನು ಭೂತಾನ ಉಳಿಸಿಕೊಂಡಿದೆ. ಎಷ್ಟೇ ಪ್ರಕೃತಿಗೆ ಹತ್ತಿರವಾದ ಜೀವನವಾದರೂ ಆಧುನಿಕತೆ ಬಿಟ್ಟು ಬದುಕಲು ಸಾಧ್ಯವಿಲ್ಲದಂತೆ ಜಗತ್ತು ಬದಲಾಗಿದೆ. ಆದರೆ ಭೂತಾನ ಪ್ರವಾಸೋದ್ಯಮ ಥಾಯ್ಲೆಂಡಿನಲ್ಲಿರುವಂತೆ ವೇಶ್ಯಾವಾಟಿಕೆಯಾಗಿಲ್ಲ. ಮಾರುಕಟ್ಟೆ ಕೇಂದ್ರಿತ ನಗರೀಕರಣವು ಇಲ್ಲಿ ನುಗ್ಗಿಲ್ಲ. ಇದಕ್ಕೆ ಅದು ಇರುವ ಹಿಮಾಲಯದ ಪರ್ವತಾವಳಿಗಳೂ ತಡೆಯಾಗಿವೆ.

ಭೂತಾನವು ತನ್ನ ಸರಳವಾದ ಜೀವನಕ್ರಮವನ್ನು ಎಷ್ಟು ದಿನ ಕಾಪಿಟ್ಟುಕೊಳ್ಳುವುದೊ ತಿಳಿಯದು. ಅದರ ಮುಖ್ಯ ಆದಾಯ ಪ್ರವಾಸೋದ್ಯಮ. ಅದಕ್ಕಾಗಿ ಅದು ತನ್ನೊಳಗೆ ಬದಲಾವಣೆ ಮಾಡಿಕೊಳ್ಳುತ್ತಿದೆ. ಅವರಿಗೆ ಭಾರತೀಯ ಪ್ರವಾಸಿಗರ ಬಗ್ಗೆ ಅಷ್ಟೊಂದು ಆಸಕ್ತಿಯಿಲ್ಲ. ಅವರು ಕೇವಲ ನೋಡುವವರು, ಕೊಳ್ಳುವವರಲ್ಲ ಎಂಬ ಧೋರಣೆಯಿದೆ. ಪಾಶ್ಚಿಮಾತ್ಯ ಪ್ರವಾಸಿಗರ ಮೇಲೆ ಅವರಿಗೆ ನೆಚ್ಚಿಗೆ ಹೆಚ್ಚು. ಯಾಕೆಂದರೆ ಅವರು ತೀರ್ಥಯಾತ್ರೆಯವರಲ್ಲ. ಪರ್ವತಾರೋಹಣ ಮಾಡುವವರು. ಸಂಸ್ಕೃತಿ ಧರ್ಮ ಅಧ್ಯಯನ ಮಾಡುವವರು. ಚೌಕಾಸಿ ಮಾಡದೆ ಬಿಡುಬೀಸಾಗಿ ವೆಚ್ಚ ಮಾಡುವವರು. ಭೂತಾನಿನಲ್ಲಿ ಜರ್ಮನರು ಅಮೆರಿಕನ್ನರು ಹೆಚ್ಚಿದ್ದರು. ಭೂತಾನ ಪ್ರವಾಸ ಹೋದವರು ನೋಡಿಕೊಳ್ಳುವ ಕನ್ನಡಿಯಂತೆ ತೋರಿತು.

ಭಾರತದ ಗಡಿ ಪಟ್ಟಣವಾದ ಜಯಗಾಂವ್‌ದಿಂದ ಭೂತಾನದ ಪ್ರಥಮ ಪಟ್ಟಣವಾದ ಫೋನಶೆಲಿಂಗ್ ಪ್ರವೇಶಿಸುವಾಗಲೇ ಇದರ ಅನುಭವವಾಯಿತು. ಎಲ್ಲ ಗಡಿಪಟ್ಟಣಗಳ ಹಾಗೆ ಗಡಿಬಿಡಿ ವಂಚನೆ ವ್ಯಾಪಾರ ಹಣದ ವಿಲೇವಾರಿ ನಕಲಿತನ ಜಯಗಾಂವದಲ್ಲೂ ಇದ್ದವು. ಜತೆಗೆ ಅದು ಕಸದ ತೊಟ್ಟಿಯಾಗಿತ್ತು. ತೆರೆದ ಹೆಬ್ಬಾಗಿಲನ್ನು ದಾಟಿ ಒಂದು ಹೆಜ್ಜೆಯಿಟ್ಟು ಒಳಗೆ ಹೋದರೆ, ಫೊನಶೆಲಿಂಗ್ ತೊಳೆದ ಮನೆಯಂಗಳವಾಗಿತ್ತು. ಭೂತಾನದಲ್ಲಿ ಪ್ರಮುಖ ಪಟ್ಟಣಗಳು ಹೊಳೆಬದಿಯಲ್ಲಿವೆ. ಆ ಹೊಳೆಗಳಲ್ಲಿ ಇಳಿದು ಬೊಗಸೆಯಲಿ ಎತ್ತಿ ನೀರು ಕುಡಿವಂತೆ ಅವು ಸ್ವಚ್ಛವಾಗಿವೆ. ಭೂತಾನಿಗರು ತಮ್ಮ ದೇಶವನ್ನು ಕಾಡನ್ನು ನದಿಯನ್ನು ಪ್ರೀತಿಸುತ್ತಾರೆ. ಅವನ್ನು ಚಂದವಾಗಿ ಇರಿಸಿಕೊಳ್ಳಲು ಬಯಸುತ್ತಾರೆ. ನಾವು ಟೈಗರ್ ನೆಸ್ಟ್ ಬೆಟ್ಟವನ್ನು ಹತ್ತುವಾಗ, ನಮಗೆ ಮಧ್ಯಾಹ್ನದ ಊಟವನ್ನು ನಮ್ಮ ಟ್ಯಾಕ್ಸಿ ಚಾಲಕ ಸೋನಂ, ಮನೆಯಿಂದಲೇ ತಂದಿದ್ದನು. ಊಟವನ್ನು ಕಾಡಿನಲ್ಲಿ ಕುಳಿತು ಮಾಡಿದೆವು. ನಾವು ಕೈಯೊರೆಸಿ ಬಿಸಾಕಿದ ಟಿಶ್ಯುಪೇಪರುಗಳನ್ನು ಎತ್ತಿ ಬಾಗಿನಲ್ಲಿ ಹಾಕಿಕೊಂಡನು. ಪೇಪರು ಮಣ್ಣಿನಲ್ಲಿ ಕರಗುವುದಿಲ್ಲವೇ ಎಂದೆ. ಕರಗುತ್ತದೆ. ಆದರೆ ಜಿಂಕೆಗಳು ತಿಂದುಬಿಟ್ಟಾವು ಎಂದನು. ನಾನು ಭೂತಾನದ ತೊರೆಗಳ ದಡದಲ್ಲಿ ಬಿದ್ದ ನೀರಿನ ಬಾಟಲಿ ತೋರಿಸಿದೆ. ಅವನ್ನು ಬಂಗಾಳಿ ಪ್ರವಾಸಿಗರು ಎಸೆದಿರಬಹುದು ಎಂದನು.

ಭೂತಾನದಿಂದ ಮರಳಿ ಬರುವಾಗ, ನಾವು ನಮಗಾದ ಅತ್ಯುತ್ತಮ ಅನುಭವ ಯಾವುದು ಎಂಬ ಪ್ರಶ್ನೆ ಎದ್ದಿತು. ಗೆಳೆಯರು ತಮಗಿಷ್ಟವಾದ ಅನುಭವಗಳನ್ನು ಹೇಳಿದರು. ನಾನೆಂದೆ: ಭೂತಾನದ ಸುಂದರವಾದ ಗಳಿಗೆ ಸೋನಂ ಮನೆಯಲ್ಲಿ ಟೀ ಕುಡಿಯಲು ಹೋಗಿದ್ದೆಂದು. ಅವನು ಭೂತಾನದ ಜನರ ಸುಖದ ಕಲ್ಪನೆಯ ಅತ್ಯಂತಿಕ ಪ್ರತೀಕವಾಗಿದ್ದನು. ಒಬ್ಬ ಸಾಧಾರಣ ಟ್ಯಾಕ್ಸಿ ಚಾಲಕನ ಮನೆಯೆಂದು ಹೋದರೆ, ನಮಗೆ ಸೋಜಿಗ ಪಡುವಷ್ಟು ಮನೆ ನೀಟಾಗಿತ್ತು. ಅವನ ಮನೆಯಲ್ಲಿ ಎಲ್ಲರ ಮುಖದಲ್ಲೂ ಸಂತೋಷವಿತ್ತು. ಸಿನಿಮಾ ತಾರೆಯಂತಹ ಅವನ ಚೆಲುವಾದ ಮಡದಿ, ಮುಗ್ಧತೆಯ ಪ್ರತೀಕವಾಗಿದ್ದಳು. ಅವಳ ಹೊಟ್ಟೆಯಲ್ಲಿ ಕೂಸಿತ್ತು. ಕೆಲವೇ ದಿನಗಳ ಬಳಿಕ, ಸೋನಂ, ತನ್ನ ಎರಡನೇ ಮಗನ ಚಿತ್ರವನ್ನು ನಮಗೆಲ್ಲ ಕಳಿಸಿಕೊಟ್ಟನು.

* ಪ್ರೊ. ರಹಮತ್ ತರೀಕೆರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸುಂದರ ಭೂತಾನ್ ಪ್ರವಾಸದ ಅನುಭವಗಳು ಅದ್ಭುತವಾಗಿ ಕಟ್ಟಿಕೊಟ್ಟಿದ್ದೀರಿ ಸರ್ ,
    ಭೂತಾನ್ ಪುಟ್ಟ ದೇಶದ ಸ್ವಾಭಿಮಾನ, ಸಂತೃಪ್ತಿ ಜೀವನ, ಪರಿಸರದ ಬಗೆಗಿನ ಕಾಳಜಿ, ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ತಮ್ಮತನವನ್ನು ಬಿಟ್ಟುಕೊಡದ ದಿಟ್ಟತನದ ಬದುಕಿನ ಚಿತ್ರಣ, ಹಾಗೂ ಅವರ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ಅತ್ಯಂತ ಅರ್ಥಪೂರ್ಣವಾಗಿ ತಮ್ಮ ಪ್ರವಾಸ ಕಥನದಲ್ಲಿ ಪ್ರಸ್ತಾಪವಾಗಿದೆ .

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...